ಎಲ್ಲವೂ ಅವರಂದುಕೊಂಡಿದ್ದಂತೆ ನಡೆದರೆ ಇಂದಿನ ಪರಿಸ್ಥಿತಿಯೇ ಬೇರೆಯಾಗಿರಬೇಕಿತ್ತು. ಅಲ್ಲಲ್ಲಿ ಕಂಡುಬರುವ ಮಾತಾ ಅಮೃತಾನಂದಮಯೀ, ರವಿಶಂಕರ್ ಗುರೂಜಿಯಂತಹ ಸಾಧುಗಳು ಇಡಿಯ ತರುಣ ಜನಾಂಗವನ್ನು ಈ ದಿಕ್ಕಿನೆಡೆಗೆ ಎಳಕೊಂಡು ಬಂದು ನಿಲ್ಲಿಸುವುದಿದೆಯಲ್ಲ, ಇವರೆಲ್ಲರ ಪ್ರಯತ್ನವನ್ನು ಅದು ಧ್ವಂಸಮಾಡಿಬಿಡುತ್ತದೆ.
ನಾವು ಹಾಸ್ಟೆಲ್ನಲ್ಲಿ ಓದುತ್ತಿರುವ ಹೊತ್ತು, ಪ್ರತಿನಿತ್ಯ ಕಡ್ಡಾಯ ಪ್ರಾರ್ಥನೆ ಇರುತ್ತಿತ್ತು. ಅಲ್ಲೊಂದು ಸುಮಧುರ ಗೀತೆ.
ಮಾಡಿದುದು ಏನೆಂದು ಮಹದೇವ ಮುನಿದಿರುವೆ, ಬೇಡಿದುದು ಏನೆಂದು ದಯಮಾಡಿ ನೀಡದಿಹೆ
ಎಂದು ಆರಂಭವಾಗುತ್ತಿದ್ದ ಗೀತೆ ಮುಂದೆ ಸಾಗಿ ತನ್ನ ದಾರಿಯನ್ನೇ ಬದಲಾಯಿಸಿಬಿಡುತ್ತಿತ್ತು.
ಒಬ್ಬ ಮಗ ಗಜಮುಖನು
ಅವನನುಜ ಷಣ್ಮುಖನು ಶಿರದಲ್ಲಿ ಸತಿ
ಎಂದು ಅಪಹಾಸ್ಯ ಮಾಡಿದೆನೆ
ಎಂಬುದು ಮುಂದಿನ ಸಾಲುಗಳು. ಇದನ್ನು ಕೇಳುವಾಗ ಅಚ್ಚರಿ ಎನಿಸುತ್ತಿತ್ತು. ಶಿವನ ಪರಿವಾರದ ದುರದೃಷ್ಟಕರ ಸಂಗತಿ ಇದು ಅಂತ. ಮೇಲ್ನೋಟಕ್ಕೆ ನೋಡುವುದಾದರೆ ಅವನ ಇಬ್ಬರು ಮಕ್ಕಳಲ್ಲಿ ಒಬ್ಬನಿಗೆ ಆನೆ ಮುಖವಾದರೆ ಮತ್ತೊಬ್ಬನಿಗೆ ಆರುಮುಖ. ತನ್ನ ಹೆಂಡತಿಯನ್ನು ತಲೆಮೇಲೆ ಕೂರಿಸಿಕೊಂಡಿರುವಂಥವನು ಶಿವ. ಭಕ್ತ ಅವೆಲ್ಲವನ್ನೂ ಹೇಳುತ್ತಲೇ ‘ಎಂದಾದರೂ ಹಾಗೆ ಹೇಳಿದ್ದೀನಾ’ ಎಂದು ಕೇಳುತ್ತಾನೆ. ನಮ್ಮಲ್ಲಿ ಇದನ್ನು ‘ನಿಂದಾಸ್ತುತಿ’ ಎನ್ನುತ್ತಾರೆ. ಮೇಲ್ನೋಟಕ್ಕೆ ಬೈದಂತೆ ಕಂಡರೂ ಆಂತರ್ಯದಲ್ಲಿ ಹೊಗಳುವ ಪ್ರಕ್ರಿಯೆ ಅದು. ಭಗವಂತನನ್ನು ಆರಾಧಿಸುವ ನಾನಾ ವಿಧಾನಗಳಲ್ಲೊಂದು. ಉತ್ತರ ಕರ್ನಾಟಕದ ಜಾತ್ರೆಯೊಂದರಲ್ಲಿ ಅಧಿಷ್ಠಾನ ದೇವತೆಯನ್ನು ಮನಸೋ ಇಚ್ಛೆ ನಿಂದಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ಕೇಳಿದ್ದೇನೆ. ಹೊರಗಿಂದ ನೋಡುವವರಿಗೆ ಅದು ದೂಷಣೆ ಎನಿಸಬಹುದು. ಆದರೆ ಆ ನಿಂದಾಸ್ತುತಿಯೊಂದಿಗೆ ಭಕ್ತ ನಡೆದುಕೊಳ್ಳುವ ರೀತಿ ಇದೆಯಲ್ಲ, ಅದು ಮಾತ್ರ ಅತ್ಯಂತ ವಿಶಿಷ್ಟ ಬಗೆಯ ಆರಾಧನೆ. ದೇಶದುದ್ದಕ್ಕೂ ಈ ಬಗೆಯ ಚಿಂತನೆ ಕಂಡುಬರುತ್ತದೆ. ಹಿಂದೂಧರ್ಮದ ಅನೇಕ ವೈಶಿಷ್ಟ್ಯಗಳಲ್ಲಿ ಇದೂ ಒಂದು. ಹೀಗಾಗಿಯೇ ತನ್ನ ದೇವರನ್ನು ಯಾರಾದರೂ ದೂಷಿಸಿದಾಗ, ಅಪಹಾಸ್ಯ ಮಾಡಿದಾಗ ಆತ ನೊಂದುಕೊಳ್ಳುವುದಿಲ್ಲ, ಬದಲಿಗೆ ಭಗವಂತನೆಡೆಗಿನ ತನ್ನ ಶ್ರದ್ಧೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಇದು ಯಾರದ್ದೋ ವಿಚಾರಗಳ ಹೇರಿಕೆಯಿಂದ ಆಗುವ ಪ್ರಕ್ರಿಯೆ ಅಲ್ಲ. ಅಂತರಂಗದ ಕಮಲ ವಿಕಸನಗೊಳ್ಳುವ ರೀತಿ. ಇವಿಷ್ಟನ್ನೂ ಏಕೆ ಹೇಳಬೇಕಾಯ್ತೆಂದರೆ ಮೊನ್ನೆ ತಾನೇ ಪಾಕಿಸ್ತಾನದಲ್ಲಿ ಧರ್ಮನಿಂದನೆಯ ನೆಪದಲ್ಲಿ ಕಗ್ಗೊಲೆಯೊಂದು ನಡೆದುಹೋಗಿದೆ. ಶ್ರೀಲಂಕಾದ ಪ್ರಿಯಾಂತ ಕುಮಾರ್ ಪಾಕಿಸ್ತಾನದ ಸಿಯಾಲ್ಕೋಟ್ನಲ್ಲಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಈ ಕಂಪನಿ ಅಲ್ಲಿನ ಟಿ-20 ತಂಡಕ್ಕೆ ಬೇಕಾದ ವಿಭಿನ್ನ ವಸ್ತುಗಳನ್ನು ತಯಾರಿಸುತ್ತಿತ್ತು. ಪ್ರಿಯಾಂತ ಕುಮಾರ್ ಧರ್ಮನಿಂದನೆ ಮಾಡಿದ್ದಾರೆ ಎಂಬ ಸುದ್ದಿಯನ್ನು ಆಧರಿಸಿ ಅಲ್ಲಿನ ಕೆಲಸಗಾರರು ಇತರೆ ಮುಸಲ್ಮಾನ ಪುಂಡರನ್ನು ಕರೆದುಕೊಂಡು ಬಂದು ಹೊಡೆದು, ಬಡಿದು ಕೊನೆಗೆ ತೈಲ ಸುರಿದು ಬೆಂಕಿ ಹಚ್ಚಿಬಿಟ್ಟಿದ್ದಾರೆ! ಅದೆಷ್ಟು ಕ್ರೂರ ಮನಸ್ಥಿತಿಯ ಮಂದಿ ಎಂದರೆ ಆತ ದಹಿಸಿ ಹೋಗುವಾಗ ಅದರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ. ಶಾಂತಿಯ ಧರ್ಮವೆಂದು ಬೀಗುವ ಜನ ತಮ್ಮೊಳಗೆ ಅದೇ ಧರ್ಮದ ಹೆಸರಲ್ಲಿ ಇಷ್ಟೊಂದು ಕ್ರೌರ್ಯವನ್ನು ಬಚ್ಚಿಟ್ಟುಕೊಂಡಿದ್ದಾರೆ ಎಂದು ನಂಬುವುದೂ ಕಷ್ಟ.
