ಚೌಕ – ಸುನೀಲ್ ಬಾರ್ಕೂರ್

ಭಾರತದ ವನ್ಯಜೀವಿ ಸಂರಕ್ಷಣೆಯ ಏಳುಬೀಳುಗಳು

ದೇಶಾದ್ಯಂತ ಅಕ್ಟೋಬರ್ 2ರಿಂದ 8ರವರೆಗೆ ರಾಷ್ಟ್ರೀಯ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಯಿತು. ಕಾಕತಾಳೀಯವೆಂಬಂತೆ ಇದೇ ಸಮಯಕ್ಕೆ ಡಬ್ಲೂಡಬ್ಲೂಎಫ್ ಡಬ್ಲ್ಯುಡಬ್ಲ್ಯುಎಫ್ ಸಂಸ್ಥೆ ಬಿಡುಗಡೆ ಮಾಡಿದ ವರದಿಯೊಂದು ಕಳೆದ ಐದು ದಶಕಗಳಲ್ಲಿ ಜಾಗತಿಕವಾಗಿ ವನ್ಯಜೀವಿಗಳ ಸಂಖ್ಯೆಯು ಸರಾಸರಿ ಶೇಕಡ 73ರಷ್ಟು ಕುಸಿದಿರುವುದನ್ನು ಬಹಿರಂಗಪಡಿಸಿದೆ.

ದೇಶಾದ್ಯಂತ ಅಕ್ಟೋಬರ್ 2ರಿಂದ 8ರವರೆಗೆ ರಾಷ್ಟ್ರೀಯ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಯಿತು. ಕಾಕತಾಳೀಯವೆಂಬಂತೆ ಇದೇ ಸಮಯಕ್ಕೆ ಡಬ್ಲೂಡಬ್ಲೂಎಫ್ ಡಬ್ಲ್ಯುಡಬ್ಲ್ಯುಎಫ್ ಸಂಸ್ಥೆ ಬಿಡುಗಡೆ ಮಾಡಿದ ವರದಿಯೊಂದು ಕಳೆದ ಐದು ದಶಕಗಳಲ್ಲಿ ಜಾಗತಿಕವಾಗಿ ವನ್ಯಜೀವಿಗಳ ಸಂಖ್ಯೆಯು ಸರಾಸರಿ ಶೇಕಡ 73ರಷ್ಟು ಕುಸಿದಿರುವುದನ್ನು ಬಹಿರಂಗಪಡಿಸಿದೆ. ಲಂಡನ್ನಿನ ಪ್ರಾಣಿವಿಜ್ಞಾನ ಸಂಸ್ಥೆಯ ಜೊತೆ ಸಿದ್ಧಪಡಿಸಿದ ಈ ವರದಿಯಲ್ಲಿ ಉಲ್ಲೇಖಿಸಿರುವಂತೆ ಸಿಹಿನೀರಿನಲ್ಲಿ ಬದುಕುವ ವನ್ಯಜೀವಿಗಳಲ್ಲಿ ಅತಿ ಹೆಚ್ಚು ಅಂದರೆ ಶೇ.35ರಷ್ಟು ಕುಸಿತ ಕಂಡುಬಂದಿದ್ದು, ಭೂಪ್ರದೇಶದಲ್ಲಿ ವಾಸಿಸುವ ವನ್ಯಜೀವಿಗಳಲ್ಲಿ ಶೇ.69 ಹಾಗೂ ಉಪ್ಪುನೀರಿನಲ್ಲಿ ಬದುಕುವ ವನ್ಯಜೀವಿಗಳ ಸಂಖ್ಯೆಯಲ್ಲಿ ಶೇ.59ರಷ್ಟು ಕುಸಿತವಾಗಿದೆ. ವರದಿಯು ಹೇಳುವಂತೆ ವನ್ಯಜೀವಿಗಳ ಸಂಖ್ಯೆಯು ಇಷ್ಟೊಂದು ಪ್ರಮಾಣದಲ್ಲಿ ಕುಸಿಯಲು ಅವುಗಳ ಆವಾಸಸ್ಥಾನದ ನಾಶ, ಮಾಲಿನ್ಯ, ಹವಾಮಾನ ವೈಪರೀತ್ಯ ಮತ್ತು ಮಾರಕ ರೋಗಗಳು ಮುಖ್ಯಕಾರಣವಾಗಿವೆ.

ವನ್ಯಜೀವಿಗಳ ಕುರಿತು ಇಷ್ಟೊಂದು ಕಹಿಸುದ್ದಿಗಳನ್ನು ನೀಡಿರುವ ಈ ವರದಿಯಲ್ಲಿ ಕೆಲವೊಂದು ಬೆಳ್ಳಿಗೆರೆಗಳೂ ಇವೆ. ಜಾಗತಿಕವಾಗಿ ವನ್ಯಜೀವಿಗಳ ಸಂಖ್ಯಾಬಲ ಕುಸಿತದ ನಡುವೆಯೂ ಹಲವು ದೇಶಗಳು ಹಮ್ಮಿಕೊಂಡಿರುವ ಸಂರಕ್ಷಣಾ ಕಾರ್ಯಕ್ರಮಗಳು ಫಲ ನೀಡುತ್ತಿದ್ದು, ಅವುಗಳಿಂದಾಗಿ ಅಳಿವಿನಂಚಿಗೆ ತಲುಪಿದ್ದ ಕೆಲ ಪ್ರಾಣಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಖುಷಿಯ ಸಂಗತಿಯೆಂದರೆ ಅಂತಹ ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ. ಭಾರತವು ವನ್ಯಜೀವಿ ಸಂರಕ್ಷಣೆಯಲ್ಲಿ ಹಾಕಿಕೊಂಡ ಕಾರ್ಯಕ್ರಮಗಳು ಮತ್ತು ಅವುಗಳ ಕಟ್ಟುನಿಟ್ಟಿನ ಜಾರಿಯ ಪರಿಣಾಮ ನಮ್ಮಲ್ಲಿನ ಹುಲಿಗಳ ಸಂಖ್ಯೆ ನಿಧಾನವಾಗಿ ಏರುತ್ತ 2022ರಲ್ಲಿ 3682ಕ್ಕೆ ತಲುಪಿದ್ದು, ಜಗತ್ತಿನ 70% ಹುಲಿಗಳು ನಮ್ಮಲ್ಲೇ ಇವೆ. ಖಡ್ಗಮೃಗಗಳ ಸಂಖ್ಯೆ 3300ನ್ನು ಮೀರಿದ್ದು, ಚಿರತೆಗಳು ತಮ್ಮ ಸಂಖ್ಯಾಬಲವನ್ನು 13,874ಕ್ಕೆ ವೃದ್ಧಿಸಿಕೊಂಡು ಭಾರತವನ್ನು ಜಾಗತಿಕವಾಗಿ ನಂಬರ್ 1 ಸ್ಥಾನಕ್ಕೆ ತಲುಪಿಸಿವೆ. 2020ರಲ್ಲಿ 674ರಷ್ಟಿದ್ದ ಸಿಂಹಗಳ ಸಂಖ್ಯೆ 2024ಕ್ಕೆ 891ಕ್ಕೆ ಏರಿಕೆಯಾಗಿದೆ. ಆದೇ ರೀತಿ ಹಿಮಚಿರತೆಗಳ ಸಂಖ್ಯೆ 718ಕ್ಕೆ ಏರಿಕೆಯಾಗಿದೆ. ಇವೆಲ್ಲ ಭೂಪ್ರದೇಶದಲ್ಲಿ ವಾಸಿಸುವ ವನ್ಯಜೀವಿಗಳ ಕಥೆಯಾದರೆ ಜಲಚರಗಳ ಕುರಿತೂ ಖುಷಿ ಪಡುವ ಸುದ್ದಿಯಿದೆ. 2021ರಿಂದ 2023ರವರೆಗೆ ಜರುಗಿದ ಭಾರತದ ಪ್ರಥಮ ಡಾಲ್ಪಿನ್ ಗಣತಿಯಲ್ಲಿ ಕಂಡುಕೊಂಡಂತೆ ಭಾರತದಲ್ಲಿ 6 ಸಾವಿರಕ್ಕೂ ಹೆಚ್ಚು ಡಾಲ್ಪಿನ್​ಗಳಿವೆ. ಅಂದಹಾಗೆ ಡಾಲ್ಪಿನ್​ಗಳಲ್ಲಿ 49 ಪ್ರಜಾತಿಗಳಿದ್ದು ಅವುಗಳನ್ನು ಸಿಹಿನೀರಿನ ಡಾಲ್ಪಿನ್ ಮತ್ತು ಸಮುದ್ರದ ಡಾಲ್ಪಿನ್ ಎಂದು ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಭಾರತದಲ್ಲಿ ಕಂಡುಬರುವ ಡಾಲ್ಪಿನ್​ಗಳಲ್ಲಿ ಸಿಹಿನೀರಿನಲ್ಲಿ ವಾಸಿಸುವ ಹಾಗೂ ರಾಷ್ಟ್ರೀಯ ಜಲಚರವಾಗಿರುವ ಗಂಗಾ ಡಾಲ್ಪಿನ್ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು ಗಣತಿಯೂ ಅದನ್ನೇ ಪುನರುಚ್ಚರಿಸಿದೆ.

ಕಳೆದ ವಾರ ಭಾರತದ ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮದಲ್ಲಿ ಮೈಲಿಗಲ್ಲು ಎನ್ನಬಹುದಾದಂಥ ಕಾರ್ಯವೊಂದು ಜರುಗಿತು. ರಾಜಸ್ಥಾನದ ಜೈಸಲ್ಮೇರ್ ಮತ್ತು ಬಾಮೇರ್​ಗೆ ಹೊಂದಿಕೊಂಡಿರುವ ಮರುಭೂಮಿ ರಾಷ್ಟ್ರೀಯ ಉದ್ಯಾನದಲ್ಲಿ ಆರು ತಿಂಗಳ ಪ್ರಾಯದ ಎರಡು ಎರ್ಲಡ್ಡು ಹಕ್ಕಿಮರಿಗಳನ್ನು ಬಿಡಲಾಯಿತು. ವಿಶೇಷವೇನೆಂದರೆ ಇವೆರಡೂ ಹಕ್ಕಿಮರಿಗಳನ್ನು ಕೃತಕ ಗರ್ಭಧಾರಣೆಯ ಮೂಲಕ ತಾಯಿಹಕ್ಕಿಯು ಗರ್ಭಧರಿಸುವಂತೆ ಮಾಡಿ ಒಂದು ಹಂತದವರೆಗೆ ತೀವ್ರ ನಿಗರಾಣಿಯಲ್ಲಿ ಬೆಳೆಸಿದ ನಂತರ ಇದೀಗ ಉದ್ಯಾನದಲ್ಲಿ ಬಿಡಲಾಗಿದೆ. ಅಷ್ಟಕ್ಕೂ ಯಾಕೆ ಈ ಹಕ್ಕಿಗೆ ಅಷ್ಟೊಂದು ವಿಶೇಷ ಸತ್ಕಾರ? ಅದರ ಹಿನ್ನೆಲೆಯನ್ನೂ ತಿಳಿಯೋಣ.

ಒಂದು ಮೀಟರ್​ನಷ್ಟು ಎತ್ತರ ಬೆಳೆಯುವ ಭಾರತದ ದೊಡ್ಡ ಗಾತ್ರದ ಪಕ್ಷಿ ಎಂಬ ಖ್ಯಾತಿಯ ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಉರ್ಫ್ ಎರ್ಲಡ್ಡುಗಳು ‘ಭಾರತದ ಆಸ್ಟ್ರಿಚ್’ ಎಂಬ ಹೆಸರನ್ನು ಪಡೆದಿವೆ. ಭಾರತ ಮತ್ತು ಪಾಕಿಸ್ತಾನದ ಸಿಂಧ್ ಪ್ರದೇಶಗಳಿಗಷ್ಟೇ ಸೀಮಿತವಾಗಿರುವ ಈ ಹಕ್ಕಿಗಳ ಸಂಖ್ಯೆ ಇದೀಗ 150ರ ಆಸುಪಾಸಿಗೆ ಬಂದು ತಲುಪಿದ್ದು, ಇದರ ಕಾರಣವನ್ನು ಅರಿಯಲು ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಬೇಕು. ಮೊದಮೊದಲು ವಿರಳವಾಗಿ ಮಾಂಸಕ್ಕಾಗಿ ನಡೆಯುತ್ತಿದ್ದ ಈ ಪಕ್ಷಿಯ ಬೇಟೆ ವೇಗ ಪಡೆದದ್ದು ಮುಘಲ್ಲರ ಅದರಲ್ಲೂ ವಿಶೇಷವಾಗಿ ಬಾಬರನ ಆಳ್ವಿಕೆಯಲ್ಲಿ. ಅದರ ಮಾಂಸದಿಂದ ತಯಾರಿಸುತ್ತಿದ್ದ ಖರ್ಚಿಲ್ ಎಂಬ ಖಾದ್ಯವನ್ನು ರಾಜನ ಆಸ್ಥಾನದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತಿತ್ತು. ಇದು ಎರ್ಲಡ್ಡುಗಳ ಅಂತ್ಯದ ಆರಂಭ. ಈ ಆರಂಭವನ್ನು ತಮ್ಮ ಬೇಟೆಯಾಡುವ ಚಟದಿಂದ ಬ್ರಿಟಿಷರು ಮುಂದುವರಿಸಿದರು. ಬ್ರಿಟಿಷರು ದೇಶ ಬಿಟ್ಟು ಹೋದಮೇಲೆ ಆರಂಭವಾದ ಔದ್ಯೋಗಿಕರಣದಿಂದ ಎರ್ಲಡ್ಡುಗಳ ಆವಾಸಸ್ಥಾನವಾದ ಹುಲ್ಲುಗಾವಲುಗಳು ನಾಶವಾದವು. ಅಲ್ಲದೆ, ಭಾರದ ದೇಹವನ್ನೆತ್ತಿಕೊಂಡು ಎರ್ಲಡ್ಡುಗಳು ಹೆಚ್ಚು ಮೇಲೆ ಹಾರಲಾಗದ, ಇಷ್ಟು ಸಾಲದಕ್ಕೆ ದೃಷ್ಟಿಮಂದವಿರುವ ಕಾರಣದಿಂದ ವಿದ್ಯುತ್ ತಂತಿಗಳನ್ನು ರ್ಸ³ಸಿ ಘಟಿಸುತ್ತಿದ್ದ ಸಾವು, ಮೂರು ವರ್ಷಕ್ಕೊಂದೇ ಮೊಟ್ಟೆಯಿಡುವ ಹೆಣ್ಣು ಹಕ್ಕಿ... ಹೀಗೆ ಒಂದೊಂದೇ ಕಾರಣಗಳು ಮುಂದುವರಿದು ಕುಗ್ಗುತ್ತ ಹೋದ ಈ ಪಕ್ಷಿಗಳ ಸಂತತಿಗೆ ಪಕ್ಷಿಪ್ರೇಮಿಗಳ ಅಭಿಯಾನಗಳಿಂದ ತಿರುವು ಸಿಕ್ಕಿತು. ಇದರಿಂದ ಸರ್ಕಾರ ಎಚ್ಚೆತ್ತುಕೊಂಡು 2013ರಲ್ಲಿ ಎರ್ಲಡ್ಡುವನ್ನು ರಾಜಸ್ಥಾನದ ರಾಜ್ಯಪಕ್ಷಿಯಾಗಿ ಘೊಷಿಸಿ ಅವುಗಳಿರುವ ಪ್ರದೇಶವನ್ನು ಗುರುತಿಸಿ ಸಾರ್ವಜನಿಕರ ಪ್ರವೇಶವನ್ನು ನಿಬಂಧಿಸುವುದರ ಜೊತೆಗೆ ಸ್ಥಳೀಯರಲ್ಲಿ ಪಕ್ಷಿಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿತು. ಬಳಿಕ ರಾಜಸ್ಥಾನದ ಅರಣ್ಯ ಇಲಾಖೆ, ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಇಲಾಖೆಗಳು ಜಂಟಿಯಾಗಿ ಭಾರತೀಯ ವನ್ಯಜೀವಿ ಸಂಸ್ಥೆಯ ಮಾರ್ಗದರ್ಶನದಲ್ಲಿ ರೂಪಿಸಿದ ಕಾರ್ಯಕ್ರಮದ ಅಂಗವಾಗಿ ರಾಜಸ್ಥಾನದ ಪೋಖ್ರಾನ್ ವ್ಯಾಪ್ತಿಯ ರಾಮ್ದೆವ್ರ ಮತ್ತು ಜೈಸಲ್ಮೇರ್ ವ್ಯಾಪ್ತಿಯ ಸಮ್್ಮ ಗ್ರಾಮಗಳಲ್ಲಿ ಎರ್ಲಡ್ಡು ಸಂರಕ್ಷಣಾ ಶಿಬಿರಗಳನ್ನು ಸ್ಥಾಪಿಸಲಾಯಿತು.

ಇಷ್ಟೆಲ್ಲ ಮಾಡಿದ ನಂತರವೂ ಕಳೆದ 13 ವರ್ಷಗಳಲ್ಲಿ ದೇಶದಲ್ಲಿ ಅವುಗಳ ಸಂಖ್ಯೆಯಿನ್ನೂ 150ರ ಆಸುಪಾಸಿನಲ್ಲೇ ಇರಲು ಪ್ರಮುಖ ಕಾರಣವೆಂದರೆ ಅವುಗಳ ನಿಧಾನದ ಬಾಣಂತನದ ಪ್ರಕ್ರಿಯೆ. ಹೀಗಾಗಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದರೆ ಸಂರಕ್ಷಣೆಯೊಂದರಿಂದಲೇ ಸಾಧ್ಯವಾಗದೆಂಬ ಸತ್ಯವನ್ನರಿತ ವಿಜ್ಞಾನಿಗಳು ಕೃತಕ ಗರ್ಭಧಾರಣೆಯ ಯೋಜನೆಯನ್ನು ರೂಪಿಸಿದರು. ಅದರನ್ವಯ ಎರ್ಲಡ್ಡು ಸಂರಕ್ಷಣಾ ಶಿಬಿರದಲ್ಲಿ ಥೇಟ್ ಹೆಣ್ಣು ಹಕ್ಕಿಯನ್ನೇ ಹೋಲುವ ಪ್ರತಿಕೃತಿಯನ್ನು ನಿರ್ವಿುಸಲಾಯಿತು. ನಂತರ ಗಂಡು ಹಕ್ಕಿಗೆ ಆ ಪ್ರತಿಕೃತಿಯ ಜೊತೆಗೆ ಮಿಲನಕ್ಕೆ ಪ್ರಚೋದಿಸಿ ಅದು ಬಿಡುಗಡೆ ಮಾಡಿದ ವೀರ್ಯವನ್ನು ಹಿಡಿದಿಟ್ಟುಕೊಂಡು ಹೆಣ್ಣುಹಕ್ಕಿಯ ದೇಹದೊಳಗೆ ಸೇರಿಸಿ ಕೃತಕ ಗರ್ಭಧಾರಣೆ ಮಾಡಿಸಿ ಆ ಹಕ್ಕಿ ಹಾಕಿದ ಮೊಟ್ಟೆಯನ್ನು ಸಂರಕ್ಷಣಾ ಶಿಬಿರದ ನಿಗರಾಣಿಯಲ್ಲಿ ಕಾವು ಕೊಟ್ಟು ಮರಿಮಾಡಲಾಯಿತು. ಈ ಮರಿಗಳು ಪ್ರೌಢಾವಸ್ಥೆಗೆ ಬರುವವರೆಗೆ ಅಲ್ಲೇ ಬೆಳೆಸಿ ನಂತರ ಅವುಗಳನ್ನು ಮರುಭೂಮಿ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡುವುದು ಮೂಲ ಯೋಜನೆ. ಎಲ್ಲವೂ ಯೋಜಿಸಿದ್ದಂತೆ ಸುರಳಿತವಾಗಿಯೇ ಸಾಗುತ್ತಿತ್ತು. ಮೊಟ್ಟೆಗಳಿಂದ ಪುಟ್ಟ ಮರಿಗಳೂ ಹೊರಬಂದು ಪಿಳಿಪಿಳಿ ಕಣ್ಣು ಬಿಡುತ್ತಿದ್ದವು. ಆ ಮರಿಗಳನ್ನು ಜತನದಿಂದ ಕಾಪಾಡಿಕೊಂಡು ಬಂದು ತಾಯಿಪ್ರೀತಿಯನ್ನು ನೀಡಿ ಬೆಳೆಸುತ್ತಿದ್ದ ಸಂರಕ್ಷಣಾ ಶಿಬಿರದ ಮಹಿಳಾ ಸಿಬ್ಬಂದಿಗಳು ಕಾರ್ಯಕ್ರಮದ ಪ್ರಗತಿಯನ್ನು ಕಂಡು ಖುಷಿಯಾಗಿದ್ದರು. ಆದರೆ ಆಗೊಂದು ದಿನ ಇದ್ದಕ್ಕಿದ್ದಂತೆಯೇ ಒಂದು ರಾತ್ರಿ ಜೋರಾದ ಸದ್ದು. ಗಾಢನಿದ್ದೆಯಲ್ಲಿದ್ದ ಅಲ್ಲಿನ ಬೆರಳೆಣಿಕೆಯ ಸಿಬ್ಬಂದಿಗೆ ಸದ್ದಿನಿಂದ ಎಚ್ಚರವಾದಾಗ ಹೊರಗಡೆ ಏನೋ ದೊಡ್ಡ ಕಾರ್ಯಾಚರಣೆ ನಡೆಯುತ್ತಿರುವುದು ಅರ್ಥವಾಗಿತ್ತು. ಮರಿಗಳಿದ್ದ ಕೊಠಡಿಗೆ ಹೋದರೆ ಅವು ಗಾಬರಿಯಿಂದ ಮೂಲೆಯಲ್ಲಿ ಸೇರಿಕೊಂಡು ಇವರನ್ನೇ ನೋಡುತ್ತಿದ್ದವು. ಅಷ್ಟರಲ್ಲಿ ಎರ್ಲಡ್ಡು ಸಂರಕ್ಷಣಾ ಶಿಬಿರಕ್ಕೆ ನಿಯಂತ್ರಣಾ ಕೊಠಡಿಯಿಂದ ಬಂದ ಸಂದೇಶವು ‘ಆಪರೇಷನ್ ಸಿಂಧೂರ’ ಆರಂಭದ ಸುದ್ದಿ ತಿಳಿಸಿ, ಸಂರಕ್ಷಣಾ ಶಿಬಿರವು ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದು ಮರಿಗಳ ಜೀವಕ್ಕೆ ಆಪಾಯವಿರುವ ಕಾರಣ ಅವುಗಳನ್ನು ವಿಶೇಷ ವಾಹನದಲ್ಲಿ ಅಲ್ಲಿಂದ 300 ಕಿ.