ವಿದ್ವಾಂಸರಿಗೆ ಗೌರವ, ಪ್ರಶಸ್ತಿ, ಪ್ರಚಾರ ಹಾಗೂ ಪ್ರವಾಸದಿಂದ ದೊರಕಿದಷ್ಟು ನೆಮ್ಮದಿಯ ಸಂಪತ್ತು ಅವರ ವೈಯಕ್ತಿಕ ಜೀವನದಲ್ಲಿ ಇರಲಿಲ್ಲವೆಂದೇ ಹೇಳಬೇಕು. ಸಾಮಾನ್ಯವಾಗಿ ಹಳೆಯ ಕಾಲದ ಯಾವುದೇ ಕವಿಯ ಚರಿತ್ರೆಯನ್ನು ನೋಡಿದರೂ ಆತ ಬಾಲ್ಯದ ಬಡತನದಿಂದ ಬೆಂದು ಶ್ರೇಷ್ಠ ಸಾಹಿತಿ ಆದದ್ದನ್ನು ಕಾಣುತ್ತೇವೆ. ಇದೊಂದು ಅಧ್ಯಯನಯೋಗ್ಯ ವಿಷಯ ಮತ್ತು ಈ ರೀತಿಯ ಅಧ್ಯಯನ ಯುವಜನತೆಗೆ ಮಾರ್ಗದರ್ಶನವನ್ನು, ಕಷ್ಟವನ್ನು ಎದುರಿಸಿಯೂ ನಾವು ವಿಶೇಷ ಸಾಧನೆಯನ್ನು ಹೇಗೆ ಮಾಡಬೇಕೆಂಬ ಸ್ಪೂರ್ತಿಯನ್ನು ನೀಡಬಹುದು. ಆದ್ದರಿಂದ ಯಾರಾದರೂ ಸಂಶೋಧನೆ ಮಾಡುವ ವಿದ್ಯಾರ್ಥಿಗಳು ‘ಶ್ರೇಷ್ಠ ಸಾಹಿತಿಗಳು ತಮ್ಮ ಜೀವಿತಾವಧಿಯಲ್ಲಿ ಪಟ್ಟ ಬವಣೆ’ ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸುವುದು ಒಳ್ಳೆಯದು.
ಅಕ್ಬರನ ಆಸ್ಥಾನದಲ್ಲಿ ವಿಕಟಕವಿ ಬೀರಬಲ್ ತುಂಬ ಪ್ರಸಿದ್ಧನಾದವನು. ಎಂತಹ ಸಮಯದಲ್ಲಿಯೂ ತನ್ನ ಬುದ್ಧಿಮತ್ತೆಯಿಂದ ರಾಜನಿಗೆ ಆನಂದವನ್ನು ನೀಡುವಂತಹ ನಿರ್ಣಯ ಕೊಡುತ್ತಿದ್ದ, ಸಮಸ್ಯೆ ಪರಿಹರಿಸುತ್ತಿದ್ದ. ಅವನಿಗೆ ಅಕ್ಬರನ ಆಸ್ಥಾನದಲ್ಲಿ ಆತ್ಮೀಯತೆ, ಘನತೆ ದೊರಕುತ್ತಿತ್ತು. ಆದರೆ ಚಕ್ರವರ್ತಿ ಆತನಿಗೆ ಇನಾಮು ಕೊಡುತ್ತಿದ್ದನೇ? ಎಂಬ ಮಾಹಿತಿ ಎಲ್ಲೂ ಸಿಕ್ಕುವುದಿಲ್ಲ. ಬೀರಬಲ್ಲನ ಚರಿತ್ರೆಯನ್ನು ಓದಿದಾಗ ಆತ ಸಾಂಸಾರಿಕವಾಗಿ ತುಂಬ ಬಡವನಾಗಿದ್ದ. ತನ್ನ ಬುದಿಟಛಿಬಲದಿಂದಲೇ ಬಡತನದಿಂದ ಮೇಲೆದ್ದು ಬಂದ. ಹೆಮ್ಮೆಯ ಕವಿ ಕಾಳಿದಾಸ ಕುರಿಗಾಹಿಯಾಗಿ ಬಡತನದಲ್ಲಿ ಬದುಕುತ್ತಿದ್ದ. ರಾಜಕುಮಾರಿಯನ್ನು ವಿವಾಹವಾದ ಬಳಿಕ ಹೆಂಡತಿಯ ತಾತ್ಸಾರ, ಮೂದಲಿಕೆ ಮತ್ತು ಕೊಂಕುನುಡಿಗೆ ಬೇಸತ್ತು ಕಾಳಿಯ ವರವನ್ನು ಪಡೆದು ನಂತರ ಆತ ಶ್ರೇಷ್ಠಕವಿ ಎನಿಸಿದ. ಕಾಳಿದಾಸನ ಜೀವನದಲ್ಲಿ ಬರುವಂಥ ಒಂದು ಘಟನೆ ಮನೋಜ್ಞವಾಗಿದೆ.
ಯಾವುದೋ ಕಾರಣಕ್ಕಾಗಿ ಭೋಜರಾಜನು ಆಸ್ಥಾನ ಕವಿಯಾಗಿದ್ದ ಕಾಳಿದಾಸನನ್ನು ರಾಜ್ಯದಿಂದ ಹೊರಹಾಕಿದ. ಆ ಬಳಿಕ ಪಶ್ಚಾತ್ತಾಪ ಪಟ್ಟ ರಾಜ ಕಾಳಿದಾಸನನ್ನು ಹುಡುಕಿದ. ಆತನನ್ನು ಗುರುತಿಸಲು, ‘ಒಂದು ಶ್ಲೋಕದ ಮುಕ್ತಾಯವನ್ನು ಯಾರು ಮಾಡುತ್ತಾರೋ, ಅವರಿಗೆ ಅರ್ಧರಾಜ್ಯವನ್ನೇ ಕೊಡುವುದಾಗಿ’ ಘೊಷಿಸಿದ. ಇದೇ ಸಂದರ್ಭದಲ್ಲಿ ಕಾಳಿದಾಸ ವೇಶ್ಯೆಯ ಮನೆಗೆ ಹೋಗಿದ್ದ. ಆ ವೇಶ್ಯೆ ಅರ್ಧರಾಜ್ಯವನ್ನು ಪಡೆಯಬೇಕೆಂಬ ಬಯಕೆಯಿಂದ ಕಾಳಿದಾಸನಲ್ಲಿ ಈ ಸಮಸ್ಯೆ ಪರಿಹರಿಸುವಂತೆ ಕೇಳಿದಳು. ಅದಕ್ಕೆ ಕಾಳಿದಾಸ ಸೂಕ್ತ ಉತ್ತರ ನೀಡಿದ. ಆ ಸಮಸ್ಯೆ ಹೀಗೆ ಇತ್ತು-ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ| (ಕಮಲದಲ್ಲಿ ಕಮಲ ಹುಟ್ಟುತ್ತದೆ ಎಂಬುದನ್ನು ಕೇಳಿದ್ದೇವೆ ಆದರೆ ನೋಡಲಿಲ್ಲ). ಉತ್ತರವನ್ನು ಕಾಳಿದಾಸನಿಂದ ಪಡೆದು, ಅದನ್ನು ರಾಜನಿಗೆ ಕೊಟ್ಟಳು. ಸಂಶಯಗೊಂಡ ರಾಜನು- ‘ಕಾಳಿದಾಸನಲ್ಲದೆ ಬೇರೆ ಯಾರಿಂದಲೂ ಈ ರೀತಿಯ ಉತ್ತರವನ್ನು ನೀಡಲು ಸಾಧ್ಯವಿಲ್ಲ’ ಎಂಬುದಾಗಿ ಹೇಳಿ ಅವಳ ಮುಖಾಂತರ ಕಾಳಿದಾಸನನ್ನು ಹುಡುಕಿಸಿದ. ಕಾಳಿದಾಸ ನೀಡಿದ ಉತ್ತರ-‘ಬಾಲೇ ತವ ಮುಖಾಂಭೋಜೇ ದೃಷ್ಟಮಿಂದೀವರದ್ವಯಮ್ (ಹೇ ಬಾಲೆ! ನಿನ್ನ ಮುಖವೆಂಬ ಕಮಲದಲ್ಲಿ ಕಣ್ಣೆಂಬ ಎರಡು ಕಮಲಗಳು ಅರಳಿವೆ). ಈ ಉತ್ತರದಿಂದ ಸಂತೋಷಗೊಂಡ ಭೋಜರಾಜ ಕಾಳಿದಾಸನನ್ನು ತನ್ನ ರಾಜ್ಯಕ್ಕೆ ಪುನಃ ಕರೆಸಿಕೊಂಡ. ಈ ಘಟನೆ ಹೇಳುವ ಉದ್ದೇಶ ಇಷ್ಟೇ.
