ರಾಜಕೀಯ ಇತಿಹಾಸದಲ್ಲಿ ಕೊಡೆಯ ಮಹತ್ವವನ್ನು ನೋಡುವುದಾದರೆ, ಅದಕ್ಕೆ ವಿಶೇಷ ಮೆರುಗು ದೊರೆಯುತ್ತದೆ.
ಪ್ರಾಚೀನ ಕಾಲದಲ್ಲಿ ರಾಜನ ಹಿಂದೆ ಛತ್ರ ಹಿಡಿದುಕೊಂಡವರಿರು ತ್ತಿದ್ದರು. ಯುದ್ಧ ವಿಜಯ ಅಥವಾ ಮೆರವಣಿಗೆಯಲ್ಲಿ ಬೃಹತ್ ಛತ್ರ ರಾಜನಿಗೆ ಗೌರವದ ಸ್ಥಾನಮಾನ ಒದಗಿಸುತ್ತಿತ್ತು. ರಾಜನನ್ನು ‘ಛತ್ರಪತಿ’ ಎಂದು ಕರೆಯುತ್ತಿದ್ದರು. ಅಂದರೆ, ಛತ್ರವಿರುವ ಅಧಿಪತಿ ಎಂಬರ್ಥ. ಅಧಿಕಾರ, ಶಕ್ತಿ, ಸಾಮ್ರಾಜ್ಯ ಎಲ್ಲಕ್ಕೂ ಛತ್ರವೇ ಒಂದು ಮೂರ್ತರೂಪವಾಗಿತ್ತು. ಸನಾತನ ಧರ್ಮದಲ್ಲಿ ಕೊಡೆ (ಛತ್ರ)ಗೆ ಪವಿತ್ರವಾದ ಸ್ಥಾನವಿದೆ. ಅದು ಭಕ್ತಿ, ರಕ್ಷಣೆಯ ಸಂಕೇತವಾಗಿದೆ. ದೇಗುಲಗಳಲ್ಲಿ ಛತ್ರದ ಆಚಾರವಿಚಾರಗಳಲ್ಲಿ ತನ್ನದೇ ಆದ ಪದ್ಧತಿ ಇದೆ. ಮೂರ್ತಿಯ ಮೇಲಿನ ಬೆಳ್ಳಿ ಅಥವಾ ಚಿನ್ನದಿಂದ ಮಾಡಿದ ಛತ್ರ ದೇವರ ಸ್ಥಾನಮಾನವನ್ನು ಎತ್ತಿ ಹಿಡಿಯುತ್ತದೆ.
ರಥೋತ್ಸವ ಮತ್ತು ಪಲ್ಲಕ್ಕಿ ಸೇವೆ ಉತ್ಸವ ಮೂರ್ತಿಯ ಮೇಲೆ ಹಿಡಿಯುವ ಬೃಹತ್ ಛತ್ರ ದೇವರ ಸನ್ನಿಧಿಯ ಹಿರಿಮೆ ಯನ್ನು ಪ್ರತಿಪಾದಿಸುತ್ತದೆ. ಜಾತ್ರೆ ಮತ್ತು ಶೋಭಾಯಾತ್ರೆಗಳಲ್ಲಿ ಛತ್ರ ಹಿಡಿಯುವವರನ್ನು ‘ಛತ್ರಧಾರಿ’ ಎಂದು ಕರೆಯಲಾಗುತ್ತದೆ. ಇದು ಗೌರವಪೂರ್ಣ ಸೇವೆಯೂ ಹೌದು. ನಮ್ಮ ಕ್ಷೇತ್ರದಲ್ಲಿ ಶ್ರೀ ಸ್ವಾಮಿಗೆ ನಿತ್ಯ ಮುಂಜಾನೆ ನೇತ್ರಾವತಿ ನದಿಯಿಂದ ತೀರ್ಥವನ್ನು ತರಲಾಗುತ್ತದೆ. ಈ ಸಂದರ್ಭದಲ್ಲಿ ಸಣ್ಣ ಛತ್ರ (ಕೊಡೆ) ಕಡ್ಡಾಯವಾಗಿ ಇರುವುದು ಸಂಪ್ರದಾಯವಾಗಿದೆ. ಹಾಗೆಯೇ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಉತ್ಸವ, ಬಲಿ ಸಂದರ್ಭದಲ್ಲಿ ತಾಳೆಗರಿಯ ಛತ್ರವನ್ನು ವಿಶೇಷವಾಗಿ ಬಳಸಲಾಗುತ್ತದೆ. ವರ್ಷಕ್ಕೊಮ್ಮೆ ತಾಳೆಗರಿಯಿಂದ ಹೊಸ ಛತ್ರಗಳನ್ನು ತಯಾರಿಸಿ, ದೀಪಾವಳಿಯ ಅಮಾವಾಸ್ಯೆಯಂದು ಸನ್ನಿಧಿಯ ಮುಂಭಾಗದಲ್ಲಿ ಪೂಜಿಸಿ ಶ್ರೀ ಸ್ವಾಮಿಯ ಸೇವೆಗೆ ಬಳಸಲಾಗುತ್ತದೆ.
