ಅಂಕಣ

ತಣ್ಣೀರು ಯಾರಿಗೆಲ್ಲಾ ಹಿತ, ಯಾರಿಗೆ ಅಹಿತ?

ಜೀವಿಗಳ ಪ್ರಾಣಧಾರಣೆಗೆ ಕುಡಿಯುವ ನೀರನ್ನು ಅನೇಕ ಮೂಲಗಳಿಂದ ಸಂಗ್ರಹಿಸುತ್ತೇವೆ. ಇತ್ತೀಚೆಗೆ ಕೊಳವೆ ಬಾವಿಯ ನೀರಿನ ಅವಲಂಬನೆ ಹೆಚ್ಚಾಗಿದೆ. ಬೇಕೆಂದಾಗ ನೀರೆತ್ತುವ ಯಂತ್ರವನ್ನು ಬಳಸಿ ನೀರನ್ನು ಹೊರತೆಗೆದು ಹಾಗೆಯೇ ನೇರವಾಗಿ ಅದನ್ನು ವಿವಿಧ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುತ್ತೇವೆ. ಆಯುರ್ವೆದವು ಕುಡಿಯುವ ನೀರಿನ ವಿಚಾರದಲ್ಲಿ ಮಹತ್ವಪೂರ್ಣ ಮಾಹಿತಿಗಳನ್ನು ನೀಡುತ್ತದೆ. ಭೂಮಿಯ ಯಾವುದೇ ಮೂಲದ್ದಾಗಿದ್ದರೂ ಬೆಳಗಿನ ಹೊತ್ತಿನಲ್ಲೇ ಸಂಗ್ರಹಿಸಬೇಕೆಂದು ಆಯುರ್ವೆದ ಹೇಳುತ್ತದೆ. ಏಕೆಂದರೆ ಆ ಸಮಯದಲ್ಲಿ ನೀರು ತಂಪಾಗಿದ್ದು ನಿರ್ಮಲವಾಗಿದ್ದು ಗುಣಭರಿತವಾಗಿರುತ್ತದೆ. ಹಗಲಿನಲ್ಲಿ ಸೂರ್ಯನ ಕಿರಣಗಳು ಬಿದ್ದು ರಾತ್ರಿಯಲ್ಲಿ ಚಂದ್ರಕಿರಣಗಳು ರ್ಸ³ಸಿದ ನೀರು ಯಾವಾಗಲೂ ಗುಣಸಂಪನ್ನವಾಗಿದ್ದು ಸೇವನೆಗೆ ಅತ್ಯಂತ ಯೋಗ್ಯವಾಗಿದೆ. ಈ ಅಂಶೂದಕ ಎಂಬ ಹೆಸರಿನ ನೀರು ಸ್ನಿಗ್ಧವಾಗಿದ್ದು, ವಾತ, ಪಿತ್ತ ಕಫಗಳೆಂಬ ಮೂರೂ ದೋಷಗಳನ್ನು ಕಡಿಮೆಗೊಳಿಸುತ್ತದೆ. ದೇಹದೊಳಗಿನ ಸೂಕ್ಷ್ಮನಾಡಿಗಳಲ್ಲಿ ತಡೆಯುಂಟುಮಾಡುವುದಿಲ್ಲ, ಮಳೆಯ ನೀರಿನಂತೆ ದೋಷಮುಕ್ತವಾಗಿದ್ದು ಬಲದಾಯಕ, ರೋಗನಿರೋಧಕ ಶಕ್ತಿವರ್ಧಕ, ಬುದ್ಧಿಪ್ರದಾಯಕ, ಶೀತಲ, ಸುಲಭವಾಗಿ ಜೀರ್ಣಗೊಳ್ಳುವ ಗುಣವನ್ನು ಹೊಂದಿರುವುದರಿಂದ ಅಮೃತ ಸಮಾನ ಎಂದು ಪ್ರಶಂಸಿಸಲಾಗಿದೆ. ಮಳೆಗಾಲ ಕಳೆದ ನಂತರ ಬರುವ ಸಪ್ಟೆಂಬರ್ ನವೆಂಬರ್​ನ ಶರತ್​Mುತುವಿನಲ್ಲಿ ಅಗಸ್ತ್ಯ ನಕ್ಷತ್ರದ ಬೆಳಕಿನ ಸ್ಪರ್ಶದಿಂದ ಎಲ್ಲಾ ಬಗೆಯ ನೀರು ಸ್ವಚ್ಛವಾಗಿ ಸ್ವಾಸ್ಥ್ಯ ದೃಷ್ಟಿಯಿಂದ ಸೇವನೆಗೆ ಶ್ರೇಷ್ಠವಾಗಿರುವುದು. ಇದಕ್ಕೆ ಹಂಸೋದಕ ಎಂಬ ಹೆಸರನ್ನೂ ನೀಡಲಾಗಿದೆ.

