ಅಂಕಣ

ಪ್ರಕೃತಿ ಸಂಪತ್ತು ರಕ್ಷಿಸುವ ಹೊಣೆ ನಮ್ಮೆಲ್ಲರದು..

Webdesk - Ravikanth
ಆಹಾರ ಹುಡುಕಿಕೊಂಡು ನಾಡಿನತ್ತ ಬರುವ ಪ್ರಾಣಿಗಳನ್ನು ಕೊಲ್ಲುವುದು ಪರಿಸರಕ್ಕೆ ಮಾಡುವ ಅತಿ ದೊಡ್ಡ ಹಾನಿ. ಅವುಗಳಿಗೆ ಕಾಡಿನಲ್ಲೇ ಆಹಾರ ದೊರೆಯುವಂತೆ ಮಾಡಿದರೆ ನಾಡಿಗೆ ಬರಲಾರವು. ಈ ನಿಟ್ಟಿನಲ್ಲಿ ಯೋಜನೆ-ಯೋಚನೆ ಬೇಕು.

ಕೆಲವು ವರುಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಒಬ್ಬರು ಹಿರಿಯ ಸಾಹಿತಿ ಹೇಳಿದ್ದರು- ‘ನಾವು ಬದುಕುತ್ತಿರುವುದು ನಮ್ಮ ಹಿರಿಯರು ಕೊಟ್ಟ ಭೂಮಿಯಲ್ಲಿ ಅಲ್ಲ, ಬದಲಾಗಿ ನಮ್ಮ ಮೊಮ್ಮಕ್ಕಳು ಕೊಟ್ಟ ಭೂಮಿಯಲ್ಲಿ. ಅಂದರೆ ನಮ್ಮ ತಾತ, ಮುತ್ತಾತ ಸಂಪಾದನೆ ಮಾಡಿದ ಆಸ್ತಿಯಲ್ಲಿ ನಾವು ಬದುಕುತ್ತಿಲ್ಲ. ನಾವು ಈ ಭೂಮಿಯನ್ನು ಸುರಕ್ಷಿತವಾಗಿ ಇಟ್ಟು, ರಕ್ಷಣೆ ಮಾಡಿ ಮುಂದಿನ ಜನಾಂಗಕ್ಕೆ ಕೊಡಬೇಕು. ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕೊಡಬೇಕು.’ ನನ್ನ ಮನಸ್ಸಿನಲ್ಲಿ ಆ ಮಾತು ಅಚ್ಚೊತ್ತಿದೆ. ಒಂದು ಗಿಡ, ಮರ ಅಥವಾ ಹಣ್ಣಿನ ಗಿಡ ನೋಡಿದರೆ ಇದು ನಮ್ಮದಲ್ಲ, ಮುಂದಿನ ಜನಾಂಗಕ್ಕೆ ಬಿಟ್ಟುಕೊಟ್ಟು ಹೋಗುವಂತಹದ್ದು, ಇದರ ರಕ್ಷಣೆಯ ಹೊಣೆ ನಮ್ಮದು ಎಂದು ಅನಿಸುತ್ತದೆ. ಪರಿಸರ ರಕ್ಷಣೆ ನಮ್ಮ ಕರ್ತವ್ಯವಾಗಬೇಕು. ಪ್ರಕೃತಿಗೆ ಮಾನವರ ಅಗತ್ಯವಿಲ್ಲ, ಆದರೆ ಪ್ರಕೃತಿಯಿಲ್ಲದೆ ಮಾನವ ಜನಾಂಗ ಇರಲು ಸಾಧ್ಯವಿಲ್ಲ.

