ಒಂದೆರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸ್ವಾತಂತ್ರ್ಯಪೂರ್ವದ ಭಾರತದ ಸ್ಥಿತಿ-ಗತಿ ಕುರಿತಾದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಆ ಚಿತ್ರಗಳ ಮೂಲಕ ಭಾರತದ ಅಂದಿನ ಪರಿಸ್ಥಿತಿ ಊಹಿಸಬಹುದಾಗಿತ್ತು. ಹೆಚ್ಚಿನ ಮಹಿಳೆಯರು ಉದ್ದನೆಯ ಒಂದೇ ಬಟ್ಟೆಯನ್ನು ಮೈ ಪೂರ್ತಿ ಸುತ್ತಿಕೊಳ್ಳುತ್ತಿದ್ದರು. ಗಂಡಸರು ತುಂಡು ಬಟ್ಟೆಯನ್ನು ಸೊಂಟದ ಸುತ್ತ ಸುತ್ತಿಕೊಳ್ಳುತ್ತಿದ್ದರು. ಎಷ್ಟೆಂದರೆ ಈ ಭೂಮಿಯಲ್ಲಿ ಜನಿಸಿದ್ದೇ ಅಪರಾಧ ಎಂಬ ಭಾವನೆ ಹೊಂದುವಂಥ ಸ್ಥಿತಿ ಗ್ರಾಮೀಣ ಪ್ರದೇಶದ ಜನರಲ್ಲಿತ್ತು. ಕಳೆದ 75 ವರ್ಷಗಳಲ್ಲಿ ಭಾರತವು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವ ರೀತಿಯಲ್ಲಿ ಬೆಳವಣಿಗೆ, ಸಾಧನೆ ಮಾಡಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ಸಲುವಾಗಿ ವರ್ಷದ ಮೊದಲೇ ಪ್ರಧಾನಿ ನರೇಂದ್ರ ಮೋದಿಯವರು ಸಮಿತಿಯೊಂದನ್ನು ರಚಿಸಿ ವಿವಿಧ ಪ್ರಗತಿಪರ ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಈ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ರಾಜಕಾರಣಿಗಳು, ಮಂತ್ರಿಗಳು, ತಜ್ಞರು ಹೀಗೆ ಎಲ್ಲಾ ರಂಗಗಳಲ್ಲಿನ ಜನರಿದ್ದರು. ನಾನು ಕೂಡ ಇದರ ಸದಸ್ಯನಾಗಿದ್ದೆ. ಜೊತೆಗೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಆಜಾದಿ ಕಾ ಅಮೃತ ಮಹೋತ್ಸವ್ ಕಾರ್ಯಕ್ರಮದಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶವಿದ್ದ ಹನ್ನೆರಡು ಜನರಲ್ಲಿ ನಾನೂ ಒಬ್ಬನಾಗಿದ್ದೆ. ‘ಸ್ವತಂತ್ರ ಭಾರತದಲ್ಲಿ ಅವಕಾಶಗಳು ಸೃಷ್ಟಿಯಾಗಿವೆ. ಈ ಮೂಲಕ ದೇಶದ ಅಭಿವೃದ್ಧಿ ಹಂತ ಹಂತವಾಗಿ ಪ್ರಗತಿ ಹೊಂದಲು ಸಾಧ್ಯವಾಗಿದೆ’ಎಂದು ನಾನು ಹೇಳಿದೆ.
