ಬಾಲ್ಯದಿಂದಲೂ ಆ ಹುಡುಗಿ ಬೆಳೆದಿದ್ದೇ ಹಾಗೆ..
ಎಲ್ಲರೂ ಒಪ್ಪಿದ್ದನ್ನೇ ತಾನೂ ಒಪ್ಪಬೇಕು ಎಂದರೆ ಆಕೆಗೆ ಆಗದು. ನೀವು ಹೇಳಿದ್ದು ನಿಮಗೆ ಸರಿ, ನಾನು ಹೇಳುವುದು ನನಗೆ ಸರಿ ಎಂಬ ಮನೋಭಾವ ಆಕೆಯದು. ಪ್ರತಿಯೊಂದು ವಿಚಾರಕ್ಕೂ ಒಂದು ವಾದ, ಒಂದು ತರ್ಕ, ಹೊಸ ದೃಷ್ಟಿಕೋನ.. ಜೊತೆಗೆ ತನ್ನ ನಿಲುವು, ಹೇಳುವ ವಿಚಾರ, ತೆಗೆದುಕೊಂಡ ನಿರ್ಧಾರದ ಬಗ್ಗೆ ಅಚಲವಾದ ನಂಬಿಕೆ..
ಅಪ್ಪ ಉದ್ಯಮಿ. ಅಮ್ಮ ಶಿಕ್ಷಕಿ. ಮಗಳೂ ಬುದ್ಧಿವಂತೆಯೇ. ‘ನೀನು ಚೆನ್ನಾಗಿ ಓದಿ ವೈದ್ಯೆ ಆಗಬೇಕು’ ಎಂದು ಮನೆಯವರೆಲ್ಲ ಹೇಳುತ್ತಿದ್ದಾಗ ಆಕೆಗೂ ಸರಿ ಅನ್ನಿಸಿತ್ತು. ಆದರೆ, 12ನೇ ತರಗತಿಯ ಯುನಿಟ್ ಟೆಸ್ಟ್ ಒಂದರಲ್ಲಿ ಕೆಮಿಸ್ಟ್ರಿಯಲ್ಲಿ ಫೇಲ್ ಆದಾಗ ‘ಥತ್ಥೇರಿಕೆ.. ಈ ಓದು ನನಗಲ್ಲ’ ಎಂದು ಅನ್ನಿಸಿಬಿಟ್ಟಿತ್ತು. ಅಲ್ಲಿಗೆ ಕಾಲೇಜಿಗೆ ತಿಲಾಂಜಲಿ. ವೈದ್ಯ ಪ್ರವೇಶ ಪರೀಕ್ಷೆಯ ಕಡೆ ತಲೆಯೂ ಹಾಕಲಿಲ್ಲ. ಮನೆಯವರಿಗೆಲ್ಲ ಆಘಾತ. ಒಳ್ಳೆ ಮಾತು, ಮುದ್ದು, ಬೈಗುಳ, ಪೆಟ್ಟು ಯಾವುದಕ್ಕೂ ಜಗ್ಗುತ್ತಿಲ್ಲ ಹುಡುಗಿ. 15ನೇ ವರ್ಷಕ್ಕೆ ಮನಾಲಿಯಲ್ಲಿ ಸೌಂದರ್ಯ ಸ್ಪರ್ಧೆಯೊಂದರಲ್ಲಿ ರನ್ನರ್ ಅಪ್ ಆಗಿದ್ದ ಹುಡುಗಿ ಈಗ ಮಾಡೆಲ್ ಆಗುತ್ತೇನೆ ಎಂದು ಹಟ ಹಿಡಿದಿದ್ದಳು. ಯಾವುದೇ ಕಾರಣಕ್ಕೂ ಕಳಿಸುವುದಿಲ್ಲ ಎಂದು ಅಪ್ಪ ಖಡಾಖಂಡಿತವಾಗಿ ಹೇಳಿದಾಗ, ಹಾಗಾದರೆ ಈ ಮನೆಗೂ, ನನಗೂ ಋಣ ತೀರಿತು ಎಂದು ಉಟ್ಟ ಬಟ್ಟೆಯಲ್ಲಿ ದೆಹಲಿಗೆ ಹೊರಟೇ ಬಿಟ್ಟಳು. ಕೆಟ್ಟ ಹಟ, ಭಂಡಧೈರ್ಯವೇ ಆ ಹುಡುಗಿಯ ಐಡೆಂಟಿಟಿ.