ಹಿಂದೆ ಅರಣ್ಯ ರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾಗ ವನಮಹೋತ್ಸವ ಕಾರ್ಯಕ್ರಮ ಮಾಡುತ್ತಿದ್ದೆವು. ಬಳಿಕ ಬೀಜದುಂಡೆ ತಯಾರಿ ಮಾಡಿ ಅವುಗಳನ್ನು ಕಾಡುಗಳಲ್ಲಿ ಬಿತ್ತುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು. ಈಗ ವಿನೂತನವಾದ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯೊಂದಿಗೆ ಹಮ್ಮಿಕೊಂಡಿದ್ದೇವೆ - ಬಿತ್ತೋತ್ಸವ ಕಾರ್ಯಕ್ರಮ. ಅಂದರೆ ಬೀಜಗಳನ್ನು ಬಿತ್ತಿ ಅದನ್ನು ಬೆಳೆಸುವುದು.

ಒಮ್ಮೆ ರಾಜನೊಬ್ಬ ಸವಾರಿ ಹೋಗುತ್ತಿದ್ದಾಗ, ಹಳ್ಳಿಯಲ್ಲಿ ಒಬ್ಬ ಮುದುಕ ಹಣ್ಣಿನ ಗಿಡ ನೆಡುತ್ತಿದ್ದನಂತೆ. ರಾಜನಿಗೆ ಇದು ತಮಾಷೆಯೆನಿಸಿ ‘ಏನು ಅಜ್ಜ, ಯಾವ ಗಿಡ ನೆಡುತ್ತಿರುವುದು?’ ಎಂದು ಕೇಳುತ್ತಾನೆ. ಆಗ ಅಜ್ಜ ‘ಮಾವಿನ ಗಿಡ ನೆಡುತ್ತಿದ್ದೇನೆ ಸ್ವಾಮಿ’ ಅನ್ನುತ್ತಾನೆ. ಆಗ ರಾಜ ‘ನಿನಗೆ ವಯಸ್ಸಾಗಿದೆ. ಆಯುಷ್ಯ ಮುಗಿಯುತ್ತ ಇವತ್ತೋ ನಾಳೆಯೋ ಎಂಬಂತಿದೆ. ಈಗ ಗಿಡ ನೆಟ್ಟು, ಅದು ಬೆಳೆದು ಹಣ್ಣನ್ನು ತಿನ್ನಲು ನೀನು ಬದುಕಿರುವೆ ಎಂದುಕೊಂಡಿದ್ದೀಯಾ? ಆ ಹಣ್ಣನ್ನು ತಿನ್ನುವ ಆಸೆಯೇ ನಿನಗೆ, ಎಲ್ಲೋ ಮುದಿ ಹುಚ್ಚು’ ಎಂದು ರಾಜ ಹಾಸ್ಯ ಮಾಡಿದ. ಆಗ ಆ ಮುದುಕ ‘ಸ್ವಾಮಿ ನಾನು ಈಗ ತಿನ್ನುತ್ತಿರುವುದು ನನ್ನ ಅಜ್ಜ ನೆಟ್ಟ ಮಾವಿನ ಮರದ ಹಣ್ಣನ್ನು, ನಾನು ಗಿಡ ನೆಡುತ್ತಿರುವುದು ನನಗಾಗಿ ಅಲ್ಲ, ನನ್ನ ಮಕ್ಕಳು, ಮೊಮ್ಮಕ್ಕಳ ಸಲುವಾಗಿ, ಅವರ ಬಾಯಿಯನ್ನು ಸಿಹಿ ಮಾಡುವುದಕ್ಕಾಗಿ’ ಎಂದ. ರಾಜನಿಗೆ ಜ್ಞಾನೋದಯ ವಾಯಿತು. ನಾವು ನಮ್ಮ ಹಿರಿಯರು ಬಿಟ್ಟು ಹೋದ ಪ್ರಕೃತಿಯೊಂದಿಗೆ ಬದುಕುತ್ತಿದ್ದೇವೆ. ಹಾಗಾಗಿ ಪ್ರಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕೊಡಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಪ್ರವಾಹ, ಪ್ರಕೃತಿ ವಿಕೋಪಗಳು ಹೆಚ್ಚಾಗಿ ಸಂಭವಿಸುತ್ತಿವೆ. ಕೇರಳ, ಮಡಿಕೇರಿ ಕಡೆಗಳಲ್ಲಿ ಮಳೆಯಿಂದ ಕಳೆದ 23 ವರ್ಷಗಳಿಂದ ಸತತವಾಗಿ ಹಾನಿಯಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ಅರಣ್ಯ ನಾಶ. ಇದರಿಂದಾಗಿ ಮಣ್ಣು ಸವಕಳಿ ಆಗುತ್ತಿದೆ. ಸಡಿಲವಾಗುತ್ತಿದೆ.

