ಹಬ್ಬಗಳು ನಮ್ಮ ಸಂಸ್ಕೃತಿಯ ಹೆಗ್ಗುರುತುಗಳು. ಅವರವರ ಆಚರಣೆ, ಸಂಪ್ರದಾಯಕ್ಕೆ ಅನುಗುಣವಾಗಿ ಹಬ್ಬಗಳನ್ನು ಮಾಡುತ್ತಾರೆ. ಸಾಮಾನ್ಯವಾಗಿ ಯುಗಾದಿ ಹಬ್ಬವು ವರ್ಷದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಹಬ್ಬ. ಅಂತೆಯೇ ಆರು ತಿಂಗಳ ಅಂತರದಲ್ಲಿ ಬರುವ ದೀಪಾವಳಿ ಕೂಡ ಕಳೆದ ಆರು ತಿಂಗಳ ಪಕ್ಷಿನೋಟ ಹಾಗೂ ಮುಂದಿನ ಆರು ತಿಂಗಳ ಮುನ್ನೋಟವನ್ನು ಹೇಳುವ ಮಹತ್ವದ ಕಾಲ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ದೀಪಾವಳಿಯನ್ನು ಮಹಾವೀರ ಸಂವತ್ಸರ ಎಂಬ ಹೆಸರಿನಿಂದ ಆಹ್ವಾನಿಸುತ್ತಾರೆ. ಇನ್ನೊಂದೆಡೆ ವ್ಯಾಪಾರ ವಹಿವಾಟು ಮಾಡುವ ಬಹುಪಾಲು ಜನರು ತಮ್ಮ ವಾರ್ಷಿಕ ಲೆಕ್ಕಪತ್ರದ ಪುಸ್ತಕವನ್ನು ಬದಲಿಸಿ ಹೊಸ ಲೆಕ್ಕವನ್ನು ಆರಂಭಿಸುವ ಪರ್ವಕಾಲ ಕೂಡ ದೀಪಾವಳಿ. ಇಂತಹ ದೀಪಾವಳಿಯ ನಂತರದ ಕೆಲ ಗ್ರಹಗತಿಗಳನ್ನು ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ಅವಲೋಕಿಸಿದಾಗ ರಾಜ್ಯ, ದೇಶ ಮತ್ತು ಜಗತ್ತಿನ ಮೇಲೆ ಹಲವು ಪರಿಣಾಮಗಳನ್ನು ಸೂಚಿಸುತ್ತಿದೆ.
ಕಳೆದ ಹಲವು ದಿನಗಳಿಂದ ದೇಶದ ಹಲವು ಭಾಗಗಳು ಜಲಾಘಾತಕ್ಕೆ ತುತ್ತಾಗಿವೆ. ವಿಶ್ವದಲ್ಲಿ ಎಲ್ಲಿಯೂ ಪೂರ್ಣ ಶಾಂತಿಯ ವಾತಾವರಣವಿಲ್ಲ. ದೇಶ ದೇಶಗಳ ನಡುವೆ ಯುದ್ಧ ಭೀತಿ, ಆರ್ಥಿಕ ಬಿಕ್ಕಟ್ಟು, ನೀತಿ ನಿಯಮಗಳಲ್ಲಿ ಉಂಟಾದ ಬದಲಾವಣೆ, ತೆರಿಗೆ ಭೂತ ಇತ್ಯಾದಿ ವಿಷಯಗಳು ಜಗತ್ತನ್ನು ಬಾಧಿಸುತ್ತಿವೆ. ಇದರ ನಡುವೆ ದೀಪಾವಳಿಯಾದ ಕೆಲವೇ ದಿನಗಳಲ್ಲಿ ಅಂದರೆ ಅ.28ರಂದು ಗುರುವು ಆತುರಾತುರವಾಗಿ ಕರ್ಕಾಟಕ ರಾಶಿ ಪ್ರವೇಶ ಮಾಡಲಿದ್ದು, ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಲಿದೆ. ಈ ನಡುವೆ ಕೇವಲ ಮೂರು ತಿಂಗಳೊಳಗೆ ಡಿ. 5ಕ್ಕೆ ವಕ್ರೀಭವನಾಗಿ ಕರ್ಕಾಟಕದಿಂದ ವಾಪಸ್ಸು ಮಿಥುನ ರಾಶಿಗೆ ಪ್ರವೇಶ ಮಾಡುವುದು ಮತ್ತು ಜ. 14ರ ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನು ಬದಲಿಸುವುದು ರಾಜಕೀಯ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗೆ ಕಾರಣವಾಗಲಿದೆ. ಇದರ ಜೊತೆಗೆ 2026ರ ಫೆ.17 ರಂದು ಭಾರತಕ್ಕೆ ಗೋಚರವಾಗದ ಸೂರ್ಯಗ್ರಹಣ ಹಾಗೂ ಭಾರತಕ್ಕೆ ಗೋಚರಿಸಲಿರುವ ಮಾ.3ರ ಚಂದ್ರಗ್ರಹಣ ದೇಶದಲ್ಲಿ ಮಹತ್ವದ ಬದಲಾವಣೆ, ಪರಿಣಾಮಕ್ಕೆ ಕಾರಣವಾಗಲಿದೆ. ನಂತರ ಜೂ.1ಕ್ಕೆ ಗುರುವು ಮತ್ತೆ ಕಟಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಕೊನೆಯಲ್ಲಿ 2026ರ ಅ.31ಕ್ಕೆ ಕಟಕರಾಶಿಯಿಂದ ಸಿಂಹರಾಶಿಗೆ ಪ್ರವೇಶ ಮಾಡುವ ಗುರುವು ಒಂದು ವರ್ಷದ ಅವಧಿಯಲ್ಲಿ ಮೂರು ರಾಶಿಗಳಿಗೆ ಪ್ರವೇಶ ಮಾಡುವುದರಿಂದ ಪ್ರಕೃತಿ, ರಾಜಕೀಯ, ಮಳೆ, ಬೆಳೆ, ಸೇನೆ, ವ್ಯಾಪಾರ, ಅಂತಾರಾಷ್ಟ್ರೀಯ ಚಟುವಟಿಕೆ, ಕಲೆ, ಕ್ರೀಡೆ ಮತ್ತು ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳ ಮೇಲೆ ತನ್ನ ಪ್ರಭಾವವನ್ನು ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ.
ದೇಶದ ಹಲವೆಡೆ ಭೂಕಂಪ, ಭೂಕುಸಿತ, ಮೇಘಸ್ಪೋಟ, ಹಿಮಾಲಯ ಪರ್ವತ ಕ್ಷೀಣ ಇತ್ಯಾದಿ ಪ್ರಾಕೃತಿಕ ವಿಕೋಪಗಳ ಜೊತೆಗೆ ಜಾತಿ, ಧರ್ಮ, ಜನಾಂಗೀಯ ಹೋರಾಟಗಳ ಹೆಸರಲ್ಲಿ ಸಮಾಜ ಭಾಗವಾಗುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸುವವರು ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಕೆಲವು ಗ್ರಹಗತಿಗಳ ಪ್ರಕಾರ ರಾಷ್ಟ್ರ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಯಾಗುವ ಸಾಧ್ಯತೆ ಇದೆ. ವೃಶ್ಚಿಕ ರಾಶಿಗೆ ಪಂಚಮಕ್ಕೆ ಶನಿ ಪ್ರವೇಶ ಮಾಡುವುದರಿಂದ ಹಾಗೂ ಅಷ್ಟಮ ಗುರುವಿನ ಪ್ರಭಾವ ರಾಷ್ಟ್ರ ರಾಜಕಾರಣದ ಮೇಲೆ ತೀವ್ರವಾಗಿರಲಿದೆ. ಆಡಳಿತ ನಡೆಸುವ ಪಕ್ಷದ ಆಂತರಿಕ ಕಲಹ ವಿಪರೀತವಾಗಿ ನಾಯಕತ್ವ ಬದಲಾಗಬಹುದು. ಮಿತ್ರಪಕ್ಷಗಳೇ ವಿವಿಧ ಕಾರಣಕ್ಕೆ ತಗಾದೆ ತೆಗೆಯಬಹುದು. ಆದರೆ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಓರ್ವ ಉತ್ತಮ ನಾಯಕನ ಆಗಮನದ ನಿರೀಕ್ಷೆ ಇದೆ. ಈ ನಡುವೆ ದಿನೇ ದಿನೇ ಪ್ರಸಿದ್ಧರಾಗುತ್ತಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರನ್ನು ಸೋಲಿಸಲು ದೊಡ್ಡ ಹುನ್ನಾರ ನಡೆಯುತ್ತಿರುವಂತೆ ಗೋಚರಿಸುತ್ತಿದೆ. ಈಗಾಗಲೇ ಬಿಹಾರದಲ್ಲಿ ವರ್ಷದ ಕೊನೆಗೆ ಚುನಾವಣೆ ನಿಗದಿಯಾಗಿದ್ದು ಈ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಯಾವುದೇ ಪಕ್ಷ ಗೆಲ್ಲಲಿದ್ದು, ಇಲ್ಲಿ ಗೆದ್ದ ಪಕ್ಷವೇ ಮುಂದೆ ದೇಶದ ಆಡಳಿತ ಚುಕ್ಕಾಣಿ ಹಿಡಿಯಲಿದೆ. ದೇಶದಲ್ಲಿ ಮತದಾನವನ್ನು ಕಡ್ಡಾಯಗೊಳಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಕಾನೂನು ತರುವ ಅವಶ್ಯಕತೆ ಇದೆ.
