ಕನ್ನಡಿ ಬೋಧಿಸುವ ಪಾಠ ಬದುಕು ಬದಲಿಸಬಲ್ಲದು 
ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಡೆ

ಕನ್ನಡಿ ಬೋಧಿಸುವ ಪಾಠ ಬದುಕು ಬದಲಿಸಬಲ್ಲದು

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ಕನ್ನಡಿ ನೋಡಲು ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ!. ಅದರಲ್ಲೂ ಹೆಣ್ಣುಮಕ್ಕಳಂತೂ ಕನ್ನಡಿ ಮುಂದೆ ನಿಂತು ತಮ್ಮ ಅಂದವನ್ನು ಮತ್ತಷ್ಟು ಚೆಂದಾಗಣಿಸಲು, ತಮಗೆ ತಾವೇ ತೃಪ್ತಿಪಡಿಸಿಕೊಳ್ಳಲು ಕ್ಷಣಕಾಲ ಕಳೆಯುತ್ತಾರೆ. ಅದು ಕೇವಲ ಅಲಂಕಾರದ ಆಸೆಯಷ್ಟೇ ಅಲ್ಲ; ತಮ್ಮೊಳಗಿನ ಆತ್ಮವಿಶ್ವಾಸವನ್ನು ಕಂಡುಕೊಳ್ಳುವ ಪ್ರಕ್ರಿಯೆ. ಕನ್ನಡಿಯ ಮುಂದೆ ನಿಂತು ನಗುಮುಖ ನೋಡಿಕೊಂಡಾಗ ಮನಸ್ಸಿಗೂ ಒಂದು ಮುದ ನೀಡುತ್ತದೆ. ‘ನಾನು ಚೆನ್ನಾಗಿದ್ದೇನೆ’ ಎಂಬ ಭಾವನೆ ಮೂಡುತ್ತದೆ. ಹುಮ್ಮಸ್ಸು ಇನ್ನಷ್ಟು ಹೆಚ್ಚಾಗುತ್ತದೆ.

ಕನ್ನಡಿಯು ಅಂದ-ಚೆಂದ ನೋಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ನಾವು ಪ್ರತಿದಿನ ಮುಖ ತೊಳೆಯುವಂತೆ, ಕೂದಲು ಸರಿಪಡಿಸಿಕೊಳ್ಳುವಂತೆ, ಬದುಕನ್ನೂ ಒಮ್ಮೆ ಸರಿಪಡಿಸಿಕೊಳ್ಳಬೇಕಾದ ಅಗತ್ಯವನ್ನು ಅದು ನೆನಪಿಸುತ್ತದೆ. ಮುಖದಲ್ಲಿ ಮಸಿ ಇದ್ದರೆ ಕನ್ನಡಿ ತಕ್ಷಣ ತೋರಿಸುತ್ತದೆ. ಹಾಗೆಯೇ ನಮ್ಮ ನಡತೆಯಲ್ಲಿ, ಆಲೋಚನೆಯಲ್ಲಿ, ಮಾತಿನಲ್ಲಿ ಏನಾದರೂ ಅಸಮತೋಲನ ಇದ್ದರೆ ಬದುಕಿನ ಕನ್ನಡಿ ಅದನ್ನು ಕಾಲಕ್ರಮೇಣ ನಮಗೆ ತೋರಿಸುತ್ತದೆ. ಇದು ಕಾಲಚಕ್ರದ ಮಹಿಮೆ.

ಕನ್ನಡಿಯ ಮುಂದೆ ನಿಂತಾಗ ನಾವು ಇತರರ ಮುಖವನ್ನು ಕಾಣುವುದಿಲ್ಲ. ನಮ್ಮದೇ ಮುಖವನ್ನು ಕಾಣುತ್ತೇವೆ. ಎಷ್ಟು ಬಾರಿ ನಾವು ಕನ್ನಡಿ ನೋಡಿದರೂ ನಾವು ಹೇಗೆ ತೋರುತ್ತೇವೆಯೋ ಅದನ್ನೇ ಪ್ರತಿಬಿಂಬವಾಗಿ ನಮಗೆ ತೋರಿಸುತ್ತದೆ. ಇದೇ ಆತ್ಮಾವಲೋಕನದ ಸಾರ. ಹೆಚ್ಚಾಗಿ ಇತರರ ತಪ್ಪುಗಳನ್ನು ನೋಡುವುದರಲ್ಲಿ ನಾವು ಚುರುಕಾಗಿರುತ್ತೇವೆ, ಆದರೆ ನಮ್ಮೊಳಗಿನ ದೋಷಗಳನ್ನು ಕಾಣಲು ಹಿಂಜರಿಯುತ್ತೇವೆ. ಕನ್ನಡಿಯಂತೆ ನಿಷ್ಪಕ್ಷಪಾತವಾಗಿ ನಮ್ಮನ್ನು ನಾವು ನೋಡಿಕೊಳ್ಳುವ ಅಭ್ಯಾಸ ಬಂದಾಗ ಮಾತ್ರ ವ್ಯಕ್ತಿತ್ವದ ನಿಜವಾದ ಸೌಂದರ್ಯ ಹೊರಹೊಮ್ಮುತ್ತದೆ.

