1950ರಲ್ಲಿ ಅಂದಿನ ನೇಪಾಳದ ಅರಸ ತ್ರಿಭುವನ್ ತನ್ನ ದೇಶವನ್ನು ಭಾರತದೊಂದಿಗೆ ವಿಲೀನಗೊಳಿಸಿಕೊಳ್ಳುವಂತೆ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರನ್ನು ಕೇಳಿಕೊಂಡಿದ್ದರು. ಅದನ್ನು ಒಪ್ಪದ ನೆಹರೂ, ‘ನೇಪಾಳ ಒಂದು ಸ್ವತಂತ್ರ ರಾಷ್ಟ್ರವಾಗಿಯೇ ಇರಲಿ’ ಎಂದರು. ಇಂದು ಅದೇ ‘ಸ್ವತಂತ್ರ’ ನೇಪಾಳ ಭಾರತದ ಗಡಿಯೊಳಗಿರುವ 401 ಚದರ ಕಿಲೋಮೀಟರ್ ಪ್ರದೇಶವನ್ನು ತನ್ನದೆಂದು ತೋರಿಸುವ ಭೂಪಟವನ್ನು ಪ್ರಕಟಿಸಿದೆ. ಈ ಏಳು ದಶಕಗಳಲ್ಲಿ ಮಹಾಕಾಲಿ ನದಿಯಲ್ಲಿ ಅದೆಷ್ಟು ನೀರು ಹರಿದಿದೆ!
ಗಡಿಯ ಕುರಿತಾಗಿ ನೇಪಾಳಿ ಕಮ್ಯೂನಿಸ್ಟ್ ಒಕ್ಕೂಟ ಸರ್ಕಾರ ತಳೆದಿರುವ ಈ ಅಸಾಧಾರಣ ನಿಲುವನ್ನು ವಿಶ್ಲೇಷಿಸುವುದಕ್ಕೆ ಪೂರ್ವಭಾವಿಯಾಗಿ ಉಭಯ ದೇಶಗಳ ಸಂಬಂಧಗಳ ಐತಿಹಾಸಿಕ ಸ್ವರೂಪದ ಪರಿಚಯ ಅಗತ್ಯ.
ಧರ್ಮ, ಭಾಷೆ, ಕೌಟುಂಬಿಕ ಹಾಗೂ ಸಾಮಾಜಿಕ ರೀತಿರಿವಾಜುಗಳು, ಊಟತಿಂಡಿ, ಕಲೆ ಮತ್ತು ಸಂಸ್ಕೃತಿಗಳಲ್ಲಿ ನೇಪಾಳ ಉತ್ತರ ಭಾರತದ ರಾಜ್ಯವೊಂದರಂತಿದೆ. ಹೀಗಾಗಿಯೇ ಸಾಮಾನ್ಯ ನೇಪಾಳಿಗಳು ಭಾರತವನ್ನು ತಮ್ಮ ನಾಡಿನ ವಿಸ್ತರಣದಂತೆ ಕಾಣುತ್ತಾರೆ. ಅವರಿಗೆ ಭಾರತ ವಿದೇಶವಲ್ಲ. ಅವರು ತಮ್ಮ ನೇಪಾಳವನ್ನು ‘ಸ್ವದೇಶ್’ ಎಂದೂ, ಭಾರತವನ್ನು ‘ದೇಶ್’ ಎಂದೂ, ಉಳಿದೆಲ್ಲ ದೇಶಗಳನ್ನು ‘ವಿದೇಶ್’ ಎಂದು ಕರೆಯುತ್ತಾರೆ! ನೇಪಾಳ ಭಾರತದ ಹೊರಗೆ ಉಳಿದದ್ದು ಒಂದು ಐತಿಹಾಸಿಕ ಆಕಸ್ಮಿಕದಿಂದ. ಹಿಮಾಲಯದ ದಕ್ಷಿಣಕ್ಕಿದ್ದ ಎಲ್ಲ ದೇಶೀಯ ಸಂಸ್ಥಾನಗಳನ್ನು ತಮ್ಮ "British Indian Empire' ನಲ್ಲಿ ಸೇರಿಸಿಕೊಂಡಂತೆ ನೇಪಾಳವನ್ನೂ ಬ್ರಿಟಿಷರು ಭಾರತದಲ್ಲಿ ಸೇರಿಸಿಬಿಡಬಹುದಾಗಿತ್ತು. ಆದರೆ ಭಾರತ ಮತ್ತು ನೆರೆಯ ಚೀನೀ ಸಾಮ್ರಾಜ್ಯದ ಪ್ರಭಾವದಡಿಯಲ್ಲಿದ್ದ ಟಿಬೆಟ್ಗಳ ನಡುವೆ ಪರಸ್ಪರ ಗಡಿಗಳಿರುವುದರ ಬದಲು ಹಲವು ಪುಟ್ಟ ‘ಮೆತ್ತೆ ದೇಶಗಳು’ ಅಂದರೆ ‘Buffer States' ಇದ್ದರೆ ಎರಡೂ ಸಾಮ್ರಾಜ್ಯಗಳ ನಡುವಿನ ಸೌಹಾರ್ದಕ್ಕೆ ಅನುಕೂಲ ಎಂದು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಗಾರರು ಲೆಕ್ಕ ಹಾಕಿದ ಪರಿಣಾಮವಾಗಿ ನೇಪಾಳದ ಜತೆ ಸಿಕ್ಕಿಂ ಮತ್ತು ಭೂತಾನ್ಗಳು ಸಹ ಸ್ವತಂತ್ರವಾಗಿ ಉಳಿಯುವಂತಾಯಿತು. ಆದರೆ ಅವುಗಳ ವಿದೇಶನೀತಿ ಮತ್ತು ರಕ್ಷಣೆಯನ್ನು ಬ್ರಿಟಿಷ್ ಭಾರತ ತನ್ನ ಕೈಯಲ್ಲಿಟ್ಟುಕೊಂಡಿತು. ಇದರ ಹಿಂದಿನ ಉದ್ದೇಶ ಆ ದೇಶಗಳಲ್ಲಿ ಮಾಂಚು ಚೀನಾ ಅಥವಾ ಆ ದಿನಗಳಲ್ಲಿ ಮಧಯ್ ಏಷ್ಯಾದತ್ತ ವೇಗವಾಗಿ ಮುಂದೊತ್ತಿ ಬರುತ್ತಿದ್ದ ಝಾರಿಸ್ಟ್ ರಷ್ಯಾ ಪ್ರಭಾವ ವೃದ್ಧಿಸಿಕೊಂಡು ಅವುಗಳನ್ನು ಈ ವಲಯದಲ್ಲಿ ಬ್ರಿಟಿಷ್ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಬಳಸಿಕೊಳ್ಳುವುದನ್ನು ತಡೆಯುವುದಾಗಿತ್ತು. ಇದೇ ನೀತಿಯನ್ನು ಮುಂದುವರಿಸುವ ಒತ್ತಡಕ್ಕೆ ಸ್ವತಂತ್ರ ಭಾರತವೂ ಸಿಲುಕಿಕೊಂಡಿತು. ಭಾರತದ ವಿರೋಧಿಗಳ ಜತೆ ಈ ದೇಶಗಳ ಹೊಕ್ಕುಬಳಕೆ ಅಧಿಕವಾದರೆ ಅದು ಭಾರತದ ಹಿತಾಸಕ್ತಿಗೆ ಮಾರಕವಾಗುವ ಅಪಾಯವನ್ನು ನವದೆಹಲಿ ಮನಗಂಡಿತ್ತು. ಈ ಹಿನ್ನೆಲೆಯಲ್ಲಿ, 1950ರಲ್ಲಿ ನೇಪಾಳದ ಜತೆ ಭಾರತ ಮಾಡಿಕೊಂಡ ಒಪ್ಪಂದದಲ್ಲಿ ಎರಡೂ ದೇಶಗಳು ಪರಸ್ಪರ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತಹ ವಿದೇಶನೀತಿಗಳನ್ನು ಅನುಸರಿಸುವುದರ ಬಗ್ಗೆ ಸ್ಪಷ್ಟ ನೀತಿಸಂಹಿತೆಗಳನ್ನು ಅಳವಡಿಸಲಾಯಿತು.
