ಧಾರ್ವಿುಕವಾಗಿ ರಥ ಭೌತಿಕ ಮತ್ತು ಆಧ್ಯಾತ್ಮಿಕತೆಯ ಸಂಗಮ. ಶ್ರದ್ಧಾಕೇಂದ್ರಗಳಲ್ಲಿನ ರಥೋತ್ಸವ ಎಂಬುದು ಭಕ್ತ ಮತ್ತು ಭಗವಂತನ ನಡುವಿನ ಕೊಂಡಿಯಾಗಿದೆ. ಕಠೋಪನಿಷತ್ತಿನ ಪ್ರಕಾರ, ನಮ್ಮ ದೇಹವೇ ಒಂದು ರಥ. ಆತ್ಮವೇ ರಥದ ಯಜಮಾನ ಎಂದಿದೆ. ಅಂದರೆ ಶರೀರ ರಥವಾದರೆ, ಬುದ್ಧಿ ಅದರ ಸಾರಥಿ. ಇಂದ್ರಿಯಗಳು ರಥಕ್ಕೆ ಕಟ್ಟಿದ ಕುದುರೆಗಳು. ಮನಸ್ಸು ಅದರ ಲಗಾಮು ಎಂಬುದಾಗಿದೆ. ಹಾಗೆಯೇ ದೇವರನ್ನು ರಥದಲ್ಲಿ ಕೂರಿಸುವುದು ಎಂದರೆ, ನಮ್ಮ ಅಹಂಕಾರವನ್ನು ಬಿಟ್ಟು ಬುದ್ಧಿಯನ್ನು ಭಗವಂತನಿಗೆ ಅರ್ಪಿಸಿ, ಜೀವನದ ಹಾದಿಯನ್ನು ಮುನ್ನಡೆಸಲು ಆತನನ್ನು ಪ್ರಾರ್ಥಿಸುವುದು ಎಂದರ್ಥ.
ರಥದ ಬಗ್ಗೆಯೇ ಅಧ್ಯಾತ್ಮದಲ್ಲಿ ಅನೇಕ ರೀತಿಯಲ್ಲಿ ವಿಶ್ಲೇಷಿಸಲಾಗಿದೆ. ರಥದ ಚಕ್ರಗಳನ್ನು ಸೂರ್ಯ ಮತ್ತು ಚಂದ್ರರ ಸಂಕೇತ (ಕಾಲಚಕ್ರ) ಎಂದು ಸೂಚಿಸಲಾಗಿದೆ. ರಥದ ಮೇಲಿರುವ ಧ್ವಜ ವಿಜಯದ ಸಂಕೇತವಾದರೆ ಕಲಶ ಅಥವಾ ಶಿಖರವು ಆಧ್ಯಾತ್ಮಿಕ ಉನ್ನತಿಯನ್ನು ಅರ್ಥೈಸುತ್ತದೆ. ರಥ ಎಳೆಯುವುದು ಎಂದರೆ ನಮ್ಮ ಅಹಂಕಾರ ತ್ಯಜಿಸಿ, ಸತ್ಕರ್ಮಗಳನ್ನು ದೇವರಿಗೆ ಅರ್ಪಿಸಿ, ಭಕ್ತಿಯ ಹಾದಿಯಲ್ಲಿ ನಡೆಯುವುದು ಎಂಬುದಾಗಿದೆ.
ವರ್ಷಕ್ಕೊಮ್ಮೆ ಅಥವಾ ವಿಶೇಷ ಉತ್ಸವಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಸಿಂಗರಿಸಿದ ರಥದಲ್ಲಿ ಕುಳ್ಳಿರಿಸಿ ಧರ್ಮ, ಜಾತಿ, ಮತ ಭೇದವಿಲ್ಲದೆ ಎಲ್ಲರೂ ಸೇರಿ ರಥವನ್ನು ಎಳೆಯುತ್ತಾರೆ. ಈ ಮೂಲಕ ಸಮಾಜದಲ್ಲಿ ಒಗ್ಗಟ್ಟು, ಏಕತೆ ವ್ಯಕ್ತವಾಗುತ್ತದೆ. ಹಾಗೆಯೇ ಉತ್ಸವ ಸಮಯದಲ್ಲಿ ಸ್ವತಃ ಭಗವಂತನೇ ಭಕ್ತರು ನೆಲೆಸಿರುವ ಬೀದಿಗೆ ರಥಾರೂಢರಾಗಿ ಬಂದು ಭೇಟಿ ನೀಡುತ್ತಾರೆ ಎಂಬ ವಾಡಿಕೆಯಿದೆ.
