ಈ ಇಡೀ ಪ್ರಪಂಚದಲ್ಲೇ ಅತ್ಯಂತ ಅದೃಷ್ಟವಂತ ಜನಾಂಗವೊಂದು ಇದ್ದರೆ ಅದು ನಾವು; ಭಾರತೀಯರು. ಅದೇ ರೀತಿಯಲ್ಲಿ ಅತ್ಯಂತ ದುರದೃಷ್ಟ ಜನಾಂಗವೊಂದಿದ್ದರೆ ಅದು ಕೂಡ ನಾವೇ ಭಾರತೀಯರು. ಕಾರಣ ಇಷ್ಟೇ; ಒಬ್ಬ ಮನುಷ್ಯ ಉದ್ಧಾರವಾಗಲು ಯಾವ ಯಾವ ಅಂಶ ಬೇಕಾಗಿದೆಯೋ ಅದನ್ನೆಲ್ಲ ಅಷ್ಟು ವಿವರಣಾತ್ಮಕವಾಗಿ, ವಿಶ್ಲೇಷಣಾತ್ಮಕವಾಗಿ ಅತ್ಯಂತ ವೈಜ್ಞಾನಿಕವಾಗಿ ಮತ್ತು ಅಷ್ಟು ಪ್ರಾಚೀನ ಸಮಯದಲ್ಲಿ ಸಂಶೋಧಿಸಿ, ಪರಿಶೋಧಿಸಿ ತನ್ನ ಜನಾಂಗದ ಮುಂದೆ ಇಟ್ಟ ದೇಶ ಮತ್ತೊಂದಿಲ್ಲ. ಅದು ಭಾರತ ಮಾತ್ರ! ಇದನ್ನೆಲ್ಲ ಭಾವಾವೇಶಕ್ಕೊಳಗಾಗಿ ನಾನು ಹೇಳುತ್ತಿಲ್ಲ. ಇದೇ ಧಾಟಿಯಲ್ಲಿ ವಿಶ್ವದ ಹಲವು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾತಾಡಿದ್ದೇನೆ.
ಯಾರಾದರೂ ಪ್ರಶ್ನಿಸಲಿ ಎಂಬ ಉದ್ದೇಶ್ಯದಿಂದಲೇ ಹೇಳಿದ್ದೇನೆ. ಆದರೆ ಯಾರೂ ಪ್ರಶ್ನಿಸಲಿಲ್ಲ. ಅಷ್ಟೇ ಅಲ್ಲ ಉಪನ್ಯಾಸವಾದಮೇಲೆ ಮತ್ತಷ್ಟು ಆತ್ಮೀಯರಾದರು, ಭಾವುಕರಾದರು. ಉದಾಹರಣೆಗೆ ಇಟಲಿಯ ಜನೋವಾ ವಿಶ್ವವಿದ್ಯಾಲಯದ ಪೊ› .ಬ್ರೂನೋ ಬಾರ್ಬ್. ಸಮಾಜಶಾಸ್ತ್ರದ ಪೊ›ಫೆಸರ್ ಆಗಿದ್ದ ಅವರು ‘ವಿಷಯ ಇಷ್ಟು ಗಂಭೀರ ಹಾಗೂ ಆಸಕ್ತಿಯನ್ನುಕ್ಕಿಸುವುದಾಗಿದೆ ಎಂದು ಮೊದಲೇ ತಿಳಿದಿದ್ದರೆ ಇಡೀ ವಿಶ್ವವಿದ್ಯಾಲಯವನ್ನೇ ಆಹ್ವಾನಿಸಬಹುದಿತ್ತು’ ಎಂದು ಹೇಳಿದ್ದು ಇಂದಿಗೂ ನನ್ನನ್ನು ಪುಳಕಿತನನ್ನಾಗಿಸುತ್ತದೆ. ವಿಷಯ- ‘ಆಧುನಿಕ ಚಿಂತನೆ ಮತ್ತು ಜಾಗತಿಕ ಉತ್ಥಾನಕ್ಕೆ ಭಾರತೀಯರ ಕೊಡುಗೆ’ ಎಂಬುದೇ ಆಗಿತ್ತು. ವಿಷಯವನ್ನು ವಿಶ್ಲೇಷಿಸಿದ ಮೇಲೆ ಅವರಿಗೆಲ್ಲ ಅನ್ನಿಸಿದ್ದು, ಬೇರೆ ಬೇರೆ ಸಂದರ್ಭಗಳಲ್ಲಿ ಇನ್ನೂ ಹಲವರಿಗೆ ಅನ್ನಿಸಿದ್ದು, ಆದರೆ ಭಾರತೀಯರಾದ ನಮಗೆ ಮಾತ್ರ ಇನ್ನೂ ಅನ್ನಿಸದಿರುವುದು ‘ಇದರ ಪ್ರಯೋಜನವನ್ನು ಭಾರತ ಏಕೆ ಪಡೆದುಕೊಳ್ಳುತ್ತಿಲ್ಲ’ ಎನ್ನುವುದು. ವೇದಕಾಲದಿಂದ ಗುಪ್ತರ ಕಾಲದವರೆಗೂ ಅಥವಾ ಒಂದನೇ ಸಹಸ್ರಮಾನದ ಕೊನೆಯವರೆಗೆ ಇದನ್ನು ಬಳಸಿಕೊಂಡಿರಬಹುದು; ಅದರ ನಂತರ ಅಲ್ಲ.