1940-50ರ ದಶಕಗಳ ಸಂಧಿಕಾಲದಲ್ಲಿ ನೇಪಾಳದಲ್ಲಿ ಹಲವಾರು ಆಂತರಿಕ ಬೆಳವಣಿಗೆಗಳಾದವು. ಒಂದು ಶತಮಾನದಿಂದಲೂ ಅರಸನನ್ನು ಮೂಲೆಗೊತ್ತರಿಸಿ ಅಧಿಕಾರವನ್ನು ವಂಶಪಾರಂಪರ್ಯವಾಗಿ ತಮ್ಮ ಕೈಯಲ್ಲಿಟ್ಟುಕೊಂಡಿದ್ದ ರಾಣಾಗಳ ಜತೆ ಅರಸ ತ್ರಿಭುವನ್ ಸೆಣಸಾಟಕ್ಕಿಳಿದರು. ಇದು 1950ರಲ್ಲಿ ತಾರಕಕ್ಕೇರಿ ರಾಣಾಗಳು ತ್ರಿಭುವನ್ರ ಗದ್ದುಗೆಯನ್ನೇ ಅಲುಗಾಡಿಸಿಬಿಟ್ಟರು. ಪರಿಣಾಮವಾಗಿ ಕಾಠ್ಮಂಡುವಿನಲ್ಲಿದ್ದ ಭಾರತೀಯ ದೂತಾವಾಸದಲ್ಲಿ ಆಶ್ರಯ ಪಡೆದ ಅರಸ ತ್ರಿಭುವನ್ ಸಿಂಹಾಸನವನ್ನು ಮತ್ತೆ ಗಳಿಸಲು ಭಾರತದ ಸಹಾಯ ಯಾಚಿಸಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ನೆಹರೂ ಸರ್ಕಾರ ತ್ರಿಭುವನ್ರನ್ನು ದೆಹಲಿಗೆ ಕರೆತಂದದ್ದಲ್ಲದೆ ಅವರು ಮತ್ತು ರಾಣಾಗಳ ನಡುವೆ ಮಾತುಕತೆಯನ್ನು ಏರ್ಪಡಿಸಿತು. ಆ ಪ್ರಕಾರ ತ್ರಿಭುವನ್ಗೆ ಸಿಂಹಾಸನ ದಕ್ಕಿದ್ದಲ್ಲದೆ ರಾಣಾಗಳ ಪ್ರಭಾವವೂ ಅಂತ್ಯಗೊಂಡಿತು. ಈ ಸಂದರ್ಭದಲ್ಲೇ ಅರಸ ತ್ರಿಭುವನ್ ನೇಪಾಳವನ್ನು ಭಾರತದ ಜತೆ ವಿಲೀನಗೊಳಿಸಿಕೊಳ್ಳುವಂತೆ ನೆಹರೂರನ್ನು ಕೇಳಿಕೊಂಡದ್ದು.
1955ರಲ್ಲಿ ತ್ರಿಭುವನ್ ನಿಧನ ಹೊಂದುವುದರ ಜತೆಯೇ ಭಾರತದ ಬಗೆಗಿನ ನೇಪಾಳಿ ಸದ್ಭಾವನೆಯೂ ಸತ್ತುಹೋಯಿತು. ಅವರ ಮಗ ಮಹೇಂದ್ರ ಮತ್ತು ಮೊಮ್ಮಗ ಬೀರೇಂದ್ರ ನೇಪಾಳವನ್ನು ಭಾರತದಿಂದ ಮತ್ತಷ್ಟು ದೂರ ಒಯ್ದು ಚೀನೀ ಸಾಂಗತ್ಯವನ್ನು ಗಾಢವಾಗಿಸಿಕೊಂಡದ್ದೀಗ ಇತಿಹಾಸ. ಇಂದು ನೇಪಾಳದಲ್ಲಿ ರಾಜಸತ್ತೆ ಇಲ್ಲ. ಆದರೆ ಚೀನೀ ಪರ ಕಮ್ಯೂನಿಸ್ಟ್ ಮತ್ತು ಮಾವೋವಾದಿಗಳ ಒಕ್ಕೂಟ ಜನತಾಂತ್ರಿಕವಾಗಿಯೇ ಅಧಿಕಾರಕ್ಕೇರಿದೆ. ಅದರ ನೀತಿಗಳು ಸಹಜವಾಗಿಯೇ ಭಾರತ-ವಿರೋಧಿ, ಚೀನೀ-ಪರ ಆಗಿವೆ. ಭಾರತದೊಂದಿಗಿನ ಗಡಿಸಮಸ್ಯೆಯ ಬಗೆಗಿನ ಅದರ ನಿಲುವನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು.