ಇನ್ನೊಂದು ಮುಖ್ಯವಾದ ವಿಚಾರವೆಂದರೆ ಕಾಡುಪ್ರಾಣಿಗಳು ಊರಿಗೆ ಲಗ್ಗೆ ಇಡುವುದು. ಕಾಡು ಪ್ರಾಣಿಗಳು ಊರಿಗೆ ಯಾಕೆ ಬರುತ್ತಿವೆ? ಎನ್ನುವ ಯೋಚನೆ ಯಾರಿಗೂ ಇಲ್ಲ, ಆದರೆ ಬರುವ ಪ್ರಾಣಿಗಳನ್ನು ಹೇಗೆ ಕೊಲ್ಲುವುದು ಎನ್ನುವ ವಿಚಾರದಲ್ಲಿ ಹೊಸ ಹೊಸ ಯೋಚನೆ, ಯೋಜನೆಗಳನ್ನು ಜನರು ಹಾಕುತ್ತಾರೆ. ಕೆಲವರು, ಗುಂಡಿಟ್ಟು, ಬಾಂಬು ಇಟ್ಟು, ಪಟಾಕಿ, ವಿಷ ಇಟ್ಟು ಕೊಂದ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳನ್ನು ನೋಡಿದಾಗ ಬೇಸರವಾಗುತ್ತದೆ. ಹೀಗೆ ಬರುವ ಪ್ರಾಣಿಗಳನ್ನು ಕೊಲ್ಲುವ ಕಾರ್ಯ ನಿರಂತರವಾಗಿ ನಡೆದರೆ ಅದು ನಾವು ಪರಿಸರಕ್ಕೆ ಮಾಡುವ ಅತಿ ದೊಡ್ಡ ಹಾನಿ. ಅವು ನಾಡಿಗೆ ಬಾರದಂತೆ ತಡೆಯಲು ಯೋಚನೆ-ಯೋಜನೆಗಳನ್ನು ಹಾಕಿಕೊಳ್ಳಬೇಕು. ಅವುಗಳಿಗೆ ಕಾಡಿನಲ್ಲೇ ಆಹಾರ ದೊರೆಯುವಂತೆ ಮಾಡಿದರೆ ಆಹಾರ ಅರಸಿ ನಾಡಿಗೆ ಖಂಡಿತಾ ಬರಲಾರವು. ಈ ಯೋಚನೆಯನ್ನು ಮುಂದಿಟ್ಟು ಕೊಂಡು ಕಾಡಿನಲ್ಲಿ ಹಣ್ಣು-ಹಂಪಲುಗಳ ಗಿಡ-ಮರಗಳನ್ನು ಬೆಳೆಸುವ ಸಲುವಾಗಿ ಕಳೆದ ವರ್ಷ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ ಕಾಡು ಮರ-ಗಿಡಗಳ ಬೀಜಗಳನ್ನು ಬಿತ್ತಿ ಗಿಡಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು 28 ಬಗೆಯ ವಿವಿಧ ಜಾತಿ ಮರಗಳ ಬೀಜಗಳನ್ನು ಸಂಗ್ರಹಿಸಿದ್ದಳು. ಅತಿ ಹೆಚ್ಚು ಬೀಜ ಸಂಗ್ರಹಿಸಿದ ಮಕ್ಕಳನ್ನು ಗುರುತಿಸಿ ಪೋ›ತ್ಸಾಹಿಸಲಾಯಿತು. ಮಕ್ಕಳಿಗೆ ಎಳವೆಯಿಂದಲೇ ಪ್ರಕೃತಿ ಸಂರಕ್ಷಣೆಯ ಬಗ್ಗೆ ತಿಳಿಹೇಳಬೇಕು; ಅದು ನಮ್ಮ ಕರ್ತವ್ಯವೆಂದು ತಿಳಿಸಿಕೊಡಬೇಕು.