ದೇವಸ್ಥಾನಗಳಲ್ಲಿ ದೇವರ ಉತ್ಸವಕ್ಕಾಗಿ ಬಳಸುವ ರಥಗಳನ್ನು ಯಾರು, ಹೇಗೆ ಶೃಂಗರಿಸುತ್ತಾರೆ ಎಂಬ ಕುತೂಹಲ ಹೆಚ್ಚಿನವರಲ್ಲಿ ಇರುವುದು ಸಾಮಾನ್ಯ. ದೇವಸ್ಥಾನದ ಕಾರ್ಯಗಳಿಗೆ ಹಿಂದಿನ ಕಾಲದಲ್ಲಿ ಕುಲಕಸುಬಿನ ಹಿನ್ನೆಲೆಯಲ್ಲಿ ಕೆಲವು ಜನಾಂಗಗಳನ್ನು ಆಯ್ಕೆ ಮಾಡುತ್ತಿದ್ದರು. ಉದಾಹರಣೆಗೆ, ದೇವಸ್ಥಾನದ ಒಳಗೆ ಬೇಕಾದಂತಹ ಬಟ್ಟೆಗಳನ್ನು ಮಡಿವಾಳರೇ ಶುಚಿ ಮಾಡಿ ಕೊಡುತ್ತಾರೆ. ಇದಕ್ಕೆ ಮಡಿವಾಳ ಮಡಿ ಎಂದು ಹೇಳುತ್ತಾರೆ. ದೇವಸ್ಥಾನಕ್ಕೆ ಬೇಕಾಗುವ ದೀಪದ ಎಣ್ಣೆ, ಅಡುಗೆ ಎಣ್ಣೆ ಮುಂತಾದ ಎಣ್ಣೆಗಳನ್ನು ಗಾಣಿಗರು ತಯಾರು ಮಾಡಿ ತರುತ್ತಿದ್ದರು. ಆದರೆ, ಆಧುನಿಕತೆ ಹಾಗೂ ವ್ಯವಸ್ಥೆಗಳು ಬದಲಾದಂತೆ ಅಂಗಡಿಯಲ್ಲಿ ದೊರೆಯುವ ಶುದ್ಧ ಎಣ್ಣೆಯನ್ನು ಬಳಸಲಾಗುತ್ತದೆ.
ಈಗಲೂ ಗಾಣಿಗರು ಮಾಡಿ ತರುವಂತಹ ಎಣ್ಣೆಯನ್ನು ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಅಂತೆಯೇ ಮರ ಏರುವುದು, ಬೆತ್ತದ ಸಂಗ್ರಹ, ಎತ್ತರದ ರಥವನ್ನು ಏರಿ ನಿರ್ಭೀತರಾಗಿ ಕೆಲಸ ಮಾಡುವ ಕೌಶಲ, ರಥಕ್ಕೆ ಹಗ್ಗವನ್ನು ಕಟ್ಟಿ ಯಾವುದೇ ಕಾರಣಕ್ಕೂ ಬಿಚ್ಚದಂತೆ, ಸಡಿಲವಾಗದಂತೆ ಕಾರ್ಯನಿರ್ವಹಿಸುವ ಕೌಶಲ ಹೊಂದಿರುವ ಮಲೆಕುಡಿಯ ಜನಾಂಗದವರು ರಥ ಕಟ್ಟುವ ಕೆಲಸವನ್ನು ಸಾಂಪ್ರದಾಯಿಕವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಮಲೆ ಅಂದರೆ ಕಾಡು. ಹೆಚ್ಚಾಗಿ ಕಾಡಿನಲ್ಲಿ ವಾಸ ಮಾಡುತ್ತಿದ್ದ ಈ ಜನಾಂಗದವರು ಧರ್ಮಸ್ಥಳ ಮಾತ್ರವಲ್ಲದೆ ಸುಬ್ರಹ್ಮಣ್ಯ ಇತ್ಯಾದಿ ಹೆಚ್ಚಿನ ದೇವಸ್ಥಾನಗಳಲ್ಲಿ ರಥ ಕಟ್ಟುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಅನಾದಿ ಕಾಲದಿಂದಲೂ ಶ್ರೀಕ್ಷೇತ್ರದಲ್ಲಿ ಮಲೆಕುಡಿಯರು ರಥ ಶೃಂಗರಿಸುತ್ತಿದ್ದು, ರಥ ಕಟ್ಟುವ ಸಂಪ್ರದಾಯವನ್ನು ಮುಂದುವರೆಸುತ್ತಿದ್ದಾರೆ, ಬೆತ್ತ, ಹಗ್ಗ ಬಳಸಿ ರಥವನ್ನು ಕಟ್ಟಲಾಗುತ್ತದೆ. ಶೃಂಗರಿಸುವ ಮೊದಲು ರಥದ ಮೇಲ್ಭಾಗದಲ್ಲಿ ಸುತ್ತಲೂ ಬೆತ್ತವನ್ನು ಕಟ್ಟಲಾಗುತ್ತದೆ. ಎಲ್ಲರಿಗೂ ಈ ಕೆಲಸ ಮಾಡಲು ಬರುವುದಿಲ್ಲ. ನಿಪುಣರು ಮಾತ್ರ ಇವುಗಳನ್ನು ಕಟ್ಟಲು ಸಾಧ್ಯ. ಮೊದಲು ರಥ ಕಟ್ಟುವ ನಿಪುಣರಾದ ಐದು ಮಂದಿ ರಥವನ್ನೇರಿ ಶೃಂಗರಿಸುವ ಕೆಲಸಕ್ಕೆ ಚಾಲನೆ ನೀಡುತ್ತಾರೆ. ಅನಂತರ ರಥವನ್ನೇರಿ ಶೃಂಗಾರ ಕಾರ್ಯದಲ್ಲಿ ಅಂದರೆ ರಥ ಕಟ್ಟುವ ಕೆಲಸದಲ್ಲಿ ತೊಡಗುತ್ತಾರೆ. ರಥದ ತುದಿ ಭಾಗವನ್ನು ಕಟ್ಟುವುದು ತುಂಬ ಕಷ್ಟದ ಕೆಲಸವಾಗಿದ್ದು ಇದಕ್ಕೆ ಸಾಕಷ್ಟು ಕೌಶಲವನ್ನು ಹೊಂದಿರಬೇಕಾಗುತ್ತದೆ.
ಮೂರು ರಥಗಳನ್ನು ಕಟ್ಟಲು ಹತ್ತು ದಿನ ಬೇಕು. ರಥವನ್ನು ಬಿಚ್ಚಲು ನಾಲ್ಕು ದಿನಗಳು ಸಾಕು. ರಥ ಕಟ್ಟಲು ಬಲಿತ ಬೆತ್ತವನ್ನು ಉಪಯೋಗಿಸಲಾಗುತ್ತದೆ. ಒಂದು ಬೆತ್ತ ಸುಮಾರು 16-17 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಪ್ರತಿ ಬಾರಿ ಬೆತ್ತವನ್ನು ಜೋಪಾನವಾಗಿಟ್ಟು ಬಳಸಲಾಗುತ್ತದೆ. ಉತ್ಸವ ನಡೆಯುವ ದಿನ ರಥ-ಶೃಂಗಾರದ ಎಲ್ಲ ಕೆಲಸವನ್ನು ಮುಗಿಸಿ, ರಥವನ್ನು ಎಳೆಯುವುದಕ್ಕಾಗಿ ಬಿಟ್ಟುಕೊಡಲಾಗುತ್ತದೆ. ರಥ ಶೃಂಗಾರ ಎಂಬ ಗೌರವದ ಕೆಲಸಕ್ಕೆ ಕೌಶಲ, ಅನುಭವ ಅತ್ಯಗತ್ಯ. ಶುದ್ಧತೆಗೆ ಇಲ್ಲಿ ಮೊದಲ ಪ್ರಾಶಸ್ಱ. ರಥ ಕಟ್ಟುವ ಕಾರ್ಯದಲ್ಲಿರುವವರು ವ್ರತದಲ್ಲಿ ಇದ್ದು, ಮಡಿಯಿಂದ ಈ ಕಾರ್ಯದಲ್ಲಿ ತೊಡಗುತ್ತಾರೆ. ದೇವಸ್ಥಾನಗಳಲ್ಲಿ ಹೆಚ್ಚಾಗಿ ಮರದ ರಥ ಬಳಕೆಯಾಗುತ್ತದೆ.
