ಅಂಕಣ

ಇವರನ್ನೆಲ್ಲ ಚಿರಕಾಲ ಗೌರವಿಸಬೇಕು...; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್

ಕೃಷಿಕ-ಶಿಕ್ಷಕ ಕುಟುಂಬ ನಮ್ಮದು. ಕೃಷಿ-ಶಿಕ್ಷಣ ಒಟ್ಟಿಗೇ ಇರುವ ಕುಟುಂಬಗಳಿಗೆ ಒಂದು ವಿಸ್ಮಯಕರ ಸೊಗಡು ಇರುತ್ತದೆ. ಪ್ರಾಥಮಿಕ ಶಾಲಾ ಮಾಸ್ತರಾಗಿದ್ದ ಅಪ್ಪ, ಅಮ್ಮ ನನ್ನ ಮೊದಲ ಗುರುಗಳು. ಸ್ಕೂಲು ಆರಂಭವಾಗುವವರೆಗೆ ಹೊಲ-ತೋಟಗಳ ದುಡಿಮೆ. ಸ್ಕೂಲು ಮುಗಿದ ಕೂಡಲೇ ಮತ್ತೆ ಹೊಲ-ತೋಟಗಳತ್ತ ಓಟ. ಶಾಲೆಯಿಂದ ಕಲಿತದ್ದೆಷ್ಟು; ಹೊಲ-ತೋಟಗಳಿಂದ ಕಲಿತದ್ದೆಷ್ಟು ಅಂತ ಈಗ ಯೋಚಿಸಿದರೆ ಕೃಷಿಯೇ ಮೊದಲ ಸ್ಥಾನಕ್ಕೆ ಏರುತ್ತದೆ. ಕೃಷಿ ಮತ್ತು ಕೌಟುಂಬಿಕ ಕಾರಣಕ್ಕೆ ನಾನು ಹುಟ್ಟಿದ ಬಳಿಕ ಅಮ್ಮ ಶಿಕ್ಷಕಿಯ ಕೆಲಸ ಬಿಟ್ಟುಬಿಟ್ಟಳಂತೆ. ಆದರೆ, ವರ್ಣಮಾಲೆ ಕಲಿಸಿದ ಮೊದಲ ಗುರು ಅಮ್ಮನೇ. ನನ್ನ ಕೈ ಬರಹ ಈಗಲೂ ತಂದೆಯವರ ಕೈ ಬರಹವನ್ನೇ ಹೋಲುತ್ತದೆ. ಅವರಿತ್ತ ಜಾಮೆಟ್ರಿ ಬಾಕ್ಸು, ಗಟ್ಟಿಯಾಗಿ ಕಟ್ಟು ಹಾಕಿ ಪುಸ್ತಕ ಮತ್ತು ನೋಟ್​ಬುಕ್​ಗಳನ್ನು ಒದಗಿಸುತ್ತಿದ್ದ ಬಗೆ, ಅಮ್ಮ ಹೇಳುತ್ತಿದ್ದ ದೇವರನಾಮಗಳು, ಅಪ್ಪ ಹೇಳುತ್ತಿದ್ದ ಗದುಗಿನ ಭಾರತ- ಈ ನೆನಪಿನ ಆಕರಗಳು ಸದಾ ನನ್ನೊಳಗೆ ಜೀವಂತವಾಗಿವೆ. ಜನ್ಮ ಕೊಟ್ಟಿದ್ದರ ಜತೆಗೆ ಅರಿವು-ಅಕ್ಷರ ನೀಡಿ ಗುರುಗಳೆನಿಸಿದವರು ನನ್ನ ಪ್ರೀತಿಯ ಅಪ್ಪ-ಅಮ್ಮ. ಅವರು ನಿರ್ಗಮಿಸಿದಾಗ ಹೆತ್ತವರ ನೆನಪಿಗಾಗಿ ಸೂಕ್ತವಾದದ್ದೇನನ್ನಾದರೂ ಮಾಡಬೇಕೆಂದು ಚಡಪಡಿಸುವಾಗ ಹೊಳೆದದ್ದು ಗ್ರಂಥಾಲಯ. ನಮ್ಮೂರ ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ಅಪ್ಪ-ಅಮ್ಮನ ಹೆಸರಿನಲ್ಲಿ ಪುಟ್ಟ ಗ್ರಂಥಾಲಯ ನಿರ್ವಿುಸಿದೆ. ಅಲ್ಲಿ ಉಪಯುಕ್ತವಾದ ಕೃತಿಗಳಿವೆ. ಹಲವರು ಓದುತ್ತಿದ್ದಾರೆ; ಬರೆಯುತ್ತಿದ್ದಾರೆ. ಇದನ್ನು ಆತ್ಮಪ್ರಶಂಸೆಗಾಗಿ ಹೇಳುತ್ತಿಲ್ಲ. ಹಿರಿಯರನ್ನು, ಅರಿವನ್ನು ನೆನೆಯಲು ಇದೊಂದು ಸೂಕ್ತ ಕ್ರಮ ಎಂದು ಮಾತ್ರ ಸೂಚಿಸುತ್ತಿದ್ದೇನೆ. ಈಗ ಯಾರು ಓದುತ್ತಾರೆ? ಎಂಬ ಸಿನಿಕ ಪ್ರಶ್ನೆಗಳ ನಡುವೆಯೂ ಪುಸ್ತಕಗಳಿಗೆ ಅಮರತ್ವವಿದೆ. ಉತ್ತಮ ಪುಸ್ತಕ ಮತ್ತು ಗ್ರಂಥಾಲಯಗಳು ಗುಡಿ, ಚರ್ಚು, ಮಸೀದಿಗಳಿಗಿಂತ ಸಮಾಜಕ್ಕೆ ಅತ್ಯಗತ್ಯವಾದ ಪ್ರಜಾಪ್ರಭುತ್ವ ಎಂಬ ಹೊಸ ಧರ್ಮದ ದೀವಿಗೆ ಹಿಡಿದು ಸರಿದಾರಿಗಳನ್ನು ಸೂಚಿಸುತ್ತವೆ.