ಒಂದು ಕಾಫಿ ತೋಟದಲ್ಲಿ ಉತ್ತಮ ರೀತಿಯಲ್ಲಿ ಬೆಳೆ ಬರುತ್ತಿತ್ತು. ಆದರೆ ಒಮ್ಮೆ ಫಸಲು ಬಹಳ ಕುಂಠಿತವಾಗಿತ್ತು. ತೋಟವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರೂ ಫಸಲು ಯಾಕೆ ಕಮ್ಮಿ ಎಂದು ಯಜಮಾನನಿಗೆ ಬಗೆಹರಿಯಲಿಲ್ಲ. ತಜ್ಞರನ್ನು ತೋಟಕ್ಕೆ ಕರೆಸಿದ. ಕೊನೆಗೆ ತಿಳಿದು ಬಂದ ವಿಚಾರವೆಂದರೆ ಆ ಪ್ರದೇಶದಲ್ಲಿ ಸಾಕಷ್ಟು ಚಿಟ್ಟೆಗಳು ಹಾಗೂ ಜೇನುನೊಣಗಳು ಇರಲಿಲ್ಲ. ಅವೆಲ್ಲ ಪ್ರಾಣಿಗಳು ಹಾಗೂ ಜೇನ್ನೊಣಗಳ ಹಾವಳಿ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಿ ನಾಶವಾಗಿದ್ದವು. ಚಿಟ್ಟೆಗಳು, ಜೇನುನೊಣಗಳು ಇದ್ದರೆ ಮಾತ್ರ ಪರಾಗಸ್ಪರ್ಶ (cross pollination) ಆಗುತ್ತದೆ. ಅವುಗಳು ಒಂದು ಗಿಡದಿಂದ ಮಕರಂದವನ್ನು ಹೀರಿ ಮತ್ತೊಂದು ಗಿಡಕ್ಕೆ ಹೋಗುತ್ತವೆ. ಆ ತೋಟದಲ್ಲಿ ಚಿಟ್ಟೆ, ಜೇನುನೊಣಗಳು ನಾಶವಾದ್ದರಿಂದ ಪ್ರಕೃತಿಯಲ್ಲಿ ಅಸಮತೋಲನವಾಗಿ, ಗಿಡಗಳಲ್ಲಿ ಹೂವು ಮತ್ತು ಹಣ್ಣು ಮತ್ತು ಕಾಫಿ ಇಳುವರಿ ಕಡಿಮೆಯಾಗಿತ್ತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ವನ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದು, 10 ಲಕ್ಷ ಗಿಡಗಳನ್ನು ನಾಟಿ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ವನ ಸಂರಕ್ಷಣೆ ಎನ್ನುವುದು ಸಭೆಯಲ್ಲಿ ಮಾತನಾಡಿದರೆ ಮಾತ್ರ ಆಗುವುದಿಲ್ಲ. ಎಲ್ಲರ ಸಹಕಾರ ಬೇಕು. ಸಮಾಜ ಈ ವಿಚಾರದಲ್ಲಿ ಒಗ್ಗಟ್ಟಾಗಬೇಕು. ಬಾಲ್ಯದಲ್ಲಿ ನಾನು ಪಡುಬಿದ್ರಿಯಲ್ಲಿದ್ದ ಅಜ್ಜನ ಮನೆಗೆ ಹೋಗುತ್ತಿದ್ದೆ. ಅಲ್ಲಿ ಹೆಬ್ಬಲಸು ಹಣ್ಣನ್ನು ತಿನ್ನುವುದು ನನಗೆ ಅಚ್ಚುಮೆಚ್ಚಾಗಿತ್ತು. ಅಲ್ಲಿ ಓಡಾಡಿ ಸಾಕಷ್ಟು ಕಾಡು ಹಣ್ಣುಗಳನ್ನು ಸವಿಯುತ್ತಿದ್ದೆ. ಕರವೊಳು, ಕಾಡು ಪೀರೆ, ಅಡ್ಕರೆ ಮುಂತಾದ ಕಾಡಿನಲ್ಲಿ ದೊರೆಯುವ ಪದಾರ್ಥಗಳ ರುಚಿಯನ್ನು ವರ್ಣಿಸಲಾಗದು. ಇಂದಿನ ಮಕ್ಕಳು ಅವನ್ನು ಕೇಳಿರಬಹುದೇ ಹೊರತು ಅನುಭವಿಸಲಾರರು. ಕೆಲವು ವರ್ಷಗಳ ಹಿಂದಿನವರೆಗೆ, ವಿಶೇಷವಾಗಿ ಹಳ್ಳಿಗಳಲ್ಲಿ ಯಾರ ಮನೆಯಲ್ಲೂ ತರಕಾರಿಗಳನ್ನು ಪೇಟೆಯಿಂದ ತರುವ ಪರಿಪಾಠವಿರಲಿಲ್ಲ. ಬಹುತೇಕರು ತಮಗೆ ಬೇಕಾಗುಷ್ಟನ್ನು ಮನೆಯಲ್ಲೇ ಬೆಳೆಯುತ್ತಿದ್ದರು. ವಿವಿಧ ತರಕಾರಿ, ಹಸಿರು ಸೊಪ್ಪುಗಳನ್ನು ಬೆಳೆದು ಅವುಗಳನ್ನು ಆಯಾ ಕಾಲದಲ್ಲೇ ಬಳಸಿದರೆ ಕೆಲವನ್ನು ಸಂಗ್ರಹಿಸಿಟ್ಟುಕೊಂಡು ಯಾವಾಗ ಬೇಕೋ ಆಗ ಬಳಸುತ್ತಿದ್ದರು. ಹಿಂದೆಲ್ಲ ಹಳ್ಳಿ ಮನೆಗಳಲ್ಲಿ ಸೌತೆಕಾಯಿ ಅಥವಾ ಕುಂಬಳ ಕಾಯಿಯನ್ನು ಮನೆಯ ಅಟ್ಟಕ್ಕೆ ಹಾಕಿರುವ ಅಡ್ದಗಳಿಗೆ ನೇತು ಹಾಕಿರುವುದನ್ನು ಕಾಣಬಹುದಿತ್ತು. ಮುಂದಿನ ಕೆಲವು ತಿಂಗಳ ಸಮಯ ಅವನ್ನು ಬಳಸಬಹುದಿತ್ತು. ಮಳೆಗಾಲ ಆರಂಭವಾಯಿತೆಂದರೆ ತಿಂಡಿ ತಿನಸುಗಳ ಸುಗ್ಗಿಯ ಕಾಲ. ಯಾಕೆಂದರೆ ಮಳೆಗಾಲಕ್ಕೂ ಮುನ್ನ ಹಲಸು, ಮಾವು, ಗೇರು ಮುಂತಾದ ಮರಗಳು ಫಲ ನೀಡುತ್ತವೆ. ಹಲಸಿನಿಂದ ಹಪ್ಪಳ, ಸಂಡಿಗೆ, ಹಲಸಿನ ಬೀಜದಿಂದ ವಿವಿಧ ತಿಂಡಿ, ಮಾವಿನ ಕಾಯಿಯ ವಿವಿಧ ತಿಂಡಿಗಳು ವಿಶೇಷವಾಗಿ ಮಾವಿನ ಹಣ್ಣನ್ನು ಹಿಚುಕಿ ಅದರ ರಸವನ್ನು ಬಟ್ಟೆಗೆ ಸವರಿ (7-8 ದಿವಸಗಳ ಕಾಲ ಮಾಡಬೇಕಿರುತ್ತದೆ) ಬಿಸಿಲಲ್ಲಿ ಒಣಗಿಸಿ ಮಾಡುತ್ತಿದ್ದ ಮಾಂಬಳ ಅಲ್ಲದೆ ಕಾಡಿನಲ್ಲಿ ದೊರೆಯುತ್ತಿದ್ದ ಕಲ್ಯಾಟೆ, ಕಾಡು ಪೀರೆ ಇತ್ಯಾದಿಯ ಸಾಂಬಾರ್, ಕೆಸುವಿನ ಎಲೆಯ ಪತ್ರೋಡೆ ಮತ್ತಿತರ ಖಾದ್ಯ, ಕಳಲೆ (ಎಳೇ ಬಿದಿರು)ಯ ಪಲ್ಯ, ಸಾಂಬಾರ್, ಉಪ್ಪಿನಕಾಯಿ, ಗೆಣಸು, ಅನನಾಸು ಮುಂತಾದವುಗಳ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ.

ನಮ್ಮ ಬೀಡಿನಲ್ಲಿ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಪಲ್ಲೋಡಿ ಎಂಬ ವಿಶೇಷ ಖಾದ್ಯ ತಯಾರಿಸುತ್ತೇವೆ. ಮಹಿಳೆಯರು ತಜಂಕ್, ಪುನರ್​ಪುಳಿ, ನೇರಳೆ, ತುಳಸಿ, ಒಂದೆಲಗ ಹೀಗೆ ವಿವಿಧ ಕಾಡು ಗಿಡ, ಸಸ್ಯಗಳ ಚಿಗುರುಗಳನ್ನು ಆಯ್ದು ತರುತ್ತಾರೆ. ಅವನ್ನೆಲ್ಲ ಶುಚಿಗೊಳಿಸಿ ಚಟ್ನಿ ಅಥವಾ ಪಲ್ಯ ರೀತಿಯ ಖಾದ್ಯ ತಯಾರು ಮಾಡುತ್ತಾರೆ. ರುಚಿಕರ ಜತೆಗೆ ಆರೋಗ್ಯಕ್ಕೂ ಉತ್ತಮ. ನಾನು ಚಿಕ್ಕವನಿದ್ದಾಗ ಪಲ್ಲೋಡಿಗಾಗಿ ಸುಮಾರು 80-100 ಬಗೆಯ ಗಿಡಗಳ ಚಿಗುರುಗಳನ್ನು ಒಟ್ಟು ಮಾಡುತ್ತಿದ್ದರೆ ಈಗ 30-40 ಬಗೆಯ ಚಿಗುರುಗಳಷ್ಟೇ ದೊರೆಯುತ್ತವೆ.

