ಅಂಕಣ

ಮೊಬೈಲ್ ಅಡಿಕ್ಷನ್ ನಿಮಗಿದೆಯೇ?

Webdesk - Ravikanth
ಇಂಟರ್​ನೆಟ್ ಡೌನ್ ಆದರೆ, ಮೊಬೈಲ್ ಚಾರ್ಜ್ ಹೋದರೆ, ಕಂಪ್ಯೂಟರ್ ಕ್ರಾ್ಯಶ್ ಆದರೆ ಆ ದಿನ ನಡೆಯುವುದಿಲ್ಲ ಎಂಬ ಹಂತದಲ್ಲಿ ನಾವು ಈಗ ಇದ್ದೇವೆ. ಆದರೆ ದಿನನಿತ್ಯದ ಅವಶ್ಯಕತೆಗಳಿಗಾಗಿ, ವ್ಯವಹಾರಕ್ಕಾಗಿ ಮೊಬೈಲ್ ಉಪಯೋಗಿಸುವುದು ವ್ಯಸನವನ್ನೇನೂ ಸೃಷ್ಟಿಸುವುದಿಲ್ಲ. ಇಲ್ಲಿ ಮೊಬೈಲ್ ಒಂದು ಮಾಧ್ಯಮವಷ್ಟೆ. ಆದರೆ ಅಂತಹ ಬಳಕೆಯನ್ನು ಬದಿಗಿರಿಸಿ, ನಾವು ಸದಾ ಚಡಪಡಿಕೆಯಿಂದ ಮತ್ತೆ ಮತ್ತೆ ನೋಡುವ ವಿವಿಧ ಆಪ್​ಗಳು, ವಿಡಿಯೋ ಗೇಮ್ಳು ವ್ಯಸನದ ಮೂಲ.

| ಡಾ.ಕೆ.ಎಸ್. ಪವಿತ್ರ ಮನೋವೈದ್ಯೆ

ಬಸ್ ಸ್ಟ್ಯಾಂಡ್​ನಲ್ಲೋ, ರೈಲ್ವೆ ಸ್ಟೇಷನ್​ನಲ್ಲೋ ಇದ್ದಾಗ ಫೋನ್ ಬದಿಗಿಟ್ಟು, ಕೆಲನಿಮಿಷ ಸುತ್ತಮುತ್ತ ನೋಡಿ. ಹೆಚ್ಚಿನವರ ತಲೆ ತಗ್ಗಿರುತ್ತದೆ, ಬೆರಳು ‘ಸ್ವೈಪ್’ ಮಾಡುತ್ತಿರುತ್ತದೆ. ಕಣ್ಣು ಆಗಾಗ ಮೆಸೇಜ್ ಪರೀಕ್ಷಿಸುತ್ತಿರುತ್ತದೆ. ಒಬ್ಬರೊಂದಿಗೆ ಇನ್ನೊಬ್ಬ ವ್ಯಕ್ತಿ ಇದ್ದಂತೆ, ಪ್ರತಿಯೊಬ್ಬರ ಜೊತೆಗಾರ ಮೊಬೈಲ್! ‘‘ಪ್ರತಿದಿನ ಎಷ್ಟು ಗಂಟೆಗಳ ಕಾಲ ಮೊಬೈಲ್ ಬಳಸುತ್ತೀರಿ?’ ಎಂಬ ಪ್ರಶ್ನೆಗೆ ಬಹುಜನರು ‘‘ಅರ್ಧಗಂಟೆ’ ಎಂಬ ಉತ್ತರ ನೀಡುತ್ತಾರೆ. ಆದರೆ ಪ್ರತಿಯೊಬ್ಬರ ಅಂದಾಜು ಮೊಬೈಲ್ ಬಳಕೆ ಇಂದು 2ರಿಂದ 8 ಗಂಟೆಗಳು! 10 ವರ್ಷಗಳ ಹಿಂದೆ ಇದ್ದ ಸಂದೇಶಗಳನ್ನು ಪಡೆದುಕೊಳ್ಳುವ ಸಾಧ್ಯತೆಗಿಂತ ಇಂದು 427% ಸಂದೇಶಗಳ ಗ್ರಹಿಕೆ ಹೆಚ್ಚಿದೆ. ಹಿಂದಿನ ದಿನಗಳಿಗಿಂತ ಇಂದಿನ ಜನರು 278% ಹೆಚ್ಚು ಮೆಸೇಜ್ ಕಳಿಸುತ್ತಾರೆ.

