burn 
ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಡೆ

ಮನೆಯೊಳಗಣ ಕಿಚ್ಚು ಮನೆಯ ಸುಡದೆ ನೆರೆಮನೆಯ ಸುಡದು!

ಬಾಬುಪ್ರಸಾದ್​ ಮೋಡಿಸ್​
ಮನದ ಕೋಪ ತನ್ನ ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ
ಸಮಾಜ ಸುಧಾರಕ ಬಸವಣ್ಣನವರ ವಚನದ ಸಾಲೊಂದು ಅನೇಕ ಸಂದರ್ಭಗಳಲ್ಲಿ ನೆನಪಾಗುತ್ತಿರುತ್ತದೆ. ಇತ್ತೀಚೆಗಂತೂ ಆ ವಚನ ಪದೇಪದೆ ಕಾಡತೊಡಗಿದೆ. ಯಾಕೆಂದರೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್​ನ ಮಿಲಿಟರಿ, ಪರಮಾಣು ಮತ್ತು ಮೂಲಸೌಕರ್ಯಗಳ ಮೇಲೆ ಜಂಟಿ ದಾಳಿಗಳನ್ನು ನಡೆಸುತ್ತಿದ್ದರಿಂದ ಮತ್ತು ಅದಕ್ಕೆ ಪ್ರತಿಯಾಗಿ ಇರಾನ್ ಕೂಡ ಆ ರಾಷ್ಟ್ರಗಳ ನೆಲೆಗಳ ಮೇಲೆ ಡ್ರೋನ್​ಗಳ ಸುರಿಮಳೆ ಸುರಿಸಿದ್ದರಿಂದ ಜಾಗತಿಕ ಶಾಂತಿ ಕದಡಿಹೋಗಿತ್ತು. ಈ ರಾಷ್ಟ್ರಗಳ ನಡುವಿನ ಸಂಘರ್ಷದಿಂದಾಗಿ ಹಮುಜ್ ಜಲಸಂಧಿಯ ಮೂಲಕ ನಡೆಯುತ್ತಿದ್ದ ಇಂಧನ ಪೂರೈಕೆಗೂ ಅಡ್ಡಿಯಾಯಿತು. ಪರಿಣಾಮವಾಗಿ ಜಾಗತಿಕ ತೈಲ ಬೆಲೆ ಏರಿಕೆ ಮತ್ತು ಆರ್ಥಿಕ ಸಂಕಷ್ಟದ ಭೀತಿ ಉಂಟಾಯಿತು. ಈ ಬಗ್ಗೆ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ನಿರಂತರವಾಗಿ ವರದಿ ಮಾಡಿವೆ. ನಿತ್ಯವೂ ಬಾಂಬ್ ದಾಳಿ, ಜನರ ಸಾವು, ಆಸ್ತಿಪಾಸ್ತಿಗಳ ನಾಶ ಎಂಬ ಸುದ್ದಿಗಳನ್ನು ಓದುವಾಗ ಮನ ಕಲಕುತ್ತದೆ.
ಇದು ಎರಡು-ಮೂರು ರಾಷ್ಟ್ರಗಳ ನಡುವಿನ ವಿಷಯ ಮಾತ್ರವಲ್ಲ. ಮಾನವೀಯತೆ, ಮೌಲ್ಯಗಳ ನಾಶವೂ ಹೌದು. ಸಾವು-ನೋವು, ಮನೆಗಳ ನಾಶ, ಭಯದ ವಾತಾವರಣ ಜನಸಾಮಾನ್ಯರ ಜೀವನವನ್ನು ನರಕವನ್ನಾಗಿಸುತ್ತವೆ. ಇದರ ಜತೆ ತೈಲ ಬೆಲೆ ಏರಿಕೆ, ಆರ್ಥಿಕ ಅಸ್ಥಿರತೆಯ ಪರಿಣಾಮಗಳು ಜಗತ್ತಿನ ಎಲ್ಲ ಮನೆಗಳನ್ನೂ ಬಾಧಿಸುತ್ತವೆ. ಹೇಗೆಂದರೆ ಯುದ್ಧ ಆರಂಭವಾಗುತ್ತಿರುವಾಗಲೇ ನಮ್ಮಲ್ಲಿ ಅಡುಗೆಗೆ ಗ್ಯಾಸ್ ದೊರೆಯುವುದು ಕಷ್ಟ ಎಂಬ ಕೂಗು ಕೇಳಿಸಿತು. ನಮ್ಮಲ್ಲೇ ಶ್ರೀಕ್ಷೇತ್ರದಲ್ಲಿ ಈಗ ಸಕಾಲದಲ್ಲಿ ಗ್ಯಾಸ್ ದೊರೆಯುವುದಿಲ್ಲ ಎಂದು ಕಟ್ಟಿಗೆ ಒಲೆಯನ್ನು ಈಗಾಗಲೇ ಉಪಯೋಗಿಸತೊಡಗಿದ್ದಾರೆ. ಈ ನಡುವೆ ನಿತ್ಯವೂ ಸಾವಿರಾರು ಭಕ್ತರಿಗೆ ಅನ್ನದಾಸೋಹ ನಡೆಸುವ ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್ ಇತ್ಯಾದಿಗಳು ಅಡುಗೆಗೆ ಪರ್ಯಾಯ ಇಂಧನ ಬಳಕೆ ಬಗ್ಗೆ ಆಲೋಚನೆ ಮಾಡಬೇಕಾದ ಅಗತ್ಯವಿದೆ. ಶ್ರೀಕ್ಷೇತ್ರದಲ್ಲಿ ಅನ್ನದಾಸೋಹದಲ್ಲಿ ಯಾವುದೇ ವ್ಯತ್ಯಯವಾಗದು. ಯಾಕೆಂದರೆ ಕೆಲ ವರ್ಷಗಳ ಹಿಂದೆಯೇ ಅಡುಗೆ ತಯಾರಿಕೆಗೆ ಆಧುನಿಕ ಸ್ಟೀಮ್ ವಿಧಾನಗಳನ್ನು ಬಳಸಲಾಗುತ್ತಿದೆ. ಗ್ಯಾಸ್, ಕಟ್ಟಿಗೆ ಇಲ್ಲದೆ ಡೀಸೆಲ್ ಬಳಸಿಕೊಂಡು ಅಡುಗೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ವಿಶ್ವದ ಯಾವುದೋ ಮೂಲೆಯಲ್ಲಿ ನಡೆಯುವ ಯುದ್ಧದ ಬಿಸಿ ನಮ್ಮ ಮನೆ ಅಂಗಳಕ್ಕೂ ತಲುಪುತ್ತದೆ ಎನ್ನುವುದಕ್ಕೆ ಅಡುಗೆ ಅನಿಲ ಸಣ್ಣ ಉದಾಹರಣೆಯಷ್ಟೇ.
‘ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು’ ಎಂಬ ಗಾದೆ ನಮ್ಮಲ್ಲಿ ಬಹು ಪ್ರಚಲಿತ. ಗಂಡ-ಹೆಂಡತಿ ಸಂಸಾರವನ್ನು ಸರಿದೂಗಿಸಿಕೊಂಡು ಹೋಗದೆ ನಿತ್ಯವೂ ಜಗಳ, ಬಡಿದಾಟ, ರಂಪಾಟ ಮಾಡಿದರೆ, ಇದನ್ನು ನೋಡುವ ಮಕ್ಕಳಲ್ಲಿ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಒತ್ತಡ ಹೆಚ್ಚಾಗುವುದರಿಂದ ಕೆಲವರು ಮೌನವಾಗುತ್ತಾರೆ, ಇನ್ನು ಕೆಲವರು ಹಿಂಸಾತ್ಮಕವಾಗಿ ವರ್ತಿಸುತ್ತಾರೆ. ಮಾನಸಿಕವಾಗಿ, ದೈಹಿಕವಾಗಿ ನೊಂದು ಬಳಲುತ್ತಾರೆ. ಇದೇ ತರಹ ವಿಶ್ವದ ಒಂದೆರಡು ರಾಷ್ಟ್ರಗಳ ನಡುವಿನ ಯುದ್ಧ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇಡೀ ಜಗತ್ತಿಗೆ ನೋವುಂಟು ಮಾಡುತ್ತದೆ. ಇದು ಕೇವಲ ಮಾನಸಿಕವಾಗಿ ಅಲ್ಲ, ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿದ್ದೆಯ ಸಮಸ್ಯೆ, ತಲೆನೋವು, ಆಹಾರ ಅಸಮತೋಲನ ಇತ್ಯಾದಿ ಸಮಸ್ಯೆಗಳು ಕಾಣಿಸಬಹುದು.
