1991ರಲ್ಲಿ ಭಾರತವು ಹೊಸ ಕೈಗಾರಿಕಾ ನೀತಿಯನ್ನು ಅಳವಡಿಸಿಕೊಂಡಾಗ, ನಾವು ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣಗೊಂಡ ಆರ್ಥಿಕ ವಿಶ್ವಕ್ರಮದ ಒಂದು ಭಾಗವಾದೆವು. ನಮ್ಮ ಬಹುತೇಕ ಎಲ್ಲಾ ವಲಯಗಳು ಆರೋಗ್ಯಕರ ಸ್ಪರ್ಧೆ, ಹೊಸ ಉದ್ಯಮಿಗಳು ಮತ್ತು ಹೂಡಿಕೆಗಳಿಗೆ ತೆರೆದುಕೊಂಡವು. ಆದಾಗ್ಯೂ, ಹೊಸ ಕೈಗಾರಿಕಾ ನೀತಿ ಭಾರತದ ಗಣಿಗಾರಿಕೆ ವಲಯದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಈ ನೀತಿ ಅಂತಿಮವಾಗಿ ಸಾರ್ವಜನಿಕ ವಲಯಕ್ಕೆ ಮೀಸಲಾಗಿರುವ ಉದ್ಯಮಗಳ ಸಂಖ್ಯೆಯನ್ನು ಕೇವಲ ಎರಡಕ್ಕೆ (ಪರಮಾಣು ಶಕ್ತಿ ಮತ್ತು ರೈಲ್ವೆ) ತಗ್ಗಿಸಿತು. ಹೊಸ ಕೈಗಾರಿಕಾ ನೀತಿಯಲ್ಲಿ ನಿರೀಕ್ಷಿಸಿದಂತೆ ಗಣಿಗಾರಿಕೆ ವಲಯವು ದೇಶೀಯ ಅಥವಾ ವಿದೇಶಿ ಹೂಡಿಕೆಗಳ ಒಳಹರಿವನ್ನು ಕಾಣಲಿಲ್ಲ ಅಥವಾ ಗಮನಾರ್ಹ ಭಾಗವಹಿಸುವಿಕೆ ಮತ್ತು ವಾಣಿಜ್ಯ ಗಣಿಗಾರಿಕೆಗಳು ಬರಲಿಲ್ಲ. ಗಣಿ ಮತ್ತು ಖನಿಜಗಳ ಅಭಿವೃದ್ಧಿ ಹಾಗೂ ನಿಯಂತ್ರಣ ಕಾಯಿದೆ (ಎಂಎಂಡಿಆರ್ ಕಾಯ್ದೆ) 1957, ಗಣಿ ಮತ್ತು ಎಲ್ಲಾ ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣಕ್ಕಾಗಿ ಕಾನೂನು ಚೌಕಟ್ಟನ್ನು ಹಾಕಿತು, ಇದು ನಿರ್ಬಂಧಿತ ಗಣಿಗಾರಿಕೆ ನಿಬಂಧನೆಗಳನ್ನು ಹೊಂದಿತ್ತು. ನಿರ್ಬಂಧಿತ ಗಣಿಗಾರಿಕೆ ಮತ್ತು ಅಂತಿಮ-ಬಳಕೆಯ ನಿರ್ಬಂಧಗಳ ಜೊತೆಗೆ, ಕಲ್ಲಿದ್ದಲು ಘಟಕಗಳನ್ನು ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ಹಂಚಲಾಗುತ್ತಿದ್ದರಿಂದ ಭಾರತದ ಗಣಿಗಾರಿಕೆ ಕ್ಷೇತ್ರದ ಭವಿಷ್ಯವು ಬದಲಾಗಲಿಲ್ಲ. ಇದರ ಪರಿಣಾಮವಾಗಿ, ನಾವು ವಿಶ್ವದ 4 ನೇ ಅತಿದೊಡ್ಡ ಕಲ್ಲಿದ್ದಲು ಸಂಪತ್ತು ಹೊಂದಿರುವ, ಅಭ್ರಕ (ಮೈಕಾ) ಮತ್ತು ಬಾಕ್ಸೆ್ತ್ರಟ್ನ 5 ನೇ ಅತಿದೊಡ್ಡ ಮತ್ತು ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ನ 7 ನೇ ಅತಿದೊಡ್ಡ ಸಂಪದ್ಭರಿತ ರಾಷ್ಟ್ರವಾಗಿದ್ದರೂ ನಮ್ಮ ಅಗತ್ಯಗಳಿಗಾಗಿ ಮುಖ್ಯವಾಗಿ ಆಮದಿನ ಮೇಲೆ ಅವಲಂಬಿತರಾಗಿದ್ದೇವೆ. ದಶಕಗಳಿಂದ ಆಮದು ಮತ್ತು ಗುಣಮಟ್ಟದ್ದಲ್ಲದ ಉತ್ಪಾದನೆಯ ಮೇಲಿನ ನಮ್ಮ ಅವಲಂಬನೆ ಅಧಿಕಾರದಲ್ಲಿದ್ದವರ ನೀತಿ ಮತ್ತು ನಿಯಂತ್ರಣ ವ್ಯವಸ್ಥೆಯ ವೈಫಲ್ಯವನ್ನು ಹೇಳುತ್ತದೆ.