ವೈಯಕ್ತಿಕ ಜೀವನದಲ್ಲಿ ಕಾಳಿದಾಸನಂಥ ಶ್ರೇಷ್ಠ ಕವಿ ಕೂಡ ಅರ್ಥದಾರಿದ್ರ್ಯದಿಂದ ಬಳಲಿದ್ದ. ಹಳಗನ್ನಡ ಸಾಹಿತ್ಯದಲ್ಲಿ ಪ್ರಸಿದ್ಧವಾದ, ಮೇರು ಕೃತಿಗಳನ್ನು ರಚಿಸಿದ ಪಂಪ, ರನ್ನ, ರತ್ನಾಕರವರ್ಣಿ ಮೊದಲಾದಂತಹ ಕವಿಗಳು ಆರ್ಥಿಕವಾಗಿ ಶ್ರೀಮಂತರಾಗಿರಲಿಲ್ಲ. ವೈಯಕ್ತಿಕವಾದ ಸಾಂಸಾರಿಕ ಜೀವನದಲ್ಲಿ ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿ, ಇದೆಲ್ಲದರ ಫಲವಾಗಿ ಅವರು ಶ್ರೇಷ್ಠ ಕೃತಿಗಳನ್ನು ನಮಗೆ ಒದಗಿಸಿಕೊಟ್ಟಿದ್ದಾರೆ.
ಅದೇ ರೀತಿಯಾಗಿ ಮೂಡಬಿದರೆ-ಕಾರ್ಕಳದಲ್ಲಿ ಜನಿಸಿ ಪ್ರಸಿದ್ಧನಾದವನು ರತ್ನಾಕರವರ್ಣಿ. ಆತನು ಆರ್ಥಿಕ ಸಂಕಷ್ಟ ಅನುಭವಿಸಿದ. ಆತ ಜೈನ ಧರ್ಮವನ್ನು ತೊರೆದು ಶೈವ ಮತವನ್ನು ಸ್ವೀಕರಿಸಿ ಮತ್ತೆ ಜೀವನದ ಕೊನೆಯ ಕಾಲದಲ್ಲಿ ಜ್ಞಾನೋದಯವಾಗಿ ಜೈನಮತಕ್ಕೆ ಹಿಂತಿರುಗಿದ. ಅಂದರೆ ಜೀವಿತಾವಧಿಯಲ್ಲಿ, ಸಮಾಜದಲ್ಲಿ ಆತನಿಗೆ ಗೌರವ ಸಿಕ್ಕಿರಲಿಲ್ಲ. ಅಲ್ಲದೆ ಆರ್ಥಿಕ ಭದ್ರತೆ ಇರಲಿಲ್ಲ. ಈ ದೃಷ್ಟಿಯಿಂದ ಆಲೋಚನೆ ಮಾಡಿದರೆ ನಮ್ಮ ಶ್ರೇಷ್ಠ ಕವಿಗಳು ಕಾವ್ಯವನ್ನು ರಚಿಸಿ ಕಾಲಕ್ರಮೇಣ ಪ್ರಸಿದ್ಧಿ ಪಡೆದರು. ಇವತ್ತು ನಾವು ಅವರನ್ನು ಶ್ರೇಷ್ಠ ಕವಿಗಳು ಎಂಬುದಾಗಿ ಗುರುತಿಸಿ ಗೌರವಿಸುತ್ತೇವೆ. ಆದರೆ ಅದರ ಹಿಂದಿರುವ ಬವಣೆಯ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ. ಮಾಸ್ತಿ ಕನ್ನಡದ ಆಸ್ತಿ ಎಂಬ ಮಾತು ಪ್ರಸಿದ್ಧ. ಅವರೊಮ್ಮೆ ಮೈಸೂರು ಮಹಾರಾಜರನ್ನು ಭೇಟಿಯಾದಾಗಿನ ಮಾತು ಹೀಗಿದೆ.
