ಅಂಕಣ

ಮಕ್ಕಳೇ.. ನಿಮ್ಮಲ್ಲಿವೆಯೇ ಹೊಸ ಐಡಿಯಾ...?

vijayavani

ಮಕ್ಕಳೇ, ನಿಮ್ಮ ಬಳಿ ಅದ್ಭುತ ಐಡಿಯಾಗಳಿವೆಯೆ? ಆ ಐಡಿಯಾಗಳನ್ನು ಉಪಯೋಗಿಸಿ ಹೊಸ ಆವಿಷ್ಕಾರ ಮಾಡುವ ಆಸೆ ಇದೆಯೆ? ಇದರಿಂದ ಜನರಿಗೆ ಏನಾದರೊಂದು ಉಪಯೋಗ ಆಗುತ್ತದೆ ಎಂಬ ವಿಶ್ವಾಸವಿದೆಯೇ? ನಿಮಗೆ ವೇದಿಕೆ ಕಲ್ಪಿಸಿಕೊಡುತ್ತಿದೆ ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್. ನಿಮ್ಮ ಆವಿಷ್ಕಾರ ಕ್ಲಿಕ್ ಆಯಿತೆಂದರೆ ಸಿಗಲಿದೆ ಭಾರಿ ಬಹುಮಾನ. ಹಾಗಿದ್ದರೆ ಬನ್ನಿ... ಇಂಥದ್ದೊಂದು ಅಪೂರ್ವ ಅವಕಾಶದ ಬಗ್ಗೆ ತಿಳಿಯೋಣ...

ಪ್ರತಿಯೊಬ್ಬ ಮಕ್ಕಳಲ್ಲಿಯೂ ಏನಾದರೊಂದು ಟ್ಯಾಲೆಂಟ್ ಇದ್ದೇ ಇರುತ್ತದೆ. ಆದರೆ ಅದನ್ನು ಗುರುತಿಸಿ, ಬೆಳಕಿಗೆ ತರುವಲ್ಲಿ ಪಾಲಕರು, ಶಿಕ್ಷಕರು ಸೇರಿದಂತೆ ಹಲವರ ಪಾತ್ರ ಬಹುಮುಖ್ಯವಾದದ್ದು. ಈ ರೀತಿಯ ಪ್ರೋತ್ಸಾಹ ಸಿಕ್ಕರೂ ನೀವು ಮಾಡುವ ಹೊಸ ಹೊಸ ಪ್ರಯೋಗಗಳನ್ನು ಗುರುತಿಸುವವರು ಯಾರು? ಇದಕ್ಕೊಂದು ವೇದಿಕೆ ಬೇಕಲ್ಲವೇ? ತೀರಾ ಹೊಸತು ಎನಿಸಿರುವ ಆವಿಷ್ಕಾರ ಮಾಡಿದ್ದರೆ ಅಥವಾ ಏನಾದರೊಂದು ಹೊಸ ಐಡಿಯಾ ನಿಮ್ಮಲ್ಲಿದ್ದರೆ ಅದನ್ನು ಯಾರಿಗೆ ಹೇಳುವುದು? ಹೀಗೆಲ್ಲಾ ನಿಮ್ಮಲ್ಲಿ ಪ್ರಶ್ನೆ ಬಂದಿರಲಿಕ್ಕೆ ಸಾಕು.

