(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)
ಪ್ರಪಂಚದಾದ್ಯಂತ ತನ್ನ ಕಲೆ, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳಿಂದಾಗಿ ಭಾರತವು ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ. ವಸುಧೈವ ಕುಟುಂಬಕಂ ಎಂಬಂತೆ ಇಡೀ ಜಗತ್ತನ್ನೇ ಒಂದು ಕುಟುಂಬ ಎಂದು ಭಾವಿಸುವ ವಿಶೇಷ ತತ್ತ್ವ ಭಾರತದ್ದು. ನೂರಾರು ಭಾಷೆಗಳು, ಧರ್ವಚರಣೆ, ಮತ-ಪಂಥ, ಜಾತಿ, ಹಬ್ಬಗಳಿದ್ದರೂ ಸೌಹಾರ್ದದಿಂದ ಬಾಳುವ ದೇಶ ನಮ್ಮದು.
ನಮ್ಮಲ್ಲೊಂದು ವಿಶೇಷ ಪರಂಪರೆಯಿದೆ. ಅದೇ ಅನ್ನದಾನ ಅಥವಾ ಅನ್ನದಾಸೋಹ. ಶತಮಾನಗಳ ಹಿಂದೆಯೇ ಭಾರತದ ನೆಲದಲ್ಲಿ ಅನ್ನದಾನ ಚಾಲ್ತಿಯಲ್ಲಿತ್ತು. ಅನ್ನದಾನ ಎಂದ ಕೂಡಲೇ ಅದು ಹಸಿದವರಿಗೆ ನೀಡುವ ಆಹಾರವಲ್ಲ. ಬದಲಾಗಿ ಎಲ್ಲರನ್ನೂ ಅತಿಥಿಯಾಗಿ ಕಂಡು ಸತ್ಕರಿಸುವ ಸಂಪ್ರದಾಯ. ನಮ್ಮಲ್ಲಿ ಯಾರ ಮನೆಗೇ ಹೋಗಲಿ, ಅವರನ್ನು ಕುಳ್ಳಿರಿಸಿ ಬಾಯಾರಿಕೆ ಕೊಟ್ಟು, ಊಟದ ಸಮಯವಾಗಿದ್ದರೆ, ಉಣಬಡಿಸುವ ಸಂಪ್ರದಾಯ ಪ್ರಾಚೀನ ಕಾಲದಿಂದ ಇದೆ.
ಸನಾತನ ಪರಂಪರೆಯಲ್ಲಿ ಅನ್ನಕ್ಕೆ ಪವಿತ್ರ ಸ್ಥಾನ ಇದೆ. ವೇದ-ಉಪನಿಷತ್ತುಗಳ ಕಾಲದಿಂದಲೇ ಅನ್ನವನ್ನು ಜೀವದ ಮೂಲಾಧಾರವೆಂದು ಪರಿಗಣಿಸಲಾಗಿದೆ. ತೈತ್ತಿರೀಯ ಉಪನಿಷತ್ತಿನಲ್ಲಿ ಅನ್ನಂ ನ ನಿಂದ್ಯಾತ್- ಅನ್ನವನ್ನು ನಿಂದಿಸಬಾರದು ಎಂಬ ಸಂದೇಶ ಸಾರಲಾಗಿದೆ. ಎಲ್ಲ್ಲ ಅಭಿವೃದ್ಧಿಗಳಿಗೆ ಅನ್ನವೇ ಮೂಲಾಧಾರ ಎಂಬ ಭಾವನೆ ಅನ್ನದಾನದ ಸಂಪ್ರದಾಯಕ್ಕೆ ಮತ್ತಷ್ಟು ಬಲ ನೀಡಿರಬಹುದು.
