ಅಂಕಣ

ಆರೋಗ್ಯಕರ ಹಲ್ಲುಗಳಿಗೆ ಬಿಸಿ-ತಣ್ಣನೆಯ ಅನುಭವವಾಗುತ್ತದೆಯೇ?

Webdesk - Ravikanth

ಮನುಷ್ಯನ ದೇಹದಲ್ಲಿ ಅತ್ಯಂತ ಕಠಿಣವಾದ ಭಾಗ ಅಥವಾ ಅಂಗಾಂಶ ವೆಂದರೆ ಹಲ್ಲುಗಳನ್ನು ಕವರ್ ಮಾಡಿರುವ ದಂತಕವಚ ಅಥವಾ ಎನಾಮೆಲ್. ಇದು ಹಲ್ಲಿನ ಮೇಲಿನ ಪದರವಾಗಿದ್ದು ಹೆಚ್ಚು ಖನಿಜಾಂಶಗಳನ್ನು ಹೊಂದಿರುವುದರಿಂದ ದೇಹದ ಅತ್ಯಂತ ಕಠಿಣವಾದ ವಸ್ತುವಾಗಿದೆ. ಎಮಾಮೆಲ್ ತನ್ನ ಕೆಳಗೆ ಇರುವ ಡೆಂಟಿನ್ ಮತ್ತು ಪಲ್ಪ ಅನ್ನು ರಕ್ಷಣೆ ಮಾಡುವ ಮೂಲಕ ಬಿಸಿ ಮತ್ತು ತಣ್ಣನೆಯ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಅದರ ತಾಪಮಾನ ಹಲ್ಲುಗಳಿಗೆ ತಿಳಿಯದಂತೆ ನೋಡಿಕೊಳ್ಳುತ್ತದೆ.

ಬಿಸಿ ಅಥವಾ ತಣ್ಣನೆಯ ಪೇಯ/ಜ್ಯೂಸ್​ಗಳನ್ನು ಕುಡಿಯುವಾಗ ಹಲ್ಲುನೋವು, ಸೂಕ್ಷ್ಮತೆಯ ಅನುಭವ ವಾಗುತ್ತಿದ್ದರೆ ನಿಮ್ಮ ಬಾಯಿಯಲ್ಲಿ ಖಂಡಿತ ಸಮಸ್ಯೆ ಇದೆ ಎಂದು ತಿಳಿಯ ಬಹುದು. ಎನಾಮೆಲ್​ನ ಕೆಳಗಿರುವ ಡೆಂಟಿನ್ ನ ಭಾಗಗಳು ಯಾವುದೇ ಕಾರಣದಿಂದಾಗಿ ತೆರೆದುಕೊಂಡಾಗ ಹಲ್ಲುಗಳಿಗೆ ತಾಪಮಾನದ ಅನುಭವವಾಗುತ್ತದೆ.

ಕಾರಣಗಳು

  • ದಂತಕವಚದ ಸವೆತ: ದಂತಕವಚ ನಮ್ಮ ಹಲ್ಲುಗಳನ್ನು ರಕ್ಷಿಸುತ್ತದೆ. ನಾವು ಸೇವಿಸುವ ಆಮ್ಲೀಯ ಆಹಾರ ಮತ್ತು ಪಾನೀಯಗಳಿಂದಾಗಿ ಎನಾಮೆಲ್ ಸವೆದು ಡೆಂಟಿನ್ ಅಥವಾ ದಂರದ್ರವ್ಯದ ಪದರಗಳು ತೆರೆದುಕೊಂಡು ಹಲ್ಲುಗಳ ಸೂಕ್ಷ್ಮತೆ ಉಂಟಾಗಬಹುದು.
  • ತುಂಬಾ ಗಟ್ಟಿಯಾಗಿ ಮತ್ತು ಅವೈಜ್ಞಾನಿಕ ರೀತಿಯಲ್ಲಿ ಹಲ್ಲುಗಳನ್ನು ಉಜ್ಜುವುದರಿಂದ ಕೂಡ ದಂತಕವಚದ ಸವೆತ ಉಂಟಾಗಿ ಸೂಕ್ಷ್ಮತೆಯ ಅನುಭವವಾಗುತ್ತದೆ.
  • ಸರಿಯಾದ ಕ್ರಮದಲ್ಲಿ ಹಲ್ಲುಗಳನ್ನು ಶುಚಿಗೊಳಿಸದಿದ್ದರೆ ಹಲ್ಲು ಮತ್ತು ವಸಡಿನ ಅಂಚಿನಲ್ಲಿ ಫ್ಲೇಕ್ ಜಮೆಯಾಗುವುದರ ಮೂಲಕ ವಸಡು ಹಿಂಜರಿದು ಸೂಕ್ಷ್ಮತೆಗೆ ಕಾರಣವಾಗುತ್ತದೆ.
  • ವಸಡಿನ ಕಾಯಿಲೆಗಳಿಂದಲೂ ವಸಡು ಹಿಂಜರಿದು ಹಲ್ಲುಗಳ ಸೂಕ್ಷ್ಮತೆಗೆ ಕಾರಣವಾಗಬಹುದು.
  • ಹಲ್ಲು ಹುಳುಕು ಆರಂಭಿಕ ಹಂತದಲ್ಲಿದ್ದಾಗ ತೊಂದರೆಗಳು ಅಷ್ಟಾಗಿ ಕಾಣುವುದಿಲ್ಲ, ಹುಳುಕು ಆಳವಾದಂತೆ ಹಲ್ಲಿನ ಸೂಕ್ಷ್ಮತೆಯ ಜೊತೆಗೆ ಹಲ್ಲು ನೋವು ಉಂಟಾಗುತ್ತದೆ.
  • ಮುರಿತಕ್ಕೊಳಗಾದ ಹಲ್ಲುಗಳಿಗೂ ಸೂಕ್ಷ್ಮತೆಯ ಅನುಭವ ಉಂಟಾಗುತ್ತದೆ.
  • ವಯಸ್ಸಿಗೆ ಅನುಗುಣವಾಗಿ ದೇಹದಲ್ಲಿ ಬದಲಾವಣೆಗಳಾಗುವ ರೀತಿ ಹಲ್ಲುಗಳು ಸವೆದು ಸೂಕ್ಷ್ಮತೆ ಉಂಟಾಗುತ್ತದೆ.

