ಅಮೂರ್ ಫಾಲ್ಕನ್ 
ಚೌಕ – ಸುನೀಲ್ ಬಾರ್ಕೂರ್

ಇದು ದೂರದೂರಿನ ಪಯಣಿಗನ ರೋಚಕ ಡೈರಿ

ತುಸು ಹೆಚ್ಚೇ ಅನ್ನುವಷ್ಟು ದಿನ ಸುರಿದ ಮಳೆರಾಯ ಅಂತೂ ಇಂತೂ ತನ್ನ ಇನ್ನಿಂಗ್ಸ್ ಡಿಕ್ಲೇರ್ ಮಾಡುತ್ತಲೇ ಚಳಿರಾಯ ಕ್ರೀಸಿಗಿಳಿದಿದ್ದಾನೆ. ಮಳೆಯಲ್ಲಿ ತೊಯ್ದು ಸುಸ್ತಾದ ಛತ್ರಿ, ರೈನ್ ಕೋಟು ಮೂಲೆಗೆ ಸೇರಿಕೊಳ್ಳುತ್ತಲೇ ಸ್ವೆಟರು, ರಗ್ಗುಗಳು ಸಂದೂಕಿನಿಂದ ಹೊರಗೆ ಬಂದಿವೆ. ಬೀದಿವ್ಯಾಪಾರಿಗಳು, ರಾತ್ರಿ ಗಸ್ತು ತಿರುಗುವುವವರು ಅಲ್ಲಲ್ಲಿ ಗುಂಪು ಸೇರಿ ಮೂಲೆಯಲ್ಲೆಲ್ಲೋ ಬೆಂಕಿ ಹಾಕಿ ಚಳಿ ಕಾಯಿಸುತ್ತ ಹಗಲಿಗಾಗಿ ಕಾಯುತ್ತಿರುವುದು ಕಂಡುಬರುತ್ತಿದೆ.

ಕಾಲ ಬದಲಾಗುತ್ತಿದ್ದಂತೆ ಅದಕ್ಕೆ ಅನುಗುಣವಾಗಿ ಕೇವಲ ನಾವಷ್ಟೇ ಅಲ್ಲ ನಿಸರ್ಗವೂ ತನ್ನ ಚಟುವಟಿಕೆಗಳನ್ನು ಬದಲಾಯಿಸುತ್ತಿದೆ. ನಾಗಾಲ್ಯಾಂಡಿನ ಡೊಯಾಂಗ್ ಸರೋವರವಿದೀಗ ಚಟುವಟಿಕೆಯ ತಾಣ. ಆ ರಾಜ್ಯದ ಏಕೈಕ ಜಲವಿದ್ಯುತ್ ಕೇಂದ್ರವಾಗಿರುವ ಡೊಯಾಂಗ್ ಆಣೆಕಟ್ಟಿನ ಹಿನ್ನೀರಿನ ಪ್ರದೇಶವೂ ಸೇರಿದಂತೆ ವೋಖಾ ಜಿಲ್ಲೆಯಲ್ಲೆಲ್ಲ ಈಗ ಹಬ್ಬದ ಸಂಭ್ರಮ. ಚಳಿಗಾಲದಲ್ಲಿ ಮನೆಬಾಗಿಲಿಗೆ ಬಂದು ಹಾಜರಿ ಹಾಕಿ ಹೋಗುವ ವಾರ್ಷಿಕ ಅತಿಥಿಗಳನ್ನು ಬರಮಾಡಿಕೊಂಡು ಖುಷಿಯಿಂದ ಬೀಳ್ಕೊಡುವ ಕಾಯಕದಲ್ಲಿ ಅಲ್ಲಿನ ಬುಡಕಟ್ಟು ಜನರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಂಡೋಪತಂಡವಾಗಿ ಮನೆಯಾಚೆಗಿನ ಹುಲ್ಲುಗಾವಲನ್ನು ಆಕ್ರಮಿಸಿಕೊಂಡು ತಮ್ಮ ಸದ್ದುಗದ್ದಲಿನಿಂದ ಅದೇನೊ ಖುಷಿ ನೀಡುವ ಆ ಪುಟ್ಟ ಜೀವಗಳನ್ನು ಬೆರಗುಗಣ್ಣುಗಳಿಂದ ನೋಡುತ್ತಿರುವ ಪುಟ್ಟಮಕ್ಕಳು ತಮ್ಮ ಶಾಲೆಯಲ್ಲಿ ಟೀಚರ್ ಹೇಳುತ್ತಿದ್ದುದು ಇವುಗಳ ಕುರಿತು ಎಂಬುದನ್ನು ಅರಿತು ಸಂತಸವನ್ನು ಇಮ್ಮಡಿಸಿಕೊಂಡು ದಿಲ್ ಖುಷ್ ಆಗಿದ್ದಾರೆ. ಅಷ್ಟಕ್ಕೂ ಯಾರೀ ಅತಿಥಿಗಳು? ಅದ್ಯಾಕೆ ಅವರು ಪ್ರತಿ ವರ್ಷ ಬರುವುದು?

