ದೇಶಾದ್ಯಂತ ಹಲವು ಬ್ಯಾಂಕುಗಳ ‘ಅನಾರೋಗ್ಯ’ ಇತ್ತೀಚೆಗೆ ಗ್ರಾಹಕರನ್ನು ಅದರಲ್ಲೂ ವಿಶೇಷವಾಗಿ ಠೇವಣಿದಾರರನ್ನು ಚಿಂತೆಗೀಡು ಮಾಡಿದೆ. ಬ್ಯಾಂಕ್ ದಿವಾಳಿ ಎದ್ದ ಸಂದರ್ಭದಲ್ಲೂ ಗ್ರಾಹಕರ ಮತ್ತು ಠೇವಣಿದಾರರ ಹಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಭಾಗಶಃ ಖಾತ್ರಿ ನೀಡುತ್ತದೆ, ನಿಜ. ಆದರೆ ಈ ವಿಷಯದಲ್ಲಿ ಗ್ರಾಹಕರು ವಹಿಸಬೇಕಾದ ಮುನ್ನೆಚ್ಚರಿಕೆಗಳೂ ಸಾಕಷ್ಟಿವೆ.
ಆದಾಯಕ್ಕಿಂತ ಖರ್ಚೇ ಹೆಚ್ಚಾಗಿರುವ ಈಗಿನ ದಿನಮಾನಗಳಲ್ಲಿ ಜನ ಕಷ್ಟಪಟ್ಟು ಅಷ್ಟಿಷ್ಟು ಹಣ ಉಳಿಸುತ್ತಾರೆ. ಅದನ್ನು ಮನೆಯಲ್ಲಿಡುವುದು ಅಥವಾ ಅಂತಿಂಥ ಯೋಜನೆಗಳಲ್ಲಿ ತೊಡಗಿಸುವುದು ಸೇಫಲ್ಲ ಎಂದುಕೊಂಡು ಬ್ಯಾಂಕ್ನಲ್ಲಿ ಠೇವಣಿ ಇಡುತ್ತಾರೆ. ಇದು ಬ್ಯಾಂಕುಗಳ ಮೇಲೆ ಜನರಿಗೆ ಅಷ್ಟೊಂದು ವಿಶ್ವಾಸ ಇದೆ ಎಂಬುದನ್ನು ತೋರಿಸುತ್ತದೆ.
ಕಳೆದ ವರ್ಷದ ಸೆಪ್ಟೆಂಬರ್ ಅಂತ್ಯದವರೆಗಿನ ಅಂಕಿ ಅಂಶಗಳ ಪ್ರಕಾರ, ಭಾರತದ ವಾಣಿಜ್ಯ ಬ್ಯಾಂಕ್ಗಳಲ್ಲಿರುವ ಠೇವಣಿಯ ಒಟ್ಟು ಮೊತ್ತ ಸುಮಾರು ರೂ. 130 ಲಕ್ಷ ಕೋಟಿ. ಈ ಪೈಕಿ ರೂ. 81 ಲಕ್ಷ ಕೋಟಿ (ಶೇಕಡ 62ರಷ್ಟು ಹಣ) ಇರೋದು ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ. ಅದರಲ್ಲೂ ಸಣ್ಣ ಪಟ್ಟಣಗಳು, ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೇ ಠೇವಣಿ ಇಡುವವರ ಸಂಖ್ಯೆ ಹೆಚ್ಚು.
ಆದರೆ ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕುಗಳಲ್ಲಿ ಠೇವಣಿ ಇಡುವವರ ವಿಶ್ವಾಸವನ್ನು ಕುಗ್ಗಿಸುವಂತಹ ಘಟನೆಗಳು ನಡೆದಿವೆ. ಕೆಲವೇ ತಿಂಗಳುಗಳ ಹಿಂದೆ ಪಂಜಾಬ್-ಮಹಾರಾಷ್ಟ್ರ ಸಹಕಾರ ಬ್ಯಾಂಕ್ (ಪಿಎಂಸಿ) ನಿಂದ ಹಣ ಡ್ರಾ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಕೆಲವು ನಿರ್ಬಂಧಗಳನ್ನು ಹೇರಿತ್ತು. ಅದು ಗ್ರಾಹಕವಲಯದಲ್ಲಿ ಸಾಕಷ್ಟು ತಲ್ಲಣ ಉಂಟು ಮಾಡಿ, ಪ್ರತಿಭಟನೆಗಳೂ ನಡೆದಿದ್ದವು. ಆ ಪ್ರಕರಣವೀಗ ಹೈಕೋರ್ಟ್ ಮೆಟ್ಟಿಲೇರಿದೆ. ವಿಚಾರಣೆ ನಡೆಯುತ್ತಿದೆ. ಅದೇ ರೀತಿ, ಇತ್ತೀಚೆಗೆ ಬೆಂಗಳೂರಿನ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಿಂದ ಹಣ ಡ್ರಾ ಮಾಡುವುದಕ್ಕೂ ರಿಸರ್ವ್ ಬ್ಯಾಂಕ್ ನಿರ್ಬಂಧ ವಿಧಿಸಿ ಗ್ರಾಹಕರಲ್ಲಿ ತಲ್ಲಣ ಉಂಟಾಗಿತ್ತು.
ನಂತರ ಗ್ರಾಹಕರು ಕಳವಳಕ್ಕೀಡಾಗಿ ಬ್ಯಾಂಕಿನ ಶಾಖೆಗಳ ಮುಂದೆ ಪ್ರತಿಭಟನೆ ನಡೆಸುತ್ತಿರುವುದು, ಘೊಷಣೆಗಳನ್ನು ಕೂಗುತ್ತಿರುವುದು ಇಂತಹ ವಿಡಿಯೋಗಳು ಹರಿದಾಡತೊಡಗಿದವು. ಅದರಲ್ಲಿ ಒಬ್ಬ ಮಹಿಳಾ ಗ್ರಾಹಕರಂತೂ ತಮ್ಮ ಇಡೀ ಜೀವಿತಾವಧಿಯ ಉಳಿತಾಯದ ಹಣವನ್ನು ಕಳೆದುಕೊಂಡೆನೆಂದು ಕಣ್ಣೀರಿಡುತ್ತಿರುವ ದೃಶ್ಯವೂ ಇತ್ತು. ಇನ್ನೊಬ್ಬ ಗ್ರಾಹಕರು ತಮ್ಮ ಮಗಳ ಮದುವೆಗಾಗಿ ಕೂಡಿಟ್ಟಿದ್ದ ಲಕ್ಷಾಂತರ ರೂ. ಕೊಚ್ಚಿಕೊಂಡು ಹೋಯಿತು ಎಂದು ಪರಿತಪಿಸುತ್ತಿದ್ದ ವಿಡಿಯೋ ಕೂಡ ಇತ್ತು. ಅಷ್ಟೇ ಅಲ್ಲ, ಒಬ್ಬ ಹಿರಿಯ ನಾಗರಿಕರು ತಮ್ಮ ಬ್ಯಾಂಕಿಗೆ ಈ ಗತಿಯಾಯಿತೆಂದು ಚಿಂತೆಗೀಡಾಗಿ ಹೃದಯಾಘಾತದಿಂದ ಮೃತಪಟ್ಟರೆಂಬ ಸುದ್ದಿಯೂ ವೈರಲ್ ಆಯಿತು. ಸಾಮಾಜಿಕ ಜಾಲತಾಣಗಳಿಗೆ ದೇಶ-ಭಾಷೆಯ ಗಡಿ ಇಲ್ಲದ ಕಾರಣ ಈ ಸುಳ್ಳುಸುದ್ದಿಗಳೆಲ್ಲ ಬಹುಬೇಗನೆ ದೇಶಾದ್ಯಂತ ಪಸರಿಸಿಬಿಟ್ಟವು.
ಆರ್ಬಿಐ ವಿಧಿಸುವ ಈ ರೀತಿಯ ನಿರ್ಬಂಧದಿಂದ ತಾತ್ಕಾಲಿಕವಾಗಿ ಮಾತ್ರ ಹಣ ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಅರಿವು ಗ್ರಾಹಕರಿಗೆ ಇರಬೇಕು. ಎಲ್ಲ ಹಣ ಒಮ್ಮೆಲೇ ಮುಳುಗಿಹೋಯಿತು ಎಂಬ ರೀತಿಯಲ್ಲಿ ಸಂದೇಶಗಳನ್ನು ಹರಿಯಬಿಡತೊಡಗಿದರೆ ಇತರ ಗ್ರಾಹಕರೂ ಕಳವಳಕ್ಕೀಡಾಗುತ್ತಾರೆ. ತಕ್ಷಣಕ್ಕೆ ಹಣದ ಅವಶ್ಯಕತೆ ಇಲ್ಲದವರೂ ಹಣ ಹಿಂತೆಗೆದುಕೊಳ್ಳಲು ಬ್ಯಾಂಕಿನ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಮೊದಲೇ ಕಷ್ಟದಲ್ಲಿರುವ ಬ್ಯಾಂಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ.
ಈ ಅನಗತ್ಯ ಗೊಂದಲಕ್ಕೆ ಗ್ರಾಹಕರೇ ಕಾರಣರಾದಂತಲ್ಲವೇ? ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಬೇರೆ ಮಾಧ್ಯಮಗಳ ಮೂಲಕ ಸಂದೇಶಗಳನ್ನು ಫಾರ್ವರ್ಡ್ ಮಾಡುವಾಗ ಗ್ರಾಹಕರೇ ಸಂಯಮ ವಹಿಸುವುದು ಸೂಕ್ತ. ತಮ್ಮ ಠೇವಣಿಗಳ ಭವಿಷ್ಯದ ಕುರಿತು ಗ್ರಾಹಕರು ಕಳವಳಕ್ಕೀಡಾಗಲು ಇತ್ತೀಚಿನ ದಿನಗಳಲ್ಲಿ ಇನ್ನೊಂದು ಕಾರಣ ಉದ್ಭವಿಸಿದೆ. ದೊಡ್ಡ ಪ್ರಮಾಣದ ಸಾಲಗಳು ಮರುಪಾವತಿಯಾಗದೇ ಇರುವುದು ಮಾಧ್ಯಮಗಳಲ್ಲಿ ಪದೇಪದೆ ವರದಿಯಾಗುತ್ತಿರುವುದರಿಂದ ಇಡೀ ಬ್ಯಾಂಕಿಂಗ್ ವಲಯವೇ ತೊಂದರೆಯಲ್ಲಿದೆ ಎಂಬ ಗುಮಾನಿ ಗ್ರಾಹಕರಲ್ಲಿ ಬೆಳೆಯುತ್ತಿದೆ.
