ಯೂಕ್ರೇನ್​-ರಷ್ಯಾ ಯುದ್ಧದ ಭೀಕರತೆ ಸಾರುವ ಒಂದು ದೃಶ್ಯ 
ಅಂಕಣ

ನಿಜವಾಗಿಯೂ ಕಾಲ ಕೆಟ್ಟಿದೆಯಾ?!

ಎರಡೆರಡು ಕಾರು ಹೊಂದಿದ್ದರೂ ಬಿಪಿಎಲ್ ಕಾರ್ಡನ್ನು ವಾಮಮಾರ್ಗದಲ್ಲಿ ಪಡೆಯುವುದು; ನಕಲಿ ಜಾತಿ ಸರ್ಟಿಫಿಕೆಟ್ ನೀಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವುದು; ಲಕ್ಷಾಂತರ ರೂ. ಆದಾಯ ಇದ್ದರೂ ಸರ್ಕಾರಕ್ಕೆ ಪೈಸಾ ತೆರಿಗೆ ಕಟ್ಟದಿರುವುದು; ಹಣ ಗಳಿಸುವ ಗುರಿಯೆದುರಿಗೆ ಮಾರ್ಗ ಯಾವುದಾದರೂ ಸರಿ ಎಂಬ ಥಿಯರಿಇವೆಲ್ಲ ಮಿನಿಪ್ರಳಯದ ಲಕ್ಷಣಗಳೇ ಅಲ್ಲವೆ!

ಜಗವೆಲ್ಲ ನೀರಿನಿಂದ ತುಂಬಿಹೋಗಿದೆ. ಎಲ್ಲೆಲ್ಲೂ ನೀರು ಬಿಟ್ಟರೆ ಏನೆಂದರೆ ಏನೂ ಇಲ್ಲ. ಮನುಕುಲದ ಮೂಲಪುರುಷ ಎನ್ನಲಾಗುವ ವೈವಸ್ವತ ಮನುವು ಒಂದು ಹಡಗಿನಲ್ಲಿ ವೇದಗಳು, ಪ್ರಾಣಿಗಳನ್ನು ಮತ್ತು ಸಸ್ಯದ ಬೀಜಗಳನ್ನು ಶೇಖರಿಸುತ್ತಾನೆ. ಇದೆಲ್ಲ ತಯಾರಿ ಏಕೆಂದರೆ, ತರುವಾಯ ಮರುಸೃಷ್ಟಿ ಆಗಬೇಕಲ್ಲ, ಅದಕ್ಕೆ. ಆ ಜಲಸಾಗರದಲ್ಲಿ ಅಲೆಯನ್ನೂ ಮೀರಿಸುವಂತೆ ಹೊಯ್ದಾಡುವ ಹಡಗನ್ನು ಕಾಪಾಡಿ ಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ. ಆಗ ನೆರವಿಗೆ ಬಂದಿದ್ದು ಮತ್ಸ್ಯ. ಅರ್ಥಾತ್ ಶ್ರೀಮನ್ನಾರಾಯಣ. ಭಗವಂತನು ಮೀನಿನ ಅವತಾರ ತಾಳಿಕೊಂಡು, ಹಡಗನ್ನು ತನ್ನ ಕೋರೆಗೆ ಕಟ್ಟುವಂತೆ ತಿಳಿಸಿ, ಪ್ರವಾಹದಲ್ಲಿ ಕೊಚ್ಚಿಹೋಗುವ ಅಪಾಯದಲ್ಲಿದ್ದ ಹಡಗನ್ನು ರಕ್ಷಿಸುತ್ತಾನೆ. ಆಗಲೇ ಇನ್ನೊಂದು ಕೀಟಲೆ ನಡೆಯುತ್ತದೆ. ಹಯಗ್ರೀವನೆಂಬ ರಕ್ಕಸ ವೇದಗಳನ್ನು ಅಪಹರಿಸಿ ಸಮುದ್ರದ ತಳಕ್ಕೆ ಒಯ್ದುಬಿಡುತ್ತಾನೆ. ಆಗ ಮತ್ಸಾ್ಯವತಾರಿ ವಿಷ್ಣುವು ರಾಕ್ಷಸನನ್ನು ಕೊಂದು ವೇದಗಳನ್ನು ರಕ್ಷಿಸುತ್ತಾನೆ.