ಚಿನ್ನ ಮತ್ತು ಬೆಳ್ಳಿಯ ಹೊದಿಕೆಯನ್ನು ಹೊಂದಿದ ರಥಗಳೂ ಕೆಲವೆಡೆ ಇವೆ. ಮರದ ರಥಗಳು ವಿವಿಧ ಎತ್ತರ, ವಿನ್ಯಾಸ, ಕೆತ್ತನೆಗಳನ್ನು ಒಳಗೊಂಡಿದ್ದು ನೋಡಲು ಆಕರ್ಷಕವಾಗಿರುತ್ತವೆ. ನಾಲ್ಕು ಚಕ್ರಗಳ ಮೇಲೆ ವಿವಿಧ ಕೆತ್ತನೆಗಳುಳ್ಳ ಬಲಿಷ್ಠ ತಳಪಾಯ ಇರುತ್ತದೆ. ಅದರ ಮೇಲೆ ದೇವರನ್ನು ಕುಳ್ಳಿರಿಸುವ ಪೀಠ. ಜಾತ್ರೆ ಸಮಯದಲ್ಲಿ ಈ ತಳಪಾಯಕ್ಕೆ ಮರದ ಕಂಬಗಳ ಸಹಾಯದಿಂದ ಗೋಪುರ ನಿರ್ವಿುಸಿ ಬಣ್ಣ ಬಣ್ಣದ ಪತಾಕೆಗಳನ್ನು ಅಳವಡಿಸಲಾಗುತ್ತದೆ. ಕೆಲವು ಕಡೆ ಇನ್ನಷ್ಟು ಸುಂದರವಾಗಿ ಕಾಣಲು ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ.
ಹಿಂದೆ ರಾಜ-ಮಹಾರಾಜರ ಕಾಲದಲ್ಲಿ ಬಳಕೆಯಲ್ಲಿದ್ದ ರಥಗಳು ಬೇರೆಯದೇ ಆಗಿದ್ದವು. ಅವರ ವಿಹಾರ, ದೂರ ಪ್ರಯಾಣಗಳಿಗೆ ಮಾತ್ರವಲ್ಲ ಯುದ್ಧಗಳಿಗೂ ಬಳಕೆಯಾಗುತ್ತಿದ್ದವು. ರಥಗಳನ್ನು ಎಳೆಯಲು ಬಲಿಷ್ಠವಾದ ಕುದುರೆಗಳನ್ನು ಬಳಸುತ್ತಿದ್ದರು. ರಾಜ-ಮಹಾರಾಜರ ರಥಗಳು ವೇಗ ಮತ್ತು ವೈಭವದ ಸಂಕೇತವಾಗಿದ್ದವು. ಯುದ್ಧಗಳಲ್ಲಿ ರಥಗಳು ಸೇನೆಯ ಪ್ರಮುಖ ಭಾಗವಾಗಿದ್ದು, ರಾಜರು, ಮಂತ್ರಿ, ಸೇನಾನಿ ಮುಂತಾದ ಪ್ರಮುಖರು ರಥದ ಮೇಲೆ ನಿಂತು ಶತ್ರುಗಳ ವಿರುದ್ಧ ಹೋರಾಡುತ್ತಿದ್ದರು. ಇವರು ಹೋರಾಡುವಾಗ ರಥಕ್ಕೆ ಕಟ್ಟಿದ ಕುದುರೆಗಳ ಲಗಾಮನ್ನು ಹಿಡಿದು ರಥವನ್ನು ಮುನ್ನಡೆಸುವವನನ್ನು ರಥಿಕ ಅಥವಾ ಸಾರಥಿ ಎಂದೆನ್ನುತ್ತಿದ್ದರು.