ಮೀ. ದೂರದಲ್ಲಿರುವ ಅಜ್ಮೇರದ ಸುರಕ್ಷಿತ ಸ್ಥಳಕ್ಕೆ ರವಾನಿಸುತ್ತಿರುವುದಾಗಿ ತಿಳಿಸಲಾಯಿತು. ಒಂದೆಡೆ ಯುದ್ಧವಿಮಾನಗಳ ಹಾರಾಟ, ಬಾಂಬ್​ಗಳ ಆರ್ಭಟ ಅದರ ನಡುವೆ ಮರೂಭೂಮಿಯ ಕತ್ತಲಿನ ರಾತ್ರಿಯಲ್ಲಿ ಮರಿ ಎರ್ಲಡ್ಡುಗಳನ್ನು ಸಾಗಿಸುತ್ತಿರುವ ಸಂರಕ್ಷಣಾ ಶಿಬಿರದ ಮಹಿಳಾ ಸಿಬ್ಬಂದಿ. ಅಂತೂ ಆ ರಾತ್ರಿ ಕಾರ್ಯಾಚರಣೆ ಯಶಸ್ವಿಯಾಗಿ ಮರಿಗಳು ಅಪಾಯದಿಂದ ಪಾರಾದವು. ಮುಂದೆ ಆಪರೇಷನ್ ಸಿಂಧೂರ ಪೂರ್ಣಗೊಂಡ ಬಳಿಕ ಸಂರಕ್ಷಣಾ ಶಿಬಿರದ ಮರಿಗಳಿಗೆ ಯುದ್ಧದ ವೀರಯೋಧರ ಹೆಸರನ್ನಿಡಲಾಯಿತು.

ಅಂದಹಾಗೆ ಎರ್ಲಡ್ಡುಗಳ ಬೇಟೆಗೆ ವಿದೇಶಿಯರ ಬಳಿ ಕಾಸು ಕಿತ್ತು ಅನುಮತಿ ನೀಡುವ ಪ್ರಕ್ರಿಯೆ ಪಾಕಿಸ್ತಾನದಲ್ಲಿ ಇನ್ನೂ ಜಾರಿಯಲ್ಲಿದೆ. ಇಂದು ಅತಿಹೆಚ್ಚು ಹುಲಿಗಳನ್ನು ಹೊಂದಿರುವ ರಾಷ್ಟ್ರವಾದ ಭಾರತದಲ್ಲೂ ಪರಿಸ್ಥಿತಿಯೂ ಈ ಮೊದಲು ಅಷ್ಟೇನೂ ಭಿನ್ನವಾಗಿರಲಿಲ್ಲ. ಬ್ರಿಟಿಷರು ಆರಂಭಿಸಿದ ಶಿಕಾರಿಯ ಸಂಸ್ಕೃತಿಯನ್ನು ನಮ್ಮವರು ಸ್ವಾತಂತ್ರಾ್ಯನಂತರವೂ ಮುಂದುವರಿಸಿದರು. ಶಿಕಾರಿಯ ಹುಚ್ಚು ಇರುವ ವಿದೇಶಿ ಪ್ರವಾಸಿಗರನ್ನು ಸೆಳೆಯಲು ನಮ್ಮಲ್ಲಿನ ಪ್ರಾಣಿಗಳ ತಲೆಗೆ ತಲಾ ಇಂತಿಷ್ಟು ಎಂದು ದರವನ್ನು ನಿಗದಿ ಮಾಡಲಾಗಿತ್ತು. 1957ರಲ್ಲಿ ರಾಜಸ್ಥಾನದ ಸರ್ಕಾರವು ಹುಲಿಗೆ -ಠಿ;150, ಚಿರತೆಗೆ -ಠಿ;35, ಕರಡಿ ಮತ್ತು ಕಡವೆಗೆ -ಠಿ;50 , ಜಿಂಕೆಗೆ -ಠಿ;30 ರೂಪಾಯಿಗಳೆಂದು ದರವನ್ನು ನಿಗದಿ ಮಾಡಿ ಪ್ರಕಟಣೆಯನ್ನು ಹೊರಡಿಸಿತ್ತು. ಇಂತಹ ಪ್ರಕಟಣೆಗಳನ್ನು ಜಾಹೀರಾತಿನ ರೂಪದಲ್ಲಿ ಅಮೆರಿಕದ ಪತ್ರಿಕೆಗಳಲ್ಲಿ ಭಾರತ ಸರ್ಕಾರವೇ ಪ್ರಕಟಿಸುತ್ತಿತ್ತು. ಅದನ್ನೋದಿ ಕೋವಿಯನ್ನು ಹೊತ್ತು ಬರುತ್ತಿದ್ದ ವಿದೇಶಿಗರು ಹೋಗುವಾಗ ಸ್ಮರಣಿಕೆಯಾಗಿ ಇಲ್ಲಿ ಬೇಟೆಯಾಡಿದ್ದ ಕಾಡುಪ್ರಾಣಿಗಳ ರುಂಡ, ತೊಗಲುಗಳನ್ನು ಹೊತ್ತೊಯ್ಯುತ್ತಿದ್ದರು. ಅಂದು ಯಾವ ಹುಲಿಯನ್ನು ಬೇಟೆಯಾಡಲು ಕಾಸುಕೊಟ್ಟು ವಿದೇಶಿಗರು ನಮ್ಮಲ್ಲಿಗೆ ಬರುತ್ತಿದ್ದರೋ ಇಂದು ಅದೇ ಹುಲಿ ನಮ್ಮ ಸಂರಕ್ಷಣಾ ಕಾರ್ಯಕ್ರಮದ ಪ್ರತೀಕವಾಗಿರುವುದೊಂದು ವಿಪರ್ಯಾಸ. ಅಮೂಲ್ಯ ವಿದೇಶಿ ವಿನಿಮಯವು ದೇಶಕ್ಕೆ ಆರ್ಥಿಕ ಸಂಪನ್ಮೂಲವೆಂದೆಲ್ಲ ಬಿಲ್ಡಪ್ ಕೊಟ್ಟು ನಡೆಯುತ್ತಿದ್ದ ಈ ಕ್ರೌರ್ಯಕ್ಕೊಂದು ಸಮರ್ಥವಾಗಿ ಪೂರ್ಣವಿರಾಮ ಹಾಕಿದ್ದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ.

ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಸಮಯದಲ್ಲಿ ಭಾರತದಲ್ಲಿ ವನ್ಯಜೀವಿ ಸಂರಕ್ಷಣೆಯ ಕುರಿತು ಒಳ್ಳೆಯ ಸುದ್ದಿ ಸಿಕ್ಕಿರುವುದು ಸ್ವಾಗತಾರ್ಹವೇ. ಆದರೆ ಎದುರಿಸಬೇಕಾದ ಸವಾಲುಗಳು ಬೆಟ್ಟದಷ್ಟಿವೆ. ಹೆಚ್ಚಿನ ಅಂಕಿಅಂಶಗಳು ಹೇಳುತ್ತಿರುವುದು ಸಂರಕ್ಷಿತ ಪ್ರದೇಶದೊಳಗಿನ ಸುದ್ದಿ. ಆದರೆ ಅದರ ಹೊರಗೆ ಬೇರೆಯದೇ ಪರಿಸ್ಥಿತಿಯಿದೆ. ಒಂದೆಡೆ ಅಭಿವೃದ್ಧಿಯ ಹೆಸರಿನಲ್ಲಿ ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತಿರುವ ವನ್ಯಜೀವಿಗಳು. ಮತ್ತೊಂದೆಡೆ ಏರುತ್ತಿರುವ ವನ್ಯಜೀವಿಗಳ ಸಂಖ್ಯೆಯ ಕಾರಣ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ. ಈ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲಿ ಭಾರತವು ವನ್ಯಜೀವಿ ರಕ್ಷಣೆಯಲ್ಲಿ ಹೊಸ ಮಾದರಿಯಾಗಿ ಎದ್ದು ನಿಲ್ಲಲಿದೆ. ಆದರೆ ಹಾಗಾಗಬಹುದೇ?

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)