ಅಂಕಣ

ಇಮ್ರಾನ್ ಖಾನ್​ಗೆ ಅಮರಿಕೊಂಡಿದೆ ಸೇನಾಮಾರಿ

rashmirhebbur
ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ನಿಯಾಜಿ ಮೂರು ವರ್ಷಗಳ ಹಿಂದೆ ಪಾಕಿಸ್ತಾನದ ಪ್ರಧಾನಮಂತ್ರಿಯಾದದ್ದು ಸೇನೆಯ ಪೂರ್ಣ ಸಹಕಾರದಿಂದ. ನ್ಯಾಷನಲ್ ಅಸೆಂಬ್ಲಿಗೆ 2018ರ ಜುಲೈ ಕೊನೆಯ ವಾರದಲ್ಲಿ ನಡೆದ ಚುನಾವಣೆಗಳಲ್ಲಿ ಇಮ್ರಾನ್ ಖಾನ್ ಮತ್ತವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಗೆಲ್ಲಲೇಬೇಕೆಂದು ಹಠ ತೊಟ್ಟು ಅದಕ್ಕಾಗಿ ‘ಬೇಕಾದ್ದೆಲ್ಲವನ್ನೂ’ ಮಾಡಿದ್ದು ಸೇನೆ. ವಿರೋಧ ಪಕ್ಷಗಳನ್ನು, ಮುಖ್ಯವಾಗಿ ಮಾಜಿ ಪ್ರಧಾನಿ ನವಾಜ್ ಶರೀಫ್​ರ ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ ಮತ್ತು ಅವಾಮಿ ನ್ಯಾಷನಲ್ ಪಾರ್ಟಿಯ ಅಭ್ಯರ್ಥಿಗಳನ್ನು ಬೆದರಿಸುವುದರಿಂದ ಹಿಡಿದು, ಪಿಟಿಐ ಪ್ರಚಾರಸಭೆಗಳಿಗೆ ಜನರನ್ನು ಸೇರಿಸುವುದರ ಜತೆಗೆ ಜನರಿಗೆ ಹಣ ನೀಡುವುದನ್ನೂ ಸೇನಾಧಿಕಾರಿಗಳು ಮಾಡಿದ್ದರು. ಆದರೀಗ ಪರಿಸ್ಥಿತಿ ತಿರುವುಮುರುವಾಗಿದೆ, ಇಮ್ರಾನ್ ಖಾನ್​ರಿಗೆ ಕೂತ ಕುರ್ಚಿ ಮುಳ್ಳಾಗುವಂತೆ, ಅದರ ಚುಚ್ಚುವಿಕೆ ದಿನದಿನಕ್ಕೂ ಅಧಿಕವಾಗುವಂತೆ ಅದೇ ಸೇನೆ ಮಾಡುತ್ತಿದೆ. ಇದಾದದ್ದು ಹೇಗೆ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಬೇಕಾದರೆ ಆ ದೇಶದಲ್ಲಿ ಇದುವರೆಗೆ ಸೇನೆ ಮತ್ತು ರಾಜಕೀಯ ನಾಯಕರ ನಡುವಿನ ಸಂಬಂಧಗಳು ಸಾಗಿಬಂದಿರುವ ಚಿತ್ರಣ ಅಗತ್ಯ.