ಈ ತೊಂದರೆಗೆ ಚಿಕಿತ್ಸೆಯು ಕಾರಣವನ್ನು ಅವಲಂಬಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಂವೇದನಾ ರಹಿತ ಟೂತ್ ಪೇಸ್ಟ್ ಗಳು ಸ್ವಲ್ಪಮಟ್ಟಿಗೆ ಸಹಾಯಮಾಡುತ್ತದೆ. ಹಾರ್ಡ್ ಟೂತ್ ಬ್ರಷ್ ಅನ್ನು ಉಪಯೋಗಿಸುತ್ತಿದ್ದಲ್ಲಿ ಅದನ್ನು ಸಾಫ್ಟ್ ಟೂತ್ ಬ್ರಷ್​ಗೆ ಬದಲಾಯಿಸುವುದರ ಮೂಲಕ ಮತ್ತೆ ಮುಂದಾಗುವ ದಂತಕವಚದ ಸವೆತವನ್ನು ತಡೆಗಟ್ಟಬಹುದು.

ಹುಳುಕು ಆಳವಾಗಿದ್ದರೆ ರೂಟ್ ಕೆನಾಲ್ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ವಸಡಿನ ಕಾಯಿಲೆಯಿಂದಾಗಿ ಉಂಟಾಗುತ್ತಿದ್ದರೆ ಸರ್ಜಿಕಲ್ ಗಮ್ ಗ್ರಾಫ್ಟ್​ಗಳ ಮೂಲಕ ಚಿಕಿತ್ಸೆಯನ್ನು ನೀಡಬಹುದು.

ಪ್ರಶ್ನೆ: ಮೌತ್ ವಾಶ್ ಗಳನ್ನು ಉಪಯೋಗಿಸುವುದರಿಂದ ಹಲ್ಲು ಹುಳುಕಾಗುವುದನ್ನು ತಪ್ಪಿಸಬಹುದೆ?

| ಹರ್ಷ 27 ವರ್ಷ, ಮೈಸೂರು

ಉತ್ತರ: ಪ್ರತಿದಿನ ನಿಯಮಿತವಾಗಿ ಹಲ್ಲುಗಳನ್ನು ಉಜ್ಜವುದರ ಜೊತೆಗೆ ಮೌತ್ ವಾಶ್​ಗಳನ್ನು ಉಪಯೋಗಿಸಿದಾಗ ಮಾತ್ರ ತಾಜಾ ಉಸಿರಾಟದೊಂದಿಗೆ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು. ಹಲ್ಲುಗಳನ್ನು ಶುಚಿಗೊಳಿಸದೇ ಕೇವಲ ಮೌತ್ ವಾಶ್ ನಿಂದ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ.

ಪ್ರಶ್ನೆ: ನನಗೆ 58 ವರ್ಷ. ವಯಸ್ಸು ಯಾವುದೇ ಹಲ್ಲಿನ ಸಮಸ್ಯೆ ಇರದ ಕಾರಣ ಒಮ್ಮೆಯೂ ದಂತವೈದ್ಯರನ್ನು ಭೇಟಿ ಮಾಡಿರುವುದಿಲ್ಲ. ಈಗ ಕೆಲವು ದಿನಗಳಿಂದ ವಸಡಿ ನಿಂದ ರಕ್ತಸ್ರಾವವಾಗುತ್ತಿದೇ ಪರಿಹಾರ ತಿಳಿಸಿ.

| ರಾಜಣ್ಣ ಶಿವಮೊಗ್ಗ

ಉತ್ತರ: ಯಾವುದೇ ಹಲ್ಲಿನ ಸಮಸ್ಯೆ ಇಲ್ಲದೆ ಬಾಯಿಯ ಆರೋಗ್ಯವನ್ನು ಕಾಪಾಡಿಕೊಂಡಿರುವುದು ಒಳ್ಳೆಯ ಸಂಗತಿ. ವಯಸ್ಸಿಗೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ನೋಡುತ್ತೇವೆ. ಒಮ್ಮೆ ದಂತ ವೈದ್ಯರ ಬಳಿ oral prophylaxis ಮಾಡಿಸಿಕೊಂಡು ಹಲ್ಲುಗಳನ್ನು ಉಜ್ಜುವ ಕ್ರಮವನ್ನು ತಿಳಿದು ಅದರ ಜೊತೆಗೆ ನಿಯಮಿತವಾಗಿ ವಸಡನ್ನು ಮಸಾಜ್ ಮಾಡುವುದರಿಂದ ಹಲ್ಲು ಮತ್ತು ವಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.