ಅಂಕಣ

ಆರೋಗ್ಯ ಮತ್ತು ಆನಂದದಿಂದ ದೀರ್ಘಾಯುಷ್ಯ: ಡಾ. ವೀರೇಂದ್ರ ಹೆಗ್ಗಡೆ ಅವರ ಧರ್ಮದರ್ಶನ ಅಂಕಣ

‘ಜಂತೂನಾಂ ನರಜನ್ಮ ದುರ್ಲಭಮ್ ಮನುಷ್ಯ ಜನ್ಮ ಶ್ರೇಷ್ಠವಾದದ್ದು. ಪ್ರತಿಯೊಬ್ಬ ಮನುಷ್ಯನೂ ತಾನು ಸುಖವಾಗಿ ಬದುಕಬೇಕು, ದೀರ್ಘಕಾಲ ಬದುಕಬೇಕು ಎಂಬುದಾಗಿ ಬಯಸುತ್ತಾನೆ. ಹಾಗಿದ್ದರೆ ಈ ಜೀವನದ ಅರ್ಥವೇನು? ನೂರಾರು ವರ್ಷ ಆರೋಗ್ಯಪೂರ್ಣವಾಗಿ ಬದುಕುವುದು ಹೇಗೆ? ನೂರು ವರ್ಷ ಬದುಕುವುದೇ ಜೀವನವೇ ಅಥವಾ ಇದಕ್ಕಿಂತ ಹೆಚ್ಚಿನದ್ದನ್ನು ಸಾಧಿಸುವುದಕ್ಕಾಗಿ ಮನುಷ್ಯ ಜೀವನವೇ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ.

ನೂರು ವರ್ಷ ಕೇವಲ ಲೌಕಿಕ, ಭೌತಿಕ ಸುಖಕ್ಕೋಸ್ಕರವೇ ಬದುಕುವುದು ಶ್ರೇಷ್ಠವೇ? ಅಥವಾ ನೂರು ವರ್ಷದ ಜೀವಮಾನದ ಹಂತದಲ್ಲಿ ವಿಶಿಷ್ಟವಾದ ಏನಾದರೂ ಅಲೌಕಿಕ ಸಾಧನೆಯನ್ನು ಮಾಡಬೇಕಾದ್ದು ಮುಖ್ಯವೇ ಎಂಬುದು ಚಿಂತನೀಯವಾದ ವಿಷಯ. ದೈಹಿಕವಾಗಿ ಆರೋಗ್ಯಪೂರ್ಣವಾಗಿ ಇರಬೇಕಾದರೆ ಕೆಲವು ದಿನಚರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆರೋಗ್ಯಪೂರ್ಣವಾದ ಆಹಾರದ ಕ್ರಮ, ಸರಳ ಜೀವನ ಮತ್ತು ಒಳ್ಳೆಯ ವಾತಾವರಣ ಹೆಚ್ಚು ಸಮಯ ಬದುಕುವುದಕ್ಕೆ ಕಾರಣವಾಗುತ್ತವೆ ಎಂಬುದಾಗಿ ಜಪಾನೀಯರ ಅಭಿಪ್ರಾಯ. ಪ್ರಪಂಚದಲ್ಲಿ ದೀರ್ಘಾಯುಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಜಪಾನ್ ದೇಶದಲ್ಲಿ, ಅದರಲ್ಲೂ ಅಲ್ಲಿನ ಇಕಿಗಾವಾ ಎಂಬ ಪ್ರದೇಶದಲ್ಲಿ. ಇಲ್ಲಿರುವ ಶಿಕುವಾಸ ಎಂಬ ನಿಂಬೆಹಣ್ಣಿನಂಥ ಒಂದು ಫಲ ತಮಗೆ ವಿಶಿಷ್ಟ ಶಕ್ತಿ ಕೊಡುತ್ತದೆ ಎಂಬುದಾಗಿ ಅವರು ಹೇಳುತ್ತಾರೆ. ಅಲ್ಲಿಯ ಜನರು ಪರಸ್ಪರ ಸೌಹಾರ್ದದಿಂದ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತ ಸಹೋದರತ್ವ ಭಾವದಿಂದ ಬದುಕುತ್ತಾರಂತೆ.