ಇದು ಕಂಗನಾ ರಣಾವತ್ ಎಂಬ ಬಾಲಿವುಡ್ ರಾಣಿಯ ಕಥೆ. ಕಳೆದ ಹದಿನೈದು ವರ್ಷಗಳಿಂದ ಬಾಲಿವುಡ್ ಮಂದಿಯ ಪಾಲಿಗೊಂದು ಅಚ್ಚರಿ, ವಿಸ್ಮಯ, ಬಂಡುಗಾರ್ತಿ, ಅಭಿಮಾನಿಗಳ ಪಾಲಿಗೆ ಮೋಹಕ, ಮಾದಕ ನಟಿ. ಹಿಂದಿ ಚಿತ್ರರಂಗ ನೂತನ್, ಮುಮ್ತಾಜ್, ಹೇಮಾಮಾಲಿನಿಯಿಂದ ರೇಖಾ, ಜಯಾ ಬಾಧುರಿ, ಶ್ರೀದೇವಿ, ಮಾಧುರಿ ದೀಕ್ಷಿತ್, ಐಶ್ವರ್ಯ ರೈ ಇತ್ತೀಚಿನ ಆಲಿಯಾ ಭಟ್ವರೆಗೆ ಅನೇಕಾನೇಕ ಪ್ರತಿಭಾವಂತ ಅಭಿನೇತ್ರಿಯರನ್ನು ಕಂಡಿದೆ. ಆದರೆ, ಇವರೆಲ್ಲರಿಗಿಂತ ಕಂಗನಾ ಭಿನ್ನ. ಶಾರುಖ್, ಸಲ್ಮಾನ್, ಆಮೀರ್ ಎಂಬ ಖಾನ್ತ್ರಯರ ಜೊತೆ ಒಂದೂ ಚಿತ್ರಗಳಲ್ಲಿ ನಟಿಸದ ಏಕೈಕ ಮಹಿಳಾ ಸೂಪರ್ಸ್ಟಾರ್ ಈಕೆ. ಯಾವುದೇ ಖಾನ್, ಕಪೂರ್, ಸಿಂಗ್ಗಳ ಹೀರೋಯಿಸಂ ಇಲ್ಲದೆ ಕೇವಲ ಕಂಗನಾ ಹೆಸರಿನಿಂದಲೇ ಎರಡು ಚಿತ್ರಗಳು 150 ಕೋಟಿ ರೂ. ಗಳಿಕೆಯ ಗಡಿ ದಾಟಿರುವುದು ಅಪರೂಪದ ದಾಖಲೆ. ಬೇರೆ ಯಾವುದೇ ನಟಿ ಇಂಥ ಸಾಧನೆ ಇಲ್ಲಿಯವರೆಗೆ ಮಾಡಿಲ್ಲ.
ಹೌದು, ಕಂಗನಾ ಹೆಸರಿನಲ್ಲೇ ಅಂಥ ಚುಂಬಕ ಶಕ್ತಿ ಇದೆ. 15ನೇ ವಯಸ್ಸಿನಲ್ಲಿ ಅಪ್ಪನೊಂದಿಗೆ ಜಗಳವಾಡಿಕೊಂಡು ಮನಾಲಿಯಿಂದ ದೆಹಲಿಗೆ ಓಡಿ ಬಂದ ಕಂಗನಾಗೆ ಮಾಡೆಲಿಂಗ್ ಕ್ಷೇತ್ರ ಬೇಗನೆ ಕೈಬೀಸಿ ಕರೆಯಿತು. ಗುಂಗುರು ಕೂದಲಿನ, ಕಂಗಳಲ್ಲೇ ವಿಶಿಷ್ಟ ಸೆಳೆತ, ಮಾದಕ ಸೌಂದರ್ಯದ ಹುಡುಗಿ ಫ್ರಾನ್ಸ್ನ ಪ್ರತಿಷ್ಠಿತ ಫ್ಯಾಷನ್ ಸಂಸ್ಥೆಯೊಂದರ ಭಾಗವಾಗಿ ರ‍್ಯಾಂಪ್ ಮೇಲೆ ಮಿಂಚತೊಡಗಿದ್ದಳು. ಆದರೆ, ಅದೆಷ್ಟು ದಿನ? ಬಣ್ಣಬಣ್ಣದ ಉಡುಗೆ ತೊಟ್ಟು ರ‍್ಯಾಂಪ್ ಮೇಲೆ ಸೊಂಟ ಬಳುಕಿಸುತ್ತ ಕ್ಯಾಟ್ವಾಕ್ ಮಾಡುವುದರಲ್ಲಿ ಯಾವ ಕ್ರಿಯೆಟಿವಿಟಿ ಇದೆ? ಈ ಪ್ರಶ್ನೆ ಕಾಡಿದ ದಿನವೇ ಫ್ಯಾಷನ್ ಉದ್ಯಮದಿಂದ ಕಂಗನಾ ಹೊರಬಂದಿದ್ದರು. ಮುಂದೆ ಅವರು ಕಾಲಿಟ್ಟಿದ್ದು ಸಂಹಿತಾ ನಾಟಕ ಶಾಲೆಯ ಕಚೇರಿಗೆ. ನಿರ್ದೇಶಕ ಅರವಿಂದ್ ಗೌರ್ ಗರಡಿಯಲ್ಲಿ ಅಭಿನಯ ಕಲಿತರು. ಈ ರೀತಿ ಕಂಗನಾ ಮೊದಲು ಅಭಿನಯಿಸಿದ್ದು ಜ್ಞಾನಪೀಠ ಪುರಸ್ಕೃತ ಕನ್ನಡಿಗ ಗಿರೀಶ್ ಕಾರ್ನಾಡರ ‘ತಲೆದಂಡ’ ನಾಟಕದಲ್ಲಿ. ಕಂಗನಾ ಮುಂದಿನ ನಿಲ್ದಾಣ ಮಾಯಾನಗರಿ ಮುಂಬೈ ಆಗಿತ್ತು.
ಆಶಾ ಚಂದ್ರ ಅವರ ಆಕ್ಟಿಂಗ್ ಸ್ಕೂಲ್ ಸೇರಿಕೊಂಡು ಬಾಲಿವುಡ್ ಕನಸುಗಳನ್ನು ಕಂಡ ಕಂಗನಾಗೆ ಮೊಟ್ಟಮೊದಲನೆಯದಾಗಿ ಪಹಲಾಜ್ ನಿಹಲಾನಿ ಅವರ ‘ಐ ಲವ್ ಯು ಬಾಸ್’ ಚಿತ್ರದಲ್ಲಿ ಅವಕಾಶವೂ ದೊರೆತಿತ್ತು. ಅಷ್ಟರಲ್ಲಿ ನಿರ್ದೇಶಕ ಅನುರಾಗ್ ಬಸು ತಮ್ಮ ‘ಗ್ಯಾಂಗ್ಸ್ಟರ್’ ಚಿತ್ರಕ್ಕೆ ಕಂಗನಾರನ್ನು ಆಯ್ಕೆ ಮಾಡಿದರು. ಆದರೆ, ಅಲ್ಲಿಯೂ ಒಂದು ಟ್ವಿಸ್ಟ್ ಇತ್ತು. ಕಂಗನಾ ಇನ್ನೂ ಚಿಕ್ಕ ಹುಡುಗಿ. ‘ಗ್ಯಾಂಗ್ಸ್ಟರ್’ನ ಪ್ರಬುದ್ಧ ನಾಯಕಿಯ ಪಾತ್ರಕ್ಕೆ ಈಕೆ ಸರಿ ಹೊಂದುವುದಿಲ್ಲ ಎಂದು ಭಾವಿಸಿದ್ದ ಚಿತ್ರದ ನಿರ್ವಪಕ ಮಹೇಶ್ ಭಟ್, ಚಿತ್ರಾಂಗದಾ ಸಿಂಗ್ರನ್ನು ಆಯ್ಕೆ ಮಾಡಿದ್ದರು. ಆದರೆ, ಚಿತ್ರಾಂಗದಾ ಬೇರೆ ಚಿತ್ರದಲ್ಲಿ ಬಿಜಿಯಾಗಿದ್ದ ಕಾರಣ, ಅದೃಷ್ಟ ಕಂಗನಾಗೆ ಒಲಿದಿತ್ತು. ಕಣ್ಣಲ್ಲೇ ಹೃದಯ ಕದಲಿಸುವ, ಯಾತನೆ, ವೇದನೆಗಳನ್ನು ಸಂವೇದಿಸುವ, ಭಾವಾಭಿನಯದಲ್ಲೇ ವೀಕ್ಷಕರೊಂದಿಗೆ ಸಂಭಾಷಿಸುವ ವಿಶಿಷ್ಟ ಶಕ್ತಿಯ ಕಂಗನಾ ‘ಗ್ಯಾಂಗ್ಸ್ಟರ್’ ಚಿತ್ರದ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿಯನ್ನೂ ಪಡೆದುಕೊಂಡರು. ಮುಂದೆ ಒಂದೊಂದೇ ಚಿತ್ರಗಳು ಹುಡುಕಿಕೊಂಡು