ಅಂಕಣ

ಅಪ್ರತಿಮ ರಾಷ್ಟ್ರಪ್ರೇಮಿ ಚಿತ್ತರಂಜನ್ ದಾಸ್

ಬಾಬುಪ್ರಸಾದ್​ ಮೋಡಿಸ್​

ಪ್ರಚಂಡ ವಾಗ್ಮಿ, ವಕೀಲ, ಮುತ್ಸದ್ದಿ, ರಾಷ್ಟ್ರೀಯತೆಯ ಪ್ರತಿಪಾದಕ, ಹಿಂದೂ-ಮುಸ್ಲಿಂ ಏಕತಾ ಪುರುಷ, ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ದೇಶಪ್ರೇಮಿ, ದೂರದರ್ಶಿತ್ವದ ಸಂಘಟನಕಾರ, ನವಭಾರತದ ಹರಿಕಾರ ದೇಶಬಂಧು ಚಿತ್ತರಂಜನ್ ದಾಸ್ ಅವರದು ವಿಶಿಷ್ಟ ವ್ಯಕ್ತಿತ್ವ. ಅವರು ನಿಧನರಾಗಿ ಇಂದಿಗೆ ನೂರು ವರ್ಷ. ಈ ಹಿನ್ನೆಲೆಯಲ್ಲಿ ನುಡಿನಮನ.

| ಎನ್. ರಾಮಕೃಷ್ಣ

ಚಿತ್ತರಂಜನ್ ದಾಸ್ ಜನಿಸಿದ್ದು 1870ರ ನ. 5ರಂದು ಈಗಿನ ಬಾಂಗ್ಲಾದೇಶದಲ್ಲಿರುವ ತಳಿರುಬಾಗ್ ಎಂಬ ಹಳ್ಳಿಯಲ್ಲಿ. ಅವರದು ಪ್ರಸಿದ್ಧ ವಕೀಲರ ಕುಟುಂಬ. ಚಿತ್ತರಂಜನ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಭಾರತೀಯ ನಾಗರಿಕ ಸೇವೆ (ಐಸಿಎಸ್) ಪರೀಕ್ಷೆಯಲ್ಲಿ ಸಫಲರಾಗಿದ್ದರು. ಅದೇ ವೇಳೆ, ಏಷ್ಯಾದಲ್ಲೇ ಪ್ರಥಮವಾಗಿ ಬ್ರಿಟನ್ ಪಾರ್ಲಿಮೆಂಟಿಗೆ ಆಯ್ಕೆಯಾದ ದಾದಾಭಾಯಿ ನವರೋಜಿ ಅವರ ಪರ ಚಿತ್ತರಂಜನ್ ಚುನಾವಣೆ ಪ್ರಚಾರ ನಡೆಸಿದ್ದರು. ಲಿಬರಲ್ ಪಾರ್ಟಿ ಪರ ಪ್ರಚಾರ ನಡೆಸಿದ್ದಕ್ಕಾಗಿ, ಬ್ರಿಟಿಷ್ ಸರಕಾರ ಚಿತ್ತರಂಜನ್​ಗೆ ಐಸಿಎಸ್ ಪದವಿಯನ್ನು ತಪ್ಪಿಸಿತು.

ಮುಂದೆ ಚಿತ್ತರಂಜನ್ ಇಂಗ್ಲೆಂಡಿನಲ್ಲೇ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ವಾಪಸಾದರು. ಅದೇ ವೇಳೆ, ಅವರ ತಂದೆ ವಕೀಲರಾಗಿದ್ದರೂ ಸಿಕ್ಕಸಿಕ್ಕವರಿಗೆಲ್ಲ ಆರ್ಥಿಕ ಸಹಾಯ ಮಾಡಿ, ಸಾಲಕ್ಕೆ ಖಾತ್ರಿ ನೀಡಿ ತೊಂದರೆಗೆ ಸಿಲುಕಿಕೊಂಡಿದ್ದರು. ತಂದೆ ಜತೆ ಚಿತ್ತರಂಜನ್ ಕೂಡ ‘ದಿವಾಳಿ’ ಎಂದು 1896ರಲ್ಲಿ ಕೋರ್ಟ್ ಘೊಷಿಸಿತು. ಇಂತಹ ಪರಿಸ್ಥಿತಿಯಲ್ಲೂ ಪ್ರಾಮಾಣಿಕರಾಗಿ ಇದ್ದುಕೊಂಡು ಕಠಿಣ ಪರಿಶ್ರಮದಿಂದ 1907ರ ಹೊತ್ತಿಗೆ ಚಿತ್ತರಂಜನ್ ಸಾಕಷ್ಟು ಹಣ ಸಂಪಾದಿಸಿದರು. ಅಷ್ಟೊತ್ತಿಗೆ ತೀರಿಕೊಂಡಿದ್ದ ತಮ್ಮ ತಂದೆಯ ಹೆಸರಿನಲ್ಲಿದ್ದ ಸಾಲಗಳನ್ನೆಲ್ಲಾ ತೀರಿಸಿ, ಕೋರ್ಟ್​ಗೆ ಎಲ್ಲ ದಾಖಲೆಗಳನ್ನು ಸಲ್ಲಿಸಿ ‘ದಿವಾಳಿತನ’ದಿಂದ ಮುಕ್ತರಾದರು. ಇವರ ಪ್ರಾಮಾಣಿಕತೆ ನೋಡಿದ ಆಂಗ್ಲ ನ್ಯಾಯಾಧೀಶ, ಇಂಥವರನ್ನು ತನ್ನ ಸೇವಾವಧಿಯಲ್ಲಿ ಎಲ್ಲೂ ನೋಡಿಲ್ಲ ಎಂದು ದಾಖಲಿಸಿದರು.

ಉಚಿತ ಸೇವೆ: ಸ್ವಾತಂತ್ರ್ಯ ಹೋರಾಟಗಾರರ ಪರವಾಗಿ ಸಂಪೂರ್ಣ ಉಚಿತವಾಗಿ ವಾದ ನಡೆಸಿ ಅವರನ್ನು ಬಿಡುಗಡೆಗೊಳಿಸಿದ ಕೀರ್ತಿ ಚಿತ್ತರಂಜನ್ ಅವರದು. ಅಲಿಪುರ ಬಾಂಬ್ ಕೇಸ್, ದೆಹಲಿ, ಲಾಹೋರ್, ಢಾಕಾ ಷಡ್ಯಂತ್ರಗಳ ಖಟ್ಲೆಯಲ್ಲಿ ಅರಬಿಂದೋ ಘೊಷ್, ಪುಲಿನ್ ಬಿಹಾರಿ ದಾಸ್ ಮುಂತಾದವರ ಪರ ಪ್ರಚಂಡ ವಾದ ಮಂಡಿಸಿದ ಚಿತ್ತರಂಜನ್, ದೇಶದ ಪ್ರಮುಖ ವಕೀಲರಾಗಿ ಹೊರಹೊಮ್ಮಿದರು. 1910ರಲ್ಲೇ ಅವರಿಗೆ ತಿಂಗಳಿಗೆ 50,000 ರೂ. ಆದಾಯ ಇತ್ತು. ಸ್ವಾತಂತ್ರ್ಯ ಹೋರಾಟಗಾರರ ಪರ ವಾದಿಸುತ್ತಿದ್ದ ಕಾರಣ ತಮ್ಮ ಸಾಕಷ್ಟು ವರಮಾನ ಕಡಿಮೆ ಮಾಡಿಕೊಂಡರು. ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಪ್ರಸಿದ್ಧ ಅಮೃತ ಬಜಾರ್ ಪತ್ರಿಕೆ ಪರ ವಾದಿಸಿ ಗೆದ್ದು, ಪತ್ರಿಕೆ ನಿರಂತರವಾಗಿ ಪ್ರಕಟವಾಗಲು ಸಹಾಯ ಮಾಡಿದರು.

