ಅಂಕಣ

ತುತ್ತು ಕೆಲಸಕ್ಕೂ ಕರೊನಾ ಕುತ್ತು

ಕರೊನಾ ಸೋಂಕು ಜಗತ್ತಿನ ಆರೋಗ್ಯ ವ್ಯವಸ್ಥೆಯನ್ನಷ್ಟೇ ಅಲ್ಲ, ಆರ್ಥಿಕ ವ್ಯವಸ್ಥೆ, ಸಾಮಾಜಿಕ ಬದುಕು ಎಲ್ಲವನ್ನೂ ಹಾಳುಗೆಡವಿದೆ. ಮೊದಲು ಪ್ರಾಣ ಉಳಿಸೋಣ ಎಂಬ ಉದ್ದೇಶದಿಂದ ಜಾರಿಗೊಳಿಸಿದ ಲಾಕ್​ಡೌನ್​ನಿಂದಾಗಿ ವಾಣಿಜ್ಯ ವಹಿವಾಟು ಸಂಪೂರ್ಣವಾಗಿ ಕುಸಿದಿದೆ. ಉದ್ಯೋಗ ನಷ್ಟ, ಆದಾಯ ನಷ್ಟ, ಉಳಿತಾಯ ನಷ್ಟ ಬಹುತೇಕರನ್ನು ಕಾಡಿದೆ. ನಿರುದ್ಯೋಗ ಪ್ರಮಾಣವೂ ಹೆಚ್ಚಾಗಿದೆ.

| ಉಮೇಶ್​ಕುಮಾರ್​ ಶಿಮ್ಲಡ್ಕ

ಕರೊನಾ ಸೋಂಕು ಆರೋಗ್ಯಕ್ಕೆ ಮಾಡಿದ ಹಾನಿಗಿಂತ ಜನರ ಬದುಕಿಗೆ ಮಾಡಿದ ನಷ್ಟವೇ ಹೆಚ್ಚು. ಕರೊನಾ ಎಂದರೆ ಸಾಕು ಸಾಮಾನ್ಯ ಜನರು ಬೆಚ್ಚಿ ಬೀಳುವಂತಾಗಿದೆ. ಸೋಂಕು ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಲಾಕ್​ಡೌನ್​ ಹೇರುವುದು ಅನಿವಾರ್ಯವೇನೋ ಆಗಿತ್ತು ನಿಜ. ಆದರೆ ವಾಣಿಜ್ಯ ಚಟುವಟಿಕೆಗಳ ಮೇಲೆ ಅದರಿಂದಾದ ಪರಿಣಾಮ ಮಾತ್ರ ಊಹೆಗೂ ನಿಲುಕದ್ದು. ಈ ಸಂದರ್ಭದಲ್ಲಿ ಆಸ್ಪತ್ರೆ, ಫಾರ್ಮಾ ಮತ್ತು ವೈದ್ಯಕಿಯ ಕ್ಷೇತ್ರಕ್ಕೆ ಪೂರಕವಾದ ವಹಿವಾಟುಗಳನ್ನು ಹೊರತುಪಡಿಸಿ, ಉಳಿದ ಕ್ಷೇತ್ರಗಳ ಮೇಲೆ ಭಾರಿ ದುಷ್ಪರಿಣಾಮವಾಯಿತು ಎಂಬುದು ವಾಸ್ತವ.

ಕರೊನಾ ಮೊದಲ ಅಲೆಯ ಹೊಡೆತದಿಂದ ಚೇತರಿಸಿಕೊಂಡು 2020ರ ಸೆಪ್ಟೆಂಬರ್​ನಿಂದ 2021ರ ಜನವರಿವರೆಗಿನ ಅವಧಿಯಲ್ಲಿ ವಾಣಿಜ್ಯ ಚಟುವಟಿಕೆ ನಿಧಾನಗತಿಯಲ್ಲಿ ಶುರುವಾಗಿತ್ತಷ್ಟೆ. ಅರ್ಥ ವ್ಯವಸ್ಥೆ ಇನ್ನೇನು ಚೇತರಿಸಿಕೊಂಡಿತು ಎನ್ನುವಷ್ಟರಲ್ಲಿ ಎರಡನೇ ಅಲೆಯ ಹೊಡೆತ ಶುರುವಾಗಿಬಿಟ್ಟಿತ್ತು. ಪರಿಣಾಮ ಜನಸಾಮಾನ್ಯರಿಗೆ ಬದುಕು ದುರ್ಭರವೆನಿಸತೊಡಗಿದೆ. ಇದಕ್ಕೆ ಸಂಬಂಧಿಸಿದ ದತ್ತಾಂಶಗಳ ಪ್ರಕಾರ ಏಪ್ರಿಲ್​ ಮತ್ತು ಮೇ ಅವಧಿಯಲ್ಲಿ ದೇಶದ ಉದ್ಯೋಗ ದರ (ಎಂಪ್ಲಾಯ್​ಮೆಂಟ್​ ರೇಟ್​) ಶೇಕಡ 17ರಷ್ಟು ಕುಸಿತ ಕಂಡಿದೆ.

2 ತಿಂಗಳಲ್ಲಿ ಎರಡೂವರೆ ಕೋಟಿ ಉದ್ಯೋಗ ನಷ್ಟ!: ಸೆಂಟರ್​ ಫಾರ್​ ಮಾನಿಟರಿಂಗ್​ ಇಂಡಿಯನ್​ ಎಕಾನಮಿ (ಸಿಎಂಐಇ) ಎಂಬ ಸಂಸ್ಥೆ ಇತ್ತೀಚೆಗೆ ಪ್ರಕಟಿಸಿರುವ ವರದಿಯೂ ಇದನ್ನೇ ಬಿಂಬಿಸುತ್ತಿದೆ. ಏಪ್ರಿಲ್​ ಮತ್ತು ಮೇ ಎರಡೇ ತಿಂಗಳಲ್ಲಿ 2.5 ಕೋಟಿ ಉದ್ಯೋಗ ನಷ್ಟವಾಗಿದೆ. ಕುಟುಂಬಗಳ ಆದಾಯ ಶೇಕಡ 97ರಷ್ಟು ನಷ್ಟವಾಗಿದೆ. ಇನ್ನೂ ಅನೇಕರದ್ದು ಆದಾಯವೇ ಇಲ್ಲದ ಪರಿಸ್ಥಿತಿ. 2021ರ ಮೇ ತಿಂಗಳ ನಿರುದ್ಯೋಗ ದರ ಶೇಕಡ 11.9 ಆಗಿತ್ತು. 30 ದಿನಗಳ ಚಲನಾತ್ಮಕ ಸರಾಸರಿ ನಿರುದ್ಯೋಗ ದರ ಜೂನ್​ 6ರ ಪ್ರಕಾರ ಶೇಕಡ 13.6 ದಾಖಲಾಗಿದೆ. ಏಪ್ರಿಲ್​ನಲ್ಲಿ ಉದ್ಯೋಗ ದರ 36.8 ಇದ್ದದ್ದು ಮೇ ತಿಂಗಳಲ್ಲಿ 35.3ಕ್ಕೆ ಕುಸಿದಿದೆ. ಅರ್ಥಾತ್​ 1.53 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಜೂನ್​ 6ರ ಪ್ರಕಾರ 30 ದಿನಗಳ ಚಲನಾತ್ಮಕ ಉದ್ಯೋಗ ದರ 34.6ಕ್ಕೆ ಇಳಿದಿತ್ತು. ಇದು ವಾರಾಂತ್ಯದಲ್ಲಿ ಮತ್ತೆ 33.9ಕ್ಕೆ ಕುಸಿದು ಉದ್ಯೋಗ ನಷ್ಟದ ಗಂಭೀರತೆಗೆ ಸಾಕ್ಷಿಯಾಗಿದೆ.

ರಾಜ್ಯದ ಗಾರ್ಮೆಂಟ್ಸ್​ನಲ್ಲಿ 2 ಲಕ್ಷ ಜನರ ಕೆಲಸ ಖೋತಾ
ರಾಜ್ಯದ ಗಾರ್ಮೆಂಟ್ಸ್​ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರು ಉದ್ಯೋಗ ನಷ್ಟ ಅನುಭವಿಸಿದ್ದಾರೆ. ಇದು ಸುಮ್ಮನೆ ಅಂದಾಜಲ್ಲ, ಮಾರ್ಚ್​ ತಿಂಗಳಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್​ ಅವರೇ ವಿಧಾನಸಭೆಯಲ್ಲಿ ಈ ಅಂಕಿಅಂಶ ನೀಡಿದ್ದರು. ಇದೇ ರೀತಿ ವಿವಿಧ ರಂಗಗಳಲ್ಲಿ ಕೆಲಸ ಮಾಡುವ ಅನೇಕರು ಉದ್ಯೋಗ ನಷ್ಟ ಅನುಭವಿಸಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಗಾರ್ಮೆಂಟ್ಸ್​ ಕಾರ್ಮಿಕರ ಅಸೋಸಿಯೇಷನ್​ ಪ್ರಕಾರ ರಾಜ್ಯದಲ್ಲಿರುವ 1,500ಕ್ಕೂ ಹೆಚ್ಚು ಗಾರ್ಮೆಂಟ್ಸ್​ ಗಳಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಜನ ಉದ್ಯೋಗ ಕಳೆದುಕೊಂಡಿದ್ದಾರೆ.

ಕೋಟಿಗಳಲ್ಲಿದೆ ಉದ್ಯೋಗ ನಷ್ಟದ ಲೆಕ್ಕ!
ಕೃಷಿಯೇತರ ಕ್ಷೇತ್ರಗಳ ಉದ್ಯೋಗ ನಷ್ಟದ ಲೆಕ್ಕಾಚಾರವನ್ನೂ ಸಿಎಂಐಇ ಮುಂದಿಟ್ಟಿದೆ. ಅದರಂತೆ, 2021ರ ಜನವರಿಯಿಂದೀಚೇಗೆ 3.68 ಕೋಟಿ ಉದ್ಯೋಗ ನಷ್ಟವಾಗಿದ್ದು, ಇತ್ತೀಚೆಗೆ 4 ಕೋಟಿಯ ಗಡಿ ದಾಟಿದೆ. ಇದರಲ್ಲಿ ದಿನಗೂಲಿಗಳ ಪ್ರಮಾಣ 2.31 ಕೋಟಿ. ವೇತನ ಪಡೆಯುತ್ತಿದ್ದ ಉದ್ಯೋಗಿಗಳ ಸಂಖ್ಯೆ 85 ಲಕ್ಷ. ಉಳಿದವರು ಸಣ್ಣ ಪ್ರಮಾಣದ ವ್ಯಾಪಾರೋದ್ಯಮಿಗಳು. ಫೆಬ್ರವರಿಯಲ್ಲಿ 25 ಲಕ್ಷ, ಮಾರ್ಚ್​ನಲ್ಲಿ 74 ಲಕ್ಷ, ಮೇ ತಿಂಗಳಲ್ಲಿ 1.53 ಕೋಟಿ ಉದ್ಯೋಗ ನಷ್ಟವಾಗಿದೆ.

ಕಾರ್ಮಿಕರ ಪಾಲ್ಗೊಳ್ಳುವಿಕೆ ಪ್ರಮಾಣ ತೀವ್ರ ಇಳಿಕೆ
ಸಿಎಂಐಇ ಡೇಟಾ ಪ್ರಕಾರ, ಮೇ 16ರ ನಂತರ ಕಾರ್ಮಿಕ ಮಾರುಕಟ್ಟೆ ತೀವ್ರ ಕುಸಿತ ಕಾಣಲಾರಂಭಿಸಿದೆ. ಇದರ ಮುಖ್ಯ ಸಂಕೇತವಾಗಿರುವ ಕಾರ್ಮಿಕ ಭಾಗವಹಿಸುವಿಕೆ ದರವೂ ಶೇಕಡ 40ರಷ್ಟು ಕಡಿಮೆಯಾಗಿ 39.7ಕ್ಕೆ ಇಳಿದಿದೆ. ಉದ್ಯೋಗ ದರ ಮೇ ತಿಂಗಳಲ್ಲಿ ಶೇಕಡ 35.3 ಇದ್ದದ್ದು ಜೂನ್​ 6ರಂದು ಶೇಕಡ 34.6ಕ್ಕೆ ಇಳಿದಿದೆ. ಇದಕ್ಕೂ ನಾಲ್ಕು ವಾರಗಳ ಹಿಂದಿನ ಅವಧಿಯಲ್ಲಿ ಕಾರ್ಮಿಕ ಮಾರುಕಟ್ಟೆಯ ಪರಿಸ್ಥಿತಿ ತೀವ್ರವಾಗಿ ಕುಸಿತ ಕಂಡಿದೆ. ಅಸಂಟಿತ ಕ್ಷೇತ್ರಗಳಲ್ಲಿ ಲಾಕ್​ಡೌನ್​ ಕಾರಣಕ್ಕೆ ಅಪಾರ ಜನ ಉದ್ಯೋಗ ನಷ್ಟ ಅನುಭವಿಸಿದ್ದಾರೆ. ಲಾಕ್​ಡೌನ್​ ತೆರವು ಗೊಳಿಸಿದ ಬಳಿಕ ಈ ಕ್ಷೇತ್ರ ಬಹುಬೇಗ ಚೇತರಿಕೆ ಕಾಣಲಿದೆ.

ಕೈಗಾರಿಕೆಗಳ ತುರ್ತು ಪುನಶ್ಚೇತನ ಅನಿವಾರ್ಯ
ನಮ್ಮ ಅರ್ಥ ವ್ಯವಸ್ಥೆಯಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರೋದ್ಯಮಗಳೇ (ಎಂಎಸ್​ಎಂಇ) ಶೇಕಡ 90 ಉದ್ಯೋಗ ಸೃಜಿಸುವಂಥದ್ದು. ಕೇವಲ ಶೇಕಡ 10 ಭಾಗದ ಉದ್ಯೋಗವಷ್ಟೇ ಬೃಹತ್​ ಕೈಗಾರಿಕಾ ವಲಯದಲ್ಲಿ ಸೃಷ್ಟಿಯಾಗುತ್ತವೆ. ಲಾಕ್​ಡೌನ್​ ಮಾಡಿದ್ದರಿಂದಾಗಿ ವಾಣಿಜ್ಯ ವಹಿವಾಟುಗಳು ಬಹುತೇಕ ನಿಂತುಹೋಗಿವೆ. ಲಾಕ್​ಡೌನ್​ ತೆರವುಗೊಳಿಸಿದ ಕೂಡಲೇ ಸರ್ಕಾರ ಎಂಎಸ್​ಎಂಇ ಕ್ಷೇತ್ರದ ಪುನಶ್ಚೇತನಕ್ಕೆ ಹೂಡಿಕೆ ಮಾಡಬೇಕಾದ್ದು ಅನಿವಾರ್ಯ. ಇಲ್ಲಿ ವ್ಯಾಪಾರೋದ್ಯಮ ವಹಿವಾಟು ಪುನರಾರಂಭಿಸಲು ಪ್ರಾರಂಭಿಕ ಬಂಡವಾಳ ಒದಗಿಸಬೇಕಾದ್ದು ಅವಶ್ಯ. ಹಣಕಾಸಿನ ನೆರವಿನ ಜತೆಗೆ ತಾಂತ್ರಿಕ ನೆರವನ್ನೂ ಕೊಡಬೇಕು.
ಕರೊನಾ ಸಂಕಷ್ಟದಿಂದಾಗಿ ಶಿವಮೊಗ್ಗದ ಮಾಚೇನಹಳ್ಳಿ ಇಂಡಸ್ಟ್ರಿಯಲ್​ ಏರಿಯಾದಲ್ಲಿರುವ ಬಹುತೇಕ ಸಣ್ಣ ಪುಟ್ಟ ಕೈಗಾರಿಕೋದ್ಯಮಗಳು ಮುಚ್ಚಿ ಹೋಗಿವೆ. ಆಟೋಮೊಬೈಲ್​ ಸಂಬಂಧಿತ ಚಟುವಟಿಕೆಗಳು ನಿಂತೇ ಹೋಗಿವೆ. ಇದನ್ನೇ ಆದಾಯ ಮೂಲವಾಗಿ ನಂಬಿದ್ದ ಕುಟುಂಬಗಳು ಸಂಕಷ್ಟಕ್ಕೆ ಈಡಾಗಿವೆ. ಉದ್ಯೋಗ ನಷ್ಟ, ಆದಾಯ ನಷ್ಟದ ಕಾರಣ ಕೆಲವು ಉದ್ಯಮಗಳನ್ನು ಪುನರಾರಂಭಿಸಲು ಮಾಲೀಕರು ಹರಸಾಹಸ ಪಡಬೇಕಾದ ಪರಿಸ್ಥಿತಿಯೂ ಇದೆ. ಇಂತಹುದೇ ಪರಿಸ್ಥಿತಿ ರಾಜ್ಯದ ಎಲ್ಲ ಜಿಲ್ಲೆಗಳ ಕೈಗಾರಿಕಾ ವಲಯದಲ್ಲಿ ಕಂಡುಬಂದೀತು. ಯಾವುದೇ ವ್ಯಾಪಾರೋದ್ಯಮವನ್ನು ಮುಚ್ಚುವುದು ಬಹಳ ಸುಲಭ. ಈಗ ವಹಿವಾಟು ಪುನರಾರಾಂಭಿಸಬೇಕಾದರೆ ಕಾರ್ಮಿಕರಿಗೆ, ಎಂಎಸ್​ಎಂಇ ಮಾಲೀಕರಿಗೆ ತುರ್ತು ಅಗತ್ಯ ನೆರವಿನ ಪ್ಯಾಕೇಜನ್ನು ಸರ್ಕಾರವೇ ತಕ್ಷಣ ಒದಗಿಸಬೇಕು. ಉದ್ಯೋಗಾಧಾರಿತ ಪ್ಯಾಕೇಜ್​ ಘೋಷಿಸಬೇಕು. ಇದು ಬಡತನ ನಿವಾರಣೆಗೆ ರಾಜಮಾರ್ಗವಾದೀತು. ಉಚಿತ ರೇಷನ್​ ಒದಗಿಸುವುದು ತಾತ್ಕಾಲಿಕ ಪರಿಹಾರವಾದೀತಷ್ಟೆ. ಸರ್ಕಾರ ಯಾವತ್ತಿಗೂ ತಾತ್ಕಾಲಿಕ ಪರಿಹಾರದ ಜತೆಗೆ ಸುಸ್ಥಿರ ಅಭಿವೃದ್ಧಿಗೆ ಕ್ರಮ ತೆಗೆದು ಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