ಜ್ಞಾತಾಜ್ಞಾತ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಅನುಭವಗಳು ಮನುಷ್ಯ ಬದುಕಿನಲ್ಲಿ ಗುರುವಿನ ಪ್ರತೀಕವಾಗುತ್ತವೆೆ. ಅರಿವಿನ ಕಿಂಡಿಗಳಾಗುತ್ತವೆ. ಕೆಲವು ಅತಿರೇಕದ ವಿಚಿತ್ರ ಉದಾಹರಣೆಗಳನ್ನು ಹೊರತುಪಡಿಸಿ ಲೋಕಾದ್ಯಂತ ಮನುಕುಲಕ್ಕೆ ಅಪ್ಪ-ಅಮ್ಮಂದಿರು ಅಥವಾ ಇಬ್ಬರಲ್ಲೊಬ್ಬರು ನಿಜವಾದ ಪ್ರಥಮಾದ್ಯತೆಯ ಗುರುಗಳಾಗಿರುತ್ತಾರೆ. ನಂತರ ಸಿಕ್ಕ ಆಕರಗಳಿಗೆಲ್ಲಾ ಎರಡನೆಯ ಸ್ಥಾನ.

ಬ್ರಿಟಿಷ್ ಆಡಳಿತದಲ್ಲಿ ಆರಂಭವಾದ; 2025ಕ್ಕೆ ಶತಮಾನ ಪೂರೈಸಲಿರುವ ನಮ್ಮೂರ ಸರ್ಕಾರಿ ಶಾಲೆ ನನ್ನ ಬದುಕಿನ ಭಾಗ. ಸದ್ಯಕ್ಕೆ ನನ್ನ ಪ್ರಯೋಗಾಲಯವೂ ಇದೇ. ನಾನು ಕಥೆಗಾರನಾಗಿ ರೂಪುಗೊಳ್ಳಲು ಪುರಾಣ ಕಥೆಗಳನ್ನು ಹೇಳುತ್ತಿದ್ದ ಅಪ್ಪ, ಪ್ರಾಣಿ ಕಥೆಗಳನ್ನು ಹೇಳುತ್ತಿದ್ದ ಮಾವಿನಕೆೆರೆಯ ಟೋಪಿ ಮೇಷ್ಟ್ರು ನಂಜುಂಡಯ್ಯ ಕಾರಣ. ಪ್ರೌಢಶಾಲೆಯಲ್ಲಿ ಕಗ್ಗಂಟಾಗಿದ್ದ ಗಣಿತವನ್ನು ಮೆಲುದನಿಯಲ್ಲಿ ಅರ್ಥವಾಗುವಂತೆ ಹೇಳಿಕೊಡುತ್ತಿದ್ದವರು ಎಲೆಚಾಕನಹಳ್ಳಿ ಸತ್ಯನಾರಾಯಣ್ ಅವರು. ನನ್ನ ಮೊದಲ ಕತೆೆ ಅಚ್ಚಾಗಿದ್ದು ಪ್ರೌಢಶಾಲೆಯ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ. ಆ ಗುರು ಪರಂಪರೆಗೆ ಕೆಲವು ಪುಸ್ತಕಗಳು ಮತ್ತು ಪತ್ರಿಕೆಗಳು ಸೇರಿಕೊಳ್ಳತೊಡಗಿದವು. ಮೊಟ್ಟಮೊದಲು ನನಗೆ ಹಾಮೋನಿಯಂ ಕಲಿಸಿ ‘ಲಂಬೋದರ ಲಕುಮೀಕರ ...’ ಹೇಳಿಕೊಟ್ಟವರು ನಮ್ಮ ಗ್ರಾಮದ ಶಿಕ್ಷಕರೇ ಆಗಿದ್ದ ತಿಮ್ಮಶೆಟ್ಟಿಗೌಡರು. ಈಗ ಪಾಶ್ಚಾತ್ಯ ಸಂಗೀತ ಕಲಿಸುತ್ತಿರುವವರು ಖೈತಾನ್ ಡಯಾಸ್(ಕಿಟ್ಟು). ನಾನು ಕೃಷ್ಣನ ಪಾರ್ಟು ಹಾಕಿ ರಂಗಗೀತೆ ಗಳನ್ನು ಕಲಿತಿದ್ದು ಅಳೀಸಂದ್ರದ ಜಯರಾಮಣ್ಣ ಅವರಿಂದ.

