ಸಾಂದರ್ಭಿಕ ಚಿತ್ರ 
ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಡೆ

ನಿಧಾನವಾಗಿ ಮರೆಯಾಗುತ್ತಿರುವ ಅಮೂಲ್ಯ ಕಲಾಪ್ರಕಾರಗಳು

ಜನಪದ ಕಲೆಗಳು ನಮ್ಮ ನಾಡಿನ ಸಂಸ್ಕೃತಿ, ಪರಂಪರೆಗಳ ಪ್ರತಿಬಿಂಬಗಳು. ಇವು ಕೇವಲ ಮನರಂಜನೆಯ ಚಟುವಟಿಕೆಗಳಲ್ಲ. ಅವು ನಮ್ಮ ಪೂರ್ವಜರ ಜೀವನಶೈಲಿ, ಸಂಸ್ಕೃತಿ, ನಂಬಿಕೆ, ಆಚರಣೆ, ಇತಿಹಾಸ ಹಾಗೂ ಸಾಮಾಜಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಂತಹ ಮಾಧ್ಯಮಗಳಾಗಿವೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಇಂತಹ ಅಮೂಲ್ಯ ಕಲಾಪ್ರಕಾರಗಳು ನಿಧಾನವಾಗಿ ಮರೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಒಂದೆರಡು ದಶಕಗಳ ಹಿಂದೆ ಹಳ್ಳಿಹಳ್ಳಿಗಳಲ್ಲಿ ಜಾತ್ರೆ, ಉತ್ಸವ, ಹಬ್ಬ ಹರಿದಿನ ಹಾಗೂ ಧಾರ್ವಿುಕ ಆಚರಣೆಗಳ ಸಂದರ್ಭದಲ್ಲಿ ಜನಪದ ಕಲೆಗಳ ಪ್ರದರ್ಶನ ಸಾಮಾನ್ಯವಾಗಿತ್ತು. ಡೊಳ್ಳು ಕುಣಿತಗಳು, ವೀರಾವೇಶದ ವೀರಗಾಸೆ, ಕಂಸಾಳೆಯ ನಾದ, ಪೂಜಾ ಕುಣಿತದ ಭಕ್ತಿ ಭಾವ, ವಿಶಿಷ್ಟ ವೇಷಭೂಷಣದ ಸೋಮನ ಕುಣಿತ, ಗೊರವರ, ಹಾಲಕ್ಕಿ ಕುಣಿತ, ವರ್ಣರಂಜಿತ ಲಂಬಾಣಿ ನೃತ್ಯ ಇವೆಲ್ಲವೂ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದ್ದವು.

ಆದರೆ ಇಂದು ಇಂತಹ ಕಲೆಗಳು ಕೆಲವೇ ಪ್ರದೇಶಗಳಿಗೆ ಹಾಗೂ ಪ್ರದರ್ಶನಾ ವೇದಿಕೆಗಳಿಗೆ ಸೀಮಿತವಾಗುತ್ತಿರುವುದು ವಿಷಾದನೀಯ. ಇದಕ್ಕೆ ಅನೇಕ ಕಾರಣಗಳಿರಬಹುದು. ಆರ್ಥಿಕ ಭದ್ರತೆಯ ಕೊರತೆ, ಪ್ರೋತ್ಸಾಹದ ಅಭಾವ ಹಾಗೂ ಪ್ರದರ್ಶನಕ್ಕೆ ಅಗತ್ಯವಾದ ವೇದಿಕೆಗಳ ಅಭಾವ ಇತ್ಯಾದಿ. ಅನೇಕ ತಲೆಮಾರುಗಳಿಂದ ಇಂತಹ ಕಲೆಗಳನ್ನು ಉಳಿಸಿಕೊಂಡು ಬಂದಿರುವ ಕಲಾವಿದರು ಇಂದು ಅನಿವಾರ್ಯವಾಗಿ ಜೀವನೋಪಾಯಕ್ಕಾಗಿ ಬೇರೆ ಬೇರೆ ವೃತ್ತಿಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಯುವಜನತೆ ಆಧುನಿಕ ಮನರಂಜನೆ ಮತ್ತು ತಂತ್ರಜ್ಞಾನದತ್ತ ಹೆಚ್ಚು ಆಕರ್ಷಿತರಾಗುತ್ತಿರುವುದರಿಂದ ಸಾಂಪ್ರದಾಯಿಕ ಕಲೆಗಳನ್ನು ಕಲಿಯುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ಜನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಿರುವ ಪ್ರತಿಭಾ ಕಾರಂಜಿ, ಟ್ಯಾಲೆಂಟ್ ಹಂಟ್ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಇಂತಹ ಕಲಾಪ್ರಕಾರಗಳಿಗೆ ಅವಕಾಶ ಕಲ್ಪಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನವಷ್ಟೇ ಅಲ್ಲದೆ, ನಮ್ಮ ನೆಲದ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಪರಿಚಯವೂ ಆಗಬೇಕು. ಹಿರಿಯ ಜನಪದ ಕಲಾವಿದರನ್ನು ಶಾಲೆಗಳಿಗೆ ಆಹ್ವಾನಿಸಿ ಪ್ರಾತ್ಯಕ್ಷಿಕೆ, ಕಾರ್ಯಾಗಾರ ಹಾಗೂ ತರಬೇತಿ ಶಿಬಿರಗಳನ್ನು ಆಯೋಜಿಸುವುದರಿಂದ ಮಕ್ಕಳಿಗೆ ಕಲಾ ಪ್ರಕಾರಗಳ ಮಾಹಿತಿ ದೊರೆಯುತ್ತದೆ.