ಪ್ರಸ್ತುತ ದಿನಗಳಲ್ಲಂತೂ ‘ಚಿಂತನ’ ಎನ್ನುವ ಪದ ಬಹಳಷ್ಟು ಅರ್ಥವನ್ನು ಕಳೆದುಕೊಂಡು ಬಿಟ್ಟಿದೆ. ವಿದ್ಯಾರ್ಥಿ ಜೀವನದಲ್ಲಿ ಅದು ಕೇವಲ ಪಠ್ಯಕ್ಕೆ ಅನ್ವಯಿಸಿದರೆ ಮುಂದಿನ ದಿನಗಳಲ್ಲಿ ವೃತ್ತಿಗೋ ಅಥವಾ ಮನರಂಜನೆಗೋ ಸಲ್ಲುವಂಥದ್ದಾಗಿ ಹೋಗಿದೆ. ಸಮರ್ಥ ಚಿಂತನೆಯೊಂದನ್ನು ಗಂಭೀರವಾಗಿ ತೆಗೆದುಕೊಂಡಾಗ ದೇಶದೇಶಗಳ ಚಿತ್ರಗಳೇ ಹೇಗೆ ಬದಲಾಗಿದೆ, ಕ್ರಾಂತಿಗಳೇ ಆಗಿಹೋಗಿವೆ ಎಂಬುದನ್ನು ಇತಿಹಾಸ ಸ್ಪಷ್ಟವಾಗಿ ಸಾರುತ್ತದೆ. ಫ್ರೆಂಚ್ ಕ್ರಾಂತಿಗೆ ವಾಲ್ಟೇರ್ ಚಿಂತನ ಕಾರಣ. ಹಾಗೆಯೇ ರಷ್ಯನ್, ಐರಿಶ್ ಮತ್ತು ಚೀನಾ ಕ್ರಾಂತಿಗಳಿಗೂ ಚಿಂತನವೇ ಕಾರಣ.