ದುರದೃಷ್ಟವೆಂದರೆ ಈ ಕೊಲೆಯ ನೇತೃತ್ವ ವಹಿಸಿದ್ದ ಮೊಹಮ್ಮದ್ ಕಲಾಂ ಮತ್ತು ಮೊಹಮ್ಮದ್ ಫರ್ಹಾನ್ ಹೆಮ್ಮೆಯಿಂದ ಹೇಳಿಕೆ ನೀಡಿ ಅವನನ್ನು ಕೊಂದವರು ತಾವೇ ಎಂದು ಎದೆ ತಟ್ಟಿಕೊಂಡಿದ್ದಾರೆ. ನಿಜವಾಗ್ಯೂ ಆದದ್ದೇನು ಎಂದು ಜಗತ್ತಿಗೆ ತಿಳಿದದ್ದೇ ಆಗ. ಒಂದು ಹಾಳೆಯ ಮೇಲೆ ಕುರಾನ್ ವಾಕ್ಯ ಬರೆಯಲಾಗಿತ್ತಂತೆ. ಅದನ್ನು ಪ್ರಿಯಾಂತ ಹರಿದು ಕಸದಬುಟ್ಟಿಗೆಸೆದನಂತೆ. ಈ ಅವಮಾನವನ್ನು ಸಹಿಸದ ಈ ಕೆಲಸಗಾರರು ಕೂಡಲೇ ಕೆಲಸ ಮಾಡುವುದನ್ನು ನಿಲ್ಲಿಸಿದರಂತೆ ಮತ್ತು ಉಳಿದವರನ್ನು ಭಡಕಾಯಿಸಿ ಪ್ರಿಯಾಂತನನ್ನು ಎಳಕೊಂಡು ಹೋಗಿ, ಮನಸೋ ಇಚ್ಛೆ ಬಡಿದು, ಬೆಂಕಿ ಹಚ್ಚಿಬಿಟ್ಟರಂತೆ. ಧರ್ಮನಿಂದನೆಗೆ ಶಿಕ್ಷೆ ಬಗ್ಗೆ ಉಲ್ಲೇಖ ಇರುವ ಕುರಿತು ಈ ತಂಡದ ನೇತೃತ್ವ ವಹಿಸಿದವ ಹೇಳುವಾಗ ಅವನ ಹಿಂದಿದ್ದವರು ಘೊಷಣೆ ಕೂಗುವುದು ನಿಚ್ಚಳವಾಗಿ ಕೇಳಿಸುತ್ತದೆ. ಅಚ್ಚರಿ ಏನು ಗೊತ್ತೇ? ಶ್ರೀಲಂಕಾದ ರಾಜತಾಂತ್ರಿಕ ಒತ್ತಡ ಬೀಳುವವರೆಗೆ ಪ್ರಧಾನಮಂತ್ರಿ ಇಮ್ರಾನ್ ಖಾನ್ ಈ ಘಟನೆಯನ್ನು ಖಂಡಿಸುವ ಮಾತುಗಳನ್ನೂ ಆಡಿರಲಿಲ್ಲ. ಒಂದು ರಾಷ್ಟ್ರ ಮತಾಂಧತೆಯ ಹೊದಿಕೆಯನ್ನು ಹೊದ್ದರೆ ಅದು ಸಾಗಬಹುದಾದ ದಿಕ್ಕು ಯಾವುದೆಂಬುದಕ್ಕೆ ಪಾಕಿಸ್ತಾನ ಒಂದು ಒಳ್ಳೆಯ ಉದಾಹರಣೆಯಾದೀತು. ಶ್ರೀಲಂಕಾ ಬೆಚ್ಚಿಬಿದ್ದಿರಲು ಸಾಕು. ಈ ಪರಿಯ ಮೃಗಸದೃಶ ಆಕ್ರಮಣವನ್ನು ಸಭ್ಯಸಮಾಜ ಊಹಿಸಲಿಕ್ಕಾದರೂ ಹೇಗೆ ಸಾಧ್ಯ ಹೇಳಿ?! ಭಾರತೀಯ ಮಾಧ್ಯಮಗಳೂ ಸೇರಿದಂತೆ ಜಗತ್ತಿನ ಅನೇಕ ಪ್ರಮುಖ ಪತ್ರಿಕೆಗಳು ಈ ಘಟನೆಯನ್ನು ಸಾಮಾನ್ಯವಾಗಿ ವರದಿ ಮಾಡುತ್ತಾ ‘ರೊಚ್ಚಿಗೆದ್ದ ಜನಸಮೂಹ ಶ್ರೀಲಂಕಾದ ಪ್ರಜೆಯನ್ನು ಕೊಂದಿತು’ ಎಂದಷ್ಟೇ ಹೇಳಿ ಕೈ ತೊಳೆದುಕೊಂಡಿವೆ. ಅದು ರೊಚ್ಚಿಗೆದ್ದ ಜನ ಹೌದು; ಆದರೆ ಅವರೆಲ್ಲರೂ ಒಂದೇ ಮತಕ್ಕೆ ಸೇರಿದವರು ಮತ್ತು ತಮ್ಮ ಧರ್ಮನಿಂದನೆ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಹೀಗೆ ಮಾಡಿದರು ಎಂಬುದನ್ನು ಮುಚ್ಚಿಟ್ಟುಬಿಟ್ಟರು. ಇರಲಿ, ಅದು ಪತ್ರಿಕಾ ಧರ್ಮ. ಯಾವುದಾದರೊಂದು ಘಟನೆಯಲ್ಲಿ ಕೋಮುವಾದದ ವಿಷವನ್ನು ಬಿತ್ತುವ ಪ್ರಯತ್ನ ಎಂದಿಗೂ ಮಾಡಬಾರದು. ಈ ನಿಯಮ ಅನ್ವಯವಾಗೋದು ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರ ವಿಷಯದಲ್ಲಿ ಮಾತ್ರ. ಹಿಂದೂಗಳ ವಿಷಯದಲ್ಲಲ್ಲ. ಉತ್ತರ ಪ್ರದೇಶದ ದಾದ್ರಿಯಲ್ಲಿ 2015ರಲ್ಲಿ ಮೊಹಮ್ಮದ್ ಅಖ್ಲಾಕ್ ಎಂಬ ವ್ಯಕ್ತಿಯ ಕೊಲೆಯಾಗಿದ್ದು ನೆನಪಿನಲ್ಲಿರಬೇಕಲ್ಲ. ಆ ಕೊಲೆಯ ನಂತರ ಆತನ ಮನೆಯವರು ತಾವು ದನದ ಮಾಂಸ ತಿನ್ನುತ್ತೇವೆಂಬುದರ ಅರಿವಾಗಿ ಇವರೆಲ್ಲರೂ ಬಂದು ತಮ್ಮನ್ನು ಕೊಂದರೆಂದು ಹೇಳಿಕೆ ಕೊಟ್ಟರು. ಫ್ರಿಜ್ನಲ್ಲಿದ್ದ ದನದ ಮಾಂಸವೇ ಅವರಿಗೆ ಸಾಕ್ಷಿಯಾಗಿತ್ತು ಎಂದು ಹೇಳಲು ಮನೆಯವರು ಮರೆಯಲಿಲ್ಲ. ಆಗಲೂ ಅವನ ಹತ್ಯೆ ಮಾಡಿದವರು ಒಂದು ಕೋಮಿನವರೇ ಆಗಿದ್ದರು. ಪತ್ರಿಕೆಗಳು ತಮ್ಮ ಧರ್ಮವನ್ನು ನಿಭಾಯಿಸುತ್ತಾ ಯಾವ ಕೋಮಿನ ಆಕ್ರಮಣ ಎಂಬುದನ್ನು ಮರೆಮಾಚಬಹುದಿತ್ತು. ವಾಷಿಂಗ್ಟನ್ ಪೋಸ್ಟ್ನಿಂದ ಹಿಡಿದು ಅಲ್-ಜಜೀರಾದವರೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳೆಲ್ಲ ಹಿಂದೂಗಳೇ ಮಾಡಿದ ಕಗ್ಗೊಲೆಯಿದು ಎಂದು ಪುಂಖಾನುಪುಂಖವಾಗಿ ಬರೆದರಲ್ಲದೇ ಗೋವಿಗಾಗಿ ಕೊಲೆ ಎಂದು