ರಥ ಸಾರಥಿಯ ಪಾತ್ರ ಅತ್ಯಂತ ಮಹತ್ವವಾದುದು. ರಥದಲ್ಲಿ ನಿಂತು ಯುದ್ಧ ಮಾಡುವ ಯೋಧನಿಗೆ ಅನುಕೂಲವಾಗುವಂತೆ ರಥವನ್ನು ಚಾತುರ್ಯದಿಂದ ಮುನ್ನಡೆಸಲು ಅಪಾರ ಕೌಶಲ ಮತ್ತು ಚಾಣಾಕ್ಷತನ ಅಗತ್ಯ. ಯುದ್ಧಭೂಮಿಯಲ್ಲಿ ಶತ್ರುಗಳ ದಾಳಿ, ವೇಗ ಮತ್ತು ದಿಕ್ಕುಗಳನ್ನು ಗಮನಿಸಿ ರಥವನ್ನು ಸರಿಯಾಗಿ ನಿಯಂತ್ರಿಸುವುದು ರಥಿಕನ ಮುಖ್ಯ ಕರ್ತವ್ಯ. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ರಥಸಾರಥಿಯಾಗಿ ಕಾರ್ಯನಿರ್ವಹಿಸಿದ್ದು ಧರ್ಮಕ್ಕೆ ಜಯ ದೊರಕುವಲ್ಲಿ ಮಹತ್ತರ ಪಾತ್ರ ವಹಿಸಿರುವುದು ನಮಗೆಲ್ಲ ತಿಳಿದೇ ಇದೆ. ಹಾಗೆಯೇ ರಾಮಾಯಣದಲ್ಲಿ ಶ್ರೀರಾಮನ ತಂದೆಯ ಹೆಸರು ದಶರಥ.
ಪುರಾಣಗಳ ಪ್ರಕಾರ ದಶರಥನು ಒಂದೇ ಸಮಯದಲ್ಲಿ ಹತ್ತು ದಿಕ್ಕುಗಳಲ್ಲಿ ರಥವನ್ನು ಚಲಾಯಿಸುವ ಸಾಮರ್ಥ್ಯ ಹೊಂದಿದ್ದ ಶೂರ ರಾಜನಾಗಿದ್ದ. ಯುದ್ಧಕಲೆಯಲ್ಲಿ ಹಾಗೂ ರಥಸಾರಥ್ಯದಲ್ಲಿ ಅವನಿಗೆ ಅಪಾರ ಪಾಂಡಿತ್ಯವಿದ್ದ ಕಾರಣ ಅವನಿಗೆ ದಶರಥ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ದೇವತೆಗಳಿಗೂ ರಥಗಳಿರುವ ಬಗ್ಗೆ ವಿವರಣೆಗಳು ಪುರಾಣಗಳಲ್ಲಿ ಸಿಗುತ್ತವೆ. ಆಕಾಶದಲ್ಲಿ ಸಂಚರಿಸುವ ಸೂರ್ಯದೇವನ ರಥವನ್ನು ಏಳು ಕುದುರೆಗಳು ಎಳೆಯುತ್ತವೆ. ಇವು ವಾರದ ಏಳು ದಿನಗಳನ್ನು, ಬೆಳಕಿನ ಏಳು ಬಣ್ಣಗಳನ್ನು ಪ್ರತಿನಿಧಿಸುತ್ತವೆ ಎಂದು ವ್ಯಾಖ್ಯಾನಿಸಲಾಗಿದೆ. ಅದೇ ರೀತಿ ಇಂದ್ರನಿಗೆ ಹಾಗೂ ಇತರ ದೇವಾನುದೇವತೆಗಳಿಗೆ ದಿವ್ಯ ರಥವಿದ್ದು, ಅವು ಆಕಾಶ ಮಾರ್ಗದಲ್ಲಿ ಸಂಚರಿಸುತ್ತವೆ ಎಂಬ ಉಲ್ಲೇಖಗಳಿವೆ. ರಾಜ-ಮಹಾರಾಜರಿಗೆ ಪ್ರಯಾಣಕ್ಕೆ ರಥ ಬಳಕೆಯಾದರೆ ದೇವರಿಗೆ ವಿಶೇಷವಾಗಿ ಉತ್ಸವಕ್ಕೆ ರಥ (ತೇರು) ಬಳಕೆಯಾಗುತ್ತದೆ. ಇದಷ್ಟೇ ಅಲ್ಲ ರಥವು ಮಾನವನ ಬದುಕಿಗೆ ಅಗತ್ಯವಾಗಿ ಇರಬೇಕಾದಂತಹ ಮೌಲ್ಯಗಳ ಪಥದರ್ಶಕದ ಸಂಕೇತವೂ ಆಗಿದೆ.