ಅದು ಭಾಗಶಃ ನಿಜವೂ ಹೌದು. ಬ್ಯಾಂಕುಗಳು ನೀಡಿದ ಸಾಲಗಳು ಮರುಪಾವತಿಯಾಗದಿರುವುದು ಈಗ ಗುಟ್ಟಾಗಿ ಉಳಿದಿಲ್ಲ. 90 ದಿನಗಳಿಗಿಂತ ಹೆಚ್ಚು ಕಾಲ ಮರುಪಾವತಿ ಆಗದೇ ಇರುವ ಸಾಲಗಳನ್ನು ನಾನ್ಪರ್ಫಾರ್ವಿುಂಗ್ ಅಸೆಟ್ (ಎನ್ಪಿಎ) ಅಥವಾ ಬ್ಯಾಡ್ ಲೋನ್ ಎಂದು ಬ್ಯಾಂಕುಗಳು ಪರಿಗಣಿಸುತ್ತವೆ. ಅಂತಹ ಬ್ಯಾಡ್ಲೋನ್ಗಳ ಪ್ರಮಾಣ, 2018ರ ಮಾರ್ಚ್ ಅಂತ್ಯದವರೆಗಿನ ಅಂಕಿ ಅಂಶಗಳ ಪ್ರಕಾರ, ಸುಮಾರು 9 ಲಕ್ಷ ಕೋಟಿ ರೂ. ಇತ್ತು. 2019ರ ಸೆಪ್ಟೆಂಬರ್ವರೆಗೆ ಅದರ ಪ್ರಮಾಣ ಸುಮಾರು ಏಳೂವರೆ ಲಕ್ಷ ಕೋಟಿ ರೂ.ಗೆ ಇಳಿದಿರುವುದು ಸ್ವಲ್ಪ ಸಮಾಧಾನ ತರುವ ಸಂಗತಿ.
2017ರ ಆಗಸ್ಟ್ನಲ್ಲಿ ಕೇಂದ್ರ ಸರ್ಕಾರ ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ (ಎಫ್ಆರ್ಡಿಐ) ವಿಧೇಯಕ ಮಂಡಿಸಿತು. ನಂತರ ಅದನ್ನು ಚರ್ಚೆಗಾಗಿ ರಾಜ್ಯಸಭೆ ಮತ್ತು ಲೋಕಸಭೆಯ ಆಯ್ದ ಸದಸ್ಯರಿರುವ ಜಂಟಿ ಸಮಿತಿಗೆ ಕಳಿಸಲಾಯಿತು. ಅದಾಗಿ ಒಂದು ವರ್ಷದ ನಂತರ, 2018ರ ಆಗಸ್ಟ್ನಲ್ಲಿ ಸದ್ದಿಲ್ಲದೆ ಆ ವಿಧೇಯಕವನ್ನು ಕೈಬಿಡಲಾಯಿತು. ಅದರಲ್ಲಿದ್ದ ‘ಬೇಲ್-ಇನ್’ ಷರತ್ತಿನ ಕುರಿತು ದೇಶಾದ್ಯಂತ ವ್ಯಾಪಕ ವಿರೋಧ ಹಬ್ಬಿದ್ದು ಇದಕ್ಕೆ ಕಾರಣ.
ಪರಿಹಾರ ನಿಗಮ (ರೆಸಲೂಷನ್ ಕಾರ್ಪೆರೇಷನ್) ಸ್ಥಾಪಿಸುವುದು ಎಫ್ಆರ್ಡಿಐ ವಿಧೇಯಕದ ಪ್ರಮುಖ ಅಂಶವಾಗಿತ್ತು. ಬ್ಯಾಂಕ್ಗಳು, ವಿಮಾ ಕಂಪನಿಗಳು, ಮ್ಯೂಚುವಲ್ ಫಂಡ್ಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಮುಂತಾದವುಗಳ ಆರ್ಥಿಕ ಪರಿಸ್ಥಿತಿ ಮತ್ತು ಕಾರ್ಯನಿರ್ವಹಣೆ ಮೇಲೆ ನಿಗಾ ಇಡಲು ಈ ನಿಗಮವನ್ನು ಸ್ಥಾಪಿಸಲಾಗುತ್ತಿತ್ತು. ಈ ಸಂಸ್ಥೆಗಳು ತಪ್ಪು ಮಾಡಿದರೆ, ಗ್ರಾಹಕರ ಹಿತಕ್ಕೆ ಧಕ್ಕೆ ಉಂಟಾಗುವಂತೆ ನಡೆದುಕೊಂಡರೆ ಆಗ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಈ ನಿಗಮಕ್ಕೆ ಅಧಿಕಾರ ಕಲ್ಪಿಸಲಾಗಿತ್ತು. ಆದರೆ ಅದು ಸಾಕಾರವಾಗಲಿಲ್ಲ.
ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕುಗಳನ್ನು ಸರ್ಕಾರ ಸಾಕಷ್ಟು ಸಲ ರಕ್ಷಣೆ ಮಾಡಿದೆ. 2017ರ ಏಪ್ರಿಲ್ನಿಂದ ಈವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸರ್ಕಾರ ಹೂಡಿರುವ ಹಣ ಎರಡೂವರೆ ಲಕ್ಷ ಕೋಟಿ ರೂ.ಗಿಂತ ಹೆಚ್ಚು. ಮರುಪಾವತಿಯಾಗದ ಸಾಲಗಳಿಂದಾಗಿ ಈ ಬ್ಯಾಂಕುಗಳು ಭಾರಿ ನಷ್ಟದಲ್ಲಿದ್ದವು. ಮೂಲಬಂಡವಾಳವೇ ಕೊಚ್ಚಿಕೊಂಡು ಹೋಗಿತ್ತು. ಅವುಗಳ ಜೀವ ಉಳಿಸಲು ಅನಿವಾರ್ಯವಾಗಿ ಸರ್ಕಾರ ಮಧ್ಯಪ್ರವೇಶಿಸಬೇಕಾಯಿತು. ಇದಕ್ಕೆ ಬೇಲ್ಔಟ್ ಎನ್ನುತ್ತಾರೆ.
ಬೇಲ್ಇನ್ ಎನ್ನುವುದು ಇದಕ್ಕೆ ವಿರುದ್ಧವಾದದ್ದು. ಇದರಲ್ಲಿ ಬ್ಯಾಂಕಿನ ‘ಹೊರೆ’ಯನ್ನು ಕಡಿಮೆ ಮಾಡಲಾಗುತ್ತದೆ. ಬ್ಯಾಂಕುಗಳ ದೃಷ್ಟಿಯಲ್ಲಿ ‘ಹೊರೆ’ ಎಂದರೆ ಜನರು ಇಟ್ಟಿರುವ ಠೇವಣಿ. ಅದನ್ನು ನಿರ್ದಿಷ್ಟ ಅವಧಿಯಲ್ಲಿ ಪೂರ್ತಿಯಾಗಿ ವಾಪಸ್ ಕೊಡಬೇಕಲ್ಲದೆ, ನಿಯಮಿತವಾಗಿ ಬಡ್ಡಿ ಪಾವತಿಸಬೇಕು. ಈ ‘ಹೊರೆ’ಯನ್ನು ರದ್ದುಪಡಿಸಲು ಅಥವಾ ಮಾರ್ಪಡಿಸಲು ಎಫ್ಆರ್ಡಿಐ ವಿಧೇಯಕದಲ್ಲಿ ಪರಿಹಾರ ನಿಗಮಕ್ಕೆ ಅಧಿಕಾರ ನೀಡಲಾಗಿತ್ತು. ಅದರ ಅರ್ಥ, ಯಾವುದೇ ರೂಪದ ಠೇವಣಿಯನ್ನು ಗ್ರಾಹಕರಿಗೆ ವಾಪಸ್ ನೀಡದೇ ಇರಲು ಅಥವಾ ಸ್ವಲ್ಪ ಭಾಗವನ್ನು ಮಾತ್ರ ವಾಪಸ್ ನೀಡಲು ಸಾಧ್ಯವಿತ್ತು!
