ಸೂಪರ್ಹಿಟ್ ‘ಥ್ರಿ ಈಡಿಯಟ್ಸ್’ ಚಿತ್ರದಲ್ಲೊಂದು ಸನ್ನಿವೇಶ. ಕಾಲೇಜಿನ ನೋಟಿಸ್ ಬೋರ್ಡ್ನಲ್ಲಿ ಫಲಿತಾಂಶ ಹುಡುಕುವಾಗ ಪ್ರಾರಂಭದಿಂದ ಬೇಡ, ಕೆಳಗಿನಿಂದ ಹುಡುಕು ಎಂದು ಪಾತ್ರಧಾರಿಯೊಬ್ಬ ಸ್ನೇಹಿತನಿಗೆ ಹೇಳುವ ಫೇಮಸ್ ಡೈಲಾಗ್ ಇದು. ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಘಟ್ಟ ತಲುಪಿ ಪ್ಲೇಆಫ್ ಅರ್ಹತೆಗೆ ಹಣಾಹಣಿ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಾರಂಭದಿಂದ ಬಲಾಢ್ಯವೆಂದುಕೊಂಡ ಕೆಲವು ಪವರ್ಹೌಸ್ ತಂಡಗಳ ಹೆಸರನ್ನು ಅಂಕಪಟ್ಟಿಯಲ್ಲಿ ಕೆಳಗಿನಿಂದ ನೋಡುವಂತಾಗಿದೆ. ಟೂರ್ನಿ ಆರಂಭಕ್ಕೆ ಮುನ್ನ ದುರ್ಬಲವೆನಿಸಿಕೊಂಡಿದ್ದ ಹೊಸ ತಂಡಗಳು ಅಂಕಪಟ್ಟಿಯ ಮೇಲ್ಭಾಗದಲ್ಲಿವೆ. ಕಾಲಚಕ್ರ ಮೇಲಿದ್ದವರನ್ನು ಕೆಳಕ್ಕೆಳೆಯುತ್ತದೆ, ಕೆಳಗಿದ್ದವರನ್ನು ಮೇಲೆಕ್ಕೆತ್ತುತ್ತದೆ.
ಐದು ಬಾರಿಯ ಚಾಂಪಿಯನ್, ಐಪಿಎಲ್ ಶುರುವಾದಾಗಿನಿಂದ ತನ್ನದೇ ಪ್ರಭಾವಳಿ ಬೆಳೆಸಿಕೊಂಡು ಬಂದಿರುವ ಮುಂಬೈ ಇಂಡಿಯನ್ಸ್ ಈ ಬಾರಿ ಲೀಗ್ನ ಕೊಟ್ಟಕೊನೆಯ ತಂಡವಾಗಿದೆ. ಆಟಗಾರರ ಹರಾಜು ಪ್ರಕ್ರಿಯೆಯ ಬಳಿಕ ‘ಇದೂ ಒಂದು ತಂಡವೇ’ ಎಂಬ ಗೇಲಿಗೆ ಒಳಗಾಗಿದ್ದ ಗುಜರಾತ್ ಟೈಟಾನ್ಸ್ ಮೊದಲ ತಂಡವಾಗಿ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಕೇವಲ ಬ್ರಾ್ಯಂಡ್ಗಳಿಂದ, ಸೂಪರ್ಸ್ಟಾರ್ಗಳಿಂದ, ಹಳೆಯ ಸಾಧನೆಗಳಿಂದ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಈ ಐಪಿಎಲ್ನಲ್ಲೂ ಮತ್ತೊಮ್ಮೆ ಸಾಬೀತಾಗಿದೆ.
ಈ ಬಾರಿ ಟೂರ್ನಿಯ ಇಂಥ ಒಂದು ಬುಡಮೇಲು ಸಾಧನೆಗೆ ಥ್ಯಾಂಕ್ಸ್ ಹೇಳಬೇಕಾಗಿರುವುದು ಆಟಗಾರರ ಹರಾಜು ಪ್ರಕ್ರಿಯೆಗೆ. ಲೀಗ್ನ ಪ್ರಮುಖ ತಂಡಗಳು ಕಳೆದ ಹಲವಾರು ವರ್ಷಗಳಿಂದ ಜತನದಿಂದ ಕಾಪಾಡಿಕೊಂಡು ಬಂದಿದ್ದ, ಬಲಾಢ್ಯವಾಗಿ ಕಟ್ಟಿಕೊಂಡಿದ್ದ ಆಟಗಾರರ ಕೋಟೆಯನ್ನು ಹರಾಜು ಪ್ರಕ್ರಿಯೆ ಛಿದ್ರಗೊಳಿಸಿತು. ಶ್ರೀಮಂತರ ಸಂಪತ್ತನ್ನೆಲ್ಲ ಮುಟ್ಟುಗೋಲು ಹಾಕಿಕೊಂಡು ಸಾರ್ವಜನಿಕವಾಗಿ ಹರಾಜು ಹಾಕಿದಂತೆ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ಕಿಂಗ್ಸ್ ಮೊದಲಾದ ತಂಡಗಳ ಪ್ರಮುಖ ಆಟಗಾರರು ಹರಾಜಿನಲ್ಲಿ ಬೇರೆಬೇರೆ ತಂಡಗಳ ಪಾಲಾದರು. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿನ ಜೀವಾಳವಾಗಿದ್ದ ವೇಗದ ಬೌಲರ್ಗಳು, ಆಲ್ರೌಂಡರ್ಗಳು ಅನ್ಯತಂಡಗಳ ವಶವಾಗಿ ದ್ದರು. ಐಪಿಎಲ್ 2022 ಎಲ್ಲ ತಂಡಗಳ ಪಾಲಿಗೆ ಹೊಸ ಆರಂಭವೇ ಆಗಿತ್ತು.
ಈ ಋತುವಿಗೆ ಮುನ್ನ ಎರಡು ಹೊಸ ತಂಡಗಳ ಘೋಷಣೆಯಾದಾಗ ಸಹಜವಾಗಿ ಕುತೂಹಲವಿತ್ತು. ಅದರಲ್ಲೊಂದು ಫ್ರಾಂಚೈಸಿ ಗುಜರಾತ್ ಪಾಲಾದಾಗ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಪ್ರಭಾವ ಎಂಬ ಮಾತಿತ್ತು. ತಂಡಕ್ಕೆ ಗುಜರಾತ್ ಟೈಟಾನ್ಸ್ ಎಂಬ ಹೆಸರಿಟ್ಟಾಗ ಬೇರೆ ಬೇರೆ ಕ್ರೀಡೆಗಳಲ್ಲಿ ಟೈಟಾನ್ಸ್ ಹೆಸರಿಟ್ಟುಕೊಂಡು ಸೋಲುತ್ತಿರುವ ತಂಡಗಳ ಉದಾಹರಣೆ ಸಹಿತ ಗೇಲಿ ಮಾಡಲಾಯಿತು. ತಂಡಕ್ಕೆ ಕೋಚ್ಗಳಾಗಿ ಗ್ಯಾರಿ ಕರ್ಸ್ಟನ್, ಆಶಿಶ್ ನೆಹ್ರಾ, ವಿಕ್ರಮ್ ಸೋಳಂಕಿಯಂಥವರು ನೇಮಕಗೊಂಡಾಗಲೂ ಒಂದು ಬಗೆಯ ತಾತ್ಸಾರವೇ ಇತ್ತು. ಕರ್ಸ್ಟನ್ ಟೀಮ್ ಇಂಡಿಯಾ ಕೋಚ್ ಆಗಿ ಭಾರೀ ಯಶಸ್ಸು ಕಂಡವರಾದರೂ, ಐಪಿಎಲ್ನಲ್ಲಿ ಆರ್ಸಿಬಿ ಕೋಚ್ ಆಗಿ ವಿಫಲರಾದವರು. ನೆಹ್ರಾಗೆ ಕೋಚಿಂಗ್ ಅನುಭವ ಇಲ್ಲ, ಸೋಳಂಕಿ ಬಗ್ಗೆ ಏನೂ ಗೊತ್ತಿಲ್ಲ ಎಂಬ ವಾತಾವರಣ. ಇನ್ನು ಹರಾಜಿಗೆ ಮುಂಚೆ ಹಾರ್ದಿಕ್ ಪಾಂಡ್ಯ, ರಷೀದ್ ಖಾನ್, ಶುಭಮಾನ್ ಗಿಲ್ರೊಂದಿಗೆ ಒಪ್ಪಂದ ಮಾಡಿಕೊಂಡಾಗಲೂ ಅಂಥ ಆಶಾಭಾವನೆಯೇನೂ ಇರಲಿಲ್ಲ. ಪಾಂಡ್ಯ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನವಿಲ್ಲವಾದರೂ, ಫಿಟ್ನೆಸ್ ಬಗ್ಗೆ ಇದ್ದೇ ಇತ್ತು. ಬೌಲಿಂಗ್ ಮಾಡುವಷ್ಟು ಫಿಟ್ ಇಲ್ಲ ಎಂಬ ಕಾರಣಕ್ಕೆ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಪಾಂಡ್ಯ ಟೈಟಾನ್ಸ್ ನಾಯಕರಾಗಿ ಆಯ್ಕೆಯಾಗಿದ್ದರು. ಅಫ್ಘಾನಿಸ್ತಾನದ ರಷೀದ್ ಖಾನ್ ಸ್ಪಿನ್ ಮೋಡಿಯ ಬಗ್ಗೆ ಎಲ್ಲರಿಗೂ ಅರಿವಿದ್ದರೂ, ಐಪಿಎಲ್ನಲ್ಲಿ ಈ ಹಿಂದೆ ಸನ್ರೈಸರ್ಸ್ ತಂಡ ಭಾಗವಾಗಿ ಅವರು ಹೆಚ್ಚೇನೂ ಸಾಧಿಸಿರಲಿಲ್ಲ. ಇನ್ನು ಶುಭಮಾನ್ ಗಿಲ್ ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್ ಎಂಬ ಭಾವನೆ ಇದ್ದರೂ, ಟಿ20 ಆಟಗಾರನಾಗಿ ಕೋಲ್ಕತ ನೈಟ್ರೈಡರ್ಸ್ ತಂಡವೇ ಅವರನ್ನು ರೀಟೇನ್ ಮಾಡಿಕೊಂಡಿರಲಿಲ್ಲ. ಆಟಗಾರರ ಹರಾಜು ಪ್ರಕ್ರಿಯೆಯಲ್ಲೂ ಟೈಟಾನ್ಸ್ ತಂಡದ ಆಯ್ಕೆಗಳು ವಿಚಿತ್ರವಾಗಿದ್ದವು. ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಅಭಿನವ್ ಮನೋಹರ್, ರಾಹುಲ್ ಥೆವಾಟಿಯಾ, ಡೇವಿಡ್ ಮಿಲ್ಲರ್, ಗುರುಕಿರಾತ್ಸಿಂಗ್ ಮಾನ್ ಹೀಗೆ ತಂಡದಲ್ಲಿ ಭರವಸೆ ಹುಟ್ಟಿಸುವಂಥ ಹೆಸರುಗಳೇ ಇರಲಿಲ್ಲ. ಟೂರ್ನಿ ಆರಂಭಕ್ಕೆ ಕೆಲವೇ ದಿನ ಇರುವಾಗ ಇಂಗ್ಲೆಂಡ್ನ ಖ್ಯಾತನಾಮ ಜೇಸನ್ ರೇ ಟೈಟಾನ್ಸ್ ತಂಡದಿಂದ ಹಿಂದೆ ಸರಿದರು. ಬೌಲಿಂಗ್ನಲ್ಲಿ ಲಾಕಿ ಫರ್ಗ್ಯುಸನ್, ಮೊಹಮದ್ ಶಮಿ ರೂಪದಲ್ಲಿ ವೆರೈಟಿ ಇದ್ದರೂ ತಂಡವನ್ನು ಗೆಲ್ಲಿಸಲು ಸಾಲದೆಂಬ ಭಾವನೆ ಇತ್ತು. ತಂಡ ಕೊನೆಯ ಕ್ಷಣದಲ್ಲಿ ವೃದ್ಧಿಮಾನ್ ಸಾಹರನ್ನು ಖರೀದಿಸುವವರೆಗೂ ಓರ್ವ ತಜ್ಞ ವಿಕೆಟ್ಕೀಪರ್ ಇರಲಿಲ್ಲ. ಸಾಹ ಬಗ್ಗೆಯೂ ಭರವಸೆ ಇಟ್ಟುಕೊಳ್ಳುವಂತಿರಲಿಲ್ಲ.
ಇಷ್ಟೆಲ್ಲ ನಕಾರಾತ್ಮಕ ಅಂಶಗಳ ನಡುವೆಯೂ ಟೈಟಾನ್ಸ್ ತಂಡ ಈ ಐಪಿಎಲ್ನಲ್ಲಿ ಮೆರೆದಿದ್ದು ಪವಾಡ. ಹಾಗೆ ನೋಡಿದರೆ, ಟೈಟಾನ್ಸ್ ಸಾಧಿಸಿದ್ದು ಸಾಂಘಿಕ ಯಶಸ್ಸು. ಅದು ಯಾರೋ ಒಬ್ಬ ಕರ್ಸ್ಟನ್, ನೆಹ್ರಾ, ಪಾಂಡ್ಯ ಅಥವಾ ರಷೀದ್ ಖಾನ್ ಯಶಸ್ಸಲ್ಲ. ಬದಲಿಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರವನ್ನು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಸಿಗುವಂಥ ಯಶಸ್ಸು. ಲೀಗ್ನಲ್ಲಿ ಟೈಟನ್ ಗೆದ್ದಿರುವ 9 ಪಂದ್ಯಗಳಲ್ಲೂ ಬೇರೆಬೇರೆಯವರು ಗೆಲುವಿನ ರೂವಾರಿಗಳಾಗಿರುವುದು ವಿಶೇಷ. ಲಖ್ನೋ ಸೂಪರ್ಜೈಂಟ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಮೊಹಮ್ಮದ್ ಶಮಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಾಕಿ ಫರ್ಗ್ಯುಸನ್, ಪಂಜಾಬ್ ಕಿಂಗ್ಸ್ ವಿರುದ್ಧ ಶುಭಮಾನ್ ಗಿಲ್, ರಾಜಸ್ಥಾನ ರಾಯಲ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ, ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ಡೇವಿಡ್ ಮಿಲ್ಲರ್, ಕೋಲ್ಕತ ನೈಟ್ರೈಡರ್ಸ್ ವಿರುದ್ಧ ರಷೀದ್ ಖಾನ್, ರಾಯಲ್ ಚಾಲೆಂಜರ್ಸ್ ವಿರುದ್ಧ ರಾಹುಲ್ ಥೆವಾಟಿಯ, ಲಖ್ನೋ ವಿರುದ್ಧ ಮರು ಪಂದ್ಯದಲ್ಲಿ ಮತ್ತೆ ಶುಭಮಾನ್ ಗಿಲ್ ಪಂದ್ಯಶ್ರೇಷ್ಠರಾದರು. ಅದರಲ್ಲೂ ತಂಡ ಮೊದಲ 6 ಓವರ್ಗಳ ಪವರ್ಪ್ಲೇನಲ್ಲಿ ತಾನು ಬ್ಯಾಟಿಂಗ್ ಮಾಡುವಾಗ ಹೆಚ್ಚು ವಿಕೆಟ್ ಕಳೆದುಕೊಂಡಿಲ್ಲ. ಆದರೆ, ಎದುರಾಳಿಗಳ ಹೆಚ್ಚು ವಿಕೆಟ್ ಕಬಳಿಸಿದೆ. ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ಥೆವಾಟಿಯ, ರಷೀದ್ ಖಾನ್ ರೂಪದಲ್ಲಿ ಒಬ್ಬರಲ್ಲದಿದ್ದರೆ ಮತ್ತೊಬ್ಬ ಫಿನಿಶರ್ಗಳು ಪ್ರತಿ ಪಂದ್ಯದಲ್ಲೂ ಕೈಹಿಡಿಯುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್, ಸಾಯಿ ಸುದರ್ಶನ್ ಅವಕಾಶ ದೊರೆತ ಪಂದ್ಯಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಬೌಲಿಂಗ್ನಲ್ಲಿ ಶಮಿ, ಫರ್ಗ್ಯುಸನ್ಗೆ ಅಲ್ಝರಿ ಜೋಸೆಫ್, ಯಶ್ ದಯಾಳ್ ಸಾಥ್ ನೀಡುತ್ತಿದ್ದಾರೆ. ಟೈಟಾನ್ಸ್ ಸದ್ಯದ ಆಟ ನೋಡಿದರೆ, ಚೊಚ್ಚಲ ಅವಕಾಶದಲ್ಲೇ ಚಾಂಪಿಯನ್ ಆದರೂ ಅಚ್ಚರಿಪಡುವಂತಿಲ್ಲ.
ಟೈಟಾನ್ಸ್ಗೆ ಹೋಲಿಸಿದರೆ, ಮುಂಬೈ ಇಂಡಿಯನ್ಸ್ ತಂಡದ ಹಣೆಬರಹ ಪೂರ್ತಿ ಬುಡಮೇಲಾಗಿದೆ. ಹಿಂದೆಲ್ಲ ಮುಂಬೈ ತಂಡ ಸರ್ವಬಲಾಢ್ಯವಾಗಿತ್ತು. ರೋಹಿತ್ ಶರ್ಮ ಮತ್ತು ಕ್ವಿಂಟನ್ ಡಿ ಕಾಕ್ ಆರಂಭದಲ್ಲಿ ಅಬ್ಬರಿಸುತ್ತಿದ್ದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಸ್ಪೋಟಿಸುತ್ತಿದ್ದರು. ಹಾರ್ದಿಕ್, ಕೃನಾಲ್ ಪಾಂಡ್ಯ ಸೋದರರು, ಪೊಲ್ಲಾರ್ಡ್ರಂಥ ಆಲ್ರೌಂಡ್ ಫಿನಿಶರ್ಗಳು ಪೈಪೋಟಿ ಮೇಲೆ ಆಡುತ್ತಿದ್ದರು. ಸ್ಪಿನ್, ವೇಗದ ಬೌಲಿಂಗ್ ವಿಭಾಗದಲ್ಲೂ ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳಿದ್ದರು. ಆದರೆ, ಈ ಆವೃತ್ತಿಯಲ್ಲಿ ಮುಂಬೈ ಪರದಾಟ ಸರ್ವಾಂಗೀಣವಾಗಿದೆ. ನಾಯಕ
ರೋಹಿತ್ಗೆ ಫಾಮ್ರ್, ಅದೃಷ್ಟ ಎರಡೂ ಕೈಕೊಟ್ಟರೆ, ಹರಾಜಿನಲ್ಲಿ 15 ಕೋಟಿಗೂ ಹೆಚ್ಚಿನ ಮೌಲ್ಯ ಪಡೆದ ಇಶಾನ್ ಕಿಶಾನ್ ಆ ಭಾರ ಹೊರಲಾಗದೆ ಸೊರಗಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಏಕಾಂಗಿಯಾದರು. ಕೊನೆಗೆ ಗಾಯವೂ ಅವರನ್ನು ಬಾಧಿಸಿತು. ಹೊಸಬರ ಪೈಕಿ ತಿಲಕ್ ವರ್ಮ ಹೆಚ್ಚುಕಡಿಮೆ ಎಲ್ಲ ಪಂದ್ಯಗಳಲ್ಲೂ ಗಮನ ಸೆಳೆದರೂ, ತಂಡವನ್ನು ಸೋಲಿನ ಪಾತಾಳದಿಂದ ಮೇಲೆತ್ತುವಂಥ ಕಿಲ್ಲರ್ ಪಂಚ್ ಇರಲಿಲ್ಲ. ಡೆವಾಲ್ಡ್ ಬ್ರೆವಿಸ್, ಟಿಮ್ ಡೇವಿಡ್ರಂಥ ಪ್ರತಿಭಾವಂತರನ್ನು ತಂಡ ಎಲ್ಲ ಪಂದ್ಯಗಳಲ್ಲೂ ಬಳಸಿಕೊಳ್ಳಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ಪೊಲ್ಲಾರ್ಡ್ ಐಪಿಎಲ್ನಲ್ಲೂ ಸುಸ್ತಾಗಿದ್ದಾರೆ. ಒಂದು ಪಂದ್ಯದಲ್ಲೂ ಅವರು ತಂಡದ ನಿರೀಕ್ಷೆಗಳ ನೊಗ ಹಿಡಿಯಲಿಲ್ಲ. ಪಾಂಡ್ಯ ಬ್ರದರ್ಸ್ ಗೈರು ಮುಂಬೈಗೆ ಬಹುವಾಗಿ ಕಾಡಿತು. ಬೌಲಿಂಗ್ ಕಷ್ಟವಂತೂ ಹೇಳತೀರದು. ಜಸ್ಪ್ರೀತ್ ಬುಮ್ರಾ ಸರಿಯಾದ ಜೋಡೆತ್ತು ಇಲ್ಲದೆ ಒದ್ದಾಡುವಂತಾಯಿತು. ಟೂರ್ನಿಗೆ ಲಭ್ಯವೇ ಇಲ್ಲದ ಜೋಫ್ರಾ ಆರ್ಚರ್ಗೆ 10 ಕೋಟಿ ರೂ. ಕೊಟ್ಟು ಕೈಬರಿದು ಮಾಡಿಕೊಂಡ ಮುಂಬೈ ದುರ್ಬಲ ಬೌಲಿಂಗ್ನಿಂದಾಗಿ ಹಲವು ಪಂದ್ಯ ಸೋಲುವಂತಾಯಿತು. ಗೆಲುವೆನ್ನುವುದು ಎ ಪ್ಲಾ್ಯನ್, ಬಿ ಪ್ಲಾ್ಯನ್ಗಳನ್ನು ಆಧರಿಸಿ ನಿರ್ಧಾರವಾಗುವುದಿಲ್ಲ. ಫಲಿತಾಂಶ ಕೊನೆ ಕ್ಷಣದಲ್ಲಿ, ಕೊನೆ ಓವರ್ನಲ್ಲಿ, ಕೊನೆ ಎಸೆತದಲ್ಲಿ ನಿರ್ಧಾರವಾಗುವ ಹಲವು ಪಂದ್ಯಗಳಲ್ಲಿ ಎಷ್ಟೋ ಬಾರಿ ಮನೋಬಲವೂ ಮುಖ್ಯವಾಗುತ್ತದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಹೊಸಮುಖ ಶಶಾಂಕ್ ಸಿಂಗ್ ಟೈಟಾನ್ಸ್ ತಂಡದ ಲಾಕಿ ಫರ್ಗ್ಯುಸನ್ ಎಸೆದ ಇನಿಂಗ್ಸ್ನ ಕೊನೆಯ ಓವರ್ನಲ್ಲಿ 25 ರನ್ ಸಿಡಿಸಿದ್ದರು. ಪ್ರತಿಯಾಗಿ ಟೈಟಾನ್ಸ್ಗೆ ಗೆಲ್ಲುವುದಕ್ಕೆ ಕೊನೆಯ ಓವರ್ನಲ್ಲಿ 22 ರನ್ ಅಗತ್ಯವಿತ್ತು. ‘ನಮ್ಮ ಅತ್ಯುತ್ಯಮ ಬೌಲರ್ ಲಾಕಿಗೆ ಅವರು 25 ರನ್ ಹೊಡೆಯಬಹುದಾದರೆ, ನಾವೂ ಕೊನೆಯ ಓವರ್ನಲ್ಲಿ 22 ರನ್ ಗಳಿಸಬಹುದು ಎಂದು ಮಾತನಾಡಿಕೊಂಡ ರಷೀದ್ ಖಾನ್ ಮತ್ತು ಥೆವಾಟಿಯ, ದಕ್ಷಿಣ ಆಫ್ರಿಕಾದ ಮಾರ್ಕೆ ಜನ್ಸೆನ್ ಬೌಲಿಂಗ್ನಲ್ಲಿ 4 ಸಿಕ್ಸರ್ ಒಳಗೊಂಡ 25 ರನ್ ಸಿಡಿಸಿ ಗೆದ್ದೇ ಬಿಟ್ಟರು. ಇಂಥ ಕೆಚ್ಚಿನಾಟ, ಮನೋಬಲ ಮುಂಬೈ ಆಟಗಾರರಿಂದ ಆದ್ಯಂತವಾಗಿ ಕಂಡುಬರಲೇ ಇಲ್ಲ. ಟೈಟಾನ್ಸ್ ಫಲಿತಾಂಶ ಹೇಗೂ ಆಗಬಹುದಿದ್ದ 6 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆದ್ದು ಮುನ್ನಡೆದರೆ, ಮುಂಬೈ ಕನಿಷ್ಠ ಮೂರ್ನಾಲ್ಕು ಗೆಲ್ಲಬಹುದಾಗಿದ್ದ ಪಂದ್ಯಗಳನ್ನು ಸೋತು ಅಂಕಪಟ್ಟಿಯ ತಳ ಸೇರಿತು.
ಐಪಿಎಲ್ ಎನ್ನುವುದು ಒಂದು ಬೃಹತ್ ಪ್ರಯೋಗಶಾಲೆ. ವಿವಿಧ ದೇಶಗಳ ಹನ್ನೊಂದು ಖ್ಯಾತನಾಮರು ಒಟ್ಟಿಗೆ ಆಡಿದ ಮಾತ್ರಕ್ಕೆ ಒಂದು ಉತ್ತಮ ತಂಡ ರೂಪು ಗೊಳ್ಳಲು ಸಾಧ್ಯವಿಲ್ಲ. ಅಲ್ಲಿ ತಾಳಮೇಳ ಬೇಕು, ಏಕತ್ವ ಭಾವ ಬೇಕು, ಆಡುವವರು, ಆಡಿಸುವವರು, ತಂತ್ರಗಾರರು, ಫಿಟ್ನೆಸ್, ಆರೋಗ್ಯ, ಅದೃಷ್ಟ, ಕೊನೆಗೆ ಗೆಲ್ಲಲೇ ಬೇಕೆಂಬ ಛಲ ಎಲ್ಲವೂ ಸೇರಿ ಒಂದು ಯಶಸ್ವಿ ತಂಡ ರೂಪುಗೊಳ್ಳುತ್ತದೆ. ಈ ಬಾರಿಯ ಐಪಿಎಲ್ ಇದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಅಷ್ಟಕ್ಕೂ ಯಶಸ್ಸು ಅನುವಂಶಿಕವಲ್ಲ. ಅದು ಸ್ವಯಾರ್ಜಿತ. ‘ಗೆದ್ದೇ ಗೆಲ್ಲುವೆ ಒಂದು ದಿನ...’ ಎನ್ನುವ ಒಳ್ಳೆತನ ಐಪಿಎಲ್ನಲ್ಲಿ ನಡೆಯುವುದಿಲ್ಲ. ಗೆಲ್ಲಲೇಬೇಕೆಂಬ ಹಟ, ಹೋರಾಟ ಇದ್ದರಷ್ಟೇ ಆಟ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)