ಶರಣರ ಗುಣವನು ಮರಣದಲಿ ನೋಡಾ... 
ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಡೆ

ಶರಣರ ಗುಣವನು ಮರಣದಲಿ ನೋಡಾ...

ವಿಶ್ವಾಸ್​ ಎನ್​ ಜೋಳದಾಳು
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು).
ಜೀವಂತವಿರುವಾಗ ತನ್ನ ವ್ಯಕ್ತಿತ್ವದಿಂದ ಒಳ್ಳೆಯ ಅಥವಾ ಕೆಟ್ಟ ಹೆಸರು ಗಳಿಸಿದರೂ ಸತ್ತ ಮೇಲೆ ಎಲ್ಲರೂ ಶವ ಎಂದೇ ಕರೆಸಿಕೊಳ್ಳುವುದು. ಅದನ್ನೇ ‘ದೇಹದಲ್ಲಿ ಆತ್ಮ ಅಥವಾ ಪ್ರಾಣವಿದ್ದರೆ ಶಿವ ಇಲ್ಲವಾದರೆ ಶವ’ ಎಂದು ಹೇಳಿರುವುದು. ವ್ಯಕ್ತಿ ಎಷ್ಟೇ ಶ್ರೇಷ್ಠನಾಗಿದ್ದರೂ, ಧನಿಕನಾಗಿದ್ದರೂ, ದಯಾಳು ಅಥವಾ ಕ್ರೂರಿಯಾಗಿದ್ದರೂ ಉಸಿರು ನಿಲ್ಲಿಸಿದ ಮೇಲೆ ಅದು ಬರೀ ಶವ ಅಷ್ಟೇ. ಎಷ್ಟೇ ಗೌರವಯುತ ಮನುಷ್ಯನಾದರೂ ‘ಹೆಣ ಬಂತಾ, ಹೆಣ ತೆಗೆಯೋದು ಎಷ್ಟು ಗಂಟೆ ಆಗುತ್ತೆ?’ ಅಂತ ಕೇಳುತ್ತಾರೆಯೇ ಹೊರತು ‘ಭೀಮಪ್ಪ ಬಂದ್ರಾ, ರಾಮಪ್ಪ ಬಂದ್ರಾ’ ಎಂದೆಲ್ಲ ಹೆಸರು ಕರೆದು ಯಾರೂ ಕೇಳೋದಿಲ್ಲ.
ನಮ್ಮ ನಾಡಿನ ಸನಾತನ ಧರ್ಮವಿರಲಿ ಅಥವಾ ಜಗತ್ತಿನೆಲ್ಲೆಡೆ ಇರುವ ಬೇರೆ ಯಾವುದೇ ಧರ್ಮವಿರಲಿ ಸತ್ತ ಮೇಲೆ ಮೃತದೇಹಕ್ಕೆ ಅಂತಿಮ ಸಂಸ್ಕಾರಗಳನ್ನು ನಡೆಸುತ್ತಾರೆ. ಇದು ಕೇವಲ ಒಂದು ವಿಧಿ ವಿಧಾನವಲ್ಲ; ಪ್ರತಿಯೊಂದು ಧರ್ಮದ ತತ್ವ, ಆಚರಣೆಯೂ ಆಗಿದೆ. ಸತ್ತ ಮೇಲೆ ಸ್ವರ್ಗ ಸೇರುತ್ತಾರೆ, ಮೋಕ್ಷ ಪಡೆಯುತ್ತಾರೆ ಎಂಬ ನಂಬಿಕೆ ಕೆಲವರದ್ದು. ಆದರೆ ಪುನರ್ಜನ್ಮ ಅಥವಾ ಬೇರೆ ಜೀವಿಯಾಗಿ ಹುಟ್ಟುತ್ತಾರೆ ಎಂಬ ನಂಬಿಕೆಗಳು ಹಲವು ಧರ್ಮಗಳಲ್ಲಿ ಇವೆ. ಈ ಮಾನವ ಜನ್ಮವನ್ನು ಪೂರೈಸಿ ಅಗಲಿದ ಆತ್ಮಕ್ಕೆ ಸದ್ಗತಿ ಕೋರಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಕುಟುಂಬಿಕರು, ಬಂಧು ಬಳಗದವರು ಸೇರಿ ಮಾಡುತ್ತಾರೆ. ಸನಾತನ ಧರ್ಮದಲ್ಲಿ ಸಾಮಾನ್ಯವಾಗಿ ಶವವನ್ನು ಅಗ್ನಿಯಲ್ಲಿ ದಹನ ಮಾಡುವ ಪದ್ಧತಿ ಇದೆ. ಮಾನವ ದೇಹವು ಪಂಚಭೂತಗಳಿಂದ ನಿರ್ಮಿತವಾಗಿದೆ ಎಂಬ ನಂಬಿಕೆಯಿಂದ, ದಹನದ ಮೂಲಕ ಅದು ಮತ್ತೆ ಪ್ರಕೃತಿಯಲ್ಲೇ ಲೀನವಾಗುತ್ತದೆ ಎಂದು ಭಾವಿಸಲಾಗುತ್ತದೆ. ದಹನದ ನಂತರ ಅಸ್ಥಿಗಳನ್ನು ಪವಿತ್ರ ನದಿಗಳಲ್ಲಿ ವಿಸರ್ಜಿಸಿ ಪಿಂಡ ಪ್ರದಾನ ಮುಂತಾದ ವಿಧಿಗಳನ್ನು ನೆರವೇರಿಸಲಾಗುತ್ತದೆ. ಇನ್ನು ಕೆಲವರು ಶವವನ್ನು ಹೂಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶವ ಹೂಳಲು ಸ್ಥಳಾವಕಾಶದ ಕೊರತೆ ಇರುವುದರಿಂದ ಹೆಚ್ಚಾಗಿ ದಹನ ಪ್ರಕ್ರಿಯೆಯನ್ನೇ ನಡೆಸುತ್ತಾರೆ.
ಆದರೆ ದಶಕಗಳ ಹಿಂದೆ ಈ ಶವ ದಹನ ಕಾರ್ಯವು ಬಹಳ ಕಷ್ಟಕರವಾಗಿತ್ತು. ತಮ್ಮ ಬದುಕಿನ ಯಾತ್ರೆ ಮುಗಿಸಿ ಹೊರಟವರಿಗೆ ಸೂಕ್ತ ರೀತಿಯಲ್ಲಿ ಅಂತಿಮ ಸಂಸ್ಕಾರ ಮಾಡಬೇಕೆಂಬ ಇಚ್ಛೆ ಅವರ ಕುಟುಂಬದವರು, ಬಂಧುವರ್ಗದವರಿಗೆ ಇರುತ್ತದೆ. ಈ ಕಾರ್ಯವು ಸರಿಯಾಗಿ ನೆರವೇರದೆ ಹೋದರೆ ಮೃತರಿಗೆ ಮೋಕ್ಷ ಪ್ರಾಪ್ತಿಯಾಗದು, ಸದ್ಗತಿ ದೊರೆಯದು ಎಂಬ ಭಾವನೆ ಬಹುತೇಕರಲ್ಲಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಮೃತರನ್ನು ತಮ್ಮ ಜಮೀನಿನ ಒಂದು ಮೂಲೆಯಲ್ಲಿ ದಹನ ಮಾಡಿ ಕ್ರಿಯಾವಿಧಿಗಳನ್ನು ಪೂರೈಸುತ್ತಿದ್ದರು. ಆದರೆ ನಗರ, ಪಟ್ಟಣ ಮತ್ತು ಸ್ಥಳಾವಕಾಶದ ಕೊರತೆ ಇರುವ ಪ್ರದೇಶಗಳಲ್ಲಿ ಶವ ಸಂಸ್ಕಾರ ಮಾಡುವುದೇ ಜನರಿಗೆ ದೊಡ್ಡ ತಲೆನೋವಾಗಿತ್ತು. ಖಾಸಗಿ ಜಾಗದಲ್ಲಿ ಶವ ಸುಡಲು ಒಪ್ಪುವುದಿಲ್ಲ, ಸರಕಾರಿ ಜಾಗದಲ್ಲಿ ಮಾಡುವಾಗ ಆಕ್ಷೇಪಣೆ ಬರುತ್ತದೆ. ಶವ ಸುಡಲು ಜಾಗ ತೋರಿಸಿ ಎಂದು ಪಂಚಾಯತ್ ಎದುರು ಹೆಣ ಇಟ್ಟು ಪ್ರತಿಭಟನೆ ನಡೆಸಿದ ಸನ್ನಿವೇಶಗಳೂ ಇವೆ.