ನಮ್ಮ ಸರ್ಕಾರವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ 2015 ರಲ್ಲಿ ಎಂಎಂಡಿಆರ್ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಿ, ಗಣಿಗಾರಿಕೆ ಉದ್ಯಮವನ್ನು ಪಾರದರ್ಶಕ ಹರಾಜು ಪದ್ಧತಿಯ ಅಡಿಯಲ್ಲಿ ತಂದಿತು. 2015 ರ ತಿದ್ದುಪಡಿಯ ಇನ್ನೊಂದು ಮಹತ್ವದ ಸುಧಾರಣೆಯೆಂದರೆ, ಗಣಿಗಾರಿಕೆ ಬಾಧಿತ ಪ್ರದೇಶಗಳ ಕಲ್ಯಾಣಕ್ಕಾಗಿ ಗಣಿ ಗುತ್ತಿಗೆದಾರರ ಕೊಡುಗೆಗಳ ಮೂಲಕ ಜಿಲ್ಲಾ ಖನಿಜ ಪ್ರತಿಷ್ಠಾನವನ್ನು (ಡಿಎಂಎಫ್) ಸ್ಥಾಪಿಸಿದ್ದು.
ಈ ಸುಧಾರಣಾ ಕ್ರಮಗಳೊಂದಿಗೆ, ನಾವು ಖನಿಜ ನಿಕ್ಷೇಪಗಳ ಅನಿಯಂತ್ರಿತ ಹಂಚಿಕೆಯನ್ನು ತೆಗೆದುಹಾಕಿದ್ದೇವೆ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ಹಾಗೂ ಸಮರ್ಥನೀಯವಾದ ಹೊಸ ಗಣಿಗಾರಿಕೆ ವ್ಯವಸ್ಥೆಯನ್ನು ಪರಿಚಯಿಸಿದ್ದೇವೆ. ಹೀಗೆ ಭಾರತದ ಗಣಿಗಾರಿಕೆ ವಲಯದಲ್ಲಿ ವಿನೂತನ ಹಾದಿಯ ಮೂಲಕ ಪರಿವರ್ತನೆಯ ಸರಣಿಯನ್ನು ಆರಂಭಿಸಲಾಯಿತು. ಭಾರತದ ಗಣಿಗಾರಿಕೆ ವಲಯದಂತಹ ಬೃಹತ್ ಕ್ಷೇತ್ರಕ್ಕೆ, ಯಾವುದೇ ಸುಧಾರಣೆ ತರುವುದು ಅನೇಕ ಹಂತಗಳು, ಸಮಾಲೋಚನೆಗಳು ಮತ್ತು ಪರಿಗಣನೆಗಳನ್ನು ಒಳಗೊಂಡಿರುವ ಪ್ರಕ್ರಿಯೆ. ಕಳೆದ ಎರಡು ವರ್ಷಗಳಲ್ಲಿ ತಂದ ಸುಧಾರಣೆಗಳು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುವ ಹಾಗೂ ಕೋವಿಡ್ -19 ಸಾಂಕ್ರಾಮಿಕ ರೋಗದ ಪ್ರತಿಕೂಲ ಪರಿಣಾಮಗಳನ್ನು ಎದುರಿಸುವ ಗುರಿಯನ್ನು ಹೊಂದಿವೆ.
