ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ದೀಪಾವಳಿ ಹಬ್ಬ, ಸಂಭ್ರಮ ಮೇಳೈಸಿದ ಪವಿತ್ರ ಉತ್ಸವ. ಈ ಹಬ್ಬದಲ್ಲಿ ಬರುವ ನರಕ ಚತುರ್ದಶಿ ವಿಶೇಷವಾಗಿ ನೋಡಬೇಕಾದ ಘಟನೆ. ಈ ಘಟನೆ ಇಂದು ನಡೆಯುತ್ತಿದೆ ಎಂದೆಂದೂ ನಡೆಯುತ್ತಲೇ ಇರುತ್ತದೆ.
ಪ್ರಾಗ್ಜೋತಿಷ ಪಟ್ಟಣದ ಅಧಿಪತಿ ನರಕಾಸುರ (ಭೌಮಾಸುರ). ಕಾರಣ ವಿಷ್ಣುವು ವರಾಹವತಾರವನ್ನು ತಾಳಿದಾಗ ಆತನ ದೇಹದಿಂದ ಒಂದು ತೊಟ್ಟು ಬೆವರು ನೆಲದ ಮೇಲೆ ಬೀಳಲಾಗಿ ಭೂದೇವಿಯ ಮಗನಾಗಿ ಜನಿಸಿದನು. ಭೂದೇವಿ ತನ್ನ ಈ ಮಗನಿಗಾಗಿ ವಿಷ್ಣುವಿನಲ್ಲಿ ಬೇಡಿ ವೈಷ್ಣವಾಸ್ತ್ರ ಸಂಪಾದಿಸುತ್ತಾಳೆ. ಅದೇ ಕಾರಣದಿಂದ ಅವನು ಮದೋನ್ಮತನಾಗುತ್ತಾನೆ. ಅವನು ದೇವ-ಋಷಿ, ಸಾತ್ವಿಕ ಹಾಗೂ ಸಜ್ಜನ ವಿರೋಧಿ. ಅವನು ಯಜ್ಞ ಯಾಗಾದಿಗಳಿಗೆ ವಿಘ್ನವನ್ನು ತರುತ್ತಿದ್ದ. ಹಲವಾರು ಸುಂದರ ಕನ್ಯೆಯರನ್ನು ಹಿಂಸಿಸುತ್ತಿದ್ದ. ಹೀಗೆ ಒಮ್ಮೆ ತ್ವಷ್ಟುವಿನ ಮಗಳು ಕಶೇರು ಎಂಬ ಕನ್ಯೆಯನ್ನು ಬಲಾತ್ಕಾರವಾಗಿ ಸೆಳೆದಿದ್ದ. ಸ್ತ್ರೀಮೋಹದಿಂದ ಗಂಧರ್ವ ಕನ್ಯೆಯರು, ದೇವ-ಮಾನವ ಕನ್ಯೆಯರನ್ನು, ಅಪ್ಸರೆಯರನ್ನೂ ಅಪಹರಿಸಿ ತಂದು ಅಂತಃಪುರವನ್ನು ತುಂಬಿಸಿಕೊಂಡಿದ್ದ. ಅವರೆಲ್ಲ ನರಕಾಸುರನ ಬಂಧನದಲ್ಲಿದ್ದರೂ ತಮ್ಮ ವ್ರತ ನಿಯಮಗಳನ್ನು ಬಿಡಲಿಲ್ಲ, ಭಾರತೀಯ ನಾರಿಯರ ಪ್ರತೀಕ. ಅವರನ್ನು ಒಲಿಸಿಕೊಳ್ಳುವುದು ನರಕಾಸುರನಿಗೆ ಕಷ್ಟವಾಗಿತ್ತು. ಅವರ ನಡವಳಿಕೆಗಳಿಂದ ಅವನಿಗೆ ಆಕ್ರಮಣ ಅಸಾಧ್ಯವಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶ - ಎಷ್ಟೇ ದುಷ್ಟನು ನಮ್ಮ ಆಕ್ರಮಣಕ್ಕೆ ಬಂದರೂ ನಮ್ಮ ಶುದ್ಧ ಚಾರಿತ್ರ್ಯ ಎದುರಾಳಿಯನ್ನು ಅಲ್ಲಿಯೇ ತಡೆದುನಿಲ್ಲಿಸುತ್ತದೆ.