ಮಠಾಧೀಶರು, ಪೀಠಾಧ್ಯಕ್ಷರು, ಸಂನ್ಯಾಸಿಗಳು ಮೆರವಣಿಗೆಯಲ್ಲಿ ಛತ್ರ ಹಿಡಿದು ನಡೆಯುವ ಸಂಪ್ರದಾಯವಿದೆ. ಇದು ಅವರ ಆಧ್ಯಾತ್ಮಿಕ ನಾಯಕತ್ವ ಮತ್ತು ಧರ್ಮಪಾಲನೆಯ ಸಂಕೇತವಾಗಿದೆ. ವಿವಾಹ ಸಂಸ್ಕಾರದಲ್ಲಿ ವರನ ಮೇಲೆ ಛತ್ರಿ ಹಿಡಿಯುವ ಸಂಪ್ರದಾಯವಿದ್ದು ಅದು ಆತನಿಗೆ ಕೊಡುವ ಗೌರವವಾಗಿದೆ. ಹೀಗೆ ಮನೆ, ದೇವಾಲಯ, ಮೆರವಣಿಗೆ, ಯುದ್ಧರೂಪಕಗಳಲ್ಲೂ, ಮೂರ್ತಿಗಳ ಅಲಂಕರಣದಲ್ಲಿಯೂ ಕೊಡೆ ವಿಶೇಷ ಪಾತ್ರ ವಹಿಸಿದೆ. ಛತ್ರವಾಗಿ ಸಂಸ್ಕೃತಿ, ಗೌರವದ ಪ್ರತಿಷ್ಠೆಯ ಸಂಕೇತವಾದರೆ ಕೊಡೆಯಾಗಿ ಬದುಕಿನ ಸರಳತೆಯ ಭಾಗವಾಗಿದೆ.
ಇತಿಹಾಸ ಗಮನಿಸಿದರೆ ಕೊಡೆ ಅಥವಾ ಛತ್ರಿ ಮಾನವ ಜೀವನದಲ್ಲಿ ಅತ್ಯಂತ ಹಳೆಯ ಮತ್ತು ಉಪಯುಕ್ತ ಸಾಧನಗಳಲ್ಲಿ ಒಂದಾಗಿದೆ. ಕೊಡೆಯ ಮೊಟ್ಟಮೊದಲ ಬಳಕೆಯ ದಾಖಲೆಗಳು ಸುಮಾರು 4000 ವರ್ಷ ಹಳೆಯದು. ಈಜಿಪ್ಟ್, ಅಸ್ಸೀರಿಯಾ ಮತ್ತು ಚೀನಾಗಳಲ್ಲಿ ಕೊಡೆಯನ್ನು ಪ್ರಾರಂಭದಲ್ಲಿ ರಾಜ್ಯಾಧಿಕಾರ, ಗೌರವ ಸಂಕೇತವಾಗಿ ಬಳಸಲಾಗುತ್ತಿತ್ತಂತೆ. ತುಳುನಾಡು (ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು) ಮಳೆಗಾಲದ ಸಂಸ್ಕೃತಿಯಲ್ಲಿ ಕೊರಂಬು(ಗೊರಬು) ಹೆಸರಿನ ಪಾರಂಪರಿಕ ಮಳೆಹೊದಿಕೆ ಗ್ರಾಮೀಣ ಪ್ರದೇಶಗಳಲ್ಲಿ ಶತಮಾನಗಳಿಂದ ಬಳಕೆಯಾಗುತ್ತಿತ್ತು. ಕಾಲಕ್ರಮೇಣ ಇದೇ ಉಪಕರಣ ಕೊಡೆ (ಛತ್ರಿ) ರೂಪಕ್ಕೆ ಬದಲಾಯಿತು.