ಠೇವಣಿಯನ್ನು ದೀರ್ಘಾವಧಿ ಬಾಂಡ್ಗಳನ್ನಾಗಿ, ಈಕ್ವಿಟಿಯಾಗಿ ಪರಿವರ್ತಿಸಲೂ ಅವಕಾಶವಿತ್ತು. ಉದಾಹರಣೆಗೆ, ನೀವು 2.5 ಲಕ್ಷ ರೂ. ಠೇವಣಿ ಇಟ್ಟಿದ್ದೀರಿ ಎಂದಿಟ್ಟುಕೊಳ್ಳಿ. ಅದರಲ್ಲಿ 1 ಲಕ್ಷ ರೂ.ಗೆ ಮಾತ್ರ ಠೇವಣಿ ವಿಮೆ ಮತ್ತು ಸಾಲ ಖಾತ್ರಿ ನಿಗಮದ ಗ್ಯಾರಂಟಿ ಇರುತ್ತದೆ. ಬ್ಯಾಂಕು ತೊಂದರೆಗೆ ಒಳಗಾಯಿತೆಂದರೆ ಪರಿಹಾರ ನಿಗಮ ನಿಮ್ಮ 1.5 ಲಕ್ಷ ರೂ. ಮರುಪಾವತಿಯನ್ನು ರದ್ದುಪಡಿಸಬಹುದು; ಇಲ್ಲವೆ 1.5 ಲಕ್ಷ ರೂ.ಗಳನ್ನು ಬ್ಯಾಂಕಿನ ದೀರ್ಘಾವಧಿ ಬಾಂಡ್ ಆಗಿ ಪರಿವರ್ತಿಸಬಹುದು. ನಿಮ್ಮ ಬೇಕು-ಬೇಡಗಳು ಇಲ್ಲಿ ಲೆಕ್ಕಕ್ಕೇ ಬರುವುದಿಲ್ಲ. ಹಾಗಾಗಿಯೇ ಇದು ಜನರ ತೀವ್ರ ವಿರೋಧವನ್ನು ಎದುರಿಸಬೇಕಾಯಿತು.
ಇಂತಹ ವಿಧೇಯಕ ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ರೂಪದಲ್ಲಿ ಬರುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು. ಅದಕ್ಕೆ ಫೈನಾನ್ಷಿಯಲ್ ಸೆಕ್ಟರ್ ಡೆವಲಪ್ವೆುಂಟ್ ಆಂಡ್ ರೆಗ್ಯುಲೇಷನ್ - ರೆಸಲೂಷನ್ ಬಿಲ್ (ಎಫ್ಎಸ್ಡಿಆರ್) ಎಂದು ಹೆಸರಿಡಲಾಗಿದೆ. ಇದರಲ್ಲಿ ಬೇಲ್ಇನ್ ಎಂಬ ಪದ ಮಾತ್ರ ಇಲ್ಲ. ಉಳಿದೆಲ್ಲವೂ ಹಾಗೇ ಇದೆ. ವಿಮೆಗೊಳಪಡುವ ಮೊತ್ತವನ್ನು 1 ಲಕ್ಷ ರೂ.ಗಿಂತ ಜಾಸ್ತಿ ಮಾಡಲಾಗುತ್ತದೆ ಅಷ್ಟೆ. ಇದೆಲ್ಲವನ್ನೂ ನೋಡಿದಾಗ, ಠೇವಣಿದಾರರು ಎಷ್ಟೇ ಮೊತ್ತ ಇಟ್ಟಿದ್ದರೂ ಬ್ಯಾಂಕು ತೊಂದರೆಗೆ ಒಳಗಾದ ಸಂದರ್ಭದಲ್ಲಿ ಅವರಿಗೆ ಸಿಗುವುದು 1 ಲಕ್ಷ ರೂ. ಮಾತ್ರ ಎನ್ನುವುದು ದಿಟ. ಇದೇ ಕಾರಣಕ್ಕೆ ಠೇವಣಿದಾರರ ವಲಯದಲ್ಲಿ ಬ್ಯಾಂಕುಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅನಿಶ್ಚಿತತೆ ಮನೆಮಾಡಿದೆ.
ಪರಿಹಾರ ಏನು?