ಡೊಯಾಂಗ್ ಸರೋವರದ ಆಚೀಚೆ ಬಿಡಾರ ಹೂಡಿರುವ ಆ ಅತಿಥಿಗಳು ದೂರದೂರಿನಿಂದ ಹಾರಿಬಂದಿರುವ ಬಾನಾಡಿಗಳು. ಕನ್ನಡದಲ್ಲಿ ಕೆಂಪುಕಾಲಿನ ಚಾಣ, ಇಂಗ್ಲೀಷಿನಲ್ಲಿ ಅಮೂರ್ ಫಾಲ್ಕನ್, ವೈಜ್ಞಾನಿಕವಾಗಿ ಫಾಲ್ಕೊ ಅಮ್ರೆನ್ಸಿಸ್ ಎಂಬೆಲ್ಲ ಹೆಸರುಗಳನ್ನು ಹೊಂದಿರುವ ಈ ಪಕ್ಷಿಗಳ ಮೂಲಸ್ಥಾನ ಸೈಬೀರಿಯಾದ ಅಮೂರಲ್ಯಾಂಡ್. ಆ ಕಾರಣದಿಂದಲೇ ಇವುಗಳು ತಮ್ಮ ಹೆಸರನ್ನು ಪಡೆದಿವೆ.

ಅಲ್ಲಿನ ಪ್ರತಿಕೂಲ ಚಳಿ ವಾತಾವರಣದಿಂದ ಬೆಚ್ಚಗಿನ ಸ್ಥಳ ಹುಡುಕುತ್ತಾ ಭಾರತದ ಮುಖಾಂತರ ಅರಬ್ಬಿ ಸಮುದ್ರದ ಮಾರ್ಗವಾಗಿ ದಕ್ಷಿಣ ಆಫ್ರಿಕಾಗೆ ಹಾದುಹೋಗುವ ಇವುಗಳು ಈ ಪ್ರಯಾಣದಲ್ಲಿ ಕ್ರಮಿಸುವ ದೂರ ಒಟ್ಟೂ 22 ಸಾವಿರ ಕಿ.ಮೀ.; ಇದು ಖಗಲೋಕದಲ್ಲಿ ಪಕ್ಷಿಯೊಂದು ಅತಿ ಹೆಚ್ಚು ಪಯಣಿಸುವ ದಾಖಲೆಗಳಲ್ಲಿ ಒಂದು. ನಾಗಾಲ್ಯಾಂಡ್​ನ ವೋಖಾ ಜಿಲ್ಲೆ ಇವುಗಳ ಪಾಲಿಗೆ ಭಾರತದ ಹೆಬ್ಬಾಗಿಲು. ಈ ಜಿಲ್ಲೆಯನ್ನು ಇವುಗಳ ಎರಡನೇ ಮನೆಯೆಂದೇ ವ್ಯಾಖ್ಯಾನಿಸಲಾಗುತ್ತದೆ. ದೂರ ಪಯಣದಿಂದ ಭಾರತಕ್ಕಾಗಮಿಸುವ ಚಾಣಗಳು ಇಲ್ಲಿ ಒಂದೆರಡು ದಿನ ತಂಗಿ ಡೊಯಾಂಗ್ ಸರೋವರದ ತೀರದಲ್ಲಿಯ ಹುಲ್ಲುಗಾವಲಿನಲ್ಲಿ ಸಿಗುವ ಕ್ರಿಮಿಕೀಟಗಳನ್ನು ಭಕ್ಷಿಸಿ ಇನ್ನೊಂದು ದೂರಪಯಣಕ್ಕೆ ತಯಾರಾಗುತ್ತವೆ.

ಅಂದಹಾಗೆ ಮಂಗೋಲಿಯಾದಿಂದ ಭಾರತದ ನ್ಯಾಗಾಲ್ಯಾಂಡಿಗಿರುವ 5600 ಕಿ.ಮೀ. ದೂರವನ್ನು ಪ್ರಯಾಣಿಸಲು ಇವುಗಳು ತೆಗೆದುಕೊಳ್ಳುವ ಸಮಯ ಕೇವಲ 5 ದಿನ ಮಾತ್ರ. ಈ ಅಮೂರ ಚಾಣಗಳು ತೂಗುವುದು ಕೇವಲ 150 ಗ್ರಾಂನಷ್ಟು ಮಾತ್ರವಾದರೂ ತನ್ನ ದೇಹರಚನೆಯನ್ನು ಮೀರುವಂತಹ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಇಷ್ಟು ದೂರದ ಪಯಣದ ಮುನ್ನ ಈ ಪಕ್ಷಿ ತನ್ನ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ತನ್ನ ತೂಕವನ್ನು ಏರಿಸಿಕೊಳ್ಳುವುದನ್ನು ಗಮನಿಸಲಾಗಿದೆ.

ಭಾರತದಲ್ಲೀಗ ಚಳಿಗಾಲ ಶುರುವಾಗುತ್ತಿದ್ದಂತೆಯೇ ಕೆಂಪುಕಾಲಿನ ಚಾಣಗಳ ಮಹಾವಲಸೆಯು ಆರಂಭವಾಗಿದ್ದು ವಾಡಿಕೆಯಂತೆ ಈಗಾಗಲೇ ಅವುಗಳ ಹಲವು ತಂಡಗಳು ಬಂದು ವೋಖಾ ಜಿಲ್ಲೆಯಲ್ಲಿ ಒಂದೆರಡು ದಿನ ತಂಗಿ ಅಲ್ಲಿಂದ ದಕ್ಷಿಣ ಆಫ್ರಿಕಾದತ್ತ ತಮ್ಮ ಪಯಣವನ್ನು ಮುಂದುವರೆಸುತ್ತಿವೆ. ಹೀಗೆ ಬಂದಂತಹ ಚಾಣಗಳ ಪಯಣದ ಮೇಲೆ ನಿಗಾ ಇಡಲು ಮೂರು ಪಕ್ಷಿಗಳ ಬೆನ್ನಿಗೆ ಕೆಲ ದಿನಗಳ ಹಿಂದೆಯಷ್ಟೇ ಭಾರತೀಯ ವನ್ಯಜೀವಿ ಸಂಸ್ಥೆ (ಡಬ್ಲ್ಯುಐಐ) ಟ್ರಾ್ಯಕರ್ ಗಳನ್ನು ಅಳವಡಿಸಿತು. ಅಲ್ಲಿ ಗಮನಿಸಿದಂತೆಯೇ ಆ ಪಕ್ಷಿಗಳು ಭಾರತದಿಂದ ಆಫ್ರಿಕಾ ತಲುಪಲು ಹಗಲು ರಾತ್ರಿಯೆನ್ನದೇ ಸತತ ಐದು ದಿನಗಳಲ್ಲಿ ಆರು ಸಾವಿರ ಕಿ.ಮೀ. ದೂರವನ್ನು ಕ್ರಮಿಸಿ ತಮ್ಮ ಮುಂದಿನ ನಿಲ್ದಾಣವನ್ನು ತಲುಪಿವೆ.

