ಅಂಕಣ

ಅಧ್ಯಾತ್ಮದ ಹಾದಿಯಲ್ಲಿನ ಗೊಂದಲ ಮತ್ತು ಸ್ಪಷ್ಟತೆ

ಒಂದು ವೇಳೆ ಕೇವಲ ಬೆಳಗಿನ ಉಪಾಹಾರ ತಿಂದುಕೊಂಡು, ಕಾಫಿ ಕುಡಿದುಕೊಂಡು ಸಂತೋಷದಿಂದ ಇದ್ದೀರಿ ಮತ್ತು ಸಂಪೂರ್ಣವಾಗಿ ಸಂತುಷ್ಟರಾಗಿದ್ದೀರಿ ಎಂದರೆ ಬೇರೆ ಯಾವುದೇ ವಿಷಯವನ್ನು ಪ್ರಯತ್ನಿಸುತ್ತಿರಲಿಲ್ಲ. ಎಲ್ಲೋ ಒಂದು ಕಡೆ ನಿಮಗೆ ಕೊರತೆ ಕಾಣಿಸಿದೆ. ಇದು ಈಗ ಇರುವ ಪರಿಸ್ಥಿತಿಯ ಮಿತಿಯನ್ನು ಕಂಡುಕೊಂಡು, ಜೀವನದಲ್ಲಿ ಮುಂದಿನ ಹಂತಕ್ಕೆ ಹೋಗುವ ವಿಷಯವಾಗಿದೆ.

ನಾವು ಈಗ ಇರುವ ಪರಿಸ್ಥಿತಿಯನ್ನು ಮೀರಿ ಅನುಭವದ ಇತರ ಆಯಾಮಗಳಿಗೆ ಹೋಗುವ ಪ್ರಯತ್ನ ಮಾಡಿದಾಗ ಕೆಲವು ಸಂದರ್ಭಗಳು ಗೊಂದಲವನ್ನು ಉಂಟುಮಾಡಬಹುದು. ಇದಕ್ಕೆ ಪರಿಹಾರವೆಂದರೆ ನೀವು ನಿಮ್ಮೊಳಗೆ ಅಗತ್ಯವಾದ ವಿವೇಕ ಮತ್ತು ಸಮತೋಲನವನ್ನು ಬೆಳೆಸಿಕೊಳ್ಳಬೇಕು, ಇಲ್ಲದಿದ್ದರೆ ಈ ಗೊಂದಲವು ವಿಪರೀತ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಒಂದು ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತೀರಿ ಮತ್ತು ಇದ್ದಕ್ಕಿದ್ದಂತೆ ನೀವು ಎಲ್ಲಿಗೆ ಸೇರಿದವರು ಎನ್ನುವುದೇ ತಿಳಿಯುವುದಿಲ್ಲ ಯಾವಾಗಲೂ ಗೊಂದಲಕ್ಕೊಳಗಾಗುತ್ತೀರಿ. ಅಂದರೆ ನಿರಂತರವಾಗಿ ಹೊಸ ಆಯಾಮವನ್ನು ಪ್ರವೇಶಿಸಿಸುತ್ತಿದ್ದೀರಿ ಎಂದರ್ಥ. ಯಾವಾಗಲೂ ಗೊತ್ತಿರುವ ಸಂಗತಿಗಳೊಂದಿಗೇ ಬದುಕಿದರೆ, ಅಲ್ಲಿ ಖಾತರಿ ಇರುತ್ತದೆ ಆದರೆ ಪ್ರಗತಿ ಇರುವುದಿಲ್ಲ.

ಹಿಂದಕ್ಕೆ ಹೆಜ್ಜೆ ಹಾಕುವಂತಿಲ್ಲ: ಇದು ಸರ್ಕಸ್​ನಲ್ಲಿ ಉಯ್ಯಾಲೆ ಆಡಿದಂತೆ. ಉಯ್ಯಾಲೆ ಆಡುವಾಗ, ಅದು ಚೆನ್ನಾಗೆಯೇ ಇರುತ್ತದೆ. ನೀವು ನಿಮ್ಮ ಉಯ್ಯಾಲೆಯನ್ನು ಬಿಟ್ಟು ಇನ್ನೊಂದನ್ನು ಹಿಡಿಯಲು ಪ್ರಯತ್ನಿಸಿದಾಗ, ಆ ಮಧ್ಯದ ಅಂತರ ಭಯಂಕರವಾಗಿ ಇರುತ್ತದೆ, ಏಕೆಂದರೆ ನೀವು ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲವಾಗುತ್ತೀರಿ. ಜೀವನದ ಇತರ ಆಯಾಮಗಳನ್ನು ಅನ್ವೇಷಿಸಲು, ತಿಳಿಯಲು ಮತ್ತು ಅನುಭವಿಸಲು ಹೋಗುವವರ ಪರಿಸ್ಥಿತಿ ಇದೇ ತರಹ ಇರುತ್ತದೆ.

ಅವರು ಇನ್ನೊಂದು ಮಗ್ಗುಲನ್ನು ತಿಳಿಯಲು ಬಯಸುತ್ತಾರೆ. ಆದರೆ ತಮಗೆ ಪರಿಚಿತವಿರುವ ಸಂಗತಿಗಳಿಂದ ಒಂದು ಕ್ಷಣದ ಮಟ್ಟಿಗಾದರೂ ಬಿಡುಗಡೆ ಹೊಂದಲು ಬಯಸುವುದಿಲ್ಲ, ಹಾಗಾಗಿ ಹೆಣಗಾಟ ಅನಗತ್ಯವಾಗಿ ದೀರ್ಘಕಾಲಿಕವಾಗಿಬಿಡುತ್ತದೆ. ನಿಮ್ಮ ಉಯ್ಯಾಲೆಯಿಂದ ಜಿಗಿದರೆ ಮತ್ತೊಂದು ಕಡೆಯ ಉಯ್ಯಾಲೆ ನಿಮ್ಮ ಹಿಡಿತಕ್ಕೆ ಸಿಗುವಂತೆ ಯಾವಾಗಲೂ ಸರಿಯಾದ ಸ್ಥಳದಲ್ಲಿ ಇರುತ್ತದೆ. ಆದರೆ ಅದರ ಬದಲಾಗಿ, ಅದನ್ನು ಪೂರ್ತಿಯಾಗಿ ಬಿಟ್ಟುಬಿಡದೇ ಸುಮ್ಮನೆ ತೂಗಾಡುವುದು, ಹಿಡಿತವನ್ನು ಸಡಿಲಿಸುವುದು ಅಥವಾ ನಿಮ್ಮ ಕಿರುಬೆರಳಿನಿಂದ ಹಿಡಿದುಕೊಂಡಿರುವುದು ಮಾಡುತ್ತಿದ್ದರೆ, ಅದೊಂದು ಹಿಂಸೆಯಾಗಿಬಿಡುತ್ತದೆ.

ಪರಿಚಿತ ಆಯಾಮವನ್ನು ಬಿಟ್ಟು ಬೇರೆಯದನ್ನು ಅನ್ವೇಷಿಸಿ ಎಂದು ಹೇಳಿದಾಗ ನಿಮ್ಮ ಕಚೇರಿ ಅಥವಾ ಮನೆಯನ್ನು ಬಿಟ್ಟು ಬೇರೆ ಕಡೆ ಹೋಗಿ ಎಂದಲ್ಲ. ಇದು ಆಂತರ್ಯದ ಪ್ರಕ್ರಿಯೆ. ನಿಮ್ಮ ಒಳಗೆ, ನೀವು ಅಂಟಿಕೊಂಡಿರುವ ಮತ್ತು ಗುರುತಿಸಿಕೊಂಡಿರುವ ವಿಷಯಗಳನ್ನು ಬಿಡಬೇಕು ಎಂದರ್ಥ.

ಜೀವನದಲ್ಲಿ ಕೊರತೆಯಿದೆ ಎಂದೆನಿಸಿದ್ದರಿಂದ ಅಧ್ಯಾತ್ಮದ ಕಡೆಗೆ ಹೆಜ್ಜೆ ಇಟ್ಟಿದ್ದೀರಿ. ಒಂದು ವೇಳೆ ಕೇವಲ ಬೆಳಗಿನ ಉಪಾಹಾರ ತಿಂದುಕೊಂಡು, ಕಾಫಿ ಕುಡಿದುಕೊಂಡು ಸಂತೋಷದಿಂದ ಇದ್ದೀರಿ ಮತ್ತು ಸಂಪೂರ್ಣವಾಗಿ ಸಂತುಷ್ಟರಾಗಿದ್ದೀರಿ ಎಂದರೆ ಬೇರೆ ಯಾವುದೇ ವಿಷಯವನ್ನು ಪ್ರಯತ್ನಿಸುತ್ತಿರಲಿಲ್ಲ. ಎಲ್ಲೋ ಒಂದು ಕಡೆ ನಿಮಗೆ ಕೊರತೆ ಕಾಣಿಸಿದೆ. ಬೇರೆ ಏನನ್ನೋ ತಿಳಿದುಕೊಳ್ಳಬೇಕು ಮತ್ತು ಅನುಭವಿಸಬೇಕು ಎಂದೆನಿಸಿದೆ. ಇದು ಈಗಿನ ಅಸ್ತಿತ್ವವನ್ನು ಕಡೆಗಣಿಸುವ ಬಗ್ಗೆಯಲ್ಲ. ಇದು ಈಗ ಇರುವ ಪರಿಸ್ಥಿತಿಯ ಮಿತಿಯನ್ನು ಕಂಡುಕೊಂಡು, ಜೀವನದಲ್ಲಿ ಮುಂದಿನ ಹಂತಕ್ಕೆ ಹೋಗುವ ವಿಷಯವಾಗಿದೆ.

ಈ ರೀತಿಯ ಅತಂತ್ರ ಸ್ಥಿತಿ ಎದುರಾದಾಗ ಅಲ್ಲಿಯೂ ಇಲ್ಲದೆ ಇಲ್ಲಿಯೂ ಇಲ್ಲದೆ ಗೊಂದಲ ಉಂಟಾಗುತ್ತದೆ. ಅರವತ್ತರ ದಶಕದಲ್ಲಿ ಅಮೆರಿಕದಲ್ಲಿ ಶುರುವಾದ ಹಿಪ್ಪಿ ಚಳವಳಿಯ ಬಗ್ಗೆ ಗೊತ್ತಿರಬೇಕು. ಜನರು ತಮಗೆ ಗೊತ್ತಿದ್ದನ್ನು ಬಿಟ್ಟು ಹೊಸ ಜೀವನವನ್ನು ಮಾಡಲು ಪ್ರಯತ್ನಿಸಿದರು. ಅವರಿಗೆ ಸಮಾಜದ ಎಲ್ಲ ನಡವಳಿಕೆಗಳು ಉಸಿರುಗಟ್ಟಿದಂತಾದವು, ಅವರು ಅವೆಲ್ಲವನ್ನೂ ಮುರಿದು ಏನಾದರೂ ಹೊಸದನ್ನು ಮಾಡಲು ಬಯಸಿದರು.

ಬಹಳಷ್ಟು ರೀತಿಗಳಲ್ಲಿ ಅವರು ಪ್ರಾಮಾಣಿಕರಾಗಿದ್ದರು. ಆದರೆ ಅವರು ಎಲ್ಲ ಕೆಟ್ಟ ಕೆಲಸಗಳನ್ನು ಮಾಡಲು ಮುಂದಾದರು. ಅವರು ಎಷ್ಟು ಗೊಂದಲಕ್ಕೆ ಒಳಗಾದರೆಂದರೆ ಅವರ ಇಡೀ ಪೀಳಿಗೆ ದೀರ್ಘಕಾಲದವರೆಗೆ ಗೊಂದಲಮಯ ಮತ್ತು ಹಿಂಸಾತ್ಮಕವಾಗಿಬಿಟ್ಟಿತು. ಆದರೆ ತಮಗೆ ತಿಳಿದಿದ್ದುದನ್ನು ಬಿಟ್ಟು, ತಮಗೆ ತಿಳಿಯದ ಆಯಾಮಕ್ಕೆ ಹೆಜ್ಜೆಯಿಡುವ ಅವರ ಹಂಬಲ ಮತ್ತು ಪ್ರಾಮಾಣಿಕ ಪ್ರಯತ್ನ ಅದ್ಭುತವಾಗಿತ್ತು. ಸರಿಯಾದ ಮಾರ್ಗದರ್ಶನವಿದ್ದಿದ್ದರೆ ಆ ತಲೆಮಾರು ಒಂದು ಅದ್ಭುತ ಸಾಧ್ಯತೆಯಾಗುತ್ತಿತ್ತು. ಈ ಆಂದೋಲನ ಭಾರತದಲ್ಲಿ ಅಷ್ಟಾಗಿ ಕಂಡುಬರಲಿಲ್ಲ.

ಆದರೆ ಅಮೆರಿಕದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಇಡೀ ದೇಶವನ್ನೇ ಅಲುಗಾಡಿಸಿಬಿಟ್ಟಿತು. ಅವರಿಗೆ ಏನು ಮಾಡಬೇಕೆಂದು ತಿಳಿಯದಿದ್ದಾಗ ಮತ್ತು ತಮ್ಮ ಮಿತಿಯನ್ನು ಮುರಿಯುವುದು ಹೇಗೆ ಎಂಬುದು ತಿಳಿಯದಿದ್ದಾಗ ಅವರು ಮದ್ಯ, ಡ್ರಗ್ಸ್ ಮತ್ತು ಇತರ ದುಶ್ಚಟಗಳ ದಾಸರಾದರು. ಅದಕ್ಕೆ ಒಂದು ಕಾರಣವೆಂದರೆ ತಾರತಮ್ಯವನ್ನು ಹೋಗಲಾಡಿಸುವುದು. ಮೊದಲ ಬಾರಿಗೆ, ಗಂಡಸರು ಮತ್ತು ಹೆಂಗಸರು ಒಂದೇ ರೀತಿಯ ಉಡುಪನ್ನು ಧರಿಸಲಾರಂಭಿಸಿದರು.