ಕರಾವಳಿಯಲ್ಲಿ ಹೆಚ್ಚಾಗಿ ಅಡಕೆ ಹಾಗೂ ಭತ್ತ ಬೆಳೆಗಾರರು ಜಾಸ್ತಿ. ಅಡಕೆ ತೋಟದಲ್ಲಿ ಔಷಧೀಯ ಗುಣವುಳ್ಳ ಒಂದೆಲಗ ಹೇರಳವಾಗಿ ದೊರೆಯುತ್ತಿತ್ತು. ಆದರೆ ಈಗ ತೋಟ ಹಾಗೂ ಗದ್ದೆಯ ಬದುಗಳಲ್ಲಿ ಒಂದೆಲಗವು ಅಪರೂಪವೇ ಆಗಿದೆ. ಉತ್ತಮ ಫಸಲು ಪಡೆಯಲು ಹಾಗೂ ತೋಟದ ಕಳೆ ನಾಶ ಮಾಡಲು ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕಳೆನಾಶಕಗಳನ್ನು ಬಳಸುವುದರಿಂದ ಮಣ್ಣಿನ ಸೂಕ್ಷ್ಮ ಜೀವಿಗಳು ನಾಶವಾಗುವುದರ ಜೊತೆಗೆ ಮರಗಿಡಗಳಿಗೂ ಹಾನಿಯಾಗುತ್ತದೆ.

ಕೆಲವೇ ವರ್ಷಗಳ ಹಿಂದೆ ಬಹುತೇಕ ಕಡೆಗಳಲ್ಲಿ ಬಿದಿರಿನ ಮೆಳೆ ಕಾಣಬರುತ್ತಿದ್ದವು. ಇತ್ತೀಚೆಗೆ ಅವು ಬಹುತೇಕ ನಾಶವಾಗಿದೆ ಎಂದೆನಿಸುತ್ತದೆ. ಕಾಳ್ಗಿಚ್ಚು ಹಾಗೂ ಪ್ರಾಕೃತಿಕವಾಗಿಯೂ ಅವು ಕೊನೆ ಯಾಗುತ್ತವೆ. 60 ವರ್ಷಕ್ಕೊಮ್ಮೆ ಬಿದಿರು ಮೆಳೆಗಳು ಪೂರ್ತಿ ನಾಶವಾಗಿ ಮತ್ತೆ ಚಿಗುರುತ್ತವೆ ಎಂಬ ತಿಳುವಳಿಕೆ ಇದೆ. ಬಿದಿರು ಹುಲ್ಲು ಜಾತಿಗೆ ಸೇರಿದ ಸಸ್ಯವಾಗಿದ್ದು, ಇದರಲ್ಲಿ ಸುಮಾರು 550 ಪ್ರಭೇದಗಳನ್ನು ಗುರುತಿಸ ಲಾಗಿದೆ. ಭಾರತದಲ್ಲಿ ಸುಮಾರು 120ಕ್ಕೂ ಹೆಚ್ಚು ಪ್ರಭೇದಗಳು ಇವೆ. ಬಿದಿರನ್ನು ಸಂರಕ್ಷಿಸಲೇಬೇಕಾದ ಸಸ್ಯವೆಂದು ಸರಕಾರವು ಗುರುತಿಸಿದೆ ಹಾಗೂ ಬಿದಿರನ್ನು ಬೆಳೆಯಲು ಜನರಿಗೆ ಪೋ›ತ್ಸಾಹವನ್ನೂ ನೀಡುತ್ತಲಿದೆ. ಮಣ್ಣಿನ ಸಂರಕ್ಷಣೆಯಲ್ಲಿ ಬಿದಿರು ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಸುತ್ತಮುತ್ತಲಿರುವ ಯಾವುದೇ ಗಿಡ-ಮರಗಳನ್ನು ಉಳಿಸಬೇಕು. ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು. ರಾಮ ಸೇತುವೆ ನಿರ್ವಿುಸುವಾಗ ಅಳಿಲು ತನ್ನ ಸೇವೆ ಸಲ್ಲಿಸಿದಂತೆ ನಾವೆಲ್ಲ ನಮ್ಮ ಕೈಲಾದಷ್ಟು ಕಾರ್ಯ ಕೈಗೊಂಡರೆ ನಮ್ಮೆಲ್ಲರ ತಾಯಿಯಾಗಿರುವ ಪ್ರಕೃತಿ ಮಾತೆಯನ್ನು ಕಾಪಾಡಲು ಸಾಧ್ಯ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)