ಒಮ್ಮೆ ಕೈಲಾಸದಲ್ಲಿ ಶಿವ-ಪಾರ್ವತಿ ನಡುವೆ ಜಗತ್ತಿನ ಸ್ವರೂಪದ ಸಂವಾದ ನಡೆಯಿತು. ಶಿವನು ಜಗತ್ತಿನಲ್ಲಿರುವ ಎಲ್ಲವೂ ಮಾಯೆ (ಭ್ರಮೆ); ಆಹಾರವೂ ಸೇರಿದಂತೆ ಪ್ರತಿಯೊಂದು ಭೌತಿಕ ವಸ್ತುವೂ ಕೇವಲ ಮಾಯೆ ಎಂದು ಪ್ರತಿಪಾದಿಸುತ್ತಾನೆ. ಆದರೆ ಜಗನ್ಮಾತೆ ಪಾರ್ವತಿಗೆ ಈ ಮಾತು ಸಮ್ಮತವಾಗಲಿಲ್ಲ. ಭೌತಿಕ ಜಗತ್ತು ಮತ್ತು ದೇಹವನ್ನು ಕಾಯುವ ಆಹಾರವಿಲ್ಲದೆ ಜೀವಿಗಳ ಜೀವನ ಹಾಗೂ ಆಧ್ಯಾತ್ಮಿಕ ಸಾಧನೆ ಎರಡೂ ಸಾಧ್ಯವಿಲ್ಲ ಎಂಬುದನ್ನು ಶಿವನಿಗೆ ಹಾಗೂ ಲೋಕಕ್ಕೆ ಮನವರಿಕೆ ಮಾಡಲು ನಿರ್ಧರಿಸುತ್ತಾಳೆ.
ಪಾರ್ವತಿಯು ತಕ್ಷಣವೇ ಜಗತ್ತಿನಿಂದ ಕಣ್ಮರೆಯಾಗುತ್ತಾಳೆ. ಆಗ ಇಡೀ ಪ್ರಕೃತಿಯೇ ಶಕ್ತಿಹೀನವಾಯಿತು. ಮಳೆ ಬೆಳೆಗಳಿಲ್ಲದೆ ಭೀಕರ ಬರಗಾಲ ಮತ್ತು ಹಸಿವು ತಾಂಡವವಾಡತೊಡಗಿತು. ಮಾನವರು, ಮುನಿಗಳು, ದೇವತೆಗಳು ಹಸಿವಿನಿಂದ ತತ್ತರಿಸಿದರು. ಅಂತಿಮವಾಗಿ ಯೋಗಿ ಹಾಗೂ ಸನ್ಯಾಸಿಯಾದ ಶಿವನಿಗೂ ಆಹಾರದ ಅಗತ್ಯತೆ ಏನೆಂಬುದರ ಅರಿವಾಯಿತು.
ಆಗ ದೇವಿ ಪಾರ್ವತಿಯು ಕಾಶಿಯಲ್ಲಿ (ವಾರಾಣಸಿ) ಅನ್ನಪೂರ್ಣೆಶ್ವರಿಯಾಗಿ ಅವತರಿಸಿ, ತನ್ನ ಹಸ್ತದಲ್ಲಿ ಚಿನ್ನದ ಸೌಟು ಹಾಗೂ ರತ್ನಖಚಿತ ಪಾತ್ರೆಯನ್ನು ಹಿಡಿದು ಪ್ರತ್ಯಕ್ಷಳಾದಳು. ಜಗತ್ತಿನ ಕಷ್ಟವನ್ನು ಕಂಡ ಶಿವನು ಸ್ವತಃ ತಾನೇ ಭಿಕ್ಷುಕನ ರೂಪದಲ್ಲಿ ಕಾಶಿಗೆ ತೆರಳಿ, ದೇವಿಯ ಮುಂದೆ ಕೈಯೊಡ್ಡಿ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೆಶ್ವರೀ ಎಂದು ಪ್ರಾರ್ಥಿಸಿ ಭಿಕ್ಷೆ ಬೇಡಿದನು. ದೇವಿ ಅನ್ನಪೂರ್ಣೆಯು ಶಿವನಿಗೆ ಹಾಗೂ ಇಡೀ ಜಗತ್ತಿಗೆ ಪ್ರೀತಿಯಿಂದ ಅನ್ನದಾನ ಮಾಡಿ ಹಸಿವನ್ನು ನೀಗಿಸಿದಳು. ಹೀಗೆ ಅನ್ನವು ಇಡೀ ಜೀವರಾಶಿಗಳಿಗೆ ಮೂಲ ಶಕ್ತಿಯಾಗಿದೆ ಎಂದು ತಿಳಿದುಬಂತು.