ಕೊರಂಬು ಸಾಮಾನ್ಯವಾಗಿ ಹುಲ್ಲು, ತಾಳೆ/ಕಲ್ಪವೃಕ್ಷದ ಎಲೆ, ಅಥವಾ ನಾರು ಬಳಸಿ ತಯಾರಾಗುತ್ತಿತ್ತು. ಕೃಷಿಕರು, ಬೆಟ್ಟ-ಕಾಡು ಪ್ರದೇಶದ ಜನ, ಮೀನುಗಾರರು ಇದನ್ನು ಬಳಸುತ್ತಿದ್ದರು. ಕೊರಂಬುಗಳು ಮಳೆಗಾಲದ ಶ್ರಮಜೀವಿಗಳಿಗೆ ಅತ್ಯಂತ ಅನುಕೂಲಕರವಾಗಿದ್ದವು. ಇಂದಿಗೂ ತುಳುನಾಡಿನ ಕೆಲವು ಹಳ್ಳಿ ಪ್ರದೇಶಗಳಲ್ಲಿ ಬಿತ್ತನೆ, ಕೊಯ್ಲು ಹಾಗೂ ಜಾತ್ರೆನೇಮ ಸಂದರ್ಭಗಳಲ್ಲಿ ಅರಣ್ಯ/ಬೆಟ್ಟ ಪ್ರದೇಶದ ಜನರಲ್ಲಿ ಕೊರಂಬು ಬಳಕೆ ಕಾಣಬಹುದು. ಇವು ತುಳು ಸಂಸ್ಕೃತಿಯ ಪರಂಪರೆಯ ದ್ಯೋತಕವಾಗಿ ಉಳಿದಿವೆ.
ಪುರಾಣೇತಿಹಾಸದಲ್ಲಿ ಕೊಡೆಯ ಬಗ್ಗೆ ಉಲ್ಲೇಖವಿದೆ. ಮಹಾವಿಷ್ಣು ವಾಮನನ ಅವತಾರವೆತ್ತಿ ಬಲಿ ಚಕ್ರವರ್ತಿಯ ಬಳಿ ದಾನ ಕೇಳಲು ಬರುವಾಗ ಕೈಯಲ್ಲಿ ಛತ್ರ ಇರುವ ಬಗ್ಗೆ ಕಥೆಯಿದೆ. ಈ ಛತ್ರವು ಆತನ ವರ್ಚಸ್ಸು, ಬ್ರಹ್ಮಚರ್ಯದ ವ್ರತಪಾಲನೆ ಜೊತೆ ಅಧರ್ಮದ ಕಂಟಕವನ್ನು ದೂರ ಮಾಡಿ ಧರ್ಮಕ್ಕೆ ರಕ್ಷಣೆಯ ನೀಡುವ ಸಂಕೇತವೆಂದು ಪರಿಗಣಿಸಬಹುದಾಗಿದೆ. ಬಲಿಯ ಯಾಗದಲ್ಲಿ ತ್ರಿಲೋಕವನ್ನೂ ದಾನ ಪಡೆದ ವಾಮನ ಧರ್ಮದ ದಿವ್ಯ ನೆರಳನ್ನು ಒದಗಿಸಿದ ಎನ್ನುವುದನ್ನು ಛತ್ರ ಪ್ರತಿಬಿಂಬಿಸುತ್ತದೆ.
