ಮನಸ್ಸಿಗೆ ನೆಮ್ಮದಿ ನೀಡುವ ಭಜನಾ ಸಂಸ್ಕೃತಿ  
ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಡೆ

ಮನಸ್ಸಿಗೆ ನೆಮ್ಮದಿ ನೀಡುವ ಭಜನಾ ಸಂಸ್ಕೃತಿ

ಅತ್ತ ಮನೆಯಲ್ಲೇ ಕೂತರೂ ನೆಮ್ಮದಿ ಇಲ್ಲ, ಇತ್ತ ಕಚೇರಿಗೆ ಬಂದರೂ ಕಿರಿಕಿರಿ. ಒಟ್ಟಿನಲ್ಲಿ ನೆಮ್ಮದಿಯೇ ಇಲ್ಲಪ್ಪ, ಎಷ್ಟು ದುಡಿದರೂ ಬದುಕು ಆರಕ್ಕೇರುವುದಿಲ್ಲ, ಮೂರಕ್ಕೆ ಇಳಿಯುವುದಿಲ್ಲ. ಏನು ಮಾಡಿದರೂ ಅಷ್ಟೇ, ಜೀವನವೇ ಸಾಕಾಗಿ ಹೋಗಿದೆ ಎಂದು ಅಲವತ್ತುಕೊಳ್ಳುವವರು ಇಂದು ನಮ್ಮ ಸುತ್ತಮುತ್ತ ಸಾಕಷ್ಟು ಮಂದಿ ಕಾಣಸಿಗುತ್ತಾರೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ಅತ್ತ ಮನೆಯಲ್ಲೇ ಕೂತರೂ ನೆಮ್ಮದಿ ಇಲ್ಲ, ಇತ್ತ ಕಚೇರಿಗೆ ಬಂದರೂ ಕಿರಿಕಿರಿ. ಒಟ್ಟಿನಲ್ಲಿ ನೆಮ್ಮದಿಯೇ ಇಲ್ಲಪ್ಪ, ಎಷ್ಟು ದುಡಿದರೂ ಬದುಕು ಆರಕ್ಕೇರುವುದಿಲ್ಲ, ಮೂರಕ್ಕೆ ಇಳಿಯುವುದಿಲ್ಲ. ಏನು ಮಾಡಿದರೂ ಅಷ್ಟೇ, ಜೀವನವೇ ಸಾಕಾಗಿ ಹೋಗಿದೆ ಎಂದು ಅಲವತ್ತುಕೊಳ್ಳುವವರು ಇಂದು ನಮ್ಮ ಸುತ್ತಮುತ್ತ ಸಾಕಷ್ಟು ಮಂದಿ ಕಾಣಸಿಗುತ್ತಾರೆ. ಕೆಲಸದ ಸ್ಥಳವಾಗಿರಲಿ, ಮನೆಯ ವಾತಾವರಣವಾಗಿರಲಿ, ಸ್ನೇಹ & ಸಂಬಂಧಗಳ ನಡುವೆ ಇರಲಿ ಅಥವಾ ಜನಜಂಗುಳಿಯ ಬೀದಿಯಲ್ಲೇ ಇರಲಿ, ನೆಮ್ಮದಿಯನ್ನು ಅರಸುತ್ತಿರುವವರ ಸಂಖ್ಯೆ ಬಹಳಷ್ಟಿದೆ. ಕೈತುಂಬ ಸಂಬಳ, ಸೌಲಭ್ಯಗಳು, ಆಧುನಿಕ ಜೀವನಶೈಲಿ, ತಂತ್ರಜ್ಞಾನದ ಸೌಕರ್ಯ ಎಲ್ಲವೂ ಇದ್ದರೂ ಮನಸ್ಸಿಗೆ ಮಾತ್ರ ನೆಮ್ಮದಿ ಸಿಗದ ಸ್ಥಿತಿ ಅನೇಕರದು.

ವಿದೇಶಗಳಲ್ಲಂತೂ ನೆಮ್ಮದಿಯನ್ನು ಹುಡುಕಿಕೊಂಡು ಅಲೆಯುವ ಸಾಕಷ್ಟು ಜನರಿದ್ದು, ಹೆಚ್ಚಿನವರು ಬೆನ್ನಿಗೊಂದು ಟೂರಿಸ್ಟ್​ ಲಗೇಜ್​ ಏರಿಸಿಕೊಂಡು ಒಂದಷ್ಟು ದಿನಗಳ ಕಾಲ ದೇಶಾಂತರ ಹೊರಡುತ್ತಾರೆ. ಹಾಗೆ ನಮ್ಮ ಭಾರತಕ್ಕೂ ಬಂದು ನಮ್ಮ ಸಂಸ್ಕೃತಿ, ಆಚಾರ & ವಿಚಾರ ಮತ್ತು ಆಧ್ಯಾತ್ಮಿಕ ವಾತಾವರಣದಲ್ಲಿ ಮನಸ್ಸಿಗೆ ಶಾಂತಿಯನ್ನು ಕಂಡುಕೊಳ್ಳಲು ಶ್ರಮಿಸುತ್ತಾರೆ. ಯಾಂತ್ರಿಕ ಜೀವನ, ಅತಿಯಾದ ಮಾನಸಿಕ ಒತ್ತಡ ಹಾಗೂ ಭೌತಿಕ ಸುಖಗಳ ನಡುವೆಯೂ ಕಳೆದುಹೋಗಿರುವ ವಿದೇಶಿಗರಿಗೆ ಆಂತರಿಕ ನೆಮ್ಮದಿಯನ್ನು ಕಂಡುಕೊಳ್ಳಲು ಭಾರತವು ಸೂಕ್ತ ತಾಣವಾಗಿ ಕಾಣಿಸುತ್ತದೆ. ಪ್ರತಿ ವರ್ಷವೂ ಲಕ್ಷಾಂತರ ಮಂದಿ ವಿದೇಶಿಯರು ಆಗಮಿಸುತ್ತಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯ, ಪ್ರವಾಸಿ ತಾಣಗಳಿಗಷ್ಟೇ ಭೇಟಿ ನೀಡದೆ, ಇಲ್ಲಿನ ಆಶ್ರಮಗಳಲ್ಲಿ ತಂಗಿ ಯೋಗ, ಧ್ಯಾನ ಹಾಗೂ ಸಾತ್ವಿಕ ಜೀವನಶೈಲಿಯನ್ನು ಮೈಗೂಡಿಸಿಕೊಳ್ಳುತ್ತಾರೆ.

ಬೆಳಗ್ಗಿನಿಂದ ಸಂಜೆಯವರೆಗೆ ಅಥವಾ ರಾತ್ರಿ & ಹಗಲು ಪಾಳಿಯಲ್ಲಿ ದುಡಿಯುವ ಮನುಷ್ಯನಿಗೆ ಒಂದು ಕ್ಷಣವಾದರೂ ಮನಸ್ಸಿಗೆ ಶಾಂತಿ ಬೇಕು. ಆದರೆ ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ, ಆರ್ಥಿಕ ಚಿಂತೆ, ಸಂಬಂಧಗಳಲ್ಲಿನ ಬಿರುಕು, ಭವಿಷ್ಯದ ಆತಂಕ ಹಾಗೂ ಇವೆಲ್ಲವೂ ಮನಸ್ಸಿನ ನೆಮ್ಮದಿಯನ್ನು ನಿಧಾನವಾಗಿ ಕಸಿದುಕೊಳ್ಳುತ್ತಿವೆ. ಪಕ್ಕದ ಮನೆಯಾತ ಕಾರು ತಗೊಂಡ, ನಾನಿನ್ನೂ ಬೈಕ್​ನಲ್ಲೇ ಓಡಾಡುತ್ತಿದ್ದೇನೆ, ಆತ ಸೈಟ್​ ಪಡೆದು ಮನೆ ಕಟ್ಟಿಸಿದ, ನಾನು ಬಾಡಿಗೆ ಮನೆಯಲ್ಲಿದ್ದೇನೆ ಎಂಬ ಹೋಲಿಕೆಗಳು ಜನರನ್ನು ಮತ್ತಷ್ಟು ಹೈರಾಣ ಮಾಡುತ್ತವೆ.

ನಮ್ಮ ಹಿರಿಯರು, ಜ್ಞಾನಿಗಳು ಹೇಳಿದಂತೆ ನೆಮ್ಮದಿ ಎಂಬುದು ಹೊರಗಡೆ ಸಿಗುವ ವಸ್ತುವಲ್ಲ. ಅದನ್ನು ಕೊಂಡುಕೊಳ್ಳಲಾಗದು, ಕಂಡುಕೊಳ್ಳುವಂಥದ್ದು. ಯಾಕೆಂದರೆ ಪರಿಸ್ಥಿತಿಗಳು ಯಾವಾಗಲೂ ನಮ್ಮ ಇಚ್ಛೆಯಂತೆ ಇರುವುದಿಲ್ಲ. ಆದರೆ ಅವುಗಳನ್ನು ಎದುರಿಸುವ, ಮನೋಭಾವವನ್ನು ಬದಲಾಯಿಸಿಕೊಂಡು ಜೀವನದಲ್ಲಿ ಮುಂದುವರಿಯುವ ಶಕ್ತಿ ನಮ್ಮಲ್ಲಿದೆ. ಅದಕ್ಕಿಂತಲೂ ಮುಖ್ಯವಾಗಿ, ಜೀವನದಲ್ಲಿ ಎಲ್ಲಾ ಆಸೆಗಳು, ಆಕಾಂಕ್ಷೆಗಳು ಪರಿಪೂರ್ಣವಾದ ಬಳಿಕ ನೆಮ್ಮದಿ ಸಿಗುತ್ತದೆ ಎಂದು ಕಾಯುತ್ತಿದ್ದರೆ, ಆ ದಿನ ಬಹುಶಃ ಎಂದಿಗೂ ಬರಲಾರದು.

ಅದಕ್ಕಾಗಿ ಬದುಕಿನ ನಿರಂತರ ನಾಗಾಲೋಟದ ನಡುವೆ ಕೆಲ ಕ್ಷಣಗಳನ್ನಾದರೂ ನಮಗಾಗಿ, ನಮ್ಮವರಿಗಾಗಿ ಮೀಸಲಿಡುವುದು ಅಗತ್ಯ. ಮೊದಲು ನಮ್ಮನ್ನು ನಾವು ಅರಿತುಕೊಳ್ಳುವುದು, ಇರುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುವುದು, ಚಿಂತೆಗಳನ್ನು ಬದಿಗಿಟ್ಟು ಮನಸ್ಸಿಗೆ ನೆಮ್ಮದಿ ನೀಡುವ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಮುಖ್ಯ. ಜತೆಗೆ ಆತ್ಮೀಯ ಸಂಬಂಧಗಳಿಗೆ ಒಂದಷ್ಟು ಸಮಯವನ್ನು ನೀಡುವುದು ಬದುಕಿನ ನಿಜವಾದ ಸಾರ್ಥಕತೆ.

ಹೆಚ್ಚಾಗಿ ಪೇಟೆ, ಪಟ್ಟಣಗಳ ಮನೆಯಲ್ಲಿರುವ ಹಿರಿಯರು ನಿತ್ಯವೂ ಪಾರ್ಕಿಗೋ, ದೇವಸ್ಥಾನಕ್ಕೋ ಭೇಟಿ ನೀಡುವುದನ್ನು ರೂಢಿಸಿಕೊಂಡಿರುತ್ತಾರೆ. ಪಾರ್ಕ್​ನಲ್ಲಿ ತಮ್ಮ ಜತೆಗಾರರೊಂದಿಗೆ ಒಂದಷ್ಟು ಸಮಯವನ್ನು ಕಳೆದು ಮೈ & ಮನ ಹಗುರ ಮಾಡಿಕೊಳ್ಳುತ್ತಾರೆ. ಕೆಲವು ಹೆಂಗಸರು ದೇವಸ್ಥಾನದ ಒಂದು ಮೂಲೆಯಲ್ಲಿ ಕುಳಿತು ವಿಷ್ಣು ಸಹಸ್ರನಾಮಾವಳಿಯನ್ನೋ ತಮ್ಮಷ್ಟಕ್ಕೇ ಪಠಿಸುತ್ತಾ ಇರುತ್ತಾರೆ. ಕೆಲವರು ಮೊಮ್ಮಕ್ಕಳನ್ನು ತಮ್ಮ ಜತೆ ಕರೆದುಕೊಂಡು ಬಂದು ಭಜನೆ, ಸಂಕೀರ್ತನೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಚಟುವಟಿಕೆಗಳೇ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಪರಿಚಯಿಸುವ ಮೂಲ ಪಾಠಗಳು.

ಅಜ್ಜ & ಅಜ್ಜಿ ಹೇಗಿದ್ದರು, ತಪ್ಪು ಮಾಡಿದಾಗ ಹೇಗೆ ಬುದ್ಧಿ ಹೇಳುತ್ತಿದ್ದರು, ತುಂಟತನ ಮಾಡಿದಾಗ ಹೇಗೆ ಪಾಠ ಕಲಿಸುತ್ತಿದ್ದರು, ಸಂಸ್ಕಾರ, ಸಂಪ್ರದಾಯದ ಬಗ್ಗೆ ಹೇಗೆ ಅರಿವು ಮೂಡಿಸುತ್ತಿದ್ದರು ಎಂಬುದು ಇಂದಿಗೂ ನಮಗೆಲ್ಲ ನೆನಪಿದೆ. ಶುಕ್ರವಾರ ಅಥವಾ ಭಾನುವಾರದಂದು ಸಂಜೆಯ ವೇಳೆಗೆ ಬೇಗಬೇಗನೆ ಶಾಲಾ ಹೋಮ್​ವರ್ಕ್​ ಮುಗಿಸಿ, ಸ್ನಾನ ಮಾಡಿ ರೆಡಿಯಾಗಬೇಕಿತ್ತು. ಆಮೇಲೆ ಅಕ್ಕ & ಪಕ್ಕದ ಮನೆ ಮಕ್ಕಳೆಲ್ಲ ಒಟ್ಟಿಗೆ ಕುಳಿತು ಭಜನೆ ಮಾಡುತ್ತಿದ್ದೆವು. ಅಜ್ಜಿ ಒಂದೆರಡು ಹಾಡು ಹೇಳಿ ಬಳಿಕ ನಮ್ಮಲ್ಲೇ ಭಜನೆ ಮಾಡಿಸುತ್ತಿದ್ದರು. ಅಷ್ಟು ಹೊತ್ತಿಗೆ ಅವರು ತೆಂಗಿನಕಾಯಿ ತುರಿದು, ಬೆಲ್ಲ ಹಾಕಿ ಅವಲಕ್ಕಿ ಪಂಚಕಜ್ಜಾಯ ತಯಾರು ಮಾಡುತ್ತಿದ್ದರು. ಜತೆಗೆ ಲಡ್ಡು, ಚಕ್ಕುಲಿಯನ್ನೂ ಕೊಡುತ್ತಿದ್ದರು. ಆಗ ಭಜನೆಗಿಂತ ಭಜನೆ ಮುಗಿದ ಮೇಲೆ ತಿನ್ನಲು ಏನು ಕೊಡುತ್ತಾರೆ ಎಂದೇ ಮಕ್ಕಳು ಕಾದು ಕುಳಿತಿರುತ್ತಿದ್ದರು.

ನಾವೆಂದಿಗೂ ಭಜನೆಯ ಪುಸ್ತಕ ಹಿಡಿದು ಭಜನೆ ಹಾಡು ಕಲಿಯಲಿಲ್ಲ, ಎಲ್ಲರೊಂದಿಗೆ ಗುಂಪಿನಲ್ಲಿ ಹಾಡುತ್ತಾ ಹಾಡುತ್ತಾ ಅದು ಬಾಯಿಪಾಠವಾಗಿ ಹೋಗುತ್ತಿತ್ತು. ಅಜ್ಜಿಯಂದಿರು ಶಾಲಾ ಮೆಟ್ಟಿಲು ಹತ್ತದಿದ್ದರೂ ಅವರಿಗೆ ಹಲವಾರು ಭಕ್ತಿ ಗೀತೆಗಳು, ದಾಸರ ಪದಗಳು, ಶೋಭಾನೆ ಪದಗಳೆಲ್ಲ ಕಂಠಪಾಠವಾಗಿದ್ದವು. ಅಕ್ಕಿ ಆರಿಸುವಾಗಲೋ, ಅಥವಾ ಕೆಲಸ ಮಾಡುವಾಗಲೋ ತಮ್ಮಷ್ಟಕ್ಕೇ ಹಾಡು ಹೇಳುತ್ತಾ ಇರುತ್ತಿದ್ದರು. ಯಾಕೆಂದರೆ ಇವೆಲ್ಲ ಅವರನ್ನು ಏಕತಾನತೆಯಿಂದ ದೂರ ಮಾಡಿ ಮಾನಸಿಕ ನೆಮ್ಮದಿಯನ್ನು ಒದಗಿಸುತ್ತಿದ್ದವು. ದೇವರ ನಾಮಗಳು ನವಚೈತನ್ಯ ನೀಡುವುದರ ಜತೆಗೆ ನೆಮ್ಮದಿ ದೊರೆಯುತ್ತಿತ್ತು.

ನಾವು ಧರ್ಮಸ್ಥಳದಲ್ಲಿ 1999ರಲ್ಲಿ ಭಜನಾ ಕಮ್ಮಟವನ್ನು ಆರಂಭಿಸಿದೆವು. ಈ ಕಮ್ಮಟದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯನ್ನು ಗಮನದಲ್ಲಿರಿಸಿಕೊಂಡು ಆಯ್ದ ಭಜನಾ ತಂಡಗಳ ಸದಸ್ಯರಿಗೆ ರಾಗ, ತಾಳ, ಲಯಬದ್ಧವಾಗಿ ಭಜನೆ ಮಾಡುವುದು, ಕುಣಿತ ಭಜನೆ, ಶುಚಿತ್ವ, ಭಜನಾ ಮಂಡಳಿಯ ಆಡಳಿತ ನಿರ್ವಹಣೆ, ಕಾರ್ಯಕ್ರಮ ಆಯೋಜನೆ, ದುಶ್ಚಟಗಳ ಜಾಗೃತಿ ಹೀಗೆ ಹಲವು ವಿಷಯಗಳ ಬಗ್ಗೆ ಅರಿವನ್ನು ಉಂಟು ಮಾಡುವ ಏಳು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡು ತರಬೇತಿ ನೀಡಿದೆವು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಇದನ್ನು ರಾಜ್ಯದಾದ್ಯಂತ ವಿಸ್ತರಿಸಿ, ಪ್ರತಿ ವರ್ಷ ಆಯ್ದ ಶಿಬಿರಾರ್ಥಿಗಳಿಗೆ ತರಬೇತಿ ನೀಡತೊಡಗಿದೆವು. ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಈ ಕಾರ್ಯಕ್ರಮದ ರೂಪುರೇಷೆಗಳನ್ನು ಮಾಡಿಕೊಂಡು ಸೂಕ್ತ ತರಬೇತುದಾರರನ್ನು ಕರೆಸಿ ಯಾವುದೇ ಲೋಪವಿಲ್ಲದಂತೆ ಕಮ್ಮಟವನ್ನು ಆಯೋಜಿಸಲು ನೆರವಾಗುತ್ತಾರೆ.

ಈ ಕಮ್ಮಟದಲ್ಲಿ ತರಬೇತಿ ಪಡೆದವರು ತಮ್ಮ ತಮ್ಮ ಊರುಗಳಿಗೆ ತೆರಳಿ ತಮ್ಮ ಭಜನಾ ಮಂಡಳಿಯ ಉಳಿದ ಸದಸ್ಯರಿಗೆ ತಾವು ಕಲಿತ ವಿಚಾರಗಳನ್ನು ತಲುಪಿಸುತ್ತಾರೆ. ಹೀಗೆ ಭಜನೆಯ ವಿಚಾರಗಳು ಎಲ್ಲರನ್ನು ತಲುಪಲು ಸಾಧ್ಯವಾಗಿದೆ. ಇದುವರೆಗೂ ಕಮ್ಮಟದಲ್ಲಿ ಸಹಸ್ರಾರು ಮಂದಿ ತರಬೇತಿ ಪಡೆದುಕೊಂಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಮಂಗಳೋತ್ಸವದಲ್ಲಿ ಪಾಲ್ಗೊಂಡಿರುವುದು ವಿಶೇಷ. ಈ ಬಾರಿ ಧರ್ಮಸ್ಥಳದಲ್ಲಿ 28ನೇ ವರ್ಷದ ಕಮ್ಮಟವು ನಡೆಯಲಿದೆ. ಈ ಕಮ್ಮಟದಿಂದ ಸಮಾಜದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎಂಬುದನ್ನು ಹೇಳಲು ನನಗೆ ಸಂತೋಷವಾಗುತ್ತದೆ. ಧರ್ಮಸ್ಥಳಕ್ಕೆ ಬರುವ ಭಜನಾ ತಂಡಗಳು ನಾವು ಈ ಬಾರಿ ಕೃಷ್ಣಾಷ್ಟಮಿ, ಗಣೇಶೋತ್ಸವಗಳನ್ನು ಆಚರಿಸಿದೆವು, ಭಜನಾ ಮಂದಿರದ ಲೆಕ್ಕದಲ್ಲಿ ಅಜ್ಜಿಯ ಮನೆ ರಿಪೇರಿ ಮಾಡಿದೆವು, ನಮ್ಮ ತಂಡದಿಂದ ದೇವಸ್ಥಾನದಲ್ಲಿ ಶ್ರಮದಾನ ನಡೆಸಿದೆವು ಹೀಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ವಿವರಿಸುವಾಗ ಸಾರ್ಥಕ ಭಾವ ಮೂಡುತ್ತದೆ.

ಕಮ್ಮಟಗಳ ಆಯೋಜನೆಯ ಬಳಿಕ ಕುಣಿತ ಭಜನೆಗಳು ಹೆಚ್ಚು ಪ್ರಸಿದ್ಧಿ ಪಡೆದವು, ಕೆಲವು ಕಡೆಗಳಲ್ಲಿ ಕುಣಿತ ಭಜನಾ ಸ್ಪರ್ಧೆಗಳೂ ಆಯೋಜನೆಗೊಂಡವು. ಇದಲ್ಲದೆ ಅಬ್ಬರದ ಡಿ.ಜೆ.ಗಳಿಂದ ಕೂಡಿದ್ದ ಗಣಪತಿ ವಿಸರ್ಜನಾ ಮೆರವಣಿಗೆ, ಶೋಭಾಯಾತ್ರೆಗಳು ಭಜನೆ ತಾಳಗಳಿಗೆ ಬದಲಾಗಿರುವುದು ಹಾಗೂ ಗೃಹಪ್ರವೇಶ, ಧಾರ್ಮಿಕ ಕಾರ್ಯಕ್ರಮಗಳಲ್ಲೂ ಭಜನೆ, ಸಂಕೀರ್ತನೆಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಹೀಗೆಯೇ ಭಜನಾ ಸಂಸ್ಕೃತಿ ಮುಂದುವರೆಯಲಿ ಎಂಬುದು ನಮ್ಮ ಆಶಯ.

ಇನ್ನೊಂದು ಸಂಗತಿಯೆಂದರೆ ಇಂದಿನ ಆಧುನಿಕ ಕಾಲದ ಯುವಜನತೆ ಆಧುನಿಕ ಸಂಗೀತ ಉಪಕರಣಗಳನ್ನು ಬಳಸಿಕೊಂಡು ಹೊಸ ರೀತಿಯ ಭಜನಾ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ತಬಲಾ, ಹಾರ್ಮೋನಿಯಂ, ತಾಳ ಮಾತ್ರವಲ್ಲದೆ ಗಿಟಾರ್​, ಡ್ರಮ್​, ಕೀಬೋರ್ಡ್​ಗಳನ್ನು ಬಳಸಿಕೊಂಡು ಫ್ಯೂಶನ್​ ಭಜನೆ ಮಾಡುವ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಅಭಿರುಚಿಗೆ ತಕ್ಕಂತೆ ಬದಲಾಯಿಸಿಕೊಂಡು ಭಜನೆ, ಸಂಕೀರ್ತನೆಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ಥಳೀಯವಾಗಿ ಮಾತ್ರ ಕೇಳಿಬರುತ್ತಿದ್ದ ಭಜನೆ ಮತ್ತು ಕೀರ್ತನೆಗಳು ಇಂದು ಯೂಟ್ಯೂಬ್​ ಮತ್ತು ಫೇಸ್​​ಬುಕ್​ ಲೈವ್​ಗಳ ಮೂಲಕ ಜಗತ್ತಿನಾದ್ಯಂತ ಇರುವ ಕೋಟ್ಯಂತರ ಜನರನ್ನು ಕ್ಷಣಾರ್ಧದಲ್ಲಿ ತಲುಪುತ್ತಿವೆ. ಯುವಜನತೆ ಮಾತ್ರವಲ್ಲದೆ ಹಿರಿಯರೂ ಇಂತಹ ಭಕ್ತಿ ಸಂಗೀತಗಳನ್ನು ಇಷ್ಟಪಡುತ್ತಿದ್ದು, ಸಾಧ್ಯವಾದಾಗಲೆಲ್ಲ ಕೇಳಿ ಆನಂದಿಸುತ್ತಾರೆ. ಭಜನೆಯು ಧಾರ್ಮಿಕ ಆಚರಣೆಯಾಗಿ ಉಳಿಯದೆ, ಭಕ್ತಿ ಸಂಗೀತವಾಗಿ ಪ್ರಸಾರವಾಗುತ್ತಲಿದೆ. ಭಕ್ತಿಯ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಭಜನಾ ಸಂಸ್ಕೃತಿಯು ಮುಂದುವರಿಯಲಿ. ಈ ಮೂಲಕ ನಮಗೆಲ್ಲ ಶಾಂತಿ, ನೆಮ್ಮದಿ ಲಭಿಸುವಂತಾಗಲಿ.