ಶಾಲಾ ಮಕ್ಕಳ ಬೇಸಿಗೆ ರಜೆ... ಆಟದ ಜತೆ ಸಂಸ್ಕಾರ ಬೆಳೆಸಲಿ
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)
ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮಕ್ಕಳ ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಬದಲಿಗೆ ಸ್ಮಾರ್ಟ್ಫೋನ್ ಬಂದಿದೆ. ಕಥೆ ಹೇಳುವ ಅಜ್ಜಿಯ ಜಾಗವನ್ನು ಯೂಟ್ಯೂಬ್, ಇನ್ಸ್ಟಾಗ್ರಾಂ, ಫೇಸ್ಬುಕ್ ರೀಲ್ಸ್ ಆಕ್ರಮಿಸಿಕೊಂಡಿವೆ. ಅಜ್ಜಿಯ ಮನೆ ಇಲ್ಲವಾಗುತ್ತಿದೆ. ಆ ಬಾಂಧವ್ಯದ ಕೊಂಡಿ ನಿಧಾನವಾಗಿ ಕಳಚುತ್ತಿದೆ. ಅಜ್ಜಿ ಮನೆಯಲ್ಲಿ ದೊರೆಯುತ್ತಿದ್ದ ಸಂಸ್ಕಾರಗಳು ಕಣ್ಮರೆಯಾಗುತ್ತಿವೆ.
ಈಗ ನಮ್ಮೆದುರಿನ ದೊಡ್ಡ ಸವಾಲೆಂದರೆ, ಈ ರಜೆಯನ್ನು ಮನರಂಜನೆ, ಪ್ರವಾಸ, ವಿಶ್ರಾಂತಿಯ ಮಟ್ಟಕ್ಕೆ ಸೀಮಿತಗೊಳಿಸಬೇಕೋ ಅಥವಾ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ದಿಕ್ಕು ತೋರಿಸುವ ಅಮೂಲ್ಯ ಅವಕಾಶವನ್ನಾಗಿ ಬಳಸಿಕೊಳ್ಳಬೇಕೋ ಎಂಬುದು. ರಜೆ ಎಂದರೆ ಮಕ್ಕಳಿಗೆ ಶಾಲೆಯ ಒತ್ತಡದಿಂದ ಮುಕ್ತಿಯ ಸಮಯ ಮಾತ್ರವಲ್ಲ; ಅದು ಅವರ ಒಳಗಿನ ಪ್ರತಿಭೆಯನ್ನು ಅರಳಿಸಲು, ಹೊಸ ಆಸಕ್ತಿಗಳನ್ನು ಬೆಳೆಸಲು ಮತ್ತು ಜೀವನ ಮೌಲ್ಯಗಳನ್ನು ರೂಢಿಸಲು ಸುವರ್ಣಾವಕಾಶ. ಹಾಗಾಗಿ ರಜೆಯನ್ನು ಕೇವಲ ಮನೋರಂಜನೆಯ ಮಾಧ್ಯಮವನ್ನಾಗಿಸದೆ, ಡಿಜಿಟಲ್ ಸ್ಕ್ರೀನ್ನ ಆಟಗಳಿಗೆ ಸೀಮಿತಗೊಳಿಸದೆ ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದು ಎನ್ನುವುದನ್ನು ಹೆತ್ತವರು ಯೋಚಿಸಬೇಕು.
ಇಂದಿನ ವೇಗದ ಜೀವನಶೈಲಿಯಲ್ಲಿ ಮಕ್ಕಳಿಗೆ ಸಂಸ್ಕಾರ, ಶಿಸ್ತು, ಸಹಾನುಭೂತಿ, ಹೊಣೆಗಾರಿಕೆ ಕಲಿಸುವುದು ಮುಖ್ಯ. ಈ ರಜಾ ಸಮಯವನ್ನು ಸೂಕ್ತವಾಗಿ ಬಳಸಿದರೆ, ಪುಸ್ತಕ ಓದು, ಕಲೆ-ಕ್ರೀಡೆ, ಯೋಗ, ಧ್ಯಾನ, ಹಿರಿಯರೊಂದಿಗೆ ಸಮಯ ಕಳೆಯುವುದು, ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇತ್ಯಾದಿಗಳ ಮೂಲಕ ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಬಹುದು. ಇವು ಅವರ ಭವಿಷ್ಯದ ಬದುಕಿಗೆ ಗಟ್ಟಿಯಾದ ಬುನಾದಿ ಹಾಕುತ್ತವೆ. ಹಾಗಾಗಿ ಮಕ್ಕಳು ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕಿದೆ. ಪ್ರಕೃತಿ ಜತೆ ಒಡನಾಟ, ಹವ್ಯಾಸಗಳಿಗೆ ಉತ್ತೇಜನ ಇವು ಮಕ್ಕಳಲ್ಲಿ ಸಕಾರಾತ್ಮಕ ಭಾವನೆ ಮೂಡಿಸುತ್ತವೆ. ಜತೆಗೆ ಆಟಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಿ ಮಕ್ಕಳಿಗೆ ರಜೆಯ ಸವಿ ಅನುಭವಿಸಲು ಪೂರ್ಣ ಅವಕಾಶ ಕಲ್ಪಿಸಬೇಕಿದೆ. ಆಗ ಅವರಿಗೆ ಆಟದೊಂದಿಗೆ ಸಂಸ್ಕಾರದ ಪಾಠ ದೊರೆಯುತ್ತದೆ.