ಪಾಕಿಸ್ತಾನ ಸ್ಥಾಪನೆಯಾದಾಗ ದಕ್ಷಿಣದ ಬಂದರು ನಗರ ಕರಾಚಿ ರಾಜಧಾನಿಯಾದರೂ ಸೇನಾ ಮುಖ್ಯಾಲಯ ಉತ್ತರದ ರಾವಲ್​ಪಿಂಡಿಯಲ್ಲೇ ಮುಂದುವರಿಯಿತು. ಮಹಮದ್ ಆಲಿ ಜಿನ್ನಾರ ನಂತರ ದೇಶದ ಗವರ್ನರ್ ಜನರಲ್ ಅಥವಾ ರಾಷ್ಟ್ರಾಧ್ಯಕ್ಷರಾದವರೆಲ್ಲರೂ ಸೇನೆಯಿಂದ ಬಂದವರೇ ಆಗಿದ್ದರು. ಮೊದಲ ಪ್ರಧಾನಮಂತ್ರಿ ಲಿಯಾಖತ್ ಆಲಿ ಖಾನ್ 1951ರಲ್ಲಿ ಹತ್ಯೆಯಾದ ನಂತರ ಪ್ರಧಾನಮಂತ್ರಿ ಎನ್ನುವವರು ಈ ಸೇನಾ ಮೂಲದ ರಾಷ್ಟ್ರಾಧ್ಯಕ್ಷರು ಆಟಕ್ಕಾಗಿ ಆಯ್ದುಕೊಂಡ ಗೊಂಬೆಗಳಾಗಿದ್ದರು. ಹಾಗೆ ಏಳು ವರ್ಷಗಳಲ್ಲಿ ಆಟದ ಗೊಂಬೆಗಳಾಗಿಹೋದ ಪ್ರಧಾನಮಂತ್ರಿಗಳ ಸಂಖ್ಯೆ ಆರು! ಆಮೇಲೆ 1958ರಲ್ಲಿ ಸೇನಾಕ್ರಾಂತಿಯೆಸಗಿದ ಜನರಲ್ ಅಯೂಬ್ ಖಾನ್ ಮರುವರ್ಷವೇ ರಾವಲ್​ಪಿಂಡಿಗೆ ಸನಿಹದಲ್ಲೇ ಹೊಸ ರಾಜಧಾನಿ ಇಸ್ಲಾಮಾಬಾದ್ ಅನ್ನು ಕಟ್ಟಿ ಸೇನಾ ಮುಖ್ಯಾಲಯಕ್ಕೂ ರಾಷ್ಟ್ರಾಧ್ಯಕ್ಷರ ಕಚೇರಿಗೂ ಆರಾಮವಾಗಿ ಓಡಾಡಿಕೊಂಡಿರಲು ವ್ಯವಸ್ಥೆ ಮಾಡಿಕೊಂಡರು. ಜತೆಗೆ, ಸೇನೆ ಮತ್ತು ನಾಗರಿಕ ಜನನಾಯಕರ ನಡುವಿನ ಸಂಬಂಧಗಳು ಬದಲಾಗಿಹೋದದ್ದೂ ಅವರ ಕಾಲದಲ್ಲೇ. ಜಿನ್ನಾರ ಘನಿಷ್ಟ ಸಹಯೋಗಿಯಾಗಿದ್ದದ್ದು, 1956ರಲ್ಲಿ ಪಾಕಿಸ್ತಾನಕ್ಕೆ ಅದರ ಮೊದಲ ಸಂವಿಧಾನ ನೀಡಿದ್ದು ಇಸ್ಕಂದರ್ ಮಿರ್ಜಾ. ಆದರೆ ಸೇನಾಕ್ರಾಂತಿ ಎಸಗಿದೊಡನೆ ಅಯೂಬ್ ಖಾನ್ ಮಾಡಿದ ಮೊಟ್ಟಮೊದಲ ಕೆಲಸವೆಂದರೆ ತಯಾರಾಗಿರಿಸಿದ್ದ ವಿಮಾನದಲ್ಲಿ ಮಿರ್ಜಾರನ್ನು ಕೂರಿಸಿ ಇನ್ನೆಂದೂ ಹಿಂತಿರುಗಕೂಡದೆಂದು ತಾಕೀತು ಮಾಡಿ ಲಂಡನ್​ಗೆ ಅಟ್ಟಿಬಿಟ್ಟದ್ದು!

ಸೇನಾ ಆಡಳಿತಗಾರನ ಈ ಪರಿಯ ಆಡಳಿತಕ್ಕೆ ಹೆದರಿ ಮಾಜಿ ಪ್ರಧಾನಿ ಹುಸೇನ್ ಶಹೀದ್ ಸುರ್ಹವರ್ದಿ ದೂರದ ಲೆಬನಾನ್​ಗೆ ಓಡಿಹೋಗಿ ಬದುಕತೊಡಗಿದರು. ಆದರೆ ಮುಸ್ಲಿಂ ಲೀಗ್​ನ ಗಣ್ಯ ನೇತಾರ ಮುಂದೆಂದಾದರೂ ಸ್ವದೇಶಕ್ಕೆ ಹಿಂತಿರುಗಿ ತನಗೆ ಮುಳ್ಳಾಗಬಹುದೆಂಬ ಭಯ ಅಯೂಬ್ ಖಾನ್​ರಿಗಿತ್ತು. ಮೊದಲೇ ಅನಾರೋಗ್ಯದಿಂದ ಜರ್ಜರಿತರಾಗಿದ್ದ ಸುಹ್ರವರ್ದಿಯವರ ಹತ್ಯೆಯನ್ನು ಅಯೂಬ್​ರ ಬೇಹುಗಾರರು ಡಿಸೆಂಬರ್ 1963ರಲ್ಲಿ ಅತ್ಯಂತ ಚಾಕಚಕ್ಯತೆಯಿಂದ ನೆರವೇರಿಸಿಬಿಟ್ಟರು.