ಅಂಥ ಸ್ತ್ರೀಯರನ್ನು ಸಂತೋಷಪಡಿಸುವುದಕ್ಕೋಸ್ಕರ ಅವನು ಅಲಕಾ ನಗರವೆಂಬ ಪಟ್ಟಣವನ್ನೇ ನಿರ್ವಿುಸುತ್ತಾನೆ. ಈ ನರಕಾಸುರನಿಗೆ ಹಯಗ್ರೀವ, ನಿಕುಂಬ, ಪಂಚನದ ಮತ್ತು ಮುರ ಎಂದು ನಾಲ್ವರು ಮಕ್ಕಳು. ಇವರೆಲ್ಲ ದುಷ್ಟರು. ಇವರನ್ನು ಸಂಹರಿಸುವುದಕ್ಕಾಗಿ ಭೂದೇವಿ ಮತ್ತು ದೇವತೆಗಳ ಪ್ರಾರ್ಥನೆಯಂತೆ ಶ್ರೀಕೃಷ್ಣನು ಅವತಾರಗೈಯುತ್ತಾನೆ. ಶ್ರೀಕೃಷ್ಣನ ವಾಸಸ್ಥಾನ ದ್ವಾರಕಾ ಪಟ್ಟಣ. ಅಲ್ಲಿಗೆ ಬಂದ ಇಂದ್ರ; ನರಕಾಸುರನನ್ನು ವಧಿಸಿ ದೇವತೆಗಳ ತಾಯಿ ಅದಿತಿಯ ರತ್ನಕುಂಡಲಗಳನ್ನು ತಂದುಕೊಡಬೇಕು ಎಂದು ಕೃಷ್ಣನಿಗೆ ಹೇಳುತ್ತಾನೆ. ಅದಕ್ಕಾಗಿ ಒಪ್ಪಿದ ಶ್ರೀಕೃಷ್ಣ ಸತ್ಯಭಾಮೆಯ ಜೊತೆ ಗರುಡವಾಹನನಾಗಿ ಅಲಕಾನಗರಕ್ಕೆ ಬಂದು ನರಕಾಸುರನ ನಾಲ್ವರು ಮಕ್ಕಳನ್ನೂ ಕೊಂದು ಆ ಪಟ್ಟಣವನ್ನು ಶ್ರೀಕೃಷ್ಣನು ಪ್ರವೇಶಿಸುತ್ತಾನೆ. ಕೊನೆಯಲ್ಲಿ ನರಕಾಸುರನೇ ಬರುತ್ತಾನೆ. ಅವನನ್ನು ಶ್ರೀಕೃಷ್ಣ ತನ್ನ ಚಕ್ರಾಯುಧದಿಂದ ಸಂಹರಿಸಿದ. ಆಗ ಭೂದೇವಿ ಬಂದು ಅದಿತಿಯ ರತ್ನಕುಂಡಲಗಳನ್ನು ಅವನ ಕೈಗೆ ಒಪ್ಪಿಸುತ್ತಾಳೆ.
ಇದು ಎಂದೋ ನಡೆದ ಕಥೆ. ಆದರೆ ವರ್ತಮಾನ ಭಾರತದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಸುಪ್ರಸಿದ್ಧ ಇಂದೋರ್ ರಾಜ್ಯವನ್ನು ನಡೆಸುತ್ತಿದ್ದವಳು. ಅವಳ ಮಗ ಮಾಲೋಜಿ ರಾವ್ ದುಷ್ಟ. ಅವನು ಒಂದು ದಿನ ನಗರದ ಬೀದಿಯಲ್ಲಿ ವೇಗವಾಗಿ ರಥವನ್ನು ಓಡಿಸುತ್ತಿರುವಾಗ ಗೋಮಾತೆ ಕರುವಿನ ಜೊತೆ ಬರುತ್ತಿತ್ತು. ಆತ ರಥವನ್ನು ಹಾಯಿಸಿ ಆ ಕರುವನ್ನು ಕೊಂದುಬಿಟ್ಟ. ಅದನ್ನು ನೋಡುತ್ತಿದ್ದ ಗೋಮಾತೆ ಕಣ್ಣೀರುಗರೆಯುತ್ತ ನಿಂತಳು. ತಿರುಗಿಯು ನೋಡದೆ ಸಾಗಿದ ಆ ಹೃದಯವಿದ್ರಾವಕ ಘಟನೆಯಿಂದ ನೊಂದ ಗೋಮಾತೆ ನೇರವಾಗಿ ರಾಜಾಸ್ಥಾನಕ್ಕೆ ಬಂದು ನ್ಯಾಯಘಂಟೆಯನ್ನು ಬಾರಿಸುತ್ತಾಳೆ. ತಕ್ಷಣ ಹೊರಗೋಡಿ ಬಂದ ಮಹಾರಾಣಿ ಕಾರಣವನ್ನು ಕೇಳಿ ತಿಳಿಯಲು ಆಜ್ಞಾಪಿಸುತ್ತಾಳೆ. ವಿಷಯವನ್ನು ಸಂಗ್ರಹಿಸಿದ ಭಟರು ಇದರ ಕುರಿತ ವರದಿ ನೀಡುತ್ತಾರೆ. ಹಸುವಿನ ಕರು ಹೇಗೆ ಮರಣಕ್ಕೀಡಾಯ್ತೋ ಅದೇ ರೀತಿ ರಥವನ್ನು ಹಾರಿಸಿದ್ದ ತನ್ನ ಮಗನ ಮೇಲೆಯೂ ರಥ ಹರಿಸಿಯೇ ಕೊಲ್ಲಬೇಕೆಂದು ಮಹಾರಾಣಿ ಶಿಕ್ಷೆ ನೀಡುತ್ತಾಳೆ. ಆದರೆ ಇದನ್ನು ಕಾರ್ಯಗತಗೊಳಿಸುವಲ್ಲಿ ಸೈನಿಕರು ಪ್ರಜೆಗಳು ನಡುಗುತ್ತಾರೆ. ತಮ್ಮಿಂದಾಗದು ಎಂದು ಅಂಗಲಾಚುತ್ತಾರೆ. ಆಗ ಸ್ವತಃ ರಾಣಿ ಅವನನ್ನು ಕಟ್ಟಿ ಹಾಕಿ ಆ ಕರು ಸತ್ತ ಜಾಗದಲ್ಲಿ ಅವನನ್ನು ಮಲಗಿಸಿ ತಾನೇ ಸ್ವತಃ ರಥವನ್ನು ಏರಿ ಅವನ ಮೇಲೆ ರಥವನ್ನು ಹಾರಿಸಲು ವೇಗವಾಗಿ ಬರುತ್ತಾಳೆ. ಆಗ ಗೋಮಾತೆ ಅಡ್ಡ ಬಂದು ರಥವನ್ನು ತಡೆಯುತ್ತಾಳೆ. ಇದರರ್ಥ ತನ್ನ ಕರುವಿನ ಸಾವಿಗೆ ನಿನ್ನ ಮಗ ಕಾರಣರಾದರೆ ನಿನ್ನ ಮಗನನ್ನು ನೀನು ಕಳೆದುಕೊಂಡು ಈ ದೇಶವನ್ನು ಅನಾಥ ಮಾಡಬಾರದೆಂಬ ಪ್ರಜ್ಞೆ.
ನರಕಾಸುರನು ದುಷ್ಟನಾದರೂ ಅವನನ್ನು ಸಂಹರಿಸಿದಕ್ಕೆ ಕೃಷ್ಣನನ್ನು ಭೂದೇವಿ ಅಭಿನಂದಿಸುತ್ತಾಳೆ. ನರಕಾಸುರ ವಧೆಯಿಂದ ಶ್ರೀಕೃಷ್ಣನಿಗೆ ಅಲಕಾ ಪಟ್ಟಣದಂತಹ ಮಹಾಪಟ್ಟಣ ದೊರಕುತ್ತದೆ. ನರಕಾಸುರನ ಆಳ್ವಿಕೆಯಲ್ಲಿದ್ದ ಮಹಿಳೆಯರೂ ಸಜ್ಜನಿಕೆ ಬಿಟ್ಟಿರಲಿಲ್ಲ, ಶೀಲ ಕಳೆದುಕೊಂಡಿರಲಿಲ್ಲ. ಆ ಹದಿನಾರು ಸಾವಿರದ ಒಂದುನೂರು ಸ್ತ್ರೀಯರ ಇಚ್ಛೆಯಂತೆ ಶ್ರೀಕೃಷ್ಣನು ಅವರನ್ನು ವಿವಾಹವಾಗಿ ಪರಮ ಪದವನ್ನು ಕಲ್ಪಿಸುತ್ತಾನೆ. ನರಕಾಸುರನು ಸಾಯುವಾಗ ಈ ಚತುರ್ದಶಿಯ ದಿನ ಯಾರು ಅಭ್ಯಂಗ ಸ್ನಾನ ಮಾಡುವರೋ ಅವರಿಗೆ ನರಕ ಪ್ರಾಪ್ತಿಯಾಗಬಾರದು ಎಂಬ ವರ ಪಡೆಯುತ್ತಾನೆ.
