ಅಂಕಣ

ಮಳೆಯಂಗಳದಲ್ಲಿ ಅರಳುವ ಜೀವನ...

Webdesk - Ravikanth
ಬಾಲ್ಯದಲ್ಲಿ ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪದ್ಯವೊಂದು ನೆನಪಾಗುತ್ತಿದೆ. ‘ಬಾರೋ ಬಾರೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ, ಹುಯ್ಯೋ ಹುಯ್ಯೋ ಮಳೆರಾಯ ಬಾಳೆ ತೋಟಕೆ ನೀರಿಲ್ಲ’ ಎಂದು. ಮಕ್ಕಳು ಮಳೆ ಬರಲಿ, ಹೂವಿನ ತೋಟಕ್ಕೆ ನೀರು ಸಿಗಲೆಂದು ಆಶಿಸಿ ಹಾಡುತ್ತಿದ್ದರು. ಅಪ್ಪ-ಅಮ್ಮನ ಗದರುವಿಕೆಗೆ ಜಗ್ಗದೆ ಮಳೆಯಲ್ಲಿ ನೆನೆಯುತ್ತಾ ಆಟವಾಡುತ್ತಿದ್ದರು. ಶಾಲೆಗೆ ಹೋಗುವಾಗ, ಬರುವಾಗ ಮಳೆಯೊಡನೆ ನೀರಾಟವಾಡುವುದೆಂದರೆ ಮಕ್ಕಳಿಗೆ ಬಲು ಇಷ್ಟ. ನೋಟ್​ಪುಸ್ತಕದ ಹಾಳೆಯನ್ನು ಹರಿದು, ಪೇಪರ್ ದೋಣಿ ಮಾಡಿ ನೀರಲ್ಲಿ ಬಿಟ್ಟು ಕುಣಿಯುವ ಕಾಲ ಬಲು ಸೊಗಸಾಗಿತ್ತು. ಶಾಲೆಯಲ್ಲಿ ಆಟದ ಸಮಯದಲ್ಲಿ ಮಳೆ ಸುರಿದರೆ ಮಕ್ಕಳೆಲ್ಲ ಜೋರಾಗಿ Rain, rain, go away, Come again some other day We want to go outside and play Come, again some other day ಎಂದು ಹಾಡುತ್ತಿದ್ದರು. ಇತ್ತೀಚೆಗೆ ಅತಿ ಮಳೆ ಕಾರಣದಿಂದ ಮುಂಜಾಗ್ರತೆ ದೃಷ್ಟಿಯಿಂದ ಶಾಲಾ-ಕಾಲೇಜಿಗೆ ರಜೆ ಕೊಡುತ್ತಾರೆ. ಈ ಬಗ್ಗೆ ನಮ್ಮ ಸ್ನೇಹಿತರೊಬ್ಬರು ಮಾತನಾಡುತ್ತಾ- ‘ಮಳೆ ಬಂತೆಂದು ಶಾಲೆಗೆ ರಜೆ ಕೊಟ್ಟಿದ್ದಾರೆ. ಆದರೆ, ನಾಳೆ ಮಳೆ ಬರುವುದೇ ಇಲ್ಲ ಎನ್ನುತ್ತಿದ್ದರು. ಯಾಕಾಗಿರಬಹುದು ಎಂದು ಅವರನ್ನೇ ಕೇಳಿದಾಗ ನಾಳೆ ರಜೆ ಎಂದು ಹಿಂದಿನ ದಿನವೇ ಶಾಲೆಗೆ ರಜೆ ಸಾರಿರುತ್ತಾರೆ. ಮಕ್ಕಳು ಮಳೆರಾಯ ನೀನು ಮಳೆ ಸುರಿಸಬೇಡ, ನಮಗೆ ಆಟ ಆಡಲು ಅವಕಾಶ ಮಾಡಿಕೊಡು. ನೀನು ಕೂಡ ರೆಸ್ಟ್ ಮಾಡಪ್ಪಾ ಎಂದು ಪ್ರಾರ್ಥಿಸುತ್ತಾರಂತೆ. ಅದಕ್ಕೆ ಅಸ್ತು ಎನ್ನುವ ಮಳೆರಾಯನೂ ರಜೆ ಪಡೆಯುತ್ತಾನಂತೆ.’ ಇದು ತಮಾಷೆಯ ಮಾತಾದರೂ ಮಕ್ಕಳಿಗೆ ರಜೆ ಕೊಟ್ಟ ಹೆಚ್ಚಿನ ದಿನಗಳಲ್ಲಿ ಮಳೆರಾಯನೂ ರಜೆ ಮಾಡುವುದಂತೂ ನಿಜ.

ಎರಡು ಮೂರು ದಶಕಗಳ ಹಿಂದೆ ಮಕ್ಕಳಾಗಿದ್ದವರು ಈಗ ಹೇಳುವುದುಂಟು. ನಮ್ಮ ಕಾಲದಲ್ಲೆಲ್ಲ ಎಷ್ಟು ಮಳೆ ಬಂದರೂ ಶಾಲೆಗೆ ಮಾತ್ರ ರಜಾ ಇರುತ್ತಿರಲಿಲ್ಲ. ಈಗಿನ ಮಕ್ಕಳಿಗೆ ಮಳೆಗಾಲ ಬಂತೆಂದರೆ ಸಾಕು ಸಾಲು-ಸಾಲು ರಜೆ ಸಿಗುತ್ತದೆ. ಎಷ್ಟು ಮಳೆ, ಗಾಳಿ ಬರಲಿ ಶಾಲೆ ನಿರಾತಂಕವಾಗಿ ನಡೆಯುತ್ತಿತ್ತು. ಆಗ ನಾವೆಲ್ಲ ಕೊಡೆ, ಗೊರಬು, ಕಂಬಳಿ ಹೊದ್ದುಕೊಂಡು ಶಾಲೆಗೆ ಹೋಗುತ್ತಿದ್ದೆವು. ಹಳ್ಳದಲ್ಲಿ ನೀರು ಯಾವಾಗ ತಗ್ಗುವುದೋ ಎಂದು ಕಾದು ಕುಳಿತು ಹೋದದ್ದಿದೆ. ಮಳೆ ನೆಪವೊಡ್ಡಿ ಶಾಲೆಗೆ ಹೋಗದೆ ಕುಳಿತರೂ ಮರುದಿನ ಶಾಲಾ ಮಾಸ್ತರರಿಂದ ಬೈಗುಳ, ಪೆಟ್ಟಿನ ರುಚಿ ಕಾಣಬೇಕಿತ್ತು. ಅಲ್ಲದೆ, ಬೇರೆಲ್ಲ ಮಕ್ಕಳಿಗೆ ಇಲ್ಲದ ಮಳೆ ನಿನಗೆ ಮಾತ್ರ ಹೇಗೆ ಸಮಸ್ಯೆಯಾಯಿತು ಎಂಬ ಪ್ರಶ್ನೆಯನ್ನು ಕೇಳಿ ಚಳಿ ಬಿಡಿಸುತ್ತಿದ್ದರು. ತೋಡುಗಳು ತುಂಬಿ ಹರಿದಾಗ ಧೈರ್ಯವಂತ ಮಕ್ಕಳು ಈಜಿಕೊಂಡೂ ಹೋಗಿದ್ದುಂಟು ಎಂದು ಅನೇಕರು ನೆನಪಿನ ಬುತ್ತಿ ಬಿಚ್ಚುತ್ತಾರೆ. ಮನೆಯಲ್ಲಿ ಮಳೆಯ ಕಾರಣದಿಂದ ಶಾಲೆಗೆ ತಪ್ಪಿಸಿ ಕುಳಿತರೆ ಅಪ್ಪನ ಅಥವಾ ಮಾವನ ಬೈಗುಳ, ಏಟು ಕಾದಿರುತ್ತಿತ್ತು. ಶಾಲೆಗೆಂದು ಹೋಗಿ ತಪ್ಪಿಸಿ ಕುಳಿತರೂ ಸರಿ ಮನೆಯಲ್ಲಿ ಇರುವಂತಿರಲಿಲ್ಲ.

ಮಳೆಬಂದಾಗ ಮನೆಯಲ್ಲಿ ಹಪ್ಪಳ, ಸಂಡಿಗೆ ತಿನ್ನುತ್ತಾ, ಅಡುಗೆ ಮನೆಯಲ್ಲಿ ಒಲೆಯ ಮುಂದೆ ಕೂತು ಚಳಿ ಕಾಯಿಸಿಕೊಳ್ಳುತ್ತಾ ಇದ್ದೆವು. ಗೇರು ಬೀಜ, ಹಲಸಿನ ಬೀಜಗಳನ್ನು ಕೆಂಡದಲ್ಲಿ ಸುಟ್ಟು ತಿನ್ನಲು ಬಹಳ ರುಚಿಯಾಗುತ್ತಿತ್ತು. ಅಮ್ಮ ಮಾಡಿಕೊಡುವ ವಿವಿಧ ಪತ್ರೊಡೆ, ಕಳಲೆ, ಹಲಸು ಮುಂತಾದವುಗಳ ಖಾದ್ಯಗಳನ್ನು ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಜೋರಾಗಿ ಮಳೆ ಸುರಿಯುವಾಗ ಅಜ್ಜ- ಅಜ್ಜಿಯಂದಿರಿಂದ ಕಥೆಗಳನ್ನು ಕೇಳುತ್ತಿದ್ದೆವು. ಗುಡುಗು ಸಿಡಿಲು ಬಂದರೆ ಅಮ್ಮನ ಬೆಂಬಿಡದೆ ಅವಳನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಿದ್ದೆವು. ಭಯಕ್ಕೆ ಹೆದರಿ ಮುಸುಕು ಹೊದ್ದುಕೊಂಡು ಮಲಗುತ್ತಿದ್ದೆವು ಎಂದು ಅನೇಕರು ನೆನಪಿಸಿಕೊಳ್ಳುತ್ತಾರೆ.

ಆ ಕಾಲದಲ್ಲಿ ಈಗಿನಷ್ಟು ಸೌಲಭ್ಯ, ಸೌಕರ್ಯಗಳಿರಲಿಲ್ಲ. ಊರಲ್ಲಿ ಕೆಲವು ಮನೆಗಳಲ್ಲಿ ಮಾತ್ರ ವಿದ್ಯುತ್ ಸಂಪರ್ಕವಿತ್ತು. ಮಳೆಗಾಲದಲ್ಲಿ ತಂತಿ ತುಂಡಾಗಿ ವಿದ್ಯುತ್ ಇರದಿರುವ ದಿನಗಳೇ ಹೆಚ್ಚು. ಮೂರು ನಾಲ್ಕು ಮನೆಗಷ್ಟೇ ಪೇಪರ್ ಬರುತ್ತಿತ್ತು. ಆಗೆಲ್ಲ ಎಷ್ಟು ಮಳೆ ಬಂತು, ಎಲ್ಲೆಲ್ಲಿ ಏನೇನು ಆಯಿತು ಎಂದು ತಿಳಿಯುತ್ತಿರಲಿಲ್ಲ. ಯಾಕೆಂದರೆ ಆಗ ಈಗಿನಂತೆ ಮಾಧ್ಯಮಗಳು ಬೆಳೆದಿರಲಿಲ್ಲ. ಪೇಪರ್ ಗಾಡಿ ತಡವಾಗಿ ಬಂದಾಗ ಓಹೋ, ಭಾರಿ ಮಳೆ ಬಂದಿರಬೇಕು ಎಂದು ಜನ ಊಹಿಸುತ್ತಿದ್ದರು. ಅಲ್ಲಿ ಮಳೆಗೆ ಮರಗಳು ಧರೆಗುರುಳಿವೆ. ತೋಡು ಕೊಚ್ಚಿ ಹೋಗಿದೆ, ಗದ್ದೆ ಮುಳುಗಿದೆ ಎನ್ನುವುದು ಯಾರಾದರೊಬ್ಬರು ಹೇಳಿಕೊಂಡು ಬಂದಾಗ ಅರಿವಿಗೆ ಬಂದು ಓಹ್ ಹೌದಾ ಅಷ್ಟೆಲ್ಲ ದುರಂತ ಸಂಭವಿಸಿತ್ತಾ ಎಂದು ಹುಬ್ಬೇರಿಸುತ್ತಿದ್ದೆವು. ಈಗ ತಂತ್ರಜ್ಞಾನ, ಮಾಧ್ಯಮಗಳಿಂದಾಗಿ ಕ್ಷಣಮಾತ್ರದಲ್ಲಿ ಎಲ್ಲೆಲ್ಲಿ ಏನಾಯಿತೆಂಬ ಸುದ್ದಿಗಳು ದೊರೆಯುತ್ತವೆ. ಇದರಿಂದ ಪರಿಹಾರ ಕ್ರಮ ಕೈಗೊಳ್ಳಲು ಸಹಕಾರಿಯಾಗುವುದರ ಜೊತೆಗೆ ಮುನ್ನೆಚ್ಚರಿಕೆ ವಹಿಸಲೂ ಅನುಕೂಲವಾಗುತ್ತದೆ. ಉದಾಹರಣೆಗೆ ಮುಖ್ಯ ರಸ್ತೆಯಲ್ಲಿ ಮರ ಬಿದ್ದು ಅಥವಾ ಸೇತುವೆ ಹಾನಿಗೀಡಾಗಿ ಸಂಪರ್ಕ ಕಡಿತಗೊಂಡಿದ್ದರೆ ಬದಲಿ ರಸ್ತೆ ಉಪಯೋಗಿಸಿ ಹೋಗಲು ತಿಳಿಸುವ ಸುದ್ದಿಗಳಿಂದ ಜನರಿಗೆ ಪ್ರಯೋಜನವಾಗುತ್ತೆ. ಮಳೆಗಾಲ ಎಂದರೆ ಹಿಂದಿನ ಕಾಲದಲ್ಲಿ ಸಂಭ್ರಮವಿತ್ತು. ಆದರೆ, ಇದೀಗ ಮಳೆಗಾಲ ಬಂತೆಂದರೆ ಭಯದಲ್ಲಿ ದಿನ ದೂಡುವಂಥ ಸ್ಥಿತಿ ಎದುರಾಗಿದೆ. ಇದಕ್ಕೆಲ್ಲ ಏನು ಕಾರಣ ಎನ್ನುವುದನ್ನು ಅವಲೋಕಿಸಬೇಕಿದೆ.

ಮಲೆನಾಡಿನಲ್ಲಿ ಮಳೆ ಜಾಸ್ತಿ. ಹಿಂದಿನಷ್ಟೇ ಪ್ರಮಾಣದಲ್ಲಿ ಈಗಲೂ ಮಳೆ ಬರುತ್ತಿದೆ. ಆದರೆ, ಪರಿಣಾಮಗಳು ಮಾತ್ರ ವ್ಯತಿರಿಕ್ತವಾಗಿವೆ. ಹಿಂದೆಲ್ಲ ಸಾಕಷ್ಟು ಮರಗಳಿದ್ದ ಕಾರಣ ಮಳೆನೀರನ್ನು ಅಲ್ಲಲ್ಲಿ ತಡೆದು ಅದರ ವೇಗವನ್ನು ಕಡಿಮೆಗೊಳಿಸುತ್ತಿತ್ತು, ಅಲ್ಲದೆ, ಅಲ್ಲೇ ಇಂಗಿಸಿಕೊಳ್ಳುತ್ತಿತ್ತು. ನೀರು ಸರಾಗವಾಗಿ ಹರಿಯುತ್ತಿತ್ತು. ಕೆರೆಗಳು ಬಹುತೇಕ ಪ್ರಮಾಣದಲ್ಲಿ ಮಳೆ ನೀರನ್ನು ಸಂಗ್ರಹಿಸಿಕೊಳ್ಳುತ್ತಿದ್ದವು. ಗದ್ದೆಗಳಲ್ಲಿ ನೀರಿನಿಂದ ತುಂಬಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತಿತ್ತು. ರಾಜಕಾಲುವೆ, ತೋಡುಗಳು, ಚರಂಡಿಗಳಲ್ಲೆಲ್ಲ ಸರಾಗವಾಗಿ ಮಳೆ ನೀರು ಹರಿದು ಹೋಗುತ್ತಿತ್ತು. ಆದರೆ, ಇತ್ತೀಚೆಗೆ ಮಳೆಗಾಲದ ಸಮಯದಲ್ಲಿ ಅನೇಕ ಅವಾಂತರಗಳು ಸೃಷ್ಟಿಯಾಗುತ್ತಿವೆ. ಗುಡ್ಡ ಕುಸಿಯುವುದು, ಮಳೆಗಳಿಗೆ ನೀರು ನುಗ್ಗುವುದು, ಕೃತಕ ನೆರೆ ಜತೆಗೆ, ಪ್ರಾಣಹಾನಿಯಾಗುವುದನ್ನೂ ಕಾಣುತ್ತಿದ್ದೇವೆ. ಇವುಗಳಿಗೆಲ್ಲ ಕಾರಣ ಅಪಾರ ಪ್ರಮಾಣದ ಕಾಡುಗಳ ನಾಶದಿಂದ ಉಂಟಾದ ಪ್ರಾಕೃತಿಕ ವೈಪರೀತ್ಯ. ಹಲವು ಕೆರೆಗಳು ಒತ್ತುವರಿಯಾಗಿ. ಕಟ್ಟಡ, ಮನೆ ನಿರ್ವಣಗೊಂಡಿವೆ. ಇರುವ ಕೆರೆಗಳೂ ಹೂಳಿನಿಂದ ತುಂಬಿ ನೀರು ಸಂಗ್ರಹಿಸುವ ಸಾಮರ್ಥ್ಯ ಕಳೆದುಕೊಂಡಿವೆ. ನದಿಗಳೂ ಪಥವನ್ನು ಬದಲಿಸಿಕೊಂಡು ಸಿಕ್ಕಸಿಕ್ಕಲ್ಲಿ ರಭಸವಾಗಿ ಹರಿಯುತ್ತಿವೆ. ಬೆಟ್ಟಗುಡ್ಡಗಳನ್ನು ಕಡಿದು ನೆಲಸಮ ಮಾಡಿ ಬಡಾವಣೆಗಳನ್ನು ನಿರ್ವಿುಸುವುದರಿಂದ ಪ್ರಾಕೃತಿಕ ಅಸಮತೋಲನ ಹೆಚ್ಚಾಗುತ್ತಿದೆ. ಜೊತೆಗೆ ಜನವಸತಿ ಪ್ರದೇಶಗಳಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕವಾಗಿ ಸ್ಥಳಾವಕಾಶ, ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೃತಕ ನೆರೆ ಆವರಿಸಿ ಮನೆಗಳು ಮುಳುಗಡೆಯಾಗುತ್ತಿವೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿಂದೆ ಬಿದ್ದಿದ್ದೇವೆ.

ಇಂದಿನ ದಿನಗಳಲ್ಲಿ ಸುರಿಯುವುದಕ್ಕಿಂತ ಹೆಚ್ಚಿನ ಮಳೆ ಕಳೆದ ಎರಡು ಮೂರು ದಶಕಗಳಲ್ಲಿ ಮತ್ತು ಮುಂಚೆ ಸುರಿಯುತ್ತಿತ್ತು ಎಂದು ಹಿರಿಯರು ತಿಳಿಸುತ್ತಾರೆ. ಈಗ ಸ್ವಲ್ಪ ಮಳೆ ಬಂದರೂ ಸಾಕಷ್ಟು ಮಳೆ ಎಂದು ಭಾವಿಸುತ್ತೇವೆ. ಬೆಂಗಳೂರಿನಂತಹ ದೊಡ್ಡ ಪಟ್ಟಣಗಳಲ್ಲಿ ಒಂದಿಪ್ಪತ್ತು ನಿಮಿಷ ಮಳೆ ಬಂದರೂ ರಸ್ತೆಯಲ್ಲೆಲ್ಲಾ ಮೊಣಕಾಲಿನಷ್ಟು ನೀರು ತುಂಬಿರುತ್ತದೆ, ಸಂಚಾರ ವ್ಯವಸ್ಥೆಗಳೆಲ್ಲ ಅಸ್ತವ್ಯಸ್ತವಾಗುತ್ತದೆ. ಮಲೇರಿಯಾ, ಡೆಂಘ ಇತ್ಯಾದಿ ಸಾಂಕ್ರಾಮಿಕ ರೋಗಗಳು ಮಳೆಗಾಲದಲ್ಲಿ ಜನರನ್ನು ಹೆಚ್ಚಾಗಿ ಬಾಧಿಸುತ್ತವೆ.

‘ಅಲ್ಲಿ ನೋಡಿ ಆ ಸೇತುವೆಯ ಆ ತುದಿಯಲ್ಲಿ ಮಳೆ ಸುರಿಯುತ್ತಿದೆ, ಇಲ್ಲಿ ಗಾಢ ಬಿಸಿಲಿದೆ. ಎಂತಹ ಕಾಲವಪ್ಪ’ ಎಂದು ಹೇಳುವುದನ್ನು ಕೇಳಿದ್ದೇವೆ. ಕೆಲವೆಡೆ ರಣ ಭಯಂಕರ ಮಳೆ, ಕೆಲವೆಡೆ ರಣ ಬಿಸಿಲು. ಇದು ನಿಜಕ್ಕೂ ಪ್ರಕೃತಿಯ ಸೋಜಿಗ. ನಾಲ್ಕೈದು ವರ್ಷದಿಂದೀಚೆಗೆ ನೆರೆಯ ಕೇರಳ, ಮಾತ್ರವಲ್ಲದೆ ನಮ್ಮ ಮಡಿಕೇರಿ-ಕೊಡಗು ಚಾರ್ವಡಿಯ ತಪ್ಪಲು, ಸುಳ್ಯದಲ್ಲಿ ಗುಡ್ಡ ಕುಸಿದು ಆಸ್ತಿ-ಪಾಸ್ತಿಯಲ್ಲದೆ ಜೀವಹಾನಿಯೂ ಸಂಭವಿಸಿದೆ. ಅಲ್ಲದೆ, ಸುಳ್ಯ-ಮಡಿಕೇರಿ ಭಾಗಗಳಲ್ಲಿ ಭೂಕಂಪದ ಅನುಭವವೂ ಆಗಿದೆ. ಮಳೆಗಾಲದ ಅನಾಹುತಗಳಿಗೆ ಜನರು ಕಂಗೆಟ್ಟಿದ್ದಾರೆ. ದುರಂತ ನಡೆದಾಗ ತಾತ್ಕಾಲಿಕ ಪರಿಹಾರ, ಧನಸಹಾಯ ನೀಡಿದರೂ ಇಂತಹ ವಿಕೋಪಗಳು ಮರುಕಳಿಸದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಗಮನಹರಿಸಬೇಕು.

ಇವೆಲ್ಲ ಸಂದರ್ಭದ ದುಸ್ಥಿತಿಗಳಾದರೆ ಬೇಸಿಗೆ ಕಾಲದಲ್ಲಿ ಉಂಟಾಗುವ ಸಮಸ್ಯೆ ಅನೇಕ ಇದೆ. ಬಿರುಬಿಸಿಲಿನಿಂದ ನದಿ, ಕೆರೆಗಳೆಲ್ಲ ಬತ್ತಿ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತದೆ. ಕಿಲೋಮೀಟರ್​ಗಟ್ಟಲೆ ದೂರದಿಂದ ಕುಡಿಯುವ ನೀರು ಹೊತ್ತು ತರುವ ಸಂಕಷ್ಟ ಹಳ್ಳಿಗಳಲ್ಲಿ ಎದುರಾಗುತ್ತದೆ. ಪಶುಗಳಲ್ಲದೆ ಮನುಷ್ಯರು ಕೂಡ ಬಿಸಿಲಿನ ಝುಳಕ್ಕೆ ಅಸುನೀಗಿದ್ದೂ ಉಂಟು. ತೀವ್ರತರವಾದ ಬಿಸಿಲಿನಿಂದ ಬೆಳೆಗಳೆಲ್ಲ ಕರಟಿ ಹೋಗಿ ದವಸ ಧಾನ್ಯಗಳು ಕೈಗೆಟುಕದೆ ಹೋಗುತ್ತವೆ. ಕೆಲವೊಮ್ಮೆ ತಾಪಮಾನ ಕುಸಿದು ಬೇಸಿಗೆಯಲ್ಲಿ ಚಳಿಗಾಲದ ಅನುಭವವಾಗಿದ್ದೂ ಇದೆ. ಉತ್ತರ ಭಾರತದ ಕೆಲವು ಕಡೆ ಬಿಸಿಗಾಳಿ ಬೀಸಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ನಿರಂತರವಾಗಿ ಬೃಹದಾಕಾರದಲ್ಲಿ ನಡೆಯುತ್ತಿರುವ ನಗರೀಕರಣ, ಜಲಮೂಲಗಳ ಒತ್ತುವರಿ ಮತ್ತು ಅರಣ್ಯ ನಾಶ, ಮಾಲಿನ್ಯ ಹೆಚ್ಚಳ, ಕೈಗಾರೀಕರಣ ಸೇರಿದಂತೆ ಹಲವಾರು ಕಾರಣದಿಂದ ಹವಾಮಾನ ವೈಪರೀತ್ಯವನ್ನು ಎದುರಿಸಬೇಕಾಗಿದೆ. ನಮ್ಮನ್ನು ಸಲಹುವ ಪ್ರಕೃತಿಯನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿ ಉಳಿಸಿ-ಬೆಳೆಸಿಕೊಂಡು ಬಂದರೆ ನಾವು ಉಳಿಯಬಹುದು. ಅತಿ ಆಸೆಗೆ ಬಲಿಯಾಗಿ ಪ್ರಕೃತಿಯನ್ನು ಶೋಷಿಸಿದರೆ ಪ್ರಕೃತಿಯೇ ನಮ್ಮನ್ನು ಆಪೋಶನ ತೆಗೆದುಕೊಳ್ಳಲೂ ಬಹುದು. ಈ ಬಗ್ಗೆ ಎಚ್ಚರ ವಹಿಸಿದರೆ ಸ್ವಚ್ಛ ಗಾಳಿ, ನೀರು ಇರುವ ಉತ್ತಮ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬಹುದು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)