ಅಂಕಣ

ಬಿಗ್-ಬಿ ಕುರ್ಚಿಯಲ್ಲಿ ಭಾರತ ಕೂರುವುದೇ?!

rashmirhebbur
ಮುಂದಿನ ಯುಗದ ಅವಶ್ಯಕತೆಗಳಿಗೆಂದೇ ನರೇಂದ್ರ ಮೋದಿ ಅದಾಗಲೇ 22 ಜನರ ತಂಡವನ್ನು ರಚಿಸಿ 6ಜಿ ತಂತ್ರಜ್ಞಾನದ ಕುರಿತಂತೆ ತೀವ್ರಗತಿಯ ಕೆಲಸ ಆರಂಭಿಸಿಬಿಟ್ಟಿದ್ದಾರೆ. 5ಜಿ ತರಂಗಗಳನ್ನು ಹರಾಜು ಕೂಗಿ ಭಾರತವನ್ನು ಅದಕ್ಕೆ ಸಿದ್ಧಗೊಳಿಸುತ್ತಿರುವಾಗಲೇ, 6ಜಿ ತಂತ್ರಜ್ಞಾನದ ಕುರಿತಂತೆ ಆಲೋಚನೆ ಆರಂಭಿಸಿರುವುದು ಮೆಚ್ಚಬೇಕಾದ ಸಂಗತಿಯೇ.

ಕರೊನಾದ ಎರಡನೇ ಅಲೆ ದಾಂಗುಡಿ ಇಟ್ಟಾಗ ಅದು ಕಣ್ಣೀರು ಹಾಕಿಸಿತ್ತು. ಪ್ರತಿಪಕ್ಷಗಳಿಗೆ ಅದು ಹಬ್ಬ. ಜನರ ಸಾವಿಗೆ ಮೋದಿಯೇ ಕಾರಣ ಎನ್ನುತ್ತ ಅನೇಕ ಕಡೆ ಆಮ್ಲಜನಕದ ಕೊರತೆ ಎಂಬ ಸುದ್ದಿಯನ್ನು ಕೃತಕವಾಗಿ ಹಬ್ಬಿಸಿ, ಕಂಗೆಟ್ಟ ಜನರ ಆರ್ತನಾದದ ಸೆರಗಿನಲ್ಲಿ ನಿಂತು ಮೋದಿಯವರ ಮೇಲೆ ಕಲ್ಲೆಸೆಯುತ್ತಿದ್ದರು. ಆ ಸಂದರ್ಭದಲ್ಲಿ ಉಂಟಾದ ಗೊಂದಲಗಳಿಂದ ಬೇಸತ್ತು ಮೋದಿ ಒತ್ತಡ ತಡೆಯಲಾಗದೇ ತಪು್ಪಗಳ ಮೇಲೆ ತಪು್ಪ ಮಾಡುತ್ತಾರೆ ಎಂದು ಅವರು ಕನಸು ಕಾಣುತ್ತಲಿದ್ದರು. ಒಳಗಿರುವ ದೇಶಭಕ್ತಿ ಮತ್ತು ರಾಷ್ಟ್ರನಿರ್ವಣದ ತುಡಿತದ ಸಾಮರ್ಥ್ಯ ಎಂಥದ್ದೆಂದರೆ ಯಾವಾಗಲೂ ಮಾಡುತ್ತಿದ್ದ ಕೆಲಸಕ್ಕಿಂತಲೂ ಹೆಚ್ಚು ಕೆಲಸ ಮಾಡಿ ಆ ಮನುಷ್ಯ ದೇಶವನ್ನಷ್ಟೇ ಅಲ್ಲ, ಜಗತ್ತನ್ನೇ ಅಚ್ಚರಿಗೆ ದೂಡಿಬಿಟ್ಟರು. ಅಂದಿನ ದಿನಗಳಲ್ಲಿ ಮೋದಿಯವರ ಗುಜರಾತಿನ ಚಟುವಟಿಕೆಗಳನ್ನು ಆಡಿಕೊಳ್ಳುತ್ತಿದ್ದ ಕಾಂಗ್ರೆಸ್ಸಿಗರ ಪುಂಗಿ ಇಂದು ಪೂರ್ಣ ನಿಂತೇಹೋಗಿದೆ. ಇದನ್ನು ನಾನು ಹೇಳಬೇಕಿಲ್ಲ, ಸ್ವತಃ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ಪ್ರಕಟಿಸಿರುವ ವರದಿ ಹೇಳುತ್ತಿದೆ. ಅಮೆರಿಕ ನೆಲೆ ಹೊಂದಿರುವ ಈ ಡಾಟಾ ಇಂಟೆಲಿಜೆನ್ಸ್ ಕಂಪನಿ ಪ್ರತಿದಿನ ಹನ್ನೊಂದು ಸಾವಿರಕ್ಕೂ ಹೆಚ್ಚು ಜನರ ಸಂದರ್ಶನ ನಡೆಸುತ್ತದೆ. ಅಮೆರಿಕ ಒಂದರಲ್ಲಿಯೇ ನಾಲ್ಕು ಸಾವಿರಕ್ಕೂ ಹೆಚ್ಚು ದಾಖಲು ಮಾಡಿಕೊಂಡ ಜನರ ವಿಚಾರಣೆ ನಡೆಸುತ್ತದೆ. ಅದರ ಆಧಾರದ ಮೇಲೆಯೇ ಹೊರಬಿದ್ದಿರುವ ಈ ವರದಿ ಪ್ರಕಾರ ಜಗತ್ತಿನಲ್ಲಿ ಹೆಚ್ಚು ಜನರ ಆದರಕ್ಕೆ ಒಳಗಾಗಿರುವ ನಾಯಕ ನರೇಂದ್ರ ಮೋದಿಯೇ. 2020ರ ಜನವರಿಯಿಂದ 2021ರ ನವೆಂಬರ್​ನವರೆಗೂ ನರೇಂದ್ರ ಮೋದಿಯವರ ಮೆಚ್ಚುಗೆಯ ಅಂಶಗಳು ಜನರಿಂದ ಮಾಸಿಯೇ ಇಲ್ಲ. ಎರಡನೇ ಅಲೆಯ ವೇಳೆಗೆ ಸ್ವಲ್ಪ ಕುಸಿದಿರುವಂತೆ ಕಂಡಿತ್ತಾದರೂ ಈಗ ಮತ್ತೆ ಇದು ಶೇಕಡ 70ನ್ನು ದಾಟಿದೆ. ಸ್ವತಃ ಅಮೆರಿಕದ ಅಧ್ಯಕ್ಷ ಬೈಡೆನ್ ಋಣಾತ್ಮಕವಾದ ರೇಟಿಂಗ್ ಅನ್ನು ಪಡೆದಿದ್ದು ಮೋದಿ ಜಾಗತಿಕವಾಗಿ ಸಿಕ್ಸರ್​ಗಳ ಮೇಲೆ ಸಿಕ್ಸರ್ ಬಾರಿಸುತ್ತಲೇ ಇದ್ದಾರೆ.

ಎರಡನೇ ಅಲೆಯ ನಂತರ ಪ್ರತಿಪಕ್ಷಗಳಿಗಿದ್ದ ಏಕೈಕ ಮಂತ್ರ ಪೆಟ್ರೋಲ್-ಡೀಸೆಲ್​ನ ಬೆಲೆಯೇರಿಕೆಯದ್ದು ಮಾತ್ರ. ಸಾಕಷ್ಟು ದಿನಗಳ ಕಾಲ ಅದರ ಕುರಿತಂತೆ ತಲೆಕೆಡಿಸಿಕೊಳ್ಳದ ಮೋದಿ ಜಿಎಸ್​ಟಿ ತೆರಿಗೆ ಹಣ ಹೆಚ್ಚು-ಕಡಿಮೆ ಹಳೆಯದರ ಗರಿಷ್ಠ ಮಟ್ಟವನ್ನು ಮುಟ್ಟುತ್ತಿದ್ದಂತೆ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಜನರಿಗೆ ನೆಮ್ಮದಿ ತಂದಿದ್ದಾರೆ. ಮೋದಿಯಿಂದ ಈ ನಡೆಯನ್ನು ನಿರೀಕ್ಷಿಸದಿದ್ದ ಕಾಂಗ್ರೆಸ್ಸಿಗೆ ಈಗ ಧರ್ಮಸಂಕಟ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾಕಷ್ಟು