ಈಗ ಭಾರತ-ನೇಪಾಳ ಗಡಿಯ ಇತಿಹಾಸದತ್ತ ಹೊರಳೋಣ. 1757ರ ಪ್ಲಾಸಿ ಕದನಾನಂತರ ಉತ್ತರ ಭಾರತದಲ್ಲಿ ವಿಸ್ತರಿಸತೊಡಗಿದ ಬ್ರಿಟಿಷ್ ಸಾಮ್ರಾಜ್ಯ ಹತ್ತೊಂಬತ್ತನೇ ಶತಮಾನದ ಆರಂಭದ ಹೊತ್ತಿಗೆ ನೇಪಾಳವನ್ನು ರ್ಸ³ಸಿತು. ಆಗ ಎಳೆಯ ರಾಜನ ಪರವಾಗಿ ಆಡಳಿತ ನಡೆಸುತ್ತ ಅಧಿಕಾರ ಸೂತ್ರಗಳನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿದ್ದ ಮುಖ್ತಿಯಾರ್ ಭೀಮ್ೇನ್ ಥಾಪಾ ಪೂರ್ವ ಪಶ್ಚಿಮಗಳಲ್ಲಿ ನೇಪಾಳದ ಗಡಿಗಳನ್ನು ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಉಗ್ರವಾಗಿ ಕಾರ್ಯರೂಪಕ್ಕಿಳಿಸಿದ್ದ. ಆ ಪ್ರಕಾರ ಅಂದು ಪೂರ್ವದಲ್ಲಿ ಉತ್ತರ ಬಂಗಾಳ ಹಾಗೂ ಸಿಕ್ಕಿಂ, ಪಶ್ಚಿಮದಲ್ಲಿ ಇಂದಿನ ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳ ಮೇಲೆ ನೇಪಾಳದ ಅಧಿಕಾರ ವ್ಯಾಪಿಸಿತ್ತು ಮತ್ತದು ದಕ್ಷಿಣದತ್ತಲೂ ಹರಡುವ ಸೂಚನೆಗಳಿದ್ದವು. ಇಂಥ ಸನ್ನಿವೇಶದಲ್ಲಿ ಬ್ರಿಟಿಷ್ ಭಾರತ ಮತ್ತು ನೇಪಾಳಗಳ ನಡುವೆ ಘರ್ಷಣೆ ಅನಿವಾರ್ಯವಾಯಿತು. ಎರಡೂ ಸೇನೆಗಳ ನಡುವೆ 1814-15ರಲ್ಲಿ ನಡೆದ ಯುದ್ಧದಲ್ಲಿ ನೇಪಾಳಕ್ಕೆ ಹಿನ್ನಡೆಯಾಗಿ ಅದರ ಭೌಗೋಳಿಕ ಮಿತಿಗಳು ಈಗಿರುವ ಮಟ್ಟಕ್ಕೆ ಸೀಮಿತಗೊಂಡವು. 1815ರ ಅಂತ್ಯದಲ್ಲಿ ರಣಾಂಗಣದಲ್ಲಿ ಸೇನಾಧಿಕಾರಿಗಳ ನಡುವೆ ಸಹಿಯಾಗಿ ಮರುವರ್ಷದ ಆರಂಭದಲ್ಲಿ ಸರ್ಕಾರಗಳಿಂದ ಅನುಮೋದನೆಗೊಂಡ ‘ಸಗೌಲಿ ಒಪ್ಪಂದ’ದ ಪ್ರಕಾರ ಪೂರ್ವದಲ್ಲಿ ಸಿಕ್ಕಿಂ ಮತ್ತು ಮತ್ತು ಉತ್ತರ ಬಂಗಾಳಗಳನ್ನು ಕಳೆದುಕೊಂಡ ನೇಪಾಳ ಪಶ್ಚಿಮದಲ್ಲಿ ಇಂದಿನ ಉತ್ತರಾಖಂಡ ಮತ್ತು ಕಾಂಗ್ರಾಗಳನ್ನೂ ಕಳೆದುಕೊಂಡು ಅದರ ಗಡಿ ಮಹಾಕಾಲಿ ನದಿಯವರೆಗಷ್ಟೇ ಸೀಮಿತಗೊಂಡಿತು.