ಕನ್ನಡಿಯ ಮುಂದೆ ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುವ ರೀತಿಯಲ್ಲಿಯೇ ಬದುಕಿನ ಅಂದವನ್ನೂ ಹೆಚ್ಚಿಸಿಕೊಳ್ಳಬೇಕು. ಅದು ಬಟ್ಟೆ, ಆಭರಣಗಳ ಅಂದ ಮಾತ್ರವಲ್ಲ. ಸಹನೆ, ಸೌಮ್ಯತೆ, ಸಹಿಷ್ಣುತೆ, ಮಾನವೀಯತೆ, ಕರುಣೆ ಮುಂತಾದ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು. ಬಹಿರಂಗದ ಅಂದವನ್ನು ಬಾಹ್ಯ ಕನ್ನಡಿ ತೋರಿಸಿದರೆ ಅಂತರಂಗದ ಅಂದವನ್ನು ಮನಸ್ಸಿನ ಕನ್ನಡಿಯಲ್ಲಿ ಕಾಣಲು ಸಾಧ್ಯ. ಹೀಗಾಗಿ ಕನ್ನಡಿ ಕೇವಲ ಗೋಡೆಯ ಮೇಲೆ ತೂಗುವ ಗಾಜಿನ ತುಂಡಲ್ಲ. ಅದು ನಮ್ಮ ಬದುಕಿನ ಮಾರ್ಗದರ್ಶಿ, ಪಥದರ್ಶಕ. 

ಪ್ರತಿದಿನ ಸ್ವಲ್ಪ ಹೊತ್ತು ಅದರ ಮುಂದೆ ನಿಂತು ಮುಖವನ್ನಷ್ಟೇ ಅಲ್ಲ, ಮನಸ್ಸನ್ನೂ ನೋಡಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡರೆ, ನಮ್ಮ ಬದುಕು ಸಹಜವಾಗಿ ಸುಂದರವಾಗುತ್ತದೆ. ಕನ್ನಡಿಯ ಮುಂದೆ ನಾವು ನಮ್ಮ ಅಂದವನ್ನು ತಿದ್ದಿಕೊಳ್ಳುವಂತೆ, ಬದುಕಿನ ಮುಂದೆ ನಮ್ಮ ಅಂತರಂಗವನ್ನು ತಿದ್ದಿಕೊಳ್ಳುವ ಸಂಕಲ್ಪವೇ ನಿಜವಾದ ಪ್ರಗತಿ. ಹೊಸ ವರ್ಷದ ಆರಂಭದಲ್ಲಿ ಈ ಆತ್ಮಕನ್ನಡಿಯನ್ನು ಕೈಯಲ್ಲಿ ಹಿಡಿಯುವುದು ಅತ್ಯಂತ ಅಗತ್ಯ. ಕಳೆದ ವರ್ಷ ನಾವು ಹೇಗಿದ್ದೆವು, ಏನು ಕಳೆದುಕೊಂಡೆವು, ಏನು ಕಲಿತೆವು, ಯಾರಿಗೆ ನೋವುಂಟುಮಾಡಿದೆವು, ಯಾರಿಗೆ ಆಸರೆಯಾದೆವು- ಇವೆಲ್ಲ ಪ್ರಶ್ನೆಗಳೆಲ್ಲ ಕನ್ನಡಿಯ ಮುಂದೆ ನಿಂತಂತೆ ನಮ್ಮ ಮುಂದೆ ನಿಲ್ಲುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳದೆ ಉತ್ತರ ಹುಡುಕುವ ಧೈರ್ಯವೇ ಹೊಸ ವರ್ಷದ ಮೊದಲ ಹೆಜ್ಜೆಯಾಗಬೇಕು. 