ಪಿಯುಸಿ ಹಂತದಲ್ಲಿ ಪಿಕ್​ವಿಕ್ ಪೇಪರ್ಸ್ ಎಂಬ ಉಪಪಠ್ಯ ಬೋಧಿಸಲು ಬರುತ್ತಿದ್ದ ಮಂಡ್ಯದ ಪಿ.ಇ.ಎಸ್ ಕಾಲೇಜಿನ ಲಕ್ಷ್ಮೀಜನಾರ್ದನ ಅಯ್ಯಂಗಾರ್ ಅವರನ್ನೆಂದೂ ಮರೆಯಲಾರೆ. ಶೇಕ್ಸ್​ಪಿಯರನನ್ನು ಮೊದಲಿಗೆ ಗ್ರಹಿಸಿದ್ದೇ ಅವರಿಂದ. ಆದರೇನು? ಗಣಿತ, ವಿಜ್ಞಾನಗಳಲ್ಲಿ ಮಕಾಡೆ ಬಿದ್ದು ದುಡಿಮೆಯ ಪರ್ವಕ್ಕೆ ಒಡ್ಡಿಕೊಂಡ ಮೇಲೆ ಲೋಕಾನುಭವವೇ ನನ್ನ ಗುರು. ಮುದ್ದಾದ ಕೈ ಬರಹ ಕಲಿಸಿದ್ದ ಅಪ್ಪ ಅಮ್ಮನಿಗೆ ಕೃತಜ್ಞತೆ. ಇದು ಮಳಿಗೆಗಳ ಫಲಕ ಬರೆಯಲು, ಚಿತ್ರಮಂದಿರಗಳ ಜಾಹೀರಾತು ಬರೆಯಲು, ಮೈಲಿಗಲ್ಲುಗಳನ್ನು ಬರೆಯಲು ನೆರವಾಯಿತು. ಇಲ್ಲಿನ ಗುರುಗಳೆಂದರೆ ರಣರಣ ಬಿಸಿಲು, ಬೆವರು, ಕಡಿಮೆ ಕೂಲಿ, ಚಿಕ್ಕಪುಟ್ಟ ಅವಮಾನಗಳು. ಈ ಅವಮಾನಗಳಿಂದ ಅತ್ಮಶೋಧನೆ. ಮತ್ತೆ ಓದಲೇಬೇಕೆಂಬ ಹಠ. ತರಗತಿ ಕೋಣೆಗಳಿಂದ ದೊರಕುವ ಅರಿವಿಗಿಂತ ಬಟಾಬಯಲಿನಲ್ಲಿ ದೊರಕುವ ಅರಿವು ಮಹಾಗುರು. ಸುಮಾರು ಐದು ವರ್ಷ ದಿನಗೂಲಿ ನೌಕರನಾಗಿ ದುಡಿಯುತ್ತಲೇ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮುಗಿಸಿದ ನನಗೆ, ತರಗತಿ ಕೋಣೆಗಳ ಗುರುಗಳಿಗಿಂತ ಮೈಸೂರು ಡೈರಿಯ ಹಾಲಿನ ಕ್ಯಾನುಗಳ ಸದ್ದು, ಆಸಿಡ್ ವಾಸನೆಯ ಪ್ರಯೋಗಾಲಯ, ಟೀ-ಬನ್ನುಗಳ ರಾತ್ರಿ ಪಾಳಿ, ತರಾವರಿ ಸಹೋದ್ಯೋಗಿಗಳು, ತೂಕಡಿಕೆಯ ಹಗಲುಗಳು... ಇವೇ ಮಹಾಗುರುಗಳೆನಿಸಿದವು. ಮಹಾರಾಜಾ ಸಂಜೆ ಕಾಲೇಜಿನಲ್ಲಿ ಪದವಿ ಕಲಿಸಿದ, ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಕಲಿಸಿದ ಸರ್ವಸುಖೀ ಅಧ್ಯಾಪಕ ಸಮೂಹದೆದುರು ನನ್ನಂಥವರು ಅಗೋಚರವಾಗಿದ್ದುದು ಸಹಜವೇ. ಆದರೆ, ನನ್ನನ್ನು ನಾನು ಗುರುತಿಸಿಕೊಳ್ಳಲು ಕಥೆಗಳ ಮೊರೆ ಹೊಕ್ಕೆ. ಈ ಕತೆಗಳಿಗೆ ಕ್ಯಾಂಪಸ್ಸು ಕಲಿಸಿಕೊಟ್ಟ ಅಕ್ಷರಗಳಿಗಿಂತ ದಿನಗೂಲಿ ಕಲಿಸಿಕೊಟ್ಟ ಕಠೋರ ಜೀವನಾನುಭವಗಳೇ ದ್ರವ್ಯವಾಗಿದ್ದವು.

ತರತಮಕ್ಕಾಗಿ ಕೆಟ್ಟದ್ದು ಇರಬೇಕು. ಹುಡುಗರ ಜೇಬಿನಿಂದ ಕಾಸು ಎತ್ತಿ ಸಿಗರೇಟು ತರಿಸಿಕೊಳ್ಳುತ್ತಿದ್ದ ಮೇಷ್ಟ್ರು, ಅನಗತ್ಯ ಪೋಲಿ ಜೋಕು ಹೇಳಿ ವಿದ್ಯಾರ್ಥಿನಿಯರನ್ನು ಮುಜುಗರಕ್ಕೊಳಪಡಿಸುತ್ತಿದ್ದ ಮೇಷ್ಟ್ರು, ತಮ್ಮ ಮಕ್ಕಳಿಗೆ ಪಕ್ಷಪಾತ ತೋರುತ್ತಿದ್ದ ಮೇಷ್ಟ್ರು, ಧರಿಸುವ ಉಡುಪುಗಳಲ್ಲಿ ಸ್ವಚ್ಛತೆ ಇಲ್ಲದೆ ಕಾಮಿಕ್ ಆಗಿ ಬರುತ್ತಿದ್ದ ಮೇಷ್ಟ್ರು, ವರ್ಷವಿಡೀ ಪಾಠ ಮಾಡದೆ ತಮ್ಮ ಸಿದ್ಧಾಂತಗಳನ್ನು ಹೇರಿಬಿಡುತ್ತಿದ್ದ ಮೇಷ್ಟ್ರು, ತಲೆತಗ್ಗಿಸಿ ಪಾಠ ಮಾಡುತ್ತಿದ್ದ ಅನ್ಯಮನಸ್ಕ ಮೇಷ್ಟ್ರು... ನನ್ನ ಗುರುಪರಂಪರೆಯಲ್ಲಿ ಇವರೆಲ್ಲ ಇದ್ದಾರೆ. ಇವರಿಗೆಲ್ಲ ನಾನು ಋಣಿ. ಏಕೆಂದರೆ, ನಾನು ಎಂದೂ ಇವರಂತಾಗಬಾರದೆಂಬ ತಪ್ಪು ಮಾದರಿಯೊಂದನ್ನು ತೋರಿಸಿಕೊಟ್ಟವರೇ ಇವರು. ಒಂದರ್ಥದಲ್ಲಿ ನನ್ನಂತಾಗದಿರು ಎಂದು ಪರೋಕ್ಷ ಹೇಳಿಕೊಡುವ ಇವರೂ ದೈವಗಳೇ.