ಜಪಾನಿನ ‘ಉಗಿಮಿ’ ಎಂಬ ಹಳ್ಳಿಯ ಬಹುತೇಕರು ಆರೋಗ್ಯವಂತರು. ಶತಾಯುಷಿಗಳು ಬಹುಸಂಖ್ಯೆಯಲ್ಲಿದ್ದಾರೆ. ನಿವೃತ್ತ ಜೀವನದಲ್ಲಿಯೂ ಎಂದೂ ನಿರಾಶ, ಹತಾಶರಾಗಿ ಬದುಕುವುದಿಲ್ಲ. ಎಲ್ಲರನ್ನೂ ಬಂಧುಗಳಂತೆ ಕಾಣುವ, ಯಾರನ್ನಾದರೂ ಮೊದಲನೆಯ ಬಾರಿ ಭೇಟಿಯಾದರೂ ಪ್ರೀತಿಯಿಂದ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಕಡಿಮೆ ಆಹಾರ ಸ್ವೀಕರಿಸುವುದು, ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.

‘ಯಾವುದೇ ಕೆಲಸ ಮಾಡಿದರೂ, ಅದರಿಂದ ಆಯಾಸಗೊಳ್ಳಬೇಡ’ ಎಂಬುದು ಒಂದು ಸಿದ್ಧಾಂತ. ಕೆಲಸವನ್ನು ಮನಃಪೂರ್ವಕವಾಗಿ ಪ್ರೀತಿಸಿ ಮಾಡಿದಾಗ ಆ ಕೆಲಸ ನಮಗೆ ಶ್ರಮವೆನಿಸುವುದಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಯಾವುದೇ ಕೆಲಸ ಮಾಡಿದರೂ ಆ ಕೆಲಸ ತೃಪ್ತಿ ನೀಡುವುದಿಲ್ಲ. ‘ಯೌವನದ ಮೂಲಗುಟ್ಟು ಉತ್ಸಾಹ, ಕ್ರಿಯಾಶೀಲತೆ’ ಎಂದು ಶತಾಯುಷಿ ಸರ್ ಎಂ. ವಿಶ್ವೇಶ್ವರಯ್ಯ ಹೇಳುತ್ತಿದ್ದರು. ‘ನಾಡಿನ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ನಿಮ್ಮ ಚಿರಯೌವನದ ರಹಸ್ಯವೇನು?’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಅವರು ನೀಡಿದ ಉತ್ತರ ಇಡೀ ಜನಾಂಗಕ್ಕೇ ಮಾರ್ಗದರ್ಶಕ ಸಂದೇಶವಾಗಿತ್ತು! ‘ಸದಾ ಆನಂದದಿಂದ ಇರಬೇಕು. ಕ್ರಿಯಾಶೀಲರಾಗಿ ಗೆಲುವಿಗಾಗಿ ಶ್ರಮಿಸಬೇಕು. ನಿರಂತರವೂ ನಗುತ್ತಿರಬೇಕು; ಎಲ್ಲೆಲ್ಲೂ ತಮಾಷೆಯ ಸಂದರ್ಭಗಳನ್ನು ಗುರುತಿಸಿ ಅನುಭವಿಸಲು ಪ್ರಯತ್ನಿಸಬೇಕು. ಸಂಯಮದಿಂದ ವ್ಯವಹರಿಸಬೇಕು. ಈ ಪಂಚಸೂತ್ರಗಳೇ ನನ್ನ ಉತ್ಸಾಹದ ರಹಸ್ಯವಾಗಿದೆ’ ಎಂದು ಅವರು ಹೇಳಿದ್ದರು.

