WEB
ದಿಕ್ಸೂಚಿ – ನಾಗರಾಜ ಇಳೆಗುಂಡಿ

ಉತ್ತರ ಕನ್ನಡಕ್ಕೆ ವರವೇ ಶಾಪವಾಯ್ತೆ?!

ಅಲ್ಲಿ ನದಿಗಳಿವೆ, ಕಣ್ಣು ಹಾಯಿಸಿದಷ್ಟೂ ಕಾಣುವ ಸಮುದ್ರವಿದೆ. ನಡೆದಷ್ಟೂ ಕೊನೆಯಿರದ ಬೀಚುಗಳಿವೆ. ಸೂರ್ಯನ ಕಿರಣಗಳು ಒಳಪ್ರವೇಶಿಸಲಾರದಷ್ಟು ದಟ್ಟ ಕಾಡುಗಳಿವೆ. ವೈಯಾರದಿಂದ ಬಳುಕುತ್ತ ಇಳಿದಿಳಿದು ಬರುವ ಜಲಪಾತಗಳಿವೆ. ಹೊಲಗದ್ದೆಗಳಿವೆ. ಬೆಟ್ಟಗುಡ್ಡಗಳಿವೆ. ನಿಸರ್ಗದ ವಿಸ್ಮಯಗಳಿವೆ. ಜಾನಪದದ ಸೊಗಡು ಇದೆ. ಕಲೆ, ಸಂಸ್ಕೃತಿಯ ಕಂಪು ಪಸರಿಸಿದೆ. ವೈವಿಧ್ಯಮಯ ಜನಸಮುದಾಯಗಳಿವೆ; ಬಗೆ ಬಗೆ ಭಾಷೆಗಳಿವೆ....

ಅಲ್ಲಿ ನದಿಗಳಿವೆ, ಕಣ್ಣು ಹಾಯಿಸಿದಷ್ಟೂ ಕಾಣುವ ಸಮುದ್ರವಿದೆ. ನಡೆದಷ್ಟೂ ಕೊನೆಯಿರದ ಬೀಚುಗಳಿವೆ. ಸೂರ್ಯನ ಕಿರಣಗಳು ಒಳಪ್ರವೇಶಿಸಲಾರದಷ್ಟು ದಟ್ಟ ಕಾಡುಗಳಿವೆ. ವೈಯಾರದಿಂದ ಬಳುಕುತ್ತ ಇಳಿದಿಳಿದು ಬರುವ ಜಲಪಾತಗಳಿವೆ. ಹೊಲಗದ್ದೆಗಳಿವೆ. ಬೆಟ್ಟಗುಡ್ಡಗಳಿವೆ. ನಿಸರ್ಗದ ವಿಸ್ಮಯಗಳಿವೆ. ಜಾನಪದದ ಸೊಗಡು ಇದೆ. ಕಲೆ, ಸಂಸ್ಕೃತಿಯ ಕಂಪು ಪಸರಿಸಿದೆ. ವೈವಿಧ್ಯಮಯ ಜನಸಮುದಾಯಗಳಿವೆ; ಬಗೆ ಬಗೆ ಭಾಷೆಗಳಿವೆ....

ಆದರೆ... ಈ ಸಮೃದ್ಧಿಯೇ ಸಮಸ್ಯೆಯಾಗುವಂತಹ ವೈರುಧ್ಯ ಉತ್ತರ ಕನ್ನಡ ಜಿಲ್ಲೆಯದು. ಹೀಗಾಗಿ ಹೋರಾಟದ ಮೂಲಕವಾಗಿಯಾದರೂ ಒಂದಿಷ್ಟನ್ನು ಉಳಿಸಿ ಕೊಳ್ಳುವ, ತನ್ಮೂಲಕ ಬದುಕನ್ನು ಕಾಪಾಡಿಕೊಳ್ಳುವ ಯತ್ನ ಇಲ್ಲಿ ನಡೆದೇ ಇದೆ.