ಪ್ರಳಯ, ನಂತರದಲ್ಲಿ ಸೃಷ್ಟಿ ಇತ್ಯಾದಿ ಪರಿಕಲ್ಪನೆ ಬಗ್ಗೆ ಹಿಂದೂ ಪುರಾಣಗಳಲ್ಲಿ ಇರುವ ಉಲ್ಲೇಖ ಇದು. ಇಲ್ಲೊಂದು ಕುತೂಹಲಕಾರಿಯಾದ ಸಾದೃಶ್ಯ ಇದೆ. ಮಹಾಪ್ರವಾಹದಿಂದ ಮನುಕುಲ ಹಾಗೂ ಪ್ರಾಣಿಸಂಕುಲವನ್ನು ರಕ್ಷಿಸುವ ದೃಷ್ಟಾಂತ ಬೈಬಲ್​ನಲ್ಲಿ ಕೂಡ ಬರುತ್ತದೆ (Noah's Ark). ಸೃಷ್ಟಿಯ ಉಗಮಕ್ಕೆ ಸಂಬಂಧಿಸಿ ವಿಜ್ಞಾನಿಗಳು ಬಿಗ್ ಬ್ಯಾಂಗ್ (ಮಹಾಸ್ಪೋಟ) ಸಿದ್ಧಾಂತವನ್ನು ಮಂಡಿಸುತ್ತಾರೆ. ಹಾಗೇ, ಮತಧರ್ಮಗಳು ಕೂಡ ತಮ್ಮದೇ ಆದ ಸಿದ್ಧಾಂತಗಳನ್ನು ಹೊಂದಿವೆ.

ಭೂಮಿಯಲ್ಲಿ ಅನಾಚಾರದುರಾಚಾರಗಳು ಜಾಸ್ತಿಯಾದಾಗ, ಅಧರ್ಮವೇ ಮೆರೆಯತೊಡಗಿದಾಗ ಭೂದೇವಿ ಈ ‘ಭಾರ’ವನ್ನು ತಡೆಯಲಾಗದೆ ವಿಷ್ಣುವಿನ ಬಳಿ ಹೋಗಿ ಈ ಭಾರವನ್ನು ಇಳಿಸುವಂತೆ ಕೋರುತ್ತಾಳಂತೆ. (ಯಾವುದಕ್ಕೂ ಪ್ರಯೋಜನವಿಲ್ಲದ ವ್ಯಕ್ತಿಯನ್ನು ‘ಭೂಮಿಗೆ ಭಾರ’ ಎಂದು ವಿಡಂಬಿಸುವುದು ನಮಗೆ ಗೊತ್ತೇ ಇದೆ) ಆಗ ಸ್ವಯಂ ಭಗವಂತನೇ ಧರ್ಮರಕ್ಷಣೆಯ ಉದ್ದೇಶದೊಂದಿಗೆ ಅವತರಿಸುತ್ತಾನೆ ಎಂಬುದು ಹಿಂದೂಗಳಲ್ಲಿರುವ ನಂಬಿಕೆ. ಭಗವದ್ಗೀತೆಯಲ್ಲಿ ಭಗವಂತನೇ ‘ಸಂಭವಾಮಿ ಯುಗೇ ಯುಗೇ..’ ಎನ್ನುವ ಮೂಲಕ ಈ ಅವತಾರ ಪರಿಕಲ್ಪನೆಯನ್ನು ಸಾದರಪಡಿಸುತ್ತಾನೆ.

