ಅಂಕಣ

ನದಿ ಜೋಡಣೆ: ಸಾಧ್ಯವೆ? ಸಾಧುವೆ?

Webdesk - Ravikanth
ಈಚೆಗೆ ಮಂಡನೆಯಾದ ಕೇಂದ್ರ ಬಜೆಟ್​ನಲ್ಲಿ ಐದು ನದಿಗಳ ಜೋಡಣೆ ಬಗ್ಗೆ ಪ್ರಸ್ತಾಪವಾಗಿದೆ. ಈ ಪರಿಕಲ್ಪನೆ ಹೊಸತಲ್ಲವಾದರೂ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಇದ್ದೇ ಇದೆ. ಕೃಷಿ ಭೂಮಿ ನಾಶ, ಪರಿಸರ ಅಸಮತೋಲನ ಮುಂತಾದ ಕಾರಣಕ್ಕೆ ಈ ಯೋಜನೆ ಬೇಡವೇ ಬೇಡ ಎಂದು ಪರಿಸರವಾದಿಗಳು ವಾದಿಸಿದರೆ, ನೀರಿನ ಬರ ತಗ್ಗಿಸಿ ಕೃಷಿಗೆ ನೀರಾವರಿ ಒದಗಿಸಬಹುದು ಹಾಗೂ ಜಲವಿದ್ಯುತ್ ಉತ್ಪಾದನೆ ಮಾಡಬಹುದು ಎಂಬುದು ಯೋಜನೆಯ ಪರವಾಗಿರುವವರ ವಾದ. ಈ ಕುರಿತ ಸಮಗ್ರ ಅವಲೋಕನ ಇಲ್ಲಿದೆ.

ಅನುಕೂಲಕ್ಕಿಂತ ಅನಾಹುತವೇ ಅಧಿಕ

| ಪ್ರೊ.ಬಿ.ಎಂ.ಕುಮಾರಸ್ವಾಮಿ ಪರಿಸರ ತಜ್ಞ

ಗಂಗಾ-ಕಾವೇರಿ ಜೋಡಣೆ ಪ್ರಸ್ತಾಪ 1972ರಲ್ಲಿ ಮೊದಲ ಬಾರಿಗೆ ಬಂದಿತ್ತು. 1974ರಲ್ಲಿ ಕ್ಯಾಪ್ಟನ್ ದಿಲ್ಷಾನ್ ದಸ್ತೂರ್ ಎಂಬುವವರು ಮಾಲೆ ಕಾಲುವೆ ಯೋಜನೆ ಪ್ರಸ್ತಾಪ ಮಾಡಿದ್ದರು. ಎರಡು ಬಾರಿಯೂ ತಜ್ಞರು ಇದನ್ನು ಪರಿಶೀಲಿಸಿ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸಿದ್ದರು. 2002ರಲ್ಲಿ ನ್ಯಾಷನಲ್ ವಾಟರ್ ಡೆವಲಪ್​ವೆುಂಟ್ ಬೋರ್ಡ್ ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳೊಂದಿಗೆ ಜೋಡಿಸುವ ಪ್ರಸ್ತಾವನೆ ಸಲ್ಲಿಸಿತ್ತು. ಕಳೆದ 20 ವರ್ಷಗಳಲ್ಲಿ ಯೋಜನೆ ಒಂದಿಂಚೂ ಮುಂದಕ್ಕೆ ಹೋಗಿಲ್ಲ. ಈ ನಡುವೆ ನಾಲ್ಕನೇ ಬಾರಿಗೆ ನದಿ ಜೋಡಣೆ ಹೆಸರಿನಲ್ಲಿ ನಮ್ಮೆದುರು ನಿಂತಿದೆ.

ಸಾಲು ಸಾಲು ಸಮಸ್ಯೆಗೆ ಪರಿಹಾರವೆಲ್ಲಿ?

ಈ ಯೋಜನೆಯಿಂದ ಅಪಾರ ಪ್ರಮಾಣದ ಕೃಷಿ ಭೂಮಿ ನಾಶವಾಗಿ ಆಹಾರ ಭದ್ರತೆಗೆ ಸವಾಲು ಎದುರಾಗುತ್ತದೆ. ಅರಣ್ಯ ನಾಶದಿಂದ ಪ್ರಕೃತಿ ಅಸಮತೋಲನ ಮತ್ತಷ್ಟು ಹೆಚ್ಚುತ್ತದೆ. ಇದುವರೆಗಿನ ಅನೇಕ ಯೋಜನೆಗಳಲ್ಲಿ ನಿರಾಶ್ರಿತರಾದವರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸುವುದು ಸಾಧ್ಯವಾಗಿಲ್ಲ. ಇದಕ್ಕೆ ಉದಾಹರಣೆ ಲಿಂಗನಮಕ್ಕಿ ಯೋಜನೆ. ಈ ಯೋಜನೆಯಿಂದ ನಿರ್ಮಾಣ ವಾಗುವ ಆಣೆಕಟ್ಟು, ಸುರಂಗ, ಕಾಲುವೆಗಳಿಗಾಗಿ ಸೂರು ಕಳೆದುಕೊಳ್ಳುವವರಿಗೆ ನೆಲೆ ನೀಡುವುದಾದರೂ ಎಲ್ಲಿ? ನೀರು ಕೇವಲ ಇಂಜಿನಿಯರ್​ಗಳ ಏಕಸ್ವಾಮ್ಯ ಆಗಬಾರದು. ನದಿಯೊಂದಿಗೆ ಜೀವ ಪರಿಸರ, ಜನಜೀವನ, ಧಾರ್ವಿುಕ ಶ್ರದ್ಧೆ ಸೇರಿಕೊಂಡಿರುತ್ತದೆ. ಕೈಗಾರಿಕೆಗಳ ಸ್ಥಾಪನೆ, ನಗರಗಳ ವಿಸ್ತರಣೆ, ಜಾಗತಿಕ ಪರಿಣಾಮದಿಂದ ದೊಡ್ಡ ಪ್ರಮಾಣದಲ್ಲಿ ಕೃಷಿ ಭೂಮಿ ನಾಶವಾಗಿ ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಇರುವ ಕೃಷಿ ಭೂಮಿಯನ್ನು ಜೋಪಾನವಾಗಿಸಬೇಕು. ಈ ರಾಕ್ಷಸ ಯೋಜನೆ ಬಗ್ಗೆ ಮತ್ತೆಂದೂ ಪ್ರಸ್ತಾಪವಾಗಬಾರದು.

ನದಿ ಜೋಡಣೆ ಏನು? ಏಕೆ?

ಹಿಮಾಲಯದಲ್ಲಿ ಹುಟ್ಟುವ ನದಿಗಳು ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಸುತ್ತವೆ. ಬೇಸಿಗೆಯಲ್ಲಿ ಹಿಮ ಕರಗುವುದರಿಂದ ಸಮೃದ್ಧವಾಗಿರುತ್ತವೆ. ಇವನ್ನು ದಕ್ಷಿಣ ಭಾರತದ ನದಿಗಳಿಗೆ ಜೋಡಿಸಿದರೆ ಮಳೆಗಾಲದ ಪ್ರವಾಹ ತಡೆಗಟ್ಟಬಹುದು. ಬೇಸಿಗೆಯಲ್ಲಿ ದಕ್ಷಿಣ ಭಾರತಕ್ಕೂ ನೀರು ಕೊಡಬಹುದು ಎಂಬುದು ಒಟ್ಟಾರೆ ಸಾರ. ಈ ಯೋಜನೆಯಿಂದ 35 ದಶಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ, 34 ಸಾವಿರ ಮೆಗಾವಾಟ್ ಜಲವಿದ್ಯುತ್ ಉತ್ಪಾದನೆ, ಪ್ರವಾಹ ನಿಯಂತ್ರಣ, ಕೃಷಿ ಉತ್ಪಾದನೆ ಹೆಚ್ಚಳ, ನಗರ ನೀರು ಪೂರೈಕೆ, ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕೆ ಸೇರಿದಂತೆ ಅನೇಕ ಉಪಯೋಗಗಳಿವೆ ಎಂಬುದು ಯೋಜನೆಯ ವರದಿಯಲ್ಲಿನ ತಿರುಳು. ಈ ಯೋಜನೆಗೆ ಒಟ್ಟು 54 ನದಿಗಳನ್ನು ಗುರುತಿಸಲಾಗಿದೆ. ಇದರಲ್ಲಿ 30 ಪ್ರಮುಖ ನದಿಗಳಿವೆ. 14 ಹಿಮಾಲಯದಲ್ಲಿ ಹುಟ್ಟಿದರೆ, ಉಳಿದ 16 ದಕ್ಷಿಣ ಭಾರತದ ನದಿಗಳು. ನದಿ ಜೋಡಣೆಗಾಗಿ 12,500 ಕಿಮೀ ಉದ್ದದ ಕಾಲುವೆ, 36 ಮುಖ್ಯ ಅಣೆಕಟ್ಟು ಮತ್ತು 94 ಕಿಮೀ ಸುರಂಗ ನಿರ್ವಿುಸಬೇಕಾಗುತ್ತದೆ.

28 ಲಕ್ಷ ಕೋಟಿ ರೂ. ಖರ್ಚು?

2002ರಲ್ಲಿ ಈ ಯೋಜನೆ ಪ್ರಸ್ತಾಪವಾದಾಗ 5 ಲಕ್ಷ 60 ಸಾವಿರ ಕೋಟಿ ರೂ. ಅಂದಾಜು ಮಾಡಲಾಗಿತ್ತು. ನಮ್ಮ ದೇಶದಲ್ಲಿ ಯಾವ ನೀರಾವರಿ ಯೋಜನೆಗಳೂ ನಿಗದಿತ ಸಮಯದಲ್ಲಿ ಮುಕ್ತಾಯವಾಗಿಲ್ಲ. ನದಿ ಜೋಡಣೆಗೆ ಈಗ ಅಂದಾಜು 28 ಲಕ್ಷ ಕೋಟಿ ರೂ. ಖರ್ಚಾಗಬಹುದು. ಸರ್ಕಾರವೇ ಸಾಲದ ಶೂಲಕ್ಕೆ ಸಿಲುಕಿರುವಾಗ ಆರ್ಥಿಕ ದೃಷ್ಟಿಯಿಂದ ಈ ಯೋಜನೆ ಖಂಡಿತ ಕಾರ್ಯಸಾಧುವಲ್ಲ. ಕಳೆದ 20 ವರ್ಷಗಳಲ್ಲಿ ವಾತಾವರಣದಲ್ಲಿ ಬದಲಾವಣೆ ಯಾಗಿದೆ. ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ವಾಗಿದೆ. ಪರಿಸರದ ಉಷ್ಣಾಂಶ ಹೆಚ್ಚಿದೆ. ಮುಂದಿನ 15-20 ವರ್ಷಗಳಲ್ಲಿ ಹಿಮ ಕರಗಿ ಅಲ್ಲಿನ ನದಿಗಳೇ ಬರಿದಾಗುವ ಸಾಧ್ಯತೆಯಿದೆ. ಇದೆಲ್ಲದರ ಬಗ್ಗೆ ಅಧ್ಯಯನಗಳು ನಡೆದಿವೆಯೇ ಎಂಬುದು ಮೂಲಭೂತ ಪ್ರಶ್ನೆ.

