ರಾಹುಲ್ ಗಾಂಧಿ ಬಯಸಿದ್ದರೆ ಮತ್ತು ಸೂಕ್ತ ವ್ಯಕ್ತಿತ್ವ ಬೆಳೆಸಿಕೊಂಡು ಪ್ರದರ್ಶಿಸಿದ್ದರೆ 2009ರಲ್ಲಿ ತಮ್ಮ 39ನೇ ವಯಸ್ಸಿನಲ್ಲೇ ಪ್ರಧಾನಮಂತ್ರಿ ಅಗಬಹುದಿತ್ತು. ನಂತರದ ಐದು ವರ್ಷಗಳಲ್ಲಿ ಅವರಲ್ಲಿ ಆ ಸ್ಥಾನದ ಬಯಕೆ ಜಾಗೃತಗೊಂಡಂತೆ ಕಂಡರೂ ವ್ಯಕ್ತಿತ್ವದಲ್ಲಿ ಅಗತ್ಯ ಬೆಳವಣಿಗೆ ಇರಲಿಲ್ಲ. ಇದನ್ನು ಸಾಮಾನ್ಯ ಭಾರತೀಯರಿಗಿಂತಲೂ ಅಮೆರಿಕಾದ ಒಬಾಮಾ ಆಡಳಿತ ಗುರುತಿಸಿದಂತೆ ಕಾಣುತ್ತದೆ. ಅದರ ಪ್ರಕಾರ ಭಾರತ-ಅಮೆರಿಕಾ ಸೌಹಾರ್ದಯುತ ಸಂಬಂಧಗಳಿಗೆ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಪ್ರಧಾನಿಯಾಗಿಯೇ ಮುಂದುವರೆಯುವುದು ಅಗತ್ಯವಾಗಿತ್ತು ಮತ್ತು ಆ ದಿನಗಳಲ್ಲಿ ಭಾರತದ ಆಂತರಿಕ ರಾಜಕಾರಣದ ಮೇಲೆ ಅಮೆರಿಕಾದ ಪ್ರಭಾವವಿತ್ತು ಎಂಬ ಮಾತುಗಳು ಆಗಿನಿಂದಲೂ ಕೇಳಿಬರುತ್ತಿವೆ.
ಚೀನಾದೊಂದಿಗಿನ ರಾಹುಲ್ ಗಾಂಧಿಯವರ ಹೊಕ್ಕುಬಳಕೆ ಅದಕ್ಕೆ ಕಾರಣ ವಾಗಿರಬಹುದು. ಇದಾವುದನ್ನೂ ಅಧಿಕೃತ ದಾಖಲೆಗಳ ಮೂಲಕ ಧೃಡೀಕರಿಸಲಾಗುವುದಿಲ್ಲ. ಆದರೆ ಅಂತಹ ಮಾತುಗಳೂ ಕೇಳಿಬರುತ್ತಿದ್ದವು ಎನ್ನುವುದನ್ನು ಭಾರತದ ರಾಜಕಾರಣದ ವಿಶ್ಲೇಷಣೆಯ ವೇಳೆ ಗಮನಿಸುವುದು ಅನುಕೂಲಕರ. ಹಾಗೆಯೇ ರಾಯಭಾರಿ ಡೇವಿಡ್ ಮಲ್ಫರ್ಡ್ ಮತ್ತು ಖುದ್ದು ಅಧ್ಯಕ್ಷ ಒಬಾಮಾ, ರಾಹುಲ್ ಬಗ್ಗೆ ಧನಾತ್ಮಕ ಅಭಿಪ್ರಾಯ ಹೊಂದಿರಲಿಲ್ಲ ಎನ್ನುವುದನ್ನಂತೂ ಗಮನಿಸಬೇಕು.
ಅತ್ತ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳೂ ಸೇರಿದಂತೆ 12 ಬಿಜೆಪಿ-ವಿರೋಧಿ ಪಕ್ಷಗಳ 65 ಸಂಸತ್ ಸದಸ್ಯರು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ವೀಸಾ ನೀಡಬಾರದೆಂದು ಬರೆದ ಪತ್ರಕ್ಕೆ ಒಬಾಮಾ ಆಡಳಿತ ನೀಡಿದ ಬೆಲೆಯಿಂದಾಗಿ ಆ ಬಿಜೆಪಿ ನಾಯಕ ಅಮೆರಿಕಾಗೆ ಪ್ರಯಾಣಿಸುವುದು ಅಸಾಧ್ಯವಾಗಿತ್ತು. ಆದರೆ ಮೋದಿಯವರ ಕುರಿತಾಗಿ ಭಾರತದ ರಾಜಕಾರಣಿಗಳು ಮಾಡಿದ್ದು ಅಪಪ್ರಚಾರವಷ್ಟೇ ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ ರಾಹುಲ್ ನೇತೃತ್ವದ ಕಾಂಗ್ರೆಸ್ಗಿಂತಲೂ ಮೋದಿ ನೇತೃತ್ವದ ಬಿಜೆಪಿಯತ್ತ ಭಾರತೀಯ ಮತದಾರರ ಒಲವು ಗಮನಾರ್ಹ ಪ್ರಮಾಣದಲ್ಲಿರುತ್ತದೆ ಎಂಬುದನ್ನು ಒಬಾಮಾ ಆಡಳಿತ ಆ ವರ್ಷದ ಆರಂಭದ ಹೊತ್ತಿಗೇ ಗುರುತಿಸಿದಂತೆ ಹಾಗೂ ಅದಕ್ಕನುಗುಣವಾಗಿ ಭಾರತದ ಕುರಿತಾದ ತನ್ನ ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಆರಂಭಿಸಿದಂತೆ ಕಾಣುತ್ತದೆ.