ನಿಮ್ಮ ಹೊಸ ಹೊಸ ಆವಿಷ್ಕಾರ/ ಐಡಿಯಾಗಳಿಗೆ ಪ್ರತಿವರ್ಷವೂ ವೇದಿಕೆ ಕಲ್ಪಿಸುತ್ತಿದೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್. ಇಂಥ ಮಕ್ಕಳಿಗಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಕಲ್ಪಿಸುವ ಜತೆಗೆ, ಅವಾರ್ಡ್ ಕೂಡ ನೀಡಲಾಗುತ್ತಿದೆ. ಹೊಸತು ಹಾಗೂ ಸಮಾಜಕ್ಕೆ ಉಪಯೋಗ ಎನಿಸುವ ಐಡಿಯಾಗಳನ್ನು ಮಕ್ಕಳು ನೀಡಿದರೆ, ಸ್ಥಳಿಯ ಸಂಪನ್ಮೂಲಗಳನ್ನೇ ಬಳಸಿಕೊಂಡು ಯಂತ್ರ, ಉಪಕರಣ ಇತ್ಯಾದಿಗಳನ್ನು ಆವಿಷ್ಕರಿಸಿದ್ದರೆ, ಅದಕ್ಕೆ ಪೇಟೆಂಟ್ ಕೂಡ ಸಿಗಲಿದೆ. ಅಂದರೆ, ನೀವು ಮಾಡಿರುವ ಆವಿಷ್ಕಾರಕ್ಕೆ ಕೆಲ ವರ್ಷ ನೀವೊಬ್ಬರೇ ಅಧಿಪತಿಯಾಗಿರುತ್ತೀರಿ. ಬೇರೆಯವರು ಆ ಐಡಿಯಾವನ್ನು ಪಡೆದು ಅದೇ ರೀತಿಯ ಆವಿಷ್ಕಾರವನ್ನು ಮಾಡಲು ಸಾಧ್ಯವಿಲ್ಲ.

ಈಗಾಗಲೇ ಗ್ರಾಮೀಣ ವಿದ್ಯಾರ್ಥಿಗಳೂ ಸೇರಿದಂತೆ ಹಲವಾರು ಮಕ್ಕಳು ಈ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಪ್ರತಿ ವರ್ಷ ಜೂನ್-ಜುಲೈ ತಿಂಗಳಿನಲ್ಲಿ ಅರ್ಜಿ ಕರೆಯಲಾಗುತ್ತದೆ. ಆಗಸ್ಟ್ ಅಂತ್ಯದವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅಂದರೆ ನಿಮಗೆ ಇನ್ನೂ ಐದಾರು ತಿಂಗಳು ಅವಕಾಶವಿದೆ. ಏನಾದರೂ ಹೊಸ ಯೋಚನೆ ನಿಮಗೆ ಹೊಳೆದಿದ್ದರೆ, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಆ ಆವಿಷ್ಕಾರಕ್ಕೆ ಬೇಕಾಗುವ ಸಲಕರಣೆಗಳು ಹಾಗೂ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಲು ಈಗಿನಿಂದಲೇ ಶುರು ಮಾಡಿದರೆ ಜೂನ್- ಜುಲೈ ಬರುವ ಹೊತ್ತಿಗೆ ನೀವು ಸಂಪೂರ್ಣವಾಗಿ ಸ್ಪರ್ಧೆಗೆ ರೆಡಿ ಆಗಬಹುದು.

ಹಿಂದೆ ಯಾರಾದರೂ ಮಾಡಿದ್ದ ಅಂದರೆ ತೀರಾ ಹಳತು ಎನಿಸುವ ಆವಿಷ್ಕಾರಗಳು ಬೇಡ. ‘ಜನಸಂಖ್ಯೆ ಹೆಚ್ಚಳ, ಭ್ರಷ್ಟಾಚಾರ, ಜಾಗತಿಕ ತಾಪಮಾನ, ನಿರುದ್ಯೋಗ ಇತ್ಯಾದಿ ವಿಷಯಗಳು ತೀರಾ ಹಳೆಯದಾಗಿದ್ದು, ಅವುಗಳ ಬಗ್ಗೆ ವಿಷಯ ಮಂಡನೆ/ ಆವಿಷ್ಕಾರಗಳು ಬೇಡ. ಅದರ ಬದಲು ನೈಸರ್ಗಿಕ ಸಂಪನ್ಮೂಲಗಳ ಮರು ಬಳಕೆ, ಮಳೆ ನೀರು ಸಂಗ್ರಹ, ಸೌರಶಕ್ತಿ ಬಳಕೆ, ಎರೆಗೊಬ್ಬರ ತಯಾರಿಕೆ (ಇವು ಕೇವಲ ಉದಾಹರಣಗಳಷ್ಟೇ)... ಇಂಥ ಹೊಸ ಹೊಸ ವಿಚಾರಗಳು ಇದ್ದರೆ ಒಳ್ಳೆಯದು’ ಎನ್ನುತ್ತಾರೆ ಆಯೋಜಕರು.