ನಮ್ಮ ಕ್ಷೇತ್ರಗಳಿಗೆ ಕೆಲವೊಂದು ಜನಪದ ಕಲಾತಂಡಗಳು ಆಗಮಿಸಿ ಕಲಾಪ್ರದರ್ಶನವನ್ನು ನೀಡಿ ತೆರಳುತ್ತಾರೆ. ಕಳೆದ ಬಾರಿ ಬೊಂಬೆಯಾಟದ ಯಕ್ಷಗಾನ ತಂಡವು ಆಗಮಿಸಿ ಪ್ರದರ್ಶನ ನೀಡಿತ್ತು. ನೋಡಲು ವಿಶೇಷವಾಗಿದ್ದು, ಅದರ ರಂಗ ಸಜ್ಜಿಕೆ ಹಾಗೂ ಹಿಮ್ಮೇಳ, ಕಲಾಕಾರನ ಕೈಚಳಕ ಎಲ್ಲವೂ ಅದ್ಭುತವಾಗಿತ್ತು. ಉತ್ತಮ ರೀತಿಯಲ್ಲಿ ಕಲಾ ಪ್ರದರ್ಶನ ಮಾಡಲು ಸಾಕಷ್ಟು ಅಭ್ಯಾಸ ಹಾಗೂ ಪರಿಶ್ರಮ ಪಡಬೇಕಾಗುತ್ತದೆ.

ಯಕ್ಷಗಾನವೂ ವಿಶೇಷವಾದ ಜನಪದ ಕಲಾಪ್ರಕಾರವಾಗಿದ್ದು, ಇಂದಿಗೂ ಸಾಕಷ್ಟು ಕಡೆಗಳಲ್ಲಿ ಈ ಕಲೆಗಳನ್ನು ಕಾಣಬಹುದಾಗಿದೆ. ವಿವಿಧ ಪುಣ್ಯ ಕ್ಷೇತ್ರಗಳು ಹಾಗೂ ಸಂಸ್ಥೆಗಳು ಯಕ್ಷಗಾನ ಮೇಳವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯು 2-3 ಶತಮಾನಗಳ ಹಿನ್ನೆಲೆಯನ್ನು ಹೊಂದಿದ್ದು, ಪ್ರತಿವರ್ಷ ನಾಡಿನ ವಿವಿಧ ಭಾಗಗಳಲ್ಲಿ ಸೇವಾ ರೂಪದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡುತ್ತಿದೆ.