ಇಂದು ನೇಪಾಳ ತನ್ನದೆಂದು ಹೇಳಿಕೊಳ್ಳುತ್ತಿರುವ ಲಿಪುಲೆಖ್ ಕಣಿವೆ, ಕಾಲಾಪಾನಿ ಮತ್ತು ಲಿಂಪ್ಲಿಅಧೂರಾ ಪ್ರದೇಶಗಳು ಮಹಾಕಾಲಿ ನದಿಯ ಪೂರ್ವಕ್ಕಿರುವ ಕಾರಣ ಅವುಗಳ ಮೇಲೆ ನೇಪಾಳದ ಸಾರ್ವಭೌಮತ್ವ ಸಗೌಲಿ ಒಪ್ಪಂದದ ಪ್ರಕಾರ ಸಾಧುವಾಗುವಂತಿತ್ತು. ನೇಪಾಳ ಉಲ್ಲೇಖಿಸುತ್ತಿರುವುದು ಈ ಸಗೌಲಿ ಒಪ್ಪಂದವನ್ನು. ಆದರೆ ಮುಂದಿನ ಅರ್ಧ ಶತಮಾನದಲ್ಲಿ ಈ ವಲಯದಲ್ಲಿ ಹಲವು ಅಸಾಧಾರಣ ಬೆಳವಣಿಗೆಗಳು ಘಟಿಸಿದವು. ಸಿಂಕಿಯಾಂಗ್ ಮತ್ತು ಟಿಬೆಟ್ ಮೇಲೆ ಚೀನಾದ ಪ್ರಭಾವ ಕುಗ್ಗುತ್ತ ಸಾಗಿದಂತೆ ಮಧ್ಯ ಏಷ್ಯಾದಲ್ಲಿ ರಷ್ಯನ್ನರು ಕಾಣಿಸಿಕೊಂಡರು.
ಸಮುದ್ರಮಟ್ಟದಿಂದ 17 ಸಾವಿರ ಅಡಿಗಳ ಎತ್ತರದಲ್ಲಿ ಇರುವ ಲಿಪುಲೆಖ್ ಕಣಿವೆ ಪುರಾತನ ಕಾಲದಿಂದಲೂ ಭಾರತ ಮತ್ತು ಟಿಬೆಟ್ಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿ. ಇತಿಹಾಸಕಾಲದಲ್ಲಿ ಉಭಯ ದೇಶಗಳ ಬೌದ್ಧ ಸಂನ್ಯಾಸಿಗಳು ಸಾಗಿಹೋದದ್ದು ಈ ಕಣಿವೆಯ ಮಾರ್ಗವಾಗಿ. ಅದು ಐತಿಹಾಸಿಕ ವ್ಯಾಪಾರ ಮಾರ್ಗ ಕೂಡ. ಈ ಬಗೆಯಾಗಿ ಮಹತ್ವಪೂರ್ಣವೆನಿಸಿದ ಲಿಪುಲೆಖ್ ಕಣಿವೆ ತನ್ನ ಹತೋಟಿಯಿಂದ ಹೊರಗುಳಿದರೆ ಮುಂದೊಂದು ದಿನ ಅದು ಚೀನೀ ಅಥವಾ ಝಾರಿಸ್ಟ್ ರಷ್ಯಾದ ಸೇನೆಯ ಭಾರತ ಆಕ್ರಮಣದ ಹೆಬ್ಬಾಗಿಲಾಗಬಹುದೆಂಬ ಆತಂಕಕ್ಕೆ ಬ್ರಿಟಿಷ್ ವಸಾಹತುಶಾಹಿ ಸರ್ಕಾರ ಒಳಗಾಯಿತು. ಪರಿಣಾಮವಾಗಿ ಅದು 1865ರಲ್ಲಿ ನೇಪಾಳದ ಜತೆ ಮತ್ತೊಂದು ಒಪ್ಪಂದ ಮಾಡಿಕೊಂಡಿತು. ಆ ಪ್ರಕಾರ ಮಹಕಾಲಿ ನದಿ ಭಾರತ-ನೇಪಾಳ ಗಡಿಯಾಗುವುದು ಕಾಲಾಪಾನಿ ಹಳ್ಳಿಯ ದಕ್ಷಿಣದಿಂದ ಮಾತ್ರ, ಅದರ ಉತ್ತರಕ್ಕಿರುವ ಪ್ರದೇಶವೆಲ್ಲವೂ ಅಂದರೆ ಕಾಲಾಪಾನಿ, ಅದರ ಪಶ್ಚಿಮಕ್ಕಿರುವ ಲಿಂಪ್ಲಿಅಧೂರಾ ಮತ್ತು ಪೂರ್ವವಕ್ಕಿರುವ ಲಿಪುಲೆಖ್ ಕಣಿವೆಯ ಮೇಲೆ ಭಾರತದ ಸಾರ್ವಭೌಮತ್ವ ಸ್ಥಾಪಿತವಾಗುತ್ತದೆ. ನೇಪಾಳದ ಪ್ರಸಕ್ತ ಕಮ್ಯೂನಿಸ್ಟ್ ಸರ್ಕಾರ ಈ ಒಪ್ಪಂದವನ್ನು ತಣ್ಣಗೆ ಮರೆತುಬಿಟ್ಟಿದೆ. ಅದೊಂದು ಜಾಣಮರೆವು.