ಕಳೆದ 5 ವರ್ಷಗಳಲ್ಲಿನ ನಮ್ಮ ಅನುಭವ ಮತ್ತು ವಿವಿಧ ಪಾಲುದಾರರ ಸಲಹೆ ಹಾಗೂ ಸಮಾಲೋಚನೆಗಳ ಆಧಾರದ ಮೇಲೆ, ನಮ್ಮ ಸರ್ಕಾರವು ಗಣಿಗಾರಿಕೆ ವಲಯದಲ್ಲಿ ಕೆಲವು ಪ್ರಮುಖ ರಚನಾತ್ಮಕ ಸುಧಾರಣೆಗಳನ್ನು ತಂದಿದೆ. ಕಾಯ್ದೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ತರಲಾಗಿರುವ ಬಹುತೇಕ ಬದಲಾವಣೆಗಳು ಗಣಿಗಾರಿಕೆಯಲ್ಲಿ ಸುಲಭ ವ್ಯವಹಾರದತ್ತ ಗಮನಹರಿಸಿವೆ. ಎಂಎಂಡಿಆರ್ ಕಾಯ್ದೆಯ ಸಂಬಂಧಿತ ನಿಬಂಧನೆಗಳಿಗೆ ಮಾಡಿದ ತಿದ್ದುಪಡಿಗಳು ಖನಿಜ ಸುಧಾರಣೆಗಳಲ್ಲಿನ ಈ ವ್ಯತ್ಯಾಸವನ್ನು ಕೊನೆಗೊಳಿಸಿವೆ. ಗುತ್ತಿಗೆದಾರರಿಗೆ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಮುಕ್ತ ಮಾರುಕಟ್ಟೆಯಲ್ಲಿ ಖನಿಜಗಳನ್ನು ಬಳಸಲು ಅಥವಾ ಮಾರಾಟ ಮಾಡಲು ಅವಕಾಶ ನೀಡುವುದು ಗಣಿಗಾರಿಕೆ ಉದ್ಯಮದಲ್ಲಿ ಉತ್ಪಾದನೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎರಡನೆಯದಾಗಿ, ಈ ಸುಧಾರಣೆಗಳ ಮೂಲಕ, ಬಳಸದ, ಅಭಿವೃದ್ಧಿಪಡಿಸದ ಸರ್ಕಾರಿ ಕಂಪನಿಗಳ ಖನಿಜ ನಿಕ್ಷೇಪಗಳನ್ನು ಮುಕ್ತಗೊಳಿಸುವ ಗುರಿ ಹೊಂದಿದ್ದೇವೆ. ಈ ತಿದ್ದುಪಡಿಯೊಂದಿಗೆ, ಅನೇಕ ಖನಿಜ ನಿಕ್ಷೇಪಗಳನ್ನು ರಾಜ್ಯ ಸರ್ಕಾರಗಳು ಹರಾಜು ಹಾಕುತ್ತವೆ. 2021 ರ ತಿದ್ದುಪಡಿಯ ಮೂಲಕ ನಾವು ತಂದ ಇನ್ನೊಂದು ಮಹತ್ವದ ಸುಧಾರಣೆಯೆಂದರೆ, ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 10 (ಎ) (2) (ಬಿ) ಅಡಿಯಲ್ಲಿ ಪೂರ್ವಾರ್ಜಿತ ಆಸ್ತಿ ಸಮಸ್ಯೆಗಳನ್ನು ಕೊನೆಗೊಳಿಸುವುದು. ಈ ಸೆಕ್ಷನ್ ಅಡಿಯಲ್ಲಿ ಬಾಕಿ ಇರುವ ಪ್ರಕರಣಗಳ ಸುಮಾರು 500 ನಿಕ್ಷೇಪಗಳನ್ನು ಹರಾಜು ವ್ಯವಸ್ಥೆಯಡಿ ತರುತ್ತದೆ. ಗಣಿಗಾರಿಕೆಯಲ್ಲಿ ಆತ್ಮನಿರ್ಭರವಾಗಲು ನಮ್ಮ ಆಮದುಗಳನ್ನು ತಗ್ಗಿಸಬೇಕು. ನಮ್ಮ ಗಣಿಗಾರಿಕೆ ಅಭ್ಯಾಸಗಳು ಮತ್ತು ಅನ್ವೇಷಣಾ ಚಟುವಟಿಕೆಗಳಲ್ಲಿ ಗಣನೀಯ ಸುಧಾರಣೆಗಳನ್ನು ತರುವ ಮೂಲಕ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಬೇಕು.
