ಐಎಸ್​ಟಿ... ಗಡಿಯಾರಗಳ ಕದನಕ್ಕೆ ನೂರಿಪ್ಪತ್ತು ವರ್ಷ 
ಚೌಕ – ಸುನೀಲ್ ಬಾರ್ಕೂರ್

ಐಎಸ್​ಟಿ... ಗಡಿಯಾರಗಳ ಕದನಕ್ಕೆ ನೂರಿಪ್ಪತ್ತು ವರ್ಷ

ಹತ್ತೊಂಬತ್ತನೇ ಶತಮಾನದ ಮಧ್ಯದವರೆಗೂ ಭಾರತದಲ್ಲಿ ಸಮಯವನ್ನು ಸ್ಥಳೀಯವಾಗಿ ಸೂರ್ಯಗಡಿಯಾರಗಳನ್ನು ಬಳಸಿ ನಿರ್ಧರಿಸಲಾಗುತ್ತಿತ್ತು. ಸೂರ್ಯನ ಸ್ಥಾನವು ಸ್ಥಳದಿಂದ ಸ್ಥಳಕ್ಕೆ ಕೊಂಚ ಬದಲಾಗುತ್ತಿದ್ದುದರಿಂದ ಸ್ಥಳೀಯ ಕಾಲಮಾನದಲ್ಲೂ ಅದಕ್ಕೆ ತಕ್ಕಂತೆ ಫರಕು ಇರುತ್ತಿತ್ತು. ದೂರಪಯಣಕ್ಕೆ ಬೇಕಾದ ಸಂಚಾರ ಸೌಲಭ್ಯಗಳು ಅಷ್ಟಕ್ಕಷ್ಟೇ ಆಗಿದ್ದ ಕಾರಣ ಜನರ ಓಡಾಟ ಒಂದು ಮಿತಿಗಷ್ಟೆ ಸೀಮಿತವಾಗಿದ್ದ ಸಮಯವದು. ಹೀಗಾಗಿ ಜನರು ತಮ್ಮ ತಮ್ಮ ಊರಿನ ಸೂರ್ಯಗಡಿಯಾರಗಳ ಮೂಲಕ ಸ್ಥಳೀಯ ಕಾಲಮಾನವನ್ನು ನಿರ್ಧರಿಸುತ್ತಿದ್ದರು. ಆದರೆ ಬ್ರಿಟಿಷರು ಭಾರತವನ್ನಾಕ್ರಮಿಸಿ ತಮ್ಮ ಸಾಮ್ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸುತ್ತ ಹೋದ ಮೇಲೆ ಅವರಿಗೆ ಪೂರ್ವದಿಂದ ಪಶ್ಚಿಮಕ್ಕೆ ಅಜಮಾಸು 3000 ಕಿಮೀ ಹರಡಿಕೊಂಡಿದ್ದ ಭಾರತದಾದ್ಯಂತ ಸಮಾನ ಕಾಲಮಾನ ನಿಗದಿಪಡಿಸುವ ಯೋಚನೆ ಮೂಡಿದ್ದರೂ ಅದ್ಯಾಕೋ ಕಾರ್ಯರೂಪಕ್ಕಿಳಿದಿರಲಿಲ್ಲ.
