ಅಂಕಣ

ಅಂಕಣ, ಕೃಷಿ ಚಾವಡಿ; ಸ್ವೀಟ್ ಕಾರ್ನ್ ಬೆಳೆಗೆ ಸೂಕ್ತ ಮಾರುಕಟ್ಟೆ ಎಲ್ಲಿದೆ?

  • ಸ್ವೀಟ್ ಕಾರ್ನ್ ಬೆಳೆಯಬೇಕು ಎಂದುಕೊಂಡಿದ್ದೇನೆ. ಆದರೆ ಮಾರುಕಟ್ಟೆ ಬಗ್ಗೆ ಮಾಹಿತಿ ಇಲ್ಲ. ನಮ್ಮ ಸಮೀಪದ ಎಪಿಎಂಸಿಯಲ್ಲಿ ಮಾರಾಟ ಸಾಧ್ಯವೇ? ಅಥವಾ ಎಲ್ಲಾದರೂ ಸೂಕ್ತ ಮಾರ್ಕೆಟ್ ಇದೆಯಾ?

| ಸೋಮನಾಥ್ ರಾಮಾಜೆ ರಾಯಬಾಗ, ಬೆಳಗಾವಿ ಜಿಲ್ಲೆ

ನಿಮ್ಮ ಪೂರ್ವಾಲೋಚನೆ ಬಹು ಮುಖ್ಯವಾದದ್ದು. ಮಾರುಕಟ್ಟೆ ಎಲ್ಲಿ ಎಂದು ತಿಳಿಯದೇ ಬೆಳೆಯುವುದು ಸರಿಯಲ್ಲ. ಅದರಲ್ಲೂ ಸ್ವೀಟ್​ಕಾರ್ನ್​ನಂತಹ ಬೆಳೆಯನ್ನು ಎಲ್ಲರೂ ಕೊಳ್ಳುವುದಿಲ್ಲ. ಆದರೂ ಅದಕ್ಕೂ ಒಂದು ನಿರ್ದಿಷ್ಟ ಮಾರುಕಟ್ಟೆ ಇರುತ್ತದೆ. ಮೊದಲಿಗೆ ಜಿಲ್ಲಾ ಮಟ್ಟದಲ್ಲಿ ವಿಚಾರಣೆ ಮಾಡಬೇಕು. ಅದರಂತೆ ನೀವು ಎಪಿಎಂಸಿಯಲ್ಲಿ ಮಾರುಕಟ್ಟೆ ಇದೆಯೇ ಎಂದು ಕೇಳಿದ್ದೀರಿ. ತರಕಾರಿ ಬೆಳೆಯಾಗಿ ಅದನ್ನು ಬೆಳೆಯುವುದರಿಂದ ಇರಲೇಬೇಕು.

ಆದರೆ ಬೆಲೆ ಮಾರುಕಟ್ಟೆಯ ಬೇಡಿಕೆಯನ್ನು ಅವಲಂಬಿಸಿರುತ್ತದೆ. ಆಗ ವ್ಯಾಪಾರಸ್ಥರು ಕೇಳುವ ಅಡ್ಡಾದಿಡ್ಡಿ ಬೆಲೆಗೆ ನೀವು ಕೊಟ್ಟು ಹೋಗಲು ಆಗುತ್ತದೆಯೇ? ಹೀಗಾಗಿ ಕೆಲವರು ತಾವೇ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಖಾಯಂ ಗ್ರಾಹಕರನ್ನು ಕಂಡುಕೊಂಡು ಅವರಿಗೆ ನಿಯಮಿತವಾಗಿ ನೀಡುತ್ತಾರೆ. ದಕ್ಷಿಣ ಕರ್ನಾಟಕದ ಸಿಟಿಗಳಲ್ಲಿ ಹಣ್ಣಿನಂಗಡಿಗಳಲ್ಲಿ ಸ್ವೀಟ್​ಕಾರ್ನ್ ಪ್ಯಾಕೆಟ್​ಗಳನ್ನು ಮಾರಾಟ ಮಾಡುತ್ತಾರೆ.

ಅಂದರೆ ಸ್ವೀಟ್​ಕಾರ್ನ್ ಮಾರುವ ಮೊದಲು ಅದರ ಪ್ಯಾಕಿಂಗ್ ಕಲಿತಿರಬೇಕು. ಇದರ ತರಬೇತಿಯನ್ನು ಬೆಂಗಳೂರು ಬಳಿಯ ಹೆಸರಘಟ್ಟದಲ್ಲಿರುವ ಭಾರತೀಯ ಸಂಶೋಧನಾ ಕೇಂದ್ರದಲ್ಲಿ ನೀಡುತ್ತಾರೆ. ಹೀಗೆ ಪ್ಯಾಕ್ ಮಾಡಲಾದ ಸ್ವೀಟ್​ಕಾರ್ನ್ 6 ತಿಂಗಳು ಇರುತ್ತದೆ. ನಿಮ್ಮೂರಿನಲ್ಲಿ ಮಾಲ್​ಗಳು ಇರುತ್ತವೆ. ಅಲ್ಲಿರುವ ತರಕಾರಿ ಶಾಪ್​ಗಳಲ್ಲಿ ಇಂತಹ ಅಪರೂಪದ ತರಕಾರಿಗಳು ಲಭ್ಯವಿರುತ್ತವೆ.

