ಅಂಕಣ

ಬರೇ ಗೋತ್ರ ಬಿಟ್ಟರ ನಡಿಯಂಗಿಲ್ಲಾ.. ಕೋವಿಶೀಲ್ಡ್ ತೊಗೊಂಡವಂಗ ಕೋವ್ಯಾಕ್ಸಿನ್ ತೊಗೊಂಡೊಕಿನ್ ಕೊಡಬಹುದಾ?

Webdesk - Ravikanth

ಮೊನ್ನೆ ಮುಂಜ ಮುಂಜಾನೆ ನಮ್ಮ ರಕ್ಷಕ್ಕ ಫೇಸಬುಕ್ಕಿನಾಗ ಒಂದ ಸ್ಟೇಟಸ್ ಹಾಕಿದ್ಲು. ಹಂಗ ಅಕಿ ಫೇಸಬುಕ್ಕಿನಾಗ ಮೊದ್ಲಿಂದ ಭಾರಿ ಆಕ್ಟೀವ್, ಒಂಥರಾ ಫೇಸಬುಕನಾಗಿನ ಹೀರೆಮನಷ್ಯಾಳ ಅನ್ನರಿ. ಇನ್ನ ಲಾಕ್​ಡೌನ್ ಆದಾಗಿಂದಂತೂ ಗಂಡಂದೂ, ಮಗಳದೂ ಇಬ್ಬರದೂ ವರ್ಕ್ ಫ್ರಾಮ್ ಹೋಮ್ ಅಂದ ಮ್ಯಾಲೆ ಅಕಿ ಮತ್ತಿಷ್ಟ ಫ್ರೀ ಆಗಿದ್ಲ. ಅದರಾಗ ಅಕಿ ಫೇಸಬುಕ್ಕಿನಾಗ ಇಷ್ಟ ಮಂದಿಗೆ ಹಚಗೊಂಡಾಳ ಅಂದರ ಅಕಿ ಬೈ ಮಿಸ್ಟೇಕ್ ಏನು ಟೈಪ್ ಮಾಡಲಾರದ ಬರೇ ಫುಲಸ್ಟಾಪ್ ಹಾಕಿ ಪೋಸ್ಟ್ ಮಾಡಿದ್ರೂ ಒಂದ ಐವತ್ತ ಮಂದಿ ಅದರಾಗ ಏನೋ ಅರ್ಥ ಅದ ಅಂತ ಕಣ್ಣಮುಚ್ಚಿ ಲೈಕ್ ಮಾಡ್ತಾರ. ಅಲ್ಲಾ ಅವರೇಲ್ಲಾ ಬ್ಲೈಂಡ್ ಫಾಲೋವರ್ಸ್ ಬಿಡ್ರಿ. ಅಕಿ ಒಂಥರಾ ಫೇಸ್​ಬುಕ್ ಸೆಲಿಬ್ರಿಟಿನ ಅನ್ನರಿ.

ಅವತ್ತೀನ ಸ್ಟೇಟಸ್ ಏನಿತ್ತಪಾ ಅಂದರ- ‘ಕೋವಿಶೀಲ್ಡ್ ತೊಗೊಂಡವಂಗ ಕೋವ್ಯಾಕ್ಸಿನ್ ತೊಗೊಂಡೊಕಿನ್ ಕೊಡಬಹುದಾ?’ ಅಂತ ಇತ್ತ. ನಾ ಅದನ್ನ ನೋಡಿದವನ ಏನಿಲ್ಲದ ಇಲ್ಲೆ ನಾವ ಕನ್ಯಾ ಇದ್ದ ಮನಿಯವರಿಗೆ ನಮ್ಮ ಹುಡಗನ್ನ ನಿಮ್ಮ ಮನಿಗೆ ಕೊಡಬಹುದಾ ಅಂತ ದಯನಾಸ ಪಡತಿರ್ತೇವಿ ಹಂತಾದರಾಗ ಇಕೇಲ್ಲೇರ ಕನ್ಯಾದವರ ವರಕ್ಕ ಹೂಂ ಅನ್ನಲಿಕ್ಕೆ ಮತ್ತೊಂದ ಕ್ರೖೆಟೇರಿಯಾ ಜಾಸ್ತಿ ಮಾಡಿಸಿ-ಗಿಡಿಸ್ಯಾಳ ತಡಿ ಅಂತ ಇಮ್ಮಿಡಿಯೇಟ್ ಆಗಿ

‘ನಮ್ಮವ್ವಾ ಇದ್ದದ್ದ parameters ಒಳಗ ವರಗೊಳಿಗೆ ಕನ್ಯಾ ಸಿಗವಲು, ನೀ ಹಿರೇಮನಷ್ಯಾಳ ಆಗಿ ಇದ್ದದ್ದ parameters ಕಡಮಿ ಮಾಡೋದ ಬಿಟ್ಟ ಮತ್ತ ಅದಕ್ಕ ಚಛಛ ಮಾಡಬ್ಯಾಡ್ವಾ... ನಂಗ ಗಂಡಸ ಮಗಾ ಇದ್ದಾನ. ನಾಡಿ-ನಡಾ, ಗುಣಾ,ಗೋತ್ರ, ನಕ್ಷತ್ರ, ರಾಶಿ, ಗ್ರಹ... ಇದರ ಜೊತಿ ಮತ್ತ ವ್ಯಾಕ್ಸಿನ್ ಒಂದ ಸೇರಸ ಬ್ಯಾಡ್ವಾ. ಮುಂದಿನ ವರ್ಷ ಪಂಚಾಂಗದಾಗ ಅದರ ಬಗ್ಗೆನೂ ಬರದರ ಏನ ಮಾಡೋದ’ ಅಂತ ಕಮೆಂಟ್ ಬರದೆ.

ಹಂಗ ಬ್ಯಾರೆವರೆಲ್ಲ ಭಾರಿ ಭಾರಿ ಕಮೆಂಟ್ಸ್ ಬರದರ ನಮ್ಮ ಜಯಾ- ‘ಏ, ಹಂಗೆಲ್ಲ ನಡಿತದ. ಆದರ ಮದ್ವಿ ಆದಮ್ಯಾಲೆ ಇಬ್ಬರಿಗೂ ಇನ್ನೊಮ್ಮೆ ಫೈಜರ್ ವ್ಯಾಕ್ಸಿನ್ ಕೊಟ್ಟ ಶಾಂತಿ ಮಾಡಸಬೇಕು’ ಅಂದಾ. ಅಲ್ಲಾ ಇಲ್ಲೇ ನೋಡಿದರ ನಮಗ ಎರಡನೇ ಡೋಸ್ ವ್ಯಾಕ್ಸಿನಗೆ ಒಟಿಪಿ ಬರವಲ್ತ, ಪಾಳೆ ಸಿಗವಲ್ತ, ಕೋವಿನ್ ಆಪ್ ನೋಡಿದ್ರ ಜ್ಯಾಮ್ ಆಗಲಿಕತ್ತದ. ಇಂವಾ ಎಲ್ಲಿ ಮೂರನೇ ಡೋಸ್ ತಂದಾ ಅಂತ ಸಿಟ್ಟ ಬಂತ. ಅಲ್ಲಾ ಪುಣ್ಯಾಕ್ಕ ಇಬ್ಬರೂ ಫೈಜರ್ ಡೋಸ್ ತೊಗೊಂಡಮ್ಯಾಲೆ ಪ್ರಸ್ತಾ ಮಾಡಬೇಕು ಅಂತ ಹೇಳಲಿಲ್ಲಾ.

ನಮ್ಮ ನಾಗು ‘ಕೋವೀ ಮತ್ತ ಕೋವ್ಯಾ ಅಂದ ಮ್ಯಾಲೆ ಜೋಡಿ ಸರೀನ ಇರ್ತದ, ಭಾಳ ತಲಿಕೆಡಸಿಗೊಳ್ಳೊದ ಬ್ಯಾಡ ತೊಗೊ’ ಅಂತ ಏನ ‘ಕೋವಿ-ಕೋವ್ಯಾ’ ಅವರ ಮನಿ ಅಂಗಳದಾಗ ಆಡೋ ಹುಡಗಾ-ಹುಡಗಿ ಗತೆ ಹೇಳಿದಾ. ಅಲ್ಲಾ ಪುಣ್ಯಾತ್ಮ ವ್ಯಾಕ್ಸಿನ್ ಒಳಗೂ ಸ್ತ್ರೀಲ್ಲಿಂಗ- ಪುಲ್ಲಿಂಗ ನೋಡಲಿಕತ್ತಾನಲಾ. ಇಲ್ಲೆ ನೋಡಿದರ ನಮಗ ಇವತ್ತಿಗೂ ಕರೊನಾ ಪುಲ್ಲಿಂಗೊ, ಸ್ತ್ರೀಲಿಂಗೊ ಏನ ನಪುಸಕಲಿಂಗನೋ ಅನ್ನೋದ ಗೊತ್ತಾಗವಲ್ತ.

ಮತ್ತೊಬ್ಬರು ‘ಭಟ್ಟರು ಸ್ಪುಟ್ನಿಕ್ ವಿ ತೊಗೊಂಡಿದ್ದರ ನಡಿತದ’ ಅಂತ ಅಂದರ ‘ಅಡಗಿಯವರ ಆಸ್ಟ್ರಾಝೆನ್ಕಾ ತೊಗೊಂಡಿರಬೇಕು’ ಅಂತ ಇನ್ನೊಬ್ಬರ ಬರದರು. ಸ್ವಲ್ಪ ಇದ್ದದ್ದರಾಗ ಸೈನ್ಸ್- ಸಂಸ್ಕೃತಿ ತಿಳದವರ ಒಬ್ಬರು ‘ಬರೇ ಗೋತ್ರ ಬಿಟ್ಟರ ನಡಿಯಂಗಿಲ್ಲಾ... ವ್ಯಾಕ್ಸಿನ್ ಬಿಡಬೇಕ. ಹಂಗ ಇಬ್ಬರು ಒಂದ ವ್ಯಾಕ್ಸಿನ್ ತೊಗೊಂಡರ ಏಕ ನಾಡಿ ಆಗ್ತದ ಅದ ನಡಿಯಂಗಿಲ್ಲಾ’ ಅಂತ ಅಗದಿ ಎಸಿ ರೂಮ್ ಒಳಗ ಮಾಸ್ಕ್ ಹಾಕ್ಕೊಳಲಾರದ ಸೀತಂಗ ಹೇಳಿದರು. ಅಂದರ ಎಲ್ಲಾರಿಗೂ ವೈರಲ್ ಆಗೊಂಗ ಹೇಳಿದರು.

ಇನ್ನ ಒಬ್ಬೊಂವಾ ‘ಹುಡುಗ ಕೋವಿಶೀಲ್ಡ್ ತೊಗೊಂಡರ ಕೋವಿಡ್​ನಿಂದ ಬಚಾವ್ ಆಗಬಹುದು. ಆದರ ಮದ್ವಿ ಆದ ಹುಡಗಿಯಿಂದ ಅಂತೂ ಅಲ್ಲಾ, ಹಿಂಗಾಗಿ ಯಾರ ಯಾವ ವ್ಯಾಕ್ಸಿನ್ ತೊಗೊಂಡರ ಏನ’ ಅಂತ ಅಗದಿ ಪ್ರಾ್ಯಕ್ಟಿಕಲ್ ಆಗಿ ಹೇಳಿದಾ. ನನಗಂತೂ ಅದ ಅಗದಿ ಬೀಜ ಮಾತ ಅನಸ್ತ. ಅಲ್ಲಾ ಈಗ ಏನಿಲ್ಲದ ಜನಾ ಒಬ್ಬೊರಿಗೊಬ್ಬರ ಫೋನ್ ಮಾಡಿದರ, ‘ನಿಂಬದ ಕೋವ್ಯಾಕ್ಸಿನ್ನೊ ಇಲ್ಲಾ ಕೋವಿಶೀಲ್ಡೊ’ ಅಂತ ಕೇಳ್ತಾರ ಇನ್ನ ಸಂಬಂಧ ಬೆಳಸಬೇಕಾರ ಅಗದಿ ‘ನೀವು ಸ್ಮಾರ್ತರೋ ಇಲ್ಲಾ ವೈಷ್ಣವರೋ’ ಅಂತ ಕೇಳಿದಂಗ ‘ನೀವು ಕೋವ್ಯಾಕ್ಸಿನೋ ಇಲ್ಲಾ ಕೋವಿಶೀಲ್ಡೊ’ ಅಂತ ಕೇಳೆ ಕೇಳ್ತಾರ ತೊಗೊರಿ. ಇಬ್ಬರೂ ಒಂದ ತೊಗೊಂಡಿದ್ದರ ಸಗೋತ್ರ ಆಗ್ತದ ಅಂತ ಅನ್ನೋರ ಅಂದರು. ಹಂಗ ಇಬ್ಬರದೂ ಬ್ಯಾರೆ ಬ್ಯಾರೆ ವ್ಯಾಕ್ಸಿನ್ ಇತ್ತಂದರ ಇಬ್ಬರನೂ ಮದ್ವಿ ಆದಮ್ಯಾಲೆ ಹದಿನೈದ ದಿವಸ ಕ್ವಾರಂಟೈನ್ ಮಾಡ್ಬೇಕ ಅಂತ ಇನ್ನೊಬ್ಬರ ಅಂದರು. ಅಲ್ಲಾ ಹೆಂಗಿದ್ದರೂ ಹನಿಮೂನಗೆ ಹೋಗೆ ಹೋಗ್ತಾರ, ಅದ ಕ್ವಾರಂಟೈನ್ ಇದ್ದಂಗ ಬಿಡ್ರಿ.

ನಮ್ಮ ರಕ್ಷಕ್ಕ ಫೇಸ್​ಬುಕ್ ಸ್ಟೇಟಸ್ ಹಾಕಿ ಸುಮ್ಮನ ಕೂಡಬೇಕಿಲ್ಲ, ದೊಡ್ಡಿಸ್ತನ ಮಾಡಿ ಪ್ರಾಣೇಶ ಆಚಾರ್ಯಗೆ ಫೋನ್ ಮಾಡಿ, ‘ಕೋವಿಶೀಲ್ಡ್ ತೊಗೊಂಡವರಿಗೆ ಕೋವ್ಯಾಕ್ಸಿನ್ ತೊಗೊಂಡೊಕಿನ್ ಕೊಡಬಹುದಾ?’ ಅಂತ ಅವರನೂ ಕೇಳಿದ್ಲಂತ. ಅವರ ಸಿಟ್ಟಿಗೆದ್ದ ‘ಉತ್ತಾರಾದಿ ಮಠದ ಪಂಚಾಂಗದಾಗ ಅಂತು ಕೊಟ್ಟಿಲ್ಲಾ, ರಾಯರ ಮಠದ ಪಂಚಾಗ ನೋಡಿ ಹೇಳ್ತಿನಿ’ ಅಂತ ಬೈದರು. ಅಕಿ ಎಲ್ಲೇರ ಇನ್ನ ನನಗ ಕೇಳಿಗೀಳ್ಯಾಳ ಅಂತ ನಾ ಮೊದ್ಲ ‘ಏ... ನನಗೇನ ಕೇಳಬ್ಯಾಡ್ವಾ, ನಾವ ಶೃಂಗೇರಿ ಮಠದ ಪಂಚಾಂಗದವರ’ ಅಂತ ಹೇಳಿ ಬಿಟ್ಟೆ.

ಇನ್ನೊಂದ ಮಜಾ ಕೇಳ್ರಿಲ್ಲೇ. ಒಬ್ಬರ ಹೀರೆಮನಷ್ಯಾರ ಅಗದಿ ಸೀರಿಯಸ್ ಆಗಿ, ‘ಹುಡಗಾ- ಹುಡಗಿ ಯಾವ ವ್ಯಾಕ್ಸಿನ್ ತೊಗೊಂಡರು ಅನ್ನೋದ ಇಂಪಾರ್ಟೆಂಟ್ ಅಲ್ಲಾ. ಒಟ್ಟ ಇಬ್ಬರು ಕೋವರ್ಜಿನ್ ಇದ್ದರ ಸಾಕ’ ಅಂದರು, ನಾ ಗಾಬರಿ ಆಗಿ ಇದೇಲ್ಲಿ ವರ್ಡ್ ಬಂತಪಾ ಅಂತ

’sir, can you explain covirgin meaning, please’ ಅಂದರ ‘ಏ, ನಾ ಹೇಳಿದ್ದ ಒಟ್ಟ ಹುಡಗಾ ಹುಡಗಿಗೇ ಈ ಮೊದ್ಲ ಕರೊನಾ ಪಾಸಿಟಿವ್ ಬಂದಿದ್ದಿಲ್ಲಾ ಅಂದರ ಆತಪಾ, ಅದಕ್ಕ ಕೋವರ್ಜಿನ್ ಅಂತಾರ’ ಅಂತ ನಕ್ಕರ. ನಾ ಹಣಿ-ಹಣಿ ಬಡ್ಕೊಂಡೆ.

ಈಗ ನಮ್ಮ ಪೈಕಿ ಕನ್ಯಾ ಕಡಮಿ ಆಗಿದ್ದಕ್ಕ ಒಟ್ಟ ಕನ್ಯಾ ಇದ್ದರ ಸಾಕ, ಕುಂಡ್ಲಿ, ಗೋತ್ರ, ಜಾತಿ ಏನ ನೋಡದ ಬ್ಯಾಡ ಅಂತೇವಲಾ ಹಂಗ ಸುಮ್ಮನ ಯಾವದರ ವ್ಯಾಕ್ಸಿನ್ ಇರವಲ್ತಾಕ ಲಗ್ನ ಆದರ ಸಾಕ ಅಂತ ಅನಸ್ತದ.

ಅಲ್ಲಾ, ಹಂಗ ಒಂದಿಷ್ಟ ಮಂದಿ ಇತ್ತೀಚೆಗೆ ನಮ್ಮ ಕಡೆ ಎಂಗೇಜಮೆಂಟ್ ಆದ ಕೂಡ್ಲೇನ ಮದ್ವಿ ರಿಜಿಸ್ಟ್ರೇಶನ್ ಮಾಡಸಿಬಿಡ್ತಾರ. ಮುಂದ ಹುಡಗಿಗೆ ವಿಸಾ ಲಗೂನ ಸಿಗ್ಲಿ ಅಂತ. ಇನ್ನ ಮುಂದ ಆ ಮದ್ವಿ ರಿಜಿಸ್ಟ್ರೇಶನ್ ಜೊತಿ ವ್ಯಾಕ್ಸಿನಗೂ ರಿಜಿಸ್ಟ್ರೇಶನ್ ಮಾಡಿಸಿ ಬಿಟ್ಟರ ಮದ್ವಿ ಟೈಮ್ ತನಕಾ ವ್ಯಾಕ್ಸಿನ್ ಸಿಕ್ಕ ಸಿಗ್ತದ. ಅದರಾಗ ನಮ್ಮ ಹುಡುಗರ ಹಣೆಬರಹ ಇವತ್ತ ಹೆಂಗ ಆಗೇದ ಅಂದರ ಈ ವಾಕ್ಸಿನ್ ಸಹಿತ ಮದ್ವಿಗೆ ಹುಡುಗಿ ಹುಡುಕಿದಂಗ ಆಗೇದ, ಮೊದ್ಲ ಸಿಗಬೇಕಾರ ತೊಗೊರಿಪಾ ಅಂದರ ತೊಗೊಳಿಲ್ಲಾ, ಈಗ ತೊಗೊಬೇಕ ಅಂದರ ವ್ಯಾಕ್ಸಿನ್ ಸಿಗವಲ್ತ. ಅದರಾಗ ಇನ್ನೊಂದ ವಿಚಿತ್ರ ಅಂದರ ಒಂದ ಕಡೆ ನಮ್ಮ ಹುಡುಗರು ನಲವತೆôದರ ಹತ್ತರ ಬಂದಾವ ಅಂತ ಕನ್ಯಾ ಸಿಗವಲ್ವು, ಇಲ್ಲೇ ನೋಡಿದರ ನಲವತೆôದು ಇನ್ನೂ ದಾಟಿಲ್ಲಾ ಅಂತ ಡಿವ್ಯಾಕ್ಸಿನ್ ಕೊಡವಲ್ಲರ. ಏನ್ಮಾಡ್ತೀರಿ?

ಇರಲಿ, jokes apart ಯಾರ ಯಾರ ವಾಕ್ಸಿನ್ ತೊಗೊಂಡಿಲ್ಲಾ, ದಯವಿಟ್ಟ ತೊಗೊರಿ. ಯಾವದ ತೊಗೊಂಡ್ರು ನಡಿತದ, ಅದರಾಗ ಏನ ಹಿಂತಾ ಗೋತ್ರದವರ ಹಿಂತಾದ ತೊಗೊಬೇಕು ಅಂತ ಏನ ಇಲ್ಲಾ. ಆದರ ಒಂದನೇದ ಕೋವಿಶೀಲ್ಡ್ ತೊಗೊಂಡಿದ್ದರ ಎರಡನೇದು ಕೋವಿಶೀಲ್ಡ್ ತೊಗೊಬೇಕ ಇಷ್ಟ. ಅಲ್ಲಾ ಕರೊನಾ ಕಾಟಕ್ಕ ಅಲ್ಲದಿದ್ದರೂ ಎಲ್ಲೆ ನಮ್ಮ ರಕ್ಷಕ್ಕ ಹೇಳಿದಂಗ ನಾಳೆ ಕನ್ಯಾ ಕೋಡೋರ ‘ಏನ ಕಲತಿ ತಮ್ಮಾ’ ಅಂದ ಮುಂದ ‘ಯಾ ವ್ಯಾಕ್ಸಿನ್ ತೊಗೊಂಡಿ ಸರ್ಟಿಫಿಕೇಟ್ ತೊರಸ ಅಂದರ ಏನ್ಮಾಡ್ತೀರಿ?’ ಅಲ್ಲಾ ಹಂಗ ಸರ್ಟಿಫಿಕೇಟ್ ಲಗ್ನಾ ಆಗೋರಿಗೆ ಇಷ್ಟ ಅಪ್ಲಿಕೇಬಲ್ ಇರಬಹುದು. ಆದರ ವ್ಯಾಕ್ಸಿನ್ ಮಾತ್ರ ಎಲ್ಲಾರೂ ತೊಗೊಳಬೇಕ ಬಿಡ್ರಿ.

(ಲೇಖಕರು ಹಾಸ್ಯ ಬರಹಗಾರರು)