ಕಳೆದ ಶತಮಾನದ ಕೊನೆಯ ದಶಕದಲ್ಲಿಯೂ ಬೇಡ್ತಿ ಜಲವಿದ್ಯುತ್ ಯೋಜನೆಯ ಗುಮ್ಮ ಇಲ್ಲಿನವರನ್ನು ಕಾಡಿತ್ತು. ಆಗತಾನೇ ಪೀಠಾಧಿಕಾರ ವಹಿಸಿಕೊಂಡಿದ್ದ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳೇ ಬೇಡ್ತಿ ಯೋಜನಾ ವಿರೋಧಿ ಆಂದೋಲನದ ನೇತೃತ್ವ ವಹಿಸುವ ಮೂಲಕ ಹೋರಾಟಕ್ಕೆ ಹೊಸ ಕಳೆ, ರಭಸ ತಂದರು. ಐತಿಹಾಸಿಕ ಪಾದಯಾತ್ರೆ ನಡೆಯಿತು. ಸ್ವತಃ ಸ್ವಾಮೀಜಿಯೇ ಹೆಜ್ಜೆಹಾಕಿದರು; ಜನರು ಅನುಸರಿಸಿದರು. ಯೋಜನಾಸ್ಥಳವಾದ ಮಾಗೋಡಿನಲ್ಲಿ 30 ಸಾವಿರಕ್ಕೂ ಅಧಿಕ ಜನರ ಬೃಹತ್ ಸಮಾವೇಶ ನಡೆದು ಯೋಜನೆ ಬೇಡವೇ ಬೇಡವೆಂಬ ಧ್ವನಿ ಮಾರ್ದನಿಸಿತು. ಪರಿಣಾಮವಾಗಿ, ಸರ್ಕಾರ ಆಗ ಮುಂದಕ್ಕೆ ಹೆಜ್ಜೆ ಇಡಲಿಲ್ಲ. ಇದೀಗ ಮತ್ತೊಮ್ಮೆ ಬೇಡ್ತಿ ಯೋಜನೆ ಜನರೆದುರು ಬಂದು ನಿಂತಿದೆ. ಯಲ್ಲಾಪುರದ ಬೇಡ್ತಿ ನದಿಯಿಂದ ಹಾಗೂ ಶಿರಸಿ ತಾಲೂಕಿನ ಪಟ್ಟಣದ ಹೊಳೆ, ಶಾಲ್ಮಲಾ ನದಿಯಿಂದ ಕಾಲುವೆ ಮುಖಾಂತರ ಹಾವೇರಿ ಮತ್ತಿತರ ಜಿಲ್ಲೆಗಳಿಗೆ ನೀರು ಸಾಗಿಸುವ ಯೋಜನೆ ಇದು. ನೀರಿನ ಅಗತ್ಯ ಇರುವ ಜಿಲ್ಲೆಗಳಿಗೆ ನೀರು ಪೂರೈಸುವುದರ ಬಗ್ಗೆ ಯಾರದ್ದೂ ತಕರಾರಿಲ್ಲ. ಅಷ್ಟಕ್ಕೂ ಅಲ್ಲಿನವರೂ ನಮ್ಮವರೇ. ಸುಸ್ಥಿರ ವಿಧಾನಗಳ ಮೂಲಕ ಅಲ್ಲಿನ ನೀರಿನ ಕೊರತೆ ಎದುರಿಸಲು ಸಾಧ್ಯವಿದೆ. ಆದರೆ, ಬೇಸಿಗೆಯಲ್ಲಿ ಈ ನದಿಗೇ ನೀರಿನ ತುಟಾಗ್ರತೆ ಆಗುತ್ತದೆ. ಇಲ್ಲದ ನೀರನ್ನು ಹೇಗೆ ಬೇರೆಡೆ ಒಯ್ಯುತ್ತೀರಿ ಎಂಬುದು ಪರಿಸರಪ್ರಿಯರ ಪ್ರಶ್ನೆ. ಲಾಗಾಯ್ತಿನಿಂದ ಬೇಡ್ತಿ ನದಿ ಕಣಿವೆಯನ್ನು ಲಕ್ಷಾಂತರ ಜನರು ಅವಲಂಬಿಸಿದ್ದಾರೆ. ಹೀಗಾಗಿ ಬೇರೆಡೆಗೆ ಒಯ್ಯಲು ಇದರಲ್ಲಿ ನೀರು ಇರುವುದಿಲ್ಲ. ಇದಲ್ಲದೆ, ಈ ಯೋಜನೆಯಿಂದ ಪರಿಸರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬುದು ಆಕ್ಷೇಪಕ್ಕೆ ಕಾರಣ. ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ಜೋಡಿಸುವ ಇನ್ನೊಂದು ಯೋಜನೆಯ ಪ್ರಸ್ತಾಪವೂ ಇದೆ. ಅಘನಾಶಿನಿ ಅಪರೂಪದ ಕಣಿವೆಯಾಗಿದ್ದು, ಈ ಯೋಜನೆ ಕೂಡ ದುಷ್ಪರಿಣಾಮ ಉಂಟುಮಾಡಲಿದೆ ಎಂದು ಪರಿಸರ ತಜ್ಞರು ಹೇಳುತ್ತಾರೆ.