ಭಾರತವು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಬಡತನ, ನಿರುದ್ಯೋಗ, ಅನಕ್ಷರತೆ, ಬಾಲ್ಯ ವಿವಾಹ ಮುಂತಾದ ಹತ್ತು ಹಲವು ಸಾಮಾಜಿಕ ಪಿಡುಗುಗಳಿಂದ ನಲುಗಿತ್ತು. ಕೆಲವರನ್ನು ಬಿಟ್ಟರೆ ಉಳಿದವರಿಗೆ ಶಿಕ್ಷಣ ಗಗನ ಕುಸುಮವೇ ಆಗಿತ್ತು. ಜಿಲ್ಲೆಯಲ್ಲಿ ಒಂದೆರಡು ಕಾಲೇಜುಗಳು, ಬೆರಳೆಣಿಕೆಯಷ್ಟು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕೇಂದ್ರಗಳಿದ್ದವು. ಕ್ರಮೇಣ, ಸರ್ಕಾರ ಹಾಗೂ ಅನೇಕ ಗಣ್ಯ ಮಹನೀಯರು ಅಲ್ಲಲ್ಲಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿದರು. ಮುಖ್ಯವಾಗಿ ಉಳ್ಳವರಿಗೆ ಮಾತ್ರ ಎಂಬಂತಿದ್ದ ಶಿಕ್ಷಣ ಸಾರ್ವತ್ರೀಕರಣಗೊಂಡು ಕಡು ಬಡವರು ಕೂಡ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು. ನನಗೆ ಈಗಲೂ ನೆನಪಿದೆ. ನನ್ನ ತಂದೆ ರತ್ನವರ್ಮ ಹೆಗ್ಗಡೆಯವರು ಶಾಲೆಗಳನ್ನು ಆರಂಭಿಸಿದಾಗ ಅನೇಕರು ಶಿಕ್ಷಣ ಪಡೆಯುವುದಕ್ಕಾಗಿ ಸಹಾಯ ಕೋರಿ ಬೀಡಿಗೆ ಬರುತ್ತಿದ್ದರು. ಶಿಕ್ಷಣಾರ್ಥಿಗಳ ಅಧ್ಯಯನ ವಿಷಯಕ್ಕೆ ಅನುಗುಣವಾಗಿ ಸಹಾಯವನ್ನೂ ಮಾಡಲಾಗುತ್ತಿತ್ತು. ಅನೇಕರು ವಾರಾನ್ನ ಮಾಡಿಕೊಂಡು, ದಿನಕ್ಕೆ ಒಂದೇ ಹೊತ್ತು ಊಟ ಮಾಡಿಕೊಂಡು ಬಹಳ ಕಷ್ಟದಿಂದ ಶಿಕ್ಷಣವನ್ನು ಪಡೆದಿದ್ದರು. ಅದೆಷ್ಟೋ ಜನರಿಗೆ ಶಾಲಾ-ಕಾಲೇಜಿಗೆ ತೊಡಲು ಸರಿಯಾದ ಬಟ್ಟೆ ಇರಲಿಲ್ಲ. ಇವೆಲ್ಲವನ್ನು ಕಂಡು ಐದು ದಶಕಗಳ ಹಿಂದೆಯೇ ಮುಖ್ಯವಾಗಿ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕಾಗಿ ಶ್ರೀ ಕ್ಷೇತ್ರದ ವತಿಯಿಂದ, ಹಳ್ಳಿಯಾಗಿದ್ದ ಉಜಿರೆಯಲ್ಲಿ ಶಿಕ್ಷಣ ಕೇಂದ್ರಗಳನ್ನು ಆರಂಭಿಸಿದೆವು. ಹೀಗೆಯೇ ನಾಡಿನೆಲ್ಲೆಡೆ ಅನೇಕ ಶಿಕ್ಷಣ ಸಂಸ್ಥೆಗಳು ಆರಂಭಗೊಂಡು ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದವು.