ನಾವಿಂದು ಕುಡಿಯಲು ಉಪಯೋಗಿಸುವ ದ್ರವಗಳಿಗೆಲ್ಲಾ ಪಾನೀಯ ಎಂದು ರೂಢಿಯಲ್ಲಿ ಹೇಳುತ್ತೇವೆ. ನಿಜಕ್ಕೂ ಪಾನೀಯ ಎಂಬುದು ನೀರಿನ ಪರ್ಯಾಯ ಹೆಸರು! ಸಲಿಲ, ನೀರ, ಕೀಲಾಲ, ಜಲ, ಅಂಬು, ಆಪ, ವಾರ, ವಾರಿ, ಕಮ್ ತೋಯ, ಪಯಃ, ಪಾಥಃ, ಉದಕ, ಜೀವನ, ವನ, ಅಂಭ, ಅರ್ಣ, ಅಮೃತ, ಘನರಸ ಎಂಬೆಲ್ಲಾ ನಾಮಧೇಯಗಳೂ ಈ ನೀರಿಗಿದೆ. ಸುಸ್ತು, ಬಳಲಿಕೆ, ಎಚ್ಚರ ತಪ್ಪುವುದು, ಬಾಯಾರಿಕೆ, ತೂಕಡಿಕೆ, ವಾಂತಿ, ಮಲಬದ್ಧತೆ ನಿವಾರಣೆ ಮಾಡುವ ನೀರು ಬಲನೀಡಿ ಹಗಲಿನಲ್ಲಿ ನಿದ್ರೆ ತಡೆಯುವ ಗುಣಹೊಂದಿದೆ. ಶರೀರ ಪೋಷಕ, ಹೃದಯಕ್ಕೆ ಹಿತಕರ, ಗುಪ್ತರುಚಿ, ಅಜೀರ್ಣನಾಶಕ, ಜೀರ್ಣಕ್ಕೆ ಲಘು, ಶೀತಲವಾಗಿದ್ದು ಸ್ವಚ್ಛ, ರುಚಿ ಗ್ರಹಿಸಲು ಸಹಕಾರಿ, ಅಮೃತದಂತಹ ಗುಣಧರ್ಮಗಳು ನೀರಿಗಿದೆ. ನೀರನ್ನು ಬಿಟ್ಟು ಜೀವನ ಎಂಬುದು ಅಸಾಧ್ಯ. ಇಂತಹ ನೀರನ್ನು ಅತಿಯಾಗಿ ಕುಡಿಯುವುದರಿಂದ ಅಥವಾ ಕುಡಿಯದೇ ಇರುವುದರಿಂದ ಪಾಚಕಾಗ್ನಿ ದುರ್ಬಲವಾಗುತ್ತದೆ. ಜೀರ್ಣಶಕ್ತಿಯನ್ನು ಸರಿಯಾಗಿ ಕಾಪಾಡಬೇಕಾದರೆ ಸ್ವಲ್ಪ ಪ್ರಮಾಣದಲ್ಲಿ, ಆಗಾಗ ನೀರನ್ನು ಕುಡಿಯುವುದು ಪ್ರಶಸ್ತ ಎಂದು ಆಯುರ್ವೆದದ ಭಾವಪ್ರಕಾಶ ಗ್ರಂಥದಲ್ಲಿ ಸ್ಪಷ್ಟಪಡಿಸಲಾಗಿದೆ.