ಅನೇಕ ಜ್ಯೋತಿಷಿಗಳು ಆಗೀಗ ಪ್ರಳಯದ ಬಗ್ಗೆ ಮಾತಾಡುತ್ತಿರುತ್ತಾರೆ. ಆಗೆಲ್ಲ ಕೆಲವರು ಭಯಭೀತರಾಗುತ್ತಾರೆ. ಇದಕ್ಕೆ ಏನು ಪರಿಹಾರ ಎಂದು ಕೇಳುತ್ತಾರೆ. ಕೊನೆಗೆ ಅದು ಬಾಯಿಂದ ಬಾಯಿಗೆ ಹರಡುವಾಗ ಒಂದಷ್ಟು ಮಸಾಲೆ ಸೇರಿಸಿಕೊಂಡು ಇನ್ನೇನೋ ಆಗಿ ಒಟ್ಟಿನಲ್ಲಿ ದೊಡ್ಡ ಗದ್ದಲವಾಗಿಬಿಡುತ್ತದೆ. ಈಗ ಕೆಲ ವರ್ಷಗಳ ಹಿಂದೆ ಮಾಯನ್ ಕ್ಯಾಲೆಂಡರಿನಲ್ಲಿ ಪ್ರಳಯದ ಉಲ್ಲೇಖ ಆಗಿರುವುದರಿಂದ ಇನ್ನೇನು ಜಗತ್ತಿನ ಕಥೆ ಮುಗಿಯಿತು ಎಂಬಷ್ಟು ಕೋಲಾಹಲವೆದ್ದಿತ್ತು. ಆದರೆ ದೇವರ ದಯ, ಭೂಮಿ ಇನ್ನೂ ಇದೆ! ಇಲ್ಲಿ ಪ್ರಾಸಂಗಿಕವಾಗಿ ಒಂದು ಉಲ್ಲೇಖ ಮಾಡಬೇಕು. ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಓರಗೆಯ ಹುಡುಗರೊಂದಿಗೆ ಆಟವಾಡುವಾಗ ಸಹ ಪ್ರಳಯ ಇತ್ಯಾದಿ ಜಿಜ್ಞಾಸೆಗಳು ಮೂಡುತ್ತಿದ್ದವು! ಮಕ್ಕಳ ಮನಸಿಗೆ ಎಲ್ಲೆಯುಂಟೆ. ಅಕಸ್ಮಾತ್ ಜಗತ್ತು ಮುಳುಗಿಹೋದರೆ ಏನು ಮಾಡುವುದು ಎಂದು ಥೇಟ್ ವಿಜ್ಞಾನಿಗಳ ರೀತಿಯಲ್ಲಿ ಆಲೋಚನೆಗಳನ್ನು ಮುಂದಿಡುತ್ತಿದ್ದೆವು. ಒಬ್ಬಾತ, ತಾನು ಬಾವಿಯಲ್ಲಿ ಅಡಗುತ್ತೇನೆ ಎಂದರೆ, ಇನ್ನೊಬ್ಬ, ಬೆಟ್ಟದಲ್ಲಿ ಸುರಂಗ ಮಾಡಿಕೊಂಡು ಬಚಾವಾಗುತ್ತೇನೆ ಎಂದಿದ್ದ. ಅಂಥ ಪರಿಸ್ಥಿತಿಯೇನೂ ಬರಲಿಲ್ಲ, ಬಿಡಿ. ಆಗ ಮನೆಗಳಲ್ಲಿ ಇರುತ್ತಿದ್ದ ಕ್ಯಾಲೆಂಡರ್​ನಲ್ಲಿ ಸ್ವರ್ಗ-ನರಕಗಳ ಚಿತ್ರಣ ನೀಡಿರುತ್ತಿದ್ದರು. ಯಾವ ತಪ್ಪು ಮಾಡಿದರೆ ಯಾವ ಶಿಕ್ಷೆ ಎಂದು ಅದರಲ್ಲಿ ಚಿತ್ರಸಮೇತ ಇರುತ್ತಿತ್ತು. ನರಕದಲ್ಲಿ ಕಾದ ಎಣ್ಣೆಯಲ್ಲಿ ಮುಳುಗಿಸುವುದು, ರಕ್ಕಸರು ಹಿಂಸೆ ನೀಡುವುದು... ಇತ್ಯಾದಿ ಚಿತ್ರಗಳು ಆ ಕ್ಯಾಲೆಂಡರಿನಲ್ಲಿ ಇರುತ್ತಿದ್ದವು. ಸ್ವರ್ಗ ಮತ್ತು ನರಕ ನಿಜವಾಗಿಯೂ ಇರುತ್ತವೆಯೇ? ಸತ್ತಮೇಲೆ ಮಾನವನಿಗೆ ಈ ಅವಸ್ಥೆ ಅನಿವಾರ್ಯವೇ? ಮುಂತಾದ ತಾತ್ವಿಕ ಪ್ರಶ್ನೆಗಳನ್ನು ಬದಿಗಿಟ್ಟು ನೋಡಿದರೆ, ತಪು್ಪಮಾಡಿದರೆ ಕಠಿಣ ಶಿಕ್ಷೆ ಪಕ್ಕಾ ಎಂಬ ಅಂಶವನ್ನು ಇಂಥ ಚಿತ್ರಗಳು ಮನದಟ್ಟು ಮಾಡುತ್ತಿದ್ದವು. ನೈತಿಕ ಶಿಕ್ಷಣ ಎಂದರೆ ಇದೇ ಅಲ್ಲವೆ? ಆ ಕ್ಯಾಲೆಂಡರಿನ ಉದ್ದೇಶ ಹೆದರಿಕೆ ಮೂಡಿಸುವುದಾಗಿರಲಿಲ್ಲ. ಬದಲಿಗೆ ಇಂಥ ತಪು್ಪ ಮಾಡಿದರೆ ಇಂಥ ಶಿಕ್ಷೆ ಆಗಿಯೇ ಆಗುತ್ತದೆ ಎಂದು ಬಿಂಬಿಸುವುದು. ಕಾನೂನಿನ ಹೆದರಿಕೆ ಇದ್ದರೆ ಮಾತ್ರ ಸಮಾಜದಲ್ಲಿ ಶಾಂತಿನೆಮ್ಮದಿ ನೆಲೆಸಲು ಸಾಧ್ಯ. ಹಾಗಿಲ್ಲವಾದಲ್ಲಿ ಅದು ಅರಾಜಕತೆಗೆ ದಾರಿಯಾಗುತ್ತದೆ.

‘ಜೀವನದ ಬಾಹ್ಯ ಆಯಾಮಗಳು ನಿಮಗೆ ಸುಖಸವಲತ್ತುಗಳನ್ನು ನೀಡಬಹುದು. ಆದರೆ, ಅಂತರಂಗದ ಆಯಾಮ ಮಾತ್ರ ಸಾರ್ಥಕತೆಯನ್ನು ತರಬಲ್ಲದು’ಎನ್ನುತ್ತಾರೆ ಈಶ ಫೌಂಡೇಷನ್​ನ ಸದ್ಗುರು. ಬಾಹ್ಯ ಆಯಾಮಗಳಿಂದ ಸುಖ ಸೌಕರ್ಯಗಳನ್ನು ಪಡೆಯುವುದು ಎಂದರೆ ಅಲ್ಲಿ ಕೆಲವೊಮ್ಮೆ ನೈತಿಕತೆಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗಬಹುದು. ಆದರೆ ಆಂತರ್ಯದ ನೆಮ್ಮದಿಗೆ ಈ ರೀತಿಯ ಕೃತಕ ಹಾದಿಗಳು ಬೇಕಿಲ್ಲ. ಹಾಗಾಗಿ ಅದು ನಿತ್ಯಸತ್ಯ ಮತ್ತು ಸತ್ವಭರಿತ. ನೈತಿಕ ಶಿಕ್ಷಣ ಈ ಹಾದಿಗೆ ಬೆಳಕಾಗಬಲ್ಲದು.

ಹೀಗೆಂದೇ, ಪ್ರಳಯದ ಪರಿಕಲ್ಪನೆಯನ್ನು ಕೆಲವರು ಬೇರೆಯದೇ ರೀತಿಯಲ್ಲಿ ಮಂಡಿಸುತ್ತಾರೆ. ಅವರ ಪ್ರಕಾರ, ಪ್ರಳಯ ಎಂದರೆ, ಜಗವೆಲ್ಲ ಒಮ್ಮೆಲೇ ನೀರಿನಿಂದ ತುಂಬಿಹೋಗುವುದು ಎಂದಲ್ಲ. ಬದಲಿಗೆ, ಭೂಮಿಯ ಮೇಲೆ ಒಂದಲ್ಲ ಒಂದು ಬಗೆಯ ಅವಘಡ, ದುರಂತ ಆಗುತ್ತಲೇ ಇರುವುದು, ಯುದ್ಧ, ಜನಾಂಗೀಯ ಸಂಘರ್ಷ, ಭಯೋತ್ಪಾದನೆ, ಇತ್ಯಾದಿ ಮಾನವಕೃತ ದುರಂತ ಒಂದುಕಡೆಯಾದರೆ, ಭೂಕಂಪ, ಪ್ರವಾಹ ಇತ್ಯಾದಿ ನಿಸರ್ಗಪ್ರಕೋಪಗಳು ಮತ್ತೊಂದೆಡೆ. ಒಟ್ಟಿನಲ್ಲಿ, ನೆಮ್ಮದಿ, ಶಾಂತಿ ಎಂಬುದು ಮನುಕುಲಕ್ಕೆ ಮರೀಚಿಕೆಯಾಗುತ್ತದೆ. ಇಂಥ ಸನ್ನಿವೇಶದಲ್ಲಿ ಎಲ್ಲರೂ ಪರಸ್ಪರರತ್ತ ಬೊಟ್ಟುಮಾಡುತ್ತಾರೆಯೇ ವಿನಾ, ಪ್ರಮಾದಕ್ಕೆ ಪಾಲಕರು ಇರುವುದಿಲ್ಲ.