ಇಂದಿನ ಪೀಳಿಗೆಯನ್ನು ಜೆನ್ಝಿ ಅಥವಾ ಸ್ಕ್ರೀನ್ ಜನರೇಷನ್ ಎಂದು ಕರೆಯುವುದು ಅತಿಶಯೋಕ್ತಿ ಅಲ್ಲ. ತಂತ್ರಜ್ಞಾನ ಮಾನವ ಜೀವನವನ್ನು ಸುಲಭಗೊಳಿಸಿದರೂ, ಅದರ ಅತಿಯಾದ ಬಳಕೆ, ವಿಶೇಷವಾಗಿ ಮಕ್ಕಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ತಂದೆ-ತಾಯಿ ತಮ್ಮ ಕೆಲಸದ ಒತ್ತಡದಿಂದ ಮಕ್ಕಳಿಗೆ ಬೇಕಾದಷ್ಟು ಸಮಯ ನೀಡಲು ಸಾಧ್ಯವಾಗದೇ, ಅವರನ್ನು ಮೌನವಾಗಿರಿಸಲು ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ಗಳನ್ನೇ ಉಪಾಯವನ್ನಾಗಿ ಬಳಸುತ್ತಿದ್ದಾರೆ. ಇದು ತಾತ್ಕಾಲಿಕವಾಗಿ ಸುಲಭದ ಪರಿಹಾರವಾದರೂ, ದೀರ್ಘಾ ವಧಿಯಲ್ಲಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಮಕ್ಕಳು ದೈಹಿಕವಾಗಿ ಮನೆಯೊಳಗಿದ್ದರೂ, ಅವರ ಮನಸ್ಸು ಡಿಜಿಟಲ್ ಜಗತ್ತಿನ ಅನೇಕ ಅಪ್ರಸ್ತುತ, ಅಶ್ಲೀಲ ಮತ್ತು ಹಿಂಸಾತ್ಮಕ ವಿಷಯಗಳಿಗೆ ಆಕರ್ಷಿತವಾಗಿದೆ. ಈ ಡಿಜಿಟಲ್ ಪ್ರಪಂಚ ಅವರಿಗೆ ನಿಜಜೀವನದ ಮೌಲ್ಯಗಳನ್ನು ಕಲಿಸುವುದಕ್ಕಿಂತ ಹೆಚ್ಚಾಗಿ ಗೊಂದಲ ಉಂಟುಮಾಡುತ್ತಿದೆ. ಸನಾತನ ಸಂಸ್ಕೃತಿಯಲ್ಲಿ ಬಾಲ್ಯವನ್ನು ವ್ಯಕ್ತಿತ್ವ ನಿರ್ವಣದ ಅತ್ಯಂತ ಪ್ರಮುಖ ಹಂತವೆಂದು ಪರಿಗಣಿಸಲಾಗಿದೆ. ಇದೇ ಸಮಯದಲ್ಲಿ ಮಕ್ಕಳಿಗೆ ಸಂಸ್ಕಾರ, ನೈತಿಕ ಮೌಲ್ಯಗಳು, ಜೀವನದ ಅರ್ಥ ತಿಳಿಸುವುದು ಅಗತ್ಯ. ಆದರೆ ಇಂದು ಮೊಬೈಲ್ಗಳ ಅತಿಯಾದ ಬಳಕೆ ಈ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತಿದೆ.