1853ರಲ್ಲಿ ತನ್ನ ಪ್ರಥಮ ಪಯಣ ಆರಂಭಿಸಿದ ಭಾರತೀಯ ರೈಲ್ವೇ ಸೇವೆಯು ನಂತರದ ದಿನಗಳಲ್ಲಿ ತನ್ನ ಜಾಲ ವಿಸ್ತರಿಸುತ್ತ ಹೋದಂತೆ ಭಾರತದಲ್ಲೂ ದೂರಪಯಣದ ದಿನಗಳು ಆರಂಭವಾದವು. ಈ ಟ್ರೈನುಗಳು ದೇಶದ ಉದ್ದಗಲಕ್ಕೆ ಓಡಾಡುತ್ತಿದ್ದ ಕಾರಣಕ್ಕೆ ಪ್ರಾದೇಶಿಕವಾಗಿ ಮತ್ತು ಸ್ಥಳೀಯವಾಗಿ ಇವುಗಳ ಆಗಮನ- ನಿರ್ಗಮನದ ಕಾಲಮಾನವನ್ನು ನಿರ್ಧರಿಸಲು ಬಹುಮುಖ್ಯ ಅಡಚಣೆಯಾಗಿದ್ದು ದೇಶಾದ್ಯಂತ ಒಂದು ಸಮಾನ ಕಾಲಮಾನದ ಅಳತೆಗೋಲಿನ ಕೊರತೆ. ಕೇವಲ ಪ್ರಯಾಣಿಕರ ಅನುಕೂಲಕ್ಕಷ್ಟೇ ಅಲ್ಲದೆ, ಲಭ್ಯವಿರುವ ಸೀಮಿತ ಹಳಿಗಳಲ್ಲಿ ಟ್ರೖೆನುಗಳ ಅಪಘಾತ ತಪ್ಪಿಸಲು ಇಂತಹುದೊಂದು ವ್ಯವಸ್ಥೆಯ ಅನಿವಾರ್ಯತೆ ಹಿಂದೆಂದಿಗಿಂತಲೂ ಇದೀಗ ಹೆಚ್ಚಾಗಿ ಕಂಡು ಬಂತು. ಈ ಗೊಂದಲಕ್ಕೆ ಇತಿಶ್ರೀ ಹಾಡಲು ಬ್ರಿಟಿಷ್ ಸರ್ಕಾರ ಆಗಿನ ಮದ್ರಾಸಿನಲ್ಲಿ ಸ್ಥಾಪಿಸಲಾಗಿದ್ದ ಮತ್ತು ಭಾರತದಲ್ಲೇ ಪ್ರಥಮವೆಂಬ ಖ್ಯಾತಿಯ ಮದ್ರಾಸು ವೀಕ್ಷಣಾಲಯದ ಸಮಯವನ್ನು ‘ರಾಷ್ಟ್ರೀಯ ರೈಲ್ವೇ ಕಾಲಮಾನ’ವೆಂದು ನಿರ್ಣಯಿಸಿತು. ಈ ವ್ಯವಸ್ಥೆ ಮುಂದಿನ ಕೆಲ ದಶಕಗಳ ಕಾಲ ಹಾಗೆಯೇ ನಡೆಯಿತು. ಅಂದಿನ ದಿನಗಳಲ್ಲಿ ರಾಷ್ಟ್ರಾದ್ಯಂತ ರೈಲ್ವೆ ನಿಲ್ದಾಣದೊಳಗಿನ ಗಡಿಯಾರಗಳು ಮದ್ರಾಸಿನ ಯಾನೆ ‘ರಾಷ್ಟ್ರೀಯ ರೈಲ್ವೇ ಕಾಲಮಾನ’ವನ್ನು ತೋರಿಸುತ್ತಿದ್ದರೆ ನಿಲ್ದಾಣದ ಹೊರಗಿನ ಗಡಿಯಾರಗಳು ಸ್ಥಳೀಯ ಕಾಲಮಾನವನ್ನು ತೋರಿಸುತ್ತಿದ್ದವು.