ಮುಖ್ಯವಾಗಿ ಇಂಜಿನಿಯರಿಂಗ್, ವೈದ್ಯಕೀಯ, ಕಾನೂನು, ಮುಂತಾದ ಶಿಕ್ಷಣಗಳಿಗಾಗಿ ನಗರಗಳಿಗೆ ಅಥವಾ ದೂರದ ಮದ್ರಾಸು, ಬನಾರಸ್ (ಕಾಶಿ) ಮುಂತಾದ ಕಡೆ ಹೋಗಬೇಕಿತ್ತು. ಅನುಕೂಲಸ್ಥರು ಮಾತ್ರವೇ ಇಂತಹ ಶಿಕ್ಷಣ ಪಡೆಯಲು ಸಾಧ್ಯವಾಗಿತ್ತು. ಆದರೆ ಇಂದು ಸರ್ಕಾರ ಮತ್ತು ಖಾಸಗಿಯವರ ಸಹಕಾರದಿಂದ ಉನ್ನತ ಶಿಕ್ಷಣಾಭ್ಯಾಸವು ನಮ್ಮ ನಾಡಿನಲ್ಲೇ ದೊರೆಯುವಂತೆ ಆಯಿತು. ಮಾತ್ರವಲ್ಲದೆ ತರಕಾರಿ ಮಾರುವವರ ಮಕ್ಕಳು, ಕೃಷಿಕರು, ಕೂಲಿ ಕಾರ್ವಿುಕರು ಮುಂತಾದ ಮಧ್ಯಮ, ಬಡ ಆರ್ಥಿಕ ವರ್ಗದ ಜನರ ಮಕ್ಕಳೂ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತಲ್ಲದೆ ರ್ಯಾಂಕ್ಗಳನ್ನು ಪಡೆಯುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಅವಕಾಶಗಳ ನಿರ್ಮಾಣ ಎಂಬುದು ಬರೀ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಉದ್ಯೋಗ, ವ್ಯವಹಾರ, ವ್ಯಾಪಾರ, ತಂತ್ರಜ್ಞಾನ, ಸಂಶೋಧನೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸರ್ಕಾರ ಹಾಗೂ ಖಾಸಗಿಯಾಗಿ ಅವಕಾಶಗಳು ಸೃಷ್ಟಿಯಾಗುತ್ತಿವೆ. ಸ್ವ ಉದ್ಯೋಗಗಳಿಗೆ ಸಾಲ, ಪೋ›ತ್ಸಾಹಧನ, ಸಹಾಯಧನ ನೀಡುವ ಮೂಲಕ ಬಲ ತುಂಬಲಾಗುತ್ತಿದೆ. ದೊಡ್ಡ ದೊಡ್ಡ ಉದ್ಯಮಿಗಳಿಗೆ ಉದ್ಯೋಗಗಳನ್ನು ಸೃಷ್ಟಿಸಲು ಅವಕಾಶಗಳನ್ನು, ಪೂರಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹೀಗೆ ಒಂದಕ್ಕೊಂದು ಪೂರಕವಾಗಿ ಅವಕಾಶಗಳು ನಿರ್ವಣವಾಗುತ್ತಾ ಅಭಿವೃದ್ಧಿಗೆ ಪೂರಕವಾಗಿವೆ.
ಇಂದಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ಅರಿವು ಮೂಡಿದ್ದು, ಚಿಕ್ಕ ಕುಟುಂಬ ಹೊಂದುವ ಮೂಲಕ ಸುಖೀ ಕುಟುಂಬ ನಡೆಸುತ್ತಿದ್ದಾರೆ. ಪುರುಷರು ಮತ್ತು ಮಹಿಳೆಯರು ಸಮನಾಗಿ ದೇಶದ ಅಭಿವೃದ್ಧಿಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತೊಡಗಿಕೊಂಡಿದ್ದಾರೆ. ಮಹಿಳೆಯರು ಕೂಡ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ, ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಿಂಚುತ್ತಿದ್ದಾರೆ. ಮುಖ್ಯವಾಗಿ ಮಹಿಳೆಯರು ಸಬಲರಾಗುತ್ತಿದ್ದಾರೆ. ಗಂಡಿಗೆ ಸಮನಾಗಿ ಹೆಣ್ಣು ಮನೆಯ ನಿರ್ವಹಣೆ ಮಾಡಬಲ್ಲಳು, ಆರ್ಥಿಕ ವ್ಯವಹಾರ ನಡೆಸಬಲ್ಲಳು, ಸ್ವತಂತ್ರವಾಗಿ ಬಾಳಬಲ್ಲಳು. ಸ್ವಾತಂತ್ರ್ಯ ಪಡೆದ ಕಾಲದಲ್ಲಿ ಬಾಲ್ಯವಿವಾಹ ಹೆಣ್ಣುಮಕ್ಕಳಿಗೆ ಕಂಟಕವಾಗಿ ಪರಿಣಮಿಸಿತ್ತು. ಶಿಕ್ಷಣವಂತೂ ಮರೀಚಿಕೆಯೇ ಆಗಿತ್ತು. ಮನೆಯಲ್ಲಾಗಲಿ, ಸಮಾಜದಲ್ಲಾಗಲಿ ಮಹಿಳೆಗೆ ಗೌರವಾದರಗಳು, ಮನ್ನಣೆಗಳು ದೊರೆಯುತ್ತಿರಲಿಲ್ಲ. ಅಂತಹ ಸ್ಥಿತಿ ಹೊಂದಿದ್ದ ಭಾರತದಲ್ಲಿ ಇಂದು ರಾಷ್ಟ್ರದ ಪ್ರಥಮಪ್ರಜೆಯಾಗಿ ಮಹಿಳೆಯೇ ನೇಮಕವಾಗಿರುವುದು ಹೆಮ್ಮೆಯ ಸಂಗತಿ.