ಇದಕ್ಕಿಂತ ಆತಂಕದ ವಿಷಯವೆಂದರೆ, ಮೊಬೈಲ್ ಬಳಕೆ ಮೂಲಕ ಅಶ್ಲೀಲ ಮತ್ತು ಹಿಂಸಾತ್ಮಕ ವಿಷಯಗಳಲ್ಲಿ ಮಕ್ಕಳಿಗೆ ಸುಲಭವಾಗಿ ಪ್ರವೇಶ ಸಿಗುತ್ತಿರುವುದು. ಇಂತಹ ವಿಷಯಗಳು ಅವರ ಮನಸ್ಸಿನ ಮೇಲೆ ಆಳವಾದ ಮತ್ತು ಅಪಾಯಕಾರಿ ಪರಿಣಾಮ ಬೀರುತ್ತವೆ. ಇದು ಮಕ್ಕಳಲ್ಲಿ ಭಯ, ಆತಂಕ, ಅಸಹಜ ಆಸಕ್ತಿ ಮತ್ತು ಕೆಲವು ಸಂದರ್ಭಗಳಲ್ಲಿ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಮಕ್ಕಳ ಆತ್ಮಹತ್ಯೆಗಳ ಘಟನೆಗಳು ಈ ಸಮಸ್ಯೆಯ ಗಂಭೀರತೆಯನ್ನು ಸ್ಪಷ್ಟಪಡಿಸುತ್ತವೆ. ಅನೇಕ ಅಧ್ಯಯನಗಳು ಸಹ ಡಿಜಿಟಲ್ ವ್ಯಸನ ಮಕ್ಕಳ ಮಾನಸಿಕ ಆರೋಗ್ಯವನ್ನು ಹಾನಿಗೊಳಿಸುತ್ತಿದೆ ಎಂದು ಸೂಚಿಸುತ್ತವೆ.
ಈ ಹಿನ್ನೆಲೆಯಲ್ಲಿ, ವಿಶ್ವದ ಅನೇಕ ದೇಶಗಳು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಕಾನೂನು ಕ್ರಮಗಳನ್ನು ಪರಿಗಣಿಸುತ್ತಿವೆ. ಕೆಲವು ದೇಶಗಳಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸ್ಮಾರ್ಟ್ಫೋನ್ ಬಳಕೆಯನ್ನು ನಿಯಂತ್ರಿಸುವ ಅಥವಾ ನಿಷೇಧಿಸುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಸಮಸ್ಯೆಯ ತೀವ್ರತೆ ಎಷ್ಟಿದೆ ಎಂಬುದು ಇದರಿಂದ ತಿಳಿಯುತ್ತದೆ.
ಈ ಸಮಸ್ಯೆಗೆ ಕೇವಲ ಕಾನೂನು ಪರಿಹಾರವಲ್ಲ. ಮುಖ್ಯವಾಗಿ, ಇದು ಕುಟುಂಬ ಮತ್ತು ಸಮಾಜದ ಜವಾಬ್ದಾರಿ. ತಂದೆ-ತಾಯಿ ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು, ಅವರೊಂದಿಗೆ ಮಾತಾಡಬೇಕು, ನೈಜ ಜೀವನದ ಅನುಭವಗಳನ್ನು ನೀಡಬೇಕು. ಪುಸ್ತಕ ಓದುವುದು, ಕ್ರೀಡೆಗಳಲ್ಲಿ ಭಾಗವಹಿಸುವುದು, ಪ್ರಕೃತಿಯೊಂದಿಗೆ ಕಾಲ ಕಳೆಯುವುದನ್ನು ಉತ್ತೇಜಿಸಬೇಕು.
ಪಾಲಕರು ಜಾಗೃತರಾದರೆ ಈ ರಜಾ ಅವಧಿಯನ್ನು ಸಂಸ್ಕಾರ ಶಿಬಿರವನ್ನಾಗಿ ರೂಪಿಸಿ ಮಕ್ಕಳ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು. ಅನೇಕ ಕಡೆ ಸುಮಾರು 15 ದಿನಗಳ ಬೇಸಿಗೆ ಶಿಬಿರ ನಡೆಸಲಾಗುತ್ತದೆ. ಅಲ್ಲೂ ಸನಾತನ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಲಾಗುತ್ತದೆ. ಮಕ್ಕಳಲ್ಲಿ ಮೌಲ್ಯಗಳು, ಶಿಸ್ತು ಮತ್ತು ಜೀವನ ಕೌಶಲ್ಯಗಳನ್ನು ಮನೆಯಲ್ಲೂ ಬೆಳೆಸಬಹುದು.
ಪ್ರತಿದಿನ ರಾತ್ರಿ ಅರ್ಧ ಗಂಟೆ ರಾಮಾಯಣ, ಮಹಾಭಾರತ ಹಾಗೂ ಪಂಚತಂತ್ರದಂತಹ ಕಥೆಗಳನ್ನು ಹೇಳುವುದರಿಂದ ಮಕ್ಕಳಿಗೆ ಧರ್ಮ, ಧೈರ್ಯ, ಸತ್ಯ ಮತ್ತು ನೈತಿಕತೆಗಳ ಅರಿವು ಮೂಡುತ್ತದೆ. ಅದೇ ವೇಳೆ ಮನೆ ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು, ತರಕಾರಿ ತರುವುದು ಮುಂತಾದ ಕೆಲಸಗಳಲ್ಲಿ ಅವರನ್ನು ತೊಡಗಿಸಬೇಕು. ಇದರಿಂದ ಸ್ವಾವಲಂಬನೆ, ಜವಾಬ್ದಾರಿತನ ಬೆಳೆಸಬಹುದು. ಮಕ್ಕಳು ಪ್ರಕೃತಿ ಜತೆ ಸಂಪರ್ಕದಲ್ಲಿರುವುದು ಕೂಡ ಅಗತ್ಯ. ಗಿಡ ನೆಡುವುದು, ಕೃಷಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು, ಮಣ್ಣಿನಲ್ಲಿ ಆಡುವುದು ಅವರಲ್ಲಿ ಪರಿಸರದ ಬಗ್ಗೆ ಪ್ರೀತಿ ಮೂಡಿಸುತ್ತದೆ.
ಗುರುಕುಲ ಪದ್ಧತಿಯಲ್ಲಿ ಪಠ್ಯಶಿಕ್ಷಣದ ಜತೆಗೆ ಜೀವನ ಮೌಲ್ಯಗಳು, ನೈತಿಕತೆ, ಸಂಸ್ಕಾರ, ಶಿಸ್ತು, ಸೇವಾಭಾವ, ವ್ಯಕ್ತಿತ್ವ ವಿಕಾಸಕ್ಕೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಶಿಕ್ಷಣವೆಂದರೆ ಕೇವಲ ಉದ್ಯೋಗ ಪಡೆಯುವ ಸಾಧನವಾಗಿರದೆ, ಉತ್ತಮ ವ್ಯಕ್ತಿಯನ್ನು ರೂಪಿಸುವ ಪ್ರಕ್ರಿಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗುರುಕುಲ ಮಾದರಿಯ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇಂದಿನ ಸಮಾಜಕ್ಕೆ ಅತ್ಯಂತ ಮಹತ್ವದ್ದಾಗಿದೆ.
ನಮ್ಮ ಉಪನಿಷತ್ತುಗಳಲ್ಲಿ ಶಿಕ್ಷಣ ಮತ್ತು ಸಂಸ್ಕಾರದ ನಡುವಿನ ವ್ಯತ್ಯಾಸ ತಿಳಿಸಲು ಒಂದು ಅದ್ಭುತ ಕಥೆಯಿದೆ. ಋಷಿ ಉದ್ದಾಲಕನ ಮಗ ಶ್ವೇತಕೇತು. 12 ವರ್ಷ ಗುರುಕುಲದಲ್ಲಿ ಸಕಲ ವೇದ-ಶಾಸ್ತ›ಗಳನ್ನು ಅಭ್ಯಾಸ ಮಾಡಿ ಅವನು ಮನೆಗೆ ಮರಳಿದಾಗ, ನನಗೆಲ್ಲಾ ಗೊತ್ತು ಎಂಬ ಅಹಂಕಾರ ಅವನಲ್ಲಿತ್ತು. ಮಗನ ವಿದ್ವತ್ತನ್ನು ಕಂಡು ತಂದೆಗೆ ಸಂತೋಷವಾದರೂ, ಅವನ ಅಹಂಕಾರ ಕಂಡು ಆತಂಕವಾಯಿತು. ಒಂದು ದಿನ ಉದ್ದಾಲಕರು ಮಗನನ್ನು ಕರೆದು ಕೇಳಿದರು, ‘ಮಗನೇ, ನೀನು ಎಲ್ಲವನ್ನೂ ಕಲಿತಿದ್ದೀಯಾ ಸರಿ. ಆದರೆ ಬ್ರಹ್ಮವಿದ್ಯೆಯನ್ನು ಅಥವಾ ಜೀವನದ ಸಾರವನ್ನು ಅರಿತಿದ್ದೀಯಾ?’ ಎಂದು ಪ್ರಶ್ನಿಸಿದರು.
ಶ್ವೇತಕೇತು ನಿರುತ್ತರನಾದ. ಅಕ್ಷರ ಜ್ಞಾನವಿದ್ದರೂ ಅನುಭವದ ಜ್ಞಾನ ಅವನಿಗಿರಲಿಲ್ಲ. ಆಗ ಉದ್ದಾಲಕರು ಒಂದು ಪಾತ್ರೆಯಲ್ಲಿ ನೀರು ತರಿಸಿ ಅದರಲ್ಲಿ ಒಂದು ಉಪ್ಪಿನ ಹರಳನ್ನು ಹಾಕಲು ಹೇಳಿದರು. ಮರುದಿನ ಬೆಳಿಗ್ಗೆ ಮಗನನ್ನು ಕರೆದು, ‘ಆ ಉಪ್ಪನ್ನು ತೆಗೆದುಕೊಡು’ ಎಂದರು. ಶ್ವೇತಕೇತು, ‘ತಂದೆಯೇ, ಉಪ್ಪು ನೀರಿನಲ್ಲಿ ಕರಗಿದೆ, ಅದು ಕಾಣುತ್ತಿಲ್ಲ’ ಎಂದ. ಆಗ ಉದ್ದಾಲಕರು, ‘ಮಗನೇ, ಆ ನೀರಿನ ರುಚಿ ನೋಡು, ಹೇಗಿದೆ?’ ಎಂದರು. ಮಗ ‘ಉಪ್ಪಾಗಿದೆ’ ಎಂದ. ಆಗ ಉದ್ದಾಲಕರು ಹೇಳಿದರು ‘ಮಗನೇ, ಉಪ್ಪು ಕಣ್ಣಿಗೆ ಕಾಣದಿದ್ದರೂ ನೀರಿನಲ್ಲಿ ಹೇಗೆ ಮಿಳಿತವಾಗಿದೆಯೋ, ಹಾಗೆಯೇ ಭಗವಂತ ಮತ್ತು ಸನ್ಮಾರ್ಗದ ಸಂಸ್ಕಾರಗಳು ನಮ್ಮ ಬದುಕಿನಲ್ಲಿ ಮಿಳಿತವಾಗಿರಬೇಕು. ಜ್ಞಾನವು ಅಹಂಕಾರವನ್ನು ತರಬಾರದು’ ಎಂದರು. ಈ ಕಥೆ ಇಂದಿನ ಮಕ್ಕಳಿಗೆ ದೊಡ್ಡ ಪಾಠ. ಮಕ್ಕಳು ರ್ಯಾಂಕ್ ಪಡೆಯುವುದು ಮುಖ್ಯವಲ್ಲ, ಅವರು ನೀರಿನಲ್ಲಿ ಬೆರೆತ ಉಪ್ಪಿನಂತೆ ಸಮಾಜದಲ್ಲಿ ಸಂಸ್ಕಾರವಂತರಾಗಿ ಬೆರೆಯುವುದು ಮುಖ್ಯ.
ಮಕ್ಕಳು ನಾವು ಹೇಳಿದ್ದನ್ನು ಕೇಳುವುದಿಲ್ಲ, ಬದಲಾಗಿ ನಾವು ಮಾಡಿದ್ದನ್ನು ನೋಡುತ್ತಾರೆ. ನಾವು ಮೊಬೈಲ್ ಬದಿಗಿಟ್ಟು ಪುಸ್ತಕ ಹಿಡಿದರೆ, ಅವರೂ ಅದನ್ನೇ ಅನುಸರಿಸುತ್ತಾರೆ. ಸಂಸ್ಕಾರ ಎಂಬುದು ಕೇವಲ ಉಪದೇಶವಲ್ಲ, ಅದು ಆಚರಣೆ. ಈ ಬೇಸಿಗೆ ರಜೆ ನಮ್ಮ ಮಕ್ಕಳ ಪಾಲಿಗೆ ಬರಿ ರಜೆಯಾಗದೆ, ಅವರ ಅಂತರಂಗವನ್ನು ಬೆಳಗುವ ಸಂಸ್ಕಾರದ ದಾರಿ ದೀಪವಾಗಲಿ.