ಹೊಸ ವರ್ಷ ಎಂದರೆ ಕೇವಲ ದಿನಾಂಕ ಬದಲಾವಣೆ ಅಲ್ಲ. ಅದು ಹಳೆಯದನ್ನು ನೆನಪಿಸಿ, ಹೊಸದನ್ನು ಸ್ವೀಕರಿಸುವ ಸಂಕೇತ. ಇಂತಹ ಸಂದರ್ಭದಲ್ಲಿ ಕನ್ನಡಿಯ ಮಹತ್ವ ನಮ್ಮ ಬದುಕಿನಲ್ಲಿ ಇನ್ನಷ್ಟು ಹೆಚ್ಚುತ್ತದೆ. ಹೊಸ ವರ್ಷದ ಆರಂಭದಲ್ಲಿ ನಮ್ಮ ಬದುಕಿನೊಳಗೂ ಒಮ್ಮೆ ನೋಟ ಹರಿಸಬೇಕಾದ ಅಗತ್ಯವಿದೆ. ನಾವು ಕನ್ನಡಿಯಲ್ಲಿ ಕಾಣುವ ದೋಷವನ್ನು ತಿದ್ದಿಕೊಳ್ಳಬಹುದು. ಆದರೆ ಕನ್ನಡಿಯನ್ನು ಒಡೆದರೆ ನಮ್ಮ ದೋಷ ಸರಿಯಾಗುವುದಿಲ್ಲ. ಅದೇ ರೀತಿ ಬದುಕಿನಲ್ಲೂ ಸಮಸ್ಯೆಗಳಿಗೆ ಹೊರಗಿನ ಕಾರಣಗಳನ್ನು ಹೊಣೆಮಾಡುವುದರಿಂದ ಪರಿಹಾರ ಸಿಗುವುದಿಲ್ಲ. ನಮ್ಮೊಳಗೆ ಬದಲಾವಣೆ ಬಂದಾಗ ಮಾತ್ರ ಬದುಕು ಸುಂದರವಾಗುತ್ತದೆ. 

ಈ ಸತ್ಯವನ್ನು ಕನ್ನಡಿ ನಮಗೆ ಪ್ರತಿದಿನವೂ ನೆನಪಿಸುತ್ತದೆ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು ಸುಲಭವಲ್ಲ. ಆದರೆ ಆತ್ಮಾವಲೋಕನವಿಲ್ಲದೆ ಆತ್ಮವಿಕಾಸ ಸಾಧ್ಯವಿಲ್ಲ. ಹೊಸ ವರ್ಷದ ಸಂಕಲ್ಪಗಳು ಕೇವಲ ಮಾತಾಗದೆ, ಬದುಕಿನ ಬದಲಾವಣೆಯಾಗಬೇಕಾದರೆ, ಈ ಆತ್ಮಾವಲೋಕನ ಅತ್ಯಾವಶ್ಯಕ. ಕನ್ನಡಿ ಸುಳ್ಳು ಹೇಳುವುದಿಲ್ಲ. ಆದರೆ ಮನುಷ್ಯನು ತನ್ನನ್ನೇ ತಾನು ಮೋಸಗೊಳಿಸಿಕೊಳ್ಳುತ್ತಾನೆ. ‘ನಾನು ಸರಿ, ಅವನು ತಪ್ಪು’ ಎಂಬ ಮನೋಭಾವ ನಮ್ಮನ್ನು ದುರ್ಬಲಗೊಳಿಸುತ್ತದೆ. ತಪ್ಪಾದರೂ ಸರಿಯಾದರೂ ಇದ್ದದ್ದನ್ನು ಇದ್ದ ಹಾಗೆ, ನೈಜತೆಯನ್ನು ಒಪ್ಪಿಕೊಳ್ಳುವ ಮನಸ್ಸು ನಮ್ಮಲ್ಲಿ ಬೆಳೆಯಬೇಕು.