ನಂತರ ಅಯೂಬ್​ರ ಕಾಕದೃಷ್ಟಿಗೆ ಗುರಿಯಾದದ್ದು ಫಾತಿಮಾ ಜಿನ್ನಾ. ತನ್ನ ಸರ್ವಾಧಿಕಾರಕ್ಕೆ ಜನಬೆಂಬಲ ಪಡೆದುಕೊಳ್ಳುವುದಕ್ಕೋಸ್ಕರ ಅಯೂಬ್ 1965ರ ಆದಿಯಲ್ಲಿ ಅಧ್ಯಕ್ಷೀಯ ಚುನಾವಣೆ ಘೊಷಿಸಿದರು. ಹಲವಾರು ಅಭಿವೃದ್ಧಿ ಯೋಜನೆಗಳ ಮೂಲಕ ಮೊದಲೇ ಸಾಕಷ್ಟು ಜನಪ್ರಿಯವಾಗಿದ್ದ ಅವರು ಸರ್ಕಾರಿ ಅಂಗಸಂಸ್ಥೆಗಳ ಮೂಲಕ ಜನಬೆಂಬಲದ ಮಟ್ಟವನ್ನು ಅತ್ಯುಚ್ಚಮಟ್ಟಕ್ಕೇರಿಸಿಕೊಳ್ಳುವ ಹುನ್ನಾರದಲ್ಲಿದ್ದರು. ಆದರೆ ಅವರ ಪ್ರಯತ್ನಕ್ಕೆ ಅಡ್ಡಿಯಾಗುವಂತೆ ಕಾಣತೊಡಗಿದ್ದು ವಿರೋಧಪಕ್ಷಗಳೆಲ್ಲವೂ ಒಟ್ಟುಗೂಡಿ ಫಾತಿಮಾ ಜಿನ್ನಾರನ್ನು ಕಣಕ್ಕಿಳಿಸಿದಾಗ.

ದಶಕಗಳ ಕಾಲ ವಿಧುರ ಮಹಮದ್ ಆಲಿ ಜಿನ್ನಾರ ಮನೆವಾಳ್ತೆ ನೋಡಿಕೊಂಡು, ಪಾಕಿಸ್ತಾನದ ಸೃಷ್ಟಿಯಲ್ಲಿ ಅವರೆಲ್ಲ ಕಾರ್ಯಕ್ರಮಗಳಿಗೆ ಹೆಗಲುಕೊಟ್ಟು ಸಹಕರಿಸಿದ್ದು ಅವರ ಸಹೋದರಿ ಫಾತಿಮಾ ಜಿನ್ನಾ. ಅವರ ಬಗ್ಗೆ ದೇಶದಲ್ಲಿ ಸಹಜವಾಗಿಯೇ ಅಪಾರ ಗೌರವ ಮತ್ತು ಪ್ರೀತಿಯಿತ್ತು. ಇದರಿಂದ ಹೆದರಿದ ಅಯೂಬ್ ಫಾತಿಮಾರ ನಡತೆಯ ಬಗ್ಗೆ ದುರಭಿಪ್ರಾಯ ಮೂಡಿಸಿ ಮತಗಳನ್ನು ಕಸಿಯಲು ಹವಣಿಸಿದರು. ಎಷ್ಟೆಂದರೆ, ಜಿನ್ನಾ ತಮ್ಮ ಸಹೋದರಿ ಫಾತಿಮಾ ಜಿನ್ನಾರೊಂದಿಗೆ ದೈಹಿಕ ಸಂಬಂಧ ಹೊಂದಿದ್ದರೆಂದು ಅಯೂಬ್ ಖಾನ್ ಹೇಳತೊಡಗಿದರು!