ಕೆಲವು ವರ್ಷಗಳ ಹಿಂದೆ ಯಕ್ಷಗಾನ ಆಸಕ್ತರು ಕಡಿಮೆಯಾಗತೊಡಗಿದಾಗ, ಯಕ್ಷಗಾನ ಕಲೆ ತೆರೆಮರೆಗೆ ಸರಿಯುತ್ತದೆ ಎಂಬ ಕೂಗು ಕೇಳತೊಡಗಿದಾಗ ನಾವು 2015ರಲ್ಲಿ ಧರ್ಮಸ್ಥಳದ ಯಕ್ಷಗಾನ ಮಂಡಳಿಯ ಪ್ರದರ್ಶನವನ್ನು ಕಾಲಮಿತಿಗೆ ಒಳಪಡಿಸುವ ಪ್ರಯೋಗವನ್ನು ಮಾಡಿದೆವು. ಅದರಂತೆ ಸಂಜೆ 7ರಿಂದ ರಾತ್ರಿ 12ರವರೆಗೆ ಪ್ರದರ್ಶನ ನಡೆಸುವ ಪದ್ಧತಿ ಜಾರಿಗೆ ತಂದೆವು. ಯಕ್ಷಗಾನದ ಪೂರ್ವರಂಗ ಸೇರಿದಂತೆ ಸಾಂಪ್ರದಾಯಿಕ ಅಂಶಗಳನ್ನು ಉಳಿಸಿಕೊಂಡೇ ಕಾಲಮಿತಿಯನ್ನು ಅಳವಡಿಸಿದೆವು. ಇದು ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿತು. ಈ ಕಾಲಮಿತಿಯಿಂದಾಗಿ ಬೆಳಗ್ಗೆವರೆಗೆ ನಿದ್ದೆಗೆಡದೆ ಉದ್ಯೋಗಸ್ಥರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಪ್ರೇಕ್ಷಕರಿಗೂ ಯಕ್ಷಗಾನ ವೀಕ್ಷಿಸಲು ಅವಕಾಶ ದೊರೆಯುವಂತಾಯಿತು. ಜೊತೆಗೆ ಕಲಾವಿದರಿಗೆ ವಿಶ್ರಾಂತಿ ಮತ್ತು ಹೆಚ್ಚಿನ ಅಭ್ಯಾಸಕ್ಕೆ ಸಮಯ ಒದಗುವುದರ ಜೊತೆಗೆ ಆರೋಗ್ಯ ಸಂರಕ್ಷಣೆಗೂ ಸಹಕಾರಿಯಾಯಿತು.

ಸಾಂಪ್ರದಾಯಿಕ ಸೊಗಡನ್ನು ಉಳಿಸಿಕೊಂಡು ನಡೆಯುವ ಕಾಲಮಿತಿ ಯಕ್ಷಗಾನವು ಇಂದು ಯಶಸ್ವಿಯಾಗಿ ನಡೆಯುತ್ತಲಿದೆ. ಅನೇಕ ಮೇಳಗಳು ಕಾಲಮಿತಿಯನ್ನು ಅಳವಡಿಸಿಕೊಂಡು ಪ್ರದರ್ಶನವನ್ನು ನೀಡುತ್ತಿವೆ. ಪ್ರೇಕ್ಷಕರೂ ಉತ್ತಮ ಪ್ರತಿಕ್ರಿಯೆ ನೀಡಿದ್ದು, ಯಕ್ಷಗಾನವು ಇನ್ನಷ್ಟು ಪ್ರಚಾರವನ್ನು ಪಡೆದುಕೊಂಡು ಕಲಿಕಾಸಕ್ತರೂ ಕೂಡ ಹೆಚ್ಚುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮಂಗಳೂರಿನ ಎಸ್.ಡಿ.ಎಂ. ಸಂಸ್ಥೆಯಲ್ಲಿ ಯಕ್ಷಗಾನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೆ. ಹೀಗೆ ನಮ್ಮ ಜನಪದ ಕಲೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದಕ್ಕಾಗಿ ಕೊಂಚ ಹೊಸ ರೀತಿಯಲ್ಲಿ ಚಿಂತನೆಗಳನ್ನು ನಡೆಸಬೇಕಾಗಿದೆ.