ಬೇರೆ ಬೇರೆ ರಾಜ್ಯಗಳಿಂದ ಸಹಸ್ರಾರು ಮಕ್ಕಳು ಭಾಗವಹಿಸುತ್ತಾರೆ. ನನಗೆ ಬಹುಮಾನ ಸಿಗಲು ಸಾಧ್ಯವೇ ಎಂಬ ಸಂಶಯ ನಿಮಗೆ ಬೇಡವೇ ಬೇಡ. ಏಕೆಂದರೆ ನಿಮ್ಮ ಐಡಿಯಾ ನಿಮಗೆ ಚಿಕ್ಕದು ಎನಿಸಿದರೂ ಅದು ತೀರ್ಪಗಾರರಿಗೆ ಅಪರೂಪ ಎನಿಸಬಹುದು. ಒಂದು ವೇಳೆ ಬಹುಮಾನ ಬರದಿದ್ದರೂ ಚಿಂತೆ ಏಕೆ? ನಿಮ್ಮ ಆವಿಷ್ಕಾರ ತುಂಬಾ ಚೆನ್ನಾಗಿದೆ ಎನಿಸಿದರೆ, ಅವಾರ್ಡ್ ಸಿಗದಿದ್ದರೂ ನಿಮಗೆ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀವು ಭಾಗವಹಿಸಿದ್ದೀರಿ ಎಂಬ ಹೆಮ್ಮೆ ನಿಮಗೂ, ಪಾಲಕರಿಗೂ, ನಿಮ್ಮ ಶಿಕ್ಷಕರಿಗೂ ಆಗುತ್ತದೆಯಲ್ಲವೆ? ಮುಂದೊಂದು ದಿನ ಆ ಆವಿಷ್ಕಾರವೇ ನಿಮಗೆ ಇನ್ನೆಲ್ಲಿಯೂ ಒಳ್ಳೆಯ ಫಲವನ್ನೂ ನೀಡಬಹುದು.

ಏನಿದು ಸ್ಪರ್ಧೆ?

ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್ (ಎನ್​ಇಎಫ್) ವತಿಯಿಂದ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ಇಗ್​ನೈಟ್ (ಐಠಿಛಿಜ್ಟಚಠಿಛಿಛ ಎಟ್ಠಟ ಟ್ಛ ಘಚಠಿಜಿಟ್ಞಚ್ಝ ಐಛ್ಠಠಠ್ಟಿಜಿಚ್ಝ ಖಛ್ಚಿಜ್ಞಟ್ಝಟಜಢ ಉಜಜಿಚಿಜಿಠಿಜಿಟ್ಞಠ) ಅವಾರ್ಡ್ ನೀಡುವ ಸ್ಪರ್ಧೆ ಇದು. ಎನ್​ಇಎಫ್, ಗುಜರಾತ್​ನ ಅಹಮದಾಬಾದ್​ನಲ್ಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. 12ನೇ ತರಗತಿಯವರೆಗೆ ಕಲಿಯುವ ಮಕ್ಕಳಿಗಾಗಿ ಈ ಸ್ಪರ್ಧೆಯನ್ನು ಪ್ರತಿವರ್ಷ ನಡೆಸಲಾಗುತ್ತದೆ. ಇದರ ಉದ್ದೇಶ ವಿದ್ಯಾರ್ಥಿಗಳಲ್ಲಿ ಆವಿಷ್ಕಾರದ ಮನೋಭಾವವನ್ನು ಬೆಳೆಸುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಹಮದಾಬಾದ್​ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವಾರ್ಡ್ ನೀಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿ ಹಾಗೂ ಅವರ ಜತೆ ಒಬ್ಬರಿಗೆ ತಗಲುವ ಸಂಪೂರ್ಣ (ಪ್ರಯಾಣ, ಊಟ-ವಸತಿ) ವೆಚ್ಚವನ್ನು ಫೌಂಡೇಷನ್ ವಹಿಸಿಕೊಳ್ಳುತ್ತದೆ.