ರಾಯಭಾರಿ ನ್ಯಾನ್ಸಿ ಪೊವೆಲ್ ಫೆಬ್ರವರಿ 2014ರಲ್ಲಿ ಗಾಂಧಿನಗರಕ್ಕೇ ಹೋಗಿ ಮೋದಿಯವರನ್ನು ಭೇಟಿಯಾದದ್ದು ಗಾಳಿ ದಿಕ್ಕು ಬದಲಿಸಿತು ಎನ್ನುವುದರ ಸ್ಪಷ್ಟ ಸೂಚನೆ. ಅದರರ್ಥ ರಾಹುಲ್ ಅವರನ್ನು ಭಾರತದ ಪ್ರಧಾನಮಂತ್ರಿಯಾಗಿ ಗುರುತಿಸಿ ವ್ಯವಹರಿಸುವ ಸನ್ನಿವೇಶ ತನಗೆದುರಾಗದು ಎಂದೂ ಅಮೆರಿಕಾ ಗುರುತಿಸಿತು. ಅದನ್ನು ನಾಲ್ಕು ತಿಂಗಳಲ್ಲಿ ಭಾರತೀಯ ಮತದಾರ ನಿಜವಾಗಿಸಿದ. ಅದರೊಂದಿಗೆ ರಾಹುಲ್ರನ್ನು ಪ್ರಧಾನಿಯಾಗಿ ನೋಡಲು ತಾವು ತಯಾರಿಲ್ಲ ಎಂದು ಭಾರತೀಯ ಮತದಾರರು ತೋರಿಸಿಕೊಳ್ಳುವುದರ ಸರಣಿ ಆರಂಭವಾಯಿತು. ಕಾಂಗ್ರೆಸ್ನ ಪ್ರಧಾನಿ ಅಭ್ಯರ್ಥಿಯಾದ ಮೇಲಾದರೂ ಆ ಸ್ಥಾನಕ್ಕೆ ಯೋಗ್ಯವೆನಿಸುವ ಮನೋಭಾವ ಹಾಗೂ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ತಾವು ತಯಾರಾಗಿಯೇ ಇಲ್ಲ ಎನ್ನುವುದನ್ನು ನೆಹರೂ-ಗಾಂಧಿ ಕುಟುಂಬದ ಈ ಕುಡಿ ತನ್ನ ನಡೆ ಮತ್ತು ನುಡಿಯಿಂದ ಮತ್ತೆಮತ್ತೆ ತೋರಿಸಿಕೊಳ್ಳುತ್ತಿರುವುದರಿಂದಾಗಿ ಕಾಂಗ್ರೆಸ್ ಮೂರು ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿದೆ.
ಇದು ಸಹಜವಾಗಿಯೇ ಹೊಸ ಮುಖದ ಶೋಧದ ಅಗತ್ಯವನ್ನು ಪಕ್ಷದೊಳಗೆ ಸಣ್ಣಗೆ ಮೂಡಿಸಿದೆ. ವಿವಿಧ ಕಾರಣಗಳಿಂದಾಗಿ ಹೊಸ ಮುಖವನ್ನು ನೆಹರೂ-ಗಾಂಧಿ ಕುಟುಂಬದಲ್ಲೇ ಹುಡುಕಬೇಕಾದ ಕಟ್ಟುಪಾಡುಗಳಿಗೆ ಸಿಲುಕಿದಂತಿರುವ ಪಕ್ಷದ ಹಿರಿಯ ನಾಯಕವರ್ಗ ರಾಹುಲ್ಗೆ ಬದಲಾಗಿ ಪ್ರಿಯಾಂಕಾರತ್ತ ಆಗಾಗ ಹೊರಳುವುದುಂಟು. ಆದರೆ ಅಂತಹ ಪ್ರಯತ್ನಗಳಿಗೆ ಸೋನಿಯಾ ಅವರ ಬೆಂಬಲವಿಲ್ಲ. ಮಧ್ಯಪ್ರದೇಶ ಹಾಗೂ ಗುಜರಾತ್ನ ಕಾಂಗ್ರೆಸ್ ಮುಂದಾಳುಗಳು ಪ್ರಿಯಾಂಕಾರನ್ನು ‘ಸುರಕ್ಷಿತ’ವಾಗಿ ಸಂಸತ್ಗೆ ಕಳುಹಿಸುವ ಪ್ರಸ್ತಾಪಗಳನ್ನು ಮುಂದಿಟ್ಟಾಗ ಸೋನಿಯಾ ತಿರಸ್ಕರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆದರೆ ನಂತರದ ವರ್ಷಗಳಲ್ಲಿ ಅದು ಬದಲಾಗಿ 2024ರಲ್ಲಿ ರಾಹುಲ್ ತೆರವು ಮಾಡಿದ ವಯನಾಡ್ ಕ್ಷೇತ್ರ ಪ್ರಿಯಾಂಕಾರ ಕೈಗೆ ಬಿದ್ದದ್ದೊಂದು ಗಮನಾರ್ಹ ಬೆಳವಣಿಗೆ. ನಂತರದ ದಿನಗಳಲ್ಲಿ ತಮ್ಮ ನಡೆನುಡಿಯಿಂದಾಗಿ ಪ್ರಿಯಾಂಕಾ ಪಕ್ಷದೊಳಗೆ ವರ್ಚಸ್ಸು ವೃದ್ಧಿಸಿಕೊಳ್ಳುತ್ತಿದ್ದಾರೆ.
ವಿವಿಧ ಕಾರಣಗಳನ್ನೊಡ್ಡಿ ಪ್ರಿಯಾಂಕಾರೇ ನೆಹರೂ-ಗಾಂಧಿ ಕುಟುಂಬದ ಸೂಕ್ತ ರಾಜಕೀಯ ಉತ್ತರಾಧಿಕಾರಿ ಎಂಬ ಭಾವನೆಯೂ ಪಕ್ಷದಲ್ಲಿ ಕಾಣಿಸಿಕೊಳ್ಳತೊಡಗಿದೆ. ಪಕ್ಷದೊಳಗೇ ಅಣ್ಣ ತಂಗಿಯರ ಎರಡು ಗುಂಪುಗಳು ಸೃಷ್ಟಿಯಾಗಿವೆ ಎಂದು ಸುದ್ದಿ! ಇದರರ್ಥ ಭಾರತದ ಪ್ರಧಾನಿ ಸ್ಥಾನಕ್ಕಾಗಿ ಸೆಣಸುತ್ತಿದ್ದ ರಾಹುಲ್ ಈಗ ಪಕ್ಷದ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕಾಗಿ ಸೆಣಸಬೇಕಾದ ಸ್ಥಿತಿ ನಿರ್ವಣವಾಗುತ್ತಿದೆ. ಪಕ್ಷದೊಳಗೇ ಅವರ ಈ ಸ್ಥಿತಿ 2029ರ ಲೋಕಸಭಾ ಚುನಾವಣೆ ಹೊತ್ತಿಗೆ ಇನ್ನಷ್ಟು ಸಂಕೀರ್ಣ ವಾಗಲಿದೆ. ಆಗ ಪ್ರಿಯಾಂಕಾರ ಮಗ ರಿಹಾನ್ ವಾದ್ರಾ ಸಹ ಪ್ರಮುಖ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ರಿಹಾನ್ ರಾಜೀವ್ ವಾದ್ರಾ ಎಂಬ ಹೆಸರು ಅಧಿಕೃತವಾಗಿ ರಿಹಾನ್ ರಾಜೀವ್ ಗಾಂಧಿ ಎಂದು ಬದಲಾಗಿದೆ ಎಂಬ ಸುದ್ದಿ ನಿಜವೇ ಆಗಿದ್ದರೆ ಲೋಕಸಭೆಗಾಗಿ ಸ್ಪರ್ಧಿಸಲು ಅಗತ್ಯವಾದ ವಯಸ್ಸನ್ನು ಈಗಾಗಲೇ ತಲುಪಿರುವ 26 ವರ್ಷದ ರಿಹಾನ್ರ ರಾಜಕೀಯ ಪ್ರವೇಶಕ್ಕೆ ರಂಗಸಜ್ಜಿಕೆ ಆರಂಭವಾಗಿದೆ ಎಂದರ್ಥ. ಹೀಗೇ ಸಾಗಿದರೆ ಪಕ್ಷದೊಳಗೇ ರಾಹುಲ್ ಪ್ರಾಮುಖ್ಯತೆ ಮುಂದಿನ ಚುನಾವಣೆಗಳ ಹೊತ್ತಿಗೆ ಅಥವಾ ಅದಾದ ಮರುಗಳಿಗೆಯೇ ಕುಸಿದುಹೋಗಬಹುದು.