ಅವರು ಪ್ಯಾಕ್ ಮಾಡಿದ ಸ್ವೀಟ್​ಕಾರ್ನ್​ನ್ನು ಫ್ರಿಡ್ಜ್​ಗಳಲ್ಲಿ ಇಟ್ಟಿರುತ್ತಾರೆ. ಅದು ತುಂಬಾ ದಿನ ಹಾಳಾಗದೇ ಇರುತ್ತದೆ. ಬೋಂಡಾ, ಸೂಪ್, ಸಾಂಬಾರು ಮಾಡುವವರು ಅದನ್ನು ಬೇಕಾದಾಗ ಮಾತ್ರ ಒಯ್ಯುತ್ತಾರೆ. ಅಂದರೆ ಅದು ನಿತ್ಯೋಪಯೋಗಿ ವಸ್ತುವಲ್ಲ. ಹೀಗಾಗಿ ನೀವು ಮಾಲ್​ಗಳಲ್ಲಿ ನಿರಂತರವಾಗಿ ಕೊಳ್ಳುತ್ತಾರಾ ಎಂದು ತಿಳಿದುಕೊಳ್ಳದೆ ಬೆಳೆಯಲು ಹೋಗುವುದು ಒಳ್ಳೆಯದಲ್ಲ. ಅದಲ್ಲದೆ ಒಂದೇ ಮಾಲ್​ನಲ್ಲಿ ವಿಚಾರಿಸದೆ ನಾಲ್ಕಾರು ಮಾಲ್​ಗಳಲ್ಲಿ ವಿಚಾರಿಸಿ ವ್ಯಾಪಾರ ಕುದುರಿಸಿಕೊಂಡು ಬೆಳೆಯಿರಿ. ಇನ್ನುಳಿದಂತೆ ಬೆಂಗಳೂರಿನಲ್ಲಿ ಇದಕ್ಕೆ ಖಾಯಂ ಮಾರುಕಟ್ಟೆ ಇದೆ.

ಜಯಚಾಮರಾಜೇಂದ್ರ ಮಾರ್ಕೆಟ್ ಹಾಗೂ ರಸೆಲ್ ಮಾರ್ಕೆಟ್​ಗಳಲ್ಲಿ ದಿನಾಲು ಇದು ಎಲ್ಲೆಲ್ಲಿಂದಲೋ ಬರುತ್ತದೆ. ನೀವು ಮಾರ್ಕೆಟ್ ನೋಂದಣಿ ಮಾಡಿಕೊಂಡರೆ ಹರಾಜು ಹಾಕಬಹುದು. ಅದಕ್ಕೆ ನೀವೇ ಬರಬೇಕೆಂದಿಲ್ಲ. ಒಂದೆರಡು ಸಾರಿ ಬಂದು ಪರಿಚಯ ಮಾಡಿಕೊಂಡರೆ ಮನೆಯಿಂದಲೇ ವ್ಯಾಪಾರ ಮಾಡಬಹುದು. ಅಲ್ಲಿನ ಪ್ರತಿಯೊಂದು ಮಾಲ್, ಹೋಟೆಲ್ ಹಾಗೂ ಚಾಟ್ ಅಂಗಡಿಗಳವರು ಕೊಳ್ಳುತ್ತಾರೆ.

ಗುಣಮಟ್ಟ ನಿರ್ವಹಣೆ ಹಾಗೂ ನಿರಂತರ ಸಪ್ಲೈ ಅಗತ್ಯ. ಇನ್ನು ರಿಲಯನ್ಸ್ ಫ್ರೆಶ್​ನಂತಹ ತರಕಾರಿ ಖರೀದಿ ಕಂಪನಿಗಳು ಸಾಕಷ್ಟಿವೆ, ಮಂಡಿಗಳಿವೆ. ಅವು ದಿನೇ ದಿನೇ ತಮ್ಮ ಖರೀದಿ ಬೆಲೆಯನ್ನು ನಮೂದಿಸುತ್ತಿರುತ್ತವೆ. ನೀವು ಅವರೊಂದಿಗೂ ಒಪ್ಪಂದ ಮಾಡಿಕೊಳ್ಳಬಹುದು. ಬೆಳಗಾವಿಯಲ್ಲಿ ಅದರ ಮಳಿಗೆಯೂ ಇದೆ. ಅಲ್ಲಿಯೇ ಸಂರ್ಪಸಿ. ಹತ್ತಿರದ ರೈತ ಉತ್ಪಾದಕ ಕಂಪನಿಗಳಲ್ಲೂ ವಿಚಾರಿಸಿ. ಲಾಲ್​ಬಾಗ್​ನಲ್ಲಿರುವ ಹಾಪಕಾಮ್ಸ್​ ಮತ್ತು ಸಾವಯವದಲ್ಲಿ ಬೆಳೆಯುವುದಾದರೆ ಅಲ್ಲಿಯೇ ಇರುವ ಜೈವಿಕ್ ಸೊಸೈಟಿಯನ್ನೂ ಸಂರ್ಪಸಬಹುದು.