ಮನುಷ್ಯನ ದೇಹಕ್ಕೆ ಬರುವ ರೋಗಗಳನ್ನು ನಿಯಂತ್ರಿಸಬೇಕಾದರೆ ಜೀವನದಲ್ಲಿ ಕೆಲವು ನಿರ್ಬಂಧಗಳನ್ನು ನಾವೇ ಹಾಕಿಕೊಳ್ಳಬೇಕಾಗುತ್ತದೆ. ವಿಶೇಷವಾಗಿ ನಾವು ಸೇವಿಸುವ ಇಂದಿನ ಆಹಾರ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ. ಇದೇ ಅಂಶವನ್ನು ಇಟ್ಟುಕೊಂಡು ಜಪಾನ್ ದೇಶದವರ ಜೀವನಕ್ರಮವನ್ನು ನೋಡಿದಾಗ, ಅವರು ಯಾವಾಗಲೂ ಕಡಿಮೆ ಆಹಾರವನ್ನು ಸೇವಿಸುತ್ತಾರೆ. ನಮ್ಮಲ್ಲಿಯೂ ಅಂತಹದ್ದೇ ನಿಯಮಗಳಿವೆ. ಹಿತ ಭುಕ್, ಮಿತ ಭುಕ್, ಋತ ಭುಕ್ ಎಂಬುದಾಗಿ. ಆದರೆ ಇಂಥ ವಿಷಯಗಳು ಅನುಷ್ಠಾನದಲ್ಲಿ ಬರದಿದ್ದರೆ ಪ್ರಯೋಜನವಾಗಲಾರದು.

ರಾಜಸ್ಥಾನದ ರಾಜಧಾನಿ ಜಯಪುರದಲ್ಲಿ ಒಮ್ಮೆ ಶ್ರೀ ಚಂದ್ರಪ್ರಭ ಸಾಗರ ಎಂಬ ಮುನಿಗಳು ಚಾತುರ್ವಸದಲ್ಲಿದ್ದರು. ಆಗ ಆ ನಗರದ ಪ್ರತಿಷ್ಠಿತ ಸೇಠ್​ಜೀ ಒಬ್ಬರು ಹೋಗಿ ಕಷ್ಟವನ್ನು ನಿವೇದಿಸಿಕೊಂಡರು- ‘ಮಹಾರಾಜ್, ನನ್ನ ಅಂಗಡಿಯಲ್ಲಿ ಚೆನ್ನಾಗಿ ವ್ಯಾಪಾರ ನಡೆಯುತ್ತಿದೆ. ಅರಮನೆಯಂಥ ಬಂಗಲೆಯಿದೆ. ಮನೆಯಲ್ಲಿ ಥರಥರದ ತಿಂಡಿಗಳಿವೆ. ಆದರೆ ಬದುಕಿನಲ್ಲಿ ಸುಖವಿಲ್ಲ, ಆರೋಗ್ಯವಿಲ್ಲ. ನನಗೆ ಸೂಕ್ತ ಮಾರ್ಗದರ್ಶನ ನೀಡಿರಿ’. ಆಗ ಮುನಿಗಳು ಆ ಸೇಠ್​ಜೀಯನ್ನು ದಿಟ್ಟಿಸಿ ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಒಂದು ಕ್ಷಣ ಕಣ್ಣುಮುಚ್ಚಿ ವಿಚಾರಮಗ್ನರಾದರು. ಮತ್ತೆ ಕಣ್​ದೆರೆದು ನುಡಿದರು- ‘ಸೇಠ್​ಜೀ, ಆರೋಗ್ಯಪೂರ್ಣ ಜೀವನದ ಸರಳ ಸೂತ್ರ ಹೀಗಿದೆ- ಆಹಾರವನ್ನು ಅರ್ಧ ತಿಂದರೆ ಸಾಕು. ತರಕಾರಿಯನ್ನು ಇಮ್ಮಡಿ ತಿನ್ನಬೇಕು. ಮೂರು ಪಟ್ಟು ನೀರು ಕುಡಿಯಬೇಕು. ಮತ್ತೆ ದಿನವಿಡೀ ನಾಲ್ಕು ಪಟ್ಟು ಮುಗುಳು ನಗಬೇಕು’. ಹೀಗೆ ಗುರು ಉಪದೇಶವನ್ನು ಪಡೆದು ಮನೆಗೆ ತೆರಳಿದ ಆ ಸೇಠ್​ಜೀ ಅಂತೆಯೇ ನಡೆದಾಗ, ಎಲ್ಲ ಸಮಸ್ಯೆಗಳೂ ದೂರವಾದವು.