ಇವೆಲ್ಲ ಸಾರ್ವತ್ರಿಕ ನೆಲೆಯಲ್ಲಿ. ಭಾರತದಲ್ಲಿ ಈ ಅರ್ಥದಲ್ಲಿ ಎಂದಿಗೂ ಕ್ರಾಂತಿ ನಡೆದಿಲ್ಲ. ಇಲ್ಲಿ ನಡೆಯುವುದು ವೈಚಾರಿಕ ಕ್ರಾಂತಿ. ಇಂತಹ ಕ್ರಾಂತಿಪುರುಷನನ್ನೇ ನಾವು ಕೆಲವೊಮ್ಮೆ ‘ಅವತಾರ’ ಎಂದು ಕರೆಯುವುದು. ಇದೊಂದು ಶಾಂತಿಯುತ ಕ್ರಾಂತಿ, ಅಧ್ಯಾತ್ಮ ಮತ್ತು ಸಾಂಸ್ಕೃತಿಕ ನೆಲೆಗಳೇ ಇದರ ನೆಲೆಗಟ್ಟು. ಕಾರಣ ಇಷ್ಟೇ ನಿಜವಾದ ‘ಕ್ರಾಂತಿ’ ಆಂತರ್ಯಕ್ಕೆ ಸಂಬಂಧಿಸಿದ್ದು. ನಂಬಿಕೆ ದೃಷ್ಟಿಕೋನಗಳನ್ನು ಬದಲಾಯಿಸುವಂಥದ್ದು. ಏಕೆಂದರೆ ದೃಷ್ಟಿಯಂತೆ ಸೃಷ್ಟಿ. ಆದರೆ ಈ ದೃಷ್ಟಿ ಬದಲಾವಣೆಗೆ ಬೇಕಾದ್ದೇ ಪ್ರಬಲ, ಸಂವರ್ಧಕ ಹಾಗೂ ಸರ್ತಾಕ ಚಿಂತನೆ ಮತ್ತು ಅವು ಹೊರಹೊಮ್ಮಬೇಕಾದ್ದು ಅವುಗಳನ್ನು ಸಾಕ್ಷಾತ್ಕರಿಸಿಕೊಂಡ ಮಹಾತ್ಮನೊಬ್ಬನಿಂದ. ಆದ್ದರಿಂದಲೇ ಭಾರತ ಸಚ್ಚಿಂತನೆಗೆ ಮತ್ತು ಅದರ ಪ್ರಸರಣಕ್ಕೆ ತನ್ನ ಅಸ್ತಿತ್ವವನ್ನೇ ಮುಡಿಪಾಗಿಟ್ಟಿದೆ. ಶಿಕ್ಷಿತರ ಕರ್ತವ್ಯಗಳನ್ನು ಒತ್ತಿ ಹೇಳುವಾಗ ‘ಸ್ವಾಧ್ಯಾಯ ಪ್ರವಚನಾಭ್ಯಾಂ ನ ಪ್ರಮದಿತವ್ಯಮ್ ಎಂದು ತೈತ್ತರೀಯ ಉಪನಿಷತ್ತಿನಲ್ಲಿ ಬರುವ ವಿಶ್ವದ ಪ್ರಪ್ರಥಮ ಘಟಿಕೋತ್ಸವ ಭಾಷಣದಲ್ಲೇ ಸ್ಪಷ್ಟಪಡಿಸಲಾಗಿದೆ.
ಯಾವುದೇ ಸಮಾಜ ಅಥವಾ ವ್ಯವಸ್ಥೆಯಲ್ಲಿ ಅದರ ಪುನರುತ್ಥಾನಕ್ಕಾಗಿ ನಾವು ಗಮನ ಕೊಡಬೇಕಾದ್ದು ಎರಡು ಅಂಶಗಳಿಗೆ. ಮೊದಲು- ವ್ಯಕ್ತಿ ವ್ಯಕ್ತಿಗಳನ್ನು ತಾವಿರುವ ಸ್ತರದಿಂದ ಮೇಲಕ್ಕೆ ಎತ್ತುವುದು ಹೇಗೆ? ನಿರಂತರ ಆರೋಹಣಕ್ರಿಯೆಯಲ್ಲಿ ತೊಡಗಿಸುವುದು ಹೇಗೆ ಎಂದು. ಎರಡನೆಯದು- ವ್ಯಕ್ತಿ ಅಸಾಮಾನ್ಯನಾದ ಮೇಲೆ ಅವನಲ್ಲಿ ‘ಸಮಷ್ಟಿಪ್ರಜ್ಞೆ’-ಸ್ವಹಿತ ಮತ್ತು ಪರಹಿತಗಳು ಅನ್ಯೋನ್ಯ ಸಂಬಂಧ ಹೊಂದಿವೆ ಎಂಬ- ಭಾವನೆಯನ್ನು ಜಾಗೃತಗೊಳಿಸುವುದು ಹೇಗೆ ಎಂಬುದು. ವೇದಾಂತ ಅಥವಾ ಉಪನಿಷತ್ ಮೊದಲನೆಯದನ್ನು ಗಮನಿಸಿದರೆ ಭಗವದ್ಗೀತೆ ಎರಡನೆಯದನ್ನು ಗಮನಿಸುತ್ತದೆ. ಪರಹಿತವನ್ನು ಲೆಕ್ಕಿಸದ ಅಥವಾ ಸ್ವಹಿತದ ಮುಂದೆ ಅದು ಗೌಣ ಎಂದು ಭಾವಿಸಿ ಸ್ವಸಾಮರ್ಥ್ಯದಿಂದಲೇ, ಎಷ್ಟೇ ಅಧಿಕಾರ, ಪ್ರತಿಷ್ಠೆಗಳನ್ನು ಸಾಧಿಸಿದರೂ ಅದು ವ್ಯರ್ಥಾಲಾಪ ಆಗುವುದೇ ದಿಟ ಎಂಬುದನ್ನು ರಾಮಾಯಣ, ಮಹಾಭಾರತಗಳು ಸಾರುತ್ತವೆ. ಆದ್ದರಿಂದ ಇವೆಲ್ಲ ವ್ಯಕ್ತಿನಿರ್ವಣ, ರಾಷ್ಟ್ರನಿರ್ವಣ ಇಲ್ಲವೇ ಸಮಾಜನಿರ್ವಣ ಶಾಸ್ತ್ರಗಳೆಂದು ಪರಂಪರೆಯಲ್ಲಿ ಸ್ವೀಕೃತವಾಗಿವೆ. ನಾಗರಿಕತೆಗಳ ಪ್ರಾರಂಭದಿಂದಲೂ ಮೊನ್ನೆ ಮೊನ್ನೆಯವರೆಗೆ ಈ ದೇಶವನ್ನು, ಈ ಜನರನ್ನು, ಅತ್ಯಂತ ಸುಭಿಕ್ಷ, ಸಮೃದ್ಧ, ಸ್ವರ್ಗೀಯ ರಾಷ್ಟ್ರವನ್ನಾಗಿಸಿದ್ದೇ ಈ ಚಿಂತನೆಗಳ ಅನುಷ್ಠಾನ.
ಈ ಚಿಂತನಮಾಲೆಯಲ್ಲಿ ಒಂದು ಶ್ರೇಷ್ಠ ಸ್ಥಾನ ಪಡೆದುಕೊಂಡಿರುವುದು ತಪಸ್ಸು ಎಂಬ ಮೌಲ್ಯ. ಅಹಿಂಸೆ ಮೊದಲಾದ ಹಲವು ಭಾರತೀಯ ಮೌಲ್ಯಗಳು ಆದಂತೆ ಇದೂ ಸಾಕಷ್ಟು ಅಪಾರ್ಥಕ್ಕೆಡೆಯಾಗಿದೆ. ಶ್ರೀಕೃಷ್ಣ ಗೀತೆಯ 18ನೇ ಅಧ್ಯಾಯದಲ್ಲಿ ಇಡೀ ಗೀತೆಯ ಸಾರವನ್ನೇ ಹಿಡಿದಿಟ್ಟಿದ್ದಾನೆ. ಅಲ್ಲಿ ‘ಯಜ್ಞ, ದಾನ, ತಪಸ್ಸುಗಳು ಸಾರ್ವತ್ರಿಕ, ಸಾರ್ವಕಾಲಿಕ ಮೌಲ್ಯಗಳು; ಇವುಗಳನ್ನು ಯಾರೂ ಪಾಲಿಸಬೇಕಾದ್ದೇ. ಯಾರೂ ಇದನ್ನು ವರ್ಜಿಸುವಂತಿಲ್ಲ. ವ್ಯಷ್ಟಿ ಸಮಷ್ಟಿಗಳ ಉದ್ಧಾರಕ್ಕೆ ಇವು ಅನಿವಾರ್ಯ’ ಎಂಬರ್ಥದಲ್ಲಿ ಹೇಳುತ್ತಾನೆ. ಸೂಕ್ಷ್ಮವಾಗಿ ಹೇಳಬೇಕೆಂದರೆ ‘ಯಜ್ಞ’ ಎಂದರೆ ತಾನೇ ತನ್ನ ಪ್ರಯತ್ನದಿಂದಲೇ ಮನುಷ್ಯ ಏನನ್ನು ಪಡೆದುಕೊಂಡಿದ್ದರೂ ಎಲ್ಲರೊಂದಿಗೂ ಹಂಚಿಕೊಳ್ಳಬೇಕು ಎನ್ನುವುದಾಗಿದ್ದರೆ ‘ದಾನ’ ಎಂದರೆ ತಾನು ಗಳಿಸಿದ ಸಾಮರ್ಥ್ಯಗಳನ್ನು ಯೋಗ್ಯರಿಗೆ ಧಾರೆಯೆರೆಯಬೇಕು ಎನ್ನುವುದು. ಇವೆರಡೂ ಸಮಷ್ಟಿ ಪ್ರಜ್ಞೆಗೆ ಸಂಬಂಧಿಸಿದ್ದು. ಇನ್ನು