ಮಾಸ್ತಿ: ‘ನನಗೆ ದೊಡ್ಡ ಗೌರವ ದೊರಕಿದಂತಾಗಿದೆ ಮಹಾಸ್ವಾಮಿ, ನನ್ನ ಕೃತಿಗಳ ಬಗ್ಗೆ ತುಂಬ ಗೌರವ ತಾಳಿದ್ದೀರಿ’.
ಮಹಾರಾಜರು: ‘ಯಾಕೆ ಹಾಗೆನ್ನುತ್ತೀರಿ? ಇನ್ನೂ ನೂರಾರು ವರ್ಷಗಳಾದ ಮೇಲೆ ನಾನು ಮತ್ತು ನನ್ನಂಥವರೆಲ್ಲ ಮರೆತು ಹೋಗಿರುತ್ತೇವೆ. ನೀವು ಮತ್ತು ನಿಮ್ಮ ಕೃತಿಗಳು ಜನರ ನೆನಪಿನಲ್ಲಿ ಇರುತ್ತವೆ’. ಸಾಹಿತ್ಯಪ್ರೇಮಿ, ಸಂಸ್ಕೃತಿವಾಹಕ ಸಾಮ್ರಾಟರು ಮಾತ್ರ ಆಡಬಹುದಾದ ಮಾತಿದು. ಇದು ನಿಜವಾದ ಸಾಹಿತ್ಯದ ಮೌಲ್ಯ. (ಆಧಾರ-ತರಂಗ) ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಜನಿಸಿದ ನಂದಳಿಕೆ ಲಕ್ಷ್ಮೀನಾರಾಯಣಯ್ಯ ಮುದ್ದಣ ಕವಿಯೆಂದೇ ಕನ್ನಡ ಕಾವ್ಯಪ್ರಪಂಚದಲ್ಲಿ ಪ್ರಸಿದ್ಧರು. ಹೊಸಗನ್ನಡ ಕಾವ್ಯಕ್ಕೆ ನಾಂದಿ ಹಾಡಿದ ಮುದ್ದಣ ‘ರಾಮಾಶ್ವಮೇಧಮ್ ಎಂಬ ಪ್ರಸಿದ್ಧ ಕಾವ್ಯ ರಚಿಸಿದ್ದಾನೆ. ಮುದ್ದಣ ಕವಿಯೂ ಕಡುಬಡತನದ ನೋವನ್ನು ಉಂಡವನು. ಕೊನೆಗೆ ಅನಾರೋಗ್ಯದಿಂದ ಎಳವೆಯಲ್ಲಿಯೇ ಇಹಲೋಕ ತ್ಯಜಿಸಿದ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಅಂಬಿಕಾತನಯದತ್ತ) ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಸಾಧಕರು, ಕವಿಗಳು. ಅವರು ಜೀವನದಲ್ಲಿ ಅನುಭವಿಸಿದ ಕಷ್ಟವನ್ನು ಅನೇಕರು ನೋಡಿದ್ದಾರೆ ಮತ್ತು ಬರೆದಿದ್ದಾರೆ.