ಕಡಿಮೆ ಆಹಾರವನ್ನು ಸೇವಿಸುವುದಕ್ಕೆ ಜಪಾನೀಯರು ಮಾಡಿರುವ ಉಪಾಯ ಹೀಗಿದೆ- ಅವರು ಯಾವುದೇ ಉಪಾಹಾರಮಂದಿರಗಳಿಗೆ ಹೋದಾಗ, ಅವರಿಗೆ ಒಂದು ದೊಡ್ಡ ಟ್ರೇಯಲ್ಲಿ ಐದುತಟ್ಟೆಗಳನ್ನಿಟ್ಟು ಆಹಾರ ನೀಡುತ್ತಾರೆ. ಹೀಗೆ ಐದು ಪಾತ್ರೆಗಳಲ್ಲಿ ನಾಲ್ಕು ಅತ್ಯಂತ ಚಿಕ್ಕದಾದಂಥವುಗಳು ಮತ್ತೆ ಒಂದು ಪಾತ್ರೆಯಲ್ಲಿ ಸ್ವಲ್ಪ ಹೆಚ್ಚಿನ ಆಹಾರ ನೀಡುತ್ತಾರೆ. ಅಂದರೆ ಊಟಕ್ಕೆ ಇಟ್ಟ ಐದು ತಟ್ಟೆಗಳಲ್ಲಿನ ಆಹಾರವನ್ನು ನೋಡುವಾಗ ನಮ್ಮ ಮನಸ್ಸು ಹೇಳುತ್ತದೆ- ‘ನೀನು ತುಂಬ ಆಹಾರವನ್ನು ಸ್ವೀಕರಿಸುತ್ತಿದ್ದಿ’ ಎಂದು. ಆಗ ಆ ತಟ್ಟೆಗಳಲ್ಲಿರುವ ಸ್ವಲ್ಪವೇ ಆಹಾರ ಸ್ವೀಕರಿಸಿದಾಗ ತೃಪ್ತಿ ಆಗಿಬಿಡುತ್ತದೆ. ಸ್ವಲ್ಪ ಹಸಿವಿರುವಾಗಲೇ ಊಟ ನಿಲ್ಲಿಸಿಬಿಡುತ್ತಾರೆ. ಈ ಕಾರಣದಿಂದ ಜಪಾನಿಯರು ದೇಹದ ತೂಕ ಕಳೆದುಕೊಳ್ಳುತ್ತಾರೆ. ಬೊಜ್ಜು ಕರಗಿಸಿಕೊಳ್ಳುತ್ತಾರೆ.

