ಅಂಕಣ

ಸದ್ಗುರು ಅಂಕಣ ಅಮೃತದಾರೆ; ನೀರಿನ ವ್ಯಥೆಗೆ ಎಚ್ಚೆತ್ತುಕೊಳ್ಳುತ್ತಿರುವ ಜನರು

malli
ಮರ ಆಧಾರಿತ ಕೃಷಿಯ ಆರ್ಥಿಕ ಪ್ರಯೋಜನಗಳನ್ನು ಈಶಾ ತಮಿಳುನಾಡಿನಲ್ಲಿ ಕಳೆದ ಎರಡು ದಶಕಗಳಿಂದ ಯಶಸ್ವಿಯಾಗಿ ರೈತರಿಗೆ ತಲುಪಿಸುತ್ತಿದೆ. ಈವರೆಗೆ, ತಮಿಳುನಾಡಿನ 69,760 ರೈತರು ಇದರ ಲಾಭ ಪಡೆದಿದ್ದಾರೆ. ಫಲಿತಾಂಶ ಎಷ್ಟು ಪರಿಣಾಮಕಾರಿ ಆಗಿದೆ ಎಂದರೆ, 5 ರಿಂದ 7 ವರ್ಷಗಳಲ್ಲಿ ಅವರ ಆದಾಯ ಶೇಕಡ 300ರಿಂದ 800ರವರೆಗೆ ಏರಿಕೆಯಾಗಿದೆ.

ಕಳೆದ 10 ವರ್ಷಗಳಲ್ಲಿ, ಕಾವೇರಿ ಜಲಾನಯನ ಪ್ರದೇಶದ 47 ಸಾವಿರಕ್ಕೂ ಹೆಚ್ಚು ರೈತರು ಪ್ರಾಣವನ್ನು ಕಳೆದುಕೊಳ್ಳಲು ಮುಂದಾಗಿದ್ದಾರೆ. ಈ ದುರಂತಕ್ಕೆ ವಿವಿಧ ಜಟಿಲ ಅಂಶಗಳು ಕಾರಣ. ಆದರೆ ರೈತರ ವ್ಯಥೆಗೆ ಮೂಲ ಕಾರಣಗಳು ಭಾರಿ ಪ್ರಮಾಣದಲ್ಲಿ ಸಂಭವಿಸಿದ ಮಣ್ಣಿನ ಸವಕಳಿ ಮತ್ತು ನೀರಿನ ತೀವ್ರ ಕೊರತೆ. ಒಂದು ಕಾಲದಲ್ಲಿ ಸಮೃದ್ಧ ಮತ್ತು ಫಲವತ್ತಾದ ಮಣ್ಣನಿಂದ ಕೂಡಿದ್ದ ನದಿಯ ಜಲಾನಯನ ಪ್ರದೇಶ ಇಂದು ಸಸ್ಯವರ್ಗದ ಕೊರತೆಯಿಂದಾಗಿ ಪೋಷಕಾಂಶಗಳಿಲ್ಲದೆ ಮರುಭೂಮಿಯಂತಾಗಿದೆ. ಕಳೆದ ಏಳು ದಶಕಗಳಲ್ಲಿ ನದಿಯ ಜಲಾನಯನ ಪ್ರದೇಶದ ಶೇಕಡ 87ಕ್ಕೂ ಹೆಚ್ಚು ಮರದ ಹೊದಿಕೆ ನಷ್ಟವಾಗಿದೆ. ಅಂದರೆ, ಅಭಿವೃದ್ಧಿ ಹೆಸರಲ್ಲಿ ಅಷ್ಟೊಂದು ದೊಡ್ಡಪ್ರಮಾಣದಲ್ಲಿ ಮರಗಳನ್ನು ಕತ್ತರಿಸಲಾಗಿದೆ.

ಅಭಿಯಾನ ಏಕೆ?: ‘ಕಾವೇರಿ ಕೂಗು-ಈಶಾ ಔಟ್​ರೀಚ್’ ಕಾರ್ಯಕ್ರಮದ ಅಡಿಯದಲ್ಲಿ ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸುವ ಚಳವಳಿ ಆರಂಭಿಸಲಾಗಿದೆ. ನದಿಯ ಜಲಾನಯನ ಪ್ರದೇಶದಲ್ಲಿ ವಾಸಿಸುವ ರೈತರಿಗೆ ಆ ಪ್ರದೇಶದಲ್ಲಿನ ಸಸ್ಯವರ್ಗವನ್ನು ಪುನಃಸ್ಥಾಪಿಸಲು 242 ಕೋಟಿ ಮರಗಳನ್ನು ತಮ್ಮ ಕೃಷಿಭೂಮಿಯಲ್ಲಿ ನೆಡಲು ಅನುವು ಮಾಡಿಕೊಡುವುದೇ ಇದರ ಪ್ರಧಾನ ಉದ್ದೇಶ. ಇಷ್ಟು ಸಂಖ್ಯೆಯ ಮರಗಳಿದ್ದಲ್ಲಿ ನದಿ ಜಲಾನಯನ ಪ್ರದೇಶದಲ್ಲಿ 9ರಿಂದ 12 ಟ್ರಿಲಿಯನ್ ಲೀಟರ್ ನೀರನ್ನು ಇಂಗಿಸಲು ಸಾಧ್ಯವಾಗುತ್ತದೆ ಮತ್ತು ಕಾವೇರಿಯ ಮೂಲದಲ್ಲಿ ಹರಿವನ್ನು ಕೂಡ ಹೆಚ್ಚಿಸುತ್ತದೆ.

ಮರಗಳು ತಮ್ಮ ಮೂಲಕ ಕಸಕಡ್ಡಿಯನ್ನು (ಎಲೆಗಳು, ಕೊಂಬೆಗಳು, ಬೀಜಗಳು, ಕೊಳೆತ ಹಣ್ಣು) ಉತ್ಪತ್ತಿ ಮಾಡುತ್ತವೆ, ಇದು ಮಣ್ಣಿನ ಪೋಷಕಾಂಶಗಳನ್ನು ಹೆಚ್ಚು ಮಾಡುತ್ತದೆ ಮತ್ತು ನೀರನ್ನು ಹಿಡಿದಿಡುವ ಮಣ್ಣಿನ ಸಾಮರ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಹೆಚ್ಚಿನ ಮೌಲ್ಯದ ಮರಗಳು 5 ರಿಂದ 7 ವರ್ಷಗಳ ಕಾಲಾವಧಿಯಲ್ಲಿ ರೈತರ ಆದಾಯವನ್ನು ಗಣನೀಯವಾಗಿ ವೃದ್ಧಿಸುತ್ತವೆ. ಮರಮುಟ್ಟುಗಳನ್ನು ಒದಗಿಸುವಂತಹ ಮರಪ್ರಭೇದಗಳು ರೈತರಿಗೆ ತ್ವರಿತ ಬಂಡವಾಳಕ್ಕೆ ಎಡೆ ಮಾಡಿಕೊಡುತ್ತವೆ.

ಅಂತಹ ‘ತುರ್ತ ನಿಧಿ’ಗಳು ಸ್ವಂತ ಕೃಷಿಭೂಮಿಯಲ್ಲಿ ಮರಗಳ ರೂಪದಲ್ಲಿ ಲಭ್ಯವಿರುವುದರಿಂದ ದುಬಾರಿ ಸಾಲದ ಮೂಲಗಳ ಮೇಲಿನ ರೈತರ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಅವರ ಸಾಲದ ಹೊರೆಯನ್ನು ಸಹ ಕಡಿಮೆ ಮಾಡುತ್ತದೆ. ಇದು 50 ಲಕ್ಷಕ್ಕೂ ಹೆಚ್ಚು ರೈತರ ಜೀವನದ ಮೇಲೆ ಮಾತ್ರವಲ್ಲದೆ ನದಿಯ ಜಲಾನಯನ ಪ್ರದೇಶದಲ್ಲಿ ವಾಸಿಸುವ 8.4 ಕೋಟಿಗೂ ಹೆಚ್ಚು ಜನರ ಆಹಾರ ಮತ್ತು ನೀರಿನ ಸುರಕ್ಷೆ ಮೇಲೂ ಪರಿಣಾಮ ಬೀರುತ್ತದೆ.