ಅ.28ಕ್ಕೆ ಗುರು ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದು ಅದಕ್ಕೂ 10 ದಿನ ಮುಂಚಿತವಾಗಿ ಅಂದರೆ ಅ.18ರಿಂದಲೇ ಅದರ ಕಾರ್ಯಾಚರಣೆ ಆರಂಭವಾಗಿದೆ. ಇದರ ಪ್ರಭಾವ ರಾಜ್ಯ ರಾಜಕಾರಣದ ಮೇಲೆ ಆಗಲಿದೆ. ರಾಜ್ಯದ ಆಡಳಿತ ನಡೆಸುವ ಮುಖ್ಯಸ್ಥರ ಅಧಿಕಾರ ಅಚಾನಕ್ ಹೋಗಬಹುದು. ಮುಖ್ಯಮಂತ್ರಿಗಳ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಲ್ಲಿ ಮಳೆ ಹೆಚ್ಚಾಗಿ ಬೆಳೆ ನಷ್ಟ ವಿಪರೀತವಾಗಿದೆ. ರಾಜ್ಯದ ಇತಿಹಾಸದಲ್ಲಿ ಕಂಡು ಕೇಳರಿಯದ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಆಗಿರುವ ತಪು್ಪಗಳನ್ನು ತಿದ್ದಿಕೊಂಡು ಜನಕಲ್ಯಾಣ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದರೆ ಈಗಿರುವ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳಬಹುದು. ಇಲ್ಲದಿದ್ದರೆ ಭಾರಿ ನಷ್ಟ ಎದುರಿಸಬೇಕಾಗುತ್ತದೆ.
ಭಾರತೀಯರು ಹಿಂದೂ ಪಂಚಾಂಗದ ಪ್ರಕಾರ ಸಂವತ್ಸರಗಳನ್ನು ಹೊಸ ವರ್ಷವೆಂದು ನಂಬುತ್ತಾರೆ. ಇದೀಗ ಇರುವ ವಿಶ್ವಾವಸು ಸಂವತ್ಸರದ ಮುಂದೆ ಬರಲಿರುವುದು ಪರಾಭವ ಸಂವತ್ಸರ. ಹೆಸರೇ ಹೇಳುವಂತೆ ಗೆಲುವಿಗಿಂತ ಸೋಲೇ ಹೆಚ್ಚಾಗಲಿದೆ. ಸೋಲೆಂದರೆ ಅಧಿಕಾರ ನಡೆಸುವವರ ಸೋಲು, ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸೋಲು, ದೇಶ, ಧರ್ಮ, ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಸೋಲು. ಈ ಸಂವತ್ಸರದಲ್ಲಿ ಶನಿ, ಕುಜ, ಸೂರ್ಯ ಒಂದೇ ಮನೆಯಲ್ಲಿರುವುದರಿಂದ 5 ತಿಂಗಳ ಅವಧಿ ನಿರೀಕ್ಷೆ ಮೀರಿದ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಗುರುವಿನ ಅನುಗ್ರಹ ಇದ್ದವರು, ಸತ್ಯ, ಧರ್ಮ, ಪ್ರಜಾ ಕಲ್ಯಾಣಕ್ಕಾಗಿ ದುಡಿಯುವವರು ಮಾತ್ರ ಈ ಪರಿಣಾಮವನ್ನು ನಿವಾರಿಸಿಕೊಂಡು ಬಚಾವಾಗಲು ಸಾಧ್ಯ.