ಬರುತ್ತಿರುವಂತೆಯೇ ಕಂಗನಾ ಸಹ ಎತ್ತರೆತ್ತರಕ್ಕೆ ಬೆಳೆದರು. ‘ವೊ ಲಮ್ಹೆ’, ‘ಲೈಫ್ ಇನ್ ಎ ಮೆಟ್ರೋ’, ‘ಫ್ಯಾಷನ್’, ‘ರಾಝå್: ದಿ ಮಿಸ್ಟರಿ ಕಂಟಿನ್ಯೂಸ್’, ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’, ‘ತನು ವೆಡ್ಸ್ ಮನು’, ‘ಕ್ವೀನ್’, ‘ಮಣಿಕರ್ಣಿಕಾ’, ‘ಪಂಗಾ’ ಮೊದಲಾದ ಚಿತ್ರಗಳು ಓರ್ವ ನಟಿಯಾಗಿ ಕಂಗನಾ ಸ್ಥಾನಮಾನವನ್ನು ಬಾಲಿವುಡ್ನಲ್ಲಿ ಸ್ಥಿರಗೊಳಿಸಿದವು, ಎತ್ತರಕ್ಕೇರಿಸಿದವು.
ಹಾಗೆ ನೋಡಿದರೆ, ಕಂಗನಾ ಅನುಕೂಲಸ್ಥ ಕುಟುಂಬದಲ್ಲೇ ಬೆಳೆದ ಹುಡುಗಿ. ಅಜ್ಜ ಶಾಸಕರಾಗಿದ್ದವರು. ತಂದೆಯ ಉದ್ಯಮವೂ ಚೆನ್ನಾಗಿ ನಡೆಯುತ್ತಿತ್ತು. ಆಕೆ ಆಡಿ ಬೆಳೆದ ಮನೆ ದೊಡ್ಡ ಅರಮನೆಯಂತಿತ್ತು. ಇಷ್ಟೆಲ್ಲ ಹಿನ್ನೆಲೆ ಇದ್ದರೂ ಕಂಗನಾ ಚಿತ್ರರಂಗ ಪ್ರವೇಶಿಸುವಾಗ ಅಕ್ಷರಶಃ ಅನಾಥೆಯಂತೆಯೇ ಬಂದಿದ್ದರು. ಮಗಳು ದೆಹಲಿ, ಮುಂಬೈನಲ್ಲಿ ಒಬ್ಬಂಟಿಯಾಗಿ ಹೆಣಗುತ್ತಿರುವುದನ್ನು ಕಂಡು ಅಪ್ಪ-ಅಮ್ಮನ ಕರುಳು ಕೊರಗುತ್ತಿತ್ತು. ಅಪ್ಪ ಹಣ ಕಳಿಸುತ್ತೇನೆಂದರೂ ‘ನಿಮ್ಮ ಒಂದು ಪೈಸೆ ಬೇಡ, ನಾನೇ ಕೋಟಿ ದುಡಿಯುತ್ತೇನೆ’ ಎಂದು ಶಪಥ ಮಾಡಿಬಿಟ್ಟಿದ್ದರು. ಮುಂಬೈಗೆ ಬಂದ ಆರಂಭದ ದಿನಗಳಲ್ಲಿ ಯಾರ ಪರಿಚಯ, ಶಿಫಾರಸು ಏನೂ ಇರಲಿಲ್ಲ. ವಾಸ್ತವ್ಯಕ್ಕೆ ಹೋಟೆಲ್ನಲ್ಲಿ ರೂಂ ಮಾಡಿದರೆ, ಊಟ ಮಾಡಿದರೆ ಇರುವ ಸ್ವಲ್ಪ ಹಣ ಖರ್ಚಾಗಿ ಬಿಡುವ ಭಯಕ್ಕೆ ಬ್ರೆಡ್ಗೆ ಉಪ್ಪಿನಕಾಯಿ ಹಚ್ಚಿಕೊಂಡು ಹೊಟ್ಟೆ ಹಸಿವು ನೀಗಿಸಿಕೊಂಡಿದ್ದರು. ರೈಲ್ವೇ ಸ್ಟೇಷನ್ನಲ್ಲಿ ರಾತ್ರಿ ಕಳೆದಿದ್ದರು. ಆದರೆ, ಇಂಥ ಯಾವ ಕಷ್ಟವೂ ಕಂಗನಾ ಎಂಬ ದಿಟ್ಟೆಯನ್ನು ಅಧೀರಗೊಳಿಸಲೇ ಇಲ್ಲ.