ಅವರೇ ಹೇಳುತ್ತಿದ್ದಂತೆ-‘ಬೆಂದ್ರೆ ಬೇಂದ್ರೆ ಆಗುತ್ತಾನೆ’ ಎಂಬ ಮಾತು ದಿಟವಾದದ್ದು. ಜಿ.ಪಿ ರಾಜರತ್ನಂ ಶ್ರೇಷ್ಠ ಸಾಹಿತಿಗಳು ಮತ್ತು ಉತ್ತಮ ಉಪನ್ಯಾಸಕರು. ಒಮ್ಮೆ ಅವರನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದ ಉಪನ್ಯಾಸಕ್ಕೆ ಆಮಂತ್ರಿಸಿದೆವು. ಅವರು ನಮ್ಮ ಆಮಂತ್ರಣ ಸ್ವೀಕರಿಸುವ ಪೂರ್ವದಲ್ಲಿ ತಾನು ಬರೆದ ಕೆಲವು ಕೃತಿಗಳನ್ನು ಕ್ಷೇತ್ರದವರು ಕೊಂಡುಕೊಳ್ಳಬೇಕು ಎಂಬ ಬೇಡಿಕೆ ಮುಂದಿಟ್ಟರು. ರಾಜರತ್ನಂ ಅಪೇಕ್ಷೆಯಂತೆ ಅವರ ಪುಸ್ತಕವನ್ನು ಖರೀದಿಸಿ, ಸಮ್ಮೇಳನಕ್ಕೆ ಆಹ್ವಾನಿಸಿದೆವು. ರಾಜರತ್ನಂ ಅವರದ್ದು ಸರಳ ಸ್ವಭಾವ, ಗಂಭೀರ ವ್ಯಕ್ತಿತ್ವ. ಅವರು ಆ ಬಳಿಕ ನಮಗೆ ಆತ್ಮೀಯರಾದರು. ಅದಾಗಲೇ ಜೀವನದಲ್ಲಿ ಹಲವು ಕಷ್ಟಗಳನ್ನು ಅನುಭವಿಸಿದ್ದರು. ಆ ಕಾಲದಲ್ಲಿ ಸಾಹಿತಿಗಳಿಗೆ ಆರ್ಥಿಕ ಅನುಕೂಲ ಅಷ್ಟಾಗಿ ಇಲ್ಲದೇ ಇದ್ದುದರಿಂದ ಅವರು ಬಸ್ಸಿನಲ್ಲಿ, ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರಾಜರತ್ನಂ ಹೀಗೆ ಸರ್ಕಾರಿ ಬಸ್ಸಿನಲ್ಲಿಯೇ ಸಂಚರಿಸಿದರೂ, ಸ್ವಾಭಿಮಾನವನ್ನು ಬದುಕಿನುದ್ದಕ್ಕೂ ಉಳಿಸಿಕೊಂಡವರು. ರಾಜರತ್ನಂ ನಿರಂತರವಾಗಿ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಒಮ್ಮೆ ಅವರನ್ನು ಪ್ರಶ್ನಿಸಿದ್ದೆ- ‘ಹೀಗೆ ನಿರಂತರವಾಗಿ ಲೇಖನ ಬರೆಯಲು ನಿಮಗೆ ವಿಷಯಸಂಗ್ರಹ ಹೇಗೆ ದೊರಕುತ್ತದೆ?’ ಎಂದು. ಅದಕ್ಕವರು, ‘ನಾನು ಬಸ್ಸಿನಲ್ಲಿ ಸಂಚರಿಸುವಾಗ ಕಿಟಕಿಯ ಹೊರಗಿನದ್ದನ್ನು ಹಾಗೂ ಕಾಲ್ನಡಿಗೆಯಲ್ಲಿ ಸಂಚರಿಸುವಾಗ ಸಮಾಜವನ್ನು ಅವಲೋಕನ ಮಾಡುತ್ತೇನೆ. ಸಮಾಜದಲ್ಲಿರುವ ಬಡತನ, ಅಜ್ಞಾನ ಇವುಗಳನ್ನು ಪ್ರತ್ಯಕ್ಷ ಕಂಡಿದ್ದೇನೆ. ಆದ್ದರಿಂದ ಇಂತಹ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಲೇಖನ ಬರೆಯುತ್ತಿದ್ದೇನೆ’ ಎಂದಿದ್ದರು.
ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ಪ್ರಪಂಚದ ಮುಂದೆ ತೆರೆದಿಟ್ಟ ಸ್ವಾಮಿ ವಿವೇಕಾನಂದರ ಬದುಕಿನ ಸಾಧನೆಯ ಜೊತೆಗೆ ಅವರ ಜೀವನದ ಬವಣೆಯನ್ನು ಅನೇಕರು ಅರಿತಿಲ್ಲ. ಅಮೆರಿಕ ಪ್ರವಾಸದಲ್ಲಿದ್ದಾಗ ಸ್ವಾಮಿ ವಿವೇಕಾನಂದರಿಗೆ ಉಟ್ಟುಕೊಳ್ಳಲು ಸರಿಯಾದ ಬಟ್ಟೆ ಇರಲಿಲ್ಲ. ವಿಶೇಷವಾಗಿ ಚಳಿಗಾಲದಲ್ಲಿ ಅವರಿಗೆ ತುಂಬ ಕಷ್ಟವಾಯಿತು. ಎಷ್ಟು ಕಷ್ಟ ಎಂದರೆ ಆ ಚಳಿಗೆ ಬದುಕುವುದೇ ಸಾಧ್ಯವಿಲ್ಲ ಎಂಬುದಾಗಿ ಅವರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಅಳಸಿಂಗರಿಗೆ ಅವರು ಬರೆದ ಪತ್ರದಲ್ಲಿ-‘ನಾನು ನಿಜವಾಗಿಯೂ ಇಲ್ಲಿ ಉಳಿದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ನೀವು ಕೊಟ್ಟ 150 ಪೌಂಡ್ ತೆಗೆದುಕೊಂಡು ಇಲ್ಲಿಗೆ ಬಂದಿದ್ದೇನೆ. ಇಲ್ಲಿ ನನಗೆ ದಿನಕ್ಕೆ ಒಂದು ಪೌಂಡ್ ಖರ್ಚಿಗೆ ಬೇಕಾಗುತ್ತದೆ. ಅಷ್ಟು ಸರಳ ಜೀವನವನ್ನು ನಾನು ನಡೆಸುತ್ತಿದ್ದೇನೆ. ಮೊನ್ನೆ ರೈಲಿನಲ್ಲಿ ಸಂಚರಿಸುವಾಗ ಒಬ್ಬ ವೃದ್ಧೆ ನನ್ನನ್ನು ಕಂಡು ತನ್ನ ಹಳ್ಳಿಗೆ ಬರಬೇಕೆಂದು ಆಮಂತ್ರಿಸಿದಳು. ಕೆಲವು ದಿನಗಳು ಆಕೆಯ ಆಶ್ರಯದಲ್ಲಿ ಕಳೆಯಿತು. ಬಳಿಕ ಹಲವು ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸಿದ್ದಾರೆ. ಆದರೆ ಅಲ್ಲಿ ಹೋಗಬೇಕೆಂದರೆ ಉಡುವುದಕ್ಕೆ ಸರಿಯಾದಂತಹ ಬಟ್ಟೆ ನನ್ನಲ್ಲಿ ಇಲ್ಲ. ಸರಿಯಾದ ವೇಷಭೂಷಣಗಳು ಇದ್ದರೇನೇ ಅಮೆರಿಕದಂಥ ದೇಶದಲ್ಲಿ ಗೌರವ ದೊರಕುವುದು. ಆದರೆ ಉತ್ತಮ ವಸ್ತ್ರ ಧರಿಸುವುದಕ್ಕೆ ಬೇಕಾದ ಹಣ ನನ್ನಲ್ಲಿ ಇಲ್ಲದೆ ತಾಪತ್ರಯವಾಗಿದೆ’.
ಆದರೆ ಸ್ವಾಮಿ ವಿವೇಕಾನಂದರ ಉದ್ದೇಶ ಸ್ಪಷ್ಟ- ‘ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಹಿಂದೂಧರ್ಮದ ಬಗ್ಗೆ ವಿದೇಶಗಳಲ್ಲಿ ಗೌರವವನ್ನು ಮೂಡಿಸುವಂಥ ಕೆಲಸವನ್ನು ನಾನು ಮಾಡಬೇಕು’ ಎಂಬುದವರ ಧ್ಯೇಯವಾಗಿತ್ತು. ಸ್ವಾಮಿ ವಿವೇಕಾನಂದರಂಥ ಘನವಾದ ವ್ಯಕ್ತಿತ್ವವುಳ್ಳವರು ಕಾಲವಾದ ನಂತರವೇ ಜನರು ಅವರ ಸೇವೆಯನ್ನು ಗುರುತಿಸಿ ಪ್ರಶಂಸಿಸಿದ್ದಾರೆ.