ಯಕ್ಷಗಾನವಿರಲಿ ಅಥವಾ ಇತರ ಕಲಾಪ್ರಕಾರಗಳಿರಲಿ ಅವು ಮನರಂಜನೆಯಲ್ಲ, ಅದು ನಮ್ಮ ಧಾರ್ವಿುಕ ನಂಬಿಕೆ, ಪೌರಾಣಿಕ ಜ್ಞಾನ, ಸಂಗೀತ, ನೃತ್ಯ, ವೇಷಭೂಷಣ ಮತ್ತು ಅಭಿನಯಗಳ ಸಮನ್ವಯದ ಕಲಾ ಸಂಪತ್ತು. ಕಾಲ ಬದಲಾದರೂ ಕಲೆಯ ಮೂಲ ಆಶಯ ಬದಲಾಗಬಾರದು. ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂದಾಗಿ ಹೇಳುತ್ತಾರೆ. ಮೂಡಲಪಾಯದಲ್ಲಿ ದೊಡ್ಡಾಟ ಮತ್ತು ಸಣ್ಣಾಟ ಎಂಬ ವಿಭಾಗಗಳಿವೆ. ಪಡುವಲಪಾಯದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎಂಬುದಿದೆ. ತೆಂಕುತಿಟ್ಟು ಯಕ್ಷಗಾನವು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಪ್ರಸಿದ್ಧವಾಗಿರುವ ಶೈಲಿ.

ಹಾಗೆಯೇ ಬಡಗುತಿಟ್ಟು ಉತ್ತರ ಕನ್ನಡದ ಉತ್ತರ ಭಾಗಗಳಲ್ಲಿ ಕಂಡುಬರುವ ಪ್ರಾದೇಶಿಕ ಶೈಲಿ. ಇವೆರಡೂ ಶೈಲಿ ವೇಷಭೂಷಣ, ಪ್ರದರ್ಶನ ಪರಂಪರೆ ಮತ್ತು ಅಭಿನಯದಲ್ಲಿ ತನ್ನದೇ ಆದ ವಿಶೇಷತೆಗಳನ್ನು ಹೊಂದಿವೆ. ಯಕ್ಷಗಾನ ಕಲೆಯನ್ನು ಉಳಿಸುವಲ್ಲಿ ಚಿಕ್ಕ ಮೇಳಗಳು, ಯಕ್ಷಗಾನ ತಾಳಮದ್ದಲೆಗಳೂ ಬಹಳಷ್ಟು ಪೂರಕವಾಗಿವೆ. ಚಿಕ್ಕಮೇಳ ಎಂದರೆ ಯಕ್ಷಗಾನದ ಸಣ್ಣ ತಂಡ. ಭಾಗವತರು, ಮದ್ದಲೆ ಅಥವಾ ಚೆಂಡೆ ವಾದಕರು ಹಾಗೂ ವೇಷಧಾರಿ ಕಲಾವಿದರು ಸೇರಿ ಒಂದು ತಂಡವಾಗಿ ಊರೂರು ಸುತ್ತುತ್ತಾರೆ. ಯಕ್ಷಗಾನದ ಮೂಲ ಸೊಗಡನ್ನು ಉಳಿಸಿಕೊಂಡು ಜನರ ನಡುವೆ ಕಲೆ ಪಸರಿಸುವುದು ಚಿಕ್ಕಮೇಳಗಳ ವಿಶೇಷತೆ. ಸಾಮಾನ್ಯವಾಗಿ ಮಳೆಗಾಲ ಮುಗಿದು ಯಕ್ಷಗಾನದ ತಿರುಗಾಟ ಆರಂಭವಾಗುತ್ತವೆ. ವಿಶೇಷ ಅಥವಾ ಧಾರ್ವಿುಕ ಸಂದರ್ಭಗಳಲ್ಲಿ ಚಿಕ್ಕಮೇಳಗಳು ಮನೆಮನೆಗೆ ಭೇಟಿ ನೀಡುತ್ತವೆ. ಮನೆಯ ಅಂಗಳದಲ್ಲಿ, ಜಗಲಿಯಲ್ಲಿ ದೇವರ ಸ್ಮರಣೆಯೊಂದಿಗೆ ಪ್ರದರ್ಶನ ಆರಂಭವಾಗುತ್ತದೆ. ಕೆಲವೇ ನಿಮಿಷಗಳ ಕಾಲ ಪೌರಾಣಿಕ ಪ್ರಸಂಗದ ಆಯ್ದ ಭಾಗವನ್ನು ಅಭಿನಯಿಸುವ ಮೂಲಕ ಮನೆಯವರಿಗೆ ಮನರಂಜನೆಯ ಜೊತೆಗೆ ಧಾರ್ವಿುಕ ಭಾವನೆಯನ್ನೂ ಮೂಡಿಸುತ್ತವೆ. ಮನೆಯವರು ತಮ್ಮ ಶಕ್ಱಾನುಸಾರ ನೀಡುವ ಅಕ್ಕಿ, ತೆಂಗಿನಕಾಯಿ ಇತ್ಯಾದಿ ಕಾಣಿಕೆಯನ್ನು ಸ್ವೀಕರಿಸಿ ಮುಂದಿನ ಮನೆಗೆ ತೆರಳುತ್ತಾರೆ.