ಮಧುರ್ ಭಂಡಾರ್ಕರ್ ಅವರ ‘ಫ್ಯಾಷನ್’ ಚಿತ್ರದಲ್ಲಿ ಮಾದಕ ವ್ಯಸನದಿಂದ ಬೀದಿಗೆ ಬಿದ್ದ ರೂಪದರ್ಶಿ ಗೀತಾಂಜಲಿ ನಾಗ್ಪಾಲ್ರನ್ನು ಹೋಲುವ ಪಾತ್ರಕ್ಕೆ ಜೀವ ತುಂಬಿದ್ದ ಕಂಗನಾಗೆ ಅತ್ಯುತ್ತಮ ಪೋಷಕ ನಟಿಯಾಗಿ ರಾಷ್ಟ್ರ ಪ್ರಶಸ್ತಿಯೂ ಬಂತು. ಬಳಿಕ 2015 ಮತ್ತು 2016ರಲ್ಲಿ ಸತತ ಎರಡು ವರ್ಷ ‘ಕ್ವೀನ್’ ಹಾಗೂ ‘ತನು ವೆಡ್ಸ್ ಮನು ರಿಟರ್ನ್ಸ್’ ಚಿತ್ರಗಳಿಗೆ ಅತ್ಯುತ್ತಮ ನಾಯಕ ನಟಿಯಾಗಿ ರಾಷ್ಟ್ರ ಪ್ರಶಸ್ತಿ ಹುಡುಕಿಕೊಂಡು ಬಂತು. ‘ಮಣಿಕರ್ಣಿಕಾ’ ಮತ್ತು ‘ಪಂಗಾ’ ಚಿತ್ರಗಳ ಅಭಿನಯಕ್ಕಾಗಿ ಮೊನ್ನೆ ಮೊನ್ನೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದ್ದು, ಅತೀ ಹೆಚ್ಚು ಬಾರಿ ರಾಷ್ಟ್ರೀಯ ಪ್ರಶಸ್ತಿ ಗೆದ್ದ ನಟಿ ಎನಿಸಿಕೊಂಡಿದ್ದಾರೆ. ಇದಲ್ಲದೆ ನಾಲ್ಕು ಫಿಲಂ ಫೇರ್ ಪ್ರಶಸ್ತಿಗಳು, ಫೋರ್ಬ್ಸ್ನ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ನಾಲ್ಕು ಬಾರಿ ಸ್ಥಾನ ಪಡೆದಿದ್ದು, ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಪುರಸ್ಕೃತೆಯಾಗಿದ್ದು ಕಂಗನಾ ವೃತ್ತಿಜೀವನದ ಮಣಿಹಾರಗಳು. ಈ ನಡುವೆ ಅಮೆರಿಕದಲ್ಲಿ ಸ್ಕ್ರಿಪ್ಟ್ ರೈಟಿಂಗ್ ಕೋರ್ಸ್ ಮಾಡಿದ್ದು, ಜರ್ಮನಿಯಲ್ಲಿ ಕುದುರೆ ಸವಾರಿ ಕಲಿತಿದ್ದು, ‘ಮಣಿಕರ್ಣಿಕಾ’ ಮೂಲಕ ನಿರ್ದೇಶಕಿಯಾಗಿದ್ದು ಅವರ ಇನ್ನಷ್ಟು ಸಾಧನೆಗಳು.