ಅನೇಕ ಜನರು ಶ್ರೀಕ್ಷೇತ್ರದಲ್ಲಿ ನನ್ನನ್ನು ಭೇಟಿಯಾಗುವಾಗ ಗಂಡ-ಹೆಂಡತಿ ಪರಸ್ಪರ ದೂರು ಹೇಳುತ್ತಾರೆ. ‘ಅವರು ಕುಡಿದು ಬಂದು ಗಲಾಟೆ ಮಾಡುತ್ತಾರೆ, ಮಕ್ಕಳನ್ನು, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ಇವರನ್ನು ಮದುವೆಯಾಗಿನಿಂದ ನನಗೆ ನೆಮ್ಮದಿಯೇ ಇಲ್ಲ’ ಎಂದು ಪತ್ನಿ ಅವಲತ್ತುಕೊಂಡರೆ, ಆತ ‘ನಾನು ದುಡಿದು ಮನೆಗೆ ತಂದು ಹಾಕಿದ್ದನ್ನು ಸರಿಯಾಗಿ ಬೇಯಿಸಿ ಹಾಕೋದಿಲ್ಲ, ಮನೆಯಲ್ಲಿ ಒಂದು ಕೆಲಸಾನೂ ನೆಟ್ಟಗೆ ಮಾಡಲ್ಲ, ಸಂಜೆ ಮನೆಗೆ ಕಾಲಿಟ್ಟೊಡನೆ ಕಿರಿಕಿರಿ ಮಾಡುತ್ತಾಳೆ’ ಎಂದು ಆಕೆಯ ಬಗ್ಗೆ ದೂರು ಕೊಡುತ್ತಾನೆ. ಹೀಗೆ ಇಬ್ಬರೂ ದೂರನ್ನು ಹೇಳಿಕೊಂಡಾಗ ಅವರನ್ನು ಸಮಾಧಾನಿಸಿ, ‘ಹೀಗೆ ನೀವಿಬ್ಬರೂ ಜಗಳ ಮಾಡಿದರೆ ಮಕ್ಕಳ ಗತಿ ಏನು? ಅವರು ಕೂಡ ನಿಮ್ಮ ಬುದ್ಧಿಯನ್ನೇ ಕಲಿಯುತ್ತಾರಲ್ಲವೇ? ನೀವು ಇಷ್ಟು ದೊಡ್ಡವರಿದ್ದೀರಿ, ಮಕ್ಕಳ ಮುಂದೆ ಜಗಳ ಮಾಡಬಾರದು. ಸಂಸಾರ ಎಂದ ಮೇಲೆ ಕೋಪತಾಪ ಇದ್ದದ್ದೇ, ಬೇವು-ಬೆಲ್ಲದಂತೆ ಅನುಸರಿಸಿಕೊಂಡು ಹೋದರೆ ಜೀವನ ರಸಮಯವಾಗುವುದು’ ಎನ್ನುತ್ತೇನೆ. ಕುಟುಂಬ, ರಾಜಕೀಯ, ಆಡಳಿತ ಹೀಗೆ ಎಲ್ಲ ವ್ಯವಸ್ಥೆಗಳು ಹಾಳಾಗುವುದು ಕೋಪ, ವೈಮನಸ್ಸುಗಳಿಂದ. ಈ ಮನೋಭಾವವನ್ನು ದೂರ ಮಾಡಿದಾಗ ಮಾತ್ರ ಸುಖ-ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಶ್ರೀಕ್ಷೇತ್ರದ ಸ್ವಸಹಾಯ ಸಂಘಗಳಲ್ಲಿ ಆರ್ಥಿಕತೆಯ ಮಾಹಿತಿಯ ಜತೆಗೆ ವಿವಿಧ ಕಾರ್ಯಕ್ರಮಗಳ ಜೀವನ ಮೌಲ್ಯಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ. ‘ಸ್ವಸಹಾಯ ಸಂಘಗಳಿಗೆ ಸೇರಿದ ಮೇಲೆ ಮನೆಯಲ್ಲಿ ಗಲಾಟೆಗಳು ಕಡಿಮೆಯಾಗಿವೆ. ಹೆಂಡತಿಯೂ ಸ್ವಉದ್ಯೋಗ, ಕರಕುಶಲ ತಯಾರಿ ಇತ್ಯಾದಿ ಮೂಲಕ ಹಣ ಸಂಪಾದಿಸುವುದರಿಂದ ಗಂಡನನ್ನು ಸಂಪೂರ್ಣವಾಗಿ ಅವಲಂಬಿಸದೆ ಮನೆಯನ್ನು ನಿರ್ವಹಿಸಿಕೊಂಡು ಹೋಗುತ್ತಾಳೆ. ತನಗಾಗಿ ಖರ್ಚು ಮಾಡಿ ಒಮ್ಮೊಮ್ಮೆ ಗಂಡನಿಗೂ ಸಾಲ ಕೊಡುತ್ತಾಳೆ’ ಎಂದು ಯೋಜನೆಯ ಕಾರ್ಯಕರ್ತರು ಇಂತಹ ಅನೇಕ ಉದಾಹರಣೆಗಳ ಸಹಿತ ಹೇಳುತ್ತಾರೆ.
