ಅಂಕಣ

'ಅದ್ದೂರಿ ಲವರ್'​ಗೆ ಕ್ರೇಜಿಸ್ಟಾರ್​ ರವಿಚಂದ್ರನ್​ ವಿಶ್

ಬೆಂಗಳೂರು: ಇತ್ತೀಚೆಗಷ್ಟೇ ‘ಕಿಸ್’ ಚಿತ್ರದ ಶತದಿನೋತ್ಸವ ಆಚರಿಸಿಕೊಂಡ ನಿರ್ದೇಶಕ-ನಿರ್ಮಾಪಕ ಎ.ಪಿ. ಅರ್ಜುನ್, ಅದೇ ಖುಷಿಯಲ್ಲಿ ನೂತನ ಚಿತ್ರ ‘ಅದ್ದೂರಿ ಲವರ್’ ಘೋಷಣೆ ಮಾಡಿದ್ದರು. ಈ ಚಿತ್ರಕ್ಕೆ ನಾಯಕನಾಗಿ ವಿರಾಟ್ ನಾಯಕಿಯಾಗಿ ಸಂಜನಾ ಆನಂದ್ ಆಯ್ಕೆಯಾಗಿದ್ದರು. ಈಗ ಸದ್ದಿಲ್ಲದೆ, ಚಿತ್ರದ ಮುಹೂರ್ತವನ್ನೂ ನೆರವೇರಿಸಿಕೊಂಡಿರುವ ಅರ್ಜುನ್, ‘ಕ್ರೇಜಿಸ್ಟಾರ್’ ರವಿಚಂದ್ರನ್ ಅವರಿಂದಲೂ ಶುಭಾಶಯ ಪಡೆದುಕೊಂಡಿದ್ದಾರೆ.

ಅಂದರೆ, ಚಿತ್ರದ ಮೊದಲ ದೃಶ್ಯಕ್ಕೆ ರವಿಮಾಮ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಹಾಗಾದರೆ ಚಿತ್ರದ ನಿರ್ದೇಶಕ ಯಾರು? ಈ ವಿಚಾರವನ್ನು ಮುಹೂರ್ತದ ದಿನ ಬಹಿರಂಗ ಪಡಿಸುವುದಾಗಿ ಹೇಳಿಕೊಂಡಿದ್ದರು ಚಿತ್ರದ ನಿರ್ಮಾಪಕ ಅರ್ಜುನ್. ಅದರಂತೆ ಅರ್ಜುನ್ ಜತೆಗೆ ಹಲವು ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ಭರತ್ ರಾಘವೇಂದ್ರ, ‘ಅದ್ದೂರಿ ಲವರ್’ ಮೂಲಕ ಪೂರ್ಣ ಪ್ರಮಾಣದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ‘ಕಿಸ್’ ಚಿತ್ರಕ್ಕೆ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕರು ಇಲ್ಲಿಯೂ ಮುಂದುವರಿಯಲಿದ್ದು, ಸಂಗೀತ ನಿರ್ದೇಶಕರೊಬ್ಬರು ಮಾತ್ರ ಬದಲಾಗಲಿದ್ದಾ ರಂತೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೆಯೂ ನಡೆದಿದ್ದು, ಇನ್ನು ಕೆಲವು ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ ಎಂದು ಮಾಹಿತಿ ನೀಡುತ್ತಾರೆ ಅರ್ಜುನ್.

ಮಾರ್ಚ್ 10ರಿಂದ ಚಿತ್ರದ ಶೂಟಿಂಗ್​ಗೆ ಚಾಲನೆ ಸಿಗಲಿದೆ. ಬೆಂಗಳೂರು, ಊಟಿ, ಮೈಸೂರು, ಮಡಿಕೇರಿಯಲ್ಲಿ ಚಿತ್ರೀಕರಣಕ್ಕೆ ಪ್ಲಾ್ಯನ್ ಮಾಡಿಕೊಂಡಿದ್ದೇವೆ. ಶೀರ್ಷಿಕೆಗೆ ತಕ್ಕಂತೆ ಅದ್ದೂರಿಯಾಗಿಯೇ ಸಿನಿಮಾ ಮೂಡಿಬರಲಿದೆ. | ಎ.ಪಿ. ಅರ್ಜುನ್, ನಿರ್ಮಾಪಕ