ಇದೇ ವರ್ಷದ ಜನವರಿ 11ರಂದು ಬೇಡ್ತಿ-ಅಘನಾಶಿನಿ ಯೋಜನೆ ವಿರೋಧಿಸಿ ಶಿರಸಿಯಲ್ಲಿ ಬೃಹತ್ ಜನ ಸಮಾವೇಶ ನಡೆದಿತ್ತು. ಇದೀಗ ಮತ್ತೊಂದು ಹಂತದ ಹೋರಾಟಕ್ಕೆ ಸಜ್ಜಾಗಿದೆ. ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ರ್ಪಾನಲ್ಲಿ ಅಕ್ಟೋಬರ್ 10ರಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಇದಲ್ಲದೆ, ನವೆಂಬರ್ 3ರಂದು ಯಲ್ಲಾಪುರದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧತೆ ನಡೆದಿದೆ. ಅದೇ ಹೊತ್ತಿಗೆ, ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ಆಸಕ್ತಿ ತೋರಿ ಮುಂದಡಿ ಇಟ್ಟಿದೆ.

‘ನಾವು ಅಭಿವೃದ್ಧಿವಿರೋಧಿಗಳಲ್ಲ. ಅಗತ್ಯವಿರುವ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಮಲೆನಾಡಿನ ನದಿಯ ಹರಿಯುವ ದಿಕ್ಕು ಬದಲಿಸಿದರೆ ಅಪಾಯ ಎದುರಾಗಬಹುದು. ಬೇಸಿಗೆಯಲ್ಲಿ ಈ ನದಿಗಳಲ್ಲೇ ನೀರು ಬತ್ತಿಹೋಗುತ್ತದೆ’ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಸ್ವರ್ಣವಲ್ಲೀ ಶ್ರೀಗಳು ಸ್ಪಷ್ಟಪಡಿಸುತ್ತಾರೆ.

ಈ ನಡುವೆ, ಬೇಡ್ತಿ-ವರದಾ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು, ವಿಸ್ತ್ರತ ಯೋಜನಾ ವರದಿ (ಡಿಪಿಆರ್)ಯನ್ನು ಶೀಘ್ರದಲ್ಲಿ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸುವ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಸಭೆ ಕರೆಯಬೇಕೆಂದು ಆಗ್ರಹಿಸಿದ್ದಾರೆ.