ಕೆಲವು ಕಡೆ ಪಂಚಾಯತ್ ವತಿಯಿಂದ ಸ್ಮಶಾನಕ್ಕೆ ಜಾಗಗಳನ್ನು ಕಾಯ್ದಿರಿಸಲಾಗಿದ್ದರೂ ಅಲ್ಲಿ ಶವ ದಹನಕ್ಕೆ ಬೇಕಾದ ಯಾವುದೇ ವ್ಯವಸ್ಥೆ ಇರಲಿಲ್ಲ. ಇನ್ನು ಕೆಲವೆಡೆಗಳಲ್ಲಿ ಶವ ದಹನ ವ್ಯವಸ್ಥೆ ಇದ್ದರೂ ಅದರ ಸಮೀಪ ಸುಳಿಯಲು ಕೂಡ ಸಾಧ್ಯವಿಲ್ಲದಾಗಿತ್ತು. ಗಿಡ, ಪೊದೆಗಳಿಂದ ಆವೃತವಾಗಿ ಸ್ಮಶಾನಕ್ಕೆ ಕಾಲಿಡಲೂ ಭಯವಾಗುತ್ತಿತ್ತು. ಇನ್ನು ಕೆಲವು ಕಡೆ ಮಳೆಗಾಲದಲ್ಲಿ ಕೊಡೆ ಹಿಡಿದುಕೊಂಡು ಮಳೆ ಸುರಿಯುವುದು ನಿಲ್ಲುವವರೆಗೂ ಕಾದು ಕುಳಿತು ಅನಂತರ ಶವ ದಹನ ಮಾಡಬೇಕಾದ ಸ್ಥಿತಿ. ಮತ್ತೆ ಕೆಲವು ಕಡೆ ಶವಕ್ಕೆ ಬೆಂಕಿ ಕೊಟ್ಟು ಸ್ವಲ್ಪ ಸಮಯದ ಬಳಿಕ ಜನರು ಹಿಂದಿರುಗಿದ ಮೇಲೆ ನಾಯಿ, ನರಿಗಳು ಬಂದು ಹೆಣಗಳನ್ನು ಎಳೆದೊಯ್ಯುವುದು, ಮಳೆಗಾಲದಲ್ಲಿ ಮಳೆ ಬಂದು ಶವ ಸಂಪೂರ್ಣ ದಹನವಾಗದೇ ಉಳಿಯುವುದು ಇಂತಹ ಅನೇಕ ಸಮಸ್ಯೆಗಳು ಇದ್ದವು. ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದ, ಅಲ್ಲಲ್ಲಿ ದುಃಸ್ಥಿತಿಯಲ್ಲಿ ಇದ್ದ ಹಿಂದೂ ರುದ್ರಭೂಮಿ (ಸ್ಮಶಾನ) ಅಭಿವೃದ್ಧಿಗೊಳಿಸುವ ಕಾರ್ಯವನ್ನು ನಾವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 1998ರಲ್ಲಿ ಆರಂಭಿಸಿದೆವು. ಇದಕ್ಕೆ ಸರಕಾರದ ಹಾಗೂ ಸಮುದಾಯದ ಸಹಭಾಗಿತ್ವವೂ ದೊರೆಯಿತು. ರುದ್ರ ಎಂದರೆ ದುಃಖವನ್ನು ಕರಗಿಸುವವನು ಎಂದು ಅರ್ಥ. ಒಂದರ್ಥದಲ್ಲಿ ಮೃತರ ಶವ ದಹನ ಮಾಡಲು ಸಂಕಟಪಡುವವರ ಕಣ್ಣೀರು ಒರೆಸಲು ಈ ಮೂಲಕ ಮುಂದಾದೆವು.