ಮಾರ್ಚ್ 1969ರಲ್ಲಿ ಎಲ್ಲೆಡೆಯಿಂದ ವಿರೋಧ ಎದುರಿಸಿ ಅಯೂಬ್ ಖಾನ್ ನಿರ್ಗಮಿಸಿದರು, ಹೊಸ ಸೇನಾಡಳಿತಗಾರ ಯಾಹ್ಯಾ ಖಾನ್ ಭಾರತದೊಂದಿಗೆ ಯುದ್ಧ ಆರಂಭಿಸಿ ಸೋತು ಕೆಳಗಿಳಿದರು. ಆಗ ಗಾದಿಗೇರಿದ ಝುುಲ್ಪೀಕರ್ ಆಲಿ ಭುಟ್ಟೋ ಮಾಡಿದ ಮೊದಲ ಕೆಲಸ ಯಾಹ್ಯಾ ಖಾನ್​ರನ್ನು ಗೃಹಬಂಧನದಲ್ಲಿರಿಸಿದ್ದು. ಮರುವರ್ಷವೇ ಅವರು ಇಬ್ಬರು ಸೇನಾ ದಂಡನಾಯಕರನ್ನು ಕಿತ್ತೊಗೆದರು. ಮತ್ತೆ ನಾಲ್ಕು ವರ್ಷಗಳ ನಂತರ ನಾಲ್ವರು ಸೇನಾಧಿಕಾರಿಗಳನ್ನು ಅವಮಾನಕರವಾಗಿ ಮೂಲೆಗುಂಪು ಮಾಡಿ ಜಿಯಾ-ಉಲ್-ಹಖ್​ರನ್ನು ಸೇನಾ ದಂಡನಾಯಕನ ಸ್ಥಾನಕ್ಕೇರಿಸಿದರು. ಆದರೆ ಜಿಯಾ ನಿಷ್ಠರಾಗಿದ್ದುದು ಸೇನೆಗೇ, ತನ್ನ ಸಹೋದ್ಯೋಗಿಗಳಿಗಾದ ಅವಮಾನವನ್ನು ಅವರು ಸಹಿಸಿಲ್ಲ ಎಂದು ಭುಟ್ಟೋಗೆ ಅರಿವಾಗುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು.

ಭುಟ್ಟೋರ ದಾರುಣ ಅಂತ್ಯವಾದದ್ದು ಯಾವ ಸೇನೆಯನ್ನು ಮತ್ತೆಮತ್ತೆ ಅವಮಾನಿಸಿದ್ದರೋ ಅದೇ ಸೇನೆಯಿಂದ. ಅಧಿಕಾರಲಾಲಸೆಗೆ ಬಿದ್ದು ಸೇನೆಗೆ ಕೆಟ್ಟಹೆಸರು ತರಲು 1965ರಲ್ಲಿ ಅದನ್ನು ಭಾರತದ ವಿರುದ್ಧ ಯುದ್ಧಕ್ಕೆ ದೂಡಿದ್ದು, ಆ ಮೂಲಕ ಅದು ಸೋತು ದೇಶದಲ್ಲಿ ಅವಮಾನಿತಗೊಳ್ಳುವಂತೆ ಮಾಡಿದ್ದು, ‘ಅವನಿಗೆ ಫ್ರಾಕ್ ತೊಡಿಸಿ ಪಾಕಿಸ್ತಾನದ ಬೀದಿಗಳಲ್ಲಿ ಕೋತಿಯಂತೆ ಕುಣಿಸುತ್ತೇನೆ’ ಎಂದು ಸೇನಾದಂಡನಾಯಕ ಮಹಮದ್ ಮೂಸಾ ಖಾನ್​ರನ್ನು ಮತ್ತೆಮತ್ತೆ ಲೇವಡಿ ಮಾಡಿದ್ದು, ಜಿಯಾ-ಉಲ್- ಹಖ್​ರನ್ನು ‘ಸಾರ್ವಜನಿಕವಾಗಿ ಜನರನ್ನು ರಂಜಿಸಲು ಕುಣಿಯುವ ಕೋತಿ’ ಎಂದು ಕರೆದದ್ದು ಅದಾವುದನ್ನೂ ಸೇನೆ ಮರೆತಿರಲಿಲ್ಲ. ಸಿಕ್ಕಿದ ಮೊದಲ ಅವಕಾಶದಲ್ಲಿ ಭುಟ್ಟೋರನ್ನು ಉರುಳಿಸಿದ ಜಿಯಾ ನಂತರ ಮಿಲಿಟರಿ ನ್ಯಾಯಾಲಯ ಅವರ ಮೇಲೆ ರಾಜಕೀಯ ಕೊಲೆಯೊಂದರ ಆರೋಪ ಹೊರಿಸಿ ಗಲ್ಲುಶಿಕ್ಷೆ ವಿಧಿಸುವಂತೆ ನೋಡಿಕೊಂಡರು. ಆ ಶಿಕ್ಷೆ ಜಾರಿಯಾದ ಬಗೆ ಭುಟ್ಟೋರ ಬಗ್ಗೆ ಸೇನೆಯ ಅಸಹನೆ, ಆಕ್ರೋಶ ಅದೆಷ್ಟಿತ್ತೆಂದು ತೋರಿಸುತ್ತದೆ. ಮೊದಲೇ ನಿತ್ರಾಣರಾಗಿದ್ದ, ಕೈಕೋಳ ತೊಡಿಸಿದ್ದ ಭುಟ್ಟೋರನ್ನು 1979 ಏಪ್ರಿಲ್ 4ರಂದು ರಾತ್ರಿ ಎರಡೂವರೆಗೆ ಎಬ್ಬಿಸಿ ಸ್ನಾನ ಮಾಡಿಸಿ ಹೊಸ ಬಿಳೀ ಕುರ್ತಾ ಪೈಜಾಮಾ ತೊಡಿಸಿ ವಧಾಸ್ಥಾನಕ್ಕೆ ಕೈಕಾಲುಗಳನ್ನು ಹಿಡಿದು ಎತ್ತಿಕೊಂಡು ಹೋಗಲಾಯಿತು. ಅವರಲ್ಲೊಬ್ಬ ಭುಟ್ಟೋರ ಹೊಸ ಕುರ್ತಾದ ಮೇಲೆ ಕಾಲಿಟ್ಟದ್ದರಿಂದಾಗಿ ಅದು ಹರಿದುಹೋಯಿತು. ನೇಣುಗಂಬದ ಮುಂದೆ ನಿಲ್ಲಲೂ ಕಷ್ಟಪಡುತ್ತಿದ್ದ ಭುಟ್ಟೋರ ಬಾಯಿಯಿಂದ ಕ್ಷೀಣವಾಗಿ ಬಂದದ್ದು ‘ಯೆಹ್ ಮುಝೆ’ (‘ಈ ಶಿಕ್ಷೆ! ನನಗೆ?’) ಎಂಬ ಎರಡು ಪದಗಳು ಮಾತ್ರ.

ಇಪ್ಪತ್ತು ವರ್ಷಗಳ ನಂತರ ಭುಟ್ಟೋರ ಹಾದಿಯನ್ನೇ ಹಿಡಿದಿದ್ದ ನವಾಜ್ ಶರೀಫ್ ನೇಣಿನ ಕುಣಿಕೆಯಿಂದ ತಪ್ಪಿಸಿಕೊಂಡದ್ದೊಂದು ಸೋಜಿಗ. ಅಕ್ಟೋಬರ್ 1999ರಲ್ಲಿ ಕೆಲವು ಸೇನಾಧಿಕಾರಿಗಳನ್ನು ತನ್ನೆಡೆ ಸೆಳೆದುಕೊಂಡು, ಶ್ರೀಲಂಕಾ ಸೇನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕೊಲಂಬೋಗೆ ಹೋಗಿದ್ದ ಸೇನಾದಂಡನಾಯಕ ಪರ್ವೇಜ್ ಮುಷರಫ್​ರನ್ನು ಪದಚ್ಯುತಗೊಳಿಸಲು ಪ್ರಧಾನಮಂತ್ರಿ ಶರೀಫ್ ಹೂಡಿದ ಕುಟಿಲ ಪ್ರಯತ್ನ ತಿರುಗುಬಾಣವಾಯಿತು. ಶರೀಫ್ ಸಂರ್ಪಸಿದ್ದ ಸೇನಾಧಿಕಾರಿಗಳಿಂದಲೇ ಮಾಹಿತಿ ಬಂದೊಡನೆ ಮುಷರ್ರಫ್ ಕಾರ್ಯಪ್ರವೃತ್ತರಾದರು. ಪಾಕಿಸ್ತಾನ್ ಇಂಟರ್​ನ್ಯಾಶನಲ್ ಏರ್​ಲೈನ್ಸ್​ನ ನಾಗರಿಕ ವಿಮಾನವೊಂದನ್ನು ಹತ್ತಿ ಅವರು ಕರಾಚಿಯತ್ತ ದೌಡಾಯಿಸಿದಾಗ ಆ ವಿಮಾನಕ್ಕೆ ಇಳಿಯಲು ಅವಕಾಶ ಕೊಡದಂತೆ ಶರೀಫ್ ನಿಲ್ದಾಣದ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮುಷರ್ರಫ್ ಜತೆಗೆ ನೂರಾರು ಅಮಾಯಕರ ಬದುಕಿನೊಡನೆ ಚೆಲ್ಲಾಟವಾಡಲು ನೋಡಿದ ಶರೀಫ್ ಹುನ್ನಾರ ಅಕ್ಷಮ್ಯ. ಕೊನೆಗೂ ಮರುಇಂಧನ ಪೂರೈಕೆಗಾಗಿ ಅವಕಾಶ ಪಡೆದು ವಿಮಾನ ಕೆಳಗಿಳಿದಾಗ ನಿಲ್ದಾಣದಿಂದಲೇ ಸಹೋದ್ಯೋಗಿಗಳನ್ನು ಸಂರ್ಪಸಿ ಇಸ್ಲಾಮಾಬಾದ್​ನಲ್ಲಿ ಸೇನಾಕ್ರಾಂತಿಗೆ, ಶರೀಫ್​ರ ಬಂಧನಕ್ಕೆ ವ್ಯವಸ್ಥೆ ಮಾಡಿದ ಮುಷರ್ರಫ್ ಕಾರ್ಯತಂತ್ರ ಬೆರಗುಗೊಳಿಸುವಂತಹದ್ದು. ತನ್ನೊಳಗೆ ಒಡಕನ್ನುಂಟುಮಾಡುವ ಶರೀಫ್ ಪ್ರಯತ್ನಕ್ಕೆ ಸಹಕರಿಸಲು ಸೇನೆ ತಯಾರಿರಲಿಲ್ಲ ಎನ್ನುವುದನ್ನು ಆ ಭಯಾನಕ ನಾಟಕ ಸ್ಪಷ್ಟವಾಗಿ ಸಾರುತ್ತದೆ.

ಶರೀಫ್​ರಿಗೂ ಭುಟ್ಟೋ ಹಾದಿಯನ್ನೇ ತೋರುವ ಮುಷರಫ್ ಪ್ರಯತ್ನಕ್ಕೆ ತಡೆಯಾಗಿ ಪಂಜಾಬ್​ನ ಈ ಅತೀ ಶ್ರೀಮಂತ ರಾಜಕಾರಣಿ ನೇಣು ತಪ್ಪಿಸಿಕೊಂಡದ್ದು ಸೌದಿ ಅರೇಬಿಯಾದ ಮಧ್ಯಪ್ರವೇಶದಿಂದ. ಶರೀಫ್​ರೊಂದಿಗೆ ಘನಿಷ್ಟ ವ್ಯವಹಾರ ವಹಿವಾಟುಗಳನ್ನು ಹೊಂದಿದ್ದ ಸೌದಿ ರಾಜಮನೆತನ ಶರೀಫ್ ಜೀವದಾನಕ್ಕಾಗಿ ಮುಷರಫ್ ಮನವೊಲಿಸುವುದರಲ್ಲಿ ಕೊನೆಗೂ ಯಶಸ್ವಿಯಾಯಿತು. ಹತ್ತು ವರ್ಷಗಳವರೆಗೆ ದೇಶಕ್ಕೆ ಹಿಂತಿರುಗಲಾರೆ, ಇಪ್ಪತ್ತೊಂದು ವರ್ಷಗಳವರೆಗೆ ರಾಜಕೀಯಕ್ಕೆ ಮರುಪ್ರವೇಶ ಮಾಡಲಾರೆ ಎಂಬ ವಾಗ್ದಾನ ಕೊಟ್ಟು ಶರೀಫ್ ಜೆಡ್ಡಾಗೆ ಹೋಗಿ ನೆಲೆಸಿದರು. ಆದರೆ 2008ರಲ್ಲಿ ಮುಷರ್ರಫ್ ಕೆಳಗಿಳಿದು, ಪ್ರಜಾಪ್ರಭುತ್ವ ಮತ್ತೆ ನಿಧಾನವಾಗಿ ತಲೆಯೆತ್ತತೊಡಗಿದಾಗ ಧೈರ್ಯವಹಿಸಿ 2012ರಲ್ಲಿ ಸ್ವದೇಶಕ್ಕೆ ಹಿಂತಿರುಗಿದ ಶರೀಫ್ ಮರುವರ್ಷ ಚುನಾವಣೆಗಳಲ್ಲಿ ಗೆದ್ದು ಪ್ರಧಾನಮಂತ್ರಿಯೂ ಆದರು. ಆ ದಿನಗಳಲ್ಲಿ ಸಬ್​ಜೈಲ್ ಆಗಿ ಬದಲಾಯಿಸಲ್ಪಟ್ಟಿದ್ದ ತನ್ನದೇ ಫಾಮ್ರ್ ಹೌಸ್​ನಲ್ಲಿ ಅಕ್ಷರಶಃ ಬೋನಿನಲ್ಲಿ ಸಿಕ್ಕಿಬಿದ್ದಿರುವ ಹೆಗ್ಗಣದಂತಾಗಿದ್ದ ಮುಷರ್ರಫ್​ರ

ಅಂತ್ಯಕ್ಕೆ ಕಾರ್ಯಯೋಜನೆ ರೂಪಿಸಲು ಈ ಚುನಾವಣಾ ವಿಜಯ ತನಗೆ ಅವಕಾಶ ನೀಡಿದೆ ಎಂದು ಶರೀಫ್ ತಿಳಿಯಲಿಲ್ಲ. ಕಳೆದ ಹನ್ನೆರಡು ವರ್ಷಗಳ ವನ(ಮರಳುಗಾಡು)ವಾಸ ಅವರಿಗೆ ಅಷ್ಟು ವಿವೇಕ ಕಲಿಸಿರಬೇಕು. ಮುಷರ್ರಫ್ ವಿರುದ್ಧ ಅವರೇನಾದರೂ ತೀವ್ರ ಕ್ರಮಕ್ಕೆ ಮುಂದಾಗಿದ್ದರೆ ಆಗ ಸೇನೆ ಬಿಟ್ಟುಕೊಡುತ್ತಿರಲಿಲ್ಲ. ಅಂತಿಮವಾಗಿ ಅದು ಶರೀಫ್​ರನ್ನೇ ಬಲಿತೆಗೆದುಕೊಳ್ಳಬಹುದಾಗಿತ್ತು. ಪ್ರಧಾನಿ ಯೂಸುಫ್ ರಾಜಾ ಗಿಲಾನಿಯವರನ್ನು ಪದಚ್ಯುತಗೊಳಿಸಲು 2010ರಲ್ಲಿ ಹೊರಟಿದ್ದ ಸೇನಾ ದಂಡನಾಯಕ ಜನರಲ್ ಆಷ್ಪಾಕ್ ಪರ್ವೇಜ್ ಕಯಾನಿ ಕೊನೇಗಳಿಗೆಯಲ್ಲಿ ಹಿಂತೆಗೆದದ್ದು ಅಮೆರಿಕದ ಧಮಕಿಯಿಂದ ಎನ್ನುವುದನ್ನು ಶರೀಫ್ ನೋಡಿಯೇ ಇದ್ದರು. 2014ರಲ್ಲಿ ಇದೇ ಇಮ್ರಾನ್ ಖಾನ್ ಮತ್ತು ಜನಪ್ರಿಯ ಧರ್ಮಗುರು ತಹೀರುಲ್ ಖಾದ್ರಿಯವರನ್ನು ಶರೀಫ್ ವಿರುದ್ಧ ಛೂ ಬಿಟ್ಟು, ಆಗ ಉದ್ಭವವಾದ ರಾಜಕೀಯ ಗೊಂದಲದಲ್ಲಿ ಸೇನಾಕ್ರಾಂತಿಯೆಸಗಲು ಜನರಲ್ ರಹೀಲ್ ಶರೀಫ್ ಪ್ರಯತ್ನಿಸಿದಾಗಲೂ ಅವರನ್ನು ತಡೆದದ್ದು ಅಮೆರಿಕವೇ.