ಕೆಲವರ್ಷಗಳ ಹಿಂದೆ ನಾನೊಮ್ಮೆ ಜಪಾನಿಗೆ ಭೇಟಿ ನೀಡಿದ್ದೆ. ಅಲ್ಲಿ ಒಂದು ವೃದ್ಧಾಶ್ರಮ ನೋಡುವ ಅವಕಾಶ ದೊರಕಿತು. ವೃದ್ಧಾಶ್ರಮದಲ್ಲಿ ವೃದ್ಧರಿಗೆ ಉಳಿದುಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಿದ್ದರು. ಅವರು ಮಲಗುವ ಜಾಗ ಸರಳವಾಗಿತ್ತು ಆದರೆ ವೈಭವೋ ಪೇತವಾಗಿತ್ತು (ನಮ್ಮ ದೃಷ್ಟಿಯಲ್ಲಿ ). ಅಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆ ಕಂಡು ನಾನು ಊರಿಗೆ ಬಂದಾಗ ಹೇಳುತ್ತಿದ್ದೆ- ‘ಆ ದೇಶದಲ್ಲಿ ವೃದ್ಧರಾಗಿರುವುದು, ವೃದ್ಧಾಶ್ರಮದಲ್ಲಿ ಇರುವುದು ಕೂಡ ಒಂದು ಸೌಭಾಗ್ಯ’ ಎಂದು.

ಒತ್ತಡದಿಂದ ಹೊರ ಬನ್ನಿ: ಎಷ್ಟೋ ಸಲ ಸಣ್ಣ ಸಣ್ಣ ವಿಷಯಗಳಿಗೋಸ್ಕರ ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹಾಳು ಮಾಡಿಕೊಂಡು ದುಃಖಿತರಾಗುತ್ತೇವೆ. ಒತ್ತಡ ಎಂಬುದು ದೀರ್ಘಾಯುಷ್ಯಕ್ಕೆ ಮಾರಕ. ಅನೇಕ ಜನರು ನೋಡುವಾಗ ತಮ್ಮ ನಿಜವಾದ ವಯಸ್ಸಿಗಿಂತ ಹೆಚ್ಚಿಗೆ ವಯಸ್ಸಾದವರಂತೆ ಕಾಣುತ್ತಾರೆ. ಇದು ಯಾಕೆ ಹೀಗೆ ಎಂಬ ಬಗ್ಗೆ ಸಂಶೋಧಕರು ಸಂಶೋಧನೆ ಮಾಡಿ ಕಂಡುಕೊಂಡ ಸತ್ಯವೇ ‘ಒತ್ತಡ’. ದೇಹ ಇಂಥ ಒತ್ತಡದ ಸಂದರ್ಭದಲ್ಲಿ ಆಯಾಸಗೊಂಡು ಇಂದ್ರಿಯಗಳು ತಮ್ಮ ಚಟುವಟಿಕೆಗಳಲ್ಲಿ ಆಲಸ್ಯ ತೋರಿಸಿ ಮಂದವಾಗುತ್ತದೆ. ಆದ್ದರಿಂದ ಒತ್ತಡವನ್ನು ನಿಯಂತ್ರಿಸಿಕೊಳ್ಳುವ ಮಾಗೋಪಾಯಗಳನ್ನು ಕಂಡುಕೊಳ್ಳಬೇಕು. ಭಾರತದ ಕೊಡುಗೆಯಾದ ಯೋಗ ಒತ್ತಡ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒತ್ತಡ ನಿಯಂತ್ರಿಸಲು ಮಾಗೋಪಾಯಗಳು: ಕೆಲಸಕ್ಕೋಸ್ಕರ ನಡಿಗೆ ಅಥವಾ ಪ್ರತಿನಿತ್ಯ ಕೊನೆಯಪಕ್ಷ ಅರ್ಧಗಂಟೆಯಾದರೂ ವಾಕಿಂಗ್ ಇರಬೇಕು. ಕೆಲವರು ವಾಕಿಂಗ್​ಗೋಸ್ಕರ ಎಲೇವೇಟರ್ ಉಪಯೋಗಿಸುತ್ತಾರೆ. ಅದಕ್ಕಿಂತ ಬರಿಗಾಲಿನಲ್ಲಿ ನೆಲದ ಮೇಲೆ ನಡೆಯುವುದು ಹೆಚ್ಚು ಪರಿಣಾಮಕಾರಿ. ಸಾಮಾಜಿಕ ಚಟುವಟಿಕೆಗಳು ಮತ್ತು ವಿಶ್ರಾಂತಿ ನೀಡುವಂಥ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಯುವ ಸಮುದಾಯದವರು ಜಂಕ್​ಫುಡ್​ಗಳನ್ನು ಹೆಚ್ಚಾಗಿ ಸ್ವೀಕರಿಸುವುದನ್ನು ನೋಡುತ್ತೇವೆ. ಆದರೆ ಈ ವಿಷಯದಲ್ಲಿ ಅಧ್ಯಯನ ಮಾಡಿದವರು ಹೇಳುವ ಹಾಗೆ ನಾವು ಜಂಕ್​ಫುಡ್ ಸೇವಿಸುವುದರ ಬದಲು ಹಣ್ಣು, ಲಘು ಪ್ರಾಕೃತಿಕ ಆಹಾರ ಸೇವಿಸುವುದು ಒಳ್ಳೆಯದು. ಒತ್ತಡ ನಿಯಂತ್ರಣಕ್ಕೆ ಸರಿಯಾಗಿ ನಿದ್ದೆ ಮಾಡಬೇಕು. ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಬೇಕು. ‘ಬೇಗ ಮಲಗು, ಬೇಗ ಏಳು’ ಎಂಬ ನಮ್ಮ ಹಿರಿಯರ ಮಾತಿಗೆ ಪ್ರಾಶಸ್ತ್ಯ ನೀಡಬೇಕು. ಇಂದು ಉದ್ಯೋಗಿಗಳು ವಿಶೇಷವಾಗಿ ರಾತ್ರಿ ವಿಳಂಬವಾಗಿ ಮಲಗಿ, ಬೆಳಗ್ಗೆ ವಿಳಂಬವಾಗಿ ಏಳುತ್ತಾರೆ. ಆದರೆ ಒತ್ತಡ ನಿಯಂತ್ರಿಸುವ ಮತ್ತು ಆರೋಗ್ಯದ ದೃಷ್ಟಿಯಿಂದ ಬೇಗ ಮಲಗಿ ಬೇಗ ಏಳುವುದು ಒಳಿತು.

ಇಲ್ಲಿ ಇನ್ನೊಂದು ಮುಖ್ಯವಾದ ಪ್ರಶ್ನೆ ಉದ್ಭವವಾಗುತ್ತದೆ. ಹಾಗಾದರೆ ಜಪಾನ್ ದೇಶದಲ್ಲಿ ಎಲ್ಲರೂ ದೀರ್ಘಾಯುಷಿಗಳೇ? ಚೀನಾ, ಕೊರಿಯಾ ಜಪಾನ್ ದೇಶದಲ್ಲಿ ಎಲ್ಲರೂ ಆನಂದವಾಗಿದ್ದಾರೆಯೇ ಎಂದು ವಿಚಾರ ಮಾಡಬೇಕು. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ- ಜಪಾನೀಯರಿಗೆ ದುಡಿಮೆ ಗೊತ್ತು, ಸಾಂಸಾರಿಕವಾದ ಎಲ್ಲ ಬಾಂಧವ್ಯಗಳು ಗೊತ್ತು. ಆದರೆ ನಗುವುದು ಗೊತ್ತಿಲ್ಲ ಎಂಬ ಒಂದು ಮಾತಿದೆ. ಜಪಾನಿನಲ್ಲಿ ನಾನು ನೋಡಿದಾಗ ಈ ಅಂಶ ಸತ್ಯ ಎಂದೆನಿಸಿತು. ಯಾಕೆಂದರೆ ಅಲ್ಲಿ ರೈಲಿನಲ್ಲಿ ಪ್ರವಾಸ ಮಾಡುವಾಗ ಒಬ್ಬರು ಇನ್ನೊಬ್ಬರನ್ನು