ಇಳಿಕೆ ಕಂಡಿದ್ದು ಪ್ರತಿಪಕ್ಷಗಳ ಮೇಲೆ ಎಲ್ಲಿಲ್ಲದ ಒತ್ತಡ ಹಬ್ಬಿಬಿಟ್ಟಿದೆ. ಇಂಧನದ ಬೆಲೆ ಹೆಚ್ಚಾಗಿದೆ. ಅದಕ್ಕೆ ಮೋದಿಯೇ ಕಾರಣ ಎಂದು ಪ್ರಚಾರ ಮಾಡಿದ ಪ್ರತಿಪಕ್ಷಗಳಿಗೆ ಈಗ ಬಿಜೆಪಿಯೇತರ ರಾಜ್ಯಗಳಲ್ಲಿ ಅದು ಕಡಿತವಾಗದಿರುವುದಕ್ಕೆ ಪ್ರತಿಪಕ್ಷಗಳೇ ಕಾರಣ ಎಂಬ ಸಂದೇಶವನ್ನು ಸದ್ದಿಲ್ಲದೆ ರವಾನಿಸಿಬಿಟ್ಟಿದ್ದಾರೆ. ಈ ಒತ್ತಡದಿಂದ ಸುಧಾರಿಸಿಕೊಂಡು ಹೊರಬರಲು ಸಾಕಷ್ಟು ಕಾಲವೇ ಬೇಕು. ಹಾಗಂತ ಮೋದಿ ಇವಿಷ್ಟೇ ಚಟುವಟಿಕೆಗಳಲ್ಲಿ ಮೀಸಲಾಗಿಲ್ಲ. ಶಾಂತವಾಗಿ ಭಾರತವನ್ನು ಆಂತರಿಕವಾಗಿ ಕಟ್ಟುವ ಮತ್ತು ಹೊರಜಗತ್ತಿನಲ್ಲಿ ಭಾರತದ ವರ್ಚಸ್ಸನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ನಡೆದ ಜಿ-20 ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಮೋದಿಯವರೊಂದಿಗೆ ನಡೆದುಕೊಂಡ ರೀತಿಯನ್ನು ಗಮನಿಸಿದರೆ ಭಾರತ ಅವರಿಗೆಲ್ಲ ಎಷ್ಟು ಅನಿವಾರ್ಯವಾಗಿದೆ ಎಂಬುದನ್ನು ಬಿಂಬಿಸುವಂತಿತ್ತು. ಇಂಗ್ಲೆಂಡಿನ ಪ್ರಧಾನಿಯಂತೂ ಜಾಗತಿಕ ವೇದಿಕೆಯ ಮೇಲೆ ಮೋದಿಯವರನ್ನು ಹೊಗಳಿದ ರೀತಿ ಎಂಥವರಿಗೂ ಅಚ್ಚರಿ ತರುವಂಥದ್ದು. ಇವೆಲ್ಲವೂ ಸುಮ್ಮ-ಸುಮ್ಮನೆ ಆಗುವಂಥದ್ದಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹೀಗೆ ಭಾರತ ಮುನ್ನಡೆದರೆ ಅಮೆರಿಕದ ಬಿಗ್ ಬಿ ಅಥವಾ ದೊಡ್ಡಣ್ಣ ಎಂಬ ಪಟ್ಟವನ್ನು ಕಸಿದುಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ. ಅತಿಶಯೋಕ್ತಿ ಎನಿಸಿದರೆ ಮುಂದಿನ ಕೆಲವು ಸಂಗತಿಗಳನ್ನು ಗಮನಿಸಿ.

