ನಮ್ಮ ಕ್ಷೇತ್ರಕ್ಕೆ ಬರುವ ಅನೇಕ ಭಕ್ತರು ನನ್ನನ್ನು ಭೇಟಿಯಾದಾಗಲೆಲ್ಲ ತಮ್ಮ ಕಷ್ಟ, ನಷ್ಟ-ನೋವು ನಲಿವುಗಳನ್ನೆಲ್ಲ ಮುಕ್ತ ಮನಸ್ಸಿನಿಂದ ಹಂಚಿಕೊಳ್ಳುತ್ತಾರೆ. ಕ್ಷೇತ್ರದಲ್ಲಿರುವ ಅಭಯದಾನದ ಪರಂಪರೆಯ ಪದ್ಧತಿಯಂತೆ ಅವರಿಗೆ ಸಾಂತ್ವನ, ಹಾರೈಕೆಯ ಅಭಯವನ್ನು ನೀಡಿ ಧೈರ್ಯವನ್ನು ತುಂಬುತ್ತೇನೆ. ಅವರು ಹೇಳಿಕೊಳ್ಳುವ ಸಂಕಷ್ಟಗಳಲ್ಲಿ ಕುಟುಂಬ ಕಲಹ, ದಾಂಪತ್ಯ ಕಲಹಗಳೂ ಇರುತ್ತವೆ. ಹೀಗೆ ಮಾತನಾಡುವಾಗ ಒಬ್ಬ ಹೆಂಗಸು ತನ್ನ ಎಳೆ ಮಕ್ಕಳನ್ನೆತ್ತಿಕೊಂಡು ನನ್ನೆದುರು ನಿಂತು ಅಳಲಾರಂಭಿಸಿದಳು. ‘ನಾನು ಯಾಕವ್ವಾ? ಏನಾಯಿತು? ಏಕೆ ಅಳುತ್ತಿರುವೆ?’ ಎಂದಾಗ ಕಣ್ಣೀರು ಒರೆಸಿಕೊಳ್ಳುತ್ತಾ, ‘ನಮ್ಮನೇಲಿ ಅಂದರೆ ಗಂಡನ ಮನೇಲಿ ತುಂಬಾ ಕಷ್ಟವಾಗುತ್ತಿದೆ. ಮದುವೆ ಆದ ಆರಂಭದಲ್ಲಿ ಚೆನ್ನಾಗಿದ್ದ ಅತ್ತೆ ಮಾವ ಈಗೀಗ ಪ್ರತಿಯೊಂದಕ್ಕೂ ಜಗಳ ಮಾಡುತ್ತಾರೆ. ನನ್ನ ತವರು ಮನೆಯ ಬಗ್ಗೆ ದೂಷಣೆ ಮಾಡುತ್ತಾರೆ. ಗಂಡ ಕೆಲಸಕ್ಕೆ ಬೇರೆ ಕಡೆ ಹೋಗುತ್ತಾರೆ. ಎರಡು ಮೂರು ದಿನಕ್ಕೊಮ್ಮೆ ಬರುತ್ತಾರೆ. ಅವರಿದ್ದಾಗ ಏನೂ ಮಾತನಾಡದ ಅತ್ತೆ ಮಾವ ಅವರಿಲ್ಲದಿರುವಾಗ ಏನಾದರೂ ನೆವ ಹೂಡಿ ನನಗೆ ಬೈಯುತ್ತಾರೆ. ಹೀಯಾಳಿಸುತ್ತಾರೆ. ಗಂಡ ಬಳಿ ಈ ವಿಷಯ ಹೇಳಿದರೆ ಚಾಡಿ ಹೇಳುತ್ತೀಯಾ ಅಂತಾರೆ. ಹೆಣ್ಣು ಹೆತ್ತಿದ್ದೀಯಾ ಎಂದು ಮೂದಲಿಸುತ್ತಾರೆ. ಮೊನ್ನೆ ಒಮ್ಮೆ ಕುಡಿದು ಬಂದ ಮಾವ ನನ್ನ ಬಟ್ಟೆ-ಬರೆಗಳನ್ನೆಲ್ಲ ಮೋರಿಗೆ ಎಸೆದಿದ್ದ, ಹೊಡೆಯಲು ಬಂದಾಗ ಕೋಣೆಯೊಳಗೆ ಸೇರಿಕೊಂಡು ಬಚಾವಾಗಿದ್ದೆ’ ಎಂಬಿತ್ಯಾದಿ ವಿಚಾರಗಳನ್ನು ಹೇಳಿ ಕಣ್ಣೀರಿಟ್ಟಳು. ಆಕೆಯನ್ನು ಸಮಾಧಾನಿಸಿ, ಸಾಂತ್ವನ ನೀಡಿ, ಧೈರ್ಯ ತುಂಬಿ ಕಳುಹಿಸಿದೆ.
ಇನ್ನೊಂದು ಸಂದರ್ಭದಲ್ಲಿ ವೃದ್ಧ ದಂಪತಿಗಳು ನನ್ನೊಡನೆ ಮಾತನಾಡುತ್ತಾ, ‘ನಮಗಿಬ್ಬರು ಗಂಡು ಮಕ್ಕಳು. ಒಬ್ಬಾತ ಒಳ್ಳೆಯ ಉದ್ಯೋಗ ಪಡೆದು ಪೇಟೆಯಲ್ಲಿ ನೆಲೆಸಿದ್ದಾನೆ. ಆಗೀಗ ಮನೆಗೆ ಬಂದು ನೋಡಿಕೊಂಡು ಹೋಗುತ್ತಾನಲ್ಲದೆ ನಮ್ಮ ಖರ್ಚಿಗೆ ಹಣ ಕೊಟ್ಟು ಹೋಗುತ್ತಾನೆ. ಮನೆಯಲ್ಲಿರುವ ಮಗ ನಮ್ಮ ಮೇಲೆ ಸ್ವಲ್ಪವೂ ಕಾಳಜಿ ತೋರುವುದಿಲ್ಲ. ಬರೀ ಹೆಂಡತಿ ಮಾತನ್ನೇ ಕೇಳುತ್ತಾನೆ. ಅದು ತಿನ್ನಬೇಡಿ, ಇದು ತಿನ್ನಬೇಡಿ, ಅಲ್ಲಿ ಹೋಗಬೇಡಿ ಎಂದೆಲ್ಲ ನಿರ್ಬಂಧಿಸುತ್ತಾನೆ. ಪೇಟೆಯ ವಾತಾವರಣ ನಮಗೆ ಆಗಿ ಬರುವುದಿಲ್ಲ. ಅಲ್ಲಿರುವ ಮಗನ ಬಳಿ ಹೋದರೂ ಒಂದೆರಡು ದಿವಸಕ್ಕಿಂತ ಹೆಚ್ಚು ಇರಲಾಗುವುದಿಲ್ಲ. ಇಲ್ಲಿರುವ ಮಗ ನಾವೇನೋ ದೊಡ್ಡ ಹೊರೆಯಾಗಿದೆ ಎಂಬಂತೆ ಭಾವಿಸುತ್ತಾನೆ ಎಂದೆನಿಸುತ್ತಿದೆ’ ಎಂದರು.
ಈ ಎರಡೂ ಸನ್ನಿವೇಶಗಳು ಬೇರೆ ಬೇರೆಯಾದರೂ ಮನಃಸ್ಥಿತಿ ಒಂದೇ ಆಗಿದೆ. ಸಂಸಾರವೆಂದ ಮೇಲೆ ಸಣ್ಣ ಪುಟ್ಟ-ಕೋಪ, ಮುನಿಸುಗಳು ಸಹಜ. ಸೊಸೆಗೆ ಅತ್ತೆ ಮಾವನವರು ನನ್ನನ್ನು ದೂರುತ್ತಾರೆ ಎಂಬ ಚಿಂತೆಯಾದರೆ ತಂದೆ-ತಾಯಿಗಳಿಗೆ ಸೊಸೆ ಬಂದ ಮೇಲೆ ಮಗ ಸಂಪೂರ್ಣ ಬದಲಾಗಿದ್ದಾನೆ ಎಂದು ಭಾವಿಸುತ್ತಾರೆ. ವಿಶಾಲ ಮನೋಭಾವದ ಕೊರತೆಯಿದ್ದಾಗ ಇಂತಹ ಅನುಮಾನಗಳು, ಊಹೆಗಳು ಉಂಟಾಗುತ್ತವೆ. ಅನುಮಾನವೇ ಹೆಚ್ಚಾಗಿ, ಇಲ್ಲ ಸಲ್ಲದ್ದನ್ನು ಕಲ್ಪಿಸುತ್ತಾ ಹೋದರೆ ಸಂಸಾರ ಸುಗಮವಾಗಿ ಸಾಗಲಾರದು. ಗಂಡ ಹೆಂಡತಿಯರ ನಡುವಲ್ಲಿ ಭಿನ್ನಾಭಿಪ್ರಾಯಗಳು ಬಂದಾಗ ಸರಿಪಡಿಸಿಕೊಳ್ಳದೇ ಇದ್ದಾಗ ಅದು ಎತ್ತು ಏರಿಗೆ, ಕೋಣ ನೀರಿಗೆ ಹೋಯಿತು ಎಂಬಂತೆ ಆಗುವ ಸಾಧ್ಯತೆಯೇ ಹೆಚ್ಚು.
ನನ್ನ ಮಗನನ್ನು ಮದುವೆಯಾದವಳು ನನ್ನ ಮಗಳಂತೆಯೇ. ಅವಳ ಕೆಲಸ ಕಾರ್ಯಗಳಲ್ಲಿ ತಪ್ಪಾಗುತ್ತದೆ. ನಾನೂ ಕೂಡ ಈ ಮನೆಗೆ ಸೊಸೆಯಾಗಿಯೇ ಬಂದವಳು. ಆರಂಭದ ದಿನಗಳಲ್ಲಿ ನನಗೂ ಹಾಗೆಯೇ ಆಗಿರಲಿಲ್ಲವೇ ಎಂದು ಭಾವಿಸಿಕೊಂಡು ಅಚಾತುರ್ಯದಿಂದ ಆಗುವ ತಪ್ಪನ್ನು ದೊಡ್ಡದು ಮಾಡದೆ ಸುಧಾರಿಸಿಕೊಂಡು ಹೋಗುವುದು ಜಾಣತನ. ಮನೆಗೆ ಬಂದ ಸೊಸೆಯೂ ಅಷ್ಟೆ, ತನ್ನ ಗಂಡನನ್ನು ಮಾತ್ರವಲ್ಲದೆ ಆತನ ಮನೆಯವರೆಲ್ಲರನ್ನೂ ತನ್ನ ಮನೆಯವರಂತೆಯೇ ಕಾಣಬೇಕು. ತನ್ನ ತಂದೆ-ತಾಯಿಯಷ್ಟೇ ವಯಸ್ಸಾಗಿರಬಹುದಾದ ಅವರನ್ನು ತನ್ನ ಹೆತ್ತವರನ್ನು ಕಾಣುವ ರೀತಿಯಲ್ಲಿಯೇ ಆರೈಕೆ ಮಾಡಿ ಪ್ರೀತಿ ಗಳಿಸಬೇಕು.
ನಾಲ್ಕೈದು ದಶಕಗಳ ಹಿಂದೆ ಬಹುತೇಕ ಕಡೆಗಳಲ್ಲಿ ಕೂಡು ಕುಟುಂಬಗಳಿದ್ದವು. ಅಲ್ಲಿ ಅಜ್ಜ-ಅಜ್ಜಿಯೊಂದಿಗೆ ಚಿಕ್ಕಪ್ಪ, ದೊಡ್ಡಪ್ಪಂದಿರು ಅವರ ಹೆಂಡತಿಯರು, ಮಕ್ಕಳು, ಮೊಮ್ಮಕ್ಕಳೆಲ್ಲ ಒಟ್ಟಾಗಿ ಜೀವನ ನಡೆಸುತ್ತಿದ್ದರು. 20-30 ಜನರಿದ್ದ ಮನೆಯಲ್ಲಿ ಗಲಾಟೆಗಳು, ಕೋಪಗಳು ಕಂಡುಬರುತ್ತಿರಲಿಲ್ಲ. ಭಿನ್ನಾಭಿಪ್ರಾಯಗಳಿದ್ದರೂ, ಹುಬ್ಬಳ್ಳಿ ಬಳಿ ಇರುವ ಲೋಕೂರು ಗ್ರಾಮದ ಮನೆಯೊಂದರಲ್ಲಿ 150 ಸದಸ್ಯರಿದ್ದರು. ಆ ಕೂಡು ಕುಟುಂಬವನ್ನು ನೋಡಲು ನಾವು ಹೋಗಿದ್ದೆವು. ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದರು. ಹಬ್ಬ ಹರಿದಿನಗಳನ್ನು ಎಲ್ಲರೂ ಜೊತೆಯಾಗಿ ಆಚರಿಸುತ್ತಾ ಸಮೃದ್ಧ ಜೀವನ ನಡೆಸುತ್ತಿದ್ದರು. ಕಾಲ ಸರಿದಂತೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಲೋ, ಅನಿವಾರ್ಯ ಕಾರಣಗಳಿಂದಲೋ ಅವಿಭಕ್ತ ಕುಟುಂಬಗಳು ಇಲ್ಲವಾಗಿ ವಿಭಕ್ತ ಕುಟುಂಬಗಳೇ ಹೆಚ್ಚಿವೆ. ಆಲೋಚಿಸಬೇಕಾದ ವಿಚಾರವೆಂದರೆ ಅವಿಭಕ್ತ ಕುಟುಂಬಗಳಲ್ಲಿ ಇರದ ಅತ್ತೆ-ಸೊಸೆ, ಮಕ್ಕಳು-ಹೆತ್ತವರ ನಡುವಿನ ಮನಸ್ತಾಪಗಳನ್ನು ಸಣ್ಣ ಕುಟುಂಬಗಳಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ಕುಟುಂಬಗಳು ಸಣ್ಣದಾದರೂ ಅಲ್ಲಿನ ಸಮಸ್ಯೆಗಳೇನೂ ಕಡಿಮೆಯಾಗಿಲ್ಲ. ಅತ್ತೆ ಮಾವಂದಿರು ಇರದಿದ್ದರೂ ಗಂಡ-ಹೆಂಡತಿಯರ ನಡುವೆ ನಾನಾ ವಿಷಯಗಳಿಗೆ ಜಗಳವಾಗಿ ಅದು ಅತಿರೇಕಗೊಂಡು ವಿಚ್ಛೇದನ ನೀಡುವ ಹಂತಕ್ಕೂ ಹೋಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಲಿರುವುದು ಆತಂಕಕಾರಿ ಬೆಳವಣಿಗೆ.
ಇಂದಿನ ಸಮಾಜದಲ್ಲಿ ಗಂಡು-ಹೆಣ್ಣು ಇಬ್ಬರೂ ಸಮಾನರು. ಸಾಮಾಜಿಕ, ರಾಜಕೀಯ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನರಾಗಿ ಕೆಲಸ ನಿರ್ವಹಿಸುತ್ತಾರೆ. ಮನೆಯಲ್ಲೂ ಗಂಡಿನಷ್ಟೇ ಹೆಣ್ಣೂ ಗೌರವ ಹೊಂದಿದ್ದಾಳೆ. ಶಿಕ್ಷಣ ಸೇರಿದಂತೆ ಎಲ್ಲ ರಂಗಗಳಲ್ಲಿ ಸಮಾನ ಅವಕಾಶಗಳನ್ನು ನೀಡಲಾಗುತ್ತಿದೆ. ಈ ತರಹದ ಬೆಳವಣಿಗೆಗಳೆಲ್ಲ ನಮ್ಮ ಜೀವನಮಟ್ಟ ಮಾತ್ರವಲ್ಲದೆ ನಾಡಿದ ಅಭಿವೃದ್ಧಿಗೂ ಪೂರಕವಾಗಿವೆ.
ಕೆಲವು ಶತಮಾನಗಳ ಹಿಂದೆ ಮಹಿಳೆಯು ನಾಲ್ಕು ಗೋಡೆಯೊಳಗೆ ಮಾತ್ರ ಸೀಮಿತವಾಗಿ ಮನೆಯೊಳಗಿದ್ದಳು. ಈಗ ಇಡೀ ಜಗತ್ತನ್ನೇ ತನ್ನ ಮನೆಯಾಗಿಸಿಕೊಂಡು ಆಗು-ಹೋಗುಗಳಲ್ಲಿ ತೊಡಗಿಸಿಕೊಳ್ಳುತ್ತಾ ಮನೆ, ವ್ಯವಹಾರ, ಉದ್ದಿಮೆ ಸೇವೆ ಎಲ್ಲೆಲ್ಲಿಯೂ ಬೆಳಗುತ್ತಿದ್ದಾಳೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆ ಸಾಕಷ್ಟು ಅಭಿವೃದ್ಧಿಗೊಂಡಿದ್ದಾಳೆ. ಮನೆ ನಿರ್ವಹಣೆ ಮಾತ್ರವಲ್ಲದೆ, ಬ್ಯಾಂಕ್ ಮುಂತಾದ ಎಲ್ಲ ರೀತಿಯ ವ್ಯವಹಾರಗಳನ್ನು ನಿಭಾಯಿಸಬಲ್ಲಳು. ಚುನಾವಣೆಗೆ ನಿಂತು ಆಡಳಿತದ ಚುಕ್ಕಾಣಿಯನ್ನು ಹಿಡಿಯಬಲ್ಲವಳಷ್ಟು ಸಶಕ್ತಳಾಗಿದ್ದಾಳೆ. ಶ್ರೀ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯನ್ನು ಆರಂಭಿಸಿ, ಆ ಮೂಲಕ ಗ್ರಾಮೀಣ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಕ್ರಮಗಳೆಲ್ಲ ಯಶಸ್ವಿಯಾಗಿವೆ.
ಯೋಜನೆಯಲ್ಲಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಜ್ಞಾನ ವಿಕಾಸ ಮತ್ತು ಗೆಳತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯ, ಕುಟುಂಬ ಸಾಮರಸ್ಯ, ಪೌಷ್ಟಿಕಾಂಶ, ಶಿಕ್ಷಣದ ಮಹತ್ವ, ಕಾನೂನಿನ ಅರಿವು, ಸ್ವಉದ್ಯೋಗ ಹೀಗೆ ಮಹಿಳೆಯು ತನ್ನ ಕಾಲ ಮೇಲೆ ನಿಲ್ಲಲು ಅನುಕೂಲವಾಗುವಂತೆ ಪ್ರೇರಣೆ, ತರಬೇತಿ, ಮಾರ್ಗದರ್ಶನದ ಜೊತೆಗೆ ನೆರವನ್ನು ನೀಡಲಾಗುತ್ತಿದೆ. ಇದಲ್ಲದೆ, ಗೆಳತಿ ಎಂಬ ಉಚಿತ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಇದರ ಮೂಲಕ ಕೌನ್ಸ್ಸೆಲಿಂಗ್ ಸೌಲಭ್ಯ ಒದಗಿಸಲಾಗುತ್ತಿದೆ. ತಜ್ಞ ವೈದ್ಯರು, ವಕೀಲರು, ಮನೋತಜ್ಞರು ಮುಂತಾದವರನ್ನು ಒಳಗೊಂಡ ತಂಡವಿದ್ದು, ಅವರು ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಧೈರ್ಯ ತುಂಬುತ್ತಾರೆ. (ಕರೊನಾ ಸಂದರ್ಭದಲ್ಲಿ ಹಲವಾರು ಕರೆಗಳು ಬಂದಿದ್ದು, ಹೆಚ್ಚಾಗಿ ಆರೋಗ್ಯ, ಕೌಟುಂಬಿಕ ಪರಿಹಾರ, ಖಿನ್ನತೆಯ ಪರಿಹಾರಕ್ಕಾಗಿ ವಿನಂತಿ ಮಾಡಿಕೊಂಡಿದ್ದರು)
ಹೆಚ್ಚಾಗಿ ಗಂಡ ಹೆಂಡತಿ ಜಗಳ ಮತ್ತು ಕೌಟುಂಬಿಕ ಸಮಸ್ಯೆಯೇ ಬಂದಿದ್ದು ಈ ಬಗ್ಗೆ ನಾವೆಲ್ಲ ಚಿಂತನ ನಡೆಸಬೇಕಾದ ಅಗತ್ಯವಿದೆ. ಯಾಕೆಂದರೆ ಭಾರತೀಯರ ಕೌಟುಂಬಿಕ ಜೀವನವನ್ನು ವ್ಯವಸ್ಥೆ ಎನ್ನದೆ ಪದ್ಧತಿ ಎನ್ನುವುದು ಸೂಕ್ತವಾಗಿದೆ. ಯಾಕೆಂದರೆ ವ್ಯವಸ್ಥೆಯು ಕಾಲ ಅಥವಾ ಸಂದರ್ಭಕ್ಕೆ ಬದಲಾವಣೆಗೆ ಒಳಗಾಗಬಹುದು. ಆದರೆ, ಪದ್ಧತಿಯು ಅಷ್ಟು ಸುಲಭವಾಗಿ ಬದಲಾವಣೆಯಾಗುವಂಥದ್ದಲ್ಲ. ಕೆಲವು ವಿದೇಶಗಳ ಕುಟುಂಬಗಳಲ್ಲಿ ಆತ್ಮೀಯತೆ, ರಕ್ತ ಸಂಬಂಧದ ಭಾವನೆಗಳು ಅಷ್ಟಾಗಿ ಕಂಡು ಬರುವುದಿಲ್ಲ. ಮಕ್ಕಳು ತಮ್ಮ ತಂದೆ-ತಾಯಿಯನ್ನು ಪರಿಚಯಿಸುವಾಗ ದಿಸ್ ಇಸ್ ಮೈ ಸ್ಟೆಪ್ ಫಾದರ್, ಸ್ಟೆಪ್ ಮದರ್ ಅಥವಾ ದಿಸ್ ಇಸ್ ಮೈ ಫಸ್ಟ್ ವೈಫ್ಸ್ ಸನ್ ಹೀಗೆ ಪರಿಚಯಿಸಿಕೊಳ್ಳುವುದು ಜಾಸ್ತಿ. ಯಾಕೆಂದರೆ ಅಲ್ಲಿ ಪತಿ-ಪತ್ನಿಯರ ಸಂಬಂಧ ಇಲ್ಲಿನಷ್ಟು ಗಾಢವಾಗಿ ಬೆಸೆದುಕೊಂಡಿಲ್ಲ. ಪ್ರಾಪ್ತ ವಯಸ್ಕರಾದವರು ಯಾರು ಯಾರನ್ನು ಬೇಕಾದರೂ ಮದುವೆಯಾಗಬಹುದು. ಎಷ್ಟು ಸಲವು ವಿಚ್ಚೇದನ ನೀಡಬಹುದು, ಅಂತೆಯೇ ಮದುವೆಯಾಗಲೂ ಬಹುದು. ಎಷ್ಟೆಂದರೆ ವಿಚ್ಛೇದನ ಕೊಟ್ಟು ಕೆಲ ವರ್ಷಗಳ ಬಳಿಕ ಅವರನ್ನೇ ಮದುವೆಯಾಗುವ ಪ್ರಸಂಗವೂ ನಡೆಯುವುದುಂಟು. ಹೀಗೆ ಅಲ್ಲಿ ಮದುವೆಯೆಂಬುದು ಭಾರತೀಯ ಸಂಸ್ಕೃತಿಯಂತೆ ಬಿಗಿಯಾದ ಬಾಂಧವ್ಯವನ್ನು ಹೊಂದಿರುವುದಿಲ್ಲ.
ನಮ್ಮಲ್ಲಿನ ಕೌಟುಂಬಿಕ ಜೀವನ ಪದ್ಧತಿಯು ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಬೆಸೆದುಕೊಂಡಿರುವಂಥದ್ದು. ಒಮ್ಮೆ ಮದುವೆಯಾದರೆ ಸಾಯುವ ತನಕವೂ ಅವರೇ ದಂಪತಿಯಾಗಿರುತ್ತಾರೆ. ಈಗೀಗ ಮರು ಮದುವೆಗಳತ್ತ ಜನ ಮನಸ್ಸು ಮಾಡುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಅದೆಷ್ಟೋ ಮಹಿಳೆಯರು ಗಂಡ ಹಾಗೂ ಅತ್ತೆ-ಮಾವಂದಿರ ಕಿರುಕುಳವನ್ನು ಸಹಿಸಿಕೊಂಡು ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ನಮ್ಮಲ್ಲಿ ಜನಜಾಗೃತಿ ವೇದಿಕೆ ಮೂಲಕ ನಡೆಯುವ ಮದ್ಯವರ್ಜನ ಶಿಬಿರಕ್ಕಾಗಿ ಬಂದ ಮಹಿಳೆಯರು ತಮ್ಮ ಗಂಡ, ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ತನ್ನ ಗಂಡ ಕುಡಿತ ಬಿಟ್ಟು ಒಳ್ಳೆಯ ವ್ಯಕ್ತಿಯಾಗಿ ಗೌರವಯುತವಾಗಿ ಬಾಳಬೇಕೆಂದು ಇಚ್ಛಿಸುತ್ತಾರೆ. ಶಿಬಿರಕ್ಕೆ ಸೇರಿದ ಗಂಡ ಮದ್ಯ ಸೇವಿಸುವ ಅಭ್ಯಾಸ ಬಿಟ್ಟಿರುವುದನ್ನು ಕಂಡು ಸಂತೋಷದಿಂದ ಮನೆಗೆ ಮರಳುತ್ತಾರೆ. ಹೀಗೆ ಅನೇಕರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಈಗಂತೂ ಆಧುನಿಕತೆಯ ಪ್ರಭಾವದಿಂದ ಸಾಕಷ್ಟು ಬದಲಾವಣೆಯಾಗಿದೆ. ಬದುಕಿನಲ್ಲಿ ಒತ್ತಡವೂ ಜಾಸ್ತಿ. ಹಾಗಾಗಿ ಗಂಡ ಹೆಂಡತಿ ಒಟ್ಟಿಗೆ ಕೂತುಣ್ಣುವುದು ಅಪರೂಪ. ಅವರವರೇ ಬಡಿಸಿಕೊಂಡು ಊಟ ಮಾಡುತ್ತಾರೆ. ಅವರವರ ಕೆಲಸ ಅವರವರೇ ಮಾಡಿಕೊಳ್ಳುತ್ತಾರೆ. ಇಬ್ಬರೂ ದುಡಿಯುವವರೇ ಆಗಿದ್ದರೆ ಮನೆವಾರ್ತೆಯ ಜೊತೆಗೆ ಮಕ್ಕಳ ಓದು-ಬರಹದ ಬಗ್ಗೆ ಸಮಯ ನೀಡುವುದು ಕಷ್ಟವೇ. ಅದರ ನಡುವೆ ಕೋಪ-ತಾಪಗಳು ಬಂದರಂತೂ ಒಮ್ಮೊಮ್ಮೆ ದೊಡ್ಡ ಕಲಹವೇ ಆದಂತಾಗುವುದು. ನಾನು ಗಮನಿಸಿದಂತೆ ಒತ್ತಡಪೂರಿತ ಹಾಗೂ ಆತುರಗಳಿಂದ ಜೀವನದಲ್ಲಿ ಅದರಲ್ಲೂ ಕೌಟುಂಬಿಕ ಜೀವನದಲ್ಲಿ ಕೋಪ-ತಾಪಗಳು ಜಾಸ್ತಿ. ದಂಪತಿಗಳು ಸಮಾಧಾನದಿಂದ ಕೂತು ಅವನ್ನು ಪರಿಹರಿಸಬೇಕು. ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಬದಲಾಗಿ ತಾನೇ ಸರಿ, ನಾನು ಹೇಳಿದ್ದೆ ನಡೆಯಬೇಕು, ನಾನೇ ಮೇಲು ಎಂದು ಮುಂದುವರಿದರೆ ಸಂಸಾರದಲ್ಲಿನ ಸಾರ ಕಳೆಗುಂದುತ್ತದೆ. ಅತಿಯಾದರೆ ವಿಚ್ಛೇದನವೂ ನಡೆಯುತ್ತದೆ. ಹೀಗಾದಾಗ ಗಂಡ-ಹೆಂಡತಿಯ ಜಗಳದಲ್ಲಿ ಮಕ್ಕಳು ಬಳಲುವಂತಾಗುತ್ತದೆ.
ನಮ್ಮ ನಾಡಿನ ಮಹೋನ್ನತ ಸಂಸ್ಕೃತಿ ಸಂಪ್ರದಾಯಗಳು ಇಂದಿಗೂ ಉಳಿದುಕೊಂಡಿವೆ ಎಂದರೆ ಅದನ್ನು ನಾವು ಆಚರಿಸಿ, ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿರುವುದರಿಂದ. ನಮ್ಮ ಕೌಟುಂಬಿಕ ಪದ್ಧತಿಗಳು ಇಂದಿಗೂ ಗೌರವ, ಮಾನ್ಯತೆ ಹೊಂದಿರುವುದು ನಮ್ಮ ಸಂಬಂಧ, ಬಾಂಧವ್ಯಗಳ ಗಟ್ಟಿತನದಿಂದ. ಇದು ಎಂದೆಂದಿಗೂ ಗಟ್ಟಿಯಾಗಿರಲಿ ಎನ್ನುತ್ತಾ ನಮ್ಮೆಲ್ಲರ ರಕ್ತ ಸಂಬಂಧಗಳು, ಸ್ನೇಹ ಸಂಬಂಧಗಳು ಚಿರಕಾಲ ಉಳಿಯಲಿ. ಬೆಳೆಯಲಿ. ವಿಶ್ವದೆಲ್ಲೆಡೆ ಹಬ್ಬಲಿ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)