ಇದಾದ ನಂತರದ ಬೆಳವಣಿಗೆಯೊಂದರಲ್ಲಿ 1884ರ ಅಂತಾರಾಷ್ಟ್ರೀಯ ಮೆರಿಡಿಯನ್ ಸಮ್ಮೇಳನದ ನಿರ್ಧಾರದಂತೆ ಲಂಡನ್ನಿನ ಗ್ರೀನ್​ವಿಚ್​ಅನ್ನು ಶೂನ್ಯ ಡಿಗ್ರಿ ರೇಖಾಂಶವನ್ನಾಗಿ ಗುರುತಿಸಲಾಯಿತು. ಅದಕ್ಕೆ ಕಾರಣವೂ ಇತ್ತು. ಅಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸರಕು ಸಾಗಣೆಗೆ ಬಳಸಲ್ಪಡುತ್ತಿದ್ದ ಶೇ. 70ರಷ್ಟು ಹಡಗುಗಳ ವೇಳಾಪಟ್ಟಿಗೆ ಅದಾಗಲೇ ಗ್ರೀನ್​ವಿಚ್​ನಲ್ಲಿ ಸ್ಥಾಪಿಸಲಾಗಿದ್ದ ವೀಕ್ಷಣಾಲಯದ ಕಾಲಮಾನವನ್ನೇ ಮಾನದಂಡವನ್ನಾಗಿ ಬಳಸಲಾಗುತ್ತಿತ್ತು. ಅದರ ಜತೆಗೆ ಗ್ರೀನ್​ವಿಚ್​ಗೆ ಆ ಸಮಯದ ಅತ್ಯಂತ ಉನ್ನತ ತಂತ್ರಜ್ಞಾನವನ್ನು ಹೊಂದಿರುವ ವೀಕ್ಷಣಾಲಯವೆನ್ನುವ ಖ್ಯಾತಿ ಬೇರೆ ಇತ್ತು. ಗ್ರೀನ್​ವಿಚ್ ಕಾಲಮಾನದ ವ್ಯವಸ್ಥೆಯಲ್ಲಿ ಭೂಮಿಯನ್ನು ತಲಾ 15 ಡಿಗ್ರಿಯ 24 ಕಾಲಮಾನ ವಲಯಗಳಲ್ಲಿ ವಿಂಗಡಿಸಿ ಗ್ರೀನ್​ವಿಚ್​ಅನ್ನು ಶೂನ್ಯ ಡಿಗ್ರಿ ರೇಖಾಂಶವನ್ನಾಗಿ ಗುರುತಿಸಲಾಯಿತು. ಆ ಶೂನ್ಯ ಡಿಗ್ರಿ ರೇಖಾಂಶದ ಪೂರ್ವದಿಕ್ಕಿನ ಪ್ರತಿ ಕಾಲಮಾನ ವಲಯಕ್ಕೆ ಒಂದೊಂದು ಘಂಟೆ ಸೇರಿಸುವ ಮತ್ತು ಪಶ್ಚಿಮಕ್ಕೆ ಒಂದೊಂದು ಘಂಟೆ ಕಳೆಯುವ ಸೂತ್ರವನ್ನು ನಿರ್ಧರಿಸಲಾಯಿತು. ಉದಾಹರಣೆಗೆ ಗ್ರೀನ್​ವಿಚ್​ನಲ್ಲಿ ಮಧ್ಯಾಹ್ನ 12 ಘಂಟೆಯಾಗಿರುವಾಗ ಅದರ ಪೂರ್ವದಲ್ಲಿ 30 ಡಿಗ್ರಿ ಪಕ್ಕದಲ್ಲಿರುವ ಕಾಲಮಾನ ವಲಯದ ಸಮಯ ಮಧ್ಯಾಹ್ನ 2 ಘಂಟೆಯಾಗಿದ್ದರೆ ಪಶ್ಚಿಮಕ್ಕೆ 30 ಡಿಗ್ರಿ ಪಕ್ಕದಲ್ಲಿರುವ ಕಾಲಮಾನ ವಲಯದ ಸಮಯ ಬೆಳಗಿನ 10 ಘಂಟೆಯಾಗಿರುತ್ತದೆ.