ಇನ್ನು, ಕೃಷ್ಣನ ಜನನದ ವೇಳೆ ಧಾರಾಕಾರ ಮಳೆ ಬರುತ್ತಿದ್ದುದರಿಂದ ಕಂಸನಿಂದ ಯಶೋದಾನಂದನನನ್ನು ರಕ್ಷಿಸುವ ಸಲುವಾಗಿ ಗೋಕುಲಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಆದಿಶೇಷನೇ ತನ್ನ ಹೆಡೆಯನ್ನು ಬಿಚ್ಚಿ ಕೊಡೆಯನ್ನಾಗಿಸಿ ಮಳೆಯಿಂದ ಶಿಶು ಶ್ರೀಕೃಷ್ಣನನ್ನು ರಕ್ಷಿಸಿದನು. ಈ ಕಥೆಯಲ್ಲಿ ಹೆಡೆಯನ್ನು ಕೊಡೆಯಾಗಿ ಪರಿರ್ತಿಸಿ ಆಧ್ಯಾತ್ಮಿಕ ಕವಚವಾಗಿಸಿ ರಕ್ಷಣೆ ಒದಗಿಸಿದ ದೃಷ್ಟಾಂತ ನಮಗೆ ಕಾಣುತ್ತದೆ. ಹೀಗೆ ಕೊಡೆ ಎನ್ನುವುದು ರಾಜವಂಶಗಳಲ್ಲಿ ರಾಜಾಧಿಕಾರ, ಪ್ರತಿಷ್ಠೆಯ ಚಿಹ್ನೆ, ಹಿರಿಯರಿಗೆ, ಗುರುಗಳಿಗೆ ಗೌರವದ ಸಂಕೇತ, ದೇವಾಲಯ ಉತ್ಸವಗಳಲ್ಲಿ ಅವಿಭಾಜ್ಯ ಅಂಗವಾಗಿ, ಜನಜೀವನದಲ್ಲಿ ನೆರಳಿನ ರೂಪದ ರಕ್ಷಣೆ ಒದಗಿಸುತ್ತದೆ. ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ತನ್ನದೇ ಪ್ರಾತಿನಿಧ್ಯವನ್ನು ಹೊಂದಿರುವ ಕೊಡೆ ನಮ್ಮ ಸಂಪ್ರದಾಯದ ವಿಶಾಲತೆಗೆ ಕೈಗನ್ನಡಿಯಾಗಿದೆ.
ಇನ್ನು ಕೊಡೆ ಎಂದರೆ ಮಕ್ಕಳ ಪಾಲಿಗೆ ಒಂದು ಸಂಭ್ರಮ. ಮಕ್ಕಳು ಮೊದಲಿಗೆ ಕೊಡೆಯನ್ನು ನೋಡಿದಾಗ ಅವರ ಕಣ್ಣಲ್ಲಿ ಮೂಡುವ ಕೌತುಕ, ಕೆಂಪು, ಹಸಿರು, ನೀಲಿ, ಹಳದಿ ಬಣ್ಣಗಳ ಕೊಡೆಗಳ ಮೇಲಿನ ಅವರ ಆಸೆ, ಕೊಡೆ ಮಡಚಿ ತೆರೆಯುವ ವಿಧಾನ ಎಲ್ಲವೂ ಸೇರಿ ಅವರ ಕಲ್ಪನೆಗೆ ಹೊಸ ಹೊಳಪು ಕೊಡುತ್ತವೆ. ಇಂದಿನ ಮಾರುಕಟ್ಟೆಯಲ್ಲಿ ದೊರೆಯುವ ಮಕ್ಕಳ ಕೊಡೆಗಳು ಅವರ ಬಾಲ್ಯಕ್ಕೆ ಹೊಸ ಬಣ್ಣಗಳನ್ನೇ ತುಂಬುತ್ತಿವೆ. ಗಿಳಿ ಬಣ್ಣಗಳು, ಕಾರ್ಟೂನ್ ಪಾತ್ರಗಳ ಮುದ್ರಣ, ಹೂವಿನ ವಿನ್ಯಾಸಗಳು, ಪಾರದರ್ಶಕ ಪ್ಲಾಸ್ಟಿಕ್ ಕೊಡೆಗಳು ಇವೆಲ್ಲವೂ ಮಕ್ಕಳಿಗೆ ಕೇವಲ ಉಪಯೋಗದ ವಸ್ತುವಲ್ಲ, ಅದು ಒಂದು ಆಟಿಕೆ, ಗೆಳೆಯ. ಕೆಲವೊಮ್ಮೆ ಅದೇ ಅವರ ಆಸ್ತಿಯಾಗಿ ಯಾರಿಗೂ ಅದನ್ನು ಮುಟ್ಟಲೂ ಬಿಡುವುದಿಲ್ಲ.