ಇಂತಹ ಹಿನ್ನೆಲೆಯಲ್ಲಿ ಇಂದು ಇಮ್ರಾನ್ ಖಾನ್ ಸೇನೆಯ ಶಕ್ತಿಯನ್ನು ಪರೀಕ್ಷಿಸಹೊರಟಿದ್ದು ಸೋಜಿಗವುಂಟುಮಾಡುತ್ತಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಪರವಾಗಿ ಪಾಕ್ ಸೇನೆ ರಹಸ್ಯವಾಗಿ ಎಸಗುತ್ತಿದ್ದ ಕೃತ್ಯಗಳನ್ನು ಜಗತ್ತಿನೆದುರು ಬೆತ್ತಲಾಗಿಸಿದ್ದು ಐಎಸ್​ಐ ನಿರ್ದೇಶಕ ಲೆ.ಜ. ಫೈಜ್ ಹಮೀದ್, ಕಾಬೂಲ್​ಗೆ ಹೋಗಿ ತಾನೇ ಅಲ್ಲಿನ ಹೊಸ ರಾಜ ಎನ್ನುವಂತೆ ಮಾಧ್ಯಮಗಳ ಮುಂದೆ ಆಡುವ ಮೂಲಕ. ಸಹಜವಾಗಿಯೇ ಇದು ಸೇನಾದಂಡನಾಯಕ ಕಮರ್ ಜಾವೆದ್ ಬಾಜ್ವಾರಿಗೆ ಸಮ್ಮತವಾಗಲಿಲ್ಲ. ತಕ್ಷಣ ಅವರು ಹಮೀದ್​ರ ಸ್ಥಾನದಲ್ಲಿ ಲೆ.ಜ. ನದೀಂ ಅಂಜುಂರನ್ನು ನೇಮಿಸಿ, ಸಂಬಂಧಿಸಿದ ಪತ್ರವನ್ನು ಸಹಿಗಾಗಿ ಪ್ರಧಾನಿ ಇಮ್ರಾನ್ ಖಾನ್​ರಿಗೆ ಕಳಿಸಿದರು. ಅದು ಔಪಚಾರಿಕತೆ ಅಷ್ಟೇ. ಆದರೆ ನೇಮಕಾತಿಯ ಅಂತಿಮ ಅಧಿಕಾರ ತನ್ನದೇ ಎಂದುಕೊಂಡು ಇಮ್ರಾನ್ ಖಾನ್ ಪತ್ರಕ್ಕೆ ಸಹಿ ಹಾಕದೇ, ತಮ್ಮ ನಂಬುಗೆಯ ಫೈಜ್ ಹಮೀದ್​ರೇ ಮುಂದುವರಿಯಬೇಕೆಂದು ಪಟ್ಟುಹಿಡಿದರು. ಕೈಗೊಂಬೆಯೊಂದು ಹೀಗೆ ವರ್ತಿಸಿದ್ದು ಜನರಲ್ ಬಾಜ್ವಾಗೆ ಸಹಿಸಲಾಗಲಿಲ್ಲ.

ಆತ ಜಾಣ, ನೇರವಾಗಿ ಕಾರ್ಯಾಚರಣೆಗಿಳಿಯಲಿಲ್ಲ. ಉಗ್ರ ಮೂಲಭೂತವಾದಿ ಪಾಕಿಸ್ತಾನ್ ತೆಹ್ರೀಕ್-ಎ-ಲಬ್ಬಾಯಿಕ್ ಸಂಘಟನೆಯನ್ನು ಇಮ್ರಾನ್ ಸರ್ಕಾರದ ವಿರುದ್ಧ ಛೂ ಬಿಟ್ಟರು. ಪರಿಣಾಮ- ಲಾಹೋರ್​ನಲ್ಲಿ ಪಿಎಲ್​ಟಿ ನಡೆಸಿದ ಹಿಂಸಾಚಾರದಲ್ಲಿ ಒಂದೇ ದಿನ ಇಪ್ಪತ್ತೈದಕ್ಕಿಂತಲೂ ಹೆಚ್ಚು ಪೊಲೀಸರು ಹತರಾಗಿಹೋದರು, ಇಸ್ಲಾಮಾಬಾದ್​ಗೇ ನುಗ್ಗುತ್ತೇವೆ ಎಂದು ಪಿಎಲ್​ಟಿ ಗುಟುರು ಹಾಕಿದ್ದೇ ಇಮ್ರಾನ್ ಸೇನೆಯೊಂದಿಗೆ ರಾಜಿಗಿಳಿದರು, ಹೊಸ ಐಎಸ್​ಐ ನಿರ್ದೇೕಶಕರ ನೇಮಕಾತಿ ಪತ್ರಕ್ಕೆ ತೆಪ್ಪಗೆ ಸಹಿ ಹಾಕಿದರು. ಆದರೆ ಬಾಜ್ವಾ ಕೋಪ ಇಳಿದಿಲ್ಲ, ಅವರ ಬೆಂಬಲದ ಪಿಎಲ್​ಟಿ ಸಹ ಹಿಂಸಾಚಾರಿ ಅಂದೋಲನದಿಂದ ಹಿಂದೆ ಸರಿದಿಲ್ಲ. ಈ ಸ್ಥಿತಿಯಲ್ಲಿ ಇಮ್ರಾನ್ ಖಾನ್​ರ ಪದವಿ ಇನ್ನೆಷ್ಟು ದಿನ ಎಂಬ ಪ್ರಶ್ನೆ ಮೇಲೆದ್ದಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)