ಮುಲಾಜಿಲ್ಲದೇ ಹೇಳಿದರು. ಅಚ್ಚರಿಯೇನು ಗೊತ್ತೇ? ಅದಾದ ಕೆಲವೇ ತಿಂಗಳುಗಳಲ್ಲಿ ಇದು ಹಿಂದೂ-ಮುಸಲ್ಮಾನ ಗಲಾಟೆಯಲ್ಲವೆಂದೂ, ಕೊಂದವನ ಮತ್ತು ಕೊಲೆಗೀಡಾದವನ ವೈಯಕ್ತಿಕ ದ್ವೇಷದ ಕಾರಣಕ್ಕಾದ ಕೊಲೆ ಎಂದು ಬೆಳಕಿಗೆ ಬಂತು. ಮುಂದೆ ಯಾರೂ ಈ ಅಂಶದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನೇ ಮಾಡಲಿಲ್ಲ. ಹಿಂದೂಗಳಷ್ಟೇ ಅವರಿಗೆ ಆಟದ ವಸ್ತು.
ಹಿಂದೂಗಳೊಂದಿಗೆ ಈ ಮನಸ್ಥಿತಿ ಹೊಸತೇನೂ ಅಲ್ಲ. ಅಮೀರ್ ಖಾನ್ ‘ಪಿಕೆ’ ಚಿತ್ರ ಮಾಡಿದ್ದನ್ನು ನೆನಪಿಸಿಕೊಳ್ಳಿ. ಅದರಲ್ಲಿ ಶಿವನನ್ನು ವಿಕಾರವಾಗಿ ತೋರಿಸುವ, ಪೂಜಾಪದ್ಧತಿಗಳನ್ನು ಅವಹೇಳನ ಮಾಡುವ ಪ್ರಕ್ರಿಯೆಗಳಿವೆ. ಹಿಂದಿ ಸಿನಿಮಾಗಳಲ್ಲಿ ಬಹುತೇಕ ರೌಡಿಗಳು ಕಾಳಿಯಾರಾಧಕರೇ. ಆಕೆಯ ಪೂಜೆ ಮಾಡಿಯೇ ಆತ ಕೊಲೆಗೆ ಹೊರಡುವುದನ್ನು ಸಹಜವಾಗಿಯೇ ನೋಡಿದ್ದೇವೆ, ಒಪ್ಪಿದ್ದೇವೆ. ‘ತ್ರೀ ಈಡಿಯಟ್ಸ್’ ಚಿತ್ರದಲ್ಲಿ ದೇವರಪೂಜೆ ಮಾಡುವುದನ್ನು, ಕುತ್ತಿಗೆಗೆ ದೇವರ ಚಿತ್ರ ಇಳಿಬಿಟ್ಟಿರುವುದನ್ನು ಅವಹೇಳನ ಮಾಡುವ ನಾಯಕ ಕುತ್ತಿಗೆಗೆ ತಾಬೀಜ್ ಹಾಕಿಕೊಂಡವರ ಮತ್ತು ತಲೆಗೆ ಟೋಪಿ ಧರಿಸಿಕೊಂಡವರ ಕುರಿತಂತೆ ಒಂದು ಮಾತೂ ಆಡುವುದಿಲ್ಲ. ಕುತ್ತಿಗೆಗೆ ದೇವರ ಚಿತ್ರ ಇಳಿಬಿಟ್ಟುಕೊಂಡರೆ ಕೆಲಸ ಸಿಕ್ಕುಬಿಡುವುದಿಲ್ಲ ಸರಿ, ತಾಬೀಜ್ ಹಾಕಿಕೊಂಡರೆ ಕೆಲಸ ಸಿಕ್ಕಿಬಿಡುವುದಿಲ್ಲ ಎನ್ನುವುದೂ ನಿಜವಲ್ಲವೇನು? ಬಹುತೇಕ ಹಿಂದಿ ಸಿನಿಮಾಗಳು ಪೂಜಾರಿಗಳನ್ನು ತುಚ್ಛವಾಗಿಯೇ ತೋರಿಸುತ್ತವೆ. ಬ್ರಾಹ್ಮಣರು ಬಿಟ್ಟಿರುವ ಜುಟ್ಟು ಸಿನಿಮಾದ ನಾಯಕನಿಗೆ ಆಟದ ವಸ್ತು. ಹೀಗಾಗಿಯೇ ತರುಣರಲ್ಲಿ ಕಾಲಕ್ರಮದಲ್ಲಿ ಶಿಖೆಬಿಡುವ ಪದ್ಧತಿ ದೂರವಾಯ್ತಲ್ಲದೇ ಉಪನಯನ ಕಾಲದಲ್ಲೂ ಮಕ್ಕಳು ಕೇಶಮುಂಡನಕ್ಕೆ ಹಿಂಜರಿಯುವ ವಾತಾವರಣ ನಿರ್ವಣವಾಗಿಬಿಟ್ಟಿತು. ಸಾಧಾರಣವಾಗಿ ಹಿಂದೂ ಸಂತರನ್ನು ಅವಹೇಳನಕಾರಿಯಾಗಿ ಬಿಂಬಿಸುವ ಈ ಚಿತ್ರಗಳ ಪ್ರಭಾವದಿಂದಾಗಿ ತರುಣವರ್ಗ ಒಂದು ಕಾಲಘಟ್ಟದಲ್ಲಿ ಸಂತರ ಪಡಸಾಲೆಗಳಿಂದ ದೂರವೇ ಉಳಿಯಿತಲ್ಲದೇ ತಮ್ಮನ್ನು ತಾವು ವಿಜ್ಞಾನದ ಆರಾಧಕರೆಂದು ಜಂಭ ಕೊಚ್ಚಿಕೊಳ್ಳಲಾರಂಭಿಸಿತ್ತು. ವಿಜ್ಞಾನದ ಮಿತಿ ದಾಟಿದ ನಂತರವೇ ಅಧ್ಯಾತ್ಮದ ಆರಂಭವಾಗುವುದು ಎನ್ನುವುದರ ಅರಿವು ಅವರಿಗಾಗಲೇ ಇಲ್ಲ. ಯಾವ ಮತಗಳ ಮಂದಿ ಈ ರೀತಿಯಾದ ಅಜೆಂಡಾಗಳನ್ನು ಇಟ್ಟುಕೊಂಡು ಹಿಂದೂಧರ್ಮದ ಅವಹೇಳನಕ್ಕೆ ನಿಂತಿದ್ದಾರೋ ಅವರಿಗೆ ತಮ್ಮ ಮತ ವಿಜ್ಞಾನದ ಒರೆಗಲ್ಲಿಗೆ ಹಚ್ಚಿದರೆ ಚಿಂದಿ-ಚಿಂದಿಯಾಗುತ್ತದೆ ಎಂಬುದು ಮರೆತೇಹೋಗಿತ್ತು. ಎಲ್ಲವೂ ಅವರಂದುಕೊಂಡಿದ್ದಂತೆ ನಡೆದರೆ ಇಂದಿನ ಪರಿಸ್ಥಿತಿಯೇ ಬೇರೆಯಾಗಿರಬೇಕಿತ್ತು. ಅಲ್ಲಲ್ಲಿ ಕಂಡುಬರುವ ಮಾತಾ ಅಮೃತಾನಂದಮಯೀ, ರವಿಶಂಕರ್ ಗುರೂಜಿಯಂತಹ ಸಾಧುಗಳು ಇಡಿಯ ತರುಣ ಜನಾಂಗವನ್ನು ಈ ದಿಕ್ಕಿನೆಡೆಗೆ ಎಳಕೊಂಡು ಬಂದು ನಿಲ್ಲಿಸುವುದಿದೆಯಲ್ಲ, ಇವರೆಲ್ಲರ ದಶಕಗಳ ಪ್ರಯತ್ನವನ್ನು ಅದು ಧ್ವಂಸಮಾಡಿಬಿಡುತ್ತದೆ. ಸದ್ಗುರು ಜಗ್ಗಿ ವಾಸುದೇವರಂತೂ ಹೇಗೆ ವೈಚಾರಿಕ ಪ್ರತಿಪಾದನೆ ನಡೆಸುತ್ತಿದ್ದಾರೆಂದರೆ ಅನ್ಯಮತದ ತರುಣರೂ ಆ ಚಿಂತನೆಗೆ ಮರುಳಾಗಿ ಇತ್ತ ಧಾವಿಸುವಷ್ಟು. ಎಡಪಂಥೀಯರ ಬಳಿಯಂತೂ ವಾದ ಮಂಡಿಸಲು ತರುಣರೆ ಈಗ ಉಳಿದುಕೊಂಡಿಲ್ಲ. ಇದವರಿಗೆ ಸಹಿಸಲಾಗದ ಚಿಂತೆಯಾಗಿಬಿಟ್ಟಿದೆ.