2019ರ ವಿಜೇತರು ಮಾಡಿದ್ದೇನು?

2019ರಲ್ಲಿ 544 ಜಿಲ್ಲೆಗಳಿಂದ 60 ಸಾವಿರ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದರು. ಕರ್ನಾಟಕದ ಸುಯಾಷ್ ಪಟೇಲ್ ಸೇರಿದಂತೆ 21 ವಿದ್ಯಾರ್ಥಿಗಳಿಗೆ ಅವಾರ್ಡ್ ನೀಡಲಾಗಿತ್ತು. ಅದರಲ್ಲಿ ಸುಯಾಷ್, ಎಲೆ ಉಪಯೋಗಿಸಿ ಮಾಡುವ ಪ್ಲೇಟ್​ಗಳು ಒಂದೇ ತೆರನಾಗಿ ಇರಲು ಬಳಸುವ ಕಡ್ಡಿಯ ಸ್ಟಾ್ಯಪ್ಲರ್ ಹೇಗಿರಬೇಕು ಎಂಬ ಬಗ್ಗೆ ವಿವರಿಸಿದ್ದ. ಉಳಿದಂತೆ, ಸೂರ್ಯನ ಬೆಳಕು ಉಪಯೋಗಿಸಿ ರಸ್ತೆ ಬದಿಯಲ್ಲಿ ಇಸ್ತ್ರಿ ಮಾಡುವುದು, ಕ್ರಿಮಿಕೀಟಗಳನ್ನು ಕೊಲ್ಲುವ ಡಸ್ಟ್​ಬಿನ್, ಎಳೆದಷ್ಟೂ ಅಗಲವಾಗುವ ಊಟದ ತಾಟು, ಅಂಧರಿಗೆ ಉಪಯೋಗವಾಗುವ ಶೌಚಗೃಹ... ಇತ್ಯಾದಿಗಳನ್ನು ವಿದ್ಯಾರ್ಥಿಗಳು ಸಂಶೋಧಿಸಿದ್ದರು. ಇಲ್ಲಿ ತಿಳಿಸಿರುವ ವೆಬ್​ಸೈಟ್​ಗೆ ಭೇಟಿ ನೀಡಿದರೆ ಹಿಂದಿನ ಎಲ್ಲಾ ಸಂಶೋಧನೆಗಳನ್ನು ನೋಡಬಹುದು.

ಯಾರು ಅರ್ಹರು?

ದ್ವಿತೀಯ ಪಿಯುಸಿಯವರೆಗೆ ಕಲಿಯುತ್ತಿರುವ ಯಾವುದೇ ವಿದ್ಯಾರ್ಥಿ 17 ರಿಂದ 18 ವರ್ಷದ ಒಳಗಿನವರಾಗಿದ್ದರೆ ಇದಕ್ಕೆ ಅರ್ಜಿ ಸಲ್ಲಿಸಬಹುದು. ಒಬ್ಬ ವಿದ್ಯಾರ್ಥಿ ಅನೇಕ ಆವಿಷ್ಕಾರ ಮಾಡಿದ್ದರೆ ಯಾವುದನ್ನು ಹಾಕುವುದಪ್ಪಾ ಎಂಬ ಚಿಂತೆ ಬೇಡ. ಏಕೆಂದರೆ ಅನೇಕ ಆವಿಷ್ಕಾರಗಳ ವಿವರಗಳನ್ನು ಒಂದೇ ಸಲಕ್ಕೆ ಹಾಕಬಹುದು. ಒಂದು ವೇಳೆ, ನಿಮ್ಮ ಸ್ನೇಹಿತರ ಜತೆ ಸೇರಿ ಆವಿಷ್ಕಾರ ಮಾಡಿದ್ದರೆ (ಶಿಕ್ಷಕರು, ಪೋಷಕರ ನೆರವು ಪಡೆಯದೇ) ಅದಕ್ಕೂ ಇಲ್ಲಿ ಅವಕಾಶವಿದೆ. ಆಗ ಒಬ್ಬರ ಬದಲು ಆವಿಷ್ಕಾರದಲ್ಲಿ ಭಾಗವಹಿಸಿದ ಎಲ್ಲರ ಹೆಸರು ಹಾಗೂ ವಿವರಗಳನ್ನು ಹಾಕಬೇಕಾಗುತ್ತದೆ.