ನಾನು ಗ್ರಹಿಸಿದ ಮತ್ತೊಬ್ಬ ಮಹಾಗುರು ಅಲೆಮಾರಿತನ. ಪ್ರವಾಸ ಸಾಹಿತ್ಯ ಓದುವ ಅನುಭವಕ್ಕಿಂತ, ಪ್ರವಾಸಿಯ ಪ್ರತ್ಯಕ್ಷದರ್ಶಿ ಅನುಭವ ಶ್ರೇಷ್ಠವಾದದ್ದು. ನಾನು ಗಳಿಸಿದ ಬಹುಪಾಲನ್ನು ಪ್ರವಾಸಕ್ಕೆ ವ್ಯಯಿಸಿದ್ದೇನೆ. ಅದರಿಂದ ಹೆಚ್ಚು ಬೌದ್ಧಿಕ ಲಾಭವನ್ನೂ ಪಡೆದಿದ್ದೇನೆ. ಅಂತೆಯೇ ಭೂತಾನಿನ ಗೈಡು, ದಕ್ಷಿಣ ಆಫ್ರಿಕಾ ಮತ್ತು ಮಂಗೋಲಿಯಾದ ಕ್ಯಾಬ್ ಡ್ರೈವರ್​ಗಳು, ಫ್ರಾನ್ಸ್​ನ ರೈತ, ಜಪಾನಿನ ಉದ್ಯಮಿ, ಅಮೆರಿಕಾದ ಆಮಿಷ್ ಕುಟುಂಬ ಇವರೆಲ್ಲರೂ ನನ್ನ ಗುರುಗಳೇ.

ಗೆಳೆಯರನ್ನು ಸಲುಗೆಯಿಂದ ‘ಏನ್ ಗುರೂ..?’ ಎನ್ನುತ್ತೇವೆ. ಗುರು, ಅಣ್ಣಾ ಎಂದು ಸಂಬೋಧಿಸುವ ಸರೀಕರಲ್ಲಿ ಕೂಡಾ ಗುರುತ್ವ ಇರುತ್ತದೆ. ನನಗೆ ಕೆಲವೇ ಕೆಲವು ಮಂದಿ ಸರಿದಾರಿ ತೋರುವ ಗೆಳೆಯರಿದ್ದಾರೆ. ಅವರೆಲ್ಲಾ ಗುರು ಸಮಾನರೇ. ಮನುಕುಲ ಚಿರಕಾಲ ಗೌರವಿಸ ಬೇಕಾದದ್ದು; ಮೂರ್ತಾಮೂರ್ತ ಸ್ವರೂಪದಲ್ಲಿರುವ ಈ ಅರಿವಿನ, ಗುರುವಿನ ಅನಂತಾನಂತ ಕಾಣ್ಕೆಯನ್ನು.

(ಲೇಖಕರು ಖ್ಯಾತ ಸಾಹಿತಿ ಮತ್ತು ನಿರ್ದೇಶಕರು)