ಮೊನ್ನಿನ ಅಂತಾರಾಷ್ಟ್ರೀಯ ಸಭೆಯಲ್ಲಿ ಹವಾಮಾನ ಬದಲಾವಣೆ ಕುರಿತಂತೆ ಜಗತ್ತಿನ ಗಮನ ಸೆಳೆದಿದ್ದು ಭಾರತವೇ. 2070ರ ವೇಳೆಗೆ ಜಗತ್ತನ್ನು ವಾಸಯೋಗ್ಯವಾಗಿಸುವ ಹೊಣೆಗಾರಿಕೆ ತಮ್ಮೆಲ್ಲರದ್ದೂ ಎಂದು ಹೇಳಿದ ಮೋದಿ ಅದಕ್ಕೆ ಮೊದಲ ಹೆಜ್ಜೆ ತಾವೇ ಇಡುವುದಾಗಿ ಮಾತುಕೊಟ್ಟು ಭಾರತದ ನಿಶ್ಚಿತ ಗುರಿಯನ್ನು ಘೊಷಿಸಿಬಿಟ್ಟರು. ಹಾಗಂತ ಇದು ಸೋತವನ ದನಿಯಂತಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಕಡಿಮೆ ಇಂಗಾಲವನ್ನು ಹೊರಹಾಕುವ ರಾಷ್ಟ್ರವಾದರೂ ಅದನ್ನೂ ಕಡಿತಗೊಳಿಸುವ ಭರವಸೆ ನೀಡುತ್ತಿದ್ದೇವೆ ಎಂಬುದನ್ನು ನೆನಪಿಸಿಯೇ ಈ ಕೆಲಸ ಮಾಡಲಾಯ್ತು. ಅಷ್ಟೇ ಅಲ್ಲ, ಮುಂದುವರಿದ ರಾಷ್ಟ್ರಗಳು ವಾತಾವರಣವನ್ನು ಹಾಳುಗೆಡವಿದ್ದರ ಪರಿಣಾಮವಾಗಿ ಸಣ್ಣ-ಪುಟ್ಟ ದ್ವೀಪರಾಷ್ಟ್ರಗಳು ದುಃಖಕಾರಿ ಸನ್ನಿವೇಶದಲ್ಲಿವೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ ಮೋದಿ ಈ ರೀತಿಯ ಬಡ ದ್ವೀಪರಾಷ್ಟ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಭಾರತ ಹೊರಲಿದೆ ಎಂದು ಹೇಳಲು ಮರೆಯಲಿಲ್ಲ. ಇದು ‘ವಸುಧೈವ ಕುಟುಂಬಕಂ’ ಎಂಬ ಭಾರತದ ನೀತಿಗೆ ಪೂರಕವಾಗಿಯೇ ಇದೆ. ವಾಸ್ತವವಾಗಿ ಸಿರಿವಂತ ರಾಷ್ಟ್ರಗಳು ಈ ಬಡರಾಷ್ಟ್ರಗಳ ಕುರಿತಂತೆ ಕಾಳಜಿ ವಹಿಸಬೇಕಿತ್ತು. ಮೋದಿ ಅದನ್ನು ತಮ್ಮ ಹೆಗಲಿಗೆ ವರ್ಗಾಯಿಸಿಕೊಳ್ಳುವುದರ ಮೂಲಕ ಭಾರತದ ದೃಷ್ಟಿ ಎತ್ತಲಿದೆ ಎಂಬುದನ್ನು ಸೂಚ್ಯವಾಗಿ ವಿವರಿಸಿದರು. ಹಾಗಂತ ಇದು ಬರಿ ಶಾಂತಿಕಾಲದ ಕೆಲಸವೇನೂ ಅಲ್ಲ. ಬುದ್ಧನ ಶಾಂತಿಮಂತ್ರವನ್ನು ಜಪಿಸುತ್ತಲೇ ಮೋದಿ ಕೃಷ್ಣನ ಯುದ್ಧತಂತ್ರವನ್ನೂ ತಮ್ಮದಾಗಿಸಿಕೊಂಡು ಬಿಟ್ಟಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ತೆಕ್ಕೆಗೆ ಹಾಕಿಕೊಂಡ ನಂತರ ಪಾಕಿಸ್ತಾನದ ಮೆರೆದಾಟ ಕೈಮೀರಿ ಹೋಗಿತ್ತು. ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ಸಹನೆಯ ಮಿತಿ ತಪ್ಪಿದೆ. ಈಗ ಇರುವ ಪರಿಹಾರ ಎರಡೇ. ಮೊದಲನೆಯದು ನೇರ ಯುದ್ಧಕ್ಕಿಳಿಯುವುದು ಅಥವಾ ಪಾಕಿಸ್ತಾನವನ್ನು ಒಳಗಿನಿಂದಲೇ ಬೆಂದು, ಬಸವಳಿಯುವಂತೆ ಮಾಡುವುದು. ಎರಡಕ್ಕೂ ಬೇಕಾದ ಸಿದ್ಧತೆ ಭಾರತ ಮಾಡುತ್ತಿದೆ. ಕಾಕತಾಳೀಯವೆನಿಸಿದರೂ ಕಳೆದ ಕೆಲವಾರು ದಿನಗಳಿಂದ ಪಾಕಿಸ್ತಾನದೊಳಗೆ ನೆಮ್ಮದಿಯೇ ಇಲ್ಲ. ಅಲ್ಲಿನ ತೆಹರೀಕ್-ಎ-ಲಬ್ಬಾಯ್್ಕ ಪಾಕಿಸ್ತಾನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ಅದರ ಒತ್ತಡಕ್ಕೆ ಮಣಿದು ಅನೇಕ ಬಂಧಿತ ಜಿಹಾದಿ ಸೈನಿಕರನ್ನು ಪಾಕಿಸ್ತಾನ ಸರ್ಕಾರ ಬಿಡಬೇಕಾಗಿ ಬಂದಿದೆ.