ಚಿಕ್ಕಮೇಳಗಳ ಚೆಂಡೆ, ಮದ್ದಲೆಯ ನಾದ ಕೇಳುತ್ತಿದ್ದಂತೆ ಮನೆಯವರು ಹೊರಬಂದು ಕಲಾವಿದರನ್ನು ಸ್ವಾಗತಿಸುತ್ತಾರೆ. ಮಕ್ಕಳಿಗೆ ಬಣ್ಣಬಣ್ಣದ ವೇಷಗಳು ಕುತೂಹಲ ಮೂಡಿಸಿದರೆ, ಹಿರಿಯರಿಗೆ ಯಕ್ಷಗಾನದ ಹಳೆಯ ನೆನಪುಗಳು ಮರುಕಳಿಸುತ್ತವೆ. ಚಿಕ್ಕಮೇಳಗಳ ಮತ್ತೊಂದು ವಿಶೇಷತೆ ಎಂದರೆ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವುದು. ದೊಡ್ಡ ಮೇಳಗಳಲ್ಲಿ ಅವಕಾಶ ಸಿಗದ ಅನೇಕ ಪ್ರತಿಭಾವಂತ ಕಲಾವಿದರು ಚಿಕ್ಕಮೇಳಗಳ ಮೂಲಕ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಭಾಗವತಿಕೆ, ವೇಷಭೂಷಣ, ನೃತ್ಯ, ಅಭಿನಯ ಮತ್ತು ಮಾತುಗಾರಿಕೆಯ ಅನುಭವವನ್ನು ಪಡೆಯುತ್ತಾರೆ. ಹಿರಿಯ ಕಲಾವಿದರಿಂದ ಕಿರಿಯರಿಗೆ ಕಲಾಪಾಠಗಳು ಹರಿದುಬರುತ್ತವೆ. ದೊಡ್ಡ ರಂಗಸ್ಥಳದಲ್ಲಿ ಪ್ರದರ್ಶನಗೊಳ್ಳುವ ಯಕ್ಷಗಾನಕ್ಕೆ ತನ್ನದೇ ಆದ ವೈಭವವಿದ್ದರೆ, ಮನೆಯ ಅಂಗಳದಲ್ಲಿ ಸಾದರಗೊಳ್ಳುವ ಚಿಕ್ಕಮೇಳಕ್ಕೆ ಆತ್ಮೀಯತೆಯ ಸೊಗಡಿದೆ.

ಹಾಗೆಯೇ ಯಕ್ಷಗಾನಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ತಾಳಮದ್ದಲೆಗೂ ಇದೆ. ಯಕ್ಷಗಾನದ ಒಂದು ವಿಶಿಷ್ಟ ಅಂಗವಾಗಿರುವ ತಾಳಮದ್ದಲೆಯು ಪುರಾಣ, ಇತಿಹಾಸ, ಸಾಹಿತ್ಯ, ತರ್ಕ, ವಾದ-ವಿವಾದ ಮತ್ತು ಜೀವನಮೌಲ್ಯಗಳ ಸುಂದರ ಸಮನ್ವಯವಾಗಿದೆ. ಬಣ್ಣದ ವೇಷವಿಲ್ಲದೆ, ಕುಣಿತವಿಲ್ಲದೆ ಕೇವಲ ಮಾತುಗಾರಿಕೆ, ಸಂಗೀತ ಮತ್ತು ಅರ್ಥಪೂರ್ಣ ಸಂಭಾಷಣೆಯ ಮೂಲಕ ಪ್ರೇಕ್ಷಕರ ಮನಸ್ಸನ್ನು ಸೆಳೆಯುವ ವಿಶಿಷ್ಟ ಕಲೆಯಾಗಿದೆ.