ಭಾರತ, ಚೀನಾ (ಟಿಬೆಟ್) ಮತ್ತು ನೇಪಾಳಗಳ ಗಡಿಗಳು ಸಂಧಿಸುವ ಲಿಪುಲೆಖ್ ಮೇಲೆ ಭಾರತದ ಸಾರ್ವಭೌಮತ್ವದ ಕುರಿತಾಗಿ ಚೀನಾಗೆ ತಕರಾರಿದ್ದಂತಿಲ್ಲ. ನಿಜ ಹೇಳಬೇಕೆಂದರೆ ಭಾರತ ಮತ್ತು ಚೀನಾಗಳ ನಡುವೆ ವ್ಯಾಪಾರಕ್ಕಾಗಿ ಭೂಮಾರ್ಗವೊಂದನ್ನು ತೆರೆಯಬೇಕೆಂದು ಎರಡೂ ದೇಶಗಳು 1992ರಲ್ಲಿ ತೀರ್ವನಿಸಿದಾಗ ಅವು ಆಯ್ಕೆ ಮಾಡಿಕೊಂಡದ್ದು ಲಿಪುಲೆಖ್ ಕಣಿವೆಯ ಮಾರ್ಗವಾಗಿ ಸಾಗಿ ಟಿಬೆಟ್ ಪ್ರವೇಶಿಸಿ, ಐತಿಹಾಸಿಕ ವ್ಯಾಪಾರಿ ಪಟ್ಟಣವಾದ ತಕ್ಲಾಕೋಟ್ (ಪುರಾಂಗ್) ಸಮೀಪದ ಚಾಂಗ್ ಲೊಬೊಚೆಹೆಲಾ ತಲುಪುವ ಹಾದಿಯನ್ನು. ನಂತರ ಈ ಮಾರ್ಗ ವ್ಯಾಪಾರಕ್ಕಲ್ಲದೆ ಕೈಲಾಶ್-ಮಾನ್ಸರೋವರ್ ಯಾತ್ರಿಗಳಿಗೂ ಉಪಯೋಗವಾಗಲೆಂದು ಭಾರತ ಲಿಪುಲೆಖ್ನಲ್ಲಿ ಸುಸಜ್ಜಿತ ರಸ್ತೆ ನಿರ್ವಣವನ್ನು 2008ರಲ್ಲಿ ಆರಂಭಿಸಿದಾಗ ಅದಕ್ಕೆ ನೇಪಾಳದಿಂದಾಗಲಿ, ಚೀನಾದಿಂದಾಗಲಿ ಯಾವುದೇ ತಕರಾರು ಬರಲಿಲ್ಲ. ಆದರೆ ಹನ್ನೆರಡು ವರ್ಷಗಳ ನಂತರ ರಸ್ತೆನಿರ್ವಣ ಸಂಪೂರ್ಣಗೊಂಡಾಗ ನೇಪಾಳ 1816ರ ಸಗೌಲಿ ಒಪ್ಪಂದವನ್ನು ಉಲ್ಲೇಖಿಸಿ ಲಿಪುಲೆಖ್ ಅಲ್ಲದೆ ಮಹಾಕಾಲಿ ನದಿಯ ಪೂರ್ವಕ್ಕಿರುವ ಲಿಂಪ್ಲಿಅಧೂರ ಮತ್ತು ಕಾಲಾಪಾನಿಗಳ ಮೇಲೂ ತನ್ನ ಸಾರ್ವಭೌಮತ್ವದ ಮಾತೆತ್ತಿದೆ. ಅಷ್ಟೇ ಅಲ್ಲ, ಆತುರಾತುರವಾಗಿ ಹೊಸ ಭೂಪಟವನ್ನು ರಚಿಸಿ ಅದನ್ನು ಅಧಿಕೃತಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲು ಹೊರಟಿದೆ. ಈ ಕಸರತ್ತಿನ ಭಾಗವಾಗಿ ಇದೇ ಜೂನ್ 13ರಂದು ಸಂಸತ್ತಿನ ಕೆಳಮನೆಯಲ್ಲಿ ಚರ್ಚೆ ನಡೆದು ಒಟ್ಟು 275ರಲ್ಲಿ 258 ಸದಸ್ಯರು ಹೊಸ ಭೂಪಟದ ಪರವಾಗಿ ಮತ ಚಲಾಯಿಸಿದ್ದಾರೆ. ಆದರೆ ಆಡಳಿತಾರೂಢ ಕಮ್ಯೂನಿಸ್ಟ್ ಒಕ್ಕೂಟದ ಅಧ್ಯಕ್ಷ ಪುಷ್ಪ ಕಮಲ್ ದಹಲ್ (ಪ್ರಚಂಡ) ಸೇರಿ ಸಂಸತ್ತಿನಲ್ಲಿ ಮಾತಾಡಿದ ಪ್ರತಿಯೊಬ್ಬ ಪ್ರಮುಖ ರಾಜಕೀಯ ನೇತಾರನೂ ಗಡಿವಿವಾದವನ್ನು ಮಾತುಕತೆಗಳ ಮೂಲಕವಷ್ಟೇ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದು ತೋರಿಸುವುದು ಹೊಸ ಭೂಪಟದ ಬಗ್ಗೆ ಸಮ್ಮತಿಯಿಲ್ಲದಿದ್ದರೂ ಅದನ್ನು ವಿರೋಧಿಸಿದರೆ ತಾವು ಘೂರ್ಖಾ ರಾಷ್ಟ್ರೀಯತೆಯ ವಿರೋಧಿಗಳು ಎಂದು ಜನ ತಿಳಿಯಬಹುದು, ಅದು ಪ್ರಧಾನಿ ಓಲಿ ಅವರಿಗೆ ವರದಾನವಾಗಬಹುದು ಎಂಬ ಅವರ ಇಕ್ಕಟ್ಟನ್ನು. ಆದರೆ ಮಾತುಕತೆಯ ಹಾದಿಯನ್ನು ನೇಪಾಳ ಮುಚ್ಚಿಬಿಟ್ಟಿರುವ ಬಗ್ಗೆ ಅವರಾರಿಂದಲೂ ಒಂದು ಮಾತೂ ಇಲ್ಲ. ಮಾತುಕತೆಯ ಮಾರ್ಗ ಹಿಡಿಯುವುದಾಗಿದ್ದರೆ ಏಕಪಕ್ಷೀಯವಾಗಿ ಭೂಪಟ ರಚಿಸುವ ಅರಾಜತಾಂತ್ರಿಕ ಕ್ರಮಕ್ಕೆ ಪ್ರಧಾನಿ ಖಡ್ಗ ಪ್ರಸಾದ್ ಶರ್ಮಾ ಓಲಿ ಸರ್ಕಾರ ಮುಂದಾಗುತ್ತಿರಲಿಲ್ಲ.
ಇಡೀ ಪ್ರಕರಣದಲ್ಲಿ ಚೀನಾದ ಕೈವಾಡ ಎದ್ದು ಕಾಣುತ್ತಿದೆ. ಮೇ ಮೊದಲ ವಾರದಲ್ಲಿ ನೇಪಾಳದ ಆಡಳಿತಾರೂಢ ಕಮ್ಯೂನಿಸ್ಟ್ ಒಕ್ಕೂಟ ಒಳಜಗಳಗಳಿಂದಾಗಿ ಕುಸಿದುಬೀಳುವ ಸ್ಥಿತಿ ತಲುಪಿತ್ತು. ಆಗ ಮಧ್ಯಪ್ರವೇಶಿಸಿದ ಚೀನೀ ರಾಯಭಾರಿ ಹೌ ಯಾಂಕಿ ಜಗಳಗಂಟ ಗುಂಪುಗಳ ನಡುವೆ ಶಾಂತಿ ಏರ್ಪಡಿಸಿದರು. (ಈ ಯಾಂಕಿ ನೇಪಾಳಕ್ಕೆ ಬರುವ ಮೊದಲು ಪಾಕಿಸ್ತಾನದಲ್ಲಿ ಚೀನಿ ರಾಯಭಾರಿಯಾಗಿದ್ದರು ಎನ್ನುವುದು ಗಮನಿಸಬೇಕಾದ ಅಂಶ). ಹೀಗೆ ನೇಪಾಳದ ಆಂತರಿಕ ವ್ಯವಹಾರದಲ್ಲಿ ಚೀನಾ ನೇರವಾಗಿ ಹಸ್ತಕ್ಷೇಪವೆಸಗಿದೆ. ನೇಪಾಳದಲ್ಲಿ ಚೀನೀ ಕೈವಾಡ ತನ್ನ ಪರವಾಗಿನ ಕಮ್ಯೂನಿಸ್ಟ್ ಸರ್ಕಾರವನ್ನು ಉಳಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಕರೊನಾ ಮಹಾಮಾರಿ ಕುರಿತಂತೆ ತನಗೆ ಪಥ್ಯವಾಗದ ನಿಲುವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಭಾರತಕ್ಕೆ ತಲೆನೋವು ತರುವುದರಲ್ಲೂ ಚೀನಾ ಮಗ್ನವಾಗಿದೆ. ಓಲಿ ಸರ್ಕಾರ ಗಡಿತಂಟೆಯನ್ನು ಉಗ್ರವಾಗಿಸಿದ್ದು ರಾಯಭಾರಿ ಯಾಂಕಿ ತಮ್ಮ ಸರ್ಕಾರವನ್ನು ಉಳಿಸಿದ ನಂತರವೇ. ಪ್ರಧಾನಿ ಓಲಿಯ ಭಾರತ-ವಿರೋಧಿ ನಡವಳಿಕೆ ಇಷ್ಟಕ್ಕೇ ನಿಂತಿಲ್ಲ. ತಮ್ಮ ಚೀನೀ ದೇವರುಗಳನ್ನು ಸಂತುಷ್ಟಗೊಳಿಸುವ ಉತ್ಸಾಹದಲ್ಲಿ ಅವರು ನೇಪಾಳದಲ್ಲಿನ ಕರೋನಾ ಸೋಂಕಿಗೆ ಭಾರತವನ್ನು ದೂಷಿಸಿದ್ದಾರೆ. ‘ಭಾರತದಿಂದ ಬಂದಿರುವ ವೈರಸ್ ಚೀನಾ ಮತ್ತು ಇಟಲಿಯಿಂದ ಬಂದ ವೈರಸ್ಗಳಿಗಿಂತಲೂ ಹೆಚ್ಚು ಘಾತಕವಾದದ್ದು’ ಎಂಬ ಅವರ ಹೇಳಿಕೆ ಅವರದಾಗಿರಲು ಸಾಧ್ಯವಿಲ್ಲ. ಅದು ಚೀನೀ ಡಿಕ್ಟೇಷನ್.
ಭಾರತ ಕರೊನಾ ಸಂಕಟದಲ್ಲಿ ತೀವ್ರವಾಗಿ ಸಿಲುಕಿಹೋಗುತ್ತಿರುವ ಈ ಸಂದರ್ಭದಲ್ಲಿ ಓಲಿ ಸರ್ಕಾರ ಈ ಬಗೆಯ ನೀತಿ ಅನುಸರಿಸುತ್ತಿರುವುದು ಭಾರತದ ಬಗ್ಗೆ ಅದಕ್ಕಿರುವ ಅಸಂವೇದನಾಶೀಲತೆಯನ್ನು ಢಾಳಾಗಿ ತೋರಿಸುತ್ತದೆ. ಹೀಗಾಗಿ ಅದರ ಕುರಿತಾಗಿ ಭಾರತ ಯಾವುದೇ ಮೃದುನೀತಿ ಅನುಸರಿಸುವ ಅಗತ್ಯವಿಲ್ಲ. ತಮ್ಮ ಸರ್ಕಾರದ ಬಗೆಗಿನ ಅಸಮಾಧಾನವನ್ನು ನೇಪಾಳಿ ಜನತೆಯೂ ತೋರಿಸಿಕೊಂಡಿದ್ದಾರೆ. ಕರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾದ ತನ್ನ ಜವಾಬ್ದಾರಿಯನ್ನು ಮರೆತು ಓಲಿ ಸರ್ಕಾರ ಅನಗತ್ಯ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡುತ್ತಿದೆ ಎಂದು ಆಪಾದಿಸಿ ನೇಪಾಳಿ ಜನತೆ ಕಳೆದೊಂದು ವಾರದಿಂದಲೂ ಸರ್ಕಾರದ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರದರ್ಶನ ನಡೆಸುತ್ತಿದ್ದಾರೆ.