ನಾವೆಲ್ಲ ಆರಾಧಿಸುವ ಎಲ್ಲ ದೇವಾನುದೇವತೆಗಳು ಸರ್ವಾಭರಣಗಳಿಂದ ಶೋಭಿತಗೊಂಡರೆ ಶಿವನು ಕೊರಳಲ್ಲಿ ಹಾವನ್ನೇ ಆಭರಣವನ್ನಾಗಿಸಿಕೊಂಡ. ಆನೆಯ ಚರ್ಮವನ್ನೇ ಹೊದ್ದುಕೊಂಡ. ಜತೆಗೆ ಸ್ಮಶಾನವಾಸಿ. ಸ್ಮಶಾನವೆಂದರೆ ಮನುಷ್ಯ ಜೀವನದ ಅಂತಿಮ ಹಂತ. ಇಲ್ಲಿ ಎಲ್ಲರಿಗೂ ಒಂದೇ ಗತಿ. ರಾಜನಾಗಲಿ, ಬಡವನಾಗಲಿ, ವಿದ್ಯಾವಂತರಾಗಲಿ, ಅಜ್ಞಾನಿಗಳಾಗಲಿ ಎಲ್ಲರೂ ಸ್ಮಶಾನದಲ್ಲಿ ಸಮಾನ. ಶಿವನು ಸ್ಮಶಾನದಲ್ಲಿ ವಾಸಿಸುತ್ತಾನೆ ಎಂಬ ಕಲ್ಪನೆ, ಮಾನವ ತನ್ನ ಅಹಂಕಾರ ತೊರೆಯಬೇಕು ಎಂಬ ಸಂದೇಶವನ್ನು ನೀಡುತ್ತದೆ. ಜೀವನದಲ್ಲಿ ನಾವು ಕಟ್ಟಿಕೊಂಡಿರುವ ಗೌರವ, ಸ್ಥಾನಮಾನ, ಸಂಪತ್ತು ಇವೆಲ್ಲವೂ ಕ್ಷಣಿಕ, ಈ ದೇಹವು ನಾಶವಾಗುತ್ತದೆ, ಆದರೆ ಆತ್ಮ ಶಾಶ್ವತ ಎಂಬ ಸತ್ಯವನ್ನು ಈ ಮೂಲಕ ಶಿವನು ನಮಗೆ ತಿಳಿಸಿಕೊಡುತ್ತಾನೆ.
ಆರಂಭದಲ್ಲಿ ಪ್ರತಿ ಊರಿನಲ್ಲಿ ಶಾಲೆ, ಅಂಚೆ ಕಚೇರಿ, ಆಸ್ಪತ್ರೆ, ಅಂಗನವಾಡಿ ಇರುವಂತೆ ಸಾರ್ವಜನಿಕ ಹಿಂದೂ ರುದ್ರಭೂಮಿ ಅವಶ್ಯವಾಗಿ ಬೇಕು ಎಂದು ಊರಿನವರಿಗೆ ಮನದಟ್ಟು ಮಾಡಿದೆವು. ಅದಕ್ಕಾಗಿ ಊರವರೇ ಒಟ್ಟುಗೂಡಿ ರುದ್ರಭೂಮಿಗೆ ಬೇಕಾದ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪ್ರೇರಣೆಯನ್ನು ಶ್ರೀ ಕ್ಷೇತ್ರದಿಂದ ನೀಡಿದೆವು. ಕೆಲವು ಕಡೆಗಳಲ್ಲಿ ರುದ್ರಭೂಮಿಗೆ ಜಾಗ ಮೀಸಲಿಟ್ಟಿದ್ದರೂ ಅತಿಕ್ರಮಣಗೊಂಡಿದ್ದವು. ಅದನ್ನು ತೆರವುಗೊಳಿಸಿ ಸ್ಥಳೀಯವಾಗಿ ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿಯನ್ನು ರಚಿಸಿದೆವು. ಬಳಿಕ ನಿಗದಿತವಾಗಿರುವ ರುದ್ರಭೂಮಿಯಲ್ಲಿ ಶವ ದಹನಕ್ಕೆ ಬೇಕಾಗುವ ಸೌಲಭ್ಯವನ್ನು ಸಮಿತಿಯ ವತಿಯಿಂದ ಮಾಡಿಸುವ ಮತ್ತು ನಿರಂತರವಾಗಿ ನಿರ್ವಹಣೆ ಮಾಡಲು ಮಾರ್ಗದರ್ಶನ ನೀಡಲಾಯಿತು. ಪ್ರತಿ ರುದ್ರಭೂಮಿಗೆ ರುದ್ರಭೂಮಿಯ ಸ್ಥಳ ಸಮತಟ್ಟುಗೊಳಿಸುವುದು, ಆವರಣ ರಚನೆ, ಗೇಟು ನಿರ್ಮಾಣ, ದಹನ ಶೆಡ್ ರಚನೆ, ಸಿಲಿಕಾನ್ ಛೇಂಬರ್ ಅಳವಡಿಸುವುದು, ಕಟ್ಟಿಗೆ ದಾಸ್ತಾನಿಗೆ ಶೆಡ್ ರಚನೆ, ಕುಡಿಯುವ ನೀರಿನ ವ್ಯವಸ್ಥೆ, ಸ್ನಾನಗೃಹ ಮತ್ತು ಶೌಚಾಲಯ ರಚನೆ, ಸಂಪರ್ಕ ರಸ್ತೆ, ಉದ್ಯಾನವನ, ವಿದ್ಯುತ್ ಸಂಪರ್ಕ, ವಿಶ್ರಾಂತಿ ಕೊಠಡಿ, ಕಾವಲುಗಾರನ ವ್ಯವಸ್ಥೆ, ಧಾರ್ಮಿಕ ಕ್ರಿಯೆ, ವೈದಿಕ ವಿಧಿಗಳಿಗೆ ಕಟ್ಟಡ ರಚನೆ, ರಸ್ತೆ, ತ್ಯಾಜ್ಯ ಗುಂಡಿ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ 2.50 ಲಕ್ಷ ರೂ.ವರೆಗೆ ಶ್ರೀಕ್ಷೇತ್ರದಿಂದ ನೆರವನ್ನು ನೀಡಲಾಗುತ್ತದೆ. ಈಗಾಗಲೇ ರಾಜ್ಯದ 816 ರುದ್ರಭೂಮಿಗಳಿಗೆ 11.39 ಕೋಟಿ ರೂ.ಗಳನ್ನು ಅನುದಾನವಾಗಿ ನೀಡಲಾಗಿದೆ. ಇನ್ನು ಕೆಲವೆಡೆಗಳಲ್ಲಿ ರುದ್ರಭೂಮಿ ನಿರ್ಮಾಣ ಕಾರ್ಯ ನಡೆಯುತ್ತಲಿದೆ. ಹಿಂದೆ ಶವ ಸಂಸ್ಕಾರಕ್ಕೆ ಸಂಬಂಧಿಸಿದ ಸ್ಥಳದ ಕೊರತೆ, ವ್ಯವಸ್ಥೆ ಇಲ್ಲದಿರುವುದು ಮುಂತಾದ ಸಮಸ್ಯೆಗಳು ಈಗೀಗ ಬಹಳಷ್ಟು ಕಡಿಮೆಯಾಗಿದೆ. ರುದ್ರಭೂಮಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂಬುದನ್ನು ಮರೆಯಬಾರದು.
ಹುಟ್ಟು ಮತ್ತು ಸಾವು ವೈಯಕ್ತಿಕ ಘಟನೆಗಳಾದರೂ, ಅವುಗಳ ಪರಿಣಾಮವು ಕುಟುಂಬ ಮತ್ತು ಸಮಾಜದ ಮೇಲಾಗುತ್ತದೆ. ಮಗು ಹುಟ್ಟುವಾಗ ಎಲ್ಲರೂ ಸಂತೋಷಪಟ್ಟರೆ ವ್ಯಕ್ತಿ ಸಾಯುವಾಗ ಕುಟುಂಬವು ದುಃಖಪಡುತ್ತದೆ. ವ್ಯಕ್ತಿ ಬದುಕಿರುವ ಕಾಲದಲ್ಲಿ ಮಾಡಿದ ಸತ್ಕಾರ್ಯಗಳು, ಆತನ ಗುಣ, ಸಮಾಜಕ್ಕೆ ನೀಡಿದ ಕೊಡುಗೆಗಳು ಆತನ ಸಾವಿನ ಅನಂತರವೂ ಹೆಸರನ್ನು ಜೀವಂತವಾಗಿ ಇರಿಸುತ್ತವೆ. ಮೃತ ವ್ಯಕ್ತಿಯ ಕುಟುಂಬದವರ ದುಃಖವನ್ನು ಹಂಚಿಕೊಳ್ಳಲು ಬಂಧುಗಳು, ನೆರೆಹೊರೆಯವರು ಮತ್ತು ಸಮಾಜದವರು ಒಂದಾಗುತ್ತಾರೆ.
ವ್ಯಕ್ತಿ ತನ್ನ ಜೀವನದಲ್ಲಿ ಹೇಗೆ ಬದುಕಿದ್ದಾನೆ ಎಂಬುದು ಅವನ ಮರಣದ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳುತ್ತಾರೆ. ಅದನ್ನೇ ಹಿರಿಯರು ‘ಶರಣರ ಗುಣವನ್ನು ಮರಣದಲ್ಲಿ ನೋಡಾ...’ ಎಂದು ಹೇಳಿರುವುದು. ಒಬ್ಬ ಸಂತ, ಶರಣ, ಮಾರ್ಗದರ್ಶಕನ ಮರಣವು ಕೇವಲ ಒಬ್ಬ ವ್ಯಕ್ತಿಯ ಅಗಲಿಕೆಯಲ್ಲ; ಅದು ಸಮಾಜಕ್ಕೆ ಆದ ಒಂದು ದೊಡ್ಡ ನಷ್ಟ. ಅವರ ಅಂತ್ಯಸಂಸ್ಕಾರದಲ್ಲಿ ಜನಸಾಗರ ಸೇರುತ್ತದೆ. ಕಣ್ಣೀರು ಹಾಕುತ್ತಾರೆ. ಶ್ರದ್ಧಾಂಜಲಿ ಸಲ್ಲಿಸಿ, ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಇವುಗಳೆಲ್ಲವೂ ಅವರು ಸಮಾಜದ ಮೇಲೆ ಬೀರಿದ ಪ್ರಭಾವವಾದರೆ ದುಷ್ಟನಾಗಿ, ಕಟುಕನಾಗಿ ಬದುಕಿ ಸತ್ತವರ ಮರಣದಲ್ಲಿ ಜನ ಸೇರುವುದಿಲ್ಲ, ಯಾರೂ ಕಂಬನಿ ಹಾಕುವುದಿಲ್ಲ, ಈಗಲಾದರೂ ಸತ್ತ, ಪೀಡೆ ತೊಲಗಿತು ಎಂದು ಹೇಳುತ್ತಾರೆ.
ಅಂದರೆ ಜೀವನದಲ್ಲಿ ನಾವು ಗಳಿಸುವ ಸಂಪತ್ತು, ಅಧಿಕಾರ, ಶಕ್ತಿಗಿಂತ, ನಾವು ಬೆಳೆಸುವ ಉತ್ತಮ ವ್ಯಕ್ತಿತ್ವ ಮುಖ್ಯವಾದುದು. ಏಕೆಂದರೆ ಅಂತಿಮವಾಗಿ ಜನರು ನೆನಪಿಸಿಕೊಳ್ಳುವುದು ನಮ್ಮ ವ್ಯಕ್ತಿತ್ವ ಮತ್ತು ಮಾನವೀಯ ಗುಣಗಳನ್ನು. ಮರಣವು ಎಲ್ಲರಿಗೂ ಸಮಾನವಾದರೂ, ಮರಣದ ಸಂದರ್ಭದಲ್ಲಿ ದೊರೆಯುವ ಗೌರವವು ಜೀವನದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಸೇವೆ, ಪರೋಪಕಾರದಿಂದ ಕೂಡಿದ ಜೀವನವೇ ಶಾಶ್ವತ ಗೌರವ ತಂದುಕೊಡುತ್ತದೆ. ಜೀವನವನ್ನು ಕೇವಲ ವೈಯಕ್ತಿಕ ಲಾಭದ ದೃಷ್ಟಿಯಿಂದ ಅಲ್ಲದೆ, ಸಮಾಜದ ಒಳಿತಿಗೆ ಬದುಕುವುದು ಮುಖ್ಯ.