ನಮ್ಮ ಸಂಪದ್ಭರಿತ ಖನಿಜ ಸಂಪತ್ತು ದೇಶದ ಬೆನ್ನೆಲುಬು ಮತ್ತು ನಮ್ಮ ಕೈಗಾರಿಕಾ, ಆರ್ಥಿಕ ಮತ್ತು ವಾಣಿಜ್ಯ ಬೆಳವಣಿಗೆಯ ತಿರುಳಾಗಿದೆ ಎಂದು ನಮ್ಮ ಸರ್ಕಾರವು ಪದೇಪದೆ ಒತ್ತಿ ಹೇಳಿದೆ. ಕಳೆದ ಕೆಲವು ದಶಕಗಳಲ್ಲಿ ಖನಿಜಗಳ ಜಾಗತಿಕ ಬೇಡಿಕೆ ಸ್ಥಿರವಾಗಿ ಹೆಚ್ಚಾಗಿದೆ ಮತ್ತು ಇತ್ತೀಚಿನ ತಂತ್ರಜ್ಞಾನದ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಮತ್ತೂ ಹೆಚ್ಚಾಗುವ ಸಾಧ್ಯತೆಯಿದೆ. ಖನಿಜಗಳ ಪೂರೈಕೆಯನ್ನು ಸುಭದ್ರಗೊಳಿಸುವುದು, ಗ್ರಾಹಕ ಉತ್ಪನ್ನಗಳು, ಸಿವಿಲ್ ಇಂಜಿನಿಯರಿಂಗ್, ರಕ್ಷಣೆ, ಸಾರಿಗೆ ಮತ್ತು ಇಂಧನ ಮೂಲಸೌಕರ್ಯಗಳಿಗೆ ಬೇಡಿಕೆಗಳನ್ನು ಪೂರೈಸುವುದು ದೊಡ್ಡ ಸವಾಲಾಗಿದೆ. ಖನಿಜಗಳಿಗೆ ದಿನೇದಿನೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ದೇಶದ ಖನಿಜ ಉತ್ಪಾದನೆಯನ್ನು ಹೆಚ್ಚಿಸಲು ದೇಶದ ಇದುವರೆಗೂ ಅನ್ವೇಷಿಸದ ಅಥವಾ ಕಡಿಮೆ ಪರಿಶೋಧಿತ ಪ್ರದೇಶಗಳಲ್ಲಿ ತುರ್ತಾಗಿ ಪರಿಶೋಧನೆ ಕೈಗೊಳ್ಳುವ ಅವಶ್ಯಕತೆಯಿದೆ. ಪರಿಶೋಧನೆಯನ್ನು ಉತ್ತೇಜಿಸಲು, ನಮ್ಮ ಸರ್ಕಾರವು 2015 ರಲ್ಲಿ ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ ಅನ್ನು ಸ್ಥಾಪಿಸಿತು. ಈ ಕ್ರಮದ ಮುಂದುವರಿದ ಭಾಗವಾಗಿ ನಾವು ಈಗ ಎನ್ಎಂಇಟಿಯನ್ನು ಸ್ವಾಯತ್ತ ಸಂಸ್ಥೆಯಾಗಿ ಮಾಡಿದ್ದೇವೆ ಮತ್ತು ಮಾನ್ಯತೆ ಪಡೆದ ಖಾಸಗಿ ಏಜೆನ್ಸಿಗಳು ಈ ವರ್ಷ ತಂದಿರುವ ಗಣಿಗಾರಿಕೆ ಸುಧಾರಣೆಗಳ ಮೂಲಕ ಪರಿಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಎನ್ಎಂಇಟಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದರಿಂದ ಭಾರತದಲ್ಲಿ ಖನಿಜ ಪರಿಶೋಧನೆಯಲ್ಲಿ ಗಣನೀಯ ಹೆಚ್ಚಳವಾಗುತ್ತದೆ ಮತ್ತು ಕೆಲಸಗಳನ್ನು ವೇಗಗೊಳಿಸುತ್ತದೆ. ಇದು ನಮ್ಮ ಭೂವೈಜ್ಞಾನಿಕ ಸಾಮರ್ಥ್ಯನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪರಿಶೋಧನೆಯಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುತ್ತದೆ. 