ಪಕ್ಷದೊಳಗೇ ತಮ್ಮ ಸ್ಥಾನ ಅಲುಗಾಡತೊಡಗಿರು ವಾಗಲೇ ಇಂಡಿ ಒಕ್ಕೂಟದಲ್ಲೂ ರಾಹುಲ್ ಬೆಲೆ ಮತ್ತು ಬೆಂಬಲ ಕಳೆದುಕೊಳ್ಳುತ್ತಿದ್ದಾರೆ. ಅವರ ಪ್ರಮುಖ ಎದುರಾಳಿ ಮಮತಾ ಬ್ಯಾನರ್ಜಿ ಮೇನಲ್ಲಿ ಮೂಲೆಗುಂಪಾದದ್ದು ರಾಹುಲ್ಗೆ ವರದಾನವಾಗಿ ಕಂಡಿತೇನೋ ನಿಜ, ಆದರೆ ಅವರದ್ದೇ ಕೆಲವು ನಡೆಗಳು ಒಕ್ಕೂಟದೊಳಗೇ ಅವರ ವಿಶ್ವಾಸಾರ್ಹತೆಯನ್ನು ಕುಗ್ಗಿಸಿವೆ. ತಮಿಳುನಾಡಿನಲ್ಲಿ ಡಿಎಂಕೆಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ, ಫಲಿತಾಂಶ ಹೊರಬರು ತ್ತಿದ್ದಂತೇ ಮೈತ್ರಿಗೆ ತಿಲಾಂಜಲಿಯಿತ್ತು ಗೆದ್ದೆತ್ತಿನ ಬಾಲ ಹಿಡಿದು ಟಿವಿಕೆ ಜತೆಗೆ ಕೂಡಿಕೆ ಮಾಡಿಕೊಂಡು ಅಧಿಕಾರದಲ್ಲಿ ಪಾಲು ಪಡೆಯಹೊರಟ ರಾಹುಲ್ ನಡವಳಿಕೆ ಟೀಕೆಗೆ, ತಿರಸ್ಕಾರಕ್ಕೆ ಗುರಿಯಾಗಿ ಇಂಡಿ ಒಕ್ಕೂಟದಲ್ಲಿ ಭಾರಿ ಬಿರುಕನ್ನುಂಟುಮಾಡಿದೆ. ಪರಿಣಾಮವಾಗಿ ನವೆಂಬರ್ ಮೊದಲ ವಾರದಲ್ಲಿ ಜರುಗುವ ಸಾಧ್ಯತೆ ಯಿರುವ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಮಂಡಿತವಾಗ ಬಹುದೆಂದು ಹೇಳಲಾಗುತ್ತಿರುವ ಲೋಕಸಭಾ ಸ್ಥಾನಗಳ ಡಿಲಿಮಿಟೇಷನ್ ಮಸೂದೆ ಕುರಿತಂತೆ ಡಿಎಂಕೆ ನಿಲುವು ಮೋದಿ ಸರ್ಕಾರಕ್ಕೆ ಅನುಕೂಲ ಕರವಾಗುವ ಸೂಚನೆಗಳು ಕಾಣಬರುತ್ತಿವೆ.
ಇದನ್ನು ಕುರಿತಂತೆ ಪ್ರಧಾನಿ ಮೋದಿ ಕಾಂಗ್ರೆಸ್ ಹೊರತಾಗಿ ಎಲ್ಲ ಪ್ರಮುಖ ಪಕ್ಷಗಳ ಮುಖ್ಯಸ್ಥರೊಂದಿಗೆ ಮಾತಾಡಿ ಡಿಲಿಮಿಟೇಷನ್ ಮಸೂದೆ ಅನುಮೋದನೆಗೊಳ್ಳುವುದರಿಂದ ಲೋಕಸಭಾ ಸ್ಥಾನಗಳು ವೃದ್ಧಿಸಿ, ಅದು ರಾಜಕೀಯ ಪಕ್ಷಗಳಿಗೆ ಹೇಗೆ ಅನುಕೂಲಕರವಾಗ ಬಹುದೆಂದು ವಿಶದಪಡಿಸಿದ್ದಾರೆ. ಇದು ಡಿಎಂಕೆ ಜತೆಗೆ ಸಮಾಜವಾದಿ ಪಕ್ಷಕ್ಕೂ ಸಮ್ಮತವೆನಿಸಿರುವಂತೆ ಸುದ್ದಿಯಿದೆ. ಇದರರ್ಥ ಇಂಡಿ ಒಕ್ಕೂಟದಲ್ಲಿ ಕಾಂಗ್ರೆಸ್ ಏಕಾಂಗಿಯಾಗಬಹುದು. ಅಂದರೆ ಅಲ್ಲಿಯೂ ರಾಹುಲ್ರ ಪ್ರಾಮುಖ್ಯತೆಗೆ ಪೆಟ್ಟು. ಇದೆಲ್ಲದರ ನಡುವೆ ಮೋದಿ ಸರ್ಕಾರದ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿಯ ಸದ್ದು ಇತರೆಲ್ಲಾ ಸದ್ದುಗಳಿಗಿಂತಲೂ ದೊಡ್ಡದಾಗಿ ಕೇಳಿಸತೊಡಗಿದ್ದು ರಾಹುಲ್ಗೆ ಏಕಾಏಕಿ ಎದುರಾದ ಇನ್ನೊಂದು ಸವಾಲು. ಮೋದಿ ಸರ್ಕಾರದ ಮೇಲೆ ಸದಾ ಒಂದಲ್ಲಾ ಒಂದು ಆಪಾದನೆ ಹೊರಿಸುತ್ತಾ, ಅದರ ಎಕ್ಸ್ಪೈರಿ ಡೇಟ್ಗಳನ್ನೂ ಉತ್ಸಾಹದಿಂದ ಮತ್ತೆಮತ್ತೆ ಘೊಷಿಸುತ್ತಾ, ಅದೂ ಸಾಲದು ಎಂಬಂತೆ ಮೋದಿಯವರನ್ನೇ ನೇರವಾಗಿ ಲೇವಡಿ ಮಾಡುತ್ತಾ, ಮೋದಿಯವರಿಗೆ ದೇಶದ ಜನತೆಯಿಂದ ಮಹಾ ದುರ್ದೆಶೆ ಕಾದಿದೆ ಎಂದು ಅಡಿಗಡಿಗೆ ಭವಿಷ್ಯ ನುಡಿಯುತ್ತಾ, ದೇಶದೆಲ್ಲೆಡೆ ಕೆರೋಸೀನ್ ಚಿಮುಕಿಸಲಾಗಿದೆ.
ಇನ್ನು ಬೆಂಕಿಕಡ್ಡಿ ಗೀರುವುದೊಂದೇ ಬಾಕಿ ಎಂದು ನಮ್ಮನ್ನೆಲ್ಲಾ ಹೆದರಿಸುತ್ತಾ ದೇಶದಲ್ಲೇ ಇರುವ ಸಮಯದಲ್ಲೆಲ್ಲಾ ಸದ್ದುಮಾಡಿಕೊಂಡು ಓಡಾಡುತ್ತಿದ್ದ ರಾಹುಲ್ಗೆ ಸಿಜೆಪಿ ಏಕಾಏಕಿ ಅವತರಿಸಿ ಡೆಸಿಬಲ್ ಮತ್ತು ಮರ್ಯಾದೆಯ ಮಿತಿಯನ್ನೆಲ್ಲಾ ಮೀರಿ ಗಲಾಟೆ ಮಾಡತೊಡಗಿದ್ದು ಆಘಾತವೇ ಸರಿ. ಜೂನ್ನಲ್ಲೇನೋ ಸಿಜೆಪಿಗೆ ಆಂದೋಲನಕ್ಕಾಗಿ ಒಳ್ಳೆಯ ವಿಷಯವೇ ಸಿಕ್ಕಿತ್ತು. ಜತೆಗೆ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆಯವರನ್ನು ವಿಮಾನ ನಿಲ್ದಾಣದಲ್ಲೇ ಎದುರುಗೊಂಡು ಡೆಲ್ಲಿ ಪೊಲೀಸ್ ಜಂತರ್ ಮಂತರ್ನಲ್ಲಿ ಪ್ರದರ್ಶನಕ್ಕಾಗಿ ಅನುಮತಿ ನೀಡಿದ್ದು, ಹಗಲು ರಾತ್ರಿಯೆನ್ನದೇ ಆಂದೋಲನ ತಿಂಗಳವರೆಗೆ ಮುಂದುವರೆಯಲು ಅವಕಾಶ ಕೊಟ್ಟಿದ್ದು ಕೆಲವು ಪ್ರಶ್ನೆಗಳಿಗೆ ದಾರಿಮಾಡಿದರೂ, ಆಂದೋಲನದ ಹಿಂದಿನ ಕೈಗಳು ಯಾವುವು, ಅವುಗಳ ಶಕ್ತಿ ಸಾಮರ್ಥ್ಯವೇನು ಎಂದು ಪತ್ತೆಹಚ್ಚಲು ಆ ಮೃದುನೀತಿಯ ಅಗತ್ಯ ಸರ್ಕಾರಕ್ಕಿತ್ತು ಎಂದೆನಿಸುತ್ತದೆ. ಆ ಅರ್ಥದಲ್ಲಿ ಸರ್ಕಾರದ ಮೃದುನೀತಿ ಸಿಜೆಪಿಗೆ ಒಡ್ಡಿದ ಬೋನು. ಅದು ಸಿಜೆಪಿ ನಾಯಕರಿಗೆ ಅರ್ಥವಾಗಲೇ ಇಲ್ಲ. ಸಿಇಟಿ ಮರುಪರೀಕ್ಷೆಯಾಗಿ, ಫಲಿತಾಂಶವೂ ಬಂದು, ಆಯ್ಕೆಯಾದ ವಿದ್ಯಾರ್ಥಿಗಳು ತಂತಮ್ಮ ವ್ಯಾಸಂಗದತ್ತ ಹೊರಳಿದರೂ ಆಂದೋಲನ ಮುಂದುವರೆದದ್ದು, ಅದರಲ್ಲಿ ಸಮಾಜಘಾತಕ ಶಕ್ತಿಗಳು ಸೇರಲು ಅವಕಾಶವಾದದ್ದು, ಅಂತಿಮವಾಗಿ ಅದು ಜುಲೈ 20ರಂದು ಸಂಸತ್ ಮುತ್ತಿಗೆಯ ಪ್ರಯತ್ನವಾಗಿ ಬೆಳೆದದ್ದು ಮೃದುನೀತಿಯ ಮುಂದುವರಿಕೆಯ ಅಗತ್ಯವಿಲ್ಲ ಹಾಗೂ ಅದಕ್ಕೆ ಈ ಜನ ಅರ್ಹರೂ ಅಲ್ಲ ಎನ್ನುವುದನ್ನು ಸರ್ಕಾರಕ್ಕೆ ಮನಗಾಣಿಸಿತು.
ಅಪರಾಧ ಹಿನ್ನೆಲೆಯ ಸಹಸ್ರಾರು ವ್ಯಕ್ತಿಗಳ ನ್ನೊಳಗೊಂಡ ದೊಡ್ಡ ದೊಂದು ಗುಂಪು ಚಾಲನೆಯಲ್ಲಿರುವ ಸಂಸತ್ನತ್ತ ಮುನ್ನುಗ್ಗಿ ದರೆ ಅದರಿಂದಾಗಬಹುದಾದ ಅನಾಹುತ 27 ವರ್ಷಗಳ ಹಿಂದೆ ಪಾಕಿಸ್ತಾನ-ಪ್ರಾಯೋಜಿತ ಭಯೋತ್ಪಾದಕರು ಸಂಸತ್ ಮೇಲೆ ದಾಳಿಯೆಸಗಲು ನಡೆಸಿದ ಪ್ರಯತ್ನ ಮಾಡಬಹುದಾಗಿದ್ದಂತಹ ಅನಾಹುತವೇ, ಅಥವಾ ಅದಕ್ಕಿಂತಲೂ ಹೆಚ್ಚು. ಏಳೆಂಟು ಜನ ಭಯೋತ್ಪಾದಕರನ್ನು ನಿಗ್ರಹಿಸಿದಂತೆ ಸಾವಿರಾರು ಉದ್ರಿಕ್ತ ಜನರ ಗುಂಪನ್ನು ನಿಗ್ರಹಿಸುವುದು ಸಾಧ್ಯವಾಗದು. ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಅದನ್ನು ನೋಡಿಯೇ ಇದ್ದೇವೆ, ಅಲ್ಬೇನಿಯಾದಲ್ಲಿ ಈಗಷ್ಟೇ ನೋಡಿದ್ದೇವೆ.ಇಷ್ಟಾಗಿಯೂ ನವದೆಹಲಿಯಲ್ಲಿ ಬ್ರಿಕ್ಸ್ ಸಮ್ಮೇಳನ ಆಯೋಜನೆಯಾಗುತ್ತಿದ್ದುದರಿಂದ ಸರ್ಕಾರ ಕೆಲವು ಮಿತಿಗಳಲ್ಲೇ ಕೆಲಸ ಮಾಡಬೇಕಾದ ಸನ್ನಿವೇಶ ಉಂಟಾಗಿತ್ತು. ಆರು ವರ್ಷಗಳ ಹಿಂದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವದೆಹಲಿಗೆ ಭೇಟಿಯಿತ್ತ ಸಂದರ್ಭದಲ್ಲಿ ಘಟಿಸಿದ ಕೋಮುಗಲಭೆ ಮತ್ತು ಹಿಂಸಾಚಾರವನ್ನು ಮರೆಯುವ ಹಾಗಿಲ್ಲ.