ಗ್ರೀನ್​ವಿಚ್ ಕಾಲಮಾನದ ವ್ಯವಸ್ಥೆ ಜಾರಿಗೆ ಬಂದ ನಂತರದಲ್ಲಿ ಭಾರತವನ್ನು ಎರಡು ರಾಷ್ಟ್ರೀಯ ಕಾಲಮಾನ ವಲಯಗಳಲ್ಲಿ ವಿಂಗಡಿಸಲಾಯಿತು. ಮೊದಲನೆಯದು ಗ್ರೀನ್​ವಿಚ್ ಕಾಲಮಾನಕ್ಕಿಂತ 4 ಘಂಟೆ 51 ನಿಮಿಷ ಮುಂದಿರುವ ‘ಮುಂಬೈ ಕಾಲಮಾನ’. ಎರಡನೆಯದು 5 ಘಂಟೆ 53 ನಿಮಿಷ 20 ಸೆಕೆಂಡಿನಷ್ಟು ಮುಂದಿರುವ ‘ಕೊಲ್ಕೊತ್ತಾ ಕಾಲಮಾನ’. ಮೊದಲೇ ಸ್ಥಳೀಯ ಮತ್ತು ರೈಲ್ವೆ ಕಾಲಮಾನವೆಂಬ 2 ಗಡಿಯಾರಗಳನ್ನು ನೋಡುತ್ತ ಸುಸ್ತಾಗಿದ್ದ ಭಾರತೀಯರಿಗೆ ಇವುಗಳ ಜತೆಗೆ ಮುಂಬೈ ಮತ್ತು ಕೊಲ್ಕೊತ್ತಾ ಎಂಬ ಮತ್ತೆರಡು ಕಾಲಮಾನಗಳು ಸೇರಿಕೊಂಡು ಎಲ್ಲವೂ ಗೊಂದಲದ ಗೂಡಾಯಿತು. ಈ ಗೊಂದಲದ ನಡುವೆಯೂ ‘ರಾಷ್ಟ್ರೀಯ ರೈಲ್ವೇ ಕಾಲಮಾನ’ವಾಗಿ ಮದರಾಸಿನ ವೀಕ್ಷಣಾಲಯದ ಸಮಯವನ್ನೇ ಮೊದಲಿನಂತೆ ಮುಂದುವರೆಸಲಾಯಿತು.
ಆದರೆ ವಿಷಯ ಅಷ್ಟಕ್ಕೇ ಮುಗಿಯಲಿಲ್ಲ. ಭಾರತದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಚಟುವಟಿಕೆಗಳು ಚಿಗುರುತ್ತಿದ್ದಂತೆ ಅವುಗಳ ನಡುವೆ ಸಮನ್ವಯ ಸಾಧಿಸಲು ದೇಶಾದ್ಯಂತ ಸಮಾನ ಕಾಲಮಾನದ ಜರೂರತ್ತು ಹೆಚ್ಚಾಗಿರುವುದನ್ನು ಅರ್ಥೈಸಿಕೊಂಡ ಬ್ರಿಟಿಷ್ ಆಡಳಿತವು ಉತ್ತರ ಪ್ರದೇಶದ ಅಲಹಾಬಾದ್ ವೀಕ್ಷಣಾಲಯದ ಕಾಲಮಾನವನ್ನು ‘ಭಾರತೀಯ ಪ್ರಮಾಣಿತ ಕಾಲಮಾನ’ ಯಾನೆ ‘ಇಂಡಿಯನ್ ಸ್ಟಾ್ಯಂಡರ್ಡ್ ಟೈಮ್ ಎಂದು ನಿರ್ಧರಿಸಿ 1906ರ ಜ. 1ರಿಂದ ಜಾರಿಗೆ ತಂದಿತು. ಕಾರಣ ಇಷ್ಟೆ, ಅಂದಿನ ಅಖಂಡ ಭಾರತದ ಪೂರ್ವದ ಹಾಗೂ ಪಶ್ಚಿಮದ ತುತ್ತ ತುದಿಗಳ ಸಮಯವನ್ನು ಗುರುತಿಸಿ ಅವುಗಳ ನಡುವೆ ಕಾಲ್ಪನಿಕ ರೇಖೆಯನ್ನು ಎಳೆದಾಗ ಮಧ್ಯದ ಭಾಗವಾಗಿ ಉತ್ತರ ಪ್ರದೇಶದ ಅಲಹಾಬಾದಿನ ಅಂದರೆ ಈಗಿನ ಪ್ರಯಾಗ್​ರಾಜ್​ನ ಪೂರ್ವಭಾಗದಲ್ಲಿರುವ ವಿಂಧ್ಯಾಚಲ್ ಹೊರಹೊಮ್ಮಿತ್ತು. ಹೀಗಾಗಿ ಗ್ರೀನ್​ವಿಚ್ ಕಾಲಮಾನಕ್ಕಿಂತ ಐದೂವರೆ ಗಂಟೆ ಮುಂದಿದ್ದ ಇಲ್ಲಿಯ ಪ್ರಾದೇಶಿಕ ಕಾಲಮಾನವನ್ನೇ ‘ಇಂಡಿಯನ್ ಸ್ಟಾ್ಯಂಡರ್ಡ್ ಟೈಮ್ ಆಗಿ ನಿರ್ಧರಿಸಲಾಗಿತ್ತು.