ಮತ್ತೆ ಮತ್ತೆ ಸ್ಕ್ರೀನ್​ ನೋಡಬೇಕು, ಯಾರಾದರು ಮೆಸೇಜ್ ಕಳಿಸಿದ್ದಾರೆಯೋ ನೋಡೋಣ ಎಂಬ ತುಡಿತ ಮೊಬೈಲ್ ಬಳಕೆಯಲ್ಲಿ ಕಂಡು ಬರುತ್ತದೆ. ಮೊಬೈಲ್ ಚಾರ್ಜ್ ಮುಗಿಯುತ್ತಾ ಬಂದರೆ ಎಂಬ ಆತಂಕ ಪ್ರಯಾಣ ಮಾಡುವಾಗ ತಲೆದೋರುವುದು ಕೇವಲ ಕರೆ ಮಾಡಲಲ್ಲ, ಬದಲಾಗಿ ಆಡಲಾಗುವುದಿಲ್ಲ/ವಿಡಿಯೋ ನೋಡಲಾಗುವುದಿಲ್ಲ ಎಂಬ ಚಡಪಡಿಕೆಗಳಿಂದ. ಅಂದರೆ ಇವೆಲ್ಲವನ್ನು ನೋಡಿದರೆ ಮೊಬೈಲ್ ಬಳಕೆ ‘ವ್ಯಸನ’ ಎಂಬ ಅರ್ಹತೆ ಗಳಿಸಲು ಸುಲಭವಾಗಿ ಸಿದ್ಧವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ನಿದ್ರಾಹೀನತೆ: ನಿದ್ರಾ ಹೀನತೆಯ ಪ್ರಮುಖ ಕಾರಣ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ. ದೀಪ ಆರಿಸಿ ಹಾಸಿಗೆ ಮೇಲೆ ಮಲಗಿ ವಾಟ್ಸ್ ಆಪ್/ಫೇಸ್​ಬುಕ್ ನೋಡುವುದು ಬಹುಜನರ ಅಭ್ಯಾಸ. ಮೊಬೈಲ್ ತೆರೆಯ ಬೆಳಕು, ಮಾಹಿತಿಯ ಮಹಾಪೂರ ಎರಡೂ ಸೇರಿ ಮಿದುಳಿನ ನಿದ್ರಾಕೇಂದ್ರಗಳನ್ನು ಕೆಲಸ ಮಾಡಲು ಬಿಡುವುದಿಲ್ಲ. ಪರಿಣಾಮ ನಿದ್ರಾಹೀನತೆ.

ಮೊಬೈಲ್ ವ್ಯಸನಕ್ಕೆ ನಾವು ಒಳಗಾಗಿದ್ದೇವೆಯೇ ಎಂದು ಪರೀಕ್ಷಿಸಿಕೊಳ್ಳುವುದು ಹೇಗೆ? ಕೆಳಗಿನ ಅಂಶಗಳು ನಿಮ್ಮಲ್ಲಿವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
  • ಮೊಬೈಲ್ ಫೋನ್​ ಬಳಕೆಯಿಲ್ಲದೆ ನಿಮಗೆ ಸಮಯ ಕಳೆಯುವುದು ಸಾಧ್ಯವೇ ಆಗುತ್ತಿಲ್ಲ.
  • ನಿಮ್ಮ ಕುಟುಂಬ ಮತ್ತು ಸ್ನೇಹಿತರೊಡನೆ ಸಮಯ ಕಳೆಯಲು ನಿಮಗೆ ಸಾಧ್ಯವಾಗುತ್ತಿಲ್ಲ, ಆದರೆ ಮೊಬೈಲ್​ನೊಂದಿಗೆ ನೀವು ಒಬ್ಬರೇ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದೀರಿ ಎಂದಾದರೆ.
  • ಮೊಬೈಲ್​ನಲ್ಲಿಯ ಸಂಬಂಧಗಳೇ ಮುಖ್ಯವಾಗಿ, ನಿಮ್ಮೊಂದಿಗಿರುವ ಮನೆಯ ಸಂಬಂಧಗಳನ್ನು (ಪತಿ/ಪತ್ನಿ/ಮಕ್ಕಳು) ನಿರ್ಲಕ್ಷಿಸಲಾರಂಭಿಸಿದರೆ.
  • ನಿಮ್ಮ ಮೊಬೈಲ್ ಬಳಕೆಯನ್ನು ಇತರರಿಂದ ಮುಚ್ಚಿಡಲಾರಂಭಿಸಿದರೆ.

ಕೆಲವೊಂದು ಮೊಬೈಲ್ ಅನ್ನು ನಿಮ್ಮ ನಿಯಂತ್ರಣದಲ್ಲಿರಿಸುವ ಪ್ರಯತ್ನಕ್ಕೆ ತೊಡಗಬೇಕು. ಬೋರ್ ಆದಾಗ, ಯಾವ ಚಟುವಟಿಕೆಯೂ ಇಲ್ಲದೆ ಕುಳಿತಾಗ ಮೊಬೈಲ್ ತೆಗೆದು ನೋಡುವುದನ್ನು ನಿಲ್ಲಿಸಿ. ಬದಲಾಗಿ, ಆಟ-ವ್ಯಾಯಾಮ-ನಡಿಗೆಯಂತಹ ದೈಹಿಕ ಚಟುವಟಿಕೆಯೆಡೆಗೆ ತಿರುಗಿ. ಸಭೆಗಳಲ್ಲಿರುವಾಗ ಮೊಬೈಲ್ ಬದಿಗಿಟ್ಟು ಮಾತನಾಡಿ ಬೆರೆಯುವ ನಿಯಮ ಪಾಲಿಸಬೇಕು. ಯಾವುದೋ ಮುಖ್ಯ ಸಂದೇಶ ತಪ್ಪಿಹೋದರೆ ಎಂಬ ಆತಂಕ ಬೇಡವೇ ಬೇಡ. ಹಾಗೊಮ್ಮೆ ಅಂಥ ತುರ್ತಿನ ಸಂದೇಶವಾದರೆ ನಿಮ್ಮನ್ನು ಹೇಗಾದರೂ ಸಂರ್ಪಸುತ್ತಾರೆ ಎಂಬುದು ಸತ್ಯದ ಮಾತು. ಕೆಲಸದ ಸಮಯದಲ್ಲಿ ಮತ್ತು ನಿದ್ರೆ ಮಾಡುವ ಸಮಯದಲ್ಲಿ ಡೇಟಾ ಆಫ್ ಮಾಡಿ. ಹಾಸಿಗೆ ಮೇಲೆ ಮಲಗಿ ಮೊಬೈಲ್ ನೋಡುವ ಅಭ್ಯಾಸ ಬೇಡವೇ ಬೇಡ. ಸ್ನೇಹಿತರಿಗೆ ಮೆಸೇಜ್ ಮಾಡುವ ಬದಲು ಕರೆ ಮಾಡಿ ಮಾತನಾಡಿ. ಮೊಬೈಲ್ ಬಳಕೆ ವ್ಯಸನವಾಗಿ, ವ್ಯಸನ ಮುಕ್ತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಸೇರುವ ಸ್ಥಿತಿಯಲ್ಲಿ ಇಡೀ ಸಮಾಜ ಮುನ್ನಡೆಯುತ್ತಿರುವಂತಿದೆ. ಅಂತಹ ಪರಿಸ್ಥಿತಿ ಬರುವ ಮೊದಲೇ ಎಚ್ಚೆತ್ತುಕೊಳ್ಳೋಣ, ಮೊಬೈಲ್ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸೋಣ!!