ಯಾವುದೇ ಗಾಡ್ಫಾದರ್ಗಳಿಲ್ಲದೆ, ಲಾಬಿಗಳ ನೆರವಿಲ್ಲದೆ, ಸ್ವಜನಪಕ್ಷಪಾತದ ಅದೃಷ್ಟವಿಲ್ಲದೆ ಸ್ವಂತಬಲದಿಂದಲೇ ಯಶಸ್ಸಿನ ತುತ್ತತುದಿಗೇರಿದ ಕಂಗನಾ, ಒಂದು ಹಂತ ತಲುಪಿದ ಮೇಲೆ ಬೇರೆಲ್ಲ ನಟಿಯರಂತೆ ಸೆಲೆಬ್ರಿಟಿ ಸ್ಟೇಟಸ್ ಕಾಪಾಡಿಕೊಂಡು ವೈಭವದ ಬದುಕು ಬದುಕಿಬಿಡಬಹುದಿತ್ತು. ಆದರೆ, ಮೊದಲೇ ಹೇಳಿದಂತೆ ಕಂಗನಾ ತಾನು ಭಿನ್ನ ಎಂದು ಹೋದಲ್ಲೆಲ್ಲ ಸಾಬೀತು ಮಾಡಿ, ಜಗಳವಾಡಿಕೊಂಡೇ ಬೆಳೆದವರು. ಅನುರಾಗ್ ಬಸು, ಮಹೇಶ್ ಭಟ್, ಆರಂಭಿಕ ದಿನಗಳ ಒಡನಾಡಿ ಆದಿತ್ಯ ಪಾಂಚೋಲಿ, ‘ರಾಝå್’ ಚಿತ್ರದ ಸಹನಟ ಅಧ್ಯಯನ್ ಸುಮನ್, ‘ಕ್ರಿಷ್’ ಚಿತ್ರದ ನಾಯಕ ಹೃತಿಕ್ ರೋಷನ್, ನಿರ್ದೇಶಕ ಕರಣ್ ಜೋಹರ್ ಹೀಗೆ ಒಬ್ಬರೇ ಇಬ್ಬರೇ, ಎಲ್ಲರ ಜೊತೆಯೂ ಕಿತ್ತಾಟವೇ. ಸಲ್ಮಾನ್ ಖಾನ್ರ ‘ಸುಲ್ತಾನ್’ ಚಿತ್ರದ ಅವಕಾಶ ನಾನೇ ನಿರಾಕರಿಸಿದೆ ಎಂದು ಸಾರ್ವಜನಿಕವಾಗಿ ಕೊಚ್ಚಿಕೊಂಡ ಕಾರಣಕ್ಕೆ ರೊಚ್ಚಿಗೆದ್ದ ನಿರ್ವಪಕ ಆದಿತ್ಯ ಚೋಪ್ರಾ ಜೊತೆಗಿನ ಜಗಳದ ಬಳಿಕವಂತೂ ಬಾಲಿವುಡ್ನ ಪ್ರಬಲ ಲಾಬಿಯನ್ನೇ ಕಂಗನಾ ಎದುರು ಹಾಕಿಕೊಂಡರು. ಎಡಪಂಥೀಯ ವಿಚಾರಗಳತ್ತಲೇ ಹೆಚ್ಚು ವಾಲಿರುವ ಬಾಲಿವುಡ್ ಮಂದಿಗೆ ಬಲಪಂಥೀಯ ವಿಚಾರಗಳ ಮೂಲಕ ಕಂಗನಾ ಸೆಡ್ಡು ಹೊಡೆದರು. ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಸಂದರ್ಭದಲ್ಲಿ ಸ್ವಜನ ಪಕ್ಷಪಾತದ ವಿರುದ್ಧ ಹೇಳಿಕೆಗಳನ್ನು ನೀಡಿ ಬಾಲಿವುಡ್ ಪ್ರಭಾವಿಗಳು ಹಾಗೂ ಮಹಾರಾಷ್ಟ್ರ ಸರ್ಕಾರವನ್ನು ಎದುರು ಹಾಕಿಕೊಂಡರು. ಅನಧಿಕೃತ ನಿರ್ವಣವೆಂಬ ನೆಪ ಒಡ್ಡಿ ಮುಂಬೈ ಮಹಾನಗರಪಾಲಿಕೆ ಕಂಗನಾ ಕಚೇರಿ ಕಟ್ಟಡವನ್ನು ಕೆಡವಿದಾಗ ನೇರವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸವಾಲೊಡ್ಡಿದರು. ರೈತರ ಪ್ರತಿಭಟನೆ ವಿಚಾರದಲ್ಲಿ ಈಕೆಯ ಹೇಳಿಕೆ ವಿರುದ್ಧ ದೇಶದಾದ್ಯಂತ ಪೊಲೀಸ್ ಪ್ರಕರಣಗಳು ದಾಖಲಾದವು. ಬಹುಶಃ ಯಾವುದಾದರೂ ನಟಿಯ ವಿರುದ್ಧ ಅತೀ ಹೆಚ್ಚು ಎಫ್ಐಆರ್ಗಳು ದಾಖಲಾಗಿದ್ದರೆ ಅದು ಕಂಗನಾ ವಿರುದ್ಧವೇ.
