ಅಂಕಣ

ಸಹಬಾಳ್ವೆ ನಮ್ಮದಾಗಲಿ: ಮನೋಲ್ಲಾಸ

Webdesk - Ravikanth
| ಭಾರತಿ ಎ., ಕೊಪ್ಪ

ಅದೊಂದು ಆಶ್ರಮ. ಅಲ್ಲಿ ಗುರುಗಳು ಶಿಷ್ಯಂದಿರಿಗೆ ತಾಳ್ಮೆ, ಒಗ್ಗಟ್ಟಿನ ಪಾಠ ಹೇಳುತ್ತಿದ್ದರು. ಆದರೂ ಶಿಷ್ಯಂದಿರ ನಡುವೆ ಆಗಾಗ ಗಲಾಟೆ, ಜಗಳ ನಡೆಯುತ್ತಲೇ ಇತ್ತು. ಅವರಲ್ಲೊಬ್ಬ ತುಂಟ ಶಿಷ್ಯನಿದ್ದ. ಅವನಂತೂ ಸದಾ ಏನಾದರೊಂದು ತುಂಟತನ, ಜಗಳ ಮಾಡುತ್ತ ಇತರ ಸಹಪಾಠಿಗಳ ಜೊತೆಗೆ ಹೊಂದಾಣಿಕೆಯೇ ಇಲ್ಲದಂತೆ ಇರುತ್ತಿದ್ದ. ಗುರುಗಳಿಗೆ ಈ ತುಂಟ ಶಿಷ್ಯನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಬೇಕೆಂಬ ಹಂಬಲ ಬಹಳವಾಗಿತ್ತು. ಆಶ್ರಮದ ಬಳಿ ಸದಾ ಇರುವೆಗಳ ಸಾಲು ಸಾಗುತ್ತಿತ್ತು. ಶಿಷ್ಯಂದಿರಿಗೆ ಇರುವೆಗಳ ಒಡನಾಟ ಸಾಮಾನ್ಯವಾಗಿತ್ತು. ತುಂಟ ಶಿಷ್ಯ ಇರುವೆಗಳ ಸಾಲನ್ನು ಆಗಾಗ ಚದುರಿಸುತ್ತಿದ್ದ. ಆತ ಚದುರಿಸಿದ ಕೆಲವು ಕ್ಷಣದಲ್ಲೇ ಇರುವೆಗಳು ಮೊದಲಿನಂತೆಯೇ ಸರದಿಯ ಸಾಲಿನಲ್ಲಿ ಸಾಗುತ್ತಿದ್ದವು. ಆತ ಪದೇಪದೆ ಚದುರಿಸಿದರೂ ವ್ಯರ್ಥ ಪ್ರಯತ್ನವಾಗುತ್ತಿತ್ತು. ಗುರುಗಳು ಶಿಷ್ಯನ ಈ ತುಂಟಾಟವನ್ನು ಗಮನಿಸುತ್ತಲೇ ಇದ್ದರು. ಒಂದು ದಿನ ಗುರುಗಳು ಅವನಿಗೆ ಈ ಬಗ್ಗೆ ಕೇಳಿದರು. ಶಿಷ್ಯನು ತಾನು ಎಷ್ಟು ಬಾರಿ ಚದುರಿಸಿದರೂ ಇರುವೆಗಳು ಮೊದಲಿನಂತೆಯೇ ಸರದಿಯ ಸಾಲಿನಲ್ಲಿ ಚಲಿಸುವ ಬಗ್ಗೆ ಕುತೂಹಲ ವ್ಯಕ್ತಪಡಿಸಿದ. ಆಗ ಗುರುಗಳು- ‘ಎಲ್ಲೇ ಹೋದರೂ ಶಿಸ್ತಿನ ಸಿಪಾಯಿಗಳಂತೆ ಸರದಿಯ ಸಾಲಿನಲ್ಲಿ ಇರುವೆಗಳು ಸಾಗುತ್ತವೆ. ಇನ್ನು ಯಾವುದಾದರೂ ಒಂದು ಇರುವೆ ಸತ್ತರೂ ಅದನ್ನು ನೋಡಲು ಅದರ ಕುಟುಂಬದ ಇರುವೆಗಳೆಲ್ಲವೂ ಬರುತ್ತವೆ! ಸತ್ತಿರುವ ಇರುವೆಯನ್ನು ತಾವೇ ಹೊತ್ತುಕೊಂಡು ಹೋಗುತ್ತವೆ. ತಿನ್ನಬಹುದಾದ ಯಾವ ವಸ್ತುವನ್ನು ಕಂಡರೂ ಇತರ ಇರುವೆಗಳಿಗೆ ಸಂದೇಶ ರವಾನಿಸಿ ಹಂಚಿಕೊಂಡು ತಿನ್ನುತ್ತವೆ. ದಣಿವರಿಯದೆ ಸದಾ ಕಾರ್ಯನಿರತವಾಗಿರುತ್ತವೆ. ತಮಗಿಂತ ದೊಡ್ಡದಾದ ವಸ್ತುಗಳನ್ನು ಕೂಡ ಕಠಿಣ ಶ್ರಮ ಮತ್ತು ದೃಢತೆಯಿಂದ ಒಯ್ಯುತ್ತವೆ. ತಮ್ಮ ಪಾಲಿನ ಕರ್ತವ್ಯವನ್ನು ಪೂರ್ಣಗೊಳಿಸಲು ಎಲ್ಲಾ ಇರುವೆಗಳು ಒಗ್ಗಟ್ಟಿನಿಂದ ದುಡಿಯುತ್ತವೆ’ ಎಂದು ಇರುವೆಗಳ ಜೀವನಕ್ರಮ ತಿಳಿಸಿದರು. ಶಿಷ್ಯನಿಗೆ ಶಿಸ್ತು, ಸಹಬಾಳ್ವೆ, ಕಠಿಣ ಶ್ರಮದ ಅರಿವು ಮೂಡತೊಡಗಿತು.