ಮರ ಆಧಾರಿತ ಕೃಷಿಯ ಆರ್ಥಿಕ ಪ್ರಯೋಜನಗಳನ್ನು ಈಶಾ ತಮಿಳುನಾಡಿನಲ್ಲಿ ಕಳೆದ ಎರಡು ದಶಕಗಳಿಂದ ಯಶಸ್ವಿಯಾಗಿ ರೈತರಿಗೆ ತಲುಪಿಸುತ್ತಿದೆ. ಈವರೆಗೆ, ತಮಿಳುನಾಡಿನ 69,760 ರೈತರು ಇದರ ಲಾಭ ಪಡೆದಿದ್ದಾರೆ. ಫಲಿತಾಂಶ ಎಷ್ಟು ಪರಿಣಾಮಕಾರಿ ಆಗಿದೆ ಎಂದರೆ, 5 ರಿಂದ 7 ವರ್ಷಗಳಲ್ಲಿ ಅವರ ಆದಾಯ ಶೇಕಡ 300ರಿಂದ 800ರವರೆಗೆ ಏರಿಕೆಯಾಗಿದೆ. ‘ಕಾವೇರಿ ಕೂಗು’ ಇದೇ ಮಾದರಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತಿದೆ, ಆದ್ದರಿಂದ ಹೆಚ್ಚಿನ ರೈತರು ತಮ್ಮ ಭಾಗಶಃ ಕೃಷಿಭೂಮಿಯಲ್ಲಿ ಮರ ಆಧಾರಿತ ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಯೋಜನ ಪಡೆಯಬಹುದು.

ಸರ್ಕಾರದ ಬೆಂಬಲ: 2019 ಜುಲೈನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ತಮಿಳುನಾಡು ಮತ್ತು ಕರ್ನಾಟಕದ ರಾಜ್ಯ ಸರ್ಕಾರಗಳು ಬೆಂಬಲವನ್ನು ನೀಡಿವೆ. ರೈತರು ಸ್ವಂತ ಭೂಮಿಯಲ್ಲಿ ಮರಗಳನ್ನು ಬೆಳೆಯುವುದನ್ನು ತಡೆಯುವ ನಿರ್ಬಂಧಿತ ಕಾನೂನುಗಳನ್ನು ಸಡಿಲಿಸಲು ಸರ್ಕಾರಗಳು ಸಿದ್ಧವಾಗಿವೆ. ಇದು ಹೆಚ್ಚಿನ ರೈತರಿಗೆ ಗಮನಾರ್ಹವಾದ ಆರ್ಥಿಕ ಮತ್ತು ಪರಿಸರ ಪ್ರಯೋಜನಗಳನ್ನು ಹೊಂದಿರುವ ಮರ ಆಧಾರಿತ ಕೃಷಿಗೆ ಮುಂದಾಗಲು ಪ್ರೋತ್ಸಾಹ ನೀಡುತ್ತದೆ.