ಈ ಹಿನ್ನೆಲೆಯಲ್ಲಿ ಸಿಜೆಪಿ ಅ. 10ರಂದು ಮತ್ತೆ ಆದೋಲನಕ್ಕೆ ಮುಂದಾದಾಗ ಸರ್ಕಾರ ಮತ್ತು ಡೆಲ್ಲಿ ಪೊಲೀಸ್ ಅದಕ್ಕೆ ತಯಾರಾಗಿಯೇ ಇದ್ದವು, ಅಗತ್ಯ ಗುಪ್ತಚರ ಮಾಹಿತಿಗಳೂ ಇದ್ದವು, ಉತ್ಸವಗಳ ದಿನಗಳಲ್ಲಿ ದೆಹಲಿಯ ವ್ಯಾಪಾರ-ವಹಿವಾಟನ್ನು ಸ್ತಬ್ಧಗೊಳಿಸಿ ಪ್ರಸಕ್ತ ಹಣಕಾಸು ವರ್ಷದ ಮೊದಲನೆಯ ಕಾಲುಭಾಗದಲ್ಲಿ ದೇಶ ಸಾಧಿಸಿದ ಗಮನಾರ್ಹ 7.8% ಅಭಿವೃದ್ಧಿ ದರವನ್ನು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಹಾಳುಗೆಡವಲು ಹೂಡಲಾಗಿದ್ದ ಸಂಚನ್ನು ನಿಗ್ರಹಿಸಲು ತಕ್ಕ ಸಿದ್ಧತೆಯೂ ಆಗಿತ್ತು. ಹೀಗಾಗಿಯೇ ಮಹಾಲಯ ಅಮಾವಾಸ್ಯೆಯ ಮುಂಜಾನೆ ಬೆಂಗಳೂರು ವಿಮಾನನಿಲ್ದಾಣದಲ್ಲಿ ಉಮ್ಾ ಎಂಬ ಶಬ್ದದೊಂದಿಗೆ ಮೋದಿಯವರನ್ನು ಲೇವಡಿ ಮಾಡುತ್ತಾ, ಬಿಪಿ ಚೆಕ್ ಮಾಡಿಕೊಳ್ಳುತ್ತಾ ಇರಿ ಎಂದು ಕುಹಕವಾಡಿದ ಸಿಜೆಪಿ ನಾಯಕರು ಮುಂದಿನ 3 ತಾಸುಗಳಲ್ಲಿ ತಮ್ಮ ಬಿಪಿಗಳನ್ನೇ ಚೆಕ್ ಮಾಡಿಕೊಳ್ಳಬೇಕಾಯಿತು.
ಮುಂದಿನ ಕೆಲವೇ ದಿನಗಳಲ್ಲಿ ಸಿಜೆಪಿಯಲ್ಲಿ ಬಿರುಕುಂಟಾಗಿದೆ, ಸಿಜೆಪಿ ಸ್ಥಾಪಕ ಎಂದು ಬಣ್ಣಿತಗೊಳ್ಳುತ್ತಿದ್ದ ಅಭಿಜಿತ್ ದೀಪ್ಕೆ ತಾನು ಮುಖವಾಡ ಅಷ್ಟೇ, ಎಲ್ಲ ಮಾಡುತ್ತಿದ್ದುದು ಸೌರಭ್ ದಾಸ್ ಮತ್ತು ಅಶುತೋಷ್ ರಾಂಕಾ ಎಂದು ಹೇಳಿದ್ದಾರೆ, ಅವರಿಬ್ಬರೂ ಏಳುದಿನ ಜೈಲಿನಲ್ಲಿ ಕಳೆದು ಜಾಮೀನಿನ ಮೇಲೆ ಹೊರಬಂದಿದ್ದಾರೆ, ಮತ್ತೆಮತ್ತೆ ತನಿಖಾಧಿಕಾರಿಗಳ ಹಾಗೂ ನ್ಯಾಯಾಲಯದ ಮುಂದೆ ನಿಲ್ಲುವ ಸ್ಥಿತಿ ಅವರದಾಗಿದೆ, ಅವರ ಜತೆಗಿದ್ದ ಭಾರಿ ಕುಳಗಳು ಓಡಿಹೋಗಿವೆ, ಸಿಜೆಪಿ ಸದಸ್ಯರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ, ಜುಲೈನಲ್ಲಿ 12 ಲಕ್ಷ ದಾಟಿದ್ದ ಸಿಜೆಪಿ ಎಕ್ಸ್ ಮತ್ತು ಇನ್ಸ್ಟಾಗ್ರಾಂ ವೀಕ್ಷಣೆ ಈಗ ಕೇವಲ 1 ಸಾವಿರದ ಆಸುಪಾಸಿಗಿಳಿದಿದೆ! ಆದರೆ ರಾಹುಲ್ ಹಿಡಿದ ದಾರಿಯೇ ಬೇರೆ. ತಾವು ವಿದೇಶದಲ್ಲಿದ್ದ ಸಮಯದಲ್ಲೇ ಸಿಜೆಪಿ ಗಮನ ಸೆಳೆಯತೊಡಗಿದ್ದುದನ್ನು ಕಂಡ ಅವರು ದೆಹಲಿಗೆ ಹಿಂತಿರುಗಿದೊಡನೇ ಜುಲೈ 20ರಂದು ಪ್ರಧಾನಿ ನಿವಾಸದೆದುರು ಮಲಗಿಬಿಟ್ಟರು!