ಪಾರಿವಾಳದ ಗಾತ್ರದ ಪುಟ್ಟ ಪಕ್ಷಿಯೊಂದು ಒಂದಿನಿತೂ ಬಿಡುವಿಲ್ಲದೇ ಅದು ಹೇಗೆ ಇಷ್ಟೊಂದು ಸಾಮರ್ಥ್ಯವನ್ನು ಹೊಂದಲು ಸಾಧ್ಯ ಎಂಬುದು ನಿಜಕ್ಕೂ ಒಂದು ವಿಸ್ಮಯ. ಈ ಕಾರಣಕ್ಕೇ ಅವುಗಳು ತಮ್ಮದೇ ಆದ ಅಭಿಮಾನಿ ಬಳಗಗಳನ್ನು ಹೊಂದಿವೆ. ಕೆಂಪುಕಾಲಿನ ಚಾಣಗಳು ಭಾರತವನ್ನು ವರ್ಷದಲ್ಲಿ ಎರಡು ಬಾರಿ ಹಾದು ಹೋಗುತ್ತವೆ. ಮೊದಲು ಚಳಿಗಾಲದಲ್ಲಿ ಈಶಾನ್ಯ ಭಾರತದ ಮೂಲಕ ಆಫ್ರಿಕಾದತ್ತ, ಆನಂತರ ಬೇಸಿಗೆಯ ಆರಂಭದಲ್ಲಿ; ದಕ್ಷಿಣ ಆಫ್ರಿಕಾದಿಂದ ಮತ್ತೆ ವಾಪಸಾತಿಯ ಸಮಯದಲ್ಲಿ.

ಈ ವರ್ಷ ವಾಪಸಾತಿಯ ಸಮಯದಲ್ಲಿ ಅವುಗಳು ಹಾದು ಹೋಗುವ ದಾರಿಯಲ್ಲಿ ಕೆಂಪುಕಾಲಿನ ಚಾಣಗಳ ವಲಸೆಯ ಪರಿಯನ್ನು ಅರಿತುಕೊಳ್ಳಲು ಸುಮಾರು ಇನ್ನೂರೈವತ್ತು ಜನರ ತಂಡವು 1600 ಕಿ.ಮೀ. ವ್ಯಾಪ್ತಿಯ ಗುಜರಾತಿನ ಕರಾವಳಿಯ ನಲವತ್ತು ಬೇರೆಬೇರೆ ಸ್ಥಳಗಳಲ್ಲಿ ನೆರೆದಿತ್ತು. ಗುಜರಾತ್ ಪಕ್ಷಿ ಸಂರಕ್ಷಣಾ ಸಮೀತಿಯು ಆಯೋಜಿಸಿದ್ದ ಈ ಅಮೂರ್ ವಾಚ್ ಅಭಿಯಾನವು ಭಾರತದಲ್ಲೊಂದು ಪ್ರಥಮವೆನ್ನುವ ದಾಖಲೆಗೂ ಪಾತ್ರವಾಯಿತು.

ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಈ ಪುಟ್ಟಚಾಣಗಳ ಪಯಣದ ಹಾದಿ ಅಷ್ಟೇನೂ ಸುಲಭದ್ದಾಗಿರಲಿಲ್ಲ. ಕೇವಲ ಹತ್ತು ವರ್ಷಗಳ ಹಿಂದಿನ ಮಾತಿದು. ಸಾವಿರೋಪಾದಿಯಲ್ಲಿ ಗುಂಪಿನಲ್ಲಿ ಪಯಣಿಸುವ ಈ ಪಕ್ಷಿಗಳು ವಾಡಿಕೆಯಂತೆ ನಾಗಾಲ್ಯಾಂಡಿನ ವೋಖಾ ಮತ್ತು ಟ್ಯಾಮೆಂಗ್ಲೊ ಜಿಲ್ಲೆಗಳಲ್ಲಿ ತಂಗಲು ಬರುತ್ತಿರುವ ಸೂಚನೆ ಸಿಕ್ಕೊಡನೆ ಇಲ್ಲಿನ ಆದಿವಾಸಿಗಳು ಗದ್ದೆ ಬಯಲುಗಳಲ್ಲಿ ಬಲೆ ಬೀಸಿ ಅವುಗಳನ್ನು ಹಿಡಿಯಲು ತಯಾರಾಗಿರುತ್ತಿದ್ದರು. ವಿಷಯ ಗೊತ್ತಿರದ ಮುಗ್ಧ ಖಗಗಳು ಬಲೆಯಲ್ಲಿ ಸಿಕ್ಕೊಡನೆ ಅವುಗಳ ಕೈಕಾಲು ಕಟ್ಟಿ ತಲೆಕೆಳಗಾಗಿ ನೇತುಹಾಕಿ ನಾಗಾ ಮಹಿಳೆಯರು ರಸ್ತೆಯ ಬದಿಯಲ್ಲಿ, ಊರಿನ ಮಾರುಕಟ್ಟೆಯಲ್ಲಿ ಮಾರಲು ನಿಲ್ಲುತ್ತಿದ್ದರು.

ಮಾಂಸಕ್ಕಾಗಿ ಪ್ರತಿ ವರ್ಷ ಸಾವಿರ ಸಾವಿರ ಸಂಖ್ಯೆಯಲ್ಲಿ ಮಾರಣಹೋಮವೇ ನಡೆದರೂ, ಈ ಗಿಡುಗಗಳ ಹತ್ಯೆಯನ್ನು ಕಾನೂನು ರೀತ್ಯ ನಿಷೇಧಿಸಲಾಗಿದ್ದರೂ ಅದನ್ನು ಜಾರಿಗೊಳಿಸುವ ಕಾಳಜಿ ಯಾರಿಗೂ ಇರಲಿಲ್ಲ. ಒಂದು ಹಂತದವರೆಗೆ ನಾಗಾಲ್ಯಾಂಡಿನ ಬುಡಕಟ್ಟು ಜನರಲ್ಲಷ್ಟೇ ಸೀಮಿತವಾಗಿದ್ದ ಚಾಣಗಳ ಬೇಟೆ ವರ್ಷ ಕಳೆದಂತೆ ಮತ್ತಷ್ಟು ಊರುಗಳಿಗೆ ಹಬ್ಬಿತು. ಈ ಮಾಂಸದ ದರ ಸಂಪ್ರದಾಯಿಕ ಮೂಲಗಳಾದ ಕೋಳಿ, ಕುರಿಗಳ ಮಾಂಸಕ್ಕಿಂತ ಕಡಿಮೆ ದರದಲ್ಲಿ ದೊರೆಯುವ ಮತ್ತು ಚಾಣಗಳು ಬೇಟೆಗಾರರ ಬಲೆಗಳಲ್ಲಿ ತಾವಾಗಿಯೇ ಬಂದು ಸಿಕ್ಕಿಕೊಳ್ಳುವ ಸುಲಭ ತುತ್ತಾದ ಕಾರಣದಿಂದ ಅವುಗಳ ಹತ್ಯೆಯ ಪ್ರಮಾಣವೂ ಏರುಗತಿಯಲ್ಲಿ ಸಾಗಿತು.