ಇನ್ನು ಧಾರ್ವಿುಕವಾಗಿ ಕನ್ನಡಿಯ ಬಗ್ಗೆ ಹೇಳಬೇಕೆಂದರೆ ಅದಕ್ಕೆ ಬಹಳ ಮಹತ್ತರವಾದ ಸ್ಥಾನವಿದೆ. ಭಾರತೀಯ ಧಾರ್ವಿುಕ ಪರಂಪರೆಯಲ್ಲಿ ಕನ್ನಡಿಗೆ ವಿಶಿಷ್ಟ ಸ್ಥಾನವಿದೆ. ದೇವಾಲಯಗಳ ಗರ್ಭಗುಡಿಯ ಮುಂದೆ ಇಡುವ ಕಲಶಕನ್ನಡಿ ದೇವರ ಮುಖವನ್ನು ಮಾತ್ರವಲ್ಲ, ಭಕ್ತನ ಪ್ರತಿಬಿಂಬವನ್ನೂ ತೋರಿಸುತ್ತದೆ. ಇದರ ಉದ್ದೇಶವೇನೆಂದರೆ ದೇವರನ್ನು ನೋಡುವ ಮೊದಲು ನಮ್ಮನ್ನು ನಾವು ನೋಡುವುದು ಅಗತ್ಯ. ಹಾಗೆಯೇ ಕೆಲವು ಆಚರಣೆಗಳಲ್ಲಿ ದೇವರ ಅಲಂಕಾರದ ನಂತರ ಕನ್ನಡಿಯಲ್ಲಿ ದೇವರ ಪ್ರತಿಬಿಂಬವನ್ನು ತೋರಿಸುತ್ತಾರೆ. ಇದು ‘ನಿನ್ನೊಳಗೂ ದೇವತ್ವ ಇದೆ’ ಎಂಬ ಸಂದೇಶವನ್ನು ನೀಡುತ್ತದೆ. 

ಮದುವೆ ಸಂದರ್ಭದಲ್ಲಿ ಕಲಶಕನ್ನಡಿಯನ್ನು ನೋಡುವ ಪದ್ಧತಿಯೂ ಜೀವನದ ಹೊಸ ಹಂತಕ್ಕೆ ಪ್ರವೇಶಿಸುವ ಮೊದಲು ಆತ್ಮಪರಿಶೀಲನೆ ಮಾಡಿಕೊಳ್ಳುವ ಸಂಕೇತವಾಗಿದೆ. ಮದುವೆ, ಪೂಜೆ, ಗೃಹಪ್ರವೇಶ ಮೊದಲಾದ ಸಂಸ್ಕಾರಗಳಲ್ಲಿ ಕನ್ನಡಿಯನ್ನು ಬಳಸುವುದು ಶುದ್ಧತೆ, ಸತ್ಯ ಮತ್ತು ಸಂಪೂರ್ಣತೆಯ ಸಂಕೇತ. ಕನ್ನಡಿಯು ಮನಸ್ಸಿನ ಮಲಿನತೆಯನ್ನು ತೊಳೆದು, ಹೊಸ ಜೀವನಕ್ಕೆ ಪಾವಿತ್ರ್ಯದೊಂದಿಗೆ ಹೆಜ್ಜೆ ಇಡುತ್ತ ಬದುಕನ್ನು ಸಾಗಿಸಬೇಕು ಎಂದು ಸೂಚಿಸುತ್ತದೆ. ಕನ್ನಡಿ ನಮ್ಮ ಪ್ರತಿಬಿಂಬವನ್ನು ತೋರಿಸುತ್ತದೆ; ಬದುಕು ನಮ್ಮ ಕರ್ಮದ ಪ್ರತಿಬಿಂಬವನ್ನು ತೋರಿಸುತ್ತದೆ. ಇದನ್ನೇ ಪುರಾಣಗಳು ಕರ್ಮಸಿದ್ಧಾಂತ ಎನ್ನುತ್ತವೆ. 