ಪ್ರತಿ ವರ್ಷ ನೂತನ ಸಂವತ್ಸರ ಬದಲಾದಾಗ ಅಂದಿನ ಗ್ರಹಗತಿಯನ್ನು ಅನುಸರಿಸಿ ಒಂದು ಗ್ರಹವನ್ನು ರಾಜಗ್ರಹವೆನ್ನಲಾಗುತ್ತದೆ. ಮುಂದಿನ ನೂತನ ಸಂವತ್ಸರದ ರಾಜ ಗುರು. ಗುರು ಎಂದರೆ ಅಜ್ಞಾನವನ್ನು ನಿವಾರಿಸಿ ಜ್ಞಾನದ ಮೂಲಕ ಶಿಷ್ಯನ ಭವಿಷ್ಯವನ್ನು ರೂಪಿಸುವ ಶಿವನ ಪರಮಾವತಾರಿ. ಹರ ಮುನಿದರೆ ಗುರು ಕಾಯ್ವ ಎಂಬ ಮಾತಿದೆ. ಆದರೆ ಗುರು ಮುನಿದರೆ ರಕ್ಷಿಸುವವರು ಯಾರೂ ಇಲ್ಲ. ಆದ್ದರಿಂದ ದೇಶದಲ್ಲಿ ಆಗುವ ಅನಾಹುತಗಳಿಂದ ರಕ್ಷಿಸಲು ಗುರುಕೃಪೆ ಅತ್ಯಗತ್ಯ. ಜಗತ್ತು ಸುಸೂತ್ರವಾಗಿ ಮುಂದೆ ಸಾಗಬೇಕೆಂದರೆ ಮುಂದೆ ಗುರಿ, ಹಿಂದೆ ಗುರು ಅವಶ್ಯ. ದೇಶದ ಸನಾತನ ಗುರುಪರಂಪರೆಯ ಆದಿ ಪುರುಷನಾದ ಶ್ರೀಗುರು ದತ್ತಾತ್ರೇಯರ ಕೃಪೆಯಿಂದ ದೇಶಕ್ಕೆ ಬರಲಿರುವ ಆಪತ್ತುಗಳನ್ನು ನಿವಾರಿಸಲು ಸಾಧ್ಯ. ಗಿರಿನಾರ್, ಪೀಠಿಕಾಪುರ, ನರಸೋಬಾಡಿ, ಗಾಣಗಾಪುರ ಮತ್ತಿತರ ದತ್ತ ಕ್ಷೇತ್ರಗಳ ಸಂದರ್ಶನದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ಈಗಾಗಲೇ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಅಶಾಂತಿಯ ವಾತಾವರಣ ಉಂಟಾಗಿದ್ದು ಪರಸ್ಪರ ಉತ್ತಮ ಸಂಬಂಧಗಳು ಇಲ್ಲದಂತಾಗಿವೆ. ಮುಂದಿನ ದಿನಗಳಲ್ಲಿ ಜಾಗತಿಕ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುವ ಲಕ್ಷಣಗಳಿವೆ. ಅಮೆರಿಕಾ ದೇಶವು ಅನವಶ್ಯಕವಾಗಿ ವಿಧಿಸಿರುವ ತೆರಿಗೆ ನೀತಿ, ಹೆಚ್ಚಳವಾಗಿರುವ ವೀಸಾ ಶುಲ್ಕ ಇತ್ಯಾದಿ ನಿಯಮಗಳು ಆ ದೇಶಕ್ಕೆ ಮುಳುವಾಗಲಿದೆ. ಅಮೆರಿಕಾ ಅಧ್ಯಕ್ಷ ಅಧಿಕಾರವನ್ನು ಕಳೆದುಕೊಳ್ಳುವ ಮತ್ತು ಪ್ರಾಣಕ್ಕೆ ಕೂಡ ಕುತ್ತಾಗುವ ಸಂಭವವಿದೆ. ಪಾಕಿಸ್ತಾನ, ಬಾಂಗ್ಲಾ ಮತ್ತಿತರ ಮುಸ್ಲಿಂ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಲಿದೆ. ನೇಪಾಳ, ಶ್ರೀಲಂಕಾ ದೇಶಗಳ ರಾಜತಾಂತ್ರಿಕ ಬಿಕ್ಕಟ್ಟು ಎರಡನೇ ಹಂತಕ್ಕೆ ತಲುಪುವ ಸಾಧ್ಯತೆ ಇದ್ದು, ಅಲ್ಲಿ ಪ್ರಕೃತಿ ವಿಕೋಪದಿಂದಾಗಿ ಭಾರಿ ನಷ್ಟವನ್ನು ಅನುಭವಿಸಲಿದ್ದಾರೆ. ಭಾರತದ ಸಲಹೆ, ಮಾರ್ಗದರ್ಶನ ಮತ್ತು ಸಹಾಯದಿಂದ ಈ ದೇಶಗಳು ಚೇತರಿಸಿಕೊಳ್ಳಲು ಸಾಧ್ಯ. ಚೀನಾದಲ್ಲಿ ಬಹುದೊಡ್ಡ ದುರಂತವೊಂದು ಸಂಭವಿಸಲಿದ್ದು ದೊಡ್ಡ ಸಂಖ್ಯೆಯ ಮಾನವ ಸಂಪನ್ಮೂಲವನ್ನು ಕಳೆದುಕೊಳ್ಳಲಿದೆ. ಅಮೆರಿಕಾ, ಯುಕೆ, ಜಪಾನ್, ಜರ್ಮನಿ, ಆಸ್ಟ್ರೇಲಿಯಾ ಮತ್ತಿತರ ಪ್ರಬಲ ರಾಷ್ಟ್ರಗಳು ಕೂಡ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿವೆ