ಇಪ್ಪತ್ತು ವರ್ಷದ ಹಿಂದೆ ಮುಸ್ಸಂಜೆ, ಅಮೆರಿಕದ ಶ್ರೀಮಂತ ಬಡಾವಣೆಯಾದ ಸಂತಮೊನಿಕಾದಲ್ಲಿ ಸ್ನೇಹಿತ ಮಾರ್ಕ್ನೊಂದಿಗೆ ವಾಕಿಂಗ್ ಮಾಡುತ್ತಿದ್ದೆ. ಅಚಾನಕ್ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕೋಟಿ ಡಾಲರ್ ಬೆಲೆಯ, ಮೇಲ್ಛಾವಣಿ ಇಲ್ಲದ ಸ್ಪೋರ್ಟ್ಸ್ ಕಾರೊಂದು ಕಣ್ಣಿಗೆ ಬಿತ್ತು. ಸ್ನೇಹಿತನ ಗಮನವನ್ನು ಅದರತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾಗ ಆತ, ‘ಆ ಕಾರು ಬಿಡು, ಅಲ್ನೋಡು ಯಾರು ಬರುತ್ತಿದ್ದಾರೇಂತ’ ಎಂದು ಎದುರಿನಿಂದ ಕಾರಿನತ್ತ ಬರುತ್ತಿದ್ದ ಆಜಾನುಬಾಹು ವ್ಯಕ್ತಿಯೊಬ್ಬನನ್ನು ತೋರಿಸಿದ. ಯಾರನ್ನು ಕಾಣಬೇಕೆಂದು ಹಲವು ವರ್ಷಗಳಿಂದ ಹಂಬಲಿಸುತ್ತಿದ್ದೆನೋ ಆತನೇ ಆ ವ್ಯಕ್ತಿಯಾಗಿದ್ದ, ಪ್ರಪಂಚದ ದುಬಾರಿ ನಟ, ವಿಶ್ವವಿಖ್ಯಾತ ಸ್ನಾಯುಪಟು (ಮಿಸ್ಟರ್ ಯುನಿವರ್ಸ್), ಅಮೆರಿಕದ ಸೆನೆಟರ್, ನನ್ನ ಮೆಚ್ಚಿನ ನಟ ಅರ್ನಾಲ್ಡ್ ಶ್ವಾರ್ಜಸಿಗರ್ ನನ್ನ ಎದುರಿಗಿದ್ದ!
ಕೂಡಲೇ ಆಟೋಗ್ರಾಫ್ ಪಡೆಯಲು ಪೌಚ್ನಲ್ಲಿದ್ದ ನೋಟ್ಪ್ಯಾಡೊಂದನ್ನು ಹೊರತೆಗೆದೆ. ಗೆಳೆಯ ಮಾರ್ಕ್ ನನ್ನನ್ನು ಹಿಡಿದೆಳೆದು ‘ಆತ ಯಾರಿಗೂ ಆಟೋಗ್ರಾಫ್ ಕೊಡುವುದಿಲ್ಲ’ ಎಂದು ತಡೆದ. ಆದರೂ ಅರ್ನಾಲ್ಡ್ ಬಳಿ ಓಡಿದೆ. ಪೆನ್ನು ಮತ್ತು ಪ್ಯಾಡನ್ನು ಅವನ ಮುಂದೆ ಚಾಚಿದೆ. ಉಹುಂ, ಆತ ನನ್ನನ್ನು ಕಡೆಗಣಿಸಿ ಕಾರಿನತ್ತ ತೆರಳಿದ. ಹಟ ಬಿಡದೆ ಕಾರಿನ ಬಲಭಾಗದ ಕಡೆಗೆ ಹೋಗಿ, ಆತ ಕಾರನ್ನು ಸ್ಟಾರ್ಟ್ ಮಾಡುವುದನ್ನೇ ನೋಡುತ್ತಿದ್ದೆ. ಮುಖದಲ್ಲಿ ಆತನನ್ನು ನೋಡಿದ ಖುಷಿ ಹಾಗೂ ಆತನಿಂದ ತಿರಸ್ಕೃತನಾದ ಹತಾಶೆ ಎರಡೂ ಮಿಶ್ರವಾಗಿತ್ತು. ಕಾರ್ ಸ್ಟಾರ್ಟ್ ಆಯಿತು. ತಕ್ಷಣ ಆತ ನನ್ನೆಡೆಗೆ ಕೈ ಚಾಚಿದ. ನಾನು ಕೂಡಲೇ ಪೆನ್, ಪ್ಯಾಡ್ ಕೊಟ್ಟೆ. ಕ್ಷಣಾರ್ಧದಲ್ಲಿ ತನ್ನ ಆಟೋಗ್ರಾಫ್ ಹಾಕಿ ಪ್ಯಾಡನ್ನು ಕೊಟ್ಟ.
ನನಗೆ ಆಟೋಗ್ರಾಫ್ ಕೊಟ್ಟದ್ದನ್ನು ನೋಡಿದ ಕೆಲವರು ಆತನ ಕಾರಿನೆಡೆಗೆ ಧಾವಿಸಿದರು. ಆದರೆ ಕೋಟಿ ಡಾಲರ್ ಮೌಲ್ಯದ ಕಾರು ಶತಕೋಟಿ ಡಾಲರ್ ಮೌಲ್ಯದ ನಟನನ್ನು ಹೊತ್ತುಕೊಂಡು ಶರವೇಗದಲ್ಲಿ ಮರೆಯಾಯಿತು. ಕೇವಲ ಹಟ ಮತ್ತು ಪ್ರಯತ್ನದಿಂದ ಅಂದು ನಾನು ಗೆದ್ದಿದ್ದೆ.
ಸೋತು ಗೆದ್ದವ: ಬಾಲ್ಯದಿಂದಲೇ ದೇವರನ್ನು ನಂಬದ ನಾನು ಆ ದಿನ ದೇವರ ಮನೆಯಲ್ಲಿ ಕಣ್ಣುಮುಚ್ಚಿ ಕುಳಿತಿದ್ದೆ. ‘ಭಗವಂತಾ, ನೀನಿರುವುದು ಸತ್ಯ ಎಂದಾದರೆ, ಐದು ನಿಮಿಷಗಳ ಮಟ್ಟಿಗೆ ಯಾವ ಯೋಚನೆಯೂ ನನ್ನ ಮನಸ್ಸಿಗೆ ಬರದಂತೆ ಮಾಡು’ ಎಂದು ಬೇಡಿಕೊಂಡೆ. ಉಹುಂ, ಸಾಧ್ಯವಾಗಲೇ ಇಲ್ಲ. ಮರುಕ್ಷಣವೇ ಅಲ್ಲಿಂದ ಎದ್ದು ಹೊರಬಂದೆ. ಕಷ್ಟ ಬಂದಾಕ್ಷಣ ಎಲ್ಲರೂ ದೇವರಿಗೆ ಮೊರೆಹೋಗುತ್ತಾರೆ ತಾನೆ? ಆದರೆ, ಐವತ್ತು ವರ್ಷದ ಬದುಕಿನಲ್ಲಿ ಸುಖ, ದುಃಖ, ಸಂತೋಷ, ಸಂಕಟ ಏನೇ ಬಂದರೂ ನಾನು ‘ಆ ವ್ಯಕ್ತಿಯ’ ಬಳಿ ಹೋಗುತ್ತಿದ್ದೆ. ಅವರು ಬೇರಾರೂ ಅಲ್ಲ, ನನ್ನ ತಂದೆ!
ಏನಾಗಿತ್ತೆಂದರೆ ಅಮೆರಿಕದಲ್ಲಿ ರಾಸ್ ಫ್ರೆ್ತ್ರಟಾಸ್ ಎಂಬ ವ್ಯಾಪಾರಿಯೊಬ್ಬ ಪರಿಚಯವಾಗಿದ್ದ. ಆತನಿಗೆ ನಾನು ಕೇಳಿದ್ದೆ: ‘ಮೇಡ್ ಇನ್ ಜಪಾನ್, ಚೀನಾ, ಥೈವಾನ್ ಹೆಸರಿನಲ್ಲಿ ಆಟಿಕೆಗಳು ಇವೆಯೇ ಹೊರತು ‘ಮೇಡ್ ಇನ್ ಇಂಡಿಯಾ’ದ ಆಟಿಕೆಗಳು ಯಾಕಿಲ್ಲ?’ ಅದಕ್ಕವನು ಹೇಳಿದ: ‘ಇಂಡಿಯಾದವರು ಪ್ರಪಂಚದಲ್ಲಿಯೇ ಉತ್ತಮವಾದ ಸ್ಯಾಂಪಲ್ ತಯಾರಿಸುವುದರಲ್ಲಿ ನಿಸ್ಸೀಮರು. ಆದರೆ ಆರ್ಡರ್ ಕೊಟ್ಟರೆ, ಕಳಪೆ ಮಾಲುಗಳನ್ನು ಸಪ್ಲೈ ಮಾಡುತ್ತಾರೆ’. ಆತನ ಮಾತಲ್ಲಿ ಭಾರತೀಯರ ಬಗ್ಗೆ ವ್ಯಂಗ್ಯವಿತ್ತು. ಅದನ್ನು ಗಮನಿಸಿ, ‘ಆಯ್ತು, ನಿನಗೆ ಮೊದಲು ಮ್ಯಾಜಿಕ್ ಐಟಂಗಳನ್ನು ಸಪ್ಲೈ ಮಾಡುತ್ತೇನೆ. ಅವು ಚೆನ್ನಾಗಿದ್ದರೆ ಮಾತ್ರ ನನಗೆ ಹಣ ಕೊಡು. ಇಲ್ಲದಿದ್ದರೆ ಬೇಡ...’ ಎಂಬುದಾಗಿ ಭಾರತೀಯರ ಗೌರವ ಉಳಿಸಲು ಹೇಳಿದೆ.