ನಾವು ಕುರುಡು ಮೋಹದಿಂದ ಮಕ್ಕಳ ದುಷ್ಟತನವನ್ನು ಸಹಿಸಿದರೆ ಲೋಕದಲ್ಲಿ ಶಾಂತಿ ಸಿಗದು. ನಾವು ಎಚ್ಚೆತ್ತ ಕಣ್ಣಿನಿಂದ ಸ್ವಂತ ಮಕ್ಕಳೇ ಅಪರಾಧವನ್ನು ಮಾಡಿದರೂ ಅವರನ್ನು ಶಿಕ್ಷಿಸುವ ಹೊಣೆಗಾರಿಕೆಯನ್ನು ಲೋಕದ ಆಡಳಿತಕ್ಕೆ, ನ್ಯಾಯಪೀಠಕ್ಕೆ ಒದಗಿಸಬೇಕು. ಎಷ್ಟೋ ಧನಿಕರ, ಪ್ರಭಾವಿಗಳ ಮಕ್ಕಳು ಅಲ್ಲಸಲ್ಲದ ಅಪರಾಧಗಳನ್ನು ಮಾಡಿದಾಗ ಅಧಿಕಾರಿಗಳು ತಮ್ಮ ಪ್ರಭಾವವನ್ನು ಬಳಸುತ್ತಾರೆ. ಇದರಿಂದ ತಪ್ಪು ಸಂದೇಶ ಹೊರಟು ಲೋಕದ ಶಾಂತಿ ಕದಡುತ್ತದೆ. ಇಂತಹ ಕೃತ್ಯಗಳು ವಿಶ್ವದ ಅಶಾಂತಿಗೆ ಕಾರಣವಾಗುತ್ತವೆ. ನರಕಾಸುರ ವಧೆಯನ್ನು ಅರ್ಥ ಮಾಡಿಕೊಂಡರೆ ಭೂದೇವಿಯ ತ್ಯಾಗವನ್ನು, ಧೈರ್ಯವನ್ನು. ಅರ್ಥ ಮಾಡಿಕೊಂಡರೆ, ಗೋಮಾತೆಯ ಧೈರ್ಯವನ್ನು, ಅವಳ ಮನಸ್ಸನ್ನು ತಿಳಿಯುವ ಪ್ರಯತ್ನವನ್ನು ಅರ್ಥಮಾಡಿಕೊಂಡರೆ, ದುಷ್ಟ ಮಕ್ಕಳ ಮೇಲಿನ ಮೋಹವನ್ನು ನಾವು ಬಿಡಬೇಕು ಎಂದು ಅರ್ಥವಾಗುತ್ತದೆ.
ಚತುರ್ದಶಿಯಂದು ನರಕಾಸುರನನ್ನು ವಧಿಸಿ, ಅವನ ರಕ್ತವನ್ನು ತನ್ನ ಹಣೆಗೆ ಹಚ್ಚಿಕೊಂಡು ಮನೆಗೆ ಮರಳಿದ ಶ್ರೀಕೃಷ್ಣನಿಗೆ ನಂದನು ಅಭ್ಯಂಗ ಸ್ನಾನ ಮಾಡಿಸಿದನು. ಸ್ತ್ರೀಯರೆಲ್ಲ ದೀಪಗಳ ಆರತಿ ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಆದುದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ. ಜನ ಈ ದಿನ ಸೂರ್ಯೋದಯಕ್ಕೂ ಮುಂಚೆ ಅಭ್ಯಂಗ ಸ್ನಾನ ಮಾಡುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿನ ತತ್ವವನ್ನು ಅನುಸರಿಸಲು ಪ್ರಯತ್ನಿಸಿದಾಗ ಮಾತ್ರ ನರಕ ಚತುರ್ದಶಿಯ ಆಚರಣೆ ಸಾರ್ಥಕವಾಗುತ್ತದೆ.