ಆದರೆ, ಕಂಗನಾ ಡಿಕ್ಷನರಿಯಲ್ಲಿ ಹೆದರಿಕೆ ಎಂಬ ಪದವೇ ಇಲ್ಲ. ಮಾತಿಗೂ ಫಿಲ್ಟರ್ ಇಲ್ಲ. ಕೆಲವೊಮ್ಮೆ ಅವರ ಹೇಳಿಕೆಗಳು ಅತಿರೇಕ, ಹುಚ್ಚಾಟವೆನಿಸಿದರೂ ಮೌನವಾಗಿರುವುದಂತೂ ಆಕೆಗೆ ಗೊತ್ತಿಲ್ಲ. ಕಳೆದೊಂದು ವರ್ಷದಿಂದ ಕೋರ್ಟು - ಠಾಣೆ ಮೆಟ್ಟಿಲೇರಿಕೊಂಡು, ಬಂಧನದಿಂದ ತಪ್ಪಿಸಿಕೊಂಡು, ಸಿಆರ್ಪಿಎಫ್ ಭದ್ರತೆಯಲ್ಲಿ ಓಡಾಡಿಕೊಂಡಿರುವ ಕಂಗನಾ ಸದ್ಯ ಜಯಲಲಿತಾರ ಆತ್ಮಕಥೆ ‘ತಲೈವಿ’ ಚಿತ್ರದಿಂದ ಸುದ್ದಿಯಲ್ಲಿದ್ದಾರೆ. ಜಯಲಲಿತಾ ಪಡಿಯಚ್ಚಿನಂತೆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಕಂಗನಾ, ‘ಕ್ವೀನ್’ ಮತ್ತು ‘ತನು-ಮನು’ ಚಿತ್ರಗಳ ನೂರೈವತ್ತು ಕೋಟಿ ಯಶಸ್ಸು, ರಾಷ್ಟ್ರ ಪ್ರಶಸ್ತಿ ಸಾಧನೆಯನ್ನು ಮತ್ತೊಮ್ಮೆ ಪುನರಾವರ್ತಿಸಿದರೂ ಅಚ್ಚರಿಯೇನಿಲ್ಲ.
ನಿರ್ದೇಶಕ ರಾಮಗೋಪಾಲ ವರ್ಮ ಇತ್ತೀಚೆಗೊಂದು ಮಾತು ಹೇಳಿದ್ದರು. ಕಂಗನಾ ಅದೆಷ್ಟೇ ವಿವಾದಾತ್ಮಕ ವ್ಯಕ್ತಿಯಾಗಿದ್ದರೂ, ಅದನ್ನು ಮೀರಿ ಬೆಳೆಯುವ ಪ್ರತಿಭೆ ಆಕೆಗಿದೆ. ಹಾಗಾಗಿ ಆಕೆಯನ್ನು ವಿರೋಧಿಸಬಹುದು ಆದರೆ, ನಿರ್ಲಕ್ಷಿಸುವುದು ಸಾಧ್ಯವೇ ಇಲ್ಲ ಎಂದು. ಅದೇ ಕಂಗನಾ.. ಎಲ್ಲರಿಗಿಂತ ಭಿನ್ನ..
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)