ನಾವು ಸಹ ಇರುವೆಗಳಿಂದ ಪಾಠ ಕಲಿಯಬೇಕಿದೆ. ನಮ್ಮ ಪ್ರತಿಯೊಂದು ಕೆಲಸದಲ್ಲಿಯೂ ಶಿಸ್ತು ಎದ್ದು ಕಾಣುವಂತಿರಬೇಕು. ಪರಸ್ಪರ ಹಂಚಿ ತಿನ್ನುವ, ನಾವು-ನಮ್ಮವರು ಎಂಬ ಆತ್ಮೀಯತೆಯ ಭಾವ ನಮ್ಮಲ್ಲಿ ಸದಾ ಮೊಳೆತಿರಬೇಕು. ಅವಿರತ ಶ್ರಮದ ದುಡಿಮೆ ನಮ್ಮದಾಗಿರಬೇಕು.

ಒಂದೇ ಗಗನವ ಕಾಣುತೊಂದೆ/ ನೆಲವನು ತುಳಿಯು|

ತೊಂದೆ ಧಾನ್ಯವನುಣ್ಣುತೊಂದೆ/ ನೀರ್ಗಡಿದು||

ಒಂದೇ ಗಾಳಿಯನುಸಿರ್ವ/ ನರಜಾತಿಯೊಳಗೆಂತು |

ಬಂದುದೀ ವೈಷಮ್ಯ- ಮಂಕುತಿಮ್ಮ

ಎಂಬ ಡಿವಿಜಿಯವರ ಕಗ್ಗದ ಸಾಲುಗಳಂತೆ, ಒಂದೇ ಆಕಾಶವ ಕಾಣುತ, ಒಂದೇ ನೆಲವನ್ನು ತುಳಿಯುತ, ಒಂದೇ ಧಾನ್ಯವನ್ನು ಉಣ್ಣುತ, ಒಂದೇ ಗಾಳಿಯನು ಉಸಿರಾಡುವ ಮಾನವ ಜಾತಿಯ ಒಳಗೆ ಈ ದ್ವೇಷ ಹೇಗೆ ಬಂತು ಎಂಬುದನ್ನು ನಾವೆಲ್ಲರೂ ವಿಚಾರ ಮಂಥನ ಮಾಡಬೇಕಿದೆ. ದ್ವೇಷ ಅಸೂಯೆ ಮರೆತು ಒಗ್ಗಟ್ಟಿನಿಂದ ಬಾಳೋಣ.

(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)