ನಾಗಾಲ್ಯಾಂಡಿನಲ್ಲಿ ಇಷ್ಟೆಲ್ಲ ರಾದ್ಧಾಂತ ನಡೆಯುತ್ತಿದ್ದರೂ ಅದು ಹೊರಜಗತ್ತಿನವರಿಗೆ ಮಾತ್ರ ಗೊತ್ತೇ ಇರಲಿಲ್ಲ. 2009ರಲ್ಲಿ ಸಿಂಗಾಪೂರ್ ಮೂಲದ ಪ್ರಯಾಣಿಕ ಜೊಯ್ಸ್ ಟನ್ ಎಂಬುವವರು ಭಾರತದ ಪ್ರವಾಸದಲ್ಲಿದ್ದಾಗ ಭೇಟಿ ನೀಡಿದ್ದಾಗ ನಾಗಾಲ್ಯಾಂಡಿನ ಮಾರುಕಟ್ಟೆಯಲ್ಲಿ ಸೆರೆ ಹಿಡಿದ ಚಾಣಗಳ ವ್ಯಾಪಾರವನ್ನು ಗಮನಿಸಿ ಅದರ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಸ್ಥಳೀಯ ಪರಿಸರ ಕಾರ್ಯಕರ್ತ, ಪತ್ರಕರ್ತ ಬಾನೋ ಹರಾಲು ಅವರ ಕಣ್ಣಿಗೆ ಬಿತ್ತು. ತಮ್ಮ ರಾಜ್ಯದಲ್ಲಿ ನಡೆಯುತ್ತಿದ್ದ ಈ ವಿಷಯದ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಅವರು ವಿಚಾರಣೆ ನಡೆಸಿದಾಗ ಅಲ್ಲಿನ ಕ್ರೌರ್ಯದ ಪ್ರಮಾಣವನ್ನು ನೋಡಿ ಹೌಹಾರಿದರು.

ಬಾನೋ ಗಮನಿಸಿದಂತೆ 2012ರಷ್ಟರಲ್ಲಿ ಪ್ರತಿದಿನ ಹನ್ನೆರಡರಿಂದ ಹದಿನಾಲ್ಕು ಸಾವಿರ ಕೆಂಪುಕಾಲಿನ ಚಾಣಗಳನ್ನು ಕೊಲ್ಲಲಾಗುತ್ತಿತ್ತು. ಹತ್ತು ಹದಿನೈದು ಚಾಣಗಳ ಗೊಂಚಲನ್ನು ಹಿಡಿದು ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರ ಕೈಯಲ್ಲಿರುತ್ತಿದ್ದ ಗೊಂಚಲಿನ ಗಾತ್ರ ಏರುತ್ತ ಹೋಗಿ ಐವತ್ತಕ್ಕೆ ತಲುಪಿ ನೂರು ರೂಪಾಯಿಗೆ ನಾಲ್ಕು ಚಾಣಗಳನ್ನು ಮಾರಲಾಗುತ್ತಿತ್ತು. ಪಯಣಿಗ ನಾನಮ್ಮ ಎಂದು ಹಾಡುತ್ತ ಅತಿಥಿ ದೇವೋಭವ ಎನ್ನುವವರ ನಾಡಿಗೆ ಬಂದಿಳಿಯುತ್ತಿದ್ದ ಆ ಮುಗ್ಧ ಖಗಗಳ ಪಯಣಕ್ಕೆ ಅಲ್ಲಿಗೆ ಫುಲ್ ಸ್ಟಾಪ್ ಹಾಕಲಾಗುತ್ತಿರುವ ವಿಷಯದ ಕುರಿತು ಬಾನೋ ವಿಸ್ತೃತ ವರದಿ ಪ್ರಕಟಿಸಿದರು.

ಇದರ ವಿಡಿಯೋ ಮತ್ತು ಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದವು. ವಿಷಯ ಬಾಂಬೇ ನ್ಯಾಚುರಲ್ ಹಿಸ್ಟಾರಿಕಲ್ ಸೊಸೈಟಿಗೆ ತಲುಪಿ ಅದರ ನಿರ್ದೇಶಕರು ಕೇಂದ್ರ ಸರ್ಕಾರಕ್ಕೆ ಚಾಣಗಳ ಹತ್ಯೆಯನ್ನು ತಕ್ಷಣ ನಿಲ್ಲಿಸುವಂತೆ ಕೋರಿದರು. ಇದು ಇಷ್ಟಕ್ಕೇ ನಿಲ್ಲಲಿಲ್ಲ; ಸ್ಥಳೀಯ ಪರಿಸರವಾದಿಗಳು, ಪಕ್ಷಿಪ್ರೇಮಿಗಳು ಹಾಗೂ ಇಲ್ಲಿನ ಯುವ ಸಮೂಹ ಈ ಹತ್ಯಾಕಾಂಡಕ್ಕೆ ಅಂತ್ಯ ಹಾಡಲು ಒಂದು ರೀತಿಯ ಚಳವಳಿಯನ್ನೇ ನಡೆಸಿತು. ಈ ಕಾರ್ಯಕ್ಕೆ ದೇಶಾದ್ಯಂತ ಹಲವು ಪರಿಸರಪ್ರೇಮಿ ಸಂಘಟನೆಗಳು ಕೈಜೋಡಿಸಿದವು. ಜಿಲ್ಲಾಡಳಿತದ ಮೇಲೆ ಒತ್ತಡ ತಂದು ಕೆಂಪುಕಾಲಿನ ಚಾಣಗಳ ಹತ್ಯೆಯ ನಿಷೇಧ ಜಾರಿಗೊಳಿಸಿ ಮತ್ತು ಅದರ ಶಿಕ್ಷೆಯ ಕುರಿತು ಹಳ್ಳಿಹಳ್ಳಿಗೆ ಹೋಗಿ ವ್ಯಾಪಕ ಪ್ರಚಾರ ನೀಡಲಾಯಿತು. ಬೀದಿ ನಾಟಕಗಳಂತಹ ಮಾಧ್ಯಮವನ್ನು ಬಳಸಿ ಈ ಪಕ್ಷಿಗಳು ಹೇಗೆ ಕ್ರಿಮಿ, ಕೀಟಗಳನ್ನು ತಿನ್ನುವುದರ ಮೂಲಕ ಪರಿಸರದ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಅವುಗಳ ಉಳಿವು ನಮಗೇಕೆ ಮುಖ್ಯ ಎನ್ನುವುದರ ಕುರಿತು ಸಾರ್ವಜನಿಕರಿಗೆ ತಿಳಿಹೇಳಲಾಯಿತು.

ಎಲ್ಲದಕ್ಕೂ ಮುಖ್ಯವಾಗಿ ಈ ಎಲ್ಲ ಸೂಕ್ಷ್ಮತೆಗಳನ್ನು ಶಾಲೆಗಳಲ್ಲಿ ಮಕ್ಕಳಿಗೆ ಮನತಟ್ಟುವ ರೀತಿ ವಿವರಿಸಲಾಯಿತು. ಶಾಲೆಯಲ್ಲಿ ವಿಷಯ ತಿಳಿದುಕೊಂಡ ಮಕ್ಕಳು ಆ ಸಂದೇಶವನ್ನು ಮನೆಗೆ ಕೊಂಡೊಯ್ದು ಹಿರಿಯರಿಗೆ ಕಿವಿಮಾತು ಹೇಳಿ ಅವರನ್ನು ಸರಿದಾರಿಗೆ ತರುವ ಮೂಲಕ ಶಾಂತಿದೂತರ ಪಾತ್ರವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದರು. ಇಂತಹುದೊಂದು ಸಂಘಟಿತ ಪ್ರಯತ್ನದಿಂದಾಗಿ ಅಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬೇಟೆಯಾಡುತ್ತಿದ್ದ ಕೈಗಳೀಗ ರಕ್ಷಣೆಗೆ ಮುಂದಾಗಿವೆ. ಕೇಂದ್ರ ಸರ್ಕಾರವೂ ಸಹ ಇದನ್ನು ಗುರುತಿಸಿ ಈ ಅಮೂರ ಉಳಿಸಿ ಅಭಿಯಾನಕ್ಕೆ ಸಾಥ್ ನೀಡಿದೆ. ಅಮೂರಗಳು ಹೆಚ್ಚಾಗಿ ಕಾಣಸಿಗುವ ಡೊಯಾಂಗ ಕೆರೆಯ ಸುತ್ತಲಿನ ಪ್ರದೇಶವನ್ನು ಇಕೋ ಟೂರಿಸಂ ತಾಣವಾಗಿ ಅಭಿವೃದ್ಧಿಪಡಿಸಲಾಗಿದೆ.