ಇದಕ್ಕೆ ಸಂಬಂಧಿಸಿದ ಸಣ್ಣ ಪುರಾಣ ಕಥೆ ಮಹಾಭಾರತದಲ್ಲಿ ದೊರಕುತ್ತದೆ. ಕುರುಕ್ಷೇತ್ರ ಯುದ್ಧದ ನಂತರ ಧೃತರಾಷ್ಟ್ರನು ಶ್ರೀಕೃಷ್ಣನನ್ನು ಕೇಳುತ್ತಾನೆ: ‘ನನ್ನ ಜೀವನದಲ್ಲಿ ಇಷ್ಟೊಂದು ದುಃಖ ಏಕೆ? ನನ್ನ ಮಕ್ಕಳ ನಾಶಕ್ಕೆ ನಾನು ಕಾರಣನಾದೆನೇ?’ ಆಗ ಕೃಷ್ಣನು ಹೇಳುತ್ತಾನೆ: ‘ರಾಜನೇ, ಇದು ಈ ಜನ್ಮದ ಮಾತ್ರ ಫಲವಲ್ಲ. ಹಿಂದಿನ ಜನ್ಮದಲ್ಲಿ ನೀನು ಒಬ್ಬ ರಾಜನಾಗಿದ್ದಾಗ ಕೋಪದ ಆವೇಶದಲ್ಲಿ ಒಬ್ಬ ಋಷಿಯ ಮಗನನ್ನು ಕುರುಡನನ್ನಾಗಿ ಮಾಡಿದ್ದೆ. ಆ ಕರ್ಮದ ಪ್ರತಿಫಲವೇ ಈ ಜನ್ಮದಲ್ಲಿ ನಿನ್ನ ಅಂಧತ್ವ ಮತ್ತು ಪುತ್ರಶೋಕ’. ಇದನ್ನು ಕೇಳಿದ ಧೃತರಾಷ್ಟ್ರನಿಗೆ ತನ್ನ ಬದುಕು ಕರ್ಮದ ಕನ್ನಡಿಯಂತೆ ತಾನು ಮಾಡಿದುದನ್ನೇ ತೋರಿಸುತ್ತಿದೆ ಎಂಬ ಅರಿವು ಮೂಡುತ್ತದೆ.

ಈ ಕಥೆ ಒಂದು ಮಹತ್ವದ ಸಂದೇಶ ನೀಡುತ್ತದೆ. ಜೀವನದಲ್ಲಿ ಎದುರಿಸುವ ಅನೇಕ ಸಂದರ್ಭಗಳು ಅಚಾನಕ್ ಬಂದಂತೆ ಕಾಣಬಹುದು. ಆದರೆ ಅವುಗಳ ಹಿಂದೆ ಕರ್ಮಗಳ ಸರಪಳಿ ಕೆಲಸ ಮಾಡುತ್ತಿರುತ್ತದೆ. ಒಳ್ಳೆಯ ಕಾರ್ಯಗಳು ಶಾಂತಿ, ಸಂತೋಷ ಮತ್ತು ಗೌರವದ ರೂಪದಲ್ಲಿ ಮರಳುತ್ತವೆ. ಕೆಟ್ಟ ಕಾರ್ಯಗಳು ಪಶ್ಚಾತ್ತಾಪ, ನೋವು ಮತ್ತು ಅಶಾಂತಿಯನ್ನು ತರುತ್ತವೆ. ಆದ್ದರಿಂದ, ಬದುಕನ್ನು ದೂರುವ ಬದಲು ನಮ್ಮ ಕರ್ಮಗಳನ್ನು ಪರಿಶೀಲಿಸಬೇಕು. ಮಾನವನ ಮನಸ್ಸು ಆಸೆ, ಕ್ರೋಧ, ಲೋಭ, ಅಹಂಕಾರ ಮುಂತಾದ ವಿಕಾರಗಳಿಂದ ಮಸುಕಾಗುವುದು ಸಹಜ. ಇವುಗಳೇ ಮನಸ್ಸಿನ ಮಲಿನತೆ. ಇಂತಹ ಸ್ಥಿತಿಯಲ್ಲಿ ನಾವು ವಾಸ್ತವವನ್ನು, ಸತ್ಯವನ್ನು ಸರಿಯಾಗಿ ಕಾಣಲು ಸಾಧ್ಯವಾಗುವುದಿಲ್ಲ. ಆಗ ಸತ್ಯ ಮತ್ತು ಅಸತ್ಯದ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ. ಹಾಗಾಗಿ ಮನಸ್ಸು ಗೊಂದಲದ ಗೂಡಾಗುತ್ತದೆ. ಕೊಳೆಯಾದ ಕನ್ನಡಿಯಲ್ಲಿ ಮಸುಕಾದ ಪ್ರತಿಬಿಂಬ ಕಾಣುವಂತೆ ನೈಜತೆ ಕಾಣಲು ಸಾಧ್ಯವಾಗುವುದಿಲ್ಲ. ಆದರೆ ಸತ್ಯ, ದಯೆ, ತ್ಯಾಗ, ನ್ಯಾಯ, ನೀತಿ ಸೇವೆ, ಧ್ಯಾನ ಮತ್ತು ಆತ್ಮಪರಿಶೀಲನೆಯ ಮೂಲಕ ಮನಸ್ಸನ್ನು ಶುದ್ಧಗೊಳಿಸಿದಾಗ ಅದರ ಸ್ವಭಾವವೇ ಬದಲಾಗುತ್ತದೆ. 