ಬೆಂಕಿಯ ಕಿಡಿ ಮೊದಲು ಹೇಗೆ ತನ್ನನ್ನು ತಾನು ಸುಟ್ಟುಕೊಳ್ಳುವುದೋ ಹಾಗೆಯೇ ಕೋಪವೂ ಮೊದಲು ನಮ್ಮನ್ನೇ ಸುಡುತ್ತದೆ. ನಮ್ಮ ಮನಸ್ಸನ್ನು ಕದಡಿ ಅಶಾಂತಿಯನ್ನು ಉಂಟು ಮಾಡುತ್ತದೆ. ಜಮೀನಿಗೆ ಬೇಲಿ ಹಾಕುವಾಗ ಅಣ್ಣತಮ್ಮಂದಿರ ನಡುವೆ ಜಗಳ ನಡೆದು ಕೊನೆಗೆ ಕೊಲೆಯ ಮೂಲಕ ಅಂತ್ಯ ಕಂಡ ಅನೇಕ ಸಂಗತಿಗಳಿವೆ. ಕೋಪದ ತೀವ್ರತೆ ಎಷ್ಟು ಇರುತ್ತದೆ ಎಂದರೆ ಆ ಕ್ಷಣದಲ್ಲಿ ಬುದ್ಧಿ, ವಿವೇಕ ಎಲ್ಲವೂ ಮಸುಕಾಗುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವುದಿಲ್ಲ. ನಂತರ ಕೋಪ ಶಾಂತವಾದ ಮೇಲೆ ಮಾಡಿದ ಅನಾಹುತ, ಕೆಟ್ಟ ಕೆಲಸಗಳಿಗಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದ್ದರಿಂದ ಕೋಪವನ್ನು ನಿಯಂತ್ರಿಸುವುದು ಜೀವನದಲ್ಲಿ ಬಹಳ ಮುಖ್ಯ.
ಕೋಪ ಬಂದಾಗ ಕೆಲಕಾಲ ಮೌನವಾಗಿರುವುದು, ಆಳವಾದ ಉಸಿರಾಟ ಮಾಡುವುದು ಅಥವಾ ಆ ಸನ್ನಿವೇಶದಿಂದ ದೂರ ಹೋಗುವುದು ಉತ್ತಮ. ಶಾಂತ ಮನಸ್ಸಿನಿಂದ ಆಲೋಚಿಸಿದರೆ ಸಮಸ್ಯೆಗೆ ಸರಿಯಾದ ಪರಿಹಾರ ದೊರೆಯುತ್ತದೆ. ಕೋಪ ನಮ್ಮನ್ನು ಮಾತ್ರವಲ್ಲ, ನಮ್ಮ ಸಂಬಂಧಗಳನ್ನೂ ಹಾಳು ಮಾಡುತ್ತದೆ. ಪ್ರೀತಿ, ಸಹನೆ ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳುವ ಮನೋಭಾವದಿಂದ ಬದುಕಿದರೆ ಕುಟುಂಬದಲ್ಲೂ ಸಮಾಜದಲ್ಲೂ ಶಾಂತಿ ನೆಲೆಸುತ್ತದೆ.