ಒಂದು ರಥ ನಿರ್ವಣವಾಗಬೇಕಾದರೆ ಮರ, ಕಬ್ಬಿಣದ ಕೆಲಸಗಾರ, ರಥ ಸಿಂಗರಿಸುವವ ಹೀಗೆ ಅನೇಕರ ಶ್ರಮವಿರುತ್ತದೆ. ಹೀಗೆ ಸಿದ್ಧವಾದ ರಥವನ್ನು ದಾನಿಗಳು, ಆಡಳಿತ ಮಂಡಳಿ ಅಥವಾ ಊರವರೇ ಒಟ್ಟು ಸೇರಿ ದೇವಾಲಯಕ್ಕೆ ಸಮರ್ಪಿಸುತ್ತಾರೆ. ಬಳಿಕ ಜಾತ್ರೆಯಲ್ಲಿ ಎಲ್ಲರೂ ಸೇರಿ ರಥವನ್ನು ಎಳೆಯುತ್ತಾರೆ. ಆಗ ರಥ ನಿಧಾನವಾಗಿ ಮುಂದುವರಿದು ಗಮ್ಯವನ್ನು ಸೇರುತ್ತದೆ. ಮುಖ್ಯವಾಗಿ ಗಮನಿಸಬೇಕಾದುದು ಏನೆಂದರೆ ರಥದ ನಿರ್ವಣದಲ್ಲಿ ವ್ಯತ್ಯಾಸವಾದರೂ ಅದನ್ನು ರಥ ಎನ್ನಲಾಗದು. ಸಿದ್ಧವಾದ ರಥವಿದ್ದರೂ ಅದರ ಚಲನೆಯಲ್ಲಿ ವ್ಯತ್ಯಾಸವಾದರೆ, ದಿಕ್ಕು ಬದಲಾದರೆ ತಲುಪಬೇಕಾದ ಕಡೆ ಅದು ತಲುಪದು.
ನಾವೂ ಕೂಡ ರಥದ ಹಾಗೆಯೇ. ದೇಹಾಕೃತಿಯನ್ನು ಹೊಂದಿದ ನಾವು ಅಂಗಗಳ ಸಮನ್ವಯದಿಂದ ಮುಂದೆ ಸಾಗುತ್ತೇವೆ. ರಥ ನಿರ್ವಣಕ್ಕೆ ವಿವಿಧ ಕೈಗಳ ಶ್ರಮ ಅಗತ್ಯವಿರುವಂತೆ, ನಮ್ಮ ಜೀವನವೂ ಕುಟುಂಬ, ಗುರುಗಳು, ಸ್ನೇಹಿತರು, ಸಮಾಜ ಇವುಗಳ ಸಹಕಾರದಿಂದ ರೂಪುಗೊಳ್ಳುತ್ತದೆ. ದೇಹ, ಮನಸ್ಸು, ಬುದ್ಧಿ, ಆತ್ಮಇವು ನಮ್ಮ ಅಸ್ತಿತ್ವಕ್ಕೆ ತಳಹದಿಯಾಗಿವೆ. ಇವುಗಳಲ್ಲಿ ಯಾವುದಾದರೂ ಒಂದು ದುರ್ಬಲವಾದರೆ ಜೀವನ ಸರಿಯಾಗಿ ಸಾಗದು. ರಥ ಸಿದ್ಧವಾದ ನಂತರ ಅದನ್ನು ಸರಿಯಾದ ದಿಕ್ಕಿನಲ್ಲಿ ಎಳೆಯುವುದು ಹೇಗೆ ಮುಖ್ಯವೋ, ಅದೇ ರೀತಿ ಜೀವನದಲ್ಲಿಯೂ ಸರಿಯಾದ ಗುರಿ ಮತ್ತು ದಿಕ್ಕು ಅತ್ಯಗತ್ಯ. ಗುರಿಯಿಲ್ಲದೆ ಸಾಗುವ ಜೀವನ ದಿಕ್ಕುತಪ್ಪಿದ ರಥದಂತೆಯೇ ಆಗುತ್ತದೆ.
ನಮ್ಮ ಆಲೋಚನೆಗಳು, ನಿರ್ಧಾರಗಳು ಮತ್ತು ಕ್ರಿಯೆಗಳು ಸರಿಯಾದ ಮಾರ್ಗದಲ್ಲಿ ಇರಬೇಕು. ಅದಕ್ಕಾಗಿ ಸ್ವಯಂ ನಿಯಂತ್ರಣ, ಮೌಲ್ಯಾಧಾರಿತ ಚಿಂತನೆ ಮತ್ತು ನ್ಯಾಯ, ಧರ್ಮದ ನಡೆ ಅಗತ್ಯವಾಗುತ್ತದೆ. ರಥವನ್ನು ಒಬ್ಬನೇ ವ್ಯಕ್ತಿ ಎಳೆಯಲು ಖಂಡಿತ ಸಾಧ್ಯವಿಲ್ಲ. ಎಲ್ಲರೂ ಸೇರಿ ಎಳೆದಾಗ ಮಾತ್ರ ಅದು ಮುಂದೆ ಸಾಗುತ್ತದೆ. ಅದೇ ರೀತಿ, ಜೀವನದಲ್ಲಿಯೂ ಸಹಕಾರ, ಸಹಾನುಭೂತಿ ಮತ್ತು ಪರಸ್ಪರ ಬೆಂಬಲ ಅಗತ್ಯ. ವ್ಯಕ್ತಿಯ ಶ್ರಮ, ಯಶಸ್ಸು ಮಾತ್ರವಲ್ಲ, ಸಮುದಾಯದ ಸಹಕಾರ, ಒಗ್ಗಟ್ಟು ಕೂಡ ಅಷ್ಟೇ ಮಹತ್ವದ್ದು.
ಜೀವನವನ್ನು ರಥದಂತೆ ಪರಿಗಣಿಸಿದಾಗ, ನಮ್ಮೊಳಗಿನ ಎಲ್ಲ ಅಂಶಗಳನ್ನು ಸಮತೋಲನದಲ್ಲಿಟ್ಟು, ಸರಿಯಾದ ದಿಕ್ಕಿನಲ್ಲಿ, ಇತರರ ಸಹಕಾರದೊಂದಿಗೆ ಸಾಗಿದಾಗ ಮಾತ್ರ ಗಮ್ಯವನ್ನು ಯಶಸ್ವಿಯಾಗಿ ತಲುಪಲು ಸಾಧ್ಯವಾಗುತ್ತದೆ. ರಥವು ಬಾಹ್ಯ ಜಗತ್ತಿನ ಸಂಭ್ರಮದ ಪ್ರತಿರೂಪ ಮಾತ್ರವಲ್ಲ, ಒಳಗಿನ ಆತ್ಮಪರಿಶೀಲನೆಗೆ ಪ್ರೇರಣೆಯೂ ಆಗಿದೆ. ಅದು ಜೀವನವನ್ನು ಸಮತೋಲನದಿಂದ ನಡೆಸಲು, ಮೌಲ್ಯಾಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಮುದಾಯದೊಂದಿಗೆ ಹೊಂದಾಣಿಕೆಯಿಂದ ಬದುಕಲು ನಮ್ಮನ್ನು ಪ್ರೇರೇಪಿಸುತ್ತದೆ. ಅಂತಹ ಪ್ರೇರಣೆ ನಮ್ಮಲ್ಲಿ ಮೂಡಿ ಬರಲಿ.