ಕೊಡೆಗಳನ್ನು ಮಕ್ಕಳು ಗಾಳಿ, ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮಾತ್ರ ಬಳಸುವುದಿಲ್ಲ. ಬದಲಾಗಿ ಅವರಿಗೆ ಅದೊಂದು ಆಟಿಕೆಯೂ ಹೌದು. ಮಕ್ಕಳು ಕೊಡೆಯನ್ನು ಬಿಗಿಯಾಗಿ ಹಿಡಿದು ತಾವು ತಿರುಗುತ್ತಾ ನೃತ್ಯ ಮಾಡುವುದು ಸಾಮಾನ್ಯ. ಬಣ್ಣ ಬಣ್ಣದ ಕೊಡೆ ತಿರುಗುವಾಗ ಅದು ಮಿನುಗುವ ಚಕ್ರದಂತೆ ಕಾಣುತ್ತದೆ. ಕೊಡೆಯ ಹಿಡಿ ಹಿಡಿದು ಕುದುರೆಯಂತೆ ಓಡುವುದು ಮಕ್ಕಳಿಗೆ ತುಂಬಾ ಇಷ್ಟವಾದ ಆಟವೂ ಹೌದು. ಕೆಲವೊಮ್ಮೆ ಜಗಳವಾದಾಗ ಕೊಡೆಯನ್ನು ಅಸ್ತ್ರ›ವನ್ನಾಗಿಸುವುದೂ ಉಂಟು.
ಹೆಚ್ಚಿನವರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಾಗ ಕೊಡೆಗೆ ಸಂಬಂಧಿಸಿದ ಹಲವು ಸೃ್ಮಗಳು ಮಿಂಚುತ್ತವೆ. ಹೊಸ ಕೊಡೆ ಸಿಕ್ಕ ಖುಷಿ, ಯಾರಾದರೂ ಕೊಡೆ ಕೊಟ್ಟಾಗ ಅನುಭವಿಸಿದ ಹೆಮ್ಮೆ, ಮಳೆ ಬರುವ ಮುನ್ನ ಕೊಡೆಯನ್ನು ಮರೆತು ಶಾಲೆಗೆ ಹೋಗಿ ಒದ್ದೆಯಾದದ್ದು.. ಹೀಗೆ ಹಲವು ಕಥೆಗಳು. ಕೊಡೆ ಕಳವಾದಾಗ ಆದ ಸಿಟ್ಟು ವಯಸ್ಸಾದರೂ ಮರೆಯಲಾಗದ ನವಿರಾದ ನೆನಪುಗಳಾಗುತ್ತವೆ. ಸಾಮಾನ್ಯವಾಗಿ ಬಾಲ್ಯದಲ್ಲಿ ಅಜ್ಜನ ಕೊಡೆ ಬಗ್ಗೆ ಮಕ್ಕಳಿಗೆ ಹೆಚ್ಚು ಕೌತುಕ. ಅದೊಂದು ಬೇರೆಯೇ ಜಾಗದಲ್ಲಿರುತ್ತದೆ. ಅದು ಸುಲಭದಲ್ಲಿ ಎಟುಕುವುದಿಲ್ಲ, ದಕ್ಕುವುದಿಲ್ಲ. ಅಜ್ಜನ ಕೊಡೆಯ ಮಹತ್ವವೇ ಅಪರಿಮಿತವಾದುದು.
ಅಜ್ಜನ ಕೊಡೆ ಎಂಬುದು ಹಿರಿಯರಿಗೆ ಕೇವಲ ನೆರಳು ನೀಡುವ ಸಾಧನವಲ್ಲ; ಅದು ಅವರ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಸಂಕೇತ. ಅದನ್ನು ಮಕ್ಕಳಿಗೆ ಮುಟ್ಟುವುದಕ್ಕೆ ಅಷ್ಟು ಸುಲಭವಾಗಿ ಅಜ್ಜನೂ ಬಿಡುವುದಿಲ್ಲ. ಅದು ಅವರ ಅನುಭವ ಹಾಗೂ ಜ್ಞಾನಕ್ಕೆ ನೀಡುವ ಮಾನ್ಯತೆಯ ಪ್ರತೀಕ. ಹಾಗಾಗಿ ಅಜ್ಜನ ಕೊಡೆ ಯಾವತ್ತಿಗೂ ದೊಡ್ಡದೇ. ಶ್ರೀ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಸುರಕ್ಷಾ ಎಂಬ ಆರೋಗ್ಯ ವಿಮಾ ಸೌಲಭ್ಯವನ್ನು ಕೊಡೆ ಅರಳಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದ್ದು ಈಗಲೂ ನೆನಪಾಗುತ್ತದೆ. ಮನೆಯಲ್ಲಿ ಎಲ್ಲೋ ಮೂಲೆಯಲ್ಲಿರುವ ಕೊಡೆಯು ಮಳೆ ಬರುವಾಗ ಮಾತ್ರ ನೆನಪಾಗುತ್ತದೆ.
ಆಗ ಕೊಡೆ ಎಲ್ಲಿದೆ ಎಂದು ಹುಡುಕಿ ತೆಗೆದು, ಕೊಡೆ ಅರಳಿಸಿ ಮಳೆಯಿಂದ ಒದ್ದೆಯಾಗದಂತೆ ರಕ್ಷಣೆ ಪಡೆಯುತ್ತೇವೆ ಎಂಬ ಭಾವನೆಯಂತೆ ಶ್ರೀ ಕ್ಷೇತ್ರದ ಸುರಕ್ಷಾ ಸೌಲಭ್ಯವು ಅನಾರೋಗ್ಯ, ಅಪಘಾತಗಳಿಗೆ ಒಳಗಾದಾಗ ಆಪದ್ಬಾಂಧವನಂತೆ ಸಹಾಯಕ್ಕೆ ಒದಗಿ ಕುಟುಂಬದ ಆರ್ಥಿಕ ಹೊರೆಯನ್ನು ಇಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗೆಯೇ ಇದು ಸದಾಕಾಲ ನೆರಳಿನಂತೆ ಜೀವನ ಭದ್ರತೆಯನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ, ಆಸ್ಪತ್ರೆಯ ವೆಚ್ಚವನ್ನು ವಿಮೆಯ ಮೂಲಕ ಭರಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾದಾಗ ಚಿಕಿತ್ಸೆ ಪಡೆಯಲು ಸಾವಿರಾರು ರೂ.ಗಳಿಂದ ಲಕ್ಷ ರೂ. ವರೆಗೂ ಖರ್ಚಾಗುತ್ತದೆ. ಬಡವರಿಗೆ ಜೀವನ ನಡೆಸುವುದೇ ದುಸ್ತರವಾಗಿರು ವಾಗ ಅನಾರೋಗ್ಯದ ವೆಚ್ಚ ಭರಿಸುವುದು ಅಸಾಧ್ಯವೇ ಸರಿ.
ಈ ನಿಟ್ಟಿನಲ್ಲಿ ಸುರಕ್ಷಾ ಎಂಬ ವಿಮೆಯ ಕೊಡೆ ಫಲಾನುಭವಿಗಳಿಗೆ ಆರೋಗ್ಯ ಭದ್ರತೆ ಒದಗಿಸುತ್ತದೆ. ಹೀಗೆ ಕೊಡೆ ದೊಡ್ಡ ವಸ್ತುಗಳ ಪಟ್ಟಿ ಯಲ್ಲಿ ಸೇರದಿದ್ದರೂ, ಅದರ ಸ್ಥಾನಮಾನ ಉನ್ನತ. ಮನಸ್ಸಿಗೆ ಭದ್ರತೆ, ಸಮಾಜಕ್ಕೆ ಮೌಲ್ಯಇವೆಲ್ಲವನ್ನು ಒಟ್ಟಿಗೆ ಹೊತ್ತು ಸಾಗುವ ಪುಟ್ಟ ವಸ್ತು. ಕೊಡೆ ಎಲ್ಲರೊಳಗೂ ಒಂದಾಗಿ ಉಳಿದಿರುವ ವಸ್ತು. ಪ್ರತಿಯೊಬ್ಬರ ಜೀವನದ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಅದು ಪ್ರಸ್ತುತವಾಗುತ್ತದೆ. ಹೀಗಾಗಿ ಕೊಡೆ ಒಂದು ಸಾಂಸ್ಕೃತಿಕ ಸಂಕೇತವೂ, ಮಾನವೀಯ ಮೌಲ್ಯಗಳ ಪ್ರತಿರೂಪವೂ ಆಗಿದೆ. ಭಾವ-ಬಂಧವನ್ನು ಬೆಸೆಯುವ ಸಾಧನವೂ ಆಗಿದೆ. ಅದು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೆ ಮತ್ತು ಲೋಕಕ್ಕೆ ನೆರಳಾಗುವ ಧರ್ಮದ ಆವರಣವೂ ಹೌದು. ಕೊಡೆಯೊಂದಿಗಿನ ಬೆಸುಗೆ ಜೀವನಪರ್ಯಂತ ಶಾಶ್ವತವಾದುದು ಹಾಗೂ ಸದಾ ಸ್ಮರಣೀಯವಾದುದು.