ನಾನು ಕ್ಷೇತ್ರದಲ್ಲಿ ನಿತ್ಯವೂ ಸಾಹಿತ್ಯ ಕೃತಿಗಳನ್ನು ಅಂಚೆ ಮೂಲಕ ಮತ್ತು ವೈಯಕ್ತಿಕವಾಗಿ ಪಡೆಯುತ್ತೇನೆ. ಧಾರ್ವಿುಕ ಸಾಹಿತ್ಯಕ್ಕೆ ಆಳವಾದ ಜ್ಞಾನ, ಸಂಶೋಧನೆ ಮತ್ತು ಬರವಣಿಗೆಯ ಶೈಲಿ ಮುಖ್ಯವಾಗುತ್ತದೆ. ಮಂಗಳೂರಿನಲ್ಲಿರುವ ವಿದ್ವಾನ್ ಬಂದಗದ್ದೆ ನಾಗರಾಜರು ಬಡತನವನ್ನೇ ಉಂಡು ಬೆಳೆದವರು. ನಮ್ಮ ಸಮಕಾಲೀನರು. ಅವರು ಕನ್ನಡದಲ್ಲಿ ಶ್ರೀ ಮದ್ವಿಷ್ಣುಪುರಾಣಮ್ (6500 ಭಾಮಿನೀ ಷಟ್ಪದಿಗಳು), ಶ್ರೀಮದ್ ಗಣೇಶ ಪುರಾಣಮ್ (7400 ವಾರ್ಧಕ ಷಟ್ಪದಿಗಳು), ಕರ್ನಾಟಕ ಶ್ರೀಮದ್ ಭುವನೇಶ್ವರೀ ಕಥಾಮಂಜರಿ (10500 ಭಾಮಿನೀ ಷಟ್ಪದಿ), ಶ್ರೀಮದಾತ್ಮಲಿಂಗವೈಭವಮ್ (6800ಕ್ಕೂ ಮಿಕ್ಕಿ ಪದ್ಯಗಳು), ಶ್ರೀಮದಾದಿತ್ಯ ದರ್ಶನಮ್ (ಪ್ರಗತಿಯಲ್ಲಿದೆ, ಸುಮಾರು 8 ಸಂಪುಟಗಳಲ್ಲಿ) ರಚನೆ ಮಾಡಿದ್ದಾರೆ. ಅವರ ಪರಿಶ್ರಮವು ಜ್ಞಾನಪೀಠ ಪ್ರಶಸ್ತಿಗೆ ಅರ್ಹವಾಗಿದೆ.
ಸರ್ಕಾರ ವಿವಿಧ ಇಲಾಖೆಗಳ ಮೂಲಕ ಸಾಹಿತಿಗಳಿಗೆ ನೆರವಾಗುತ್ತಿದೆ. ಆಂಗ್ಲ ಇಲ್ಲವೆ ಇತರ ವಿದೇಶಿ ಭಾಷೆಗಳ ಸಾಹಿತಿಗಳು ಪುಸ್ತಕ ಪ್ರಕಾಶನದ ಮೂಲಕ ಅಪಾರ ಗೌರವಧನ ಗಳಿಸಿದ ಮಾಹಿತಿಗಳು ನಮ್ಮ ಮುಂದೆ ಇವೆ. ಬಡತನದಿಂದ ಕುಗ್ಗಿದ ಬ್ರಿಟಿಷ್ ಮಹಿಳೆ ಜೆ.ಕೆ.ರೋಲಿಂಗ್ ಬರೆದ ‘ಹ್ಯಾರಿಪಾಟರ್’ ವಿಶ್ವವಿಖ್ಯಾತವಾಯಿತು. ಅವಳ ಪುಸ್ತಕವನ್ನು ಪ್ರಕಟಿಸುವುದಿಲ್ಲವೆಂದು ಪ್ರಕಾಶಕರು 12 ಬಾರಿ ತಿರಸ್ಕರಿಸಿದ್ದರು. ಆ ಬಳಿಕ ಪ್ರಕಟವಾಗಿ ಅವಳು ಗಳಿಸಿದ ಸಂಪತ್ತು ಮತ್ತು ಮಾಡಿದ ದಾನ ಫೋರ್ಬ್ಸ್ ಸಂಸ್ಥೆಯಲ್ಲಿ ದಾಖಲೆಯಾಯಿತು. ನಮ್ಮ ಭಾರತೀಯ ಪ್ರಕಾಶಕರು ಮತ್ತು ಸರ್ಕಾರ ಸಮಕಾಲೀನ ಸಾಹಿತಿಗಳಿಗೆ ಆರ್ಥಿಕ ನೆರವು ಮತ್ತು ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಿ ಗುರುತಿಸಬೇಕಾಗಿದೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)