ಹೀಗೆ ನಡೆಯಲಿದೆ ಅಭಿಯಾನ: ಮರ ಆಧಾರಿತ ಕೃಷಿಯನ್ನು ಭಾಗಶಃ ಅಳವಡಿಸಿಕೊಳ್ಳುವುದರೊಂದಿಗೆ ಮಾದರಿ ಕೃಷಿ ಕೇಂದ್ರಗಳನ್ನು ರಚಿಸಲು ಶ್ರಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾವೇರಿ ಕೂಗಿನ ಬೇರುಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಂಡಗಳು ಕರ್ನಾಟಕದ ಗ್ರಾಮೀಣ ನದಿ ಜಲಾನಯನ ಜಿಲ್ಲೆಗಳಲ್ಲಿನ 54 ತಾಲೂಕುಗಳಲ್ಲಿ ತಲಾ 500 ರೈತರನ್ನು ತಲುಪಲು ವ್ಯವಸ್ಥೆಗಳನ್ನು ರೂಪಿಸುತ್ತಿದ್ದಾರೆ. ರೈತರು ಈ ವರ್ಷ (2020) ಸಸಿಗಳನ್ನು ನೆಡುವ ಚಟುವಟಿಕೆಗಳನ್ನು ಪ್ರಾರಂಭಿಸಲಿದ್ದಾರೆ. ಮೊದಲ ಹಂತದಲ್ಲಿ ಕರ್ನಾಟಕ ಸರ್ಕಾರ ಕಾವೇರಿ ಜಲಾನಯನ ಪ್ರದೇಶದಲ್ಲಿ 73 ಲಕ್ಷ ಸಸಿಗಳನ್ನು ರೈತರಿಗೆ ವಿತರಿಸಲಿದೆ. ಆಂದೋಲನವನ್ನು ಬೆಂಬಲಿಸಲು ರೈತರಿಗೆ 3 ಕೋಟಿ ಸಸಿಗಳನ್ನು ವಿತರಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.

ಕಾವೇರಿ ಕೂಗು ಅಭಿಯಾನವು ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಕೃಷಿತಜ್ಞರು, ಮಣ್ಣಿನವಿಜ್ಞಾನಿಗಳು, ಜಲವಿಜ್ಞಾನಿಗಳು ಮತ್ತು ಸಾರ್ವಜನಿಕರ ಬೆಂಬಲವನ್ನು ಪಡೆದಿದೆ. ಉಷ್ಣವಲಯದ ಪ್ರದೇಶಗಳಲ್ಲಿ ನದಿ ಪುನರುಜ್ಜೀವನಕ್ಕೆ ಈ ಅಭಿಯಾನ ಜಾಗತಿಕ ನೀಲಿನಕ್ಷೆಯಾಗುವ ಸಾಮರ್ಥ್ಯವನ್ನು ವಿಶ್ವಸಂಸ್ಥೆ ಆಶ್ರಯದಲ್ಲಿನ ಜಾಗತಿಕ ಸಂಸ್ಥೆಗಳುಒಪ್ಪಿಕೊಂಡಿವೆ.

ಕಾವೇರಿ ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ಹಸಿರು ಹೊದಿಕೆಗೆ ತರುವ 242 ಕೋಟಿ ಮರಗಳ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಲು ವೈಯಕ್ತಿಕವಾಗಿ ಮತ್ತು ಸಂಸ್ಥೆಗಳು ಉದಾರವಾಗಿ ಕೊಡುಗೆ ನೀಡುತ್ತಿವೆ; ಇಲ್ಲಿಯವರೆಗೆ ನಿಧಿಯ ಸಂಗ್ರಹ ಶೇಕಡ 99.6 ಆನ್​ಲೈನ್ ಮತ್ತು ಡಿಜಿಟಲ್ ವಿಧಾನಗಳ ಮೂಲಕ ಮಾಡಲಾಗಿದೆ. ಇವೆಲ್ಲ ಸ್ವಯಂಪ್ರೇರಿತ ದೇಣಿಗೆಯಾಗಿವೆ. ಜಗತ್ತಿನ 150 ದೇಶಗಳಿಂದ ಮತ್ತು ಲಕ್ಷಾಂತರ ಜನರಿಂದ ಕೊಡುಗೆಗಳನ್ನು ಸ್ವೀಕರಿಸಲಾಗಿದೆ. ಒಮ್ಮೆ ಇದು ಯಶಸ್ವಿಯಾರೆ, ಕಾವೇರಿ ಕೂಗು ಜಾಗತಿಕವಾಗಿ ನದಿ ಪುನರುಜ್ಜೀವನಗೊಳಿಸುವ ಪ್ರಯತ್ನಗಳಿಗೆ ದೊಡ್ಡ ಪ್ರಮಾಣದ ಹಾಗೂ ಪುನರಾವರ್ತಿಸಬಹುದಾದ ಮಾನದಂಡವನ್ನು ಸ್ಥಾಪಿಸುತ್ತದೆ ಎಂಬುದು ಗಮನಾರ್ಹ.