ಈ ರೀತಿಯ ಒಬ್ಬ ಹಿಪ್ಪಿ ದಂಪತಿ ನ್ಯೂಯಾರ್ಕ್​ನ ಭಾರತೀಯ ರಾಯಭಾರ ಕಚೇರಿಗೆ ಬಂದರು. ಏಕೆಂದರೆ ಆ ಸಮಯದಲ್ಲಿ ಭಾರತವು ಒಂದು ದೊಡ್ಡ ತಾಣವಾಗಿತ್ತು. ಪ್ರತಿಯೊಬ್ಬರೂ ಮುಕ್ತಿಯ ಬಗ್ಗೆ ಮಾತಾಡುತ್ತಿದ್ದದ್ದರಿಂದ, ಭಾರತವು ಬೇರೊಂದು ಸಾಧ್ಯತೆಯ ಭರವಸೆ ನೀಡುತ್ತಿದ್ದದ್ದರಿಂದ, ಬಹಳ ಜನರು ಇಲ್ಲಿಗೆ ಬರಲು ಸಾಲುಗಟ್ಟಿದ್ದರು. ಹಾಗಾಗಿ ಭಾರತೀಯ ರಾಯಭಾರ ಕಚೇರಿಗೆ ಬಂದರು. ಅಲ್ಲಿ ಶಂಕರನ್ ಪಿಳ್ಳೆ ೖ ಅಧಿಕಾರಿಯಾಗಿದ್ದರು. ಈ ದಂಪತಿಯನ್ನು ನೋಡಿ, ಅವರಿಗೆ ಯಾರು ಪುರುಷ ಮತ್ತು ಯಾರು ಮಹಿಳೆ ಎಂದು ನಿರ್ಧರಿಸಲು ಸಾಧ್ಯವಾಗಲಿಲ್ಲ. ನಂತರ ಅವರು ಕೇಳಿದರು, ‘ನಿಮ್ಮಲ್ಲಿ ಯಾರಿಗೆ ಮೆನ್​ಸ್ಟ್ರುಯಲ್ ಸೈಕಲ್ (ಋತುಚಕ್ರ) ಇದೆ?’ ಅದಕ್ಕೆ ಒಬ್ಬ ಹಿಪ್ಪಿ ಹೇಳಿದ್ದು, ‘ಇಲ್ಲ ಸರ್, ನನ್ನ ಬಳಿ ಹೋಂಡಾ ಇದೆ!’

ಹಾಗಾಗಿ, ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಎಂದರೆ ಹಾಗೆಯೇ ಬಹಳ ವಿಷಯಗಳು ಕಲಸುಮೇಲೋಗರವಾಗುತ್ತವೆ. ಪರಿಚಯವಿಲ್ಲದ ಸಂಗತಿಗಳತ್ತ ಹೆಜ್ಜೆ ಹಾಕುವ ಪ್ರಯತ್ನ ಮಾಡಿದ ನಂತರ, ಪರಿಚಿತ ಸಂಗತಿಗಳ ಕಡೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ. ಅದು ಹೆಜ್ಜೆ ಹಿಂದಕ್ಕೆ ಹಾಕಿದಂತೆಯೇ. ಗೊಂದಲವಾದಾಗ, ಹಿಂದೆ ಸರಿಯಬೇಡಿ. ಪ್ರತಿದಿನ ಪರಿಚಯವಿಲ್ಲದ ಪ್ರದೇಶಕ್ಕೆ ಕಾಲಿಡುತ್ತಿದ್ದರೆ, ಯಾವಾಗಲೂ ಗೊಂದಲಕ್ಕೊಳಗಾಗುತ್ತೀರಿ.

ಈ ಗೊಂದಲವನ್ನು ನಿಮ್ಮನ್ನು ನೀವೇ ಸೋಲಿಸುವ ಪ್ರಕ್ರಿಯೆಯಾಗುವ ಬದಲು, ಸರಿಯಾಗಿ ಮತ್ತು ಲಾಭದಾಯಕವಾಗಿ ನಿರ್ವಹಿಸಬೇಕಾಗಿದೆ. ವಿಷಯಗಳನ್ನು ಸ್ಪಷ್ಟವಾಗಿ ನೋಡಲು ವಿಶಾಲವಾದ ದೃಷ್ಟಿಕೋನ ಬೇಕು. ಜೀವನವನ್ನು ಅದು ಇರುವ ಹಾಗೇ ನೋಡುವ ಸಾಮರ್ಥ್ಯವು ಸುಮ್ಮನೆ ಉಚಿತವಾಗಿ ಬರುವುದಿಲ್ಲ. ವಿವೇಕವನ್ನು ಪಡೆಯಲು ಅಗತ್ಯವಾದ ಕೆಲಸಗಳನ್ನು ಮಾಡಬೇಕು. ಇದು ಆಕಸ್ಮಿಕವಾಗಿ ಆಗುವುದಿಲ್ಲ.