ಲೋಕಸಭೆಯ ಮಾನ್ಸೂನ್ ಅಧಿವೇಶನವನ್ನು ಬಾಧಿತಗೊಳಿಸಿದರು, ಸಿಜೆಪಿಗಿಂತ ತಾವೇನು ಕಮ್ಮಿ ಎಂದು ಮುಖ್ಯ ಚುನಾವಣಾಧಿಕಾರಿಗಳ ರಾಜೀನಾಮೆ ಕೇಳಿ ಆಕಾಶವಾಣಿ ಭವನಕ್ಕೆ ನುಗ್ಗಲು ಹೋದರು, ಗುಂಪು ಕಟ್ಟಿಕೊಂಡು ಸುಪ್ರೀಂ ಕೋರ್ಟ್ಗೂ ಹೋದರು, ಆ ಧಾವಂತದಲ್ಲಿ ಗರ್ಭವತಿ ಪತ್ರಕರ್ತೆ ರಿಚಾ ಪರಾಶರ್ರನ್ನು ತಳ್ಳಿ ಬೀಳಿಸಿದರು! ಹೀಗೆ ಪಕ್ಷದಲ್ಲಿ, ಇಂಡಿ ಒಕ್ಕೂಟದಲ್ಲಿ ತಾವಿನ್ನೂ ಮುಂಚೂಣಿಯಲ್ಲೇ ಇದ್ದೇವೆ ಎಂದು ತೋರಿಸಿಕೊಳ್ಳಲು ರಾಹುಲ್ ನ. 1ರಂದು ರಾಮ್ೕಲಾ ಮೈದಾನದಲ್ಲಿ 10 ಲಕ್ಷ ಜನರನ್ನು ಸೇರಿಸಿ ‘ಜನಮಾರ್ಚ್’ (?), ‘ಮಹಾ ರ್ಯಾಲಿ’ ನಡೆಸುವ ಯೋಜನೆ ಅವರದು! ಕೇವಲ ಒಂದು ಲಕ್ಷ ಜನರಿಗೆ ಅವಕಾಶವಿರುವ ರಾಮ್ಲೀಲಾ ಮೈದಾನದಲ್ಲಿ ಹತ್ತು ಲಕ್ಷ ಜನ ಸೇರಲಾಗದು. ಕರವಾ ಚೌತ್, ದೀಪಾವಳಿ ಬಿಟ್ಟು ಜನ ಇದಕ್ಕೆಂದು ಬರಲಾರರು, ಕಾಂಗ್ರೆಸ್ನಲ್ಲಿ ಇನ್ನೂ ಹಿಂದೂಗಳಿದ್ದಾರೆ ಎನ್ನುವುದನ್ನು ನಾವು ನಿರ್ಲಕ್ಷಿಸಲಾಗದು. ಹೇಗೋ ಒಂದಷ್ಟು ಜನ ಸೇರಿದರೆ ರಾಹುಲ್ ‘ಜನಮಾರ್ಚ್’ ಎಂದು ಬಣ್ಣಿಸುವ ಅದು ಯಾವ ಕಡೆ ಮಾರ್ಚ್ ಹೊರಡಬಹುದು? ಆಕಾಶವಾಣಿ? ಪ್ರಧಾನಮಂತ್ರಿಗಳ ನಿವಾಸ?, ನವೆಂಬರ್ ಮೊದಲ ವಾರದಲ್ಲಿ ನಡೆಯಬಹುದಾದ ಸಂಸತ್ನ ವಿಶೇಷ ಅಧಿವೇಶನ? ಎರಡು ದಶಕಗಳ ಹಿಂದೆ ನಿರಾಯಾಸವಾಗಿ ಪ್ರಧಾನಮಂತ್ರಿಯಾಗುವ ಅವಕಾಶವಿದ್ದ ವ್ಯಕ್ತಿ ಇಂದು ರಾಜಕೀಯದಲ್ಲಿ ಪ್ರಸ್ತುತವಾಗಿ ಉಳಿಯಲು ಹೀಗೆಲ್ಲಾ ಮಾಡಬೇಕಾಗಿರುವ ಸ್ಥಿತಿ ಕನಿಕರ ಮೂಡಿಸುತ್ತದೆ. (ಮುಕ್ತಾಯ)