ದೇಶದ ಅಭಿವೃದ್ಧಿಯಲ್ಲಿ ಸಂವಹನ ಹಾಗೂ ಮಾಧ್ಯಮಗಳು ಮಹತ್ವದ ಪಾತ್ರ ವಹಿಸಿವೆ. ಸ್ವಾತಂತ್ರ್ಯ ಪಡೆಯುವಲ್ಲಿಯೂ ಪತ್ರಿಕೆಗಳು ವಿಶೇಷ ಪಾತ್ರ ವಹಿಸಿವೆ. ಜನರಲ್ಲಿ ಸ್ವಾತಂತ್ರ್ಯದ ಕಿಚ್ಚಿಗೆ ಪ್ರೇರಣೆ ನೀಡಿದ್ದವು. ದೇಶದ ನಾಗರಿಕರನ್ನು ಒಟ್ಟುಗೂಡಿಸಿದ್ದವು. ರಾಷ್ಟ್ರ ನಾಯಕರ ಸಂದೇಶಗಳನ್ನು ಜನಮಾನಸದಲ್ಲಿ ಬಿತ್ತಿ ದೇಶಭಕ್ತಿಯನ್ನು ತುಂಬಿದ್ದವು. ಅಂದು ಬೆರಳೆಣಿಕೆಯಷ್ಟಿದ್ದ ಪತ್ರಿಕೆ, ದೃಶ್ಯ ಮಾಧ್ಯಮಗಳು ಸ್ವಾತಂತ್ರಾ್ಯನಂತರ ವಿಶೇಷವಾಗಿ ಜಾಗತೀಕರಣದ ನಂತರ ಸಂಖ್ಯೆಯಲ್ಲಿ ವೃದ್ಧಿಯಾದವು. ಮಾಧ್ಯಮ ಮತ್ತು ಸಂಪರ್ಕ ಕ್ರಾಂತಿಯಿಂದಾಗಿ ಸರ್ಕಾರದ ಸೌಲಭ್ಯ, ಸೌಕರ್ಯ, ಯೋಜನೆಗಳ ಮಾಹಿತಿಗಳೆಲ್ಲ ಸುಲಭವಾಗಿ ಹಾಗೂ ಕ್ಷಿಪ್ರವಾಗಿ ದೊರೆತು, ಹೆಚ್ಚೆಚ್ಚು ಜನರು ಸರ್ಕಾರದಿಂದ ದೊರೆಯುವ ಅನುದಾನ, ಸಹಾಯಗಳನ್ನು ಬಳಸಿಕೊಂಡು ಕುಟುಂಬದ ಅಭಿವೃದ್ಧಿ ಜತೆಗೆ ಸಮಾಜಕ್ಕೂ ಕೊಡುಗೆ ನೀಡಿದರು.
ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಮನರಂಜನೆ ಮಾತ್ರವಲ್ಲದೆ ಶಿಕ್ಷಣ, ಮಾಹಿತಿ, ಅರಿವುಗಳನ್ನು ನೀಡುವ ಮೂಲಕ ಜನರನ್ನು ಸುಶಿಕ್ಷಿತರನ್ನಾಗಿಸುವ ಕಾರ್ಯ ನಿರಂತರವಾಗಿ ನಡೆಯಿತು. ಪರಿಣಾಮವಾಗಿ ಮನೆ, ಗ್ರಾಮಗಳಿಗೆ ಸೀಮಿತಗೊಂಡಿದ್ದ ಜನರು ಹೊರಪ್ರಪಂಚವನ್ನು ಕಾಣುವಂತಾದರು. ಶಿಕ್ಷಣ, ಉದ್ಯೋಗ, ಸೇವೆ ಮುಂತಾದ ಕಾರಣಗಳಿಗಾಗಿ ದೇಶಾದ್ಯಂತ ಪ್ರಯಾಣಿಸತೊಡಗಿದರು. ವಿವಿಧ ರಾಜ್ಯ, ಪ್ರದೇಶಗಳಲ್ಲಿ ನೆಲೆಸತೊಡಗಿದರು. ಈ ಮೂಲಕವಾಗಿ ಅನ್ಯ ಪ್ರದೇಶಗಳ ಬಗ್ಗೆ ಇದ್ದ ಭಯದ ವಾತಾವರಣ ದೂರವಾಗಿ ನಮ್ಮ ದೇಶವೆಂಬ ಅತ್ಯಾಪ್ತ ಭಾವನೆ ಬೆಳೆಯಿತು. ಭಾರತದಲ್ಲಿ ಎಲ್ಲಿ ಹೋದರೂ ನನ್ನ ನೆಲ, ನನ್ನ ಜಲ- ನನ್ನ ತಾಯ್ನಾಡು ಎಂಬ ಗೌರವ ಭಾವನೆ ಬೆಳೆಯುವಂತಾಯಿತು. ನೆರೆಯ ರಾಜ್ಯಗಳೊಡನೆ ಸೌಹಾರ್ದ ಭಾವನೆ, ವಿವಿಧ ಧರ್ಮ, ಮತ, ಜಾತಿ, ಸಮುದಾಯದವರ ಜೊತೆಗೆ ಭ್ರಾತೃತ್ವ ಭಾವನೆ ಬೆಳೆಸುವಲ್ಲಿ ಮಾಧ್ಯಮದ ಪಾತ್ರವನ್ನು ಮರೆಯುವಂತಿಲ್ಲ. ಮಾಧ್ಯಮಗಳ ಮೂಲಕ ಹಳ್ಳಿಯ ಜನರು ದಿಲ್ಲಿಯ ಆಗು-ಹೋಗುಗಳ ಬಗ್ಗೆ ತಿಳಿಯುವಂತಾದರು. ರಾಜಕೀಯ, ಶಿಕ್ಷಣ, ಹಣಕಾಸು, ಕೃಷಿ ಇತ್ಯಾದಿಗಳ ಬಗ್ಗೆ ಜ್ಞಾನ ಪಡೆದರು. ಈಗೀಗ ಎಲ್ಲ ವ್ಯವಹಾರಗಳೂ ಸುಲಭವಾಗಿ ಹಾಗೂ ಕ್ಷಿಪ್ರವಾಗಿ ನಡೆಯುವಂತೆ ಸರ್ಕಾರಗಳು ಕ್ರಮ ಕೈಗೊಂಡಿವೆ. ಜೊತೆಗೆ ಬಹುತೇಕರು ತಂತ್ರಜ್ಞಾನ, ಆಧುನಿಕತೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.
ಇಂದು ನಾವು ಹೊಂದಿರುವ ಸ್ವಾತಂತ್ರ್ಯವು ನಮ್ಮ ಹಿರಿಯರು, ಮಹನೀಯರು ತ್ಯಾಗ, ಬಲಿದಾನ ಮಾಡಿ ಗಳಿಸಿರುವಂಥದ್ದು. ಇದಕ್ಕಾಗಿ ಅದೆಷ್ಟೋ ಜನರು ಪ್ರಾಣ, ಮಾನವನ್ನು ಕಳೆದುಕೊಂಡಿದ್ದಾರೆ, ತಮ್ಮ ಸಂಪತ್ತನ್ನು ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯದ ಬಳಿಕ ಅದೆಷ್ಟೋ ದೇಶಭಕ್ತರು ದೇಶ ಕಟ್ಟಲು ಹಗಲಿರುಳು ಶ್ರಮಿಸಿದ್ದಾರೆ. ಇಂದು ಕೂಡ ದೇಶಕ್ಕಾಗಿ ದುಡಿಯುವ ಯೋಧರು, ರೈತರು ಮುಂತಾದ ಸೇವಾನಿರತರು ನಮ್ಮ-ನಿಮ್ಮ ನಡುವೆ ಇದ್ದಾರೆ. ಅವರೆಲ್ಲರ ಶ್ರಮಕ್ಕೆ ಬೆಲೆ, ಗೌರವ ದೊರೆಯಬೇಕಾದರೆ ಪಡೆದಿರುವ ಸ್ವಾತಂತ್ರ್ಯವನ್ನು ಉತ್ತಮ ರೀತಿಯಲ್ಲಿ ಬಳಸಿ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂಬುದನ್ನು ಮರೆಯದಿರೋಣ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)