ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ. ಮೋಸ ವಂಚನೆಯಿಂದ ಅಪಾರ ಹಣ ಗಳಿಸಿದ್ದ. ಆತ ಮಹಾ ಜಿಪುಣ. ತಾನು ಗಳಿಸಿದ ಹಣವನ್ನು ಯಾರಾದರೂ ತೆಗೆದುಕೊಂಡು ಹೋದಾರು ಎಂಬ ಭಯದಿಂದ ತನ್ನೆಲ್ಲಾ ಸಂಪತ್ತನ್ನು ಊರಾಚೆ ಇರುವ ಬನ್ನಿ ಮರದ ಕೆಳಗೆ ಹುದುಗಿಸಿಟ್ಟಿದ್ದ. ಪ್ರತಿನಿತ್ಯ ಕಂದೀಲು ಹಿಡಿದು ಆ ಸ್ಥಳಕ್ಕೆ ಬಂದು ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ ಹೋಗುತ್ತಿದ್ದ. ತನ್ನ ಬಳಿ ಸಾಲ ತೆಗೆದುಕೊಂಡಿದ್ದ ಬಡವನಿಗೆ ಹಣ ಹಿಂದಿರುಗಿಸುವಂತೆ ಆ ಶ್ರೀಮಂತ ದುಂಬಾಲು ಬೀಳುತ್ತಾನೆ. ಕೊಟ್ಟ ಹಣವೇನಾದರೂ ಹಿಂದಿರುಗಿಸದಿದ್ದರೆ ಮನೆಯನ್ನು ಹರಾಜು ಹಾಕುವೆ ಎಂದು ಬೆದರಿಸುತ್ತಾನೆ.
ಇದರಿಂದ ಬಡವ ತೀರ ನೊಂದುಕೊಳ್ಳುತ್ತಾನೆ. ತನ್ನ ಸ್ಥಿತಿಗೆ ಬೇಸತ್ತು ನಡುಕತ್ತಲಲ್ಲಿ ಊರಾಚೆ ಇರುವ ಬನ್ನಿಮರದ ಬಳಿ ಬರುತ್ತಾನೆ, ಸಾಯಲು ನಿರ್ಧರಿಸುತ್ತಾನೆ. ಅಷ್ಟುಹೊತ್ತಿಗೆ ಕಂದೀಲು ಹಿಡಿದುಕೊಂಡು ವ್ಯಕ್ತಿಯೋರ್ವ ಅಲ್ಲಿಗೆ ಬರುತ್ತಿರುವುದನ್ನು ನೋಡುತ್ತಾನೆ. ಬಡವ ಮರದ ಹಿಂದೆ ಅಡಗಿ ಕುಳಿತು ಮುಂದೇನಾಗುತ್ತದೆ ಎಂದು ಕುತೂಹಲದಿಂದ ನೋಡತೊಡಗಿದ. ಶ್ರೀಮಂತ ಎಂದಿನಂತೆ ಮರದ ಕೆಳಗೆ ಮಣ್ಣು ಅಗೆದು ಬಚ್ಚಿಟ್ಟಿದ್ದ ದುಡ್ಡು, ಒಡವೆಗಳನೆಲ್ಲ ಕಣ್ಣಿಗೊತ್ತಿಕೊಂಡು ಮತ್ತೆ ಅಲ್ಲಿಯೇ ಇರಿಸಿ ಮನೆಗೆ ತೆರಳುತ್ತಾನೆ. ಶ್ರೀಮಂತ ಹೋದ ನಂತರ ಬಡವ ನಿಧಾನವಾಗಿ ಹಣವನ್ನು ಬಚ್ಚಿಟ್ಟಿರುವ ಜಾಗಕ್ಕೆ ಬರುತ್ತಾನೆ. ಅಲ್ಲಿ ಅವಿತಿಟ್ಟಿದ್ದ ಅಪಾರ ಸಂಪತ್ತನ್ನು ತೆಗೆದುಕೊಂಡು ಮನೆಗೆ ತೆರಳುತ್ತಾನೆ.
ಮರುದಿನ ಶ್ರೀಮಂತನ ಮನೆಗೆ ಬಂದು ಅವನು ಕೊಟ್ಟ ಸಾಲಕ್ಕಿಂತ ದುಪ್ಪಟ್ಟು ಹಣವನ್ನು ನೀಡುತ್ತಾನೆ. ಉಳಿದ ಹಣದಲ್ಲಿ ತನಗೆ ಬೇಕಾದಷ್ಟನ್ನು ಮಾತ್ರ ಇಟ್ಟುಕೊಂಡು ಇನ್ನುಳಿದುದನ್ನು ಬಡವರಿಗೆ ದಾನ ಮಾಡಿ, ರಾತ್ರಿ ಹಳ್ಳಿಯನ್ನು ಬಿಟ್ಟು ಮತ್ತೊಂದು ಊರಿಗೆ ತೆರಳುತ್ತಾನೆ. ಆ ರಾತ್ರಿ ಎಂದಿನಂತೆ ಶ್ರೀಮಂತ ಬನ್ನಿ ಮರದ ಕೆಳಗೆ ಅಗೆದು ನೋಡಿದರೆ ಅಲ್ಲಿ ಏನೂ ಇರುವುದಿಲ್ಲ, ಯಾರೊಂದಿಗೂ ಹೇಳಿಕೊಳ್ಳಲಾಗದೆ ಗೋಳಾ ಡುತ್ತಾನೆ. ಅದಕ್ಕೆ ಹಿರಿಯರು ಹೇಳೋದು ‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ.’