1906ರ ಜ. 1ರಿಂದ ‘ಭಾರತೀಯ ಪ್ರಮಾಣಿತ ಕಾಲಮಾನ’ವೇನೋ ಜಾರಿಗೆ ಬಂತು. ಆದರೆ ಅದ್ಯಾಕೋ ಅದರ ‘ಟೈಮು’ ಸರಿಯಿರಲಿಲ್ಲ. ಈ ನೂತನ ಭಾರತೀಯ ಕಾಲಮಾನದ ಫರ್ವನು ಹೊರಡಿಸಿದ್ದು ಆ ಸಮಯದ ಬ್ರಿಟಿಷ್ ವೈಸ್​ರಾಯ್ ಲಾರ್ಡ್ ಕರ್ಜನ್. ಆತ ಅದರ ಹಿಂದಿನ ವರ್ಷ ಅಂದರೆ 1905ರಲ್ಲಷ್ಟೇ ಅಖಂಡ ಬಂಗಾಲವನ್ನು ಮುಸ್ಲಿಂ ಬಾಹುಳ್ಯದ ಪೂರ್ವ ಮತ್ತು ಹಿಂದುಗಳು ಬಹುಸಂಖ್ಯಾತರಾಗಿದ್ದ ಪಶ್ಚಿಮ ಬಂಗಾಲವೆಂದು ವಿಂಗಡಿಸಿ ಬ್ರಿಟಿಷರ ‘ಒಡೆದಾಳುವ ನೀತಿ’ಯ ಹರಿಕಾರನೆಂಬ ಕುಖ್ಯಾತಿಗೊಳಗಾಗಿದ್ದ. ಅದರ ಬಿಸಿಯಿನ್ನೂ ಇರುವಾಗಲೇ ಜಾರಿಗೆ ಬಂದ ಭಾರತೀಯ ಪ್ರಮಾಣಿತ ಕಾಲಮಾನದ ನೀತಿಯಲ್ಲಿ ಭಾರತೀಯರು ಆತನ ಹೊಸದೊಂದು ಕುಟಿಲತೆಯ ದಾಳವನ್ನು ಕಂಡರು. ಹೀಗಾಗಿ ಇದೊಂದು ರಾಷ್ಟ್ರೀಯತೆ ಮತ್ತು ಅಸ್ಮಿತೆಯ ವಿಷಯವಾಗಿ ಬದಲಾಯಿತು. ದೇಶಾದ್ಯಂತ ಈ ನೂತನ ನೀತಿಗೆ ವಿರೋಧ ವ್ಯಕ್ತವಾಯಿತು. ಮುಂಬೈನ ಮಿಲ್ ಕಾರ್ವಿುಕರು ನೂತನ ಕಾಲಮಾನವನ್ನು ಅಳವಡಿಸಿಕೊಳ್ಳುವುದರಿಂದ ತಮ್ಮ ಪಾಳಿಯು ನಸುಕಿನಲ್ಲಿ 39 ನಿಮಿಷ ಮೊದಲೇ ಆರಂಭವಾಗುತ್ತದೆಂದು ಬೀದಿಗಿಳಿದು ಪ್ರತಿಭಟಿಸಿದರು.