ಮೂರ್ಛಾ ರೋಗ, ಪಿತ್ತ, ಉಷ್ಣ, ಮೈಉರಿ ಹೆಚ್ಚಿದ್ದಾಗ, ರಕ್ತವ್ಯಾಧಿಗಳಲ್ಲಿ, ವಿಷ, ಮದ್ಯ ಸೇವಿಸಿದ್ದಾಗ, ಸುಸ್ತು, ತಲೆಸುತ್ತು, ಅಜೀರ್ಣ, ಆಸ್ತಮಾ, ವಾಂತಿ, ಮೂಗು-ಬಾಯಿಗಳಿಂದಾಗುವ ರಕ್ತಸ್ರಾವಗಳಲ್ಲಿ ತಣ್ಣೀರು ಸೇವಿಸುವುದು ಪ್ರಶಸ್ತವಾಗಿದೆ. ಎದೆಯ ಪಕ್ಕೆನೋವು, ಶೀತ, ನೆಗಡಿ, ನರಮಂಡಲ ರೋಗಗಳು, ಗಂಟಲು ನೋವು,ಹೊಟ್ಟೆಯುಬ್ಬರ, ಹೊಟ್ಟೆ ಬಿಗಿತ, ಜ್ವರದ ಪ್ರಾರಂಭದ ದಿನಗಳಲ್ಲಿ, ಬಾಯಿರುಚಿ ಇಲ್ಲದಿದ್ದಾಗ, ಕರುಳಿನ ರೋಗ, ಉದರದ ಗಡ್ಡೆಗಳು, ಉಸಿರಾಟದ ತೊಂದರೆ, ಕೆಮ್ಮು, ಕುರ ಮತ್ತು ಬಿಕ್ಕಳಿಕೆಗಳಿದ್ದಾಗ ತಣ್ಣೀರು ಸೇವನೆ ತರವಲ್ಲ. ಬಾಯಿರುಚಿ ಇಲ್ಲದಿದ್ದಾಗ, ಶೀತ ನೆಗಡಿ, ಕುಂದಿದ ಜೀರ್ಣಶಕ್ತಿ, ಮೈಊತ, ಕ್ಷಯರೋಗ, ಅತಿಯಾದ ಜೊಲ್ಲು ಸ್ರಾವ, ಹೊಟ್ಟೆಯಲ್ಲಿ ನೀರು ತುಂಬಿದ್ದಾಗ, ಚರ್ಮರೋಗ, ನೇತ್ರರೋಗ, ಜ್ವರ, ಗಾಯ ಹಾಗೂ ಮಧುಮೇಹಗಳಿದ್ದಾಗ ಬಿಸಿನೀರು ಹಿತಕರವಾಗಿದ್ದರೂ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ನೀರು ಕುಡಿಯಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ. ಬಾಯಾರಿಕೆಯನ್ನು ಉಪೇಕ್ಷಿಸಿದರೆ ಮೂರ್ಛೆತಪ್ಪಿ ಅಂತಿಮವಾಗಿ ಪ್ರಾಣಹಾನಿಗೂ ಕಾರಣವಾಗುವ ಸಾಧ್ಯತೆ ಇರುವುದರಿಂದ ಬಾಯಾರಿದವರಿಗೆ ನೀರು ನೀಡಲೇಬೇಕು ಎಂಬುದಾಗಿ ಹಾರೀತ ಸಂಹಿತೆ ನಿರ್ದೇಶಿಸಿದೆ. ಕುಡಿಯುವ ಶುದ್ಧ ನೀರು ಹೇಗಿರಬೇಕೆಂದರೆ ವಾಸನೆ ಇಲ್ಲದೆ, ವ್ಯಕ್ತಪಡಿಸಲಾಗದ ರುಚಿ ಹೊಂದಿದ್ದು, ಶೀತಲವಾಗಿದ್ದು, ಸ್ವಚ್ಛವಾಗಿದ್ದು, ಸುಲಭದಲ್ಲಿ ಜೀರ್ಣವಾಗುವ, ಬಾಯಾರಿಕೆಯನ್ನು ತಕ್ಷಣ ನೀಗುವ, ಹೃದಯ ಹಾಗೂ ಮನಸ್ಸಿಗೆ

ಹಿತವಾಗಿರುವ ಗುಣಗಳಿಂದ ಸಂಪನ್ನವಾಗಿರಬೇಕು. ಅಂಟುಗುಣ, ಕ್ರಿಮಿಗಳಿಂದ ಕೂಡಿದ, ಬಣ್ಣಬದಲಾದ, ರುಚಿಕಳೆದುಕೊಂಡ, ಕೆಟ್ಟವಾಸನೆಯ, ಸೂರ್ಯಚಂದ್ರ ಕಿರಣಗಳು ಸೋಕದ, ಅಕಾಲದ ಮಳೆಯ ನೀರನ್ನು ಕುಡಿಯಲು ಅಥವಾ ಸ್ನಾನಕ್ಕೆ ಬಳಸಬಾರದು. ಇದು ನಾನಾ ರೋಗಗಳಿಗೆ ನಾಂದಿಯಾಗುತ್ತದೆ ಎಂಬ ಎಚ್ಚರಿಕೆಯನ್ನೂ ಆಯುರ್ವೆದ ಗ್ರಂಥಗಳಲ್ಲಿ ಕಾಣಬಹುದು. ಆಯುರ್ವೆದ ಅರುಹಿದ ನೀರಿನ ವಿವೇಚನೆ ನಮ್ಮೆಲ್ಲರ ಬದುಕಿಗೆ ಆರೋಗ್ಯಕರ ಸಮಾಲೋಚನೆ.