ನಮ್ಮ ಹಿರಿಯರು ಅನ್ನದಾನಕ್ಕಿಂತ ಮಹಾದಾನ ಬೇರೊಂದಿಲ್ಲ ಎಂದಿದ್ದಾರೆ. ಹಸಿದವನಿಗೆ ಅನ್ನ ನೀಡುವುದೆಂದರೆ ಆತನ ಜೀವವನ್ನು ಉಳಿಸಿದಂತೆ. ಮಾನವ ಸಮುದಾಯಕ್ಕೆ ಮಾತ್ರವಲ್ಲ, ಉಳಿದ ಜೀವ ಸಂಕುಲಗಳಿಗೂ ಆಹಾರ ನೀಡುವ ಕ್ರಮ ನಮ್ಮಲ್ಲಿದೆ. ನಮ್ಮ ಹಿರಿಯರು ಮುಂಜಾನೆ ಮನೆಯ ಮುಂದೆ ರಂಗೋಲಿ ಹಾಕಲು ಅಕ್ಕಿ ಹುಡಿಯನ್ನು ಬಳಸುತ್ತಿದ್ದರು. ಇರುವೆಗಳು, ಗುಬ್ಬಚ್ಚಿಗಳು ಅವುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಹಾಗೆಯೇ ಪುಣ್ಯ ಕ್ಷೇತ್ರಗಳ ಪುಷ್ಕರಣಿ, ನದಿಗಳಲ್ಲಿ ಇರುವ ಮೀನುಗಳಿಗೆ ಅಕ್ಕಿ, ಅರಳುಗಳನ್ನು ಹಾಕುವುದು, ದೇವರ ನೈವೇದ್ಯವನ್ನು ಗೋವುಗಳಿಗೆ ನೀಡುವುದು ಹೀಗೆ ಜೀವರಾಶಿಗಳಿಗೂ ಆಹಾರ ನೀಡುವ ಪರಿಪಾಠ ನಮ್ಮ ಸಂಸಂಸ್ಕೃತಿಯಲ್ಲಿದೆ.
ಯಾವುದೇ ರೀತಿಯ ದಾನದಲ್ಲೂ ದಾನ ಪಡೆಯುವವರಿಗೆ ಇನ್ನೂ ಒಂಚೂರು ಕೊಟ್ಟರೆ ಒಳ್ಳೆಯದಿತ್ತು ಎಂಬ ಭಾವನೆ ಬರಬಹುದಂತೆ, ಆದರೆ ಅನ್ನದಾನ ಪಡೆಯುವಾತ ಮಾತ್ರ ಸಾಕು, ಇನ್ನು ಬೇಡ ಎನ್ನುತ್ತಾನಂತೆ. ಊಟ ಮಾಡಿ ಮನಃಸ್ಪೂರ್ತಿಯಿಂದ ಅನ್ನದಾತೋ ಸುಖೀಭವ ಎಂದು ಹಾರೈಸಿದರೆ ಅದೇ ಬಹುದೊಡ್ಡ ವರ. ದೇಶದಲ್ಲಿರುವ ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ಪ್ರಸಾದರೂಪವಾಗಿ ಅನ್ನದಾನ ನಡೆಯುತ್ತಿದ್ದ ಬಗ್ಗೆ ದಾಖಲೆಗಳಿವೆ. ಅದು ಇಂದಿಗೂ ಮುಂದುವರಿದು ಬಂದಿದ್ದು, ಅದರ ವ್ಯಾಪ್ತಿ ಮತ್ತಷ್ಟು ಹಿಗ್ಗಿದೆ. ಇಂದಿನ ದಿನಗಳಲ್ಲಿ ಅನ್ನದಾನವು ದೇವಾಲಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಠಗಳು, ಧಾರ್ವಿುಕ ಸಂಸ್ಥೆಗಳು, ಸಂಘಸಂಸ್ಥೆಗಳು, ಸ್ವಯಂಸೇವಕರು, ದಾನಿಗಳು ಹಾಗೂ ಸಾಮಾನ್ಯ ಕುಟುಂಬಗಳೂ ಅನ್ನದಾನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಹಾಗೆಯೇ ಮದುವೆ, ಜಾತ್ರೆ, ಪುಣ್ಯತಿಥಿ, ಹಬ್ಬ, ಧಾರ್ವಿುಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಔತಣಕ್ಕೆ ಆಹ್ವಾನಿಸಿ ಸತ್ಕರಿಸುವುದು ಬೇರೆಯದೇ ರೀತಿ.
ದೇವಸ್ಥಾನ, ಮಠಮಂದಿರ, ಸಾರ್ವಜನಿಕ ಅನ್ನದಾಸೋಹದ ಪಂಕ್ತಿಗಳಲ್ಲಿ ಜಾತಿ, ಮತ, ಬಡವ ಬಲ್ಲಿದ ಎಂಬ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಕುಳಿತು ಉಣ್ಣುವುದರಿಂದ ಸಾಮಾಜಿಕ ಸಾಮರಸ್ಯ, ಪರಸ್ಪರ ಗೌರವಾದರಗಳು ವೃದ್ಧಿಯಾಗುತ್ತವೆ. ಧರ್ಮಸ್ಥಳ ಕ್ಷೇತ್ರದಲ್ಲೂ ಅನ್ನದಾನವೆಂಬುದು ಚತುರ್ದಾನಗಳಲ್ಲಿ ಒಂದು. ಇದು ಯಾವಾಗ ಆರಂಭವಾಯಿತೆಂದು ಸ್ಪಷ್ಟ ದಾಖಲೆಗಳು ಇಲ್ಲದಿದ್ದರೂ ಬ್ರಿಟಿಷರು ಭಾರತವನ್ನು ಆಕ್ರಮಿಸಿ ಕಾಲದಲ್ಲಿಯೇ ಕ್ಷೇತ್ರದಲ್ಲಿ ಅನ್ನದಾನ ನಡೆಯುತ್ತಿದ್ದ ಬಗ್ಗೆ ಮಾಹಿತಿಗಳಿವೆ.
ವ್ಯವಸ್ಥಿತವಾಗಿ ಅನ್ನದಾಸೋಹ ಕಲ್ಪಿಸುವ ನಿಟ್ಟಿನಲ್ಲಿ 1986ರಲ್ಲಿ ಅನ್ನಛತ್ರವನ್ನು ಲೋಕಾರ್ಪಣೆಗೊಳಿಸಲಾಯಿತು. 19 ಸಾವಿರ ಚದರಡಿ ವಿಸ್ತೀರ್ಣದಲ್ಲಿ 15 ಪಂಕ್ತಿಗಳಲ್ಲಿ ಸಹಸ್ರಾರು ಮಂದಿ ಅನ್ನಪ್ರಸಾದ ಸ್ವೀಕರಿಸುವ ವ್ಯವಸ್ಥೆಯಿದೆ. ಇದೀಗ ಅನ್ನಪೂರ್ಣ ಛತ್ರ ವಿಸõತಗೊಂಡಿದ್ದು, ಟೇಬಲ್ ವ್ಯವಸ್ಥೆ ಒದಗಿಸಲಾಗಿದೆ. ಹಾಗೆಯೇ ಅಡುಗೆ, ಸ್ವಚ್ಛತೆಗಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಒಂದು ಗಂಟೆಯಲ್ಲಿ ಸುಮಾರು 12,000 ಮಂದಿಗೆ ಅನ್ನ ತಯಾರಿಸಬಹುದಾದ ಸ್ಟೀಮ್ ಬಾಯ್ಲರ್ ಪಾತ್ರೆಗಳಿವೆ. ಹೀಗೆ ವ್ಯವಸ್ಥಿತವಾಗಿ ಮತ್ತು ಅಚ್ಚುಕಟ್ಟಾಗಿ ಶುಚಿ-ರುಚಿಯಾದ ಅನ್ನಪ್ರಸಾದವನ್ನು ಒದಗಿಸಲು ವಿಶೇಷ ಗಮನ ನೀಡಲಾಗುತ್ತದೆ. ಜತೆಗೆ ಶಿವರಾತ್ರಿ, ಲಕ್ಷದೀಪೋತ್ಸವ ಸಂದರ್ಭಗಳಲ್ಲಿ ಭಕ್ತರು ಸಹಾಸ್ರಾರು ಜನರಿಗೆ ವಿವಿಧ ರೀತಿಯ ಭಕ್ಷ್ಯಗಳನ್ನು ಉಣಬಡಿಸುವ ಮೂಲಕ ಸ್ವಾಮಿಗೆ ವಿಶೇಷ ಸೇವೆ ಅರ್ಪಿಸುತ್ತಾರೆ. ದಕ್ಷಿಣ ಭಾರತದ ಬಹುತೇಕ ದೇವಾಲಯಗಳಲ್ಲಿ ಅನ್ನಪ್ರಸಾದದ ವ್ಯವಸ್ಥೆ ಇದೆ.
ಸನಾತನ ಹಿಂದೂ ಧರ್ಮವಲ್ಲದೆ, ಬೇರೆ-ಬೇರೆ ಧರ್ಮಗಳಲ್ಲಿ ಆಹಾರ ಸಾಮಗ್ರಿಗಳ ವಿತರಣೆ, ಪ್ರಾರ್ಥನೆಯ ಬಳಿಕ ಬ್ರೆಡ್ ಹಾಗೂ ಪಾನೀಯ ಹಂಚುವುದು, ವಿಶೇಷ ದಿನಗಳಲ್ಲಿ ಸಹಭೋಜನ ಇತ್ಯಾದಿಗಳಿದ್ದರೂ, ಭಾರತದಂತೆ ವರ್ಷದ ಎಲ್ಲ ದಿನಗಳಲ್ಲೂ ನಿರಂತರ ಅನ್ನದಾಸೋಹ ಬೇರಾವ ರಾಷ್ಟ್ರಗಳಲ್ಲೂ ಕಾಣಸಿಗದು.
ಪೋಲೆಂಡ್, ಅಮೆರಿಕ, ಜರ್ಮನಿ ಮುಂತಾದ ಕೆಲವು ವಿದೇಶಗಳಲ್ಲಿ ಹಸಿದವರಿಗೆ ಆಹಾರ ಒದಗಿಸುವ ವಿಶೇಷ ಪರಿಕಲ್ಪನೆ ಚಾಲ್ತಿಯಲ್ಲಿದೆ. ಸಾರ್ವಜನಿಕರು, ಹೋಟೆಲ್ನವರು ಹೆಚ್ಚುವರಿ ಆಹಾರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಇರುವ ಉಚಿತ ಫ್ರಿಡ್ಜ್ಗಳಲ್ಲಿ ಇರಿಸುತ್ತಾರೆ. ಅದನ್ನು ಯಾರು ಬೇಕಾದರೂ ಮುಕ್ತವಾಗಿ ತೆಗೆದುಕೊಂಡು ಸೇವಿಸುವ ಅವಕಾಶವಿದೆ. ಹಾಗೆಯೇ ಕೆಲವೆಡೆ ಹೋಟೆಲ್ನಲ್ಲಿ ಆಹಾರ ಸೇವಿಸಿದ ಬಳಿಕ ಬಿಲ್ ಪಾವತಿಸುವಾಗ ಒಂದು ಊಟದ ಹಣವನ್ನು ಹೆಚ್ಚುವರಿಯಾಗಿ ಕೊಡುತ್ತಾರೆ. ಅದನ್ನು ಹೋಟೆಲ್ನವರು ಇಂದು ಇಂತಿಷ್ಟು ಊಟಗಳು ಲಭ್ಯವಿವೆ ಎಂದು ರಶೀದಿಗಳನ್ನು ಬೋರ್ಡ್ನಲ್ಲಿ ಬರೆದು ಹಾಕುತ್ತಾರೆ. ಹಸಿವಿನಿಂದ ಬಳಲುವವರು ತೂಗುಹಾಕಿದ ರಶೀದಿಗಳನ್ನು ತೋರಿಸಿ ಉಚಿತ ಊಟದ ಪ್ರಯೋಜನ ಪಡೆಯಬಹುದಾಗಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಹಸಿವು ನೀಗಿಸುವ ಮೂಲಕ ಶ್ರೇಷ್ಠ ಸೇವೆ ಮಾಡಿದಂತಾಗುತ್ತದೆ.