ಪತ್ರಿಕೋದ್ಯಮಿ: ತಮ್ಮ ಪೂರ್ವಜರು ಬ್ರಹ್ಮಸಮಾಜದ ಅನುಯಾಯಿಗಳಾಗಿದ್ದರಿಂದ ಚಿತ್ತರಂಜನ್ ಕೂಡ ಬ್ರಹ್ಮಸಮಾಜಕ್ಕೆ ನಿಷ್ಠರಾಗಿದ್ದರು. ಹಲವಾರು ಕವಿತೆಗಳನ್ನು ಬರೆದು ಪ್ರಕಟಿಸಿದರು. ಮಾಲಾಂಚಾ ಸಾಗರ ಸಂಗೀತ, ಅಂತರ್ಯಾಮಿ, ಕಿಶೋರ ಕಿಶೋರಿ ಮುಂತಾದವು ಅವರಿಗೆ ಬಂಗಾಳಿ ಸಾಹಿತಿಗಳಲ್ಲಿಯೇ ಪ್ರತಿಷ್ಠಿತ ಸ್ಥಾನ ತಂದುಕೊಟ್ಟವು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಂಪಾದಕತ್ವದಲ್ಲಿ ‘ನಾರಾಯಣ’ ಎಂಬ ಬಂಗಾಳಿ ಸಾಪ್ತಾಹಿಕವನ್ನು, ‘ಫಾರ್ವರ್ಡ್’ ಎಂಬ ಆಂಗ್ಲ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ನ್ಯೂ ಇಂಡಿಯಾ ಮತ್ತು ವಂದೇ ಮಾತರಂ ಪತ್ರಿಕೆಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿದವರೂ ಚಿತ್ತರಂಜನ್ ಅವರೇ.

ಸ್ವದೇಶಿ ವಸ್ತುಗಳ ಬಳಕೆ, ವಿದೇಶಿ ವಸ್ತುಗಳ ಬಹಿಷ್ಕಾರ ಪ್ರತಿಪಾದಿಸಿ ಅನುಷ್ಠಾನ ಮಾಡಿದ ಅವರು ಇದೇ ಉದ್ದೇಶಕ್ಕಾಗಿ ಪ್ರದೇಶಿ ಮಂಡಳಿ ಎಂಬ ಸಂಸ್ಥೆಯನ್ನು 1904ರಲ್ಲಿ ಆರಂಭಿಸಿದ್ದರು. ಸ್ವದೇಶಿ ಚಿಂತನೆಯ ಶಿಕ್ಷಣ ಕ್ರಮಕ್ಕಾಗಿ ದಾನಿಗಳ ನೆರವಿನಿಂದ ರಾಷ್ಟ್ರೀಯ ಶಿಕ್ಷಣ ಮಂಡಳಿ ಸ್ಥಾಪಿಸಿ ಕಾಲೇಜು ಪ್ರಾರಂಭಿಸಿದರು.

ಸೆರೆಮನೆ ವಾಸ: ಮೋತಿಲಾಲ್ ನೆಹರು ಜತೆ ಮೂರೂವರೆ ತಿಂಗಳು ಪಂಜಾಬ್​ನಲ್ಲಿದ್ದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ತನಿಖಾ ವರದಿ ಸಿದ್ಧಪಡಿಸಿದರು. ಮಾಳವೀಯ, ತಿಲಕ್, ಲಜಪತ್​ರಾಯ್, ಬಿಪಿನ್ ಚಂದ್ರಪಾಲರ ಒಡನಾಡಿಯಾಗಿದ್ದ ಚಿತ್ತರಂಜನ್, ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ತಮ್ಮ ಪತ್ನಿ ಮತ್ತು ಪುತ್ರನೊಂದಿಗೆ 6 ತಿಂಗಳ ಸೆರೆವಾಸ ಅನುಭವಿಸಿದರು. ಅಸಹಕಾರ ಚಳವಳಿಯನ್ನು ಯಾವುದೇ ಬಲಿಷ್ಠ ಕಾರಣವಿಲ್ಲದಿದ್ದರೂ ಗಾಂಧೀಜಿ ನಿಲ್ಲಿಸಿದ್ದರಿಂದ ಅದನ್ನು ಖಂಡಿಸಿದ ಚಿತ್ತರಂಜನ್, ಮುಂದೆ ಗಾಂಧೀಜಿ ವೈಸ್​ರಾಯ್ ರೀಡಿಂಗ್ ಜತೆ 1921ರಲ್ಲಿ ಸ್ಪಷ್ಟವಾಗಿ ಮಾತುಕತೆ ನಡೆಸಲಿಲ್ಲವೆಂದು ತೀವ್ರವಾಗಿ ಖಂಡಿಸಿದರು.