2021 ರ ಗಣಿಗಾರಿಕೆ ಸುಧಾರಣೆಗಳ ಮತ್ತೊಂದು ಪ್ರಮುಖ ತಿದ್ದುಪಡಿಯೆಂದರೆ, ಸುಣ್ಣದ ಕಲ್ಲು, ಕಬ್ಬಿಣದ ಅದಿರು, ಬಾಕ್ಸೆ್ತ್ರಟ್ ಮತ್ತು ಕಲ್ಲಿದ್ದಲು ಮತ್ತು ಲಿಗ್ನೆ್ತ್ರಟ್ ಒಳಗೊಂಡಿರುವ ಖನಿಜಗಳ ಹೊಸ ಗುಂಪಿನ ರಚನೆಯಾಗಿದೆ. ಈ ಖನಿಜಗಳ ಗುಂಪಿಗೆ, ಗಣಿಗಾರಿಕೆ ಗುತ್ತಿಗೆಗೆ ಜಿ3 ಮಟ್ಟಕ್ಕೆ ಮತ್ತು ಸಂಯುಕ್ತ ಗುತ್ತಿಗೆಗೆ ಜಿ4 ಮಟ್ಟಕ್ಕೆ ಅಗತ್ಯಗಳನ್ನು ತರುವ ಮೂಲಕ ಪರಿಶೋಧನೆಯ ನಿಯಮಗಳನ್ನು ಮತ್ತಷ್ಟು ತರ್ಕಬದ್ಧಗೊಳಿಸಲಾಗಿದೆ. ಇದು ಹರಾಜು ವ್ಯವಸ್ಥೆಯನ್ನು ಸುಲಭವಾಗಿಸುತ್ತದೆ ಮತ್ತು ಹೆಚ್ಚಿನ ಬ್ಲಾಕ್ಗಳ ಹರಾಜನ್ನು ಸುಗಮಗೊಳಿಸುತ್ತದೆ.
ಈ ಎಲ್ಲ ಸುಧಾರಣೆಗಳು ಎಂಎಂಡಿಆರ್ (ತಿದ್ದುಪಡಿ) ಕಾಯ್ದೆ, 2021 ರ ಕ್ರಾಂತಿಕಾರಿ ಬದಲಾವಣೆಗಳ ಕೇವಲ ಒಂದು ಭಾಗವಾಗಿದ್ದು, ಭಾರತದ ಗಣಿ ಉದ್ಯಮದಲ್ಲಿ ಮತ್ತು ಎಲ್ಲಾ ಖನಿಜ-ಶ್ರೀಮಂತ ರಾಜ್ಯಗಳಲ್ಲಿ ಈಗಾಗಲೇ ಸಕಾರಾತ್ಮಕ ಬೆಳವಣಿಗೆಗಳನ್ನು ನಾವು ನೋಡುತ್ತಿದ್ದೇವೆ. ಸ್ಥಗಿತಗೊಂಡಿರುವ ಗಣಿಗಳನ್ನು ಈಗಾಗಲೇ ಸಂಬಂಧಿತ ರಾಜ್ಯಗಳು ಮರು-ಹಂಚಿಕೆ ಪ್ರಕ್ರಿಯೆಯಲ್ಲಿ ತೊಡಗಿವೆ ಮತ್ತು ಇದುವರೆಗೆ ಉತ್ಪಾದನೆಯನ್ನು ಪ್ರಾರಂಭಿಸದ ಪಿಎಸ್ಯುು ಗಣಿಗಳನ್ನು ರಾಜ್ಯ ಸರ್ಕಾರಗಳು ಹರಾಜು ಹಾಕುತ್ತಿವೆ. ತಿದ್ದುಪಡಿಗಳು ಹೆಚ್ಚಿನ ಸಂಖ್ಯೆಯ ನಿಕ್ಷೇಪಗಳನ್ನು ಹರಾಜಿನಲ್ಲಿ ತರಲು ಅನುಕೂಲ ಮಾಡಿಕೊಟ್ಟವು ಮತ್ತು ಪ್ರಸಕ್ತ ವರ್ಷದಲ್ಲಿ ಗಣಿಗಾರಿಕೆ ಕ್ಷೇತ್ರದ ಅನುಕರಣೀಯ ಕಾರ್ಯಕ್ಷಮತೆಯನ್ನು ನಾವು ನೋಡಿದ್ದೇವೆ. ಕೇಂದ್ರ ಸರ್ಕಾರದ ನಿರಂತರ ಪ್ರಯತ್ನ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದಾಗಿ, 17 ನಿಕ್ಷೇಪಗಳನ್ನು ಹರಾಜು ಮಾಡಲಾಗಿದೆ, 27 ಹೊಸ ಎನ್ಐಟಿಗಳನ್ನು ನೀಡಲಾಗಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ 103 ಎನ್ಐಟಿಗಳನ್ನು ನೀಡಲಾಗುವುದು ಎಂಬುದು ಹೆಮ್ಮೆಯ ವಿಷಯವಾಗಿದೆ.