ಯಾವ ತಾಲಿಬಾನೀ ಸರ್ಕಾರದ ಅಹಂಕಾರದ ಮೇಲೆ ಭಾರತವನ್ನು ಅಲುಗಾಡಿಸುವ ಮಾತುಗಳನ್ನು ಪಾಕಿಸ್ತಾನ ಆಡುತ್ತಿತ್ತೋ ಈಗ ಅದೇ ತಾಲಿಬಾನ್ ಪಾಕಿಸ್ತಾನಕ್ಕೆ ಮುಳುವಾಗುವಂತೆ ಕಾಣುತ್ತಿದೆ. ಏಕಾಏಕಿ ಇವೆಲ್ಲ ಆಗಲು ಕಾರಣವೇನು? ಯಾರಿಗೂ ಅಂದಾಜಾಗುತ್ತಿಲ್ಲ. ಆದರೆ ಒಂದಂತೂ ಸತ್ಯ. ಪಾಕಿಸ್ತಾನ ತಂಟೆ ಮಾಡಲು ಬಂದರೆ ಅದನ್ನು ನಾಲ್ಕು ಚೂರು ಮಾಡುವುದು ನಿಶ್ಚಿತ ಎಂದು ಹೇಳಿದ್ದ ಅಜಿತ್ ದೋವಲ್​ರ ಮಾತನ್ನು ನೆನಪಿಸಿಕೊಳ್ಳಬೇಕು ಅಷ್ಟೇ! ಪಾಕಿಸ್ತಾನದ ವಿರುದ್ಧ ಯುದ್ಧಕ್ಕೂ ಭಾರತ ಪೂರ್ಣ ತಯಾರಾಗಿರುವಂತೆ ಕಾಣುತ್ತದೆ. ತೈವಾನಿನ ಮೇಲೆ ಏರಿಹೋಗಿ ಅದನ್ನು ನುಂಗಿ ನೀರ್ಗಡಿಯಬೇಕೆಂಬ ಚೀನಾದ ಹೆಬ್ಬಯಕೆಯನ್ನು ತಡೆಯಲು ಸದ್ಯಕ್ಕೆ ಸಾಧ್ಯವಿರೋದು ಭಾರತಕ್ಕೆ ಮಾತ್ರ. ಇನ್ನೆಲ್ಲ ರಾಷ್ಟ್ರಗಳೂ ಮನಸ್ಸು ಮಾಡಿದರೂ ಭೌಗೋಳಿಕವಾಗಿ ಕೈಗೆ ಸಿಗದಷ್ಟು ದೂರದಲ್ಲಿವೆ. ಭಾರತ ಚೀನಾಕ್ಕೆ ಹೊಂದಿಕೊಂಡ ತನ್ನ ಗಡಿಯೊಳಗೆ ಚಟುವಟಿಕೆಯನ್ನು ತೀವ್ರಗೊಳಿಸಿ ಅದರ ಗಮನ ಅತ್ತ ಹರಿಯದಂತೆ ಮಾಡುವ ಸಾಮರ್ಥ್ಯ ಹೊಂದಿದೆ. ಮೊದಲೆಲ್ಲ ಚೀನಾ ಈ ಕೆಲಸ ಮಾಡುತ್ತಿತ್ತು. ಭಾರತ ಪಾಕಿಸ್ತಾನದ ಮೇಲೆ ಏರಿ ಹೋಗುವಂತೆ ಕಂಡಾಗಲೆಲ್ಲ ಅರುಣಾಚಲ ಪ್ರದೇಶದಲ್ಲಿ ಕಿರಿಕಿರಿ ಶುರುಮಾಡುತ್ತಿತ್ತು. ಈ ಬಾರಿ ಆ ಕೆಲಸವನ್ನು ನಾವೇ ಮಾಡುತ್ತಿದ್ದೇವೆ. ಇತ್ತೀಚೆಗೆ ಪ್ರಯೋಗ ಮಾಡಿದ ಖಂಡಾಂತರ ಕ್ಷಿಪಣಿಗಳು ಈ ಹಿನ್ನೆಲೆಯಲ್ಲಿ ಮಹತ್ವವಾದವು. ಗಡಿರಾಜ್ಯಗಳಿಗೆ ಉಪರಾಷ್ಟ್ರಪತಿಗಳು ಭೇಟಿಕೊಟ್ಟಿದ್ದು ಈ ಹಿನ್ನೆಲೆಯಿಂದ ಗಮನಾರ್ಹ. ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಹೊಂದಿಕೊಂಡ ಗಡಿಯಲ್ಲಿ ದೀಪಾವಳಿ ಆಚರಿಸುವ ಮೂಲಕ ಕೊಟ್ಟದ್ದು ಗಂಡುಗಲಿತ್ವದ ಸಂದೇಶ. ಮನೆಯಿಂದ ಹೊರಬರಲು ಹೆದರುತ್ತಿದ್ದ ಹಿಂದಿನ ಕೆಲವು ಪ್ರಧಾನಿಗಳು, ಸಚಿವರುಗಳ ಮಧ್ಯೆ ಮೋದಿ ಬಲು ವಿಭಿನ್ನ.

ಮೋದಿಯ ಸಾಹಸಗಾಥೆ ಇಲ್ಲಿಗೇ ನಿಲ್ಲುವುದಿಲ್ಲ. ಕೆಲವಾರು ತಿಂಗಳುಗಳ ಹಿಂದೆ ಆಟದ ಸಾಮಾನುಗಳಲ್ಲಿ ಭಾರತೀಯತೆಯನ್ನು ತುಂಬುವ ಕರೆಯನ್ನು ಅವರು ಕೊಟ್ಟಿದ್ದು ನಿಮಗೆ ನೆನಪಿರಬೇಕು. ಇಂದು ಅದರ ಪ್ರಯತ್ನವಾಗಿ ಚಟುವಟಿಕೆಗಳು ಗರಿಗೆದರಿಬಿಟ್ಟಿವೆ. ಭಾರತೀಯ ಪೌರಾಣಿಕ ಚಿತ್ರಣ ಕೊಡಬಲ್ಲ ಆಟಿಕೆಗಳು ತಯಾರಾಗಿ ಮಾರುಕಟ್ಟೆಗೆ ಬರುತ್ತಿವೆ. ಮುಂದಿನ ಯುಗದ ಅವಶ್ಯಕತೆಗಳಿಗೆಂದೇ ಮೋದಿ ಅದಾಗಲೇ 22 ಜನರ ತಂಡವನ್ನು ನಿರ್ಮಾಣ ಮಾಡಿ 6ಜಿ ತಂತ್ರಜ್ಞಾನದ ಕುರಿತಂತೆ ತೀವ್ರಗತಿಯ ಕೆಲಸವನ್ನು ಆರಂಭಿಸಿಬಿಟ್ಟಿದ್ದಾರೆ. 5ಜಿ ತರಂಗಗಳನ್ನು ಹರಾಜು ಕೂಗಿ ಭಾರತವನ್ನು ಅದಕ್ಕೆ ಸಿದ್ಧಗೊಳಿಸುತ್ತಿರುವಾಗಲೇ

6ಜಿ ತಂತ್ರಜ್ಞಾನ ಕುರಿತಂತೆ ಆಲೋಚನೆ ಆರಂಭಿಸಿಬಿಟ್ಟಿರುವುದು ಮೆಚ್ಚಬೇಕಾದ ಸಂಗತಿಯೇ. ಇದು ಬರಲಿರುವ ದಿನಗಳಲ್ಲಿ ನಾವು ನೇತೃತ್ವ ವಹಿಸಬೇಕಾಗಿರುವ ರೀತಿ ಎಂಥದ್ದು ಎಂಬುದನ್ನು ನಿಸ್ಸಂಶಯವಾಗಿ ನಿರ್ಧರಿಸಲಿದೆ. ಮೋದಿಯವರು ಜಾರಿಗೆ ತಂದಿರುವ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟೀವ್ ಯೋಜನೆ ಮಹತ್ವಪೂರ್ಣವಾದದ್ದು. ಅದಾಗಲೇ ಅನೇಕ ನಿರ್ಧಾರಿತ ಗುರಿಗಳನ್ನು ಈ ಯೋಜನೆಯಡಿ ಹಾಕಿಕೊಂಡಿರುವ ಸರ್ಕಾರ ಏರ್ ಕಂಡೀಷನರ್, ಫ್ರಿಡ್ಜ್, ವಾಷಿಂಗ್ ಮಷಿನ್​ಗಳೇ ಮೊದಲಾದ ವೈಟ್ ಗೂಡ್ಸ್​ಗಳಲ್ಲದೆ ಎಲ್​ಇಡಿ ಲೈಟುಗಳಿಗಾಗಿ ಈ ಯೋಜನೆಯನ್ನು ವಿಸ್ತರಿಸಿದೆ. ಈ ಯೋಜನೆ ಪ್ರಕಾರ ನಿಗದಿತ ಅವಧಿಯೊಳಗೆ ಉತ್ಪಾದನೆಯನ್ನು ಮಾಡಿ ಮುಗಿಸಿದರೆ ಅದಕ್ಕೆ ಸಾಕಷ್ಟು ರಿಯಾಯಿತಿಯನ್ನು ಸರ್ಕಾರವೇ ನೀಡುತ್ತದೆ. ಇದು ಆಯಾ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿರುವಂತೆ ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಯಾವುದನ್ನು ಇಷ್ಟು ದಿನ ಚೀನಾದಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತೋ ಈಗ ಭಾರತವೇ ಅದನ್ನು ಉತ್ಪಾದಿಸಲಿದೆ. ಚೀನಾವನ್ನು ಈ ವಿಚಾರಗಳಲ್ಲಿ ಸ್ಥಾನಪಲ್ಲಟಗೊಳಿಸುವುದು ಸುಲಭವಲ್ಲವಾದರೂ ಈ ವೇಗದಲ್ಲಿ ಹೋದರೆ ಅಸಾಧ್ಯವಂತೂ ಅಲ್ಲ. ಅದಾಗಲೇ ಶ್ರೀಲಂಕಾ ಚೀನಾದ ರಸಗೊಬ್ಬರಗಳಲ್ಲಿ ವಿಷಕಾರಿ ಅಂಶಗಳಿವೆ ಎಂಬುದನ್ನು ಅರಿತು ಕೊನೆಯ ಕ್ಷಣದಲ್ಲಿ ದೊಡ್ಡದೊಂದು ಸರಕನ್ನು ನಿರಾಕರಿಸಿಬಿಟ್ಟಿದೆ. ಆಗ ಅದರ ನೆರವಿಗೆ ಬಂದಿದ್ದು ಭಾರತವೇ.

ಭಾರತೀಯ ವಾಯುಸೇನೆ ಒಂದು ಲಕ್ಷ ಕೆಜಿಯಷ್ಟು ನ್ಯಾನೊ ಸಾರಜನಕ ರಸಗೊಬ್ಬರಗಳನ್ನು ಏರ್​ಲಿಫ್ಟ್ ಮಾಡಿ ಶ್ರೀಲಂಕಾಕ್ಕೆ ಮುಟ್ಟಿಸಿದೆ. ಇದು ಚೀನಾದ ವಿಸ್ತರಣಾ ನೀತಿಗೆ ಬಲುದೊಡ್ಡ ಹೊಡೆತವೇ! ಅಲ್ಲದೆ, ಇತ್ತೀಚೆಗೆ ಚೀನಾದ ಕಸ್ಟಮ್ ವಿಭಾಗ ಕೊಟ್ಟಿರುವ ಹೇಳಿಕೆಯನ್ನು ಒಪ್ಪುವುದೇ ಆದರೆ 32ಕ್ಕೂ ಹೆಚ್ಚು ರಾಷ್ಟ್ರಗಳು ಚೀನಾಕ್ಕೆ ಕೊಟ್ಟಿದ್ದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡಿವೆ. ಈ ವಿಶೇಷ ಸ್ಥಾನಮಾನದ ಆಧಾರದ ಮೇಲೆ ಚೀನಾಕ್ಕೆ ತೆರಿಗೆ ರಹಿತ ವ್ಯಾಪಾರ ಮಾಡುವ ಅವಕಾಶಗಳಿದ್ದವು. ಇನ್ನು ಮುಂದೆ ಇರಲಾರದು. 27 ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಈ ಸಾಲಿನಲ್ಲಿರುವುದು ಚೀನಾದ ಪಾಲಿಗೆ ಒಳ್ಳೆ ಸುದ್ದಿಯಲ್ಲ.

ಇದರೊಟ್ಟಿಗೆ ನರೇಂದ್ರ ಮೋದಿಯವರು ಅಹಮದಾಬಾದ್​ನಿಂದ ಮುಂಬೈನವರೆಗೂ ಬುಲೆಟ್ ಟ್ರೖೆನಿನ ನಿರ್ವಣಕ್ಕೆ ಬೇಕಾದ ತಯಾರಿಯನ್ನು ತೀವ್ರಗೊಳಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದಾರಲ್ಲ, ಪ್ರತಿಪಕ್ಷಗಳು ಸಹಿಸಿಕೊಳ್ಳುವುದು ಹೇಗೆ? ಒಂದನ್ನಂತೂ ಗಮನಿಸಲೇಬೇಕು. ಎರಡನೇ ಅಲೆ ಎಂದು ಬೊಬ್ಬಿಟ್ಟರು, ಮೋದಿಯೇ ಕಾರಣ ಎಂದರು. ಭಾರತ ಆ ಅಲೆಯನ್ನು ಗೆದ್ದಾಗ ಅನಿವಾರ್ಯವಾಗಿ ಮೋದಿಯೇ ಗೆದ್ದರು ಎಂದು ಒಪ್ಪಿಕೊಳ್ಳಬೇಕಾಯ್ತು. ಪೆಟ್ರೋಲ್ ಬೆಲೆ ಏರಿಕೆಗೆ ಮೋದಿಯೇ ಕಾರಣ ಎಂದರು, ಅದು ಇಳಿದಾಗ ಅನಿವಾರ್ಯವಾಗಿ ಅದಕ್ಕೂ ಮೋದಿಯೇ ಕಾರಣ ಎಂದು ಒಪ್ಪಿಕೊಳ್ಳಬೇಕಾಯ್ತು. ನಿಂದಕರು ಮೋದಿಗೆಂದು ರಾತ್ರಿ ಹಳ್ಳ ತೋಡಿ, ಬೆಳಗ್ಗೆ ಹೋಗಿ ತಾವೇ ಹಳ್ಳದೊಳಗೆ ಬೀಳುತ್ತಿದ್ದಾರೆ. ಅವರು ಗಲಾಟೆ ಮಾಡುವ ಪ್ರತಿ ಸಂಗತಿಯೂ ಮೋದಿ ಪಾಲಿಗೆ ಹೂವಿನ ಹಾಸಿಗೆಯಾಗುತ್ತಿದೆ. ನೀವು ಒಪ್ಪಿಕೊಳ್ಳಿ, ಬಿಡಿ. ಮೋದಿ ಗೆಲ್ಲುತ್ತಾರೆಂದರೆ ಭಾರತ ಗೆಲ್ಲುತ್ತದೆ ಎಂದೇ ಅರ್ಥ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)