1922ರಲ್ಲಿ ಬಿಹಾರದ ಗಯಾದಲ್ಲಿ ನಡೆದ ಕಾಂಗ್ರೆಸ್​ನ ಅಖಿಲ ಭಾರತ ಅಧ್ಯಕ್ಷರಾಗಿ, ಶಾಸನಸಭೆ ಚುನಾವಣೆಗಳಿಗೆ ಕಾಂಗ್ರೆಸ್ಸಿಗರು ಸ್ಪರ್ಧಿಸಿ ಗೆದ್ದು ದೇಶದ ಹಿತಾಸಕ್ತಿ ಕಾಪಾಡಬೇಕೆಂದು ನಿರ್ಣಯ ತಂದರು. ಅದಕ್ಕೆ ಸೋಲಾದಾಗ ಚಿತ್ತರಂಜನ್ ಅವರು ಮೋತಿಲಾಲ್ ನೆಹರು, ಮಾಳವೀಯ, ಲಜಪತ್​ರಾಯ್ ಜತೆಗೂಡಿ ಸ್ವರಾಜ್ಯ ಪಕ್ಷ ಪ್ರಾರಂಭಿಸಿದರು. ಹಲವು ತಿಂಗಳ ನಂತರ ಕೌನ್ಸಿಲ್ ಪ್ರವೇಶದ ನೀತಿಗೆ ಕಾಂಗ್ರೆಸ್​ನ ಪೂರ್ಣ ಅನುಮತಿ ದೊರೆಯಿತು.

ಹತ್ತು ಹಲವು ಯೋಜನೆ: 1921ರಲ್ಲಿ ಇಂಗ್ಲೆಂಡಿನ ರಾಜಕುಮಾರನ ಭಾರತದ ಭೇಟಿಯನ್ನು ವಿಫಲಗೊಳಿಸುವಲ್ಲಿ ಚಿತ್ತರಂಜನ್ ಮತ್ತು ಸಂಗಡಿಗರು ಯಶಸ್ವಿಯಾದರು. ಈ ಚಳವಳಿ ಯಲ್ಲಿಯೂ ಜೈಲು ಶಿಕ್ಷೆ ಅನುಭವಿಸಿದರು. ವಕೀಲಿ ವೃತ್ತಿಯನ್ನು ನಿಲ್ಲಿಸಿ ತಮ್ಮೆಲ್ಲ ಸಮಯವನ್ನು ದೇಶಸೇವೆಗೆ ಮುಡಿಪಾಗಿಟ್ಟರು. ಸ್ಥಳೀಯ ಸ್ವಯಂ ಸರಕಾರ ಸಹಕಾರಿ ಸಾಲದ ಸಂಘ, ಗ್ರಾಮೀಣ ಅಭಿವೃದ್ಧಿ ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದರು. ಬ್ಯಾಂಕ್, ನೌಕಾಯಾನ, ರೈಲ್ವೆ ಮಾರ್ಗ ನಿರ್ವಣ, ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಸಿದ್ಧಪಡಿಸಿದರು.