ತಾಳಮದ್ದಲೆಯಲ್ಲಿ ಸಾಮಾನ್ಯವಾಗಿ ಭಾಗವತರು ಪ್ರಸಂಗದ ಪದ್ಯಗಳನ್ನು ಹಾಡುತ್ತಾರೆ. ಮದ್ದಳೆ ಮತ್ತು ಚೆಂಡೆಯಂತಹ ವಾದ್ಯಗಳ ನಾದ ಪದ್ಯಗಳಿಗೆ ಮೆರುಗು ನೀಡುತ್ತದೆ. ನಂತರ ಪ್ರಸಂಗದ ಪಾತ್ರಗಳನ್ನು ನಿರ್ವಹಿಸುವ ಅರ್ಥಧಾರಿಗಳು ತಮ್ಮ ಮಾತುಗಾರಿಕೆಯ ಮೂಲಕ ಕಥೆಯನ್ನು ಮುಂದುವರಿಸುತ್ತಾರೆ. ರಾಮಾಯಣ, ಮಹಾಭಾರತ ಮತ್ತು ಭಾಗವತದ ಕಥಾನಕಗಳು ಇಲ್ಲಿ ಸಂಭಾಷಣೆಯ ರೂಪದಲ್ಲಿ ಅನಾವರಣಗೊಳ್ಳುತ್ತವೆ. ತಾಳಮದ್ದಲೆಯ ವಿಶೇಷತೆ ಎಂದರೆ ಪಾತ್ರಧಾರಿಗಳಿಗೆ ವೇಷಭೂಷಣಗಳ ಅಗತ್ಯವಿಲ್ಲ. ಅವರು ಸಾಮಾನ್ಯ ಉಡುಪಿನಲ್ಲಿಯೇ ಪಾತ್ರಗಳನ್ನು ಪ್ರತಿನಿಧಿಸುತ್ತಾರೆ. ಕೇಳುವ ತಾಳ್ಮೆ, ವಿಚಾರಿಸುವ ಮನೋಭಾವ, ಭಾಷಾಪ್ರೌಢಿಮೆ ಮತ್ತು ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಶಕ್ತಿ ಈ ಕಲೆಗೆ ಇದೆ.

ಯಕ್ಷಗಾನವಿರಲಿ ಅಥವಾ ಇತರ ಯಾವುದೇ ಜನಪದ ಕಲೆಗಳ ಉಳಿವು ಕೇವಲ ಕಲಾವಿದರ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬರ ಕರ್ತವ್ಯವೂ ಹೌದು. ಕಾಲಕ್ಕೆ ತಕ್ಕಂತೆ ಹೊಸತನವನ್ನು ಅಳವಡಿಸಿಕೊಳ್ಳುವ ಜೊತೆಗೆ ಕಲೆಯ ಅಂತಃಸತ್ವ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ. ಕಲಾವಿದರಿಗೆ ಸೂಕ್ತ ಗೌರವ, ಪ್ರೋತ್ಸಾಹ ಹಾಗೂ ಆರ್ಥಿಕ ಭದ್ರತೆ ದೊರೆತಾಗ ಮಾತ್ರ ಇಂತಹ ಕಲೆಗಳು ಮುಂದಿನ ಪೀಳಿಗೆಗೂ ಜೀವಂತವಾಗಿ ಉಳಿಯಲು ಸಾಧ್ಯ. ನಮ್ಮ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವ ಕನ್ನಡ ನಾಡಿನ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಲು ನಾವೆಲ್ಲ ಪ್ರಯತ್ನಿಸೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)