ಜಾಗತಿಕ ತಾಪಮಾನ ಹೆಚ್ಚದಂತೆ ನೋಡಿಕೊಳ್ಳಬೇಕೆಂಬ ಉದ್ದೇಶದಿಂದ ಭಾರತ, ಅಮೆರಿಕ ಸೇರಿದಂತೆ ಅನೇಕ ದೇಶಗಳು ಒಂದು ಒಪ್ಪಂದಕ್ಕೆ ಸೈ ಎಂದವು (ಪ್ಯಾರಿಸ್ ಒಡಂಬಡಿಕೆ). ನಿರ್ದಿಷ್ಟ ಅವಧಿಯಲ್ಲಿ ಪರಿಸರಕ್ಕೆ ಪೂರಕವಾಗಿ ಏನೇನು ಕ್ರಮಗಳನ್ನು ಕೈಗೊಳ್ಳಬಹುದು, ಮಾಲಿನ್ಯವನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು ಇತ್ಯಾದಿ ಅಂಶಗಳನ್ನು ಈ ಒಪ್ಪಂದ ಹೊಂದಿದೆ. ಒಂದು ಹಂತದಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾಗತಿಕ ತಾಪಮಾನ ಹಾಗೂ ಮಾಲಿನ್ಯದ ಹೆಚ್ಚಿನ ಹೊಣೆಗಾರಿಕೆಯನ್ನು ಭಾರತ, ಚೀನಾ ಮುಂತಾದ ದೇಶಗಳ ಮೇಲೆ ಹೊರಿಸಿ, ತಮ್ಮ ದೇಶ ಅಮಾಯಕ ಎಂಬಂತೆ ಬಿಂಬಿಸಿ, ಅಮೆರಿಕವು ಈ ಒಪ್ಪಂದದಿಂದ ಹಿಂದೆಸರಿಯುತ್ತದೆ ಎಂದು ಘೋಷಿಸಿಬಿಟ್ಟರು! ಅಮೆರಿಕದಂತಹ ಪ್ರಮುಖ ದೇಶವೇ ಹೀಗೆ ಮಾಡಿಬಿಟ್ಟರೆ ಒಡಂಬಡಿಕೆ ಬರೀ ಬಡಬಡಿಕೆ ಎಂದು ಎಲ್ಲರ ಮನಸಿನಲ್ಲಿ ಸಂದೇಹ ಮೂಡಿತು. ನಂತರ ಬಂದ ಜೋ ಬೈಡೆನ್ ಅವರು ಅಮೆರಿಕವನ್ನು ವಾಪಸ್ ಪ್ಯಾರಿಸ್ ಒಪ್ಪಂದಕ್ಕೆ ಸೇರಿಸಿದರು ಎಂಬುದು ಬೇರೆ ವಿಚಾರ. ಇತರರ ತಪು್ಪಗಳನ್ನು ಹುಡುಕಿ ಶೋಧಿಸಿ ಟೀಕಿಸುವುದಕ್ಕೆ ನಾವು ಸದಾ ಮುಂದೆ. ಮಹಾನ್ ಸಂತ ಶ್ರೀ ಶ್ರೀಧರ ಸ್ವಾಮಿಗಳು ಮಾನವನ ಈ ಪ್ರವೃತ್ತಿಯನ್ನು ಹೀಗೆ ಬಣ್ಣಿಸುತ್ತಾರೆ: ‘ಬೇರೆಯವರ ದೋಷಗಳನ್ನು ಹುಡುಕಿ ತೆಗೆಯುವುದಕ್ಕೆ ನಾವು ಎಷ್ಟು ಬುದ್ಧಿ ಖರ್ಚು ಮಾಡುವೆವೋ ಅಷ್ಟು ಬುದ್ಧಿಯನ್ನು ನಮ್ಮ ಸ್ವಂತ ದೋಷಗಳನ್ನು ಹುಡುಕಲು ಖರ್ಚುಮಾಡಿದರೆ ನಾವು ದುಃಖ, ದೌರ್ಬಲ್ಯಾದಿ ಬಂಧನಗಳಿಂದ ಮುಕ್ತರಾಗುವೆವು ಎಂದು ಉಪನಿಷತ್ತು ಹೇಳುತ್ತದೆ. ನಮ್ಮ ದೋಷ ನಮಗೆ ಕಾಣುವುದೂ ಇಲ್ಲ. ಆದರೆ ಬೇರೆಯವರ ದೋಷಗಳು ನಮಗೆ ತಪ್ಪದೆ ಗೋಚರವಾಗುತ್ತದೆ. ತನ್ನ ದೋಷಗಳನ್ನು ಯಾರು ತಿಳಿಯುವನೋ ಅವನೇ ವಿವೇಕಿಯು.’ ಎಷ್ಟು ನಿಜ ಅಲ್ಲವೆ? ‘ಹೃದಯವನ್ನು ಹುಡುಕಿನೋಡು’ಎಂಬುದು ಅನುಭಾವಿಗಳ ಮಾತು. ಇದು ಆತ್ಮಾವಲೋಕನದ ಪರಿ-ದಾರಿ. ಹಾಗೆ ಆತ್ಮಪರಿಶೀಲನೆ ಮಾಡಿಕೊಂಡಾಗ ನಮ್ಮ ಬಿಂಬ ಕನ್ನಡಿಯಲ್ಲಿ ಗೋಚರಿಸುತ್ತದೆ.

ಎರಡೆರಡು ಕಾರುಗಳನ್ನು ಹೊಂದಿರುವವರು ಸಹ ಬಿಪಿಎಲ್ ಕಾರ್ಡನ್ನು ವಾಮಮಾರ್ಗದಲ್ಲಿ ಪಡೆಯುವುದು; ನಕಲಿ ಜಾತಿ ಸರ್ಟಿಫಿಕೆಟ್ ನೀಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವುದು; ಲಕ್ಷಾಂತರ ರೂಪಾಯಿ ಆದಾಯ ಇದ್ದರೂ ಸರ್ಕಾರಕ್ಕೆ ಪೈಸಾ ತೆರಿಗೆ ಕಟ್ಟದಿರುವುದು; ‘ಇಲ್ಲಿ ಕಸ ಎಸೆಯುವುದು ನಿಷಿದ್ಧ’ ಎಂಬ ಬೋರ್ಡ್ ಪಕ್ಕದಲ್ಲೇ ಕಸ ಬಿಸಾಕಿ ಮುನ್ಸಿಪಾಲ್ಟಿಗೆ ಯರಾ›ಬಿರ್ರಿ ಬೈಯುವುದು; ಹಣ ಗಳಿಸುವ ಗುರಿಯೆದುರಿಗೆ ಮಾರ್ಗ ಯಾವುದಾದರೂ ಸರಿ ಎಂಬ ಥಿಯರಿಗೆ ಅಂಟಿಕೊಳ್ಳುವುದು ಮತ್ತು ಅಂಥ ಹಣವಂತರಿಗೆ ಸಮಾಜ ಮಣೆಹಾಕುವುದು- ಇವೆಲ್ಲ ಮಿನಿಪ್ರಳಯದ ಲಕ್ಷಣಗಳೇ ಅಲ್ಲವೆ! ‘ಕಾಲ ಕೆಟ್ಟೋಯ್ತು’ಎನ್ನುತ್ತೇವೆ. ಆದರೆ, ಇದಕ್ಕೆ ಕಾರಣ ಆ ಕಾಲದಲ್ಲಿ ಇರುವವರೇ ಅಲ್ಲವೆ?

ಕೋವಿಡ್ ಹಾವಳಿಯಿಂದಾಗಿ ದೇಶದಲ್ಲಿ ಸಾವಿರಾರು ಮಕ್ಕಳು ತಂದೆತಾಯಿ ಇಬ್ಬರನ್ನೂ ಅಥವಾ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಜತೆಗೆ, ಈ ಎರಡು ವರ್ಷಗಳಲ್ಲಿ ನಾಪತ್ತೆಯಾದ ಮಕ್ಕಳ ಸಂಖ್ಯೆ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ನ್ಯಾಷನಲ್ ಕ್ರೖೆಮ್ ರೆಕಾರ್ಡ್ಸ್ ಬ್ಯೂರೊ (ಎನ್​ಸಿಆರ್​ಬಿ) ವರದಿಯೇ ಹೇಳಿದೆ. ಇವರಲ್ಲಿ ಅನೇಕ ಮಕ್ಕಳು ಮಾನವ ಕಳ್ಳಸಾಗಣೆದಾರರು ಹಾಗೂ ಅಪಹರಣಕಾರರ ಕೈಗೆ ಸಿಲುಕಿದ್ದಾರೆ. ಅಸಹಾಯಕ ಸ್ಥಿತಿಯನ್ನು ಹೀಗೂ ದುರುಪಯೋಗಪಡಿಸಿಕೊಳ್ಳುವವರು ಪ್ರಳಯಾಂತಕರಲ್ಲದೆ ಇನ್ನೇನು? ಕೋವಿಡ್ ಸಂದರ್ಭದಲ್ಲಿ ಮಹಿಳಾ ದೌರ್ಜನ್ಯ ಪ್ರಮಾಣ ಹೆಚ್ಚಿದ್ದು, ಕದ್ದುಮುಚ್ಚಿ, ಯಾರಿಗೂ ಗೊತ್ತಾಗಬಾರದೆಂದು ಬೆಳಗಿನ ಜಾವವೇ ಬಾಲ್ಯವಿವಾಹ ನಡೆದಿದ್ದು- ಇವನ್ನೆಲ್ಲ ಯಾವ ನೆಲೆಯಲ್ಲಿ ವಿಶ್ಲೇಷಿಸುವುದು? (ಕೋವಿಡ್ ಲಾಕ್​ಡೌನ್ ಸಮಯದಲ್ಲಿ ಅಸಂಖ್ಯಾತ ಜನರು ಫ್ಯಾಮಿಲಿ ಲೈಫ್ ಅನ್ನು ಎಂಜಾಯ್ ಮಾಡಿದ ಸಕಾರಾತ್ಮಕ ಅಂಶವೂ ಇದೆಯೆನ್ನಿ.)

‘ಮಗು! ಅವನವನ ಕರ್ಮವೇ ಅವನವನ ಉನ್ನತಿಗೂ ಅಥವಾ ಅವನತಿಗೂ ಕಾರಣವಾಗುವುದೆಂದು ಶಾಸ್ತ್ರಗಳ ಹೇಳಿಕೆಯಿದೆ. ಇದನ್ನರಿತು ತನ್ನ ಉನ್ನತಿಗೆ ಕಾರಣವಾದ ಕರ್ಮಗಳಲ್ಲಿಯೇ ತೊಡಗಿರಬೇಕಪ್ಪ. ಸರಿಯಾಗಿ ನಡೆದುಕೊಳ್ಳಬೇಕು. ಇಲ್ಲಿ ಶಾಶ್ವತ ಯಾವುದು ಎಂಬ ಪ್ರಶ್ನೆಯನ್ನು ಮನಸ್ಸಿಗೆ ಹಾಕಿ, ಮನಸ್ಸನ್ನು ಕೆಟ್ಟಮಾರ್ಗದಿಂದ ಹಿಂತಿರುಗಿಸಬೇಕು, ತಿಳಿಯಿತೇ?’