ಕೆಂಪುಕಾಲಿನ ಚಾಣಗಳು ನಾಗಾಲ್ಯಾಂಡಿಗೆ ಲ್ಯಾಂಡ್ ಆಗುವ ಸಮಯವಿದೀಗ ಅಲ್ಲಿ ಹಬ್ಬದ ವಾತಾವರಣ. ಪ್ರತಿ ವರ್ಷ ಇದೇ ಸಮಯಕ್ಕೆ ಅಲ್ಲಿ ಅಮೂರ್ ಹಬ್ಬ ವನ್ನು ಆಚರಿಸಲಾಗುತ್ತದೆ. ಆ ಸಮಯದಲ್ಲಿ ಸಾಂಪ್ರದಾಯಿಕ ನಾಗಾನೃತ್ಯದ ಜೊತೆಗೆ ಅಲ್ಲಿನ ಅಡುಗೆ, ಉಡುಗೆತೊಡುಗೆಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗುತ್ತದೆ. ಸ್ಥಳೀಯ ಪ್ರವಾಸೋದ್ಯಮದ ಕ್ಯಾಲೆಂಡರಿನಲ್ಲಿ ಈ ಕಾರ್ಯಕ್ರಮವಿದೀಗ ಬಹುಮುಖ್ಯ ಆಕರ್ಷಣೆ. ಇದನ್ನು ನೋಡಲೆಂದೇ ಭಾರತದೆಲ್ಲೆಡೆಯಿಂದ ಸಾಕಷ್ಟು ಪ್ರವಾಸಿಗರು ಬರುವುದರಿಂದ ಸ್ಥಳೀಯ ಪ್ರವಾಸೋದ್ಯಮಕ್ಕೊಂದು ಬೂಸ್ಟರ್ ಡೋಸ್ ಸಿಕ್ಕು ಸ್ಥಳೀಯರ ಜೀವನ ನಿರ್ವಹಣೆಗೆ ಬಹಳಷ್ಟು ನೆರವಾಗಿದೆ.

ಜೊತೆಗೆ ಪರಿಸರ, ಪಕ್ಷಿ ಸಂರಕ್ಷಣೆಯ ಸಾರ್ವಜನಿಕ ರಲ್ಲಿ ಅರಿವನ್ನು ಹೆಚ್ಚಿಸುತ್ತಿದೆ. ತಾವು ಕೈಯಾರೆ ಕೊಲ್ಲುತ್ತಿದ್ದ ಪಕ್ಷಿಯೇ ಇದೀಗ ತಮ್ಮ ಜೀವನ ನಿರ್ವಹಣೆಗೆ ಕಾರಣವಾಗಿರುವುದನ್ನು ಸ್ಥಳೀಯರು ಗೌರವಪೂರ್ವಕವಾಗಿ ಒಪ್ಪಿಕೊಂಡು ಹೊರಗಿನವರಿಗೆ ಪರಿಸರ ಸಂರಕ್ಷಣೆಯ ಪಾಠವನ್ನು ಹೇಳುತ್ತಿದ್ದಾರೆ. ಯಾವುದೇ ಸತ್ಕಾರ್ಯ ಸಾರ್ವಜನಿಕರ ಸಹಭಾಗಿತ್ವವಿದ್ದರೆ ಹೇಗೆ ಯಶಸ್ವಿಯಾಗಬಲ್ಲದು ಎಂಬುದಕ್ಕೆ ಈ ಚಾಣಗಳ ಕತೆಯೆ ಸಾಕ್ಷಿ.