ಇಸ್ಲಾಮಿನ ದೊಡ್ಡ ಸಮಸ್ಯೆ, ಅವರಿಗೆ ಅನುಭವಿಸಲಿಕ್ಕೆ ಮತ್ತು ಭಗವಂತನ ಕಾರ್ಯ ಮಾಡಲಿಕ್ಕೆ ಇದೊಂದೇ ಜನ್ಮ. ಸತ್ತು ಸ್ವರ್ಗವನ್ನು ಸೇರಬೇಕೆಂದರೆ, ಅಲ್ಲಿ 72 ಹೆಂಗಸರ ಸಂಪರ್ಕ ಸಾಧಿಸಿಕೊಳ್ಳಬೇಕೆಂದರೆ ಈ ಒಂದು ಜನ್ಮದಲ್ಲೇ ಅವರು ಭಗವಂತನನ್ನು ಮೆಚ್ಚಿಸುವ ಎಲ್ಲ ಕೆಲಸ ಮಾಡಿಬಿಡಬೇಕು. ಎಷ್ಟು ಎಷ್ಟು ಕಾಫಿರ್ಗಳನ್ನು ಕೊಲ್ಲುತ್ತಾರೋ, ಅಷ್ಟು ಬೇಗ ಸ್ವರ್ಗಕ್ಕೇರುತ್ತಾರೆ ಎಂಬುದು ಅವರನ್ನು ನಂಬಿಸಿಕೊಂಡು ಬಂದಿರುವಂತಹ ಸಿದ್ಧಾಂತ. ಈ ಕಾರಣಕ್ಕಾಗಿಯೇ ಹುಟ್ಟಿದ್ದು ಮತಾಂಧತೆ. ಕೆಲವಾರು ದಶಕಗಳ ಹಿಂದೆಯೇ ಈ ಬಗ್ಗೆ ಚರ್ಚೆ ನಡೆದು ಯಾರು ಒಬ್ಬನೇ ದೇವರು, ಒಬ್ಬನೇ ವ್ಯಕ್ತಿ, ಒಂದೇ ಗ್ರಂಥ ಇವುಗಳನ್ನು ನಂಬುತ್ತಾರೋ ಅವರು ಮತಾಂತರವಾಗುವುದು ನಿಶ್ಚಿತ ಎಂದು ಸಹಮತಿಗೆ ಬರಲಾಗಿತ್ತು. ಇಸ್ಲಾಮಿರಲಿ, ಕ್ರಿಶ್ಚಿಯಾನಿಟಿ ಇರಲಿ, ಕೊನೆಗೆ ಇತ್ತೀಚಿನ ರೈತ ಪ್ರತಿಭಟನೆಗಳನ್ನು ನೋಡಿದರೆ, ಸಿಖ್ ಮತವೂ ಈ ಪ್ರಭಾವಕ್ಕೆ ಒಳಗಾಗಿದೆ. ಹಿಂದೂಧರ್ಮವೊಂದೇ ಇವೆಲ್ಲವುಗಳಿಂದಲೂ ಅಬಾಧಿತವಾಗಿ ನಡೆಯುತ್ತಿರುವಂಥದ್ದು. ಹೀಗಾಗಿಯೇ ಈ ರೀತಿಯ ಕಗ್ಗೊಲೆಗಳು ಕಂಡುಬಂದರೆ, ಮಾಡಿದವರು ಹಿಂದೂಗಳೆಂದು ಅರಿವಾದರೆ ಹಿಂದುವಾದವ ನೊಂದುಕೊಳ್ಳುತ್ತಾನೆ. ನನ್ನ ಧರ್ಮ ಇದನ್ನು ಹೇಳುವುದಿಲ್ಲ ಎಂದು ವಾದಿಸುತ್ತಾನೆ. ಯಾರೂ ತನ್ನ ಮಾತನ್ನು ಕೇಳದೇ ಹೋದಾಗ ತನ್ನ ಪಾಡಿಗೆ ತಾನು