ನೂತನ ಭಾರತೀಯ ಕಾಲಮಾನವನ್ನು ತೋರಿಸುತ್ತಿದ್ದ ಬೀದಿ ಗಡಿಯಾರಗಳನ್ನು ಪುಡಿಗಟ್ಟಿದರು. ಕಾರ್ವಿುಕರನ್ನು ತಣ್ಣಗಾಗಿಸಲು ಕಾರ್ಖಾನೆಗಳ ಆಡಳಿತಗಳು ಮತ್ತೆ ತಮ್ಮ ಗಡಿಯಾರಗಳ ಮುಳ್ಳುಗಳನ್ನು ಮುಂಬೈ ಕಾಲಮಾನಕ್ಕೆ ತಿರುಗಿಸಿದವು. ಮುಂಬೈ ಮುನ್ಸಿಪಲ್ ಕಾಪೋರೇಷನ್​ನಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆಗಳಾಗಿ ನೂತನ ಕಾಲಮಾನವನ್ನು ವಿರೋಧಿಸಿ ಠರಾವು ಜಾರಿಗೊಳಿಸಲಾಯಿತು. ಮತ್ತೊಂದೆಡೆ ಕೊಲ್ಕೊತ್ತಾ ಈ ನೂತನ ಕಾಲಮಾನದ ನೀತಿಗೆ ಬಿಲ್ಕುಲ್ ಒಪ್ಪದೇ ತನ್ನ ಹಳೆಯ ಕಾಲಮಾನವನ್ನೇ ಮುಂದುವರೆಸಿತು. ಈ ನೂತನ ಕಾಲಮಾನದ ನೀತಿಯು ಭಾರತವನ್ನು ಇಬ್ಭಾಗಗೊಳಿಸಿತು. ರೈಲ್ವೆ, ಟೆಲಿಗ್ರಾಫ್ ಸೇರಿದಂತೆ ಸರ್ಕಾರಿ ಕಚೇರಿಗಳ ಗಡಿಯಾರಗಳ ಮುಳ್ಳುಗಳು ‘ಐಎಸ್​ಟಿ’ ತೋರಿಸುತ್ತಿದ್ದರೆ ಸ್ಥಳೀಯ ಸಂಘ ಸಂಸ್ಥೆಗಳ ಗಡಿಯಾರಗಳು ಸ್ಥಳೀಯ ಕಾಲಮಾನದೆಡೆ ಬೊಟ್ಟು ಮಾಡುತ್ತಿದ್ದವು. ಭಾರತದ ಇತಿಹಾಸದಲ್ಲಿ ಇದು ‘ಗಡಿಯಾರಗಳ ಕದನ’ವೆಂದು (ಕು)ಖ್ಯಾತಿ ಪಡೆದು ಮುಂದಿನ 41 ವರ್ಷ ಹಾಗೆಯೇ ಮುಂದುವರೆಯಿತು.
ಸ್ವಾತಂತ್ರ್ಯ ನಂತರ ನೂತನ ಭಾರತೀಯ ಸರ್ಕಾರ 1947ರ ಸೆ. 1ರಿಂದ ಜಾರಿಗೆ ಬರುವಂತೆ ಅಲಹಾಬಾದ್ ವೀಕ್ಷಣಾಲಯದ ಕಾಲಮಾನವನ್ನೇ ‘ಐಎಸ್​ಟಿ’ ಎಂದು ಘೊಷಿಸಿ ಜಾರಿಗೆ ತಂದಿತು. ಕೊಲ್ಕೊತ್ತಾ ಕೆಲ ತಿಂಗಳ ನಂತರ ಈ ಹೊಸದನ್ನು ಒಪ್ಪಿಕೊಂಡರೆ ಮುಂಬೈ ಹಲವು ಸುತ್ತಿನ ಮನವೊಲಿಕೆ ನಂತರ 1955ರಲ್ಲಿ ಕೊನೆಗೂ ಅಸ್ತು ಎಂದಿತು. ಇಷ್ಟೆಲ್ಲ ಸೈಕಲ್ ತುಳಿದು ಕೊನೆಗೂ ದೇಶಾದ್ಯಂತ ಎಲ್ಲ ಗಡಿಯಾರಗಳೂ ಸಮಾನ ಕಾಲಮಾನವನ್ನು ತೋರಿಸುವಂತೆ ಮಾಡಿದ ‘ಐಎಸ್​ಟಿ’ ಜಾರಿಗೆ ಬಂದು ಇದೇ ಜ.1ರಂದು 120 ವರುಷಗಳಾದವು. ಆದರೆ ಪ್ರಾದೇಶಿಕ ಜರೂರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಾದ್ಯಂತ ಒಂದಕ್ಕಿಂತ ಹೆಚ್ಚು ಕಾಲಮಾನ ವಲಯಗಳನ್ನು ಜಾರಿಗೊಳಿಸಬೇಕು ಎನ್ನುವ ಕೂಗು ಆಗಾಗ ಕೇಳಿಸುತ್ತಲೇ ಇದೆ. ಭಾರತದಲ್ಲಿ ಎಲ್ಲಕ್ಕಿಂತ ಮೊದಲು ಸೂರ್ಯದರ್ಶನವಾಗುವ ಈಶಾನ್ಯ ರಾಜ್ಯಗಳಲ್ಲೊಂದಾದ ಅಸ್ಸಾಮಿನಲ್ಲಿ ಅಲ್ಲಿನ ಚಹಾ ತೋಟಗಳ ಉತ್ಪಾದನೆಯನ್ನು ಹೆಚ್ಚಿಸಲು ಸ್ಥಳೀಯ ಸಮಯವನ್ನು ‘ಐಎಸ್​ಟಿ’ಗಿಂತ 1 ಘಂಟೆ ಮೊದಲೆಂದು ನಿರ್ಧರಿಸಿ ಅಲ್ಲಿನ ಸರ್ಕಾರವೇ ಆದೇಶಿಸಿದೆ. ಸ್ಥಳೀಯವಾಗಿ ‘ಚಾಯಿ ಬಾಗಾನ್’ ಎಂದು ಹೇಳಲಾಗುವ ಈ ಸಮಯವನ್ನು ಅಲ್ಲಿನ ಎಲ್ಲ ಸ್ಥಳೀಯ ಸಂಸ್ಥೆಗಳು ಅನುಸರಿಸುತ್ತಿವೆ. 1980ರ ಸಮಯದಲ್ಲಿ ಪರಿಣತರ ತಂಡವೊಂದು ಭಾರತದಲ್ಲಿ ಒಂದಕ್ಕಿಂತ ಹೆಚ್ಚು ಕಾಲಮಾನ ವಲಯಗಳ ಜರೂರತ್ತಿದೆ ಎಂದು ಶಿಫಾರಸ್ಸು ನೀಡಿದರೂ ಸರ್ಕಾರ ಅದು ಕಾರ್ಯಸಾಧುವಲ್ಲ ಎಂಬ ಕಾರಣಕ್ಕೆ ಜಾರಿಗೊಳಿಸಲಿಲ್ಲ.
‘ಐಎಸ್​ಟಿ’ಯ ಪರಿಪಾಲನೆ ಇದೀಗ ‘ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ’ಯ ಹೆಗಲ ಮೇಲಿದೆ. ನೂತನ ತಂತ್ರಜ್ಞಾನದ ಆವಿಷ್ಕಾರದ ಜತೆಗೆ ಎದುರಾಗುವ ಹೊಸ ಹೊಸ ಸವಾಲುಗಳನ್ನೆದುರಿಸಲು ಗ್ರೀನ್​ವಿಚ್ ಕಾಲಮಾನದ ಪರಿಕಲ್ಪನೆಯ ಪರಿಷ್ಕೃತ ಆವೃತ್ತಿಯಾದ ‘ಸಾರ್ವತ್ರಿಕ ಸಮನ್ವಿತ ಸಮಯ’ ಯಾನೆ ಯುನಿವರ್ಸಲ್ ಕೋಆರ್ಡಿನೇಟೆಡ್ ಟೈಮ್ (ಯುಟಿಸಿ) ಇದೀಗ ಜಾಗತಿಕವಾಗಿ ಜಾರಿಯಲ್ಲಿದೆ. ಜಗತ್ತಿನಾದ್ಯಂತ ಎಲ್ಲ ದೇಶಗಳ ಎಲ್ಲ ಕಾಲಮಾನ ವಲಯಗಳ ನಡುವೆ ಸಮನ್ವಯ ಸಾಧಿಸುವುದು ಈ ಹೊಸ ಜಮಾನಾದ ಕಾಲಮಾನದ ಕೆಲಸ. ಯುಟಿಸಿಯ ಜತೆಗೆ ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ ಸಮನ್ವಯ ಸಾಧಿಸುತ್ತ ನಮಗೆ ಅತ್ಯಂತ ನಿಖರ ಭಾರತೀಯ ಕಾಲಮಾನವನ್ನು ತಿಳಿಸುತ್ತದೆ. ಅದು ಹೇಗೆ ಎಂಬುದನ್ನು ಮುಂದೊಮ್ಮೆ ತಿಳಿಯೋಣ.