‘ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಅವರ ಕರೆ ಎಂದೆಂದಿಗೂ ಯುವಜನತೆಯ ಸಾಧನೆಗೆ ಸ್ಪೂರ್ತಿ ಸೆಲೆಯಾಗಿದೆ. ಈ ಕಾರಣದಿಂದಲೇ ಅವರ ಜನ್ಮದಿನವನ್ನು ನಾವು ರಾಷ್ಟ್ರೀಯ ಯುವ ದಿನವೆಂದು ಆಚರಿಸುತ್ತೇವೆ. ಯುವಶಕ್ತಿಯ ಮೇಲೆ ಅವರಿಗಿದ್ದ ಅದಮ್ಯ ವಿಶ್ವಾಸ, ಯುವ ಜನತೆಗೆ ಅವರು ನೀಡಿದ ಮಾರ್ಗದರ್ಶನ ಸದಾಕಾಲ ಹಸಿರಾಗಿರುವಂಥದ್ದು.
ಹಿಂದೂ ಧರ್ಮವನ್ನು ಪರಿಚಯಿಸಲು ವಿಶ್ವ ಪರ್ಯಟನೆ ಮಾಡಿದ ಅವರು ದೇಶದೊಳಗೆ ಜನರ ಹಸಿವು, ಬಡತನ, ದಾರಿದ್ರ್ಯವನ್ನು ಕಂಡು ಮರುಗಿದರು. ಆತ್ಮವಿಶ್ವಾಸದ ಕೊರತೆಯೂ ಇದಕ್ಕೆ ಕಾರಣವೆಂಬುದನ್ನು ಅರಿತರು. ಜನರ ಅಂತಃಸತ್ವವನ್ನು ಬಡಿದೆಬ್ಬಿಸುವುದಕ್ಕಾಗಿ ದೇಶಾದ್ಯಂತ ಸಂಚರಿಸಿದರು. ಮಾನವೀಯತೆ, ಅಧ್ಯಾತ್ಮದ ಸಂಗಮವಾದ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿ ಸಮಾಜದ ಉನ್ನತಿಗೆ ಶ್ರಮಿಸಿದರು.
ಸ್ವಾಮಿ ವಿವೇಕಾನಂದರು ಅತಿ ಕಡಿಮೆ ಜೀವಿತಾವಧಿಯಲ್ಲಿ ಪ್ರಖರ ಚಿಂತನೆ, ವಿಚಾರಧಾರೆಯ ಬೆಳಕನ್ನು ವಿಶ್ವವ್ಯಾಪಿಯಾಗಿ ಪಸರಿಸಿದರು. ಸಾಧನೆಯ ಶಿಖರವೇರ ಬಯಸುವವರಿಗೆ ಅವರು ಸದಾ ಮಾರ್ಗದರ್ಶನ ನೀಡುವ ಧ್ರುವತಾರೆ.
ಭಾರತೀಯ ಸಮಾಜದ ಜಾತಿ ವ್ಯವಸ್ಥೆ, ಬಡತನ, ಶಿಕ್ಷಣದ ಕೊರತೆಯ ಕುರಿತು ಅತೀವ ಕಳಕಳಿ ಹೊಂದಿದ್ದ ಸ್ವಾಮಿ ವಿವೇಕಾನಂದರು, ವ್ಯಕ್ತಿತ್ವ ನಿರ್ಮಾಣ ಮಾಡುವಂತಹ, ಮನೋಬಲ ವೃದ್ಧಿಸುವ, ಬುದ್ಧಿ ವೈಶಾಲ್ಯವನ್ನು ಸಾಧಿಸುವ ಹಾಗೂ ವ್ಯಕ್ತಿಯೊಬ್ಬ ತನ್ನ ಕಾಲಮೇಲೆ ನಿಲ್ಲಲು ಸಾಧ್ಯವಾಗುವಂತಹ ಶಿಕ್ಷಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ, ವಿವೇಕಾನಂದರ ಈ ಆಶಯದಿಂದಲೇ ಪ್ರೇರಿತವಾಗಿದೆ. ಜೊತೆಗೆ ಎಲ್ಲರಿಗೂ ಸಮಾನ ಅವಕಾಶ ಒದಗಿಸಲು ಈ ನೀತಿ ಸಹಕಾರಿಯಾಗಲಿದೆ.
ಯುವಶಕ್ತಿಯ ಮೇಲೆ ಅಪಾರ ವಿಶ್ವಾಸ ಹೊಂದಿದ್ದ ಸ್ವಾಮಿ ವಿವೇಕಾನಂದರು, ಮಾನವೀಯತೆಯಿಂದ ಸಮಾಜದ ಉನ್ನತಿಗಾಗಿ ತಮ್ಮನ್ನು ಮುಡಿಪಾಗಿಡುವಂತೆ ಕರೆ ನೀಡಿದ್ದರು.
ಯುವಜನರು, ಮಹಿಳೆಯರ ಸಬಲೀಕರಣ ಕುರಿತ ಅವರ ದೃಷ್ಟಿಕೋನ, ಆಶಯ ಸಾಕಾರಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಏಳೂವರೆ ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ನಮ್ಮ ಸರ್ಕಾರ ಯುವಜನರ ವಿಕಾಸಕ್ಕೆ, ಸಬಲೀಕರಣಕ್ಕೆ ಪೂರಕ ವಾತಾವರಣ ನಿರ್ವಣಕ್ಕೆ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಯುವ ನೀತಿ ರಚನೆ: ಕರ್ನಾಟಕ ರಾಜ್ಯ ಯುವ ನೀತಿಯನ್ನು ರೂಪಿಸಲು ಡಾ. ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದ್ದು, ಅದು ಕಾರ್ಯಪ್ರವೃತ್ತವಾಗಿದೆ. ಯುವ ನೀತಿ ರಚನೆಗೆ ಪೂರಕ ಮಾಹಿತಿ, ಸಲಹೆಗಳನ್ನು ಸಂಗ್ರಹಿಸಲು ಸಮೀಕ್ಷೆ ನಡೆಸುತ್ತಿದೆ. ನಾಗರಿಕ ಬಂಧುಗಳು ವಸ್ತುಸ್ಥಿತಿ ಆಧಾರಿತ ಮಾಹಿತಿ, ಸಲಹೆಗಳನ್ನು ನೀಡುವ ಮೂಲಕ ಈ ನೀತಿಯ ಕಾರ್ಯಾನುಷ್ಠಾನ ಯಶಸ್ವಿಗೊಳಿಸಬೇಕಾಗಿದೆ.
ನಮ್ಮ ಒಟ್ಟಾರೆ ಆಂತರಿಕ ಉತ್ಪನ್ನ ಬೆಳವಣಿಗೆಗೆ (ಜಿಡಿಪಿ) ಕೇವಲ ಶೇ. 30 ರಷ್ಟು ಜನರ ಕೊಡುಗೆಯೇ ಹೆಚ್ಚಾಗಿರುತ್ತದೆ. ಆದರೆ ಆರ್ಥಿಕತೆಯಲ್ಲಿ ಶೇ. ನೂರರಷ್ಟು ಜನರು ತಮ್ಮ ಕೊಡುಗೆ ನೀಡಿದಾಗ, ಸರ್ಕಾರ ಮಾತ್ರವಲ್ಲ ಜನರೂ ಶ್ರೀಮಂತರಾಗುತ್ತಾರೆ. ಈ ನಿಟ್ಟಿನಲ್ಲಿ ಯುವಕರು, ಮಹಿಳೆಯರು ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಘೊಷಿಸಿರುವ ‘ಅಮೃತ’ ಯೋಜನೆಗಳು ವಿವಿಧ ವಲಯಗಳನ್ನು ಕೇಂದ್ರೀಕರಿಸಿದ್ದರೂ, ಅದರ ಅಂತಿಮ ಗುರಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭ್ಯುದಯ. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಮೂಲಕ ಅಂತ್ಯೋದಯದ ಆಶಯ ನಮ್ಮದು.
ಮಹಿಳಾ ಸಬಲೀಕರಣ: ಸ್ವಾಮಿ ವಿವೇಕಾನಂದರು ಮಹಿಳೆಯರ ಸಬಲೀಕರಣದ ಕುರಿತು ಹೇಳಿದ ಮಾತುಗಳು ನಮ್ಮೆಲ್ಲರ ಕಣ್ಣು ತೆರೆಸುವಂಥದ್ದು. ಒಮ್ಮೆ, ಸಮಾಜ ಸುಧಾರಕರೊಬ್ಬರು, ‘ಮಹಿಳಾ ಸುಧಾರಣೆಯಲ್ಲಿ ನನಗೆ ಆಸಕ್ತಿಯಿದ್ದು, ಈ ನಿಟ್ಟಿನಲ್ಲಿ ಏನು ಮಾಡಲಿ? ಯಾವ ರೀತಿ ಬೆಂಬಲಿಸಲಿ?’ ಎಂದು ಕೇಳಿದರು. ಅದಕ್ಕೆ ವಿವೇಕಾನಂದರು ಉತ್ತರಿಸುತ್ತಾರೆ-‘ ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ. ಅವರ ಸುಧಾರಣೆಗಾಗಿ ನೀವೇನೂ ಮಾಡಬೇಕಾಗಿಲ್ಲ. ಅವರ ಬೆಳವಣಿಗೆಯ ದಾರಿಗೆ ನೀವು ಅಡ್ಡ ಬರದಿದ್ದರೆ ಸುಧಾರಣೆ ತಾನಾಗಿಯೇ ಆಗುತ್ತದೆ. ಇಷ್ಟೇ ಆಗಬೇಕಾಗಿರುವುದು. ಮಹಿಳೆಯರ ಸುಧಾರಣೆಗಾಗಿ ಪುರುಷರೇನೂ ಮಾಡಬೇಕಾಗಿಲ್ಲ. ನೀವು ಹಾಕಿರುವ ಬೇಲಿಗಳನ್ನು ನಿವಾರಿಸಿ. ಮಹಿಳೆ ಅಗತ್ಯತೆಗೆ ತಕ್ಕಂತೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತಾಳೆ.’
ಇಂತಹ ಮುಕ್ತ ವಾತಾವರಣ ಕಲ್ಪಿಸಲು ಆರ್ಥಿಕ ಸ್ವಾವಲಂಬನೆ ಅತಿ ಮುಖ್ಯ. ಇದಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ನಮ್ಮ ಕನಸುಗಳನ್ನೇ ಜೀವಿಸಲು ಮಾರ್ಗದರ್ಶನ ನೀಡಿದ ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು ಜನರ ಆತ್ಮಸ್ಥೈರ್ಯ, ಅಂತಃಸತ್ವ, ಸ್ವಾಭಿಮಾನವನ್ನು ಬಡಿದೆಬ್ಬಿಸುವಂಥದ್ದು. ‘ಸಾಧಕನಿಗೆ ಸಾವು ಅಂತ್ಯವಲ್ಲ’ಎಂದ ಅವರ ಮಾತಿಗೆ ಅವರೇ ಅತ್ಯುತ್ತಮ ನಿದರ್ಶನ.