ಬ್ರಿಟಿಷರ ಕಾಲದಲ್ಲೇ ಪ್ರಸ್ತಾಪವಾಗಿತ್ತು

ಭಾರತದಲ್ಲಿ ನದಿ ಜೋಡಣೆ ಪ್ರಸ್ತಾವ ಹೊಸದೇನಲ್ಲ. ಹಿಂದೆ ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯಲ್ಲೂ ಚರ್ಚೆಯಾಗಿತ್ತು. 19 ನೇ ಶತಮಾನದ ಇಂಜಿನಿಯರ್ ಅರ್ಥರ್ ಕಾಟನ್ ದಕ್ಷಿಣ ಏಷ್ಯಾದ ತಮ್ಮ ವಸಾಹತು ಪ್ರದೇಶದಿಂದ ಸರಕುಗಳ ಆಮದು ಮತ್ತು ರಫ್ತುಗಳ ತ್ವರಿತಗೊಳಿಸುವಿಕೆಗೆ ಭಾರತದ ಪ್ರಮುಖ ನದಿಗಳನ್ನು ಪರಸ್ಪರ ಜೋಡಿಸುವ ಯೋಜನೆ ಮುಂದಿಟ್ಟಿದ್ದರು. 1970ರ ದಶಕದಲ್ಲಿ ಅಣೆಕಟ್ಟುಗಳ ವಿನ್ಯಾಸಕಾರ ಮತ್ತು ಮಾಜಿ ಜಲಸಂಪನ್ಮೂಲ ಸಚಿವ ಡಾ.ಕೆ.ಎಲ್. ರಾವ್ ರಾಷ್ಟ್ರೀಯ ವಾಟರ್ ಗ್ರಿಡ್ ಯೋಜನೆ ಪ್ರಸ್ತಾಪಿಸಿದ್ದರು. ದಕ್ಷಿಣದಲ್ಲಿ ನೀರಿನ ತೀವ್ರ ಕೊರತೆ ಉಂಟಾಗುತ್ತಿದ್ದರೆ ಉತ್ತರ ಸತತ ಪ್ರವಾಹಗಳಿಂದ ತತ್ತರಿಸಿತ್ತು. ಬ್ರಹ್ಮಪುತ್ರ ಮತ್ತು ಗಂಗಾ ಜಲಾನಯನ ಪ್ರದೇಶಗಳಿಂದ ಮಧ್ಯ ಮತ್ತು ದಕ್ಷಿಣ ಭಾರತಕ್ಕೆ ನೀರು ತಲುಪುವಂತೆ ಮಾಡಬೇಕು ಎಂದು ಸಲಹೆ ನೀಡಿದ್ದರು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಂತರ್-ಜಲಾನಯನ ನೀರಿನ ವರ್ಗಾವಣೆ ಪ್ರಸ್ತಾವನೆಯನ್ನು ಅಂತರ್-ಜಲಾನಯನ ಅಭಿವೃದ್ಧಿ ಪ್ರಸ್ತಾವನೆಯನ್ನಾಗಿ ಮಾರ್ಪಡಿಸಿತ್ತು. ಅಂದಿನ ಪ್ರಧಾನಿ ವಾಜಪೇಯಿ ಅವರೇ ನದಿ ಜೋಡಣೆ ಬಗ್ಗೆ ಆಸಕ್ತಿ ವಹಿಸಿ, ಈ ಪ್ರಸ್ತಾಪ ಮಾಡಿದ್ದರು. 2004ರಲ್ಲಿ ಯುಪಿಎ ಸರ್ಕಾರ ನದಿ ಜೋಡಣೆ ವಿರೋಧದ ದನಿಗೆ ಆದ್ಯತೆ ನೀಡಿ ಈ ಪ್ರಸ್ತಾವಗಳನ್ನು ಕೈಬಿಟ್ಟಿತ್ತು. ಪರಿಸರ ಹಾನಿ, ನೀರಿನ ಮಟ್ಟ ಕುಸಿತ ಮತ್ತು ಪ್ರಕೃತಿ ವಿನಾಶಕ್ಕೆ ದಾರಿ ಎಂದು ಪರಿಸರವಾದಿಗಳು ಹೋರಾಟ ಮಾಡಿದರು. 2005ರಿಂದ 2013 ರವರೆಗೆ ಕೇಂದ್ರ ಸರ್ಕಾರ ಹಲವು ಸಮಿತಿಗಳನ್ನು ರಚಿಸಿ ವರದಿಗಳನ್ನು ತರಿಸಿಕೊಂಡರೂ, ಅನುಷ್ಠಾನ ಸಾಧ್ಯವಾಗಲಿಲ್ಲ. ನದಿ ಜೋಡಣೆ ವಿರುದ್ಧ 2002 ರಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಗೊಳಿಸಿದ್ದ ಸುಪ್ರೀಂಕೋರ್ಟ್ ‘ಯೋಜನೆ ಅನುಷ್ಠಾನಕ್ಕೆ ನಾವು ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ನೀತಿ ನಿರೂಪಿಸಬೇಕು’ ಎಂದು ಅಭಿಪ್ರಾಯಪಟ್ಟಿತ್ತು.

(ಮಾಹಿತಿ-ಆರ್​ಎಸ್)