ಅನ್ನದಾಸೋಹದ ವಿಷಯದಷ್ಟೇ ಆಹಾರ ಪೋಲಾಗುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ದಿನಗಳಲ್ಲಿ ಅವಶ್ಯವಾಗಿದೆ. ಕೆಲವು ಜನರು ಬೇಕು ಬೇಕಾದುದನ್ನೆಲ್ಲ ತಟ್ಟೆಗೆ ಹಾಕಿಸಿಕೊಂಡು ಬಳಿಕ ಸಾಕು, ಹೊಟ್ಟೆ ತುಂಬಿತು ಎಂದು ಹೇಳಿ ಉಳಿದ ಆಹಾರವನ್ನು ಕಸದ ಬುಟ್ಟಿಗೆ ಸುರಿಯುವುದುಂಟು. ಇಂತಹ ಪ್ರವೃತ್ತಿ ಒಳ್ಳೆಯದಲ್ಲ, ಏಕೆಂದರೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವವರು ಇದ್ದಾರೆ. ಹಾಗಿರುವಾಗ ನಮಗೆ ಉಣ್ಣಲು ಆಹಾರ ಸಿಕ್ಕಿದೆ ಎಂದು ದೇವರಿಗೆ ಕೃತಜ್ಞತೆಯಿಂದ ಇರಬೇಕು. ಅನ್ನದಾನದ ಜತೆಗೆ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾದ ಹೊಣೆಯೂ ನಮ್ಮ ಮೇಲಿದೆ. ಊಟ ಬಡಿಸುವಾಗ ಅನ್ನದ ಅಗಳು ಚೆಲ್ಲಿದರೆ ನಮ್ಮ ಹಿರಿಯರೆಲ್ಲ ಅದನ್ನು ಕಣ್ಣಿಗೆ ಒತ್ತಿಕೊಂಡು ಮತ್ತೆ ಅನ್ನದ ಬಟ್ಟಲಿಗೆ ಹಾಕಿಕೊಳ್ಳುತ್ತಾರೆ. ಆದರೆ ಈಗ ಊಟದ ತಟ್ಟೆಯಲ್ಲೇ ಅನ್ನ ವ್ಯರ್ಥ ಮಾಡುವುದನ್ನು ಕೆಲವು ಕಡೆ ಕಾಣುತ್ತೇವೆ.
ರೈತನು ರಾತ್ರಿ-ಹಗಲು ಕಷ್ಟಪಟ್ಟು, ಬೆವರು ಸುರಿಸಿ ಗದ್ದೆಯಲ್ಲಿ ದುಡಿಮೆ ಮಾಡಿ ಭತ್ತವನ್ನು ಬೆಳೆದು ನಾಡಿಗೆಲ್ಲ ಅನ್ನವನ್ನು ನೀಡುತ್ತಾನೆ. ಅಂತಹ ಕಷ್ಟಜೀವಿ ಹಾಗೂ ಶ್ರಮಜೀವಿಗಳಿಗೆ ಗೌರವ ನೀಡಬೇಕಾದರೆ ಆಹಾರ ಹಾಳಾಗದಂತೆ ನೋಡಿಕೊಳ್ಳಬೇಕು. ಹಸಿದವರಿಗೆ ಆಹಾರ ನೀಡುವುದು, ಹಾಗೂ ಹಸಿವಿನಿಂದ ಯಾರೂ ಸಾಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.
ಅನ್ನದಾನ ಎಂದರೆ ಒಂದು ಹೊತ್ತಿನ ಊಟ ನೀಡುವುದು ಮಾತ್ರವಲ್ಲ; ಹಸಿದವರ ಬಗ್ಗೆ ಮಾನವೀಯತೆಯಿಂದಿರುವುದೂ ಮುಖ್ಯ. ದಾಸೋಹ ಎಂದರೆ ನಮ್ಮಲ್ಲಿರು ವುದನ್ನು ಹಂಚಿಕೊಂಡು, ಮತ್ತೊಬ್ಬರ ಬದುಕಿನಲ್ಲಿ ನೆಮ್ಮದಿ, ಸಂತೃಪ್ತಿಯ ಉಂಟು ಮಾಡುವುದು. ಇದೇ ಕಾರಣಕ್ಕೆ ಸಾವಿರಾರು ವರ್ಷಗಳಾದರೂ ಭಾರತದ ಮಣ್ಣಿನಲ್ಲಿ ಅನ್ನದಾನ ಮತ್ತು ಅನ್ನ ದಾಸೋಹದ ಪರಂಪರೆ ತನ್ನ ಮಹತ್ವ ಉಳಿಸಿಕೊಂಡಿದೆ.