ನೋಡಿ ನಗಾಡುವುದು ಅಥವಾ ಮುಖದಲ್ಲಿ ಸ್ನೇಹಭಾವವನ್ನು ಹೊರಹಾಕುವುದು ಇದ್ಯಾವುದೂ ಇಲ್ಲ. ಎಲ್ಲರೂ ಅವರವರಷ್ಟಕ್ಕೆ ಮೊಬೈಲ್, ಲ್ಯಾಪ್​ಟಾಪ್ ನೋಡುತ್ತ ಸಂಚಾರ ಮಾಡುತ್ತಾರೆ. ಇದು ಯಾಕೆ ಹೀಗೆ ಎಂದು ಚಿಂತಿಸಿದರೆ, ಅವರು ಹೇಳುತ್ತಿದ್ದರು. ‘ಈಗಿನ ತಲೆಮಾರಿಗೆ ಸ್ವಾರ್ಥ ಬಂದುಬಿಟ್ಟಿದೆ. ತಾನು ತನ್ನದು ಮಾತ್ರ ಜೀವನ ಎಂಬ ಭಾವನೆ ಜಾಗೃತವಾಗಿ ಬಿಟ್ಟಿದೆ. ಹಾಗಾಗಿ ಅವರು ಹಿಂದಿನವರ ಹಾಗೆ ಎಲ್ಲರೊಂದಿಗೆ ಬೆರೆಯುವುದಿಲ್ಲ. ಎಲ್ಲಿಯವರೆಗೆ ಎಂದರೆ ಮದುವೆಗಳನ್ನು ಕೂಡ ಅವರು ಸಾರ್ವಜನಿಕವಾಗಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ’. ‘ಇಂತಹ ಜಪಾನಿಯರು ನಗಬೇಕು ಎಂಬುದಾಗಿ ಒಂದು ಹೊಸ ಯೋಜನೆ ಹಾಕಿದ್ದೇವೆ’ ಎಂದು ಅವರಲ್ಲೊಬ್ಬರು ಹೇಳಿದರು. ‘ಅದೇನೆಂದರೆ ಬಾಯಿಗೆ ಎಡ ಮತ್ತು ಬಲ ಬದಿಯ ತೋರುಬೆರಳನ್ನು ಹಾಕಿ ತುಟಿಯ ಬದಿಗಿಟ್ಟು ವಿಸ್ತಾರ ಮಾಡಿ ನಗುವ ಅಭ್ಯಾಸ ಮಾಡಿಸುತ್ತಿದ್ದೇವೆ. ಯಾಕೆಂದರೆ ಅವರಲ್ಲಿ ಮುಖದ ನಗುವ ಸ್ನಾಯುಗಳು ಎಷ್ಟು ಬಿಗುವಾಗಿವೆ ಎಂದರೆ ಅವರಿಗೆ ನಗುವುದೇ ಮರೆತುಹೋಗಿದೆ ಅಥವಾ ನಗಲಿಕ್ಕೆ ಆಗುವುದಿಲ್ಲ’. ನಾವು ಆಗ ಹೇಳಿದ್ದುಂಟು- ‘ಭಾರತೀಯರಾದ ನಮಗೆ ನಗುವುದನ್ನು ಹೇಳಿಕೊಡಬೇಕಾಗಿಲ್ಲ, ಆದರೆ ನಗು ನಿಲ್ಲಿಸುವುದು ಹೇಗೆ ಎಂದು ಹೇಳಿಕೊಡಬೇಕು’. ಹಾಗಾಗಿ ದೀರ್ಘಾಯುಷ್ಯದ ಗುಟ್ಟು ನೆಮ್ಮದಿ, ಸಂತೋಷ. ಅದರ ಜೊತೆಗೆ ಎಲ್ಲವನ್ನೂ ಹಿತಮಿತವಾಗಿ ಬಳಸಿ ಸಹನೆಯಿಂದ, ತಾಳ್ಮೆಯಿಂದ ಸರಿಯಾಗಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬದುಕನ್ನು ಪ್ರೀತಿಸುವುದು ಎಲ್ಲರ ಉದ್ದೇಶವಾಗಬೇಕು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)