ತಪಸ್ಸು ಎನ್ನುವುದನ್ನು ಸಂಪೂರ್ಣವಾಗಿ ವ್ಯಷ್ಟಿಪ್ರಜ್ಞೆಗೆ ಸೀಮಿತಗೊಳಿಸಿ, ಅರ್ಥವಾಗುವ ರೀತಿಯಲ್ಲಿ ಹೇಳಬೇಕೆಂದರೆ ಆಧುನಿಕ ‘ಮಹರ್ಷಿ’ ಸ್ವಾಮಿವಿವೇಕಾನಂದರ ಭಾಷೆಯನ್ನೇ ಉಪಯೋಗಿಸುತ್ತೇನೆ, ಅವರು ಹೇಳುತ್ತಾರೆ-Take up one idea, make that one idea your life, Think of it, dream of it, live on that idea, let the brain muscles every part of your body be full of that idea just leave every other idea alone, this is the way to success'. ಅರ್ಥಾತ್ ಒಂದು ಧ್ಯೇಯಕ್ಕೆ, ಜೀವನದ ಗುರಿಗೆ ನಮ್ಮನ್ನು ಸಮರ್ಪಿಸಿಕೊಂಡು ನಖಶಿಖಾಂತ, ಕನಸು ಮನಸುಗಳಲ್ಲಿ ಅದಕ್ಕಾಗಿಯೇ ಪ್ರಯತ್ನಿಸಿ ಅದನ್ನೇ ಉಸಿರಾಗಿಸಿಕೊಂಡು ಬೇರೆಲ್ಲವುಗಳಿಂದ ವಿಮುಖನಾಗಬೇಕು. ಇಷ್ಟರಮಟ್ಟಿಗೆ ಗುರಿ ಮತ್ತು ಜೀವನ; ಗುರಿ ಮತ್ತು ವ್ಯಕ್ತಿತ್ವ ಒಂದಾಗಬೇಕು. ಅದೇ ತಪಸ್ಸು.
ಸಂಸ್ಕೃತ ಹಾಗೂ ವೇದಾಂತದಲ್ಲಿ ಅಪಾರ ಪಾಂಡಿತ್ಯ ಸಾಧಿಸಿದ್ದ ವಾಚಸ್ಪತಿ ಮಿಶ್ರ ಮಹತ್ವಾಕಾಂಕ್ಷಿ ಯುವ ವಿದ್ವಾಂಸ. ಶ್ರೀ ಶಂಕರಾಚಾರ್ಯರ ಭಾಷ್ಯಗಳಿಗೆ ‘ಟೀಕೆ’ ಬರೆಯಬೇಕೆಂದು ಸಂಕಲ್ಪಿಸಿದ್ದ. ಭಾಷ್ಯವನ್ನು ಸರಳೀಕರಿಸಿದ ಸಕಾರಾತ್ಮಕ ಅರ್ಥವುಳ್ಳ ಪದ ‘ಟೀಕೆ’. ಬಹುದೊಡ್ಡ ತಪಸ್ಸೇ ಬೇಕು ಅದಕ್ಕೆ. ತನ್ನ ಪತ್ನಿಯನ್ನು ಕರೆದು ಇಂತಹ ಬೃಹತ್ ಯೋಜನೆಯೊಂದಕ್ಕೆ ತಾನು ಕೈಹಾಕುತ್ತಿರುವುದಾಗಿಯೂ ಅವಳ ಸಂಪೂರ್ಣ ಸಹಕಾರ ಇದಕ್ಕೆ ಬೇಕಾಗಿದೆಯೆಂದೂ, ಯಾವುದೇ ಸಾಂಸಾರಿಕ ಕೆಲಸದಿಂದ ಕೆಲಕಾಲ ವಿಮುಖವಾಗುತ್ತಿರುವುದಾಗಿಯೂ ಅರುಹಿದ. ಪರಮಸಾಧಿ್ವಾದ ಅವಳು ಸಂತೋಷದಿಂದಲೇ ಒಪ್ಪಿಗೆ ಕೊಟ್ಟಳು. ಮಿಶ್ರರು ತಮ್ಮ ಕಾರ್ಯದಲ್ಲಿ ಮುಳುಗಿದರು. ವರ್ಷಗಳೇ ಉರುಳಿದವು. ಊಟ, ನಿದ್ದೆಗಳೆಲ್ಲ ಎಲ್ಲಿಯೋ ಮೂಲೆ ಸೇರಿದವು, ಹಗಲು-ರಾತ್ರಿಗಳು ವ್ಯತ್ಯಾಸ ಕಳೆದುಕೊಂಡವು. ಒಂದು ದಿನ ರಾತ್ರಿ ಏನನ್ನೋ ಗಂಭೀರವಾಗಿ ಓದುತ್ತಿದ್ದಾಗ ದೀಪ ನಂದಿಹೋಯಿತು. ಚಿಂತನ ಲಹರಿ ಖಂಡವಾಗಬಾರದೆಂದು ಕಣ್ಮುಚ್ಚಿ ಅದನ್ನೇ ಮೆಲುಕು ಹಾಕಹತ್ತಿದರು. ಅವರ ಮುಂದೆ ಒಮ್ಮೆಯೂ ಸುಳಿಯದೆಯೇ ದೂರದಿಂದಲೇ ಗಮನಿಸಿ ಅವರ ಅವಶ್ಯಕತೆಗಳನ್ನು ಪೂರೈಸುತ್ತಿದ್ದ ಪತ್ನಿ ಬೇಗನೆ ಇನ್ನೊಂದು ದೀಪ ತಂದು ಆರಿದ್ದ ದೀಪವನ್ನು ಹಚ್ಚಿದಳು. ಬೆಳಕು ಬಂದದ್ದನ್ನು ಗ್ರಹಿಸಿದ ಮಿಶ್ರ ಕಣ್ಣು ತೆರೆದು ಸಂತೋಷ, ಕೃತಜ್ಞತೆಗಳಿಂದ ಅವಳನ್ನೇ ನೋಡುತ್ತ ಕೇಳಿದರು-‘ದೇವಿ! ತಾವು ಯಾರು?’ ಅವಾಕ್ಕಾದ ಆಕೆ ಹೇಳುತ್ತಾರೆ-‘ನಾನು ರೀ ನಿಮ್ಮ ಹೆಂಡತಿ.’ ಕೈಗೆತ್ತಿಕೊಂಡ ಕಾರ್ಯದಲ್ಲಿ ಯಾವ ರೀತಿಯಲ್ಲಿ ಮಿಶ್ರರು ಮುಳುಗಿದ್ದರೆಂದರೆ ಹೊರಗೊಂದು ಪ್ರಪಂಚ ಇದೆ, ಅಲ್ಲಿ ತನಗೊಂದು ಸಂಸಾರವಿದೆ, ಹೆಂಡತಿ ಇದ್ದಾಳೆ ಇವೆಲ್ಲವನ್ನೂ ಮರೆತೇ ಹೋಗಿದ್ದರು. ಇದ್ಯಾವುದೂ ಅವರ ಗಮನವನ್ನು ಸೆಳೆಯದಂತೆ, ಅದರ ನೆನಪೇ ಅವರಿಗಿಲ್ಲದಂತೆ ಹೋಗುವ ರೀತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿದ್ದಳು ಆ ಮಹಾಮಾತೆ! ಕಸಿವಿಸಿಗೊಂಡ ಮಿಶ್ರರು ಸ್ವಲ್ಪ ಪಶ್ಚಾತ್ತಾಪದ ದನಿಯಲ್ಲಿಯೇ ಉಸುರಿದರು -‘ಎಂಥಾ ತಪಸ್ಸು ನಿನ್ನದು! ಪತಿಯ ಕಾರ್ಯಸಿದ್ಧಿಗಾಗಿ ಅದೆಷ್ಟು ಸಮರ್ಪಿಸಿಕೊಂಡು ಬಿಟ್ಟೆ ನೀನು! ನಿನ್ನ ಹೆಸರು ಅಜರಾಮರವಾಗುವಂತೆ ಮಾಡುತ್ತೇನೆ’ ಎಂದರು ಮತ್ತು ತಾವು ಬರೆದ ಪುಸ್ತಕಕ್ಕೆ ‘ಭಾಮತಿ’ ಎಂದೇ ಹೆಸರಿಟ್ಟರು. ಅದು ಅವರ ಪತ್ನಿಯ ಹೆಸರೇ. ‘ಭಾಮತಿ’ ಭಾರತೀಯ ಆಧ್ಯಾತ್ಮಿಕ ಸಾಹಿತ್ಯದಲ್ಲಿ ವೇದಾಂತದ ಅಧ್ಯಯನಕ್ಕೆ ಅತ್ಯುತ್ತಮ ಮಾರ್ಗದರ್ಶಿ.
ಶ್ರೀರಾಮಕೃಷ್ಣರು, ಐನ್ಸ್ಟೀನ್, ಸ್ವಾಮಿ ವಿವೇಕಾನಂದರ ಜೀವನಗಳಲ್ಲೂ ಇಂಥ ಹಲವಾರು ಘಟನೆಗಳನ್ನು ನೋಡುತ್ತೇವೆ. ಇಂಥ ಮಹತ್ತರವಾದ ಏಕಾಗ್ರತೆ; ಏಕಮುಖ ಚಿಂತನೆ ಮನುಷ್ಯನಲ್ಲಿ ಸಿದ್ಧಿಸಬೇಕೆಂದರೆ ಮೊಟ್ಟಮೊದಲ ಅವಶ್ಯಕತೆ ಅವನು ತನ್ನ ಆಸಕ್ತ ಕ್ಷೇತ್ರವನ್ನೇ ಆರಿಸಿಕೊಳ್ಳಬೇಕು. ಪ್ರತಿ ಮನುಷ್ಯನಿಗೂ ಒಂದು ಆಸಕ್ತ ಕ್ಷೇತ್ರ ಇರುತ್ತದೆ. ಹೆತ್ತವರೂ, ಶಿಕ್ಷಕರೂ ವಿದ್ಯಾರ್ಥಿಗೆ ಈ ಕ್ಷೇತ್ರವನ್ನು ಹುಡುಕಲು ಸಹಾಯವೆಸಗಬೇಕು. ಎಛ್ಞಿಜ್ಠಿಠಗಳು ಹುಟ್ಟುವುದೇ ಇಲ್ಲಿ. ಯಾರು ಬೇಕಾದರೂ ಎಛ್ಞಿಜ್ಠಿಠ ಆಗಬಲ್ಲರು. ಹೈಸ್ಕೂಲ್ ದಿನಗಳಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ, ಬೀಜಗಣಿತವನ್ನು ಅರ್ಥೈಸಿಕೊಳ್ಳಲು ಹೆಣಗಾಡುತ್ತಿದ್ದ, ಕಾಲೇಜು ದಿನಗಳಲ್ಲಿಯೂ ಹೀಗೆಯೇ ಒದ್ದಾಡುತ್ತಿದ್ದ ಐನ್ಸ್ಟೀನ್ ಮುಂದೆ ಮಹಾಮೇಧಾವಿಯಾಗಿ ರೂಪಗೊಂಡಿದ್ದು ತನ್ನ ಆಸಕ್ತಿಯ ಕ್ಷೇತ್ರವಾಗಿದ್ದ ಭೌತಶಾಸ್ತ್ರದಲ್ಲಿ ಆಳ ಹಾಗೂ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡಮೇಲೆಯೇ.
ಉಪನಿಷತ್ ತನ್ನ ಇಡೀ ಚಿಂತನೆಯಲ್ಲಿ ‘ಮಾನುಷ ಸಾಮರ್ಥ್ಯಗಳು ಮತ್ತು ಅವುಗಳನ್ನು ವ್ಯಕ್ತಪಡಿಸುವುದು ಹೇಗೆ?’ ಎಂಬುದನ್ನೇ ವಸ್ತುವನ್ನಾಗಿಸಿಕೊಂಡಿದೆ. ಇದೇ ಯಾವುದೇ ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆಯ ಪ್ರಧಾನ ಪಲ್ಲವಿ ಆಗಬೇಕು ಕೂಡ. ಆಗ ಮಾತ್ರ ಸಮರ್ಥ ವ್ಯಕ್ತಿ ಮತ್ತು ಸಶಕ್ತರಾಷ್ಟ್ರ ಮೂಡಿ ಬರಬಲ್ಲದು. ಆದರೆ ಸಂಬಂಧಪಟ್ಟವರು ಇದನ್ನು ಗಮನಿಸಬೇಕಷ್ಟೇ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)