ಭಗವಂತನ ಮುಂದೆ ಕುಳಿತು ಕಣ್ಣೀರ್ಗರೆಯುತ್ತಾನೆ. ಮುಸಲ್ಮಾನರು ಹಾಗಲ್ಲ. ಬಾಂಗ್ಲಾದೇಶದಲ್ಲಿ ಹಿಂದೂಗಳ ಕಗ್ಗೊಲೆಯಾದಾಗ ಇಲ್ಲಿ ಯಾರೂ ಬಾಯ್ತೆರೆಯಲಿಲ್ಲ. ಈಗ ಪಾಕಿಸ್ತಾನದಲ್ಲಿ ಶ್ರೀಲಂಕಾದ ಪ್ರಜೆಯನ್ನು ಬರ್ಬರವಾಗಿ ಕೊಲ್ಲಲಾಗಿದೆ, ಈಗಲೂ ಅವರದ್ದು ಎಂದಿನ ಶಾಂತಿಯೇ. ಯಾವ ಧೈರ್ಯದ ಮೇಲೆ ಇವರನ್ನು ನಂಬಬೇಕು ಎನ್ನುವುದೇ ಅರಿವಾಗದು. ಮೊದಲು ಮಾನವನಾಗು ಎಂದು ಜಗತ್ತಿಗೆಲ್ಲ ಬೋಧಿಸುವ ಮಂದಿ ಇಂತಹ ಘಟನೆಗಳ ಕಾಲಕ್ಕೂ ಬಾಯ್ಮುಚ್ಚಿಕೊಂಡು ಕುಳಿತಿರುತ್ತಾರಲ್ಲ, ಇವರುಗಳಿಗೆ ಬೇರೆ ಸಂದರ್ಭ ಗಳಲ್ಲಿ ಮಾತನಾಡುವ ಯೋಗ್ಯತೆ ಏನಿದೆ? ಎಂಬ ಪ್ರಶ್ನೆ ಈಗ ಕೇಳಬೇಕಿದೆ ಅಷ್ಟೆ.
ಆದರೆ ಒಂದನ್ನು ಗಮನಿಸಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗೆ ಕಾರಣವಾಗಿದ್ದು ಕುರಾನನ್ನು ಮಂದಿರದೊಳಗಿಟ್ಟಿದ್ದಾರೆ ಎಂಬ ಕಾರಣಕ್ಕೆ. ಪಾಕಿಸ್ತಾನದಲ್ಲಿ ಈಗ ಹತ್ಯೆಯಾಗಿರುವುದು ಧರ್ಮಗ್ರಂಥದ ವಾಕ್ಯ ಬರೆದಿದ್ದ ಹಾಳೆಯನ್ನು ಕಸದಬುಟ್ಟಿಯಲ್ಲಿ ಹಾಕಲಾಗಿದೆ ಎಂಬುದಕ್ಕೆ. ಅಂದರೆ ಮಂದಿರದಲ್ಲಿಟ್ಟರೂ ತಪ್ಪು, ಕಸದಬುಟ್ಟಿಯಲ್ಲಿ ಹಾಕಿದರೂ ತಪು್ಪ. ಸಮಸ್ಯೆ ಇರುವುದು ಮಾನಸಿಕತೆಯಲ್ಲಿ. ಇವರನ್ನು ಸರಿಯಾಗಿ ಸಂಭಾಳಿಸದಿದ್ದರೆ ಬರುವ ದಿನಗಳು ಬಲುಕಷ್ಟ. ಇದು ಎಚ್ಚರಿಕೆಯ ಗಂಟೆ ಅಷ್ಟೇ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)