‘ಈಶಾ ಔಟ್​ರೀಚ್’ 2009ರಲ್ಲಿ ಸ್ಥಾಪಿತವಾದ ನೋಂದಾಯಿತ ಚಾರಿಟಬಲ್ ಟ್ರಸ್ಟ್ ಆಗಿದ್ದು, ಇದು ಮುಖ್ಯವಾಗಿ ಗ್ರಾಮೀಣ ಭಾರತದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಪರಿಸರ ಉಪಕ್ರಮಗಳನ್ನು ತಲುಪಿಸುತ್ತದೆ. ಈಶಾ ಔಟ್​ರೀಚ್ ಕಾರ್ಯಗಳನ್ನು ಜಾಗತಿಕವಾಗಿ ಮತ್ತು ರಾಷ್ಟ್ರೀಯವಾಗಿ ಗುರುತಿಸಲಾಗಿದೆ ಮತ್ತು ಗೌರವಿಸಲಾಗಿದೆ. 2010ರಲ್ಲಿ, ತಮಿಳುನಾಡಿನಲ್ಲಿ ಮರಗಳನ್ನು ಹೆಚ್ಚಿಸಲು ಪ್ರಾರಂಭಿಸಿದ ಪರಿಸರ ಉಪಕ್ರಮವಾದ ‘ಪ್ರಾಜೆಕ್ಟ್ ಗ್ರೀನ್​ಹ್ಯಾಂಡ್ಸ್’(ಕಎಏ)ಗೆ ಭಾರತದ ಅತ್ಯುನ್ನತ ಪರಿಸರ ಪ್ರಶಸ್ತಿ ‘ಇಂದಿರಾ ಗಾಂಧಿ ಪರ್ಯಾವರಣ್ ಪುರಸ್ಕಾರ್’ ಪ್ರದಾನಿಸಿ, ಗೌರವಿಸಲಾಗಿದೆ.

‘ಪ್ರಾಜೆಕ್ಟ್ ಗ್ರೀನ್​ಹ್ಯಾಂಡ್ಸ್’ ಮುಖಾಂತರ ಮೂರೇ ದಿನಗಳಲ್ಲಿ 6,284 ಸ್ಥಳಗಳಲ್ಲಿ 8,52,587 ಸಸಿಗಳನ್ನು ನೆಡುವ ಮೂಲಕ ಅತಿದೊಡ್ಡ ಸಾಮೂಹಿಕ ಗಿಡನೆಟ್ಟ ಗಿನ್ನಿಸ್ ದಾಖಲೆಯನ್ನು ಸ್ಥಾಪಿಸಲಾಯಿತು. ಭಾರತದ ನಶಿಸುತ್ತಿರುವ ನದಿಗಳ ಸವಾಲನ್ನು ಎದುರಿಸಲು ಈಶಾ 2017ರಲ್ಲಿ ಪ್ರಾರಂಭಿಸಿದ ‘ರ್ಯಾಲಿ ಫಾರ್ ರಿವರ್ಸ್’(ನದಿಗಳನ್ನು ರಕ್ಷಿಸಿ) ಅಭಿಯಾನಕ್ಕೆ ಭಾರತ ಸರ್ಕಾರದ ಜಲಸಂಪನ್ಮೂಲ ಸಚಿವಾಲಯ 2019ರಲ್ಲಿ ಅತ್ಯುತ್ತಮ ಶೈಕ್ಷಣಿಕ/ಸಾಮೂಹಿಕ ಜಾಗೃತಿ ಪ್ರಯತ್ನದ ವಿಭಾಗದಲ್ಲಿ ರಾಷ್ಟ್ರೀಯ ಜಲ ಪ್ರಶಸ್ತಿ ನೀಡಿ ಗೌರವಿಸಿದೆ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- kannadapublications@ishafoundation.org)