ಎಂದು ಶ್ರೀಧರ ಸ್ವಾಮಿಗಳು ಕಿವಿಮಾತು ಹೇಳುತ್ತಾರೆ. ‘ಮನುಷ್ಯಜಾತಿಗೆ ಎಲ್ಲ ವಿಧದ ಉತ್ಕರ್ಷವನ್ನು ಸಾಧಿಸುವುದಕ್ಕಾಗಿ ಯಾವುದಾದರೂ ಒಂದು ಆದರ್ಶವಾದ ಜೀವನಕ್ರಮವಿದ್ದರೆ ಅದೇ ಧಾರ್ವಿುಕ ಜೀವನಕ್ರಮ. ಎಲ್ಲರೂ ಸುಖವನ್ನೇ ಬಯಸುತ್ತಾರೆ. ಅದು ಧರ್ಮದಲ್ಲಿ ನೆಲೆನಿಂತಿದೆ. ಆದರೆ ಅದರ ಸಾಧಕವಾಗಿರುವ ಧರ್ಮದ ಆಚರಣೆ ಮಾತ್ರ ಯಾರಿಗೂ ಬೇಡವಾಗಿದೆ. ಸುಖದ ಇಚ್ಛೆ ಇದ್ದರೂ, ಸುಖದ ಪ್ರಾಪ್ತಿಯನ್ನು ಮಾಡಿಕೊಳ್ಳುವ ಸಾಧನವನ್ನು ನಾವು ಅನುಸರಿಸದಿದ್ದರೆ, ಅದರ ಅನುಷ್ಠಾನವನ್ನು ಮಾಡದಿದ್ದರೆ ನಮ್ಮ ಪ್ರಯತ್ನ ಸಫಲವಾಗದು. ಸುಖವನ್ನೇ ಯಾಚಿಸಿ, ದುಃಖಪಡುವ ಸಾಧನವನ್ನು ನಾವು ಕೈಗೊಂಡರೆ ದುಃಖವು ನಮ್ಮನ್ನು ಬಿಡದು’ಎಂದು ಧರ್ಮದ ಹಾದಿಯ ಸಾರ್ಥಕತೆ ಹಾಗೂ ಅದರ ವಿರುದ್ಧ ಹಾದಿಯ ಅಪಾಯವನ್ನು ಶ್ರೀಧರ ಸ್ವಾಮಿಗಳು ಸ್ಪಷ್ಟವಾಗಿ ವಿವರಿಸುತ್ತಾರೆ. ಇಲ್ಲಿ ಧರ್ಮ ಎಂದರೆ ಸೀಮಿತ ಅರ್ಥದಲ್ಲಿ ಭಾವಿಸಬೇಕಿಲ್ಲ. ಸರಿಯಾದ ಅರ್ಥದಲ್ಲಿ ಹೇಳಬೇಕೆಂದರೆ- ಜೀವನದ ಆದರ್ಶ ನಡವಳಿಕೆಗಳೇ ಧರ್ಮ. ಇದು ಮತಭಿನ್ನತೆಗಳನ್ನು ಮೀರಿ ಎಲ್ಲರಿಗೂ ಸಾರ್ವತ್ರಿಕವಾಗಿ ಅನ್ವಯಿಸುವಂಥದು.

ಕೊನೇ ಮಾತು: ‘ಸಂಸ್ಕೃತಿ, ಧರ್ಮ ಹಾಗೂ ನೈತಿಕ ಮೌಲ್ಯ- ಈ ಆದರ್ಶಗಳನ್ನು ಪಾಲಿಸುವುದು ಕಾನೂನು ಹಾಗೂ ನಿಯಂತ್ರಣಕ್ಕಿಂತ ಉತ್ತಮ’ ಎನ್ನುತ್ತಾರೆ, ಸ್ವಾಮಿ ಶಿವಾನಂದ. ‘ಯಾರು ತನ್ನ ಆತ್ಮಸಾಮ್ರಾಜ್ಯದ ವಿಸ್ತರಣೆಗೆ ಹೆಚ್ಚು ಗಮನ ನೀಡುತ್ತಾನೋ ಅವನೇ ನಿಜಸುಖಿ’ಎನ್ನುತ್ತಾನೆ, ಅಮೆರಿಕನ್ ಕವಿ, ಪ್ರಬಂಧಕಾರ ಹೆನ್ರಿ ಡೇವಿಡ್ ಥೋರೋ. ಭಾರತೀಯ ಪರಂಪರೆ ಮಹತ್ವ ನೀಡಿರುವುದೇ ಈ ಆತ್ಮಶೋಧಕ್ಕೆ. ಆದರೆ ಈ ಸ್ವಶೋಧದ ಹಾದಿ ಬಲು ದೀರ್ಘ ಹಾಗೂ ಪ್ರಯಾಸಕರ...

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)