ಸೀಬರ್ಡ್ ನೌಕಾನೆಲೆ ಯೋಜನೆ, ಕೈಗಾ ಅಣುವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ ಯೋಜನೆ, ಸೂಪಾ ಜಲವಿದ್ಯುತ್ ಯೋಜನೆ... ಹೀಗೆ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಾಗಿರುವ ಯೋಜನೆಗಳ ಯಾದಿ ದೀರ್ಘವಿದೆ. ಇದಕ್ಕೆಲ್ಲ ಸಾವಿರಾರು ಕುಟುಂಬಗಳ ಸ್ಥಳಾಂತರವಾಗಿದೆ. ಏನೇ ಪರಿಹಾರ ಕೊಡುತ್ತೇವೆ ಎಂದರೂ, ತಲೆತಲಾಂತರದಿಂದ ಬದುಕು ಕಟ್ಟಿಕೊಂಡ ಸ್ಥಳದಿಂದ ಮತ್ತೊಂದು ಕಡೆಗೆ ಹೋಗಿ ಮರಳಿ ಜೀವನವನ್ನು ರೂಪಿಸಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ಅಷ್ಟಕ್ಕೂ, ಎಷ್ಟೋ ಮಂದಿಗೆ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂಬ ದೂರುಗಳೂ ಇವೆ. ಉತ್ತರ ಕನ್ನಡ ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಆಗಬೇಕು ಎಂಬ ಕೂಗು ಬಹಳ ಹಿಂದಿನದು. ಅಂದರೆ, ಇಲ್ಲಿನ ನೆಲಕ್ಕೆ ಯೋಜನೆಗಳ ಭಾರವನ್ನು ಸಹಿಸುವ ಶಕ್ತಿಯಿದೆಯೇ ಎಂಬುದನ್ನು ಕಂಡುಕೊಳ್ಳುವುದು. ಅಂಥ ಸಮೀಕ್ಷೆ ಇನ್ನೂ ಆಗಿಲ್ಲ.

ಸಂಕಷ್ಟದ ಮಜಲು: ಯೋಜನೆಗಳಿಂದ ಕಾಡುನಾಶ, ಜನಜೀವನಕ್ಕೆ ತೊಂದರೆ ಇವೆಲ್ಲ ಒಂದೆಡೆಯಾದರೆ, ಈ ಅರಣ್ಯ ಜಿಲ್ಲೆಯ ಕೃಷಿಕರನ್ನು ಮತ್ತಷ್ಟು ಸಮಸ್ಯೆಗಳು ಮುತ್ತಿಕೊಂಡಿವೆ. ಕೃಷಿ ಕಾರ್ವಿುಕರ ಕೊರತೆ, ದುಬಾರಿ ವೆಚ್ಚ ಇತ್ಯಾದಿ ಹತ್ತೆಂಟು ತಾಪತ್ರಯಗಳಿಂದಾಗಿ ಕೃಷಿ ಮಾಡುವುದೇ ತ್ರಾಸದಾಯಕ ಆಗಿರುವಾಗ, ಗಾಯದ ಮೇಲೆ ಬರೆ ಎಂಬಂತೆ ಬೆಳೆಗಳಿಗೆ ಮಂಗ, ನವಿಲು ಇತ್ಯಾದಿ ಪ್ರಾಣಿಗಳ ಕಾಟ ಮಿತಿ ಮೀರಿದೆ. ಮಂಗನ ಹಾವಳಿಗೆ ತಡೆಹಾಕಲು ಹತ್ತೆಂಟು ಪ್ರಯೋಗಗಳು ನಡೆದರೂ ನಿರೀಕ್ಷಿತ ಫಲಿತಾಂಶ ಸಾಧ್ಯವಾಗಿಲ್ಲ. ಮನೆ ಆಸುಪಾಸಿನಲ್ಲಿ ಮನೆಖರ್ಚಿಗೆ ಸಾಕಾಗುವಷ್ಟು ತರಕಾರಿಗಳನ್ನು ಬೆಳೆಯುವುದು ಮಾಮೂಲಾಗಿತ್ತು. ಆದರೆ ಈಗ ಮೊದಲಿನ ಹಾಗೆ ಕಾಣಸಿಗದು. ಇನ್ನು, ಮುಂಚೆ ಅಡಿಕೆ ತೋಟದಲ್ಲಿ ಬಾಳೆ, ಏಲಕ್ಕಿ, ಕಾಳುಮೆಣಸು ಇರುತ್ತಿದ್ದವು. ಮಿಶ್ರ ಬೆಳೆಯಿಂದಾಗಿ ಒಂದಲ್ಲ ಒಂದು ಬೆಳೆ ಕೈಹಿಡಿಯುತ್ತಿತ್ತು. ಕೆಲ ರೈತರನ್ನು ಹೊರತುಪಡಿಸಿ ಈಗ ಹೆಚ್ಚಿನ ಕಡೆಗಳಲ್ಲಿ ತೋಟದಲ್ಲಿ ಅಡಿಕೆ ಮಾತ್ರ ಕಾಣುತ್ತದೆ. ಎಷ್ಟೋ ಕಡೆಗಳಲ್ಲಿ ಮನೆ ಬಳಕೆಗೂ ಬಾಳೆ, ಏಲಕ್ಕಿ ಇಲ್ಲದ ಪರಿಸ್ಥಿತಿ. ಅಡಿಕೆಗೆ ಎಲೆಚುಕ್ಕಿ ರೋಗ ನಿಧಾನವಾಗಿ ಪಸರಿಸುತ್ತಿದ್ದು, ತುತ್ತ-ಸುಣ್ಣ ಹೊಡೆಯುವುದು ಮಾತ್ರ ಸದ್ಯಕ್ಕೆ ಪರಿಹಾರವಾಗಿದ್ದು, ಇನ್ನೂ ನಿರ್ದಿಷ್ಟ ಔಷಧವನ್ನು ಕಂಡುಹಿಡಿಯಲಾಗಿಲ್ಲ. ಒಟ್ಟಿನಲ್ಲಿ, ಬೆಳೆ ರಕ್ಷಣೆಗೆ ಕಸರತ್ತು ನಡೆಸುವ ಜೊತೆಗೆ, ಯೋಜನೆಗಳಿಂದಾಗಿ ಕೃಷಿ ಜಮೀನು ಕಾಪಾಡಿಕೊಳ್ಳುವ ಸಂದಿಗ್ಧವೂ ಎದುರಾಗಿದೆ.