ಪ್ರಧಾನಿ ಮೋದಿಯವರ ಕ್ರಿಯಾಶೀಲ ನಾಯಕತ್ವದಲ್ಲಿ ನಮ್ಮ ಸರ್ಕಾರ ಆರಂಭದಿಂದಲೂ ಸಹಕಾರ ಒಕ್ಕೂಟ ವ್ಯವಸ್ಥೆ ಮತ್ತು ‘ಸಬ್ ಕಾ-ಸಾಥ್, ಸಬ್ ಕಾ-ವಿಕಾಸ್’ ಎಂಬ ಧ್ಯೇಯವಾಕ್ಯವನ್ನು ಅನುಸರಿಸುತ್ತಿದೆ. ಈ ಸುಧಾರಣೆಗಳು ಕೇಂದ್ರ ಮತ್ತು ಖನಿಜ-ಶ್ರೀಮಂತ ರಾಜ್ಯಗಳ ನಡುವಿನ ಸಹಕಾರ, ಒಕ್ಕೂಟ ವ್ಯವಸ್ಥೆಯ ಸಂಕೇತವಾಗಿದ್ದು, ಗಣಿಗಾರಿಕೆ ಸುಧಾರಣೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿವೆ. ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಈಡೇರಿಸಲು ಮತ್ತು ಭವಿಷ್ಯಕ್ಕಾಗಿ ಖನಿಜಗಳ ಪೂರೈಕೆಯನ್ನು ಭದ್ರಪಡಿಸಿಕೊಳ್ಳಲು, ಭಾರತವು ಸುಸ್ಥಿರವಾಗಿ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ರೀತಿಯಲ್ಲಿ ಪರಿಶೋಧನೆ ಮತ್ತು ಉತ್ಪಾದನೆ ಎರಡನ್ನೂ ಹೆಚ್ಚಿಸಬೇಕಾಗಿದೆ. ಈ ದಿಕ್ಕಿನಲ್ಲಿ ಎಂಎಂಡಿಆರ್ ಕಾಯ್ದೆ, 1957, ಎಂಇಎಂಸಿ ನಿಯಮಗಳು ಮತ್ತು ಖನಿಜ (ಹರಾಜು) ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಗಣಿಗಾರಿಕೆಯಲ್ಲಿ ಸುಧಾರಣೆಗಳು ನಮ್ಮ ಸರ್ಕಾರದ ಪ್ರಯತ್ನಗಳಾಗಿವೆ. ಈ ಸುಧಾರಣೆಗಳೊಂದಿಗೆ ಕಳೆದ ಕೆಲವು ತಿಂಗಳುಗಳಲ್ಲಿ ನಡೆದಿರುವ ಹರಾಜಿನ ಯಶಸ್ವಿ ಅನುಷ್ಠಾನ ಮತ್ತು ಅದರ ಸಕಾರಾತ್ಮಕ ಫಲಿತಾಂಶಗಳು ಪ್ರಧಾನಿ ಮೋದಿಯವರ ಆತ್ಮನಿರ್ಭರ ಗಣಿಗಾರಿಕೆ ಮತ್ತು ಆತ್ಮನಿರ್ಭರ ಭಾರತ ಪಯಣದ ಆರಂಭವಾಗಿವೆ.
(ಲೇಖಕರು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು)