ಆತ್ಮೋನ್ನತಿ, ಜಾಗೃತಿ ಮೂಡಿಸುವ ಶಿವರಾತ್ರಿ
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)
ಭಾರತವು ಹಬ್ಬಗಳ ತವರೂರು. ವರ್ಷಪೂರ್ತಿ ಒಂದಲ್ಲ ಒಂದು ಹಬ್ಬಗಳನ್ನು ಆಚರಿಸುವ ಇಲ್ಲಿನ ಸಂಸ್ಕೃತಿ, ಪರಂಪರೆ, ಸಂಪ್ರದಾಯ ಮುಂತಾದ ಕಾರಣಗಳಿಂದಾಗಿ ವಿಶ್ವದಲ್ಲೇ ಭಾರತವು ವಿಶಿಷ್ಟವೆನಿಸಿದೆ. ಇಲ್ಲಿ ಪ್ರತಿಯೊಂದು ಹಬ್ಬವೂ ಆಧ್ಯಾತ್ಮಿಕ ಅರ್ಥ, ವೈಜ್ಞಾನಿಕ ನೆಲೆ, ಸಾಮಾಜಿಕ ಒಗ್ಗಟ್ಟು ಹಾಗೂ ಮಾನವೀಯತೆ, ಸಮನ್ವಯತೆ, ಸರ್ವಧರ್ಮ ಸಹಿಷ್ಣುತೆ, ಏಕತೆ ಮುಂತಾದ ಮೌಲ್ಯಗಳನ್ನು ಒಳಗೊಂಡಿದೆ. ವೇದಗಳ ಕಾಲದಲ್ಲಿಯೇ ಹಬ್ಬ ಹರಿದಿನಗಳ ಆಚರಣೆಯಿದ್ದ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖವಿದೆ. ಋಗ್ವೇದ, ಯಜುರ್ವೆದ, ಸಾಮವೇದ, ಅಥರ್ವ ವೇದಗಳಲ್ಲಿ ಯಜ್ಞ, ಹೋಮ, ಹವನ, ಋತುಪೂಜೆ, ಸೂರ್ಯಾರಾಧನೆ ಮುಂತಾದ ಧಾರ್ವಿುಕ ಆಚರಣೆಗಳಿದ್ದವು. ಇವೇ ಮುಂದಕ್ಕೆ ಹಬ್ಬಗಳಾಗಿ ಬದಲಾದವು ಎನ್ನಲಾಗಿದೆ. ಮಾತ್ರವಲ್ಲದೆ ಭಾರತವು ಕೃಷಿಪ್ರಧಾನ ದೇಶವಾಗಿದ್ದರಿಂದ ಬಹುತೇಕ ಹಬ್ಬಗಳು ಕೃಷಿ ಚಟುವಟಿಕೆಯ ಹಿನ್ನೆಲೆಯನ್ನು ಹೊಂದಿವೆ. ಬೆಳೆ ಬಿತ್ತುವ ಕಾಲ, ಕೊಯ್ಲಿನ ಕಾಲ, ಮಳೆಗಾಲದ ಆರಂಭ, ವಸಂತ ಋತು ಇತ್ಯಾದಿ ಸಂದರ್ಭಗಳಲ್ಲಿ ಜನರು ವಿವಿಧ ದೇವರನ್ನು ಆರಾಧಿಸುತ್ತಿದ್ದರು. ಕೊಯ್ಲಿನ ಹಬ್ಬವನ್ನಾಗಿ ಸಂಕ್ರಾಂತಿ ಅಥವಾ ಪೊಂಗಲ್, ವಸಂತ ಋತು ಸ್ವಾಗತವನ್ನು ಹೋಳಿ ಆಚರಣೆಯನ್ನಾಗಿ, ಬೆಳಕಿನ ಹಬ್ಬವೆಂದು ದೀಪಾವಳಿ, ಹೊಸ ವರ್ಷಾಚರಣೆಯೆಂದು ಯುಗಾದಿ ಹೀಗೆ ಹಲವಾರು ಹಬ್ಬಗಳು ವರ್ಷದುದ್ದಕ್ಕೂ ಆಚರಿಸಲ್ಪಡುತ್ತವೆ. ಅಂತಹ ಅನೇಕ ಹಬ್ಬಗಳಲ್ಲಿಯೇ ಮಹತ್ತರ ಸ್ಥಾನ ಪಡೆದಿರುವುದು ಮಹಾಶಿವರಾತ್ರಿ. ಶಿವನನ್ನು ಪರಮಾತ್ಮ, ದುಷ್ಟ ಸಂಹಾರಕ, ಕರುಣಾಮೂರ್ತಿ, ನಟರಾಜ ಎಂಬಿತ್ಯಾದಿ ಅನೇಕ ರೂಪಗಳಲ್ಲಿ ಪೂಜಿಸುವ ಈ ಹಬ್ಬವು ಧಾರ್ವಿುಕ ಆಚರಣೆ ಮಾತ್ರವಲ್ಲ; ಇದು ಆತ್ಮಚಿಂತನೆ, ಉಪವಾಸ, ಶಿಸ್ತು ಮತ್ತು ಜಾಗೃತಿಯ ಹಬ್ಬವೂ ಆಗಿದೆ. ಶಿವರಾತ್ರಿ ಆಚರಣೆ ಮತ್ತು ಅದರ ಮಹೋನ್ನತ ಅರ್ಥಗಳು ಮಾನವ ಬದುಕಿಗೆ ದಾರಿದೀಪವಾಗಿವೆ.
ಶಿವ ಎಂದರೆ ಮಂಗಳ, ಕಲ್ಯಾಣ, ಶಾಂತಿ, ಪರಮ ಸತ್ಯ. ರಾತ್ರಿ ಎಂದರೆ ಕತ್ತಲೆ ಅಥವಾ ಅಜ್ಞಾನ. ಹೀಗಾಗಿ ಅಜ್ಞಾನವನ್ನು ದೂರ ಮಾಡಿ ಜ್ಞಾನ ಮತ್ತು ಮಂಗಳವನ್ನು ಪಡೆಯುವ ರಾತ್ರಿಯೇ ಶಿವರಾತ್ರಿಯಾಗಿದೆ. ಪ್ರತಿ ತಿಂಗಳಲ್ಲಿ ಮಾಸ ಶಿವರಾತ್ರಿ ಬರುವುದಾದರೂ ವರ್ಷದಲ್ಲೊಮ್ಮೆ ಮಾಘ ಅಥವಾ ಫಾಲ್ಗುಣ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ನಾಡಿನೆಲ್ಲೆಡೆ ಆಚರಿಸುತ್ತಾರೆ. ಶಿವರಾತ್ರಿಯಂದು ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ, ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸುವುದರಿಂದ ಮನಸ್ಸು ಶಾಂತಿ, ನೆಮ್ಮದಿಯನ್ನು ಪಡೆಯಲು ಸಾಧ್ಯವಾಗುತ್ತದೆ. ರಾತ್ರಿ ಜಾಗರಣೆ ಮಾಡುವುದಕ್ಕೆ ಆಧ್ಯಾತ್ಮಿಕ ಅರ್ಥವಿದೆ. ಸಾಮಾನ್ಯವಾಗಿ ರಾತ್ರಿ ಹಾಗೂ ನಿದ್ರೆ ಅಜ್ಞಾನಕ್ಕೆ ಸಂಕೇತವಾದರೆ, ಶಿವರಾತ್ರಿ ದಿನ ರಾತ್ರಿ ಜಾಗೃತವಾಗಿರುವ ಮೂಲಕ ಜ್ಞಾನೋದಯ ಪಡೆಯುವುದಾಗಿದೆ. ಇದು ನಮ್ಮೊಳಗಿನ ಅಂಧಕಾರವನ್ನು ದೂರ ಮಾಡಿ, ಆತ್ಮಜ್ಞಾನವನ್ನು ಬೆಳಗಿಸುವ ಸಮಯವೂ ಹೌದು.
ಶಿವಭಕ್ತಿ ಎಂದರೆ ಭಗವಾನ್ ಶಿವನ ಮೇಲಿನ ಆಳವಾದ ಶ್ರದ್ಧೆ, ಸಮರ್ಪಣೆ ಮತ್ತು ಆತ್ಮೀಯ ಪ್ರೀತಿ. ಶಿವ ಆಡಂಬರದ ಪೂಜೆಯನ್ನು ಬಯಸುವುದಿಲ್ಲ. ನಿಷ್ಕಲ್ಮಶ ಹಾಗೂ ಮುಗ್ಧಭಕ್ತಿಗೆ ಒಲಿಯುವಾತ ಶಿವ. ಪುರಾಣದ ಕತೆಯಂತೆ ಮಾರ್ಕಂಡೇಯ ಬಾಲ್ಯದಿಂದಲೇ ಶಿವನ ಭಕ್ತನಾಗಿದ್ದ. ಆದರೆ ವಿಧಿಲಿಖಿತದಂತೆ ಆತನ ಆಯುಷ್ಯ 16 ವರ್ಷ ಮಾತ್ರ ಎಂದಿತ್ತು. ಮಾರ್ಕಂಡೇಯ ಪ್ರತಿದಿನ ಶಿವಲಿಂಗವನ್ನು ಪೂಜಿಸಿ ‘ಓಂ ನಮಃ ಶಿವಾಯ’ ಎಂದು ಜಪ ಮಾಡುತ್ತಿದ್ದ. ಆತನಿಗೆ 16ನೇ ವರ್ಷವಾದಾಗ ಯಮಧರ್ಮರಾಜನು ಪ್ರಾಣ ತೆಗೆಯಲು ಬಂದಾಗ, ಮಾರ್ಕಂಡೇಯನು ಶಿವಲಿಂಗವನ್ನು ಅಪ್ಪಿಕೊಂಡು, ‘ನಾನು ಶಿವನನ್ನು ಬಿಟ್ಟು ಬರುವುದಿಲ್ಲ’ ಎಂದು ಹಠ ಮಾಡುತ್ತಾನೆ. ಆಗ ಶಿವನು ಪ್ರತ್ಯಕ್ಷನಾಗಿ ಯಮನನ್ನು ತಡೆದು, ಮಾರ್ಕಂಡೇಯನಿಗೆ ಚಿರಂಜೀವಿಯಾಗುವಂತೆ ಆಶೀರ್ವಾದ ನೀಡುತ್ತಾನೆ. ಹಾಗೆಯೇ ಬೇಡರ ಕಣ್ಣಪ್ಪ, ಕೋಳೂರ ಕೊಡಗೂಸು ಹೀಗೆ ಅನೇಕ ಭಕ್ತರ ಕುರಿತಾದ ಪ್ರಸಂಗಗಳು ಪುರಾಣದಲ್ಲಿವೆ.
ಒಬ್ಬ ವೃದ್ಧರು ದಿನವೂ ಸಂಜೆಯ ವೇಳೆ ದೇವಸ್ಥಾನಕ್ಕೆ ಹೋಗಿ ಅಲ್ಲಿ ನಡೆಯುತ್ತಿದ್ದ ಪಾರಾಯಣ, ಶ್ಲೋಕ ಪಠಣ, ಭಜನೆ, ಹರಿಕಥೆಗಳನ್ನು ಕೇಳಿಕೊಂಡು ರಾತ್ರಿ ಊಟದ ಸಮಯಕ್ಕಾಗುವಾಗ ಮನೆಗೆ ಹಿಂದಿರುಗುತ್ತಿದ್ದರು. ಅವರ ಈ ದಿನಚರಿಯನ್ನು ನೋಡುತ್ತಿದ್ದ ನೆರೆ-ಹೊರೆಯ ಅನೇಕರು, ‘ಈ ಮುದುಕನಿಗೆ ಇದೆಲ್ಲ ಬೇಕಾ ಸುಮ್ಮನೆ ಮನೇಲಿ ಇರೋದಪ್ಪ, ಅದುಬಿಟ್ಟು ದೇವಸ್ಥಾನಕ್ಕೆ ಹೋಗಿ ಸುಮ್ನೆ ಟೈಂ ವೇಸ್ಟ್ ಮಾಡ್ತಾರೆ’ ಎಂದು ತಮ್ಮ-ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರು. ಅವರ ಈ ಮಾತುಗಳನ್ನು ಕೇಳಿಸಿಕೊಂಡ ಸೊಸೆಯು, ‘ಮಾವಯ್ಯ ನಿಮ್ಮ ಬಗ್ಗೆ ನೆರೆ-ಹೊರೆಯವರು ಈ ರೀತಿ ಮಾತಾಡಿಕೊಳ್ಳುತ್ತಿದ್ದಾರೆ. ನೀವು ಯಾಕೆ ದೇವಸ್ಥಾನಕ್ಕೆ ಹೋಗಬೇಕು? ಇಲ್ಲೇ ಮನೆಯಲ್ಲೇ ಪೂಜೆ, ಭಜನೆ ಮಾಡಬಹುದು ಅಲ್ವಾ’ ಎಂದು ಅವರಿಗೆ ಬೇಸರವಾಗದಂತೆ, ಕಾಳಜಿಯ ಮಾತಿನಲ್ಲಿ ಹೇಳುತ್ತಾಳೆ.
ಆಗ ಮಾವನವರು, ‘ನೋಡಮ್ಮಾ... ನಾನು ಇದುವರೆಗೆ ಅನೇಕ ಕಡೆ ಕೆಲಸ ಮಾಡಿ ಮನೆಕಟ್ಟಿ, ಮಕ್ಕಳನ್ನು ಓದಿಸಿ, ಅವರಿಗೆ ಮದುವೆ ಮಾಡಿಸಿ ನನ್ನ ಜವಾಬ್ದಾರಿಗಳನ್ನೆಲ್ಲ ಉತ್ತಮವಾಗಿ ಮಾಡಿದ್ದೇನೆ. ಇದುವರೆಗೂ ನಾನು ಲೌಕಿಕವಾಗಿ ಬದುಕುತ್ತ ಕೇವಲ ಮನೆ, ಮಕ್ಕಳು ಕುಟುಂಬ ಎಂದೆನ್ನುತ್ತ ಯಾಂತ್ರಿಕ ಜೀವನ ನಡೆಸುತ್ತಿದ್ದೆ. ಅದು ರೋಬೋಟ್ ರೀತಿಯ ಬದುಕಾಗಿತ್ತು. ಮನೆ-ಕೆಲಸ-ಮನೆ ಇದಷ್ಟೇ ಬದುಕಾಗಿತ್ತು. ಆದರೆ ನಿಜವಾದ ಬದುಕು ಎಂದು ನಾನು ಕಂಡುಕೊಂಡದ್ದು ದೇವಸ್ಥಾನಕ್ಕೆ ಹೋದ ಮೇಲೆಯೇ ಕಣಮ್ಮಾ’ ಎಂದರು.
ಮಾತನ್ನು ಮುಂದುವರಿಸಿ, ‘ಒಬ್ಬರು ಪ್ರವಚನಕಾರರು ಹೇಳಿದ ಒಂದು ಮಾತು ಈಗಲೂ ನೆನಪಿನಲ್ಲಿದೆ. ಮನೆಯ ಸ್ಥಿತಿಗಿಂತ, ಮನಸ್ಥಿತಿ ಬಹಳ ಮುಖ್ಯ. ಮನಸ್ಥಿತಿ ಸರಿಯಿದ್ದರೆ ಮನೆಯ ಸ್ಥಿತಿ, ನಮ್ಮ ಸ್ಥಿತಿ ಎಲ್ಲವೂ ಸರಿ ಇರುತ್ತದೆ. ಮೊದಲು ನಿಮ್ಮ ಮನಸ್ಸನ್ನು ಶಾಂತಗೊಳಿಸಿ, ನಂತರ ಶಾಂತಿ, ನೆಮ್ಮದಿ ಎಲ್ಲವೂ ನಿಮ್ಮ ಮನೆಯಲ್ಲಿ ಬಂದು ನೆಲೆಸುತ್ತದೆ ಎಂದು. ದೇವಾಲಯಕ್ಕೆ ಹೋಗಲು ಶುರು ಮಾಡಿದ ಮೇಲೆ ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸಿದೆ. ಅಲ್ಲಿ ಒಮ್ಮೊಮ್ಮೆ ನಡೆಯುವ ಪ್ರವಚನಗಳನ್ನು ಕೇಳಿದಾಗ ನಾನೆಷ್ಟು ವಿಷಯಗಳನ್ನು ಕಲಿಯಲು ಇದೆ, ಅರ್ಥ ಮಾಡಿಕೊಳ್ಳಲು ಇದೆ ಅನಿಸುತ್ತದೆ’ ಎನ್ನುತ್ತಾರೆ.
ನಮ್ಮಲ್ಲಿ ಅನೇಕರು ಧಾರ್ವಿುಕತೆ ಅಂದರೆ ಪೂಜೆ, ಹೋಮ, ಹವನ ಅಥವಾ ಆಚರಣೆ ಎಂದು ಭಾವಿಸಿದ್ದಾರೆ. ಅದು ತಪ್ಪು. ಧಾರ್ವಿುಕತೆ ಎಂದರೆ ಸನಾತನ ಧರ್ಮದ ಜೀವನವಿಧಾನವಾಗಿದೆ. ಅದು ಬರೀ ಆಚರಣೆಗೊಳ್ಳದೆ ಅದು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂಥದ್ದು ಎಂದು ತಿಳಿದುಕೊಳ್ಳಬೇಕಿದೆ. ಶಿವರಾತ್ರಿ ಸಹಿತ ವಿವಿಧ ಹಬ್ಬಗಳು ಸಾಮಾಜಿಕ ಒಗ್ಗಟ್ಟಿಗೆ ಕಾರಣವಾಗುತ್ತದೆ. ದೇವಸ್ಥಾನಗಳಲ್ಲಿ ಸಮೂಹ ಪೂಜೆ, ಭಜನೆ, ಅನ್ನದಾನ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಶ್ರೀಮಂತ-ಬಡ, ಜಾತಿ-ಮತ ಭೇದವಿಲ್ಲದೆ ಎಲ್ಲರೂ ಒಂದಾಗಿ ದೇವರನ್ನು ಆರಾಧಿಸುತ್ತಾರೆ. ಇದು ಸಮಾನತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರುತ್ತದೆ. ಶಿವ ಪ್ರಕೃತಿ ಪ್ರಿಯ. ಹಿಮಭರಿತ ಕೈಲಾಸ ಪರ್ವತದಲ್ಲಿ ವಾಸ. ನಂದಿವಾಹನ, ಕೊರಳಲ್ಲಿ ಸರ್ಪ ಧರಿಸಿರುವಾತ. ಹೀಗೆ ಪರ್ವತ, ನದಿ, ಕಾಡು, ಪ್ರಾಣಿಗಳೊಂದಿಗೆ ನಂಟು ಹೊಂದಿದ ಆತನಿಗೆ ಬಿಲ್ವವೃಕ್ಷ ಎಂದರೆ ಅತಿ ಪ್ರಿಯ. ನಾವೆಲ್ಲ ಪರಿಸರ ಸಂರಕ್ಷಣೆ ಮಾಡುವ ಮೂಲಕ ಪ್ರಕೃತಿಯ ಎಲ್ಲ ಚರಾಚರ ವಸ್ತುಗಳಲ್ಲಿ ನೆಲೆಸಿರುವ ಶಿವನನ್ನು ಪೂಜಿಸುವ ಮೂಲಕ ಶಿವನ ಪ್ರೀತಿಗೆ ಪಾತ್ರರಾಗಲು ಸಾಧ್ಯ.
ವಿಶೇಷವಾಗಿ ಶಿವರಾತ್ರಿ ಸಮಯದಲ್ಲಿ ನಾಡಿನ ವಿವಿಧ ಕಡೆಯಿಂದ ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಆಗಮಿಸುತ್ತಾರೆ. ಶಿವನ ಸಾನ್ನಿಧ್ಯದ ಕಡೆ ಭಕ್ತರು ಮುಂದಡಿಯಿಡುವ ಪ್ರತಿ ಹೆಜ್ಜೆಯೂ ಅವರಲ್ಲಿನ ಗುಣದೋಷ, ಅರಿಷಡ್ವರ್ಗವನ್ನು ದೂರ ಮಾಡಲು ಸಹಾಕಾರಿಯಾಗುತ್ತದೆ. ಜೊತೆಗೆ ಧೈರ್ಯ, ಸ್ಥೈರ್ಯವನ್ನು ಉದ್ದೀಪನಗೊಳಿಸಿ ಬದುಕಿನಲ್ಲಿ ಎದುರಾಗುವ ಅಡೆ-ತಡೆಗಳನ್ನು ದಾಟಿ ಮುಂದುವರಿಯಲು ಸಹಾಯಕವಾಗುತ್ತವೆ. ಅಲ್ಲಲ್ಲಿ ನಡೆಯುವ ಸತ್ಸಂಗ, ಹಳ್ಳಿಗಳಲ್ಲಿ ಜರಗುವ ಜಾತ್ರೆಗಳು, ನಾಟಕಗಳು, ಯಕ್ಷಗಾನ, ಹರಿಕಥೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನಪದ ಕಲೆಗಳಿಗೆ ಉತ್ತೇಜನ ದೊರೆಯುತ್ತದೆ.
ಅನೇಕರು ತಮ್ಮ ಇಷ್ಟಾರ್ಥಸಿದ್ಧಿಗಾಗಿ ವ್ರತಾಚರಣೆಯನ್ನು ಮಾಡುತ್ತಾರೆ. ಮಹಿಳೆಯರು ಶಿವರಾತ್ರಿಯನ್ನು ವಿಶೇಷ ಭಕ್ತಿಯಿಂದ ಆಚರಿಸುತ್ತಾರೆ. ಒಳ್ಳೆಯ ಗಂಡ, ಸುಖಶಾಂತಿಯ ಕುಟುಂಬ ಜೀವನಕ್ಕಾಗಿ ಶಿವಪಾರ್ವತಿಯರ ಆರಾಧನೆ ಮಾಡುತ್ತಾರೆ. ಶಿವಪಾರ್ವತಿ ದಾಂಪತ್ಯವು ಆದರ್ಶ ದಾಂಪತ್ಯವೆಂದು ಜನಜನಿತವಾಗಿದೆ. ಹಾಗೆಯೇ ತಾವು ಕೈಗೊಳ್ಳುವ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ, ಆರೋಗ್ಯ ಭಾಗ್ಯ ಮುಂತಾದವುಗಳಿಗೆಲ್ಲ ಶಿವನನ್ನು ನಾನಾ ರೀತಿಯಲ್ಲಿ ಆರಾಧಿಸಿ ಪ್ರಾರ್ಥಿಸಲಾಗುತ್ತದೆ. ಒತ್ತಡ ಭರಿತ ಬದುಕಿನಿಂದ ಮುಕ್ತವಾಗಲು ಉಪವಾಸ, ಮೌನ, ಧ್ಯಾನದಿಂದ ಸಾಧ್ಯವಾಗುತ್ತದೆ. ಯೋಗೇಶ್ವರನಾಗಿರುವುದರಿಂದ ಯೋಗ ಮತ್ತು ಧ್ಯಾನದ ಮಹತ್ವವನ್ನು ಶಿವರಾತ್ರಿ ಆಚರಣೆಯು ತಿಳಿಸಿಕೊಡುತ್ತದೆ. ಒಂದು ರಾತ್ರಿ ಉಪವಾಸ, ಮೌನ, ಧ್ಯಾನದಿಂದ ಜೀವನದಲ್ಲಿ ಶಿಸ್ತು ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.
ಕಾಶಿ, ಉಜ್ಜಯಿನಿ, ಸೋಮನಾಥ, ಶ್ರೀಶೈಲಂ ಮುಂತಾದ ಕ್ಷೇತ್ರಗಳಲ್ಲಿ ಭವ್ಯ ಉತ್ಸವಗಳು ನಡೆಯುತ್ತವೆ. ನಮ್ಮ ಶ್ರೀಕ್ಷೇತ್ರ ಧರ್ಮಸ್ಥಳವು ಶ್ರೀ ಮಂಜುನಾಥ ಸ್ವಾಮಿಯ ನೆಲೆವೀಡಾಗಿದ್ದು, ಶಿವರಾತ್ರಿ ಸಂದರ್ಭದಲ್ಲಿ ನಾಡಿನಾದ್ಯಂತ ಭಕ್ತ ಜನರು ಶ್ರದ್ಧೆಯಿಂದ ಪಾದಯಾತ್ರೆ ಮೂಲಕ ಆಗಮಿಸುತ್ತಾರೆ. ಶ್ರದ್ಧೆ, ಭಕ್ತಿಯಿಂದ ಜಾಗರಣೆ, ಶಿವಪಂಚಾಕ್ಷರಿ ಪಠಣ, ಸತ್ಸಂಗ, ಪ್ರವಚನ, ಹರಿಕಥೆ ಮುಂತಾದ ಧಾರ್ವಿುಕ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವುದು ವಿಶೇಷವಾಗಿದೆ. ಕಳೆದ ಬಾರಿ 50 ಸಾವಿರಕ್ಕೂ ಹೆಚ್ಚು ಜನ ಶ್ರೀಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಮಂಜುನಾಥ ಸ್ವಾಮಿ ದರ್ಶನ ಮಾಡಿದ್ದರು. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಶ್ರದ್ಧೆಯಿಂದ ಅಹೋರಾತ್ರಿ ಶಿವ ಪಂಚಾಕ್ಷರಿ ಪಠಣ ಹಾಗೂ ಶ್ರೀ ಸ್ವಾಮಿಯ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಶಿವರಾತ್ರಿ ಹಬ್ಬವು ಭಕ್ತಿ, ತತ್ವ, ವಿಜ್ಞಾನ, ಸಂಸ್ಕೃತಿ, ಸಮಾಜ ಮತ್ತು ಪ್ರಕೃತಿ ಇವೆಲ್ಲವನ್ನೂ ಒಳಗೊಂಡಿರುವಂಥದ್ದು. ಶಿವನು ಅಜ್ಞಾನವನ್ನು ನಾಶಮಾಡಿ ಜ್ಞಾನವನ್ನು ಬೆಳಗಿಸುವ ಪರಮಾತ್ಮ. ಶಿವರಾತ್ರಿಯ ಆಚರಣೆ ಮೂಲಕ ಮನುಷ್ಯನು ತನ್ನೊಳಗಿನ ದುರ್ಗಣಗಳನ್ನು ತ್ಯಜಿಸಿ ತಾಳ್ಮೆ, ಕ್ಷಮೆ, ಸರಳತೆ, ಮನಸ್ಸಿನ ನಿಗ್ರಹ, ಪರಿಸರ ಪ್ರೀತಿ, ಸಮಾನತೆ ಮುಂತಾದ ಸದ್ಗುಣಗಳನ್ನು ಮೈಗೂಡಿಸಿಕೊಂಡು ತನ್ನೊಳಗಿನ ಶಕ್ತಿಯನ್ನು ಅರಿತು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಇರುವ ಸಮಯವಾಗಿದೆ. ಅಜ್ಞಾನದಿಂದ ಜ್ಞಾನಕ್ಕೆ, ಅಂಧಕಾರದಿಂದ ಬೆಳಕಿನೆಡೆಗೆ, ಅಶಾಂತಿಯಿಂದ ಶಾಂತಿಯ ಕಡೆಗೆ ಕೊಂಡೊಯ್ಯುವ ಆಧ್ಯಾತ್ಮಿಕ ಪಯಣ. ಶಿವರಾತ್ರಿ ಎಂದರೆ ಕೇವಲ ಒಂದು ರಾತ್ರಿ ಅಲ್ಲ; ‘ಓಂ ನಮಃ ಶಿವಾಯ’ ಎಂಬ ಮಂತ್ರವು ನಮ್ಮೆಲ್ಲರ ಹೃದಯದಲ್ಲಿ ಸದಾ ಹೊರ ಹೊಮ್ಮುತ್ತಿರಲಿ.