ಪಶ್ಚಿಮ ಘಟ್ಟದಲ್ಲಿ ಕಳವಳದ ಅಲೆ: ಇನ್ನೊಂದೆಡೆ, ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಸ್ತೂರಿರಂಗನ್ ವರದಿ ವಿಚಾರ ಈಗ ತೀವ್ರ ಚರ್ಚೆಯಲ್ಲಿದೆ. ಒಂದೊಮ್ಮೆ ವರದಿ ಜಾರಿಯಾದಲ್ಲಿ ತಮ್ಮ ಮನೆ, ಜಮೀನು ಏನಾದೀತೋ ಎಂಬ ಆತಂಕ, ಅನುಮಾನಗಳೂ ಜನರಲ್ಲಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ ಮುಂತಾದ ಜಿಲ್ಲೆಗಳು ಈ ವ್ಯಾಪ್ತಿಯಲ್ಲಿವೆ. ಈಗಾಗಲೇ ಆರು ಬಾರಿ ಕೇಂದ್ರ ಸರ್ಕಾರವು ಕಸ್ತೂರಿರಂಗನ್ ವರದಿ ಶಿಫಾರಸಿನ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆ ಹೊರಡಿಸಿದ್ದು, ಈಗ ಏಳನೇ ಸಲ ಅಧಿಸೂಚನೆ ಹೊರಡಿಸಿ, ಅದಕ್ಕೆ ಆಕ್ಷೇಪಣೆ ಸಲ್ಲಿಸುವ ಅವಧಿ ಕೊನೆಗೊಂಡಿದೆ. ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಈ ವರದಿಯ ಯಥಾವತ್ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದು, ವಿಧಾನಮಂಡಲ ಅಧಿವೇಶನದಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಭೌತಿಕ ಸಮೀಕ್ಷೆ ನಡೆಸುವ ಬಗ್ಗೆಯೂ ತೀರ್ವನವಾಗಿದ್ದು, ಅಲ್ಲಿವರೆಗೆ ಈ ವರದಿಗೆ ಸಂಬಂಧಿಸಿ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕಸ್ತೂರಿರಂಗನ್ ವರದಿಯಲ್ಲಿ ನ್ಯೂನತೆಗಳನ್ನು ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಕೂಡ ಸದನ ನಿರ್ಣಯಿಸಿದೆ.

ಭೌತಿಕ ಸಮೀಕ್ಷೆ ನಡೆಸಿದರೆ ಜನವಸತಿ, ಅರಣ್ಯ ಗಡಿ, ಪರಿಸರ ಸೂಕ್ಷ್ಮ ಪ್ರದೇಶಗಳು, ಕೃಷಿ ಚಟುವಟಿಕೆ ಪ್ರದೇಶಗಳನ್ನು ಸರ್ವೆ ನಂಬರ್ ಪ್ರಕಾರ ಅಳತೆ ಮಾಡಿ ಗುರುತಿಸಲು ಸಹಾಯವಾಗುತ್ತದೆ. ಕೇರಳದಲ್ಲಿ ಇಂಥ ಭೌತಿಕ ಸಮೀಕ್ಷೆ ನಡೆಸಲಾಗಿದೆ. ಇದರಿಂದಾಗಿ ಅಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್​ಎ) ವ್ಯಾಪ್ತಿಯು 13,108 ಚದರ ಕಿಲೋಮೀಟರ್​ನಿಂದ 9,993 ಚದರ ಕಿಲೋಮೀಟರ್​ಗೆ ತಗ್ಗಿತು. ಹಾಗಂತ ಅಲ್ಲಿ ಪರಿಸರ ಸಂರಕ್ಷಣೆ ಪರಿಕಲ್ಪನೆಯನ್ನು ಪೂರ್ತಿಯಾಗಿ ಅವಗಣನೆ ಮಾಡಲಿಲ್ಲ. ಬದಲಿಗೆ ಒಂದು ಮಧ್ಯಮಮಾರ್ಗದ ಹುಡುಕಾಟ ನಡೆಯಿತು. ಅರಣ್ಯ, ಜೀವ ವೈವಿಧ್ಯ ಮತ್ತು ಜಲಮೂಲಗಳನ್ನು ರಕ್ಷಿಸಿಕೊಂಡು ಜನವಸತಿ ಪ್ರದೇಶ, ಕೃಷಿ ಕ್ಷೇತ್ರ ಮತ್ತು ತೋಟಗಳನ್ನು ಇಎಸ್​ಎ ವ್ಯಾಪ್ತಿಯಿಂದ ಹೊರಗೆ ಇಡಲಾಯಿತು. ಪಶ್ಚಿಮ ಘಟ್ಟವು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹರಡಿಕೊಂಡಿದೆ. ನಮ್ಮ ರಾಜ್ಯದ ಒಟ್ಟು ಅರಣ್ಯ ಪ್ರದೇಶದ ಪೈಕಿ ಶೇಕಡ 60 ಭಾಗ ಅಂದರೆ 44,448 ಚದರ ಕಿಲೋಮೀಟರ್ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಸೇರುತ್ತದೆ. ಪರಿಸರ ತಜ್ಞರ ಪ್ರಕಾರ, ಕಸ್ತೂರಿರಂಗನ್ ವರದಿಯಲ್ಲಿ ಗುರುತಿಸಿದ 20,668 ಚದರ ಕಿಲೋಮೀಟರ್ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸುಮಾರು 17 ಸಾವಿರ ಚದರ ಕಿಲೋಮೀಟರ್ ಪ್ರದೇಶವು ವನ್ಯಜೀವಿ ವಲಯ, ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ ಇತ್ಯಾದಿ ವ್ಯಾಪ್ತಿಯಲ್ಲಿ ಈಗಾಗಲೇ ಸೇರಿದೆ. ಉಳಿದ ಭಾಗಗಳಲ್ಲಿ ಜನವಸತಿ, ಕೃಷಿ ಇತ್ಯಾದಿ ಇವೆ. ಉಪಗ್ರಹ ಆಧಾರಿತ ಸಮೀಕ್ಷೆ ಕಾರಣಕ್ಕೆ ರಾಜ್ಯದ 1,449 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಸೇರಿವೆ. ಇದರಲ್ಲಿ ಜನವಸತಿ, ಕೃಷಿ ಜಮೀನು, ರಸ್ತೆ ಇತ್ಯಾದಿ ಮೂಲ ಸೌಲಭ್ಯ ಹಾಗೂ ಶಾಲೆ, ದೇವಸ್ಥಾನ ಮುಂತಾದವು ಕೂಡ ಸೇರಿಹೋಗಿವೆ. ಈ ಪ್ರದೇಶಗಳೆಲ್ಲ ಇಎಸ್​ಎ ವ್ಯಾಪ್ತಿಗೆ ಬಂದುಬಿಟ್ಟರೆ ಜನಜೀವನಕ್ಕೆ ತೊಂದರೆಯಾಗುತ್ತದೆ; ಬಹುಕಾಲದಿಂದ ಅರಣ್ಯ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡವರು ಈಗ ಎಲ್ಲಿಗೆ ಹೋಗಬೇಕು ಎಂಬುದು ಸಮಸ್ಯೆಯ ಮೂಲ. ಭೌತಿಕ ಸಮೀಕ್ಷೆಯು ಇದಕ್ಕೆ ಪರಿಹಾರ ದೊರಕಿಸಬಹುದು. ‘ಕಸ್ತೂರಿರಂಗನ್ ವರದಿ ಜಾರಿಯಾದರೆ, ಉತ್ತರ ಕನ್ನಡ ಜಿಲ್ಲೆಯ ಅರ್ಧದಷ್ಟು ಜನರು ಎಲ್ಲಿಗೆ ಹೋಗಬೇಕು? ಕುಮಟಾ, ಶಿರಸಿ, ಸಿದ್ದಾಪುರ, ಭಟ್ಕಳ ತಾಲೂಕುಗಳೇ ಉಳಿಯುವುದಿಲ್ಲ. ಇವೆಲ್ಲ ಬಫರ್ ಜೋನ್​ನಲ್ಲೇ ಬರುತ್ತವೆ’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಅವರು ಸದನದಲ್ಲಿ ಚರ್ಚೆ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದ್ದರು.