ಪುರಾಣದಲ್ಲಿ ದೂರ್ವಾಸ ಮುನಿ ಕೋಪಕ್ಕೆ ಬಹಳ ಪ್ರಸಿದ್ಧರು. ಈಗಲೂ ಯಾರಾದರೂ ತಕ್ಷಣ ಕೋಪಗೊಂಡರೆ ‘ದೂರ್ವಾಸ ಮುನಿ’ ಎಂದು ಕಿಚಾಯಿಸುತ್ತಾರೆ. ಒಮ್ಮೆ ಶಕುಂತಳೆ ಧ್ಯಾನದಲ್ಲಿದ್ದಾಗ ದೂರ್ವಾಸ ಮುನಿ ಆಗಮಿಸುತ್ತಾರೆ. ಅದನ್ನು ಆಕೆ ಗಮನಿಸದೇ ಇದ್ದುದರಿಂದ ಮುನಿ ಕೋಪಗೊಂಡು, ‘ನಿನ್ನನ್ನು ಸದಾ ನೆನಪಿಸಿಕೊಳ್ಳುವವನು ನಿನ್ನನ್ನು ಮರೆಯುತ್ತಾನೆ’ ಎಂದು ಶಾಪ ನೀಡುತ್ತಾರೆ. ಈ ಶಾಪದಿಂದ ದುಷ್ಯಂತನು ಶಾಕುಂತಳೆಯನ್ನು ಮರೆಯುವಂತಾಯಿತು. ದೂರ್ವಾಸರ ಒಂದು ಕ್ಷಣದ ಕೋಪದಿಂದ ಅವರೀರ್ವರ ಜೀವನ ಕಷ್ಟಕ್ಕೆ ಸಿಲುಕುವಂತಾಯಿತು. ಹಾಗೆಯೇ ಮಹಾರಾಜ ಅಂಬರೀಷನ ಮೇಲೆ ಕೋಪಗೊಂಡು, ಆತನಿಗೆ ಶಾಪ ನೀಡಿ ತಾವೇ ಸಂಕಷ್ಟಕ್ಕೆ ಸಿಲುಕಿದ ಘಟನೆಯೂ ಬಹಳ ಪ್ರಸಿದ್ಧವಾಗಿದೆ. ಹೀಗೆ ಅತಿಯಾದ ಕೋಪ ಬೇರೆಯವರನ್ನು ಮಾತ್ರವಲ್ಲದೆ ನಮ್ಮನ್ನೇ ಸಂಕಷ್ಟಕ್ಕೆ ತಳ್ಳುತ್ತದೆ. ಕೋಪವು ಕ್ಷಣಿಕವಾಗಿ ನಮ್ಮ ಭಾವನೆಗಳನ್ನು ಹೊರಹಾಕಲು ಸಹಾಯ ಮಾಡಿದರೂ, ಅದು ಸಮಸ್ಯೆಗಳನ್ನು ಹೆಚ್ಚಿಸುತ್ತದೆಯೇ ಹೊರತು ಪರಿಹಾರ ಒದಗಿಸುವುದಿಲ್ಲ. ಕುಟುಂಬ, ಸ್ನೇಹ, ರಾಜಕೀಯ, ಆಡಳಿತ, ವ್ಯವಹಾರ, ರಾಷ್ಟ್ರ-ಅಂತಾರಾಷ್ಟ್ರೀಯ ಯಾವುದೇ ವಿಷಯವಿರಲಿ ಸಹನೆ, ಸಂವಾದ ಮತ್ತು ಪರಸ್ಪರ ಗೌರವಗಳ ಮೂಲಕ ಸಮಸ್ಯೆಗಳನ್ನು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಖಂಡಿತ ಸಾಧ್ಯ.
ಯುದ್ಧದ ಭೀಕರತೆ ಹಿರಿಯರನ್ನಷ್ಟೇ ಅಲ್ಲ ಎಳೆ ಕಂದಮ್ಮಗಳನ್ನೂ ಬಾಧಿಸುತ್ತಿರುವುದು ಸುಳ್ಳಲ್ಲ. ಯುದ್ಧಪೀಡಿತ ಪ್ರದೇಶದಲ್ಲಿ ಮಕ್ಕಳು ಗುಂಡಿನ ಸದ್ದು, ಶವಯಾತ್ರೆಗಳನ್ನು ನೋಡುತ್ತ ಬೆಳೆಯುವುದನ್ನು ಗಮನಿಸಿದರೆ ಮಾನವೀಯತೆ ಎತ್ತ ಸಾಗುತ್ತಿದೆ ಎಂದು ಚಿಂತಿಸುವಂತೆ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆಯುವ ಮಕ್ಕಳು ಶಾಂತಿ, ಪ್ರೀತಿ, ಸಹಾನುಭೂತಿಗಳನ್ನು ಅನುಭವಿಸುವ ಅವಕಾಶವೇ ಇಲ್ಲವಾಗಿದೆ. ಯುದ್ಧವು ಗೆಲುವು-ಸೋಲಿನ ಪ್ರಶ್ನೆಯಲ್ಲ, ಅದು ನಿಜವಾಗಿಯೂ ಮಾನವೀಯತೆಯ ಸೋಲು. ಕೋಪ ಮತ್ತು ದ್ವೇಷಗಳಿಂದ ಸುಂದರ ನಾಳೆಗಳನ್ನು ಕಟ್ಟಲು ಸಾಧ್ಯವಿಲ್ಲ. ದ್ವೇಷ ತೊರೆದು ಶಾಂತಿ ನೆಲೆಸಲು ಜಗತ್ತಿನ ಎಲ್ಲ ರಾಷ್ಟ್ರಗಳು ಒಂದಾಗಿ ಶ್ರಮಿಸಬೇಕು. ಈ ಮೂಲಕ ಮಾನವೀಯ ಮೌಲ್ಯಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)