ಪ್ರಕ್ರಿಯೆಯನ್ನು ಆನಂದಮಯವಾಗಿಸಿಕೊಳ್ಳುವುದು: ಆಧ್ಯಾತ್ಮಿಕ ಪ್ರಕ್ರಿಯೆಯು ನೋವಿನಿಂದ ಕೂಡಿರಬಾರದು, ಅದು ಆನಂದಮಯ ಪ್ರಕ್ರಿಯೆಯಾಗಬೇಕಾದರೆ, ಅದಕ್ಕಿರುವ ಒಂದು ಮಾರ್ಗ ಭಕ್ತಿ. ನೀವು ಭಕ್ತರಾಗಿದ್ದರೆ, ಗೊಂದಲವು ಒಂದು ಸಮಸ್ಯೆಯಲ್ಲ. ಆದರೆ ಮನಸ್ಸು ಎಲ್ಲವನ್ನೂ ಪ್ರಶ್ನಿಸಿದರೆ ಅದು ಸಾಧ್ಯವಾಗುವುದಿಲ್ಲ. ಆಗ, ಯಾವುದು ಸತ್ಯ ಮತ್ತು ಯಾವುದು ಅಸತ್ಯ ಎಂಬುದನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ, ಅದು ಸಾಧ್ಯವಾಗುವುದು ಹಿಂದಿನ ಅನುಭವಗಳು ಮತ್ತು ಜೀವನದ ಸ್ಥಿತಿಗತಿಗಳ ಪ್ರಭಾವದಿಂದಲ್ಲ, ಬದಲಾಗಿ ತೀಕ್ಷ ್ಣವಾದ ವಿವೇಚನೆಯಿಂದ. ಇದನ್ನು ಮಾಡಲು ಬಯಸಿದರೆ, ಮೊದಲಿಗೆ ಹರಿತವಾದ ಬುದ್ಧಿಶಕ್ತಿಯನ್ನು ಬೆಳೆಸಿಕೊಳ್ಳಬೇಕು, ಅದರಿಂದ ವಿಷಯಗಳನ್ನು ಸರಿಯಾಗಿ ಭೇದಿಸಿ ನೋಡಬಹುದು.

ಪರಿಚಿತವಾದುದನ್ನು ವಿಶ್ಲೇಷಿಸಲು ಮತ್ತು ಏಕೆ ಅದರ ಕಡೆಗೆ ಒಲವು ಹೊಂದಿದ್ದೀರಿ ಎಂಬುದರ ಮೂಲವನ್ನು ನೋಡಲು ಇಷ್ಟಪಡದಿದ್ದರೆ, ಅಪರಿಚಿತವಾದ ಹೊಸತಾದ ವಿಚಾರಗಳ ಕಡೆಗೆ ನೀವು ಹೆಜ್ಜೆ ಹಾಕುವುದಿಲ್ಲ. ಈಗ ಇರುವ ಪರಿಸ್ಥಿತಿಯ ಟೊಳ್ಳುತನವನ್ನು ಕಾಣದಿದ್ದರೆ, ಹೊಸ ವಿಚಾರಗಳ ಕಡೆ ಹೋಗುವ ಛಲ ಬಲಗೊಳ್ಳುವುದಿಲ್ಲ. ಹಾತೊರೆಯುವಿಕೆ ಬಲವಾಗಿರದಿದ್ದರೆ ಯಾವಾಗಲೂ ಅತಂತ್ರರಾಗಿರುತ್ತೀರಿ.

ನಮ್ಮ ಜೀವನವನ್ನು ತೆರೆದು, ಎಲ್ಲವನ್ನೂ ಪರಿಶೀಲಿಸಿ ಮತ್ತು ಅದು ಏನು; ಯಾವುದು ಯೋಗ್ಯವಾಗಿದೆ, ಯಾವುದು ಯೋಗ್ಯವಾಗಿಲ್ಲ ಎನ್ನುವುದನ್ನು ನೋಡದೆ ಹಂಬಲವು ಬಲಗೊಳ್ಳುವುದಿಲ್ಲ. ಅದನ್ನು ಅರ್ಥಹೀನಗೊಳಿಸುವುದರ ಬಗ್ಗೆ ಅಲ, ಅದನ್ನು ಹಾಸ್ಯಾಸ್ಪದವಾಗಿಸುವ ಬಗ್ಗೆಯೂ ಅಲ್ಲ. ಅದನ್ನು ವೈಭವೀಕರಿಸುವುದಿಲ್ಲ. ಎಲ್ಲವನ್ನೂ ಅದು ಇರುವ ರೀತಿಯಲ್ಲೇ ನೋಡಬೇಕು. ಎಲ್ಲವನ್ನೂ ಅದರ ನೈಜ ರೀತಿಯಲ್ಲಿ ನೋಡಿದರೆ, ಒಂದೇ ಸ್ಥಳದಲ್ಲಿ ನಿಂತಿರುವುದರಲ್ಲಿ ಅರ್ಥವಿಲ್ಲ ಎಂದು ಅರಿವಾಗುತ್ತದೆ. ನೀವು ಚಲಿಸಬೇಕು; ಇದು ನಿಮಗೆ ಬಹಳ ಸ್ಪಷ್ಟವಾಗುತ್ತದೆ.

ಈ ಎರಡು ವಿಷಯಗಳು ಸಾಧ್ಯವಾಗದಿದ್ದರೆ, ನೀವು ನಿಮ್ಮನ್ನು ಚಟುವಟಿಕೆಗೆ ಒಳಪಡಿಸಬೇಕು. ಅರ್ಥಪೂರ್ಣವಾಗಿ ಯಾವುದೇ ವಿಷಯ ಕಂಡರೂ ಅದರಲ್ಲಿ ಸುಮ್ಮನೆ ತೊಡಗಿಸಿಕೊಳ್ಳಿ ಅಥವಾ ಮತ್ತೊಂದು ಸಾಧ್ಯತೆಯೆಂದರೆ, ನಿಮ್ಮ ಶಕ್ತಿಯನ್ನು ಹುಚ್ಚೆಬ್ಬಿಸುವುದು, ಎಷ್ಟರ ಮಟ್ಟಿಗೆಂದರೆ ಮನಸ್ಸು ಏನೋ ಹೇಳುತ್ತಿರುತ್ತದೆ, ಭಾವನೆ ಮತ್ತೇನೋ ಹೇಳುತ್ತಿರುತ್ತದೆ, ಆದರೆ ಶಕ್ತಿಗಳು ಒಂದು ಉನ್ನತ ಹಂತಕ್ಕೆ ಏರಿರುವುದರಿಂದ ಯಾವುದೂ ಮುಖ್ಯವೆನಿಸುವುದಿಲ್ಲ. ಮನಸ್ಸು ತಪ್ಪಾಗಿರಬಹುದು, ಅದು ಬಹಳಷ್ಟು ಸಲ ತಪ್ಪು ಮಾಡಿದೆ ಮತ್ತದು ತಪ್ಪು ಮಾಡುತ್ತಲೇ ಇರುತ್ತದೆ. ಆದರೆ ಜೀವಶಕ್ತಿಗಳು ಎಂದಿಗೂ ತಪ್ಪಾಗುವುದಿಲ್ಲ. ಜೀವಶಕ್ತಿಗಳಿಗೆ ಸರಿತಪ್ಪುಗಳ ವ್ಯತ್ಯಾಸ ಗೊತ್ತಿಲ್ಲ. ಅವುಗಳಿಗೆ ಗೊತ್ತಿರುವುದು ಜೀವನ ಮತ್ತು ಜೀವನ ಮಾತ್ರ. ಅದು ಹೆಚ್ಚು ತೀವ್ರವಾಗಿದೆಯೋ ಅಥವಾ ಕಡಿಮೆ ತೀವ್ರವಾಗಿದೆಯೋ ಎಂಬುದಷ್ಟೇ ಮುಖ್ಯ. (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)