ಕೊನೇ ಮಾತು: ಒಟ್ಟಾರೆ, ಜನರೆದುರು ಸಂಕೀರ್ಣ ಸನ್ನಿವೇಶವಿದೆ. ಯೋಜನೆಯಿಂದ ಪರಿಸರ ರಕ್ಷಿಸಿಕೊಳ್ಳುವ ಜರೂರು ಒಂದೆಡೆಯಾದರೆ, ಭೌಗೋಳಿಕ ಸ್ಥಿತಿಗತಿ ಕಾರಣಕ್ಕೆ ಕಾಡು ಅಥವಾ ಕಾಡಿಗೆ ಹೊಂದಿಕೊಂಡು ರೂಪಿಸಿಕೊಂಡ ಬದುಕನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕಾದ ಅನಿವಾರ್ಯತೆ ಮತ್ತೊಂದೆಡೆ. ಅಪಾರ ಜೀವವೈವಿಧ್ಯದ ನೆಲೆಯಾದ ಪಶ್ಚಿಮ ಘಟ್ಟವೂ ಉಳಿಯಬೇಕು; ಜನರೂ ಬಾಳಿ ಬದುಕಬೇಕು ಎಂಬ ಸೂತ್ರವೇ ಪರಿಹಾರವಾದೀತು. ಅಭಿವೃದ್ಧಿ-ಪರಿಸರ ಸಮತೋಲನದ ಮಧ್ಯಮಮಾರ್ಗವನ್ನು ಶೋಧಿಸುವ ಸವಾಲನ್ನು ವರ್ತಮಾನ ಹೇಗೆ ಎದುರಿಸುತ್ತದೆ ಎಂಬುದರ ಮೇಲೆ ಭವಿಷ್ಯ ಅವಲಂಬಿತ.

-(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)