ಈ ಮಾತಿಗೆ ಒಪ್ಪಿದ ರಾಸ್ ಪ್ರತಿ ಎರಡು ತಿಂಗಳಿಗೆ ಒಂದು ಕಂಟೈನರ್ ಅಂದರೆ ಏಳು ಲಕ್ಷ ರೂಪಾಯಿ ಮೌಲ್ಯದ ಆಟಿಕೆಗಳನ್ನು ಕೊಳ್ಳುವುದಾಗಿ ಆಶ್ವಾಸನೆಯನ್ನಿತ್ತ! ವರ್ಷಕ್ಕೆ 84 ಲಕ್ಷ ರೂಪಾಯಿಗಳು! ಎರಡು ವರ್ಷ ಸತತ ದುಡಿದರೆ ಕೋಟ್ಯಧೀಶ. ತಕ್ಷಣವೇ ಬ್ಯಾಟರಾಯನಪುರದಲ್ಲಿ ಮಳಿಗೆಯೊಂದನ್ನು ಬಾಡಿಗೆಗೆ ಹಿಡಿದೆ. ಎಪ್ಪತ್ತು ಮಂದಿ ನೌಕರರನ್ನು ನೇಮಿಸಿಕೊಂಡೆ. ‘ಸಂಕಟದ ಕಾಲಕ್ಕೆ’ ಎಂದು ಪೈಸೆಗೆ ಪೈಸೆ ಜೋಡಿಸಿಟ್ಟಿದ್ದ 10 ಲಕ್ಷ ರೂಪಾಯಿ ಬ್ಯಾಂಕಿನಲ್ಲಿತ್ತು. ಅದರಿಂದ ಎಲ್ಲ ತರಹದ ಮಶೀನ್ಗಳನ್ನು ಖರೀದಿಸಿದೆ. ಎರಡು ತಿಂಗಳ ಕಾಲ ಹಗಲು-ರಾತ್ರಿ ದುಡಿದು ಆಟಿಕೆಗಳನ್ನು ಮಾಡಿ ರಾಸ್ಗೆ ಕಳುಹಿಸಿದೆ.
ಅವುಗಳನ್ನೆಲ್ಲ ಮಾರಿಕೊಂಡ ರಾಸ್, ನನಗೆ ಚಿಕ್ಕಾಸನ್ನೂ ಕೊಡದೆ ನ್ಯೂಯಾರ್ಕ್ನಿಂದ ಮೆಕ್ಸಿಕೋಗೆ ಪರಾರಿಯಾಗಿದ್ದ. ಹಗಲು-ರಾತ್ರಿ ಭಾರವಾದ ಸ್ಟೀಲ್ನ ಡೈಗಳನ್ನು ಹೊತ್ತ ಪರಿಣಾಮ ನನಗೆ ಸ್ಲಿಪ್ಡಿಸ್ಕ್ ಆಯಿತು. ಇದೆಲ್ಲಕ್ಕಿಂತ ಹೆಚ್ಚಾಗಿ, ನನ್ನ ಮೇಲಿನ ವಿಶ್ವಾಸದಿಂದ ಕಚ್ಚಾ ವಸ್ತುಗಳನ್ನು ಪೂರೈಸಿದವರಿಗೆ ಹಣ ಕೊಡಬೇಕಾಗಿತ್ತು. ನೌಕರರಿಗೆ ಸಂಬಳ ಕೊಡಬೇಕಾಗಿತ್ತು. ಅಮಾವಾಸ್ಯೆಯ ರಾತ್ರಿಯಲ್ಲಿ ಕಾಡಿಗೆ ನುಗ್ಗಿದ ಸ್ಥಿತಿ ನನ್ನದಾಗಿತ್ತು. ನಾನು ಎಂದೂ, ಯಾರ ಮುಂದೆಯೂ ಕೈ ಚಾಚಿರಲಿಲ್ಲ. ಒಬ್ಬನೇ ಇದ್ದಾಗ ‘ಆತ್ಮಹತ್ಯೆ ಮಾಡಿಕೊಂಡುಬಿಡ್ಲಾ’ ಎಂಬ ಯೋಚನೆ ಕೂಡ ಮಾಡಿದ್ದೆ.