|ಪ್ರೊ. ಬಿ.ಎಂ. ಕುಮಾರಸ್ವಾಮಿ ನಿವೃತ್ತ ಪ್ರಾಧ್ಯಾಪಕ, ಅರ್ಥಶಾಸ್ತ್ರಜ್ಞ

ಕರ್ನಾಟಕವೂ ಹೊರತಲ್ಲ...
ರಾಜ್ಯದಲ್ಲಿ ಬಹುತೇಕ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರೋದ್ಯಮಗಳು ಬಹುತೇಕ ಮುಚ್ಚಿವೆ. ವಾಣಿಜ್ಯ ವಹಿವಾಟು ಸರಿಯಾಗಿ ನಡೆಯದ ಕಾರಣ ಕೆಲವು ದೊಡ್ಡ ಮಾಲ್​ಗಳು, ಗಾರ್ಮೆಂಟ್ಸ್​  ಮತ್ತು ಇತರ ಕೈಗಾರಿಕೆಗಳೂ ಬಾಗಿಲು ಮುಚ್ಚಿವೆ. ಅನೇಕ ಸಂಸ್ಥೆಗಳಲ್ಲಿ ನೌಕರರ ಪ್ರಮಾಣವನ್ನು ಅರ್ಧಕ್ಕಿಂತಲೂ ಕಡಿಮೆಗೆ ಇಳಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳೂ ಇದಕ್ಕೆ ಹೊರತಾಗಿಲ್ಲ. ವಹಿವಾಟು ಮತ್ತು ಆದಾಯ ಇಲ್ಲದ ಕಾರಣ ವೇತನ ಕೊಡಲಾಗದೇ ಸಣ್ಣ ಪುಟ್ಟ ಕಂಪನಿಗಳು ಬಾಗಿಲು ಮುಚ್ಚಿವೆ. ರಾಜ್ಯದಲ್ಲಿ ಉದ್ಯೋಗ ನಷ್ಟ ಅಂದಾಜಿಸುವ ನಿಖರ ಸಮೀೆ ನಡೆದಿಲ್ಲ.

ಮಾಲ್​ಗಳಲ್ಲಿ 1.5 ಲಕ್ಷ ಉದ್ಯೋಗ ನಷ್ಟ
ಕರ್ನಾಟಕದಲ್ಲಿ ಲಾಕ್​ಡೌನ್​ ಕಾರಣದಿಂದಾಗಿ ಮಾಲ್​ಗಳಿಗೆ ತಿಂಗಳಿಗೆ 2,000 ಕೋಟಿ ರೂಪಾಯಿಯಂತೆ ಆದಾಯ ನಷ್ಟವಾಗಿದೆ. 1.5 ಲಕ್ಷ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಲಾಕ್​ಡೌನ್​ ತೆರವುಗೊಳಿಸಿದರೆ ಅರ್ಧದಷ್ಟು ಜನರಿಗೆ ಮಾತ್ರ ಉದ್ಯೋಗ ನೀಡುವುದು ಸಾಧ್ಯವಿದೆ ಎಂಬುದು ಶಾಪಿಂಗ್​ ಸೆಂರ್ಟಸ್​ ಅಸೋಸಿಯೇಷನ್​ ಆಫ್ ಇಂಡಿಯಾದ ಅಭಿಪ್ರಾಯ.