1923ರ ಕಲ್ಕತ್ತಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಚಿತ್ತರಂಜನ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಚಂಡ ಜಯಗಳಿಸಿತು. ಚಿತ್ತರಂಜನ್ ಅವರೇ ಪ್ರಥಮ ಮೇಯರ್ ಆದರು. ಉಚಿತ ಶಿಕ್ಷಣ, ವೈದ್ಯಕೀಯ ನೆರವು, ವಸತಿ ಗೃಹಗಳು, ರಿಯಾಯಿತಿ ದರದಲ್ಲಿ ಹಾಲು, ನಗರ ಸಾರಿಗೆ ಸುಧಾರಣೆ ಮುಂತಾದ ಕಾರ್ಯ ಮಾಡಿದರು. ಹಿಂದೂ-ಮುಸ್ಲಿಂ ಏಕತೆಗಾಗಿ ಶ್ರಮಿಸಿದರು. ಸ್ವಾತಂತ್ರ್ಯ ಗಳಿಕೆ ಸಂದರ್ಭದಲ್ಲಿ ಅವರು ಜೀವಂತವಾಗಿದ್ದರೆ ದೇಶ ಖಂಡಿತವಾಗಿ ವಿಭಜನೆ ಆಗುತ್ತಿರಲಿಲ್ಲ. ಇದೇ ಅಭಿಪ್ರಾಯವನ್ನು ಪಾಕಿಸ್ತಾನದ ಪ್ರಧಾನಿಗಳಾಗಿದ್ದ ಚೌಧರಿ ಮಹಮ್ಮದ್ ಅಲಿ ಮತ್ತು ಹುಸೇನ್ ಸುಹವರ್ದಿ ವ್ಯಕ್ತಪಡಿಸಿದ್ದಾರೆ.

ಕೈಕೊಟ್ಟ ಆರೋಗ್ಯ: ಚಿತ್ತರಂಜನ್ 1920ರಲ್ಲಿ ತಮ್ಮೆಲ್ಲ ಆಸ್ತಿಯನ್ನು ದೇಶಕ್ಕೆ ಸಮರ್ಪಿಸಿದರು. ತಮ್ಮ ವಿಶಾಲವಾದ ಮನೆ ಮತ್ತು ಅದಕ್ಕೆ ಹೊಂದಿಕೊಂಡ ಜಮೀನನ್ನು ಮಹಿಳೆಯರ ಆಸ್ಪತ್ರೆ, ಅನಾಥ ಹೆಣ್ಣುಮಕ್ಕಳ ವಸತಿಗೃಹ ನಿರ್ವಣಕ್ಕೆ ನೀಡಿ ತಾವು ಬಾಡಿಗೆ ಮನೆಗೆ ಹೋದರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್​ನ ಅಖಿಲ ಭಾರತ ಅಧಿವೇಶನದಲ್ಲಿ ಪಾಲ್ಗೊಂಡು ಕಲ್ಕತ್ತಾಗೆ ಮರಳಿದ ನಂತರ ಚಿತ್ತರಂಜನ್​ರ ಆರೋಗ್ಯ ಕ್ಷೀಣಿಸಿತು. ಅನಾರೋಗ್ಯವಿದ್ದರೂ ಸ್ಟ್ರೆಚರ್ ಮೇಲೆ ಮಲಗಿಯೇ ಬಂಗಾಳದ ಶಾಸನಸಭೆಗೆ ಹೋಗಿ ಕರಾಳ ಮಸೂದೆಯೊಂದರ ವಿರುದ್ಧ ಮತ ಚಲಾಯಿಸಿ ಬಂದರು. 1925ರ ಫೆ. 2ರಂದು ಗಾಂಧೀಜಿ ಅಧ್ಯಕ್ಷತೆಯಲ್ಲಿ ಫರೀದ್​ಪುರದಲ್ಲಿ ನಡೆದ ಪ್ರಾಂತೀಯ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದೇ ಕೊನೆ. 1925ರ ಜೂ. 16ರಂದು ತಮ್ಮ 55ನೇ ವಯಸ್ಸಿನಲ್ಲಿ ವಿಧಿವಶರಾದರು. ಕಲ್ಕತ್ತಾದಲ್ಲಿ ನಡೆದ ಅಂತಿಮಯಾತ್ರೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು ಅವರ ಜನಪ್ರಿಯತೆಗೆ ಸಾಕ್ಷಿ.

(ಲೇಖಕರು ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ಅಧ್ಯಕ್ಷರು)