ಇಷ್ಟು ವಿಷಯವನ್ನೂ ಅಪ್ಪನ ಮುಂದೆ ಕೂತು ವಿವರಿಸಿದೆ: ‘ನೋಡು, ಬದುಕಿನಲ್ಲಿ ಏರಿಳಿತಗಳು ಸಾಮಾನ್ಯ. ಯಾವುದಕ್ಕೂ ಡೆಸ್ಪರೇಟ್ ಆಗಬೇಡ. ಆಗಿದ್ದು ಆಗಿ ಹೋಯಿತು. ಮತ್ತೆ ಮೊದಲಿನಿಂದ ಸಣ್ಣದಾಗಿ ವ್ಯವಹಾರ ಮಾಡು’ ಎಂದು ಸಮಾಧಾನ ಮಾಡಿದರು. ತಿಂಗಳುಗಳ ನಂತರ ರಾಸ್ನಿಂದ ಆಟಿಕೆಗಳನ್ನು ಪಡೆದಿದ್ದ ವ್ಯಾಪಾರಿಗಳು ನೇರವಾಗಿ ನನ್ನೊಂದಿಗೇ ವ್ಯವಹರಿಸಿದರು. ಕೆಲವೇ ದಿನಗಳ ನಂತರ ಮಾರುಕಟ್ಟೆ ಕುದುರಿತು. ಎಲ್ಲರ ಸಾಲ ತೀರಿಸಿದೆ. ನನ್ನ ಶ್ರದ್ಧೆ, ಶಿಸ್ತು, ಸಮಯಪಾಲನೆಯ ದುಡಿಮೆಯಿಂದ ಲಕ್ಷಾಧಿಪತಿ ಆಗಿಯೇ ಬಿಟ್ಟೆ! ಒಂದು ವೇಳೆ, ನನ್ನ ತಂದೆಯ ಜಾಗದಲ್ಲಿ ಯಾರೇ ಇದ್ದಿದ್ದರೂ ಮಕ್ಕಳನ್ನು ನಿಂದಿಸುತ್ತಿದ್ದರು. ‘ನನ್ನನ್ನು ಒಂದು ಮಾತೂ ಕೇಳದೆ ವ್ಯವಹಾರ ಮಾಡಿದೆಯಲ್ಲ, ಈಗ ಅನುಭವಿಸು’ ಎನ್ನುತ್ತಿದ್ದರು. ಆದರೆ, ನನ್ನ ತಂದೆ ತಮಾಷೆಗೂ ಅಂಥ ಮಾತನ್ನು ಅಂದಿಲ್ಲ. ಅವರ ಜತೆಗಿದ್ದರೆ ಸಾಕ್ಷಾತ್ ದೇವರ ಮಡಿಲಲ್ಲೇ ಇದ್ದಂತೆ ಭಾಸವಾಗುತ್ತದೆ. ಎಲ್ಲರಿಗೂ ಇಂಥ ಸನ್ನಿಧಿ ಮತ್ತು ಇಂಥ ಅಪ್ಪ ಸಿಗಲಿ ಎಂದು ಹಾರೈಸುತ್ತೇನೆ.
ಗಿರಾಕಿ: ‘ನಾ ಕಳಿಸಿದ ಚೆಕ್ ಬಂತಾ’?
ವ್ಯಾಪಾರಿ: ‘ಬಂತು ಎರ್ಡೆರಡು ಸಲ. ಒಮ್ಮೆ ನಿಮ್ಮಿಂದ. ಇನ್ನೊಮ್ಮೆ ಬ್ಯಾಂಕಿಂದ ಬೌನ್ಸ್ ಆಗಿ’.
(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)