ಶುದ್ಧ ಮನಸ್ಸಿನಲ್ಲಿ ಕಾಮನೆಗಳ ಉತ್ಕರ್ಷ ಕಡಿಮೆಯಾಗುತ್ತದೆ, ಸ್ಪಚ್ಛತೆ ಹೆಚ್ಚಾಗುತ್ತದೆ. ಆಗ ವ್ಯಕ್ತಿಗೆ ತನ್ನ ಅಂತರಂಗದ ನಿಜಸ್ವರೂಪವನ್ನು ಅರಿಯುವ ಸಾಮರ್ಥ್ಯ ಬರುತ್ತದೆ. ಇದೇ ಆತ್ಮಜ್ಞಾನ. ಇದು ಹೊರಗಿನಿಂದ ದೊರೆಯುವ ಜ್ಞಾನವಲ್ಲ; ಒಳಗಿಂದಲೇ ಉದ್ಭವಿಸುವ ಅನುಭವ. ಭಾರತೀಯ ತತ್ತ್ವಶಾಸ್ತ್ರವೂ ಇದೇ ಸತ್ಯವನ್ನು ಒತ್ತಿ ಹೇಳುತ್ತದೆ. ಚಿತ್ತಶುದ್ಧಿ ಇಲ್ಲದೆ ತತ್ತ್ವಜ್ಞಾನ ಅರಿಯಲು ಸಾಧ್ಯವಿಲ್ಲ ಎಂದು ಋಷಿಗಳು ಬೋಧಿಸಿದ್ದಾರೆ. ಮನಸ್ಸು ಶುದ್ಧವಾದಾಗಲೇ ಆತ್ಮ ಮತ್ತು ಪರಮಾತ್ಮನನ್ನು ತಿಳಿಯಲು ಸಾಧ್ಯವಾಗುತ್ತದೆ. ಹೀಗಾಗಿ, ಕನ್ನಡಿಯನ್ನು ಪ್ರತಿದಿನ ಸ್ವಚ್ಛಗೊಳಿಸುವಂತೆ, ನಮ್ಮ ಮನಸ್ಸನ್ನೂ ಸದಾ ಶುದ್ಧಗೊಳಿಸುವ ಪ್ರಯತ್ನ ಮಾಡಬೇಕು. ಆಗ ಜೀವನದ ಗುರಿ, ಅರ್ಥ ಮತ್ತು ಆತ್ಮಜ್ಞಾನ ಎಲ್ಲವೂ ಸ್ಪಷ್ಟವಾಗಿ ಬೆಳಗುತ್ತದೆ.

ಕನ್ನಡಿ ಮೌನವಾದ ಗುರು. ಅದು ಬೋಧಿಸುತ್ತದೆ, ಆದರೆ ಒತ್ತಾಯಿಸುವುದಿಲ್ಲ. ತಿದ್ದಿಕೊಳ್ಳಲು ಅವಕಾಶ ಕೊಡುತ್ತದೆ, ಆದರೆ ಬಲವಂತ ಮಾಡುವುದಿಲ್ಲ. ಹೊಸ ವರ್ಷದ ಸಂದರ್ಭದಲ್ಲಿ ಈ ಕನ್ನಡಿಯನ್ನು ಕೇವಲ ಮುಖ ನೋಡಲು ಮಾತ್ರವಲ್ಲ, ಮನಸ್ಸಿನೊಳಗೆ ಇಟ್ಟುಕೊಳ್ಳೋಣ. ಪ್ರತಿದಿನ ನಮ್ಮನ್ನು ನಾವು ಕನ್ನಡಿಯಂತೆ ನೋಡಿಕೊಂಡು, ಸತ್ಯವನ್ನು ಒಪ್ಪಿಕೊಂಡು, ತಪ್ಪುಗಳನ್ನು ತಿದ್ದಿಕೊಂಡು ಮುಂದುವರಿದರೆ- ಹೊಸ ವರ್ಷ ಕೇವಲ ಹೊಸ ದಿನವಾಗದೆ, ಹೊಸ ಬದುಕಾಗಿ ರೂಪುಗೊಳ್ಳುತ್ತದೆ.