ಇವರಿಗೂ ಅವಕಾಶ

ಎಷ್ಟೋ ಸಂದರ್ಭಗಳಲ್ಲಿ ಪ್ರತಿಭೆ ಇದ್ದರೂ ಹಲವು ಕಾರಣಗಳಿಂದ ಶಾಲೆಯನ್ನು ಬಿಡಬೇಕಾದ ಪ್ರಸಂಗ ಬರುತ್ತದೆ. ಇನ್ನು ಕೆಲವರಿಗೆ ಶಾಲೆಗೆ ಹೋಗಲು ಅವಕಾಶವೇ ಇರುವುದಿಲ್ಲ. ಅಂಥ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಅವರಿಗೂ ಈ ಪ್ರಶಸ್ತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. 17 ವರ್ಷ ವಯಸ್ಸಿನ ಒಳಗಿನವರು ಯಾರೇ ಆಗಿದ್ದರೂ ಅರ್ಜಿ ಸಲ್ಲಿಸಬಹುದು.

ಸ್ಪರ್ಧೆಗೆ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ...

ಅರ್ಜಿ ಸಲ್ಲಿಸಲು ನಿಗದಿತ ಫಾರ್ವ್ಯಾಟ್ ಇಲ್ಲ. ಆನ್​ಲೈನ್ ಮೂಲಕ, ಪೋಸ್ಟ್ ಮೂಲಕ ಅಥವಾ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿಯಲ್ಲಿ ಹೆಸರು, ವಿಳಾಸ, ಶಾಲೆ, ವಯಸ್ಸು ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಬೇಕು. ಇದರ ಜತೆಗೆ ಪ್ರಾಜೆಕ್ಟ್/ ಐಡಿಯಾ/ ಆವಿಷ್ಕಾರ ಇದರ ಸಂಪೂರ್ಣ ಮಾಹಿತಿಯನ್ನು ನಮೂದಿಸಿರಬೇಕು. ಅದರ ಫೋಟೋ, ಸ್ಕೆಚ್, ಡಯಾಗ್ರಾಮ್ಳಿದ್ದರೆ ಅವುಗಳನ್ನೂ ಸಲ್ಲಿಸಬೇಕು. ಒಂದು ವೇಳೆ ಕಳುಹಿಸಿರುವ ಮಾಹಿತಿಯಲ್ಲಿ ಸಂದೇಹ ಬಂದರೆ ತೀರ್ಪಗಾರರು ವಿದ್ಯಾರ್ಥಿಗಳಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ. ರ್ವಂಗ್ ಮಾಡೆಲ್​ಗಳಿದ್ದರೆ ಅದನ್ನು ಅರ್ಜಿ ಸಲ್ಲಿಸುವ ವೇಳೆ ಲಗತ್ತಿಸುವ ಅವಶ್ಯಕತೆ ಇಲ್ಲ. ನೀವು ತಿಳಿಸುವ ಮಾಹಿತಿಯನ್ನು ಓದಿದ ಬಳಿಕ ನಿಮ್ಮ ಮಾಡೆಲ್ ವಿಶೇಷವಾಗಿದೆ ಎನಿಸಿದರೆ ನಂತರದಲ್ಲಿ ತೀರ್ಪಗಾರರು ನಿಮ್ಮಿಂದ ಅದನ್ನು ತರಿಸಿಕೊಳ್ಳುತ್ತಾರೆ